ಫಾರಿನ್ ಹಕ್ಕಿ

7

ಫಾರಿನ್ ಹಕ್ಕಿ

Published:
Updated:
ಫಾರಿನ್ ಹಕ್ಕಿ

ನೇರವಾಗಿ ಸಾಧ್ಯವಿಲ್ಲವೆಂದು ಹೇಳಲಾಗದೆ, ದಾಕ್ಷಿಣ್ಯಕ್ಕೊಳಗಾಗುವುದು ನಮ್ಮ ಹುಟ್ಟುಗುಣ. ಈ ಕಾರಣದಿಂದ ಬಾಳಿನುದ್ದಕ್ಕೂ ಅನಗತ್ಯ ಸನ್ನಿವೇಶಗಳಲ್ಲಿ ಸಿಕ್ಕಿಕೊಂಡು ತಾಪತ್ರೆ ಅನುಭವಿಸುವುದು ನಮ್ಮ ಬದುಕಿನ ಭಾಗವಾಗಿತ್ತು. ಮೊಬೈಲ್ ಫೋನ್‌ಗಳ ಆವಿಷ್ಕಾರದ ಬಳಿಕ ಈ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದವು.ಮನೆಯ ಬಳಿ ರೆಕ್ಕೆ ಮುರಿದು ಬಿದ್ದಿರುವ ಕಾಗೆ, ರಸ್ತೆ ಅಪಘಾತದಲ್ಲಿ ಗಾಯಗೊಂಡ ಕರಡಿ, ಗೂಡಿನಿಂದ ನೆಲಕ್ಕೆ ಬಿದ್ದಿರುವ ಗಿಳಿ ಮರಿ, ಹೀಗೆ ಸಂಕಷ್ಟಕ್ಕೆ ಸಿಕ್ಕಿದ ಅನೇಕ ಜೀವಿಗಳ ಕುರಿತಾಗಿ ಕರೆಗಳು ಬರುತ್ತಲೇ ಇದ್ದವು. ನಾಡಿನ ಮೂಲೆ ಮೂಲೆಗಳಿಂದ ಬರುವ ಕರೆಗಳಿಗೆ ಸಾವಧಾನದಿಂದ ಉತ್ತರಿಸುತ್ತಾ ಆ ಕ್ಷಣದಲ್ಲಿ ನಿರ್ವಹಿಸಬೇಕಿರುವ ಕೆಲಸಗಳನ್ನು ಸೂಚಿಸಿದರೆ, ತಮಗೆ ಅನುಭವವಿಲ್ಲವೆಂದು, ಬ್ಯಾಂಕ್ ಉದ್ಯೋಗದಲ್ಲಿರುವುದರಿಂದ ಬಿಡುವಾಗುವುದಿಲ್ಲವೆಂದು, ನಿಮ್ಮ ಮನೆಗೆ ಕಳುಹಿಸಿಕೊಡುವುದಾಗಿ ಮನವಿ ಮಾಡುತ್ತಿದ್ದರು.ನಾವು ಪಶುವೈದ್ಯರಲ್ಲ. ಕಾಡುಜೀವಿಗಳನ್ನು ಉಪಚರಿಸುವುದು ಆಗದ ಕೆಲಸವೆಂದು ತಿಳಿಸಿದರೆ, ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದೇವೆಂದು ಭಾವಿಸುತ್ತಿದ್ದರು. ಸಂಕಷ್ಟಕ್ಕೆ ಸಿಕ್ಕಿದ ಕಾಡಿನ ಜೀವಿಗಳನ್ನು ರಕ್ಷಿಸಿ, ಕಾಪಾಡುವುದು ನಮ್ಮ ಸಾಂವಿಧಾನಾತ್ಮಕ ಕರ್ತವ್ಯ ಎಂದೆ ಅವರು ನಿರ್ಧರಿಸಿದಂತೆ ಕಾಣುತ್ತಿತ್ತು.ಪ್ರಕೃತಿಯ ಗಂಭೀರ ಅಧ್ಯಯನದಲ್ಲಿ ತೊಡಗಿಸಿಕೊಂಡಾಗ, ಹಲವಾರು ಒಳನೋಟಗಳು ತೆರೆದುಕೊಳ್ಳುತ್ತವೆ. ಸಂಕೀರ್ಣವಾದ ಈ ಜೀವಜಗತ್ತಿನಲ್ಲಿ ಅನವಶ್ಯಕವಾಗಿ ಮೂಗು ತೂರಿಸಬಾರದೆಂಬ ಅರಿವು ಮೂಡುತ್ತದೆ. ಹಾಗೆಯೆ ಜೀವಪರಿಸರ ಅಥವಾ ಜೀವಸಂಕುಲಗಳನ್ನು ಉಳಿಸಿಕೊಳ್ಳುವ ಹೋರಾಟಕ್ಕೂ ತಬ್ಬಲಿಯಾದ ಪ್ರಾಣಿಯೊಂದನ್ನು ರಕ್ಷಿಸುವ ಭಾವುಕ ಧ್ವನಿಗಳಿಗೂ ಇರುವ ಅಗಾಧ ಅಂತರ ಸ್ಪಷ್ಟವಾಗತೊಡಗುತ್ತದೆ.ಆದರೆ ಸಂಕಷ್ಟಕ್ಕೊಳಗಾದ ಜೀವಿಗಳನ್ನು ಕಂಡು ಭಾವುಕರಾಗಿ ಕರೆ ಮಾಡಿದಾಗ, ನಿಮ್ಮ ಪ್ರಯತ್ನಗಳು ಪ್ರಕೃತಿಗೆ ಮಹತ್ವದ ಕೊಡುಗೆಯಾಗಲಾರದೆಂದು ಹೇಳಿ ಅವರನ್ನು ನೋಯಿಸಬಾರದೆಂದು ಸೌಜನ್ಯದಿಂದ ಉತ್ತರಿಸುತ್ತಿದ್ದೆವು.ಒಮ್ಮೆ ಗದಗಿನಿಂದ, ವಿದ್ಯುತ್ ತಂತಿಗೆ ಸಿಕ್ಕಿ ರೆಕ್ಕೆ ಕಳೆದುಕೊಂಡ ನವಿಲಿನ ಬಗ್ಗೆ ಮುಂಜಾನೆಯಿಂದ ಕರೆಗಳು ಬರಲಾರಂಭಿಸಿದಾಗ ತಾಳ್ಮೆ ಮುಗಿದಿತ್ತು. ‘ದಯವಿಟ್ಟು ಗದಗಿನ ಮೃಗಾಲಯಕ್ಕೆ ತಲುಪಿಸಿ’ ಎನ್ನುವ ನಮ್ಮ ಸಲಹೆಗೆ, ಅರಣ್ಯ ಇಲಾಖೆಯವರಿಗೆ ಬದ್ಧತೆ ಇಲ್ಲ, ಶ್ರದ್ಧೆ ಇಲ್ಲ, ಕಳಕಳಿ ಇಲ್ಲ. ನೀವೇ ಏನಾದರು ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಇನ್ನು ಈ ಫೋನ್ ಇಟ್ಟುಕೊಳ್ಳುವುದೇ ಬೇಡವೆನಿಸುತ್ತಿತ್ತು.ಅಷ್ಟರಲ್ಲಿ ಮತ್ತೆ ಫೋನ್ ಸದ್ದು ಮಾಡಿತು. ಮೈಸೂರಿನ ಪ್ರಗತಿಪರ ಚಿಂತಕರೊಬ್ಬರು ಕರೆ ಮಾಡಿದ್ದರು. ಸೂಕ್ಷ್ಮ ಮನಸ್ಸಿನ ಅವರು ಎಂದೂ ಅನವಶ್ಯಕವಾಗಿ ತೊಂದರೆ ಕೊಟ್ಟವರಲ್ಲ. ಸರ್ಕಾರಗಳ ಜನ ವಿರೋಧಿ ನೀತಿಗಳಿಗೆ ಪ್ರತಿಭಟಿಸುವುದು, ಜಗತ್ತಿನ ಮೂಲೆಮೂಲೆಗಳಲ್ಲಿ ಸಂಭವಿಸಿದ ಅನ್ಯಾಯಗಳಿಗೆ ಸ್ಪಂದಿಸಿ ರ‍್ಯಾಲಿ ನಡೆಸುವುದು, ಅಥವ ದುರ್ಘಟನೆಯಲ್ಲಿ ಸಾವಿಗೀಡಾದ ಮಂದಿಯ ಆತ್ಮಕ್ಕೆ ಶಾಂತಿ ದೊರಕಲೆಂದು ಗಾಂಧಿಭವನದಲ್ಲಿ ಕ್ಯಾಂಡಲ್ ಹೊತ್ತಿಸಿ ಎರಡು ನಿಮಿಷ ಮೌನವನ್ನಾಚರಿಸುವುದು ಅವರ ಪ್ರವೃತ್ತಿ. ಆದ್ದರಿಂದ ಅವರ ಕರೆ ದಿಗಿಲು ಮೂಡಿಸಲಿಲ್ಲ. ಊನಗೊಂಡ ಕಾಡು ಪ್ರಾಣಿಗಳೊಡನೆ ಏಗುವುದಕ್ಕಿಂತ ಮೆರವಣಿಗೆಯಲ್ಲಿ ಮೌನವಾಗಿ ತೆರಳಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸುವುದು ಲೇಸೆಂದು ನಮಗೆ ಮನವರಿಕೆಯಾಗಿತ್ತು.‘ಕಾಡಿನಲ್ಲಿದ್ದೀರೊ...? ನಾಡಿನಲ್ಲಿದ್ದೀರೊ...?’ ಎಂಬ ಪ್ರಶ್ನೆಗಳೊಂದಿಗೆ ಮಾತು ಆರಂಭಗೊಂಡಿತು. ‘ಓ... ಮೈಸೂರಿನಲ್ಲಿದ್ದೀರ... ಒಳ್ಳೆಯದಾಯ್ತು’ ಎಂದು ಮುಂದುವರೆದ ಅವರು, ತಾವು ಎರಡು ಫಾರಿನ್ ಹಕ್ಕಿಗಳನ್ನು ರಕ್ಷಿಸಿರುವುದಾಗಿ ತಿಳಿಸಿದರು. ‘ಒಳ್ಳೆಯದಾಯಿತು’ ಎಂದೆ. ಪಾಂಡವಪುರದ ಬಳಿ ಸಂತೆಯಲ್ಲಿ ಮಾರುತ್ತಿದ್ದ ಕಟುಕರಿಂದ ಕಸಿದುಕೊಂಡು ಅವುಗಳ ಪ್ರಾಣ ಉಳಿಸಿದ್ದಾಗಿ ತಿಳಿಸಿದರು. ‘ಒಳ್ಳೆಯ ಕೆಲಸ ಮಾಡಿದಿರಿ, ಭೇಷ್!’ ಎಂದು ಫೋನ್ ಇಡಲು ತಯಾರಾಗುತ್ತಿರುವಾಗ, ಅರ್ಧ ತಾಸಿನಲ್ಲಿ ಮನೆಗೆ ಬರುವುದಾಗಿ ಹೇಳಿ ಫೋನ್ ಆಫ್ ಮಾಡಿದರು. ಆಗ ಸ್ವಲ್ಪ ಅಂಜಿಕೆಯಾಯಿತು. ದೇಶೀ ಹಕ್ಕಿಗಳ ಬಗ್ಗೆ ಅಲ್ಪಸ್ವಲ್ಪ ತಿಳಿದಿರುವ ನಮಗೆ ಈ ಫಾರಿನ್ ಹಕ್ಕಿಗಳನ್ನು ಬಿಟ್ಟು ಹೋದರೆ ಏನು ಗತಿ ಎಂಬ ಚಿಂತೆ ಕಾಡಿತು.ಎರಡು ತಾಸಿನ ಬಳಿಕ, ಶುದ್ಧ ಅರವೆಯ ಅಂಗಿ ತೊಟ್ಟ ಅವರು ಮನೆಗೆ ಬಂದರು. ಹೆಗಲಿನಲ್ಲಿ ಇಳಿಬಿದ್ದಿದ್ದ ಕೈಮಗ್ಗದ ಜೋಳಿಗೆಯನ್ನು ತೆರೆದರು. ಹೊಸದಾಗಿ ಬರೆದಿರುವ ಕವನವನ್ನು ಓದಲು ಆರಂಭಿಸಬಹುದೇನೊ ಎಂದು ತಿಳಿದೆ. ಆದರೆ ಜೋಳಿಗೆಯಲ್ಲಿ ಹಳದಿಮಿಶ್ರಿತ ಹಸಿರು ಬಣ್ಣದ ಹಕ್ಕಿಗಳು ಪಿಳಿಪಿಳಿ ಕಣ್ಣು ಬಿಡುತ್ತಾ ಕುಳಿತಿದ್ದವು. ನಿಜಕ್ಕೂ ದಿಗಿಲಾಯಿತು. ಸಂಕಷ್ಟದ ಎಲ್ಲಾ ಬಾಗಿಲುಗಳು ತಾವಾಗಿಯೇ ತೆರೆದುಕೊಳ್ಳುವ ಸೂಚನೆಗಳು ಕಾಣತೊಡಗಿತು.ಜೋಳಿಗೆಯಿಂದ ಹಕ್ಕಿಗಳನ್ನು ಹೆಕ್ಕಿ ನನ್ನ ಕೈಯಲ್ಲಿರಿಸಿದರು. ಸೂಕ್ಷ್ಮವಾಗಿ ಪರಿಶೀಲಿಸಿದೆ. ಗಾಯದ ಯಾವ ಕಲೆಗಳೂ ಇರಲಿಲ್ಲ. ಬಳಿಕ ರೆಕ್ಕೆಗಳನ್ನು ಕತ್ತರಿಸಿದ್ದ ವಿಷಯ ಅರಿವಿಗೆ ಬಂತು. ಅವು ನಮ್ಮ ಕಾಡುಗಳಲ್ಲಿ ವಾಸಿಸುವ ಹಸಿರು ಪಾರಿವಾಳ. ‘ಮನಿಯಾಡಲ ಹಕ್ಕಿ’ ಎಂದೂ ಕರೆಯುತ್ತಾರೆ. ಹಕ್ಕಿಗಳಲ್ಲಿ ತುಂಡಾದ ರೆಕ್ಕೆಗಳು ಬೆಳೆಯುವುದು ಬಹಳ ನಿಧಾನ. ಆಲದ ಜಾತಿಯ ಹಣ್ಣುಗಳನ್ನು ನೀಡಿ, ರೆಕ್ಕೆ ಮೂಡಿದ ಬಳಿಕ ಹಾರಿಹೋಗುತ್ತವೆ ಎಂಬ ಸಲಹೆ ನೀಡಿ ಅವರನ್ನು ಕಳುಹಿಸಿಕೊಟ್ಟೆವು.ಆದರೆ ಫಾರಿನ್ ಹಕ್ಕಿಗಳ ಸಮಸ್ಯೆಯಿಂದ ಪಾರಾದ ಸಮಾಧಾನ ಹೆಚ್ಚು ಸಮಯ ಉಳಿಯಲಿಲ್ಲ. ಮೂರು ದಿನದಲ್ಲಿ ಮತ್ತೆ ಫೋನ್ ಮಾಡಿದ ಅವರು, ‘ಮಾವನಿಗೆ ಆರೋಗ್ಯ ಸರಿ ಇಲ್ಲವೆಂದು, ಊರಿಗೆ ಹೋಗಿ ವಾಪಸಾಗುವವರೆಗೆ ಹಕ್ಕಿಗಳನ್ನು ನೋಡಿಕೊಳ್ಳಿ’ ಎಂದು ಪಂಜರದಲ್ಲಿದ್ದ ಹಕ್ಕಿಗಳನ್ನು ನಮ್ಮ ಬಳಿ ಇಟ್ಟು ಹೊರಟುಹೋದರು. ತೊಂದರೆಯಲ್ಲಿದ್ದ ಅವರಿಗೆ ನಮ್ಮಿಂದ ಆ ಕೆಲಸ ಸಾಧ್ಯವಿಲ್ಲವೆಂದು ಹೇಳಲು ಸೌಜನ್ಯ ಅಡ್ಡಿಬಂತು.ನಿಜ, ಹಕ್ಕಿಗಳೆಂದರೆ ನಮಗೆ ವಿಶೇಷ ಆಸಕ್ತಿ. ವಿಕಾಸದ ಹಾದಿಯಲ್ಲಿ ಅವು ರೆಕ್ಕೆ ಕಟ್ಟಿಕೊಂಡು ಮುಗಿಲಿಗೆ ಹಾರಿದ್ದು, ಬದುಕುಳಿಯುವ ತಂತ್ರವಾಗಿ ಬಣ್ಣಗಳನ್ನು ಬಳಿದುಕೊಂಡಿದ್ದು, ವಲಸೆ ಪ್ರವೃತ್ತಿಯನ್ನು ರೂಢಿಸಿಕೊಂಡು ದೇಶ ದೇಶಗಳ ಗಡಿ ಉಲ್ಲಂಘನೆ ಮಾಡಿದ್ದು, ಅಧ್ಯಯನದ ಅಳತೆಗೆ ಸಿಗದೆ ಒಮ್ಮೆ ಗೋಚರಿಸಿ ಮತ್ತೆ ಕಣ್ಮರೆಯಾಗುವ ನಿಗೂಢತೆಗಳೆಲ್ಲವೂ ಬಹಳ ಕುತೂಹಲಕಾರಿ. ಅವುಗಳ ಒಳಗುಟ್ಟನ್ನು ಅರಿಯಲು ಮುದುಮಲೈ ಕಾಡಿನಲ್ಲಿ ಅಲೆಯುತ್ತಾ ಐದಾರು ವರ್ಷಗಳನ್ನೇ ಕಳೆದಿದ್ದೆವು.ಎಲ್ಲಾ ಜೀವಿಗಳಂತೆ ಹಕ್ಕಿಗಳ ಬದುಕು ಸಹ ಸಂಕೀರ್ಣ. ಕೇವಲ ಒಂದೇ ಬಗೆಯ ಹಣ್ಣನ್ನಾಗಲಿ, ಕೀಟವನ್ನಾಗಲಿ ಸೇವಿಸುತ್ತಾ ಅವು ದಿನ ಕಳೆಯುವಂತಿಲ್ಲ. ಮುಂಜಾನೆಯಲ್ಲಿ ನಿರ್ದಿಷ್ಟ ಜಾತಿಯ ಇರುವೆಗಳನ್ನು ಹೆಕ್ಕುವ ಹಕ್ಕಿ, ತುಸು ಹೊತ್ತಿನ ನಂತರ ಬೇರೆ ಬಗೆಯ ಕೀಟಗಳ ಬೇಟೆಯಾಡತೊಡಗುತ್ತದೆ. ಬಳಿಕ ಯಾವುದೋ ನಿರ್ದಿಷ್ಟ ಹಣ್ಣುಗಳನ್ನು ಅರಸುತ್ತಾ, ಇಲ್ಲವೆ ಮರಗಿಡಗಳಲ್ಲಿ ಅರಳಿದ ಹೂವಿನ ಮಕರಂದಕ್ಕೆ ಹಾರುತ್ತದೆ. ಹಾಗೆ ಪ್ರತಿ ಪ್ರಬೇಧದ ಹಕ್ಕಿಗಳ ಆಹಾರ ಪದ್ಧತಿ ವಿಭಿನ್ನವಾಗಿರುತ್ತದೆ. ಅದನ್ನು ಅರ್ಥ ಮಾಡಿಕೊಂಡರು ಸಹ ಅವುಗಳನ್ನು ಪೂರೈಸುವುದು ಸುಲಭ ಸಾಧ್ಯವಲ್ಲ.ನಮ್ಮ ಚಿಂತಕ ಮಿತ್ರರು ಹೊರಡುವಾಗ ತಾವು ಬಾಳೆಹಣ್ಣುಗಳನ್ನು ಕೊಟ್ಟಿದ್ದಾಗಿ, ಹಾಗೂ ಅವಗಳನ್ನು ಹಕ್ಕಿಗಳು ಇಷ್ಟಪಟ್ಟು ತಿಂದವೆಂದು ಹೇಳಿದ್ದರು. ಆದರೆ ನಮ್ಮ ತಿಳಿವಳಿಕೆಯಂತೆ ಹಸಿರು ಪಾರಿವಾಳಗಳ ಆಹಾರ ಕ್ರಮದಲ್ಲಿ ಪ್ರಥಮ ಆಯ್ಕೆ ಆಲದ ಜಾತಿಯ ಹಣ್ಣುಗಳು. ಬೇರೆ ಬೇರೆ ಋತುಮಾನಗಳಲ್ಲಿ ಹಣ್ಣು ಬಿಡುವ ಬಗೆ ಬಗೆಯ ಆಲದ ಹಣ್ಣುಗಳನ್ನು ಹುಡುಕಿ ಈ ಹಕ್ಕಿಗಳು ನೂರಾರು ಕಿಲೋಮೀಟರ್ ಅಲೆದಾಡುತ್ತವೆ. ಇವೆಲ್ಲ ತಿಳಿದಿದ್ದರೂ ಬಾಳೆಹಣ್ಣು ನೀಡಿ ಕೈತೊಳೆದುಕೊಳ್ಳುವುದು ನಮ್ಮ ಆತ್ಮಸಾಕ್ಷಿಗೆ ವಿರುದ್ಧವಾಗಿತ್ತು. ಹಾಗಾಗಿ ಆಲದ ಜಾತಿಯ ಹಣ್ಣುಗಳ ಹುಡುಕಾಟದಲ್ಲಿ ತೊಡಗಿದೆವು.ಆಗ, ಆಲದ ಜಾತಿಗೆ ಸೇರಿದ ಕೆಲವು ಅರಳಿ ಮರಗಳು ಹಣ್ಣು ತುಂಬಿಕೊಂಡಿದ್ದವು. ಕುತೂಹಲದ ವಿಷಯವೆಂದರೆ ಒಂದೇ ಬಗೆಯ ಆಲದ ಜಾತಿಯ ಮರಗಳು ಕೂಡ ಏಕಕಾಲದಲ್ಲಿ ಹಣ್ಣು ಬಿಡುವುದಿಲ್ಲ. ಆಲದ ಹಣ್ಣು, ಕಣಜ ಮತ್ತು ಪರಾವಲಂಬಿ ಜೀವಿಗಳ ಒಂದು ಅತ್ಯಂತ ಸಂಕೀರ್ಣ ವ್ಯವಸ್ಥೆ ಇದರ ಹಿಂದಿದೆ. ಪರಾಗಸ್ಪರ್ಶ ಮತ್ತು ಬೀಜ ಪ್ರಸಾರ ಕ್ರಿಯೆಗಳು ಹೆಚ್ಚು ಪರಿಣಾಮಕಾರಿಯಾಗಿ ಜರುಗಬೇಕೆಂಬ ಕಾರಣಕ್ಕಾಗಿ ಬೇರೆ ಬೇರೆ ಅವಧಿಯಲ್ಲಿ ಹಣ್ಣು ಬಿಡುವ ಪರಿಪಾಠವನ್ನು ಅವು ರೂಢಿಸಿಕೊಂಡಿವೆ. ಈ ಪರಿಪಾಠ ಫಾರಿನ್ ಹಕ್ಕಿಗಳಿಗೆ ಆಹಾರ ಪೂರೈಸಲು ನೆರವಾಗಬಹುದೆಂದು ಯೋಚಿಸಿದೆವು.ನಗರಗಳಲ್ಲಿ ಅರಳಿ ಮರಗಳಿಗೇನು ಕೊರತೆ ಇಲ್ಲ. ಯಾರ ನೆರವಿಲ್ಲದೆ, ತನ್ನಷ್ಟಕ್ಕೆ ಬೆಳೆಯುವ ಈ ಮರಗಳಿಗೆ ದೇವರ ಸ್ಥಾನಮಾನ ನೀಡಿ ಸುತ್ತಲು ಕಟ್ಟೆ ನಿರ್ಮಿಸಿರುವುದು ಮಾತ್ರ ತಲೆನೋವಾಯಿತು. ದೇವರ ಮೇಲೆ ಪಾದಗಳನ್ನಿರಿಸಿ ಮರವೇರುವಂತಿಲ್ಲ. ಕಲ್ಲು ಬೀಸಿ ಹಣ್ಣುಗಳನ್ನು ಉದುರಿಸಲು ಯತ್ನಿಸಿದರೆ ವಾಹನಗಳ ಗಾಜಿಗೋ ದಾರಿಹೋಕರಿಗೋ ಬಿದ್ದು ಅವಾಂತರಕ್ಕೆ ಕಾರಣವಾಗಬಹುದು. ಹಾಗಾಗಿ ರಾತ್ರಿ ಹೊತ್ತಿನಲ್ಲಿ ಬಾವಲಿಗಳು ಈ ಮರಗಳಿಗೆ ಮುತ್ತಿದಾಗ ನೆಲಕ್ಕೆ ಬೀಳುವ ನೂರಾರು ಹಣ್ಣುಗಳನ್ನು ಮುಂಜಾನೆ ಸಂಗ್ರಹಿಸುವುದೆಂದು ತೀರ್ಮಾನಿಸಿದೆವು.ಆದರೆ, ನಗರಗಳ ಮುಂಜಾನೆ ಪ್ರಶಾಂತವಾಗಿ ಆರಂಭವಾಗುವುದಿಲ್ಲ. ಆರೋಗ್ಯ ಕಾಪಾಡಿಕೊಳ್ಳುವ ಪ್ರಜ್ಞೆಯಿಂದ ನೂರಾರು ಮಂದಿ ರಸ್ತೆಯಲ್ಲಿ ಜಮಾಯಿಸಿರುತ್ತಿದ್ದರು.ಹಾಸ್ಯದ ಸನ್ನಿವೇಶವೇ ಇಲ್ಲದೆ ಗಹಗಹಿಸಿ ನಗುವ ಮಂದಿ, ಕತ್ತುಗಳನ್ನು ಅತ್ತಿತ್ತ ತಿರುಗಿಸುತ್ತಾ, ಕಾಲುಗಳನ್ನು ಎತ್ತೆತ್ತಲೊ ಬೀಸುತ್ತಾ, ಕೈಗಳನ್ನು ಹಿಂದಕ್ಕೂ ಮುಂದಕ್ಕೂ ಆಡಿಸಿ ಚಪ್ಪಾಳೆ ತಟ್ಟುತ್ತಾ ಸಾಗುವ ಜನ... ಜಗತ್ತಿನ ರಹಸ್ಯಗಳನ್ನೆಲ್ಲ ಸೂಟ್‌ಕೇಸ್‌ಗಳಲ್ಲಿ ತುಂಬಿಕೊಂಡು ಬೆಂಗಳೂರಿನ ರೈಲು ಹತ್ತಲು ಆಟೊಗಳಿಗೆ ಚಡಪಡಿಸುವ ಜನ... ದಿಗಿಲಾಯಿತು... ಅವಸರದಲ್ಲಿ ಮುಳುಗಿದ ನಗರಗಳಲ್ಲಿ ಮೌನಕ್ಕೆ ಅವಕಾಶವೇ ಇಲ್ಲವಲ್ಲ ಎನಿಸಿತು.ಗದ್ದಲದೊಳಗೆ ಸರಿದು ಅರಳಿ ಮರವನ್ನು ಸಮೀಪಿಸಿದರೆ, ಅಲ್ಲಿ ಕೈ ಮುಗಿದು ಅರಳಿಕಟ್ಟೆಯನ್ನು ಪ್ರದಕ್ಷಿಣೆ ಹಾಕುವ ಮಹಿಳೆಯರು, ಯುವತಿಯರು ಬರುತ್ತಲೇ ಇರುತ್ತಿದ್ದರು.ಅವರ ಪ್ರದಕ್ಷಿಣೆಗಳು ಮುಗಿದು ಅರಳಿಕಟ್ಟೆ ಬಿಡುವಾಗುವ ಹೊತ್ತಿಗೆ ಹೆಚ್ಚಿನ ಹಣ್ಣುಗಳೆಲ್ಲ ತುಳಿತಕ್ಕೆ ಸಿಕ್ಕು ನಜ್ಜುಗುಜ್ಜಾಗಿರುತ್ತಿದ್ದವು. ಬಳಿಕ ಹಣ್ಣು ಹೆಕ್ಕುತ್ತಾ, ಕಟ್ಟೆ ಸುತ್ತುತ್ತಿದ್ದ ನಮ್ಮ ಚಟುವಟಿಕೆ ದಾರಿಹೋಕರಲ್ಲಿ ಕುತೂಹಲ ಮೂಡಿಸುತ್ತಿತ್ತು. ಏನೋ ಹರಕೆ ಹೊತ್ತಿರಬೇಕು.... ಏನಾದರೂ ಮೆಡಿಸನಲ್ ವ್ಯಾಲ್ಯು ಇರಬೇಕು ಎನ್ನುವ ಹತ್ತಾರು ಮಾತುಗಳು. ಆ ಅವಿವೇಕದ ಮಾತುಗಳಿಗೆಲ್ಲ ತಲೆ ಕೆಡಿಸಿಕೊಂಡರೆ ಫಾರಿನ್ ಹಕ್ಕಿಗಳ ಹಸಿವನ್ನು ನೀಗಿಸಲು ಸಾಧ್ಯವಿಲ್ಲವೆಂದು ಕರ್ತವ್ಯವನ್ನು ಮುಂದುವರಿಸಿದ್ದೆವು. ಜನರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳಲು ಬಡಾವಣೆಯಿಂದ ಬಡಾವಣೆಗೆ ನಮ್ಮ ಯಾತ್ರೆ ಸಾಗಿತ್ತು.ಆ ಅರಳಿಕಟ್ಟೆಯ ಬಳಿ ಪುಟ್ಟ ಅಂಗಡಿ ಒಂದಿತ್ತು. ನಮ್ಮ ದಿನ ನಿತ್ಯದ ಕೆಲಸಗಳನ್ನು ಗಮನಿಸಿದ ಅಂಗಡಿಯ ಮಾಲೀಕ ಒಂದು ದಿನ ಮೆಲ್ಲನೆ ಬಳಿಗೆ ಬಂದು ‘ನಿಮ್ಮ ವೈಫ್ ಅವರನ್ನ ಕಳಿಸಬೇಕು ಸಾರ್, ನೀವು ಎಷ್ಟು ಪ್ರದಕ್ಷಿಣೆ ಹಾಕಿದರೂ ಉಪಯೋಗವಿಲ್ಲ’ ಎಂದು ಕೈಯಾಡಿಸಿದ. ನಿಮಗ್ಯಾರೋ ತಪ್ಪು ಸಲಹೆ ನೀಡಿದ್ದಾರೆಂದು ಹೇಳಿದ ಆತ, ದೊಡ್ಡ ವ್ಯಾಪಾರಿಗಳ, ಅಧಿಕಾರಿಗಳ, ಗಣ್ಯವ್ಯಕ್ತಿಗಳ ಹೆಸರನ್ನೆಲ್ಲ ಉಲ್ಲೇಖಿಸಿ, ಅವರಿಗೆಲ್ಲ ಆ ಅರಳಿಕಟ್ಟೆಯಿಂದ ಪ್ರಾಪ್ತಿಯಾದ ಮಕ್ಕಳ ವಿವರಗಳನ್ನೆಲ್ಲ ಹೇಳಲಾರಂಭಿಸಿದ.ಸಮಾಜದ ಗೌರವಾನ್ವಿತ ಕುಟುಂಬಗಳ ಖಾಸಗಿ ವಿಷಯಗಳನ್ನೆಲ್ಲ ಸಾರ್ವಜನಿಕವಾಗಿ ಚರ್ಚಿಸಲಾರಂಭಿಸಿದ್ದು ನಮಗೆ ಸರಿ ಕಾಣಲಿಲ್ಲ.ಎದುರಾಗುತ್ತಿದ್ದ ಮುಜುಗರಗಳನ್ನೆಲ್ಲ ನೆನೆಸಿಕೊಂಡು ಚಿಂತಕ ಮಿತ್ರನನ್ನು ಶಪಿಸುತ್ತಾ, ನಗರಗಳಲ್ಲಾಗುವ ಅವಮಾನಕ್ಕಿಂತ ಬಂಡೀಪುರದ ಕಾಡಿನಲ್ಲಿ ಆಲದ ಹಣ್ಣುಗಳನ್ನು ಹುಡುಕುವುದು ಒಳಿತೆಂದು ತೀರ್ಮಾನಿಸಿ ಮರುದಿನವೇ ಹಕ್ಕಿಗಳೊಂದಿಗೆ ಬಂಡೀಪುರಕ್ಕೆ ಬಂದೆವು.ಆದರೆ ಬಂಡೀಪುರದಂತಹ ಆನೆ ಕಾಡಿನಲ್ಲಿ ಆಲದ ಮರಗಳು ವಿರಳ. ಇರುವ ಮರಗಳು ಎತ್ತರಕ್ಕೆ ಚಿಮ್ಮಿ ಛತ್ರಿಯಾಕಾರದಲ್ಲಿರುತ್ತವೆ. ಆನೆಗಳಿಗೆ ಆಲದ ಮರದ ಕಡ್ಡಿ ಹಾಗೂ ತೊಗಟೆಗಳು ಹೆಚ್ಚು ಪ್ರಿಯವಾದ್ದರಿಂದ ಈ ಜಾತಿಯ ಸಸಿಗಳನ್ನು ಅವು ಚಿಗುರೊಡೆಯಲು ಬಿಡುವುದಿಲ್ಲ. ಹಾಗಾಗಿ ಅವು ಬದುಕುಳಿಯಲು ವಿಭಿನ್ನ ತಂತ್ರವೊಂದನ್ನು ಅಳವಡಿಸಿಕೊಂಡಿವೆ. ಹಕ್ಕಿಗಳಿಂದ ಬೀಜ ಪ್ರಸಾರಗೊಳ್ಳುವ ಆಲದ ಬೀಜಗಳು ದೊಡ್ಡ ಮರಗಳ ನೆತ್ತಿಯಲ್ಲಿ ಕುಳಿತು, ಮೊಳೆತು, ಚಿಗುರೊಡೆದು ಮೆಲ್ಲಗೆ ಭೂಮಿಗೆ ಬೇರು ಇಳಿಸುತ್ತಾ ಮರವಾಗಿ ಬೆಳೆಯುತ್ತವೆ. ಈ ಪ್ರಕ್ರಿಯೆಗೆ ಹಲವು ದಶಕಗಳೇ ಬೇಕು. ಈ ಹಿನ್ನೆಲೆಯಲ್ಲಿ ಹಕ್ಕಿಗಳನ್ನು ಬಂಡೀರಪುಕ್ಕೆ ತಂದದ್ದು ತಪ್ಪು ನಿರ್ಣಯದಂತೆ ಕಂಡಿತು.ಬಂಡೀಪುರಕ್ಕೆ ಬಂದಾಗ ಸಹಾಯಕ ಮೂರ್ತಿಗೆ ಪರಮಾನಂದವಾಯಿತು. ಹಕ್ಕಿಗಳನ್ನು ಸಾಕಬೇಕೆಂಬ ಅವನ ಖಯಾಲಿಗೆ ಒದಗಿಬಂದ ಮತ್ತೊಂದು ಅವಕಾಶಕ್ಕೆ ಬಹಳ ಖುಷಿಪಟ್ಟ. ನಂತರ ಕಾಡಿನ ಪರಿಸರಕ್ಕೆ ಹೊಂದಿಕೊಳ್ಳಲೆಂದು ಮನೆಯ ಮುಂದಿದ್ದ ಮರಕ್ಕೆ ಪಂಜರವನ್ನು ಜೋತು ಬಿಟ್ಟ.ನೈಜ ಪರಿಸರದಲ್ಲಿ ಹಾರಾಡುತ್ತಿದ್ದ ಹಕ್ಕಿಗಳ ರೆಕ್ಕೆ ಬಡಿತ, ಅವುಗಳ ಕೂಗು ಕಿವಿಗೆ ಬಿದ್ದಿದ್ದೇ ತಡ ಪಂಜರದೊಳಗಿನ ಹಸಿರು ಪಾರಿವಾರಗಳು ತೀವ್ರ ಉದ್ರೇಕಕ್ಕೆ ಒಳಗಾದವು. ತಮಗೆ ಹಾರುವ ರೆಕ್ಕೆಗಳೇ ಇಲ್ಲವೆಂಬುದನ್ನು ಮರೆತು ಮುಗಿಲಿಗೆ ಹಾರಲು ಚಡಪಡಿಸಿದವು. ತುಂಡು ರೆಕ್ಕೆಗಳನ್ನೆ ಜೋರಾಗಿ ಬಡಿಯುತ್ತಾ ಪಂಜರದ ಕಂಬಿಗಳಿಗೆ ಹೊಡೆದುಕೊಳ್ಳಲಾರಂಭಿಸಿದವು. ಏನಾಗುತ್ತಿದೆ ಎಂದು ನಮಗರಿವಾಗುವಷ್ಟರಲ್ಲಿ ಒಂದು ಪಾರಿವಾಳ ಹಠಾತ್ತಾಗಿ ಪ್ರಾಣ ಬಿಟ್ಟಿತ್ತು. ತಕ್ಷಣ ಪಂಜರವನ್ನು ಮನೆಯೊಳಗೆ ತಂದು, ಬಟ್ಟೆ ಮುಚ್ಚಿ ಕತ್ತಲು ಮಾಡಿ ಹೇಗೋ ಇನ್ನೊಂದು ಹಕ್ಕಿಯ ಪ್ರಾಣ ಉಳಿಸಿಕೊಂಡೆವು.ಕೇವಲ ಕಾಡು ಹಕ್ಕಿಗಳ ಹಾಡು, ಚಿಗುರಿದ ಮರಗಳು, ನಿತ್ರಾಣವಾದ ಕಾಡಿನ ಜೀವಿಯೊಂದನ್ನು ಹೀಗೆ ಪ್ರಚೋದಿಸಿ ಸಾವಿಗೆ ದೂಡಬಹುದೆಂದು ನಾವು ಊಹಿಸಿಯೂ ಇರಲಿಲ್ಲ. ಸ್ವತಂತ್ರಗೊಂಡು, ರೆಕ್ಕೆಬಡಿಯುತ್ತಾ ಆಕಾಶಕ್ಕೆ ಹಾರಿ ತನ್ನ ಸಮುದಾಯವನ್ನು ಸೇರಿಕೊಳ್ಳುವ ಅತೀವ ತವಕದಿಂದ ಸ್ಫೋಟಿಸಿದ ಚೈತನ್ಯ ಅದರ ಪ್ರಾಣಕ್ಕೇ ಎರವಾಗಿತ್ತು.ಅದಾಗಲೆ ಬಂಡೀಪುರ ಕಾಡಿನ ಆಲದ ಮರಗಳಲ್ಲಿ ಹಣ್ಣುಗಳು ಮುಗಿದಿದ್ದವು. ಚಿಂತಕ ಮಿತ್ರರನ್ನು ನೆನೆದು ಬಾಳೆಹಣ್ಣು ನೀಡಲು ತೀರ್ಮಾನಿಸಿದೆವು. ಮನೆಯಿಂದ ಎರಡು ಕಿಲೋಮೀಟರ್ ದೂರದಲ್ಲಿದ್ದ ಹನುಮನ ದೇಗುಲದ ಬಳಿಯ ಅಂಗಡಿಯಲ್ಲಿದ್ದ ಪೂಜೆ ಬಾಳೆಹಣ್ಣುಗಳನ್ನು ಮೂರ್ತಿ ತಂದು ಹಕ್ಕಿಯ ಮುಂದಿರಿಸಿದ. ಹಕ್ಕಿ ಅತ್ತ ಗಮನ ಹರಿಸದೆ, ಎತ್ತಲೊ ನೋಡುತ್ತ ಕುಳಿತಿತು. ಅವನ್ನು ತಿನ್ನುವ ಹಣ್ಣೆಂದು ಅದು ಪರಿಗಣಿಸಲೇ ಇಲ್ಲ. ಮಿತ್ರರಿಗೆ ಫೋನ್ ಮಾಡಿದರೆ  ‘ನೀವು ರಸಬಾಳೆ ಕೊಟ್ಟು ನೋಡಿ’ ಎಂಬ ಉತ್ತರ. ಒಳ್ಳೆಯ ಫಜೀತಿಯಾಯಿತಲ್ಲ ಎಂದು ಗುಂಡ್ಲುಪೇಟೆಯಲ್ಲಿ ವಿಚಾರಿಸಿದೆವು. ಅಲ್ಲಿ ನಂಜನಗೂಡು, ಇಲ್ಲದಿದ್ದರೆ ಮೈಸೂರಿಗೆ ಹೋಗಬೇಕೆಂದು ಸೂಚಿಸಿದರು.ಈ ನಂಜನಗೂಡು ರಸಬಾಳೆ ಹಣ್ಣಿನ ವೈಶಿಷ್ಟ್ಯತೆಯೆ ಬೇರೆ. ಬೆರಳುದ್ದದ್ದ ಪುಟಾಣಿ ಗಾತ್ರದ ಈ ಹಣ್ಣುಗಳು ಅತ್ಯಂತ ದುಬಾರಿ. ಮೈಸೂರಿನ ರಾಜಮನೆತನದವರು, ಹಳೆಯ ಶ್ರೀಮಂತರೆಲ್ಲ ಇಂದಿಗೂ ಅಪೇಕ್ಷಿಸುವುದು ಈ ರಸಬಾಳೆ ಹಣ್ಣುಗಳನ್ನೆ. ಜೊತೆಗೆ ಇವು ಕೆಲವು ಅಂಗಡಿಗಳಲ್ಲಿ ಮಾತ್ರ ಲಭ್ಯವಿರುತ್ತವೆ.ಇದನ್ನೆಲ್ಲ ಮನಗಂಡು ನಂಜನಗೂಡಿಗೆ ತಲುಪಿದಾಗ ಅದೃಷ್ಟವಶಾತ್ ಮುಖ್ಯ ರಸ್ತೆಯ ಪಕ್ಕದ ಅಂಗಡಿಯಲ್ಲೇ ರಸಬಾಳೆ ಹಣ್ಣು ಕಣ್ಣಿಗೆ ಬಿತ್ತು. ಗೊನೆಯನ್ನು ನೋಡುತ್ತಿರುವಾಗಲೆ ಒಂದಕ್ಕೆ ಹತ್ತು ರೂಪಾಯಿ ಎಂದ ಅಂಗಡಿಯವನು ಪಕ್ಕದ ಗಿರಾಕಿಯೊಂದಿಗೆ ವ್ಯವಹಾರ ಮುಂದುವರೆಸಿದ. ಕ್ರಮೇಣ ವಾರಕ್ಕೆರಡು ಬಾರಿ ಹಣ್ಣು ಖರೀದಿಸುತ್ತಿದ್ದರಿಂದ ಸಲಿಗೆಯಿಂದ ಮಾತನಾಡಲು ಆರಂಭಿಸಿದ. ನಾನು ಸಹ ಹೌದು, ಅಲ್ಲ ಎಂಬ ಉತ್ತರಗಳಿಂದ ಚರ್ಚೆಯನ್ನು ಮೊಟಕುಗೊಳಿಸುತ್ತಿದ್ದೆ.ಮುಂದೊಂದು ದಿನ ಅಂಗಡಿಗೆ ಹೋದಾಗ ‘ಟೀ ತರಸ್ಲ ಸಾರ್...’ ಎಂದು ಮತ್ತೆ ಮಾತನಾಡುತ್ತಾ ‘ಏನಾದರು ಗುಡ್ ನ್ಯೂಸ್?’ ಎಂದು ನಗುತ್ತಾ ನಿಂತ. ಫಾರಿನ್ ಹಕ್ಕಿಯ ಕಥೆ ಬಿಚ್ಚಿದರೆ ತಲೆ ಕೆಟ್ಟ ಗಿರಾಕಿ ಎಂದು ತೀರ್ಮಾನಿಸಿ ಬಿಡುತ್ತಾನೆಂದು ಹೆಚ್ಚು ಮಾತನಾಡಲಿಲ್ಲ. ‘ಬೇಸರ ಮಾಡಿಕೊಂಡಿರಾ ಸಾರ್’ ಎಂದು ಕ್ಷಮಾಪಣೆಯ ಭಂಗಿಯಲ್ಲಿ ನಿಂತ. ನೀಡಿದ ಹಣಕ್ಕೆ ಚಿಲ್ಲರೆ ವಾಪಸಿಸಿ, ‘ನಾನು ಹೇಳಿದ್ದು ಗೊತ್ತಾಗಲಿಲ್ಲ ಅಂತ ಕಾಣುತ್ತೆ, ಪ್ರೆಗ್ನೆಂಟ್ ವುಮೆನ್‌ಗೆ ರಸಬಾಳೆ ಬಹಳ ಇಷ್ಟವೆಂದು ಎಲ್ಲರೂ ಕೊಂಡೊಯ್ಯುತ್ತಾರೆ’ ಎಂದು ಕೈ ಹೊಸಕುತ್ತಾ ನಿಂತ. ಎಂತಹ ಅಪಮಾನಗಳಿಗೆ ದೂಡಿದರಲ್ಲ ಎಂದು ಚಿಂತಕರನ್ನು ಶಪಿಸುತ್ತಾ ವಾಪಸಾದೆ. ಅಚ್ಚರಿ ಎಂದರೆ ಫಾರಿನ್ ಪಾರಿವಾಳ ರಸಬಾಳೆಯನ್ನು ಚೆನ್ನಾಗಿ ಆಸ್ವಾದಿಸುತ್ತಿತ್ತು.ಎರಡು ತಿಂಗಳ ಬಳಿಕ ಫಾರಿನ್ ಹಕ್ಕಿಗೆ ಹೊಸ ಹೊಸ ಬಣ್ಣದ ರೆಕ್ಕೆಗಳು ಮೂಡಿದ್ದವು. ಪಂಜರದಲ್ಲಿ ಕುಳಿತು ಆಗಾಗ್ಗೆ ರೆಕ್ಕೆ ಬಡಿದು ಹಾರುವ ಬಯಕೆಯನ್ನು ವ್ಯಕ್ತಪಡಿಸುತ್ತಿತ್ತು.ಆಗ ಹಸಿರು ಪಾರಿವಾಳಗಳು ಗೂಡು ಮಾಡುವ ಕಾಲ. ಮನೆಯಿಂದ ಮೈಲು ದೂರದ ಬೆಟ್ಟದ ತಪ್ಪಲಿನಲ್ಲಿದ್ದ ಬೂದಾಳೆ ಮರದಲ್ಲಿ ಹದಿನೈದು ಇಪ್ಪತ್ತು ಹಸಿರು ಪಾರಿವಾರಗಳು ಗೂಡು ಕಟ್ಟಿ ಮೊಟ್ಟೆಗೆ ಶಾಖ ನೀಡುತ್ತಿದ್ದವು. ಮೂರ್ತಿ ದೂರದಿಂದ ಸಂಗ್ರಹಿಸಿ ತಂದಿದ್ದ ಗೋಣಿ ಹಣ್ಣು ಮತ್ತು ಮನೆಯಲ್ಲಿದ್ದ ರಸಬಾಳೆಯನ್ನು ಚೆನ್ನಾಗಿ ತಿನ್ನಿಸಿ, ಮಾರನೆಯ ಬೆಳಿಗ್ಗೆ ಗೂಡುಗಳಿದ್ದ ಮರದ ಬಳಿ ಫಾರಿನ್ ಹಕ್ಕಿಯನ್ನು ಬಿಡುಗಡೆ ಮಾಡುವುದೆಂದು ತೀರ್ಮಾನಿಸಿದೆವು. ಈ ಹಕ್ಕಿ ಹಾರಿದ ಬಳಿಕ ತನ್ನ ಸಮುದಾಯದೊಂದಿಗೆ ಸೇರಿ ಜರುಗಿದ ಘಟನೆಯ ವಿವರಗಳನ್ನೆಲ್ಲ ಹೇಳಬಹುದೇನೊ ಎಂದು ಮೂರ್ತಿ ಆಶಿಸಿದ್ದ.ಆದರೆ ಮಾರನೆಯ ಬೆಳಿಗ್ಗೆ ಪಂಜರದಲ್ಲಿದ್ದ ಹಕ್ಕಿ ಕಾಣಲಿಲ್ಲ. ಪಂಜರದ ಬಾಗಿಲು ಹಾಕಿದಂತೆಯೇ ಇತ್ತು. ಆದರೆ ಹಕ್ಕಿಯ ಹಿಕ್ಕೆ ಬೀಳುತ್ತಿದ್ದ ಪಂಜರದ ಕೆಳಭಾಗದ ಮೆಶ್ ತುಕ್ಕು ಹಿಡಿದ್ದಿದ್ದಂತೆ ಕಂಡಿತು. ಮೂರ್ತಿ ತಳ್ಳಿ ನೋಡಿದ. ಅದು ತೆರೆದು ಮತ್ತೆ ಕೂಡಿಕೊಂಡಿತು. ಸುತ್ತಲೂ ಸೂಕ್ಷ್ಮವಾಗಿ ಗಮನಿಸಿದೆವು. ಪುನಗಿನ ಬೆಕ್ಕಿನ ಒಂದು ಹೆಜ್ಜೆಯನ್ನು ಬಿಟ್ಟರೆ ಬೇರೇನೂ ಕಾಣಲಿಲ್ಲ. ಹುಚ್ಚನಂತಾಗಿದ್ದ ಮೂರ್ತಿ ಪಕ್ಕದ ಕಾಡಿಗೆ ಹೋಗಿ ಬರುವೆನೆಂದ. ಬಹಳ ಹೊತ್ತಿನ ನಂತರ ಮೂರ್ತಿ ಬೇಸರದಿಂದ ವಾಪಸ್ಸಾದ, ಅವನ ಕೈಯಲ್ಲಿ ಒಂದು ಬಣ್ಣದ ಪುಕ್ಕವಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry