ಫಲ ನೀಡುವುದೇ ಮೆದು ಹಿಂದುತ್ವ?

7

ಫಲ ನೀಡುವುದೇ ಮೆದು ಹಿಂದುತ್ವ?

ಡಿ. ಉಮಾಪತಿ
Published:
Updated:
ಫಲ ನೀಡುವುದೇ ಮೆದು ಹಿಂದುತ್ವ?

ಇತ್ತೀಚಿನ ಗುಜರಾತ್ ಚುನಾವಣಾ ಪ್ರಚಾರದಲ್ಲಿ ಚಾರಿತ್ರಿಕ ಮಹತ್ವದ ಸೋಮನಾಥ ಮಂದಿರ ಸೇರಿದಂತೆ 27 ಹಿಂದೂ ದೇವಾಲಯಗಳಿಗೆ ಭೇಟಿ ನೀಡಿದ್ದರು ಕಾಂಗ್ರೆಸ್ ತಲೆಯಾಳು ರಾಹುಲ್ ಗಾಂಧಿ.

ಈ ಸೀಮೆಯಲ್ಲಿ ಅವರ ಪಕ್ಷ 18 ಸೀಟುಗಳನ್ನು ಗೆದ್ದಿದೆ. ಬಿಜೆಪಿಯ ಕಟ್ಟರ್ ಹಿಂದುತ್ವಕ್ಕೆ ಪ್ರತಿಯಾಗಿ ರಾಹುಲ್ ಕಟ್ಟಿದ ಮೆದು ಹಿಂದುತ್ವದ ಚುನಾವಣಾ ತಂತ್ರವಿದು ಎನ್ನಲಾಗುತ್ತಿದೆ. ಬಿಜೆಪಿಯ ಧರ್ಮಾಧಾರಿತ ಪ್ರಚಾರದ ಮೊನಚನ್ನು ರಾಹುಲ್ ದೇವಾಲಯ ಭೇಟಿಗಳು ಕೊಂಚ ಮಟ್ಟಿಗಾದರೂ ಮೊಂಡು ಮಾಡಿದವು. ಹೀಗಾಗಿ ಕಾಂಗ್ರೆಸ್ ಅಧ್ಯಕ್ಷರು ಮುಂಬರುವ ದಿನಗಳಲ್ಲಿ ಈ ತಂತ್ರವನ್ನು ಇನ್ನಷ್ಟು ಆತ್ಮವಿಶ್ವಾಸದಿಂದ ಹೂಡಬೇಕು. ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ತುಷ್ಟೀಕರಣದ ವೋಟ್ ಬ್ಯಾಂಕ್ ರಾಜಕಾರಣ ಧರ್ಮಾಂಧರಲ್ಲದ ಹಿಂದೂಗಳಲ್ಲೂ ಅಸಮಾಧಾನದ ಹೊಗೆ ಎಬ್ಬಿಸಿದ್ದು ಹೌದು. ಜೊತೆ ಜೊತೆಗೆ ಚುನಾವಣಾ ಲಾಭಕ್ಕಾಗಿ ಸಾಮಾಜಿಕ ಪರಿಸರಕ್ಕೆ ಕೋಮುವಾದದ ನಂಜು ಬೆರೆಸಿದರು ಕಟ್ಟರ್ ಹಿಂದುತ್ವವಾದಿಗಳು. ಹೀಗಾಗಿ ರಾಹುಲ್ ಹಿಂದೂ ದೇವಾಲಯ ಭೇಟಿಗಳ ಕಥಾನಕವನ್ನು ಆಧ್ಯಾತ್ಮಿಕ ಧರ್ಮಸೂಕ್ಷ್ಮಗಳ ಯಾತ್ರೆಯ ಎತ್ತರಕ್ಕೆ ಒಯ್ಯಬೇಕು. ಹಿಂದುತ್ವದ ಫಲವತ್ತು ನೆಲದಲ್ಲಿ ಕಟ್ಟರ್ ವಾದದ ಬೀಜ ಬಿತ್ತಿ ಸಮೃದ್ಧ ಚುನಾವಣಾ ಫಸಲನ್ನು ಕೊಯ್ಲು ಮಾಡುವ ಅವಕಾಶವನ್ನು ಸಾರಾಸಗಟಾಗಿ ಬಿಜೆಪಿಗೆ ಬಿಟ್ಟುಕೊಡುವುದು ರಾಜಕೀಯ ಅವಿವೇಕದ್ದು. ಬಹುತ್ವವನ್ನು ಪ್ರತಿಪಾದಿಸುವ ಉದಾರಮುಖಿ ಹಿಂದೂ ವಾದದ ಬಾವುಟವನ್ನು ಅವರು ಎತ್ತಿ ಹಿಡಿಯಬೇಕು. ಉದಾರ ಹಿಂದೂವಾದವನ್ನು ಬೇರುರಹಿತ ಸೆಕ್ಯೂಲರ್‌ವಾದಿಗಳು ಮತ್ತು ಉಗ್ರ ಧರ್ಮಾಂಧರಿಂದ ಬಿಡಿಸಿ ಬೆಳೆಸಬೇಕಿದೆ ಎಂಬ ವ್ಯಾಖ್ಯಾನ ನಡೆದಿದೆ. ಈ ವ್ಯಾಖ್ಯಾನದಲ್ಲಿ ಹುರುಳಿದೆ ಹೌದು.

ಆದರೆ ಗುಜರಾತಿನಲ್ಲಿ 'ಸೆಕ್ಯುಲರ್' ಪದವನ್ನು ಮರೆತೂ ಬಳಸಕೂಡದು, 2002ರ ದಂಗೆಗಳನ್ನು ಅಪ್ಪಿ ತಪ್ಪಿಯೂ ಉಲ್ಲೇಖಿಸಕೂಡದು ಎಂಬ ಮಟ್ಟಕ್ಕೆ ರಾಜಕೀಯ ಸಂವಾದವನ್ನು ಕೋಮುವಾದಿ ಮಸಿಯಿಂದ ತಿದ್ದಿ ಬರೆದಿದೆ ಬಿಜೆಪಿ. ಹೀಗೆ ತಿದ್ದಿ ಬರೆದಿರುವ ಕೋಮುವಾದಿ ಸಂವಾದವನ್ನು ಮುರಿದು ಕಟ್ಟುವ ಸೃಜನಶೀಲ ಮತ್ತು ಜೀವಪರ ಚೈತನ್ಯವನ್ನು ಕಳೆದುಕೊಂಡಿವೆ ಜಡಗಟ್ಟಿದ ಪುಕ್ಕಲು ಪ್ರತಿಪಕ್ಷಗಳು. ಬಹುತ್ವದಲ್ಲಿ ನಂಬಿಕೆಯಿಟ್ಟವರು, ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಇತರೆ ವಂಚಿತ ಜನಸಮುದಾಯಗಳನ್ನು ಕಟ್ಟರ್ ಹಿಂದುತ್ವ ವಿರೋಧಿ ವೇದಿಕೆಯಲ್ಲಿ ಸಂಘಟಿಸುವುದೊಂದೇ ಪ್ರಬಲ ಪರ್ಯಾಯ ಆಗಬಲ್ಲದು. ಹಿಂದೂ ಬಹುಸಂಖ್ಯಾತವಾದಿ ರಚನೆಯ ರಾಜಕಾರಣದಲ್ಲಿ ಬಿಜೆಪಿಯನ್ನು ಹಿಂದೆ ಹಾಕುವುದು ಕನಸಿನ ಮಾತು. ಈ ದಿಸೆಯಲ್ಲಿ ಬಿಜೆಪಿಯ ಅನುಕರಣೆಯು ಕಾಂಗ್ರೆಸ್ಸನ್ನು ಎಲ್ಲಿಗೂ ತಲುಪಿಸಲಾರದು. ರಾಹುಲ್ ಗಾಂಧಿ ಅವರು ಅಪ್ಪಟ ಹಿಂದೂ... ಜನಿವಾರ ಧರಿಸಿದ ಹಿಂದೂ ಎಂದು 'ಶ್ರೇಷ್ಠ ಹಿಂದೂ'ವಿನ ಪಟ್ಟ ಕಟ್ಟುವುದು ಮೂರ್ಖತನದ ಮತ್ತು ಆತ್ಮಘಾತಕ ನಡೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿ- ರಾಮಜನ್ಮಭೂಮಿಯ ದ್ವಾರದ ಬೀಗವನ್ನು ತೆಗೆಯಿಸಿದ ರಾಜೀವ್ ಗಾಂಧಿಯನ್ನು ಹಿಂದುತ್ವ ಕೈ ಹಿಡಿಯಲಿಲ್ಲ ಎಂಬುದನ್ನು ಗಮನಿಸಬೇಕು.

ಎದುರಾಳಿ ಕಾಂಗ್ರೆಸ್ ಪಕ್ಷವನ್ನು ಮುಸ್ಲಿಮರ ಜೊತೆ ಸಮೀಕರಿಸಿ ಖಳನೆಂದು ಚಿತ್ರಿಸುವ ತಂತ್ರವನ್ನು ಮೋದಿಯವರು ಕಲೆಯಾಗಿ ಪಳಗಿಸಿಕೊಂಡಿದ್ದಾರೆ. ಬಿಜೆಪಿ ಸಂಕಟಕ್ಕೆ ಸಿಲುಕಿದಾಗಲೆಲ್ಲ ಬಾರಿ ಬಾರಿಗೆ ಈ ತಂತ್ರವನ್ನು ಅವರು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಗುಜರಾತ್‌, ಬಿಜೆಪಿಯ ಕೈ ತಪ್ಪುವ ಭೀತಿ ಎದುರಾದಾಗ ಅವರು ಅನುಸರಿಸಿದ್ದು ಇದೇ ಹಳೆಯ ಯಶಸ್ವೀ ತಂತ್ರವನ್ನು. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಸೇನೆಯ ನಿವೃತ್ತ ಮುಖ್ಯಸ್ಥ ದೀಪಕ್ ಕಪೂರ್ ಅವರು ಗುಜರಾತಿನಲ್ಲಿ ಬಿಜೆಪಿಯನ್ನು ಸೋಲಿಸಿ, ಮುಸಲ್ಮಾನ ಅಹ್ಮದ್ ಪಟೇಲ್ ಅವರನ್ನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಿಸಲು ಶತ್ರುದೇಶ ಪಾಕಿಸ್ತಾನದ ಜೊತೆ ಪಿತೂರಿ ನಡೆಸಿದ್ದಾರೆ ಎಂಬ ಆಧಾರರಹಿತ ಆಪಾದನೆಯನ್ನು ಚುನಾವಣೆಯ ಗಾಳಿಗೆ ತೂರಿದರು. ಅಲ್ಲಾವುದ್ದೀನ್ ಖಿಲ್ಜಿ, ಔರಂಗಜೇಬ ಮುಂತಾದ ಗೂಢಾರ್ಥದ ಪದಪ್ರಯೋಗಗಳು ಎಲ್ಲಿಗೆ ನಾಟಬೇಕೋ ಅಲ್ಲಿಗೆ ನಾಟಿದವು.

ಬಿಜೆಪಿಯನ್ನು ಮಣಿಸಲು ಪ್ರಬಲ ಜಾತಿ ಸಮೀಕರಣವನ್ನು ಯಶಸ್ವಿಯಾಗಿ ಕಟ್ಟಿತ್ತು ಕಾಂಗ್ರೆಸ್ ಪಕ್ಷ. ಈ ಯಶಸ್ಸು ಮತಗಳಾಗಿ ಪರಿವರ್ತನೆ ಆಗುವುದನ್ನು ತಡೆಯಲು ಕಾಂಗ್ರೆಸ್ಸಿನ ಜಾತಿ ಸಮೀಕರಣಕ್ಕಿಂತ ಪ್ರಬಲ ಕಥಾನಕವನ್ನು ಕಟ್ಟದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ ಎಂಬ ವಾಸ್ತವವನ್ನು ಗುರುತಿಸಿದರು ಚತುರ ಮೋದಿ. ಕಾರ್ಯಪ್ರವೃತ್ತರೂ ಆದರು. ಜಾತಿ ಸಮೀಕರಣವನ್ನು ಬಗ್ಗು ಬಡಿಯುವ ಸಾಮರ್ಥ್ಯ ಉಳ್ಳ ಹಿಂದೂ ಮತಗಳ ಧ್ರುವೀಕರಣದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಅವರು ಹಿಂದೆ ಮುಂದೆ ನೋಡಲಿಲ್ಲ. ಪ್ರೇಮದಲ್ಲಿ ಮತ್ತು ಸಮರದಲ್ಲಿ ಎಲ್ಲ ನಡೆಯೂ ನ್ಯಾಯಯುತ ಎಂಬ ಲೋಕೋಕ್ತಿಯಲ್ಲಿ ಸದಾ ವಿಶ್ವಾಸ ಇರಿಸಿರುವವರು ಅವರು. ನವೆಂಬರ್ ಕಡೆಯ ವಾರದ ತನಕ ಗುಜರಾತ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ್ದ ಕಾಂಗ್ರೆಸ್, ಆನಂತರದ ದಿನಗಳಲ್ಲಿ ಹಿಮ್ಮೆಟ್ಟಿತು.

ಮತ ಕ್ಷೇತ್ರವೊಂದರಲ್ಲಿ ಮುಸಲ್ಮಾನ ಜನಸಂಖ್ಯೆ ಹೆಚ್ಚಿದ್ದಷ್ಟೂ ಬಿಜೆಪಿ ಸೋಲುವ ಸಂಭವ ಹೆಚ್ಚು ಎಂಬುದು ಸಾಮಾನ್ಯ ಚುನಾವಣಾ ರಾಜಕಾರಣದ ತಿಳಿವಳಿಕೆ. ಆದರೆ ಗುಜರಾತಿನಲ್ಲಿ ಈ ಪರಿಸ್ಥಿತಿಯನ್ನು ತಾರುಮಾರು ಮಾಡಿದೆ ಮೋದಿಯವರ ಬಿಜೆಪಿ. ಮುಸಲ್ಮಾನರ ಸಂಖ್ಯೆ ಹೆಚ್ಚಿದ್ದಷ್ಟೂ ಬಿಜೆಪಿ ಗೆಲುವಿನ ಸಂಭವ ಹೆಚ್ಚುವುದಷ್ಟೇ ಅಲ್ಲ, ಗೆಲುವಿನ ಅಂತರವೂ ಹೆಚ್ಚುತ್ತದೆ. ಅರ್ಥಾತ್ ಮುಸಲ್ಮಾನರ ಸಂಖ್ಯೆ ಹೆಚ್ಚಿದ್ದಷ್ಟೂ, ಅವರು ಅಷ್ಟರಮಟ್ಟಿಗೆ ಹಿಂದೂಗಳ ಹಿತಕ್ಕೆ ಕಂಟಕ ಆಗಬಲ್ಲರು ಎಂಬ ಭೀತಿಯನ್ನು ಮತ್ತು ಅಭದ್ರ ಭಾವವನ್ನು ಬಿತ್ತಲಾಯಿತು. ಜಾತಿ ಸಮೀಕರಣದ ಲೆಕ್ಕಾಚಾರಗಳನ್ನು ಮುಳುಗಿಸಿಬಿಡುವ ಭೀತಿಯಿದು. ಗುಜರಾತಿನ ನೆಲದ ಚಾರಿತ್ರಿಕ ಮತ್ತು ಸಾಮಾಜಿಕ-ಆರ್ಥಿಕ- ರಾಜಕೀಯ ಸನ್ನಿವೇಶಗಳಲ್ಲಿ ಬಿಜೆಪಿಯ ಈ ಬ್ರಹ್ಮಾಸ್ತ್ರ ಕಳೆದ ಎರಡು ದಶಕಗಳಲ್ಲಿ ಹುಸಿ ಹೋದದ್ದೇ ಇಲ್ಲ. ಕೇವಲ ಮತದಾರರನ್ನಷ್ಟೇ ಅಲ್ಲ, ಪಕ್ಷದ ಕಾರ್ಯಕರ್ತರನ್ನೂ ಹುರಿದುಂಬಿಸಿದ ಅಸ್ತ್ರವಿದು.

ಹೀಗಾಗಿ ನವೆಂಬರ್ ಕಡೆಯ ವಾರದಿಂದ ಡಿಸೆಂಬರ್ 12ರ ತನಕ ಮೋದಿಯವರು ಉದ್ದೇಶಿಸಿ ಮಾತಾಡಿದ 30 ರ್‍ಯಾಲಿಗಳಲ್ಲಿ ಈ ಬ್ರಹ್ಮಾಸ್ತ್ರದ ಪ್ರಯೋಗ ಅಂಕೆ ಶಂಕೆಯಿಲ್ಲದೆ ನಡೆಯಿತು. ನವೆಂಬರ್ ಅಂತ್ಯದವರೆಗೆ ಬಿಜೆಪಿಗೆ ಮತ ನೀಡುವ ಹಿಂದೂಗಳ ಪ್ರಮಾಣ ಶೇ 45ಕ್ಕೆ ಸೀಮಿತವಾಗಿತ್ತು. ಮೋದಿಯವರ ಮುಸ್ಲಿಂ ಕಥಾನಕವು ಈ ಪ್ರಮಾಣವನ್ನು ಶೇ 52ಕ್ಕೆ ಏರಿಸಿತು ಎಂಬ ಅಂಶ ಸಿ.ಎಸ್.ಡಿ.ಎಸ್- ಲೋಕನೀತಿ ನಡೆಸಿದ ಮತದಾನಪೂರ್ವ ಮತ್ತು ಮತಗಟ್ಟೆ ಸಮೀಕ್ಷೆಗಳಲ್ಲಿ ಹೊರಬಿದ್ದಿದೆ.

182 ವಿಧಾನಸಭಾ ಕ್ಷೇತ್ರಗಳ ಪೈಕಿ ಮುಸಲ್ಮಾನರ ಜನಸಂಖ್ಯೆ ಶೇ 10ರಿಂದ ಶೇ 25ರಷ್ಟಿರುವ ಸೀಟುಗಳು 28. ಎಂಟು ಸೀಟುಗಳಲ್ಲಿ ಅವರ ಪ್ರಮಾಣ ಶೇ 30ರ ಆಸುಪಾಸನ್ನು ಮುಟ್ಟುತ್ತದೆ.

ಮುಸ್ಲಿಂ ಜನಸಂಖ್ಯೆ ಶೇ 10ರಷ್ಟನ್ನು ಮೀರದಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿಯ ಲೀಡ್ ಕೇವಲ ನಾಲ್ಕು ಶೇಕಡಾವಾರು ಪಾಯಿಂಟ್‌ಗಳಿಗೆ ಸೀಮಿತವಾಗಿದೆ. ಶೇ 10 ರಿಂದ ಶೇ 20ರ ಮುಸ್ಲಿಂ ಜನಸಂಖ್ಯೆ ಹೊಂದಿದ ಕ್ಷೇತ್ರಗಳಲ್ಲಿ ಬಿಜೆಪಿಯ ಲೀಡ್ ಪಾಯಿಂಟ್‌ಗಳು 25ಕ್ಕೆ ಏರಿವೆ. ಶೇ 20ಕ್ಕಿಂತ ಹೆಚ್ಚಿನ ಮುಸ್ಲಿಂ ಜನಸಂಖ್ಯೆಯ ಕ್ಷೇತ್ರಗಳಲ್ಲಿ ಬಿಜೆಪಿಯ ಲೀಡ್ ಪಾಯಿಂಟ್‌ಗಳು 42ಕ್ಕೆ ಜಿಗಿದಿವೆ.

2011ರ ಜನಗಣತಿಯ ಪ್ರಕಾರ ಗುಜರಾತಿನ ಜನಸಂಖ್ಯೆಯ ಶೇ 9.67ರಷ್ಟಿದ್ದಾರೆ ಮುಸಲ್ಮಾನರು. ಮೊನ್ನೆ ಈ ಸಮುದಾಯದಿಂದ 203 ಉಮೇದುವಾರರು ಸ್ಪರ್ಧಿಸಿದ್ದರು. ಒಟ್ಟು ಚಲಾಯಿತ ಮತಗಳ ಪೈಕಿ ಶೇ 1.6ರಷ್ಟು ಮತಗಳು ಈ ಅಭ್ಯರ್ಥಿಗಳಿಗೆ ಬಿದ್ದಿದ್ದವು.

1980ರಲ್ಲಿ ಮುಸ್ಲಿಂ ಸಮುದಾಯದ ಹನ್ನೆರಡು ಮಂದಿ ಹುರಿಯಾಳುಗಳು ಗುಜರಾತ್ ವಿಧಾನಸಭೆಗೆ ಆರಿಸಿ ಬಂದಿದ್ದರು. ರಾಜ್ಯ ರಾಜಕಾರಣ ಬಿಜೆಪಿಯ ಬಿಗಿಮುಷ್ಟಿಯಲ್ಲಿ ಬಂದಿಯಾದ ನಂತರ ಈ ಸಂಖ್ಯೆ ತೀವ್ರ ಕುಸಿತ ಕಂಡಿತು. ಕೋಮು ಧ್ರುವೀಕರಣದ ಬಿಜೆಪಿ ಆಟವು ಮುಸ್ಲಿಮರನ್ನು ಚುನಾವಣಾ ರಾಜಕಾರಣದಲ್ಲಿ ಹೆಚ್ಚು ಕಡಿಮೆ ಕಾಯಮ್ಮಾಗಿ ಮೂಲೆಗುಂಪು ಮಾಡಿಬಿಟ್ಟಿತು.

ಎರಡು ದಶಕಗಳಿಂದ ಗುಜರಾತಿನ ರಾಜಕಾರಣವನ್ನು ತನ್ನ ಅಂಕೆಯಲ್ಲಿ ಇರಿಸಿಕೊಂಡಿರುವ ಬಿಜೆಪಿ, 1995 ಮತ್ತು 1998ರ ಚುನಾವಣೆಗಳಲ್ಲಿ ತಲಾ ಒಬ್ಬ ಮುಸಲ್ಮಾನ ಅಭ್ಯರ್ಥಿಯನ್ನು ಹೂಡಿದ್ದುಂಟು. ಈ ಇಬ್ಬರೂ ಅಭ್ಯರ್ಥಿಗಳು ಸೋತರು. ಆನಂತರದ ಇಪ್ಪತ್ತು ವರ್ಷಗಳಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನಿಗೂ ಈ ಪಕ್ಷ ಟಿಕೆಟ್ ನೀಡಿಲ್ಲ. ಈ ಎರಡೂ ಚುನಾವಣೆಗಳಲ್ಲಿ ಕಾಂಗ್ರೆಸ್ ತಲಾ ಹತ್ತು ಮಂದಿ ಮುಸಲ್ಮಾನರಿಗೆ ಟಿಕೆಟ್ ನೀಡಿತ್ತು. ಮೊನ್ನೆ ನಡೆದ 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಮುಸ್ಲಿಂ ಉಮೇದುವಾರರ ಸಂಖ್ಯೆ ಆರಕ್ಕೆ ಇಳಿದಿತ್ತು. ಆರರ ಪೈಕಿ ಗೆದ್ದವರು ಮೂವರು.

'ಹದಿನೈದು ಮಂದಿ ಮುಸಲ್ಮಾನರನ್ನು ಗೆಲ್ಲಿಸುತ್ತಿದ್ದ ಕಾಂಗ್ರೆಸ್ ಪಕ್ಷ, ಆ ಕೋಮಿಗೆ ಟಿಕೆಟ್‌ಗಳ ಸಂಖ್ಯೆಯನ್ನು ಯಾಕೆ ತೀವ್ರವಾಗಿ ತಗ್ಗಿಸಿದೆ ಹೇಳಿ, ಗೆಲುವಿನ ಗಣಿತಕ್ಕೆ ಸರಿ ಹೊಂದುವುದಿಲ್ಲ ಎಂದು ತಾನೇ? ನಾವೂ ಅಷ್ಟೇ ಸ್ವಾಮಿ, ನಮ್ಮ ಗೆಲುವಿನ ಗಣಿತಕ್ಕೆ ಹೊಂದುವುದಿಲ್ಲ ಎಂದು ಅವರಿಗೆ ಟಿಕೆಟ್ ನೀಡುತ್ತಿಲ್ಲ. ಪಾರ್ಸಿಗಳು, ಸಿಖ್ಖರು, ಕ್ರೈಸ್ತರು ಕೂಡ ಅಲ್ಪಸಂಖ್ಯಾತರೇ ಅಲ್ಲವೇ? ಅವರಿಗೆ ಎಷ್ಟು ಟಿಕೆಟ್ ನೀಡಿದ್ದೀರಿ ಹೇಳಿ' ಎಂದು ವರ್ಷಗಳ ಹಿಂದೆಯೇ ಕಾಂಗ್ರೆಸ್ಸನ್ನು ಜಬರಿಸಿದ್ದಾರೆ ಮೋದಿ.

2011ರ ಜನಗಣತಿಯ ಪ್ರಕಾರ ದೇಶದಲ್ಲಿನ ಮುಸ್ಲಿಮರ ಸಂಖ್ಯೆ 17.20 ಕೋಟಿ. 2050ರ ವೇಳೆಗೆ ಈ ಸಂಖ್ಯೆ 30 ಕೋಟಿ ತಲುಪಲಿದ್ದು, ವಿಶ್ವದ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯುಳ್ಳ ದೇಶವಾಗಲಿದೆ ಭಾರತ ಎಂಬುದು 'ಪ್ಯೂ' ಸಂಶೋಧನಾ ಸಂಸ್ಥೆಯ ಲೆಕ್ಕಾಚಾರ.

ಇಷ್ಟು ದೊಡ್ಡ ಸಂಖ್ಯೆಯ ಜನವರ್ಗವೊಂದನ್ನು ದೇಶಕ್ಕೆ ಕವಿದಿರುವ ವಿಪತ್ತು ಎಂದೂ ಬಹುಸಂಖ್ಯಾತರ ಹೆಣ್ಣುಮಕ್ಕಳ ಮಾನ ಪ್ರಾಣಗಳಿಗೆ ಈ ಸಮುದಾಯ ಆಪತ್ತು ಎಂದೂ ಚಿತ್ರಿಸುವುದು ಅಪಾಯಕಾರಿ ರಾಜಕೀಯ ಆಟ. ಈ ಹುಲಿಯ ಸವಾರಿಯನ್ನು ಸಾಧ್ಯವಿರುವಷ್ಟೂ ಶೀಘ್ರವಾಗಿ ಕೈ ಬಿಟ್ಟು ಕೆಳಗಿಳಿಯಬೇಕಿದೆ. ರಾಜಕೀಯ ಅಧಿಕಾರ ಕೈವಶ ಮಾಡಿಕೊಳ್ಳುವುದು ದೊಡ್ಡದೋ, ದೇಶ ದೊಡ್ಡದೋ ಎಂಬ ಮಾತನ್ನು ಹುಲಿಸವಾರಿ ನಡೆಸಿರುವವರು ಕೇಳಿಕೊಳ್ಳಬೇಕಿದೆ. ಈ ಸಮುದಾಯ ಸಮಾಜಜೀವನದ ಮುಖ್ಯಧಾರೆಗೆ ಬರುವುದಿಲ್ಲವೆಂದು ಒಂದೆಡೆ ದೂರುವವರೂ ಅವರೇ. ಮತ್ತೊಂದೆಡೆ ಕೋಟ್ಯಂತರ ಜನರನ್ನು ಎರಡನೆಯ ದರ್ಜೆಯ ನಾಗರಿಕರನ್ನಾಗಿ ನಿರಂತರ ಭಯದಲ್ಲಿ, ಅಭದ್ರತೆಯ ಭಾವದಲ್ಲಿ, ಮುಖ್ಯಧಾರೆಯಿಂದ ದೂರ ಇರಿಸುವ ರಾಜಕಾರಣವನ್ನು ನಿರ್ಮಿಸಿ ಅದನ್ನು ಚಾಚೂತಪ್ಪದೆ ಪಾಲಿಸುತ್ತಿರುವವರೂ ಅವರೇ. ವಿಕಾಸದ ಮುಖವಾಡದ ಹಿಂದೆ ಅಡಗಿರುವುದು ಅಲ್ಪಸಂಖ್ಯಾತರ ಕುರಿತು ಬಹುಸಂಖ್ಯಾತರಲ್ಲಿ ನಿರಂತರ ಭಯ ಬಿತ್ತುವ ಅದೇ ಅಪಾಯಕಾರಿ ರಾಜಕಾರಣ.

ಒಂದು ವೇಳೆ ಮುಸಲ್ಮಾನರು ಇಲ್ಲದೆ ಹೋಗಿದ್ದಲ್ಲಿ, ಹಿಂದೂ ಬಹುಸಂಖ್ಯಾತರ ಮುಂದೆ ಅಪಾಯದ ಗುಮ್ಮನನ್ನು ಕಟೆದು ನಿಲ್ಲಿಸುವುದು ಶಕ್ಯವಿರಲಿಲ್ಲ. ಕಟ್ಟರ್ ಬಲಪಂಥೀಯ ಶಕ್ತಿಗಳು ಕೆಲಸವಿಲ್ಲದೆ ಕೈ ಕಟ್ಟಿ ಕುಳಿತುಕೊಳ್ಳಬೇಕಿತ್ತು ಇಲ್ಲವೇ ಇರುವ ಜನಸಮುದಾಯಗಳ ಪೈಕಿ ಒಂದನ್ನು ಆರಿಸಿ ಅದಕ್ಕೆ 'ಅಪಾಯಕಾರಿ ಮುಸಲ್ಮಾನ' ಹಣೆಪಟ್ಟಿ ಕಟ್ಟಬೇಕಿತ್ತು. ಇಂತಹ ಪಟ್ಟಿಯನ್ನು ಯಾವ ಸಮುದಾಯದ ಹಣೆಗೆ ಬಿಗಿಯಲಾಗುತ್ತಿತ್ತು ಎಂಬುದು ಆಲೋಚಿಸಬೇಕಾದ ವಿಚಾರ.

ಮೂವತ್ತು ವರ್ಷಗಳ ಕಾಲ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ದೇಶದ ಉದ್ದಗಲಕ್ಕೆ ಪ್ರತಿಷ್ಠಾಪಿಸಿದವರು ಗುರೂಜಿ ಎಂದೇ ಪ್ರಸಿದ್ಧಿ ಪಡೆದ ಆರೆಸ್ಸೆಸ್ ಮುಖ್ಯಸ್ಥರಾಗಿದ್ದ ಎಂ.ಎಸ್.ಗೋಳ್ವಲಕರ್‌. ಬುದ್ಧ, ಶಿವಾಜಿ, ಬಾಲಗಂಗಾಧರ ತಿಲಕ್ ಮೂವರೂ ಮೇಳೈಸಿದ ಮಹಾ ವ್ಯಕ್ತಿತ್ವವೆಂದು ಮೋದಿಯವರು ಗುರೂಜಿಯವರನ್ನು ಬಣ್ಣಿಸುತ್ತಾರೆ. ಮುಸ್ಲಿಮರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಈ ದೇಶದ ಆಂತರಿಕ ಭದ್ರತೆಗೆ ಆಪತ್ತುಗಳು... ದೇಶದೆಲ್ಲೆಡೆ ಅಸಂಖ್ಯಾತ ಮಿನಿ ಪಾಕಿಸ್ತಾನಗಳಿವೆ . ದಿಲ್ಲಿಯಿಂದ ರಾಂಪುರ, ಲಖನೌದವರೆಗೆ ಶಸ್ತ್ರಾಸ್ತ್ರಗಳನ್ನು ಕಲೆ ಹಾಕುತ್ತಿದ್ದಾರೆ ಮತ್ತು ತಮ್ಮ ಜನರನ್ನು ಒಗ್ಗೂಡಿಸುತ್ತಿದ್ದಾರೆ ಮುಸ್ಲಿಮರು. ಪಾಕಿಸ್ತಾನ ನಮ್ಮ ದೇಶದ ಮೇಲೆ ದಾಳಿ ನಡೆಸಿದಾಗ, ಅದರೊಂದಿಗೆ ಕೈ ಕಲೆಸಿ, ಒಳಗಿನಿಂದ ದಾಳಿ ನಡೆಸಲು ಅವರು ಹೊಂಚು ಹಾಕುತ್ತಿದ್ದಾರೆ ಎಂದಿದ್ದರು ಗುರೂಜಿ. 1966ರಲ್ಲಿ ಪ್ರಕಟವಾದ ಗುರೂಜಿ ವಿರಚಿತ 'ಬಂಚ್ ಆಫ್ ಥಾಟ್ಸ್'ನಲ್ಲಿ ಗುರೂಜಿಯವರ ಚಿಂತನೆಗಳು ಹರಳುಗಟ್ಟಿವೆ. ಈ ಹೊತ್ತಿಗೆಯು ಸಂಘಪರಿವಾರದ ಪಾಲಿನ ಭಗವದ್ಗೀತೆ. ಸಮಕಾಲೀನ ಭಾರತದಲ್ಲಿ ಮುಸಲ್ಮಾನರ ಕುರಿತು ಮೋದಿಯವರು ಕಟ್ಟಿರುವ ಕಥಾನಕದ ಮೂಲ ಕೂಡ ಗುರೂಜಿಯವರ ಚಿಂತನೆಗಳಲ್ಲಿದೆ.

ಭೀತಿ ಮತ್ತು ಮೌನ ಆಳಿದವು ಗುಜರಾತಿನ ಚುನಾವಣೆಗಳನ್ನು. ಉಳಿದಂತೆ ಜೀವಪರ, ಜನಪರ ಸಂಗತಿಗಳು ಈ ಚುನಾವಣೆಯ ಅಡಿ ಟಿಪ್ಪಣಿಗಳಾಗಿ ಅಡಗಿದವು. ಅಡಗಿದ ಅಡಿ ಟಿಪ್ಪಣಿಗಳು ಮುಂದೊಂದು ದಿನ ಪ್ರಧಾನ ಪಠ್ಯಗಳಾಗಬೇಕಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry