ಫ್ರೆಂಡ್‌ಶಿಪ್‌ಗೆ ಮೋಸ ಮಾಡಿದ್ದೀಯಾ!

7

ಫ್ರೆಂಡ್‌ಶಿಪ್‌ಗೆ ಮೋಸ ಮಾಡಿದ್ದೀಯಾ!

Published:
Updated:

ಒಂದು ದಿನ ನಮ್ಮ ಸೆಕ್ಷನ್‌ಗೆ ಮಾನಿಟರ್ ನಾನಾಗುತ್ತೇನೆಂಬ ಕಲ್ಪನೆಯೇ ನನಗಿರಲಿಲ್ಲ. ಶಾಲೆಗೆ ಎರ್ರಾಬಿರ್ರಿ ಚಕ್ಕರ್ ಹೊಡೆಯುವ ಗ್ಯಾಂಗಿನ ಲೀಡರ್ರೇ ನಾನಾಗಿದ್ದರಿಂದ ಈ ‘ಗೌರವ ಹುದ್ದೆ’  ನನಗೆ ದೊರಕುವುದು ದೂರದ ಮಾತಾಗಿತ್ತು. ಆದರೆ ಬಲು ಅಚಾನಕ್ಕಾಗಿ  ಮಾನಿಟರ್ ಜವಾಬ್ದಾರಿ ನನಗೆ ತಗುಲಿ ಹಾಕಿಕೊಂಡಿತು.‘ಕಳ್ಳನನ್ನೇ ಲೀಡರ್ ಮಾಡಿ ಬಿಡೋಣ. ಶಾಲೆಯಿಂದ ಹುಡುಗರು ಹೇಗೆ ತಪ್ಪಿಸಿಕೊಳ್ತಾರೆ ಅನ್ನೋ ಟೆಕ್ನಿಕ್‌ಗಳೆಲ್ಲಾ ಹೆಚ್ಚಾಗಿ ಇವನಿಗೆ ಗೊತ್ತಿರುತ್ತವೆ.  ಯಾವ್ಯಾವ ಖದೀಮರು ಹೇಗೇಗೆ ಚಕ್ಕರ್ ವಸೀತಾರೆ ಅನ್ನೋ ಸೀಕ್ರೆಟ್ ಗೊತ್ತಿರೋ ಪ್ರಳಯಾಂತಕನನ್ನೇ  ಲೀಡರ್ ಮಾಡಿದ್ರೆ ನಮಗೆ ಸಮಸ್ಯೆನೇ ಇರೋದಿಲ್ಲ. ಆ ಮೂಲಕ ಚಕ್ಕರ್ ಕಳ್ಳರನ್ನು ಹಿಡಿಯೋದು ಸುಲಭವಾಗುತ್ತೆ. ಇವನ ಮೂಲಕ ಅವರನ್ನೆಲ್ಲಾ ಮಟ್ಟ ಹಾಕಬಹುದು’ ಎಂಬ ಐನಾತಿ ಪ್ಲಾನ್‌ವೊಂದನ್ನು ನಮ್ಮ ಹೈಸ್ಕೂಲ್ ಮೇಷ್ಟ್ರುಗಳು ಹೆಣೆದುಕೊಂಡಿದ್ದರು. ಹೀಗಾಗಿ, ನಾನೊಲ್ಲೆ ಎಂದು ಚಂಡಿ ಹಿಡಿದರೂ ಬಿಡದೆ ನನಗೆ ಪಟ್ಟ ಕಟ್ಟಿದರು. ಅಧಿಕಾರ ಸಿಕ್ಕ ಮೇಲೆ ನಮ್ಮ ಚಕ್ಕರ್ ಗ್ಯಾಂಗಿಗೆ ನಾನೇ ದೊಡ್ಡ ಶತ್ರುವಾಗಿ ಬಿಟ್ಟೆ. ಯಾರ್‍್ಯಾರು ಶಾಲೆಗೆ ಬರಲು ಕಳ್ಳಾಟವಾಡುತ್ತಾರೆ, ಶಾಲೆಯಿಂದ ಹೇಗೆಲ್ಲಾ ತಪ್ಪಿಸಿಕೊಳ್ಳುತ್ತಾರೆ, ಸದರಿ ಗ್ಯಾಂಗು ಬಳಸುವ ತಂತ್ರಗಳೇನು, ಪ್ರತಿ ದಿನವೂ ಶಾಲೆಯ ಹೊರಗೆ ಗೆಳೆಯರು ನಡೆಸುವ ರಾಜರಹಸ್ಯದ ಕೆಲಸಗಳೇನು ಅನ್ನೋ ವಿಷಯಗಳನ್ನೆಲ್ಲಾ ಮಾನಿಟರ್ ಪದವಿ ಸಿಕ್ಕ ಮೇಲೆ ಗುರುಗಳೆದುರು ಬಾಯಿ ಬಿಡತೊಡಗಿದೆ.ನಾನು ಹೀಗೆ ಮೇಷ್ಟ್ರುಗಳ ಚಮಚಾ ಆಗಿ ಗ್ಯಾಂಗಿಗೆ ನಂಬಿಕೆ ದ್ರೋಹ ಮಾಡಿದ್ದನ್ನು ಗೆಳೆಯರು ಕ್ಷಮಿಸಲಿಲ್ಲ. ನಾನು ಮಾನಿಟರ್ ಆಗಿದ್ದೇ ಬಂತು, ಅವರ ದುರ್ದಿನಗಳು ಶುರುವಾದವು. ನಮ್ಮ ಗ್ಯಾಂಗಿನ ಸೂಕ್ಷ್ಮಾತಿಸೂಕ್ಷ್ಮ ಮಾಹಿತಿಗಳೆಲ್ಲಾ ಗುರುಗಳ ವಶಕ್ಕೆ ಸೇರಿ ಬಿಟ್ಟವು. ಇಂಥ ಅದ್ಭುತ ಛಾನ್ಸು ಸಿಕ್ಕ ಮೇಲೆ ಅವರು ಬಿಡುವುದುಂಟೆ? ಎಲ್ಲರನ್ನೂ ಪ್ರೀತಿಯಿಂದ ಕರೆ ತಂದು, ಅಂಡುಗಳು ಬಿಸಿ ಉಂಡೆಯಾಗುವಂತೆ ಬಾರಿಸತೊಡಗಿದರು.ನನ್ನಿಂದ ಮಾಹಿತಿ ಸೋರಿಕೆ ಆದ ಮೇಲೆ ಆತ್ಮೀಯ ಗೆಳೆಯರೆಲ್ಲಾ ಪರಮಾಪ್ತ ಶತ್ರುಗಳಾಗಿ ಪರಿವರ್ತನೆಗೊಂಡರು.  ಜೀವನದಲ್ಲಿ ಆಪ್ತ ಮಿತ್ರರಾಗಿದ್ದವರು ಪೂರ್ಣಕಾಲಿಕ ಶತ್ರುಗಳಾದರೆ ಅದಕ್ಕಿಂತ ದುಃಖದ ಸಂಗತಿ ಇನ್ನೇನಿರುತ್ತೆ ಹೇಳಿ.  ‘ಲೇ ಜುಜುಬಿ ಮಾನಿಟರ್ ಆಗೋ ಆಸೆಗೆ ನಮ್ಮ ಫ್ರೆಂಡ್‌ಶಿಪ್‌ಗೆ ಮೋಸ ಮಾಡಿದ್ದೀಯಾ! ಮಗನೇ! ನಿನ್ನ ಯಾವ ಕಾರಣಕ್ಕೂ ಬಿಡಲ್ಲ. ನಿನ್ನ ಸರಿಯಾಗಿ ನೋಡ್ಕೋತಿವಿ’ ಎಂದು ಎಲ್ಲರೂ ಭೀಷ್ಮಪ್ರತಿಜ್ಞೆ ಮಾಡಿಬಿಟ್ಟರು.ನಮ್ಮ ಮೇಷ್ಟ್ರುಗಳೋ ಅವರನ್ನು ದನಗಳಿಗೆ ರುಬ್ಬುವಂತೆ ರುಬ್ಬಿದ್ದರು. ಒಂದು ವಾರದಲ್ಲೇ ನನ್ನ ಶತ್ರುಗಳ ಸಂಖ್ಯೆ ಒಂದು ಪರಿಪೂರ್ಣ ಗ್ಯಾಂಗಿನ ರೂಪ ಪಡೆಯಿತು. ಅವರೆಲ್ಲಾ ತುರ್ತು ಮೀಟಿಂಗು ಸೇರಿ ‘ಈ ನನ್ಮಗನ ಚರ್ಮ ಸುಲೀಲೇಬೇಕು. ಎಂಥಾ ಮೀರ್‌ಸಾಧಿಕ್ ಕೆಲ್ಸ ಮಾಡಿದ್ದಾನೆ. ಯಾವುದೇ ಕಾರಣಕ್ಕೂ ಇವನನ್ನು ಮಾತ್ರ ಬಿಡಲೇ ಬಾರದು ಎಂಬ ಒಂದು ಸಾಲಿನ ದೃಢ ನಿರ್ಣಯ ಕೈಗೊಂಡು ಬಿಟ್ಟಿದ್ದರು. ಅದರಂತೆ ಪೂಜಾವಿಧಿ ಕಾರ್ಯಕ್ರಮವನ್ನೂ ಆ ದಿನ ಸಂಜೆಯೇ ಇಟ್ಟುಕೊಂಡಿದ್ದರು.ಕೊನೆಯ ಲಾಂಗ್ ಬೆಲ್ ಆಗುವುದನ್ನೇ ಎಲ್ಲರೂ ಕಾಯುತ್ತಿದ್ದರು. ನಾನು ತಪ್ಪಿಸಿಕೊಳ್ಳಬಹುದೆಂದು ಎಲ್ಲಾ ದಿಕ್ಕಿಗೂ ನಾಕಾಬಂಧಿ ಹಾಕಿದ್ದರು.  ಅವರು ಈ ಮಟ್ಟಿಗೆ ಸನ್ಮಾನ ಸಮಾರಂಭ ಏರ್ಪಡಿಸಿಕೊಂಡಿರುವುದು ನನಗೂ ತಿಳಿದಿರಲಿಲ್ಲ. ಶಾಲೆಯ ಹೊರಗೆ ನನ್ನ ಮುಖದರ್ಶನವಾಗುತ್ತಲೇ ಗೌರವದಿಂದ ಎತ್ತಿಕೊಂಡು ಹೋಗಿ ಬೇಲಿಯ ಗಿಡಗಳ ಮೇಲೆ ಕೆಡವಿದರು. ಆಮೇಲೆ ಕುಂಬಾರಣ್ಣ ಭಕ್ತಿಯಿಂದ ಮಣ್ಣು ತುಳಿದಂತೆ ತುಳಿಯತೊಡಗಿದರು.ಅದರಲ್ಲಿ ಓಂಕಾರಿ ಎಂಬಾತನೋ ಬ್ರೂಸ್ಲಿ ಭಕ್ತನಾಗಿದ್ದ. ಅವನೊಬ್ಬ ಮಾತ್ರ ಹಾರಾರಿ ಬಂದು ಬಗೆಬಗೆಯ ಪಂಚ್‌ಗಳಲ್ಲಿ ಗುದ್ದುತ್ತಿದ್ದ. ಆತ ಕಲಿತಿದ್ದ ಅರೆಬರೆ ಕರಾಟೆಯ ಪ್ರಯೋಗಕ್ಕೆ ಅಲ್ಲೀ ತನಕ ಯಾರೂ ಸಿಕ್ಕದೆ ಅವನೂ ಬರಗೆಟ್ಟಿದ್ದ. ಅವನಿಗಿವತ್ತು ಸುವರ್ಣ ಅವಕಾಶವೇ ಸಿಕ್ಕಿ ಬಿಟ್ಟಿತ್ತು. ಪ್ರತಿ ಸಲದ ಹೊಡೆತಕ್ಕೂ ಹೂಂ...ಆಂ.. ಔವ್.. ಡಿಸ್ಕ್ಯಾ.. ಎಂಬ ವಿಚಿತ್ರ ಶಬ್ದಗಳನ್ನು ಅವನು ಹೊರಡಿಸುತ್ತಿದ್ದ. ಸುತ್ತ ನಿಂತು ದಣಿವಾರಿಸಿಕೊಳ್ಳುತ್ತಿದ್ದ ಗೆಳೆಯರೆಲ್ಲಾ ಇವೆಲ್ಲಾ ಕರಾಟೆ ಭಂಗಿಯ ಹೆಸರುಗಳೇ ಇರಬೇಕೆಂದು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು.ಓಂಕಾರಿಯ ಹೊಸಶೈಲಿ ನನಗೂ ಸೋಜಿಗ ಅನ್ನಿಸಿತ್ತು. ಹೊಸದೇನನ್ನೋ ಕುತೂಹಲದಿಂದ ನೋಡುವಂತೆ ನಾನು ಬೀಳುವ ಹೊಡೆತಗಳ ನಡುವೆಯೂ ಗಮನಿಸುತ್ತಿದ್ದೆ. ಓಂಕಾರಿ ಕರಾಟೆಯ ಪ್ರದರ್ಶನವನ್ನು ನೋಡುತ್ತಾ ನಿಂತ ಉಳಿದವರು ಶಬ್ಬಾಸ್ ಎನ್ನುತ್ತಾ ಅವನಿಗೆ ಉತ್ತೇಜನ ನೀಡುತ್ತಿದ್ದರು. ಒಂದೊಂದು  ಪೆಟ್ಟಿನ ನಂತರವೂ ಚೀನಿ ಭಾಷೆಯ ವಿಚಿತ್ರ ಪದಗಳನ್ನು ಹೇಳುತ್ತಿದ್ದ ಓಂಕಾರಿ ಅವತ್ತು ಸಾಕ್ಷಾತ್ ಹೀರೋನೆ ಆಗಿದ್ದ. ಏನೇನೋ ವದರಿಕೊಂಡು ಅವನೊಬ್ಬನೇ ಹಾರಾರಿ ಹೊಡೆಯುತ್ತಿದ್ದರಿಂದ ಉಳಿದವರು ರೆಸ್ಟಿಗೆ ನಿಂತುಕೊಂಡರು. ಸಿನಿಮಾದಲ್ಲಿ ಹೀರೋ ವಿಲನ್‌ಗೆ ಚಚ್ಚುವಾಗ ಪ್ರೇಕ್ಷಕರು ಮಜಾ ತೆಗೆದುಕೊಳ್ಳುವಂತೆ ಅವತ್ತು ನನ್ನ ಗೆಳೆಯರು ಸಖತ್ ಸುಖಾನುಭವ ಅನುಭವಿಸಿದರು. ಬಿಡುವಿಲ್ಲದೆ ಜಜ್ಜಿಸಿಕೊಂಡ ನಾನು ಏಳಲೂ ಸಾಧ್ಯವಾಗದೆ ಲಂಟಾನದ ಬೇಲಿಯನ್ನೇ ಹಾಸಿಗೆ ಮಾಡಿಕೊಂಡಿದ್ದೆ.ನನ್ನ ಚಚ್ಚಿಯೂ ಮನ ತೃಪ್ತಿಯಾಗದ ರಫೀಕ್ ಜಾಮಿಟ್ರಿ ತೆಗೆದು ಅದರಲ್ಲಿರುವ ಪರಿಕರಗಳನ್ನು ಮುರಿದು ಹಾಕಿದ. ಪ್ಲಾಸ್ಟಿಕ್ಕಿನ ನಾನಾ ಆಕಾರದಲ್ಲಿದ್ದ ಅವುಗಳನ್ನು ಹೇಗೆ ಉಪಯೋಗಿಸಬೇಕೆಂದು ನನಗೂ ಗೊತ್ತಿರಲಿಲ್ಲ. ನಮ್ಮ ಗಣಿತದ ಮೇಷ್ಟ್ರೂ ಅವುಗಳ ಕಾರ್ಯ ವೈಖರಿ ತಿಳಿಸಿಕೊಟ್ಟಿರಲಿಲ್ಲ. ನನ್ನ ಪಾಲಿಗೆ ಬಹು ನಿರುಪಯೋಗಿ ವಸ್ತುಗಳಾಗಿದ್ದ ಅವುಗಳನ್ನು ಕಡ್ಡಿ ಮುರಿದಷ್ಟು ಸಲೀಸಾಗಿ ಅವನು ತುಂಡರಿಸಿದ.  ಜಗದೀಶ ನನ್ನ ಬ್ಯಾಗನ್ನು ಗೋಣಿಚೀಲದಂತೆ ಪರ್ರನೆ ಹರಿದು ಒಗೆದ.ಮೊದಲೇ ಮಳೆ ಬಿಸಿಲಿಗೆ ಸಿಕ್ಕು ಜರ್ಝರಿತವಾಗಿದ್ದ ಅದು ತಕ್ಷಣ ಜೀವಬಿಟ್ಟಿತು. ಮತ್ತೊಬ್ಬ ನನ್ನ ಪೆನ್ನಿನ ಮುಳ್ಳು ಕಿತ್ತು ನಿಬ್ಬು ಮುರಿದ. ಆಗ ನನ್ನ ಪ್ರಾಣವೇ ಹೋದಂತಾಯಿತು. ನಾನು ತುಂಬಾ ಪ್ರೀತಿಸುತ್ತಿದ್ದ ಅಮೂಲ್ಯ ವಸ್ತು ಅದೊಂದೇನೆ. ಹೊಡೆತಗಳಿಗೆ ಅಳುಕದ ಅಳದ ನಾನು ಪೆನ್ನು ತುಂಡಾಗಿ ನೆಲಕ್ಕೆ ಬಿದ್ದಿದ್ದು ನೋಡಿ ಗಳಗಳನೆ ಅತ್ತುಬಿಟ್ಟೆ. ಎಸ್ಸೆಸ್ಸೆಲ್ಸಿ ಮುಗಿಸೋ ತನಕ ‘ಈ ಪೆನ್ನನ್ನು ಜೋಪಾನವಾಗಿಟ್ಟುಕೊಂಡಿರು’ ಎಂದು ನನ್ನ ಅಣ್ಣ ಪ್ರೀತಿಯಿಂದ ಕೊಡಿಸಿದ ಏಳು ರೂಪಾಯಿಯ ಕ್ಯಾಮೆಲ್ ಇಂಕು ಪೆನ್ನದು. ನಾವು ಜಬ್ಬಿದ ನೋವಿಗೆ ಕಣ್ಣೀರು ಹಾಕುತ್ತಿದ್ದಾನೆಂದು ಅವರು ಭಾವಿಸಿದ್ದರು.ಎಲ್ಲರಿಗಿಂತ ಓಂಕಾರಿ ಒಬ್ಬನೇ ಅಷ್ಟೊಂದು ಮುತುವರ್ಜಿಯಿಂದ  ಹಾರಾರಿ ಹೊಡೆಯಲು ಒಂದು ಪ್ರಬಲ ಕಾರಣವಿತ್ತು. ಗೆಳೆಯರ ಪೈಕಿ ಮೇಷ್ಟ್ರುಗಳಿಂದ ವಿಪರೀತ ಹೊಡೆತ ತಿಂದಿದ್ದವನು ಅವನೇನೆ. ಅದರಲ್ಲೂ ಹೆಡ್ಮೇಷ್ಟ್ರು ಟೇಬಲಿನ ಮೇಲೆ ಅವನ ಕೈಯನ್ನಿಟ್ಟು ರೂಲು ದೊಣ್ಣೆಯಲ್ಲಿ ಅವನ ಬೆರಳುಗಳನ್ನು ಚಚ್ಚಿದ್ದರು. ಅದಕ್ಕೂ ಒಂದು ಮುಖ್ಯ ಕಾರಣವಿತ್ತು. ನಮ್ಮ ಶಾಲೆಯ ಕಿಟಕಿಯ ಸರಳಗಳು ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಿದ್ದವು. ಇದಕ್ಕೆ ಯಾರು ಕಾರಣ ಎಂಬುದು ಯಾರಿಗೂ ಗೊತ್ತಿರಲಿಲ್ಲ.ಮಧ್ಯಾಹ್ನ ಲೀಜರ್‌ಗೆ ಬಿಟ್ಟಾಗ ಪೈಲ್ವಾನನಂತಿದ್ದ ಓಂಕಾರಿ ದಿನ ದಿನವೂ ಒಂದೊಂದೇ ಕಿಟಕಿಯ ರಾಡನ್ನು ಗುದ್ದಿ ಗುದ್ದಿ ಬೆಂಡ್ ಮಾಡಿಟ್ಟಿರುತ್ತಿದ್ದ. ಅದು ಸಡಿಲವಾದ ನಂತರ ಆ ಕಂಬಿಯನ್ನು ಅಲ್ಲಾಡಿಸಿ ತೆಗೆದು ಅದರ ಸಂದಿಯಿಂದ ಕೈದಿಯಂತೆ ತಪ್ಪಿಸಿಕೊಳ್ಳುತ್ತಿದ್ದ. ಮತ್ತೆ ಕಂಬಿಯನ್ನು ಏನೂ ಆಗಿಲ್ಲ ಎನ್ನುವಂತೆ ಹಾಗೇ ಜೋಡಿಸಿ ಇಟ್ಟಿರುತ್ತಿದ್ದ. ಇದು ಅವನು ಕಾಯಂ ಆಗಿ ತಪ್ಪಿಸಿಕೊಳ್ಳುತ್ತಿದ್ದ ಜಾಗ. ಈ ಕಿಟಕಿಯಿಂದ ಆತ ತಪ್ಪಿಸಿಕೊಂಡು ಓಡಾಡುವುದು ನನ್ನ ಮತ್ತು ಅವನ ಹೊರತು ಮತ್ತ್ಯಾರಿಗೂ ಗೊತ್ತಿರಲಿಲ್ಲ.ಸಾಕಷ್ಟು ಲೂಸಾಗಿದ್ದ ಕಂಬಿ ಆಮೇಲಾಮೇಲೆ ನೆಟ್ಟಗೆ ನಿಲ್ಲಲ್ಲು ನಿರಾಕರಿಸತೊಡಗಿತು. ಹೆದರಿದ ಓಂಕಾರಿ ಒಮ್ಮೆ ಅದನ್ನು ತೆಗೆದು ಬೇಲಿಯಲ್ಲಿ ಎಸೆಯಲು ನೋಡುತ್ತಿದ್ದ. ಕಮ್ಮಾರನ ಮಗನಾಗಿ ಕಬ್ಬಿಣದ ಮಹತ್ವ ತಿಳಿದಿದ್ದ ನಾನು ಆಗ ಅವನಿಗೊಂದು ಮನೆಹಾಳ ಐಡಿಯಾ ಕೊಟ್ಟೆ. ‘ಹ್ಯಾಗೂ ಕಬ್ಬಿಣದ ಸರಳು ಮುರಿದಾಗಿದೆ. ಅದನ್ನು ಬಿಸಾಡಿ ಯಾಕೆ ವೇಸ್ಟ್ ಮಾಡ್ತೀಯ. ತಗೊಂಡೋಗಿ ಗುಜರಿ ಬಾಷನ ಅಂಗಡಿಗೆ ಹಾಕಿದ್ರೆ ಐದಾರು ರೂಪಾಯಿ ಸಿಗುತ್ತೆ. ಆರಾಮಾಗಿ ನೀನು ಮ್ಯಾಟನಿ ಪಿಕ್ಚರ್ ನೋಡ್ಕೊಂಡೆ ಮನೆಗೆ ಹೋಗಬಹುದು ಕಣೋ’ ಎಂದು ಹೇಳಿದ್ದೆ.ನನ್ನ ಈ ಮಾತಿನಿಂದ ಸಂತೋಷಗೊಂಡ ಓಂಕಾರಿ ವಾರಕ್ಕೆ ಒಂದೆರಡು ಸರಳುಗಳನ್ನು ಮುರಿಯುತ್ತಾ ಅದನ್ನು ಗುಜರಿ ಅಂಗಡಿಗೆ ಮಾರತೊಡಗಿದ. ಹುಡುಗರು ಸುಲಭವಾಗಿ ತಪ್ಪಿಸಿಕೊಳ್ಳಲು ರಾಜಮಾರ್ಗ ನಿರ್ಮಿಸಿದ್ದ ಓಂಕಾರಿಯ ಈ ಕೆಲಸದಲ್ಲಿ ಕೊನೆಗೆ ನಾನೂ ಪಾರ್ಟ್‌ನರ್ ಆಗಿ ನೇಮಕಗೊಂಡಿದ್ದೆ. ಈ ಋಣಕ್ಕೆ ನನಗೂ ಸಿನಿಮಾ ತೋರಿಸಿ, ಉಳಿದಿದ್ದ ದುಡ್ಡಿನಲ್ಲಿ ಕೊಬ್ರಿ ಮಿಠಾಯಿ, ಪೆಪ್ಪರ್‌ಮೆಂಟ್, ಗಿಣಿ ಬಿಸ್ಕತ್ತು, ಐಸ್ ಕ್ಯಾಂಡಿ, ಬಟಾಣಿ, ಬೋಂಡಗಳನ್ನೆಲ್ಲಾ ಕೊಡಿಸುತ್ತಿದ್ದ. ಇಷ್ಟೆಲ್ಲಾ ತಿಂದುಂಡೂ, ಧಂದೆಯ ರಹಸ್ಯವನ್ನು ಹೆಡ್ಮೇಷ್ಟ್ರು ಎದುರಿಗೆ ಒದರಿ ಹಾಕಿದ್ದು ಅವನಿಗೆ ಭಾರಿ ಕಂಟಕ ತಂದಿತ್ತು. ಈ ಅಪರಾಧಕ್ಕೆ ಅವನು ಎಲ್ಲರಿಗಿಂತ ಹೆಚ್ಚು ಹೊಡೆತ ತಿಂದಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry