ಶುಕ್ರವಾರ, ಡಿಸೆಂಬರ್ 6, 2019
25 °C

ಬಂಗಾಳ, ಬಿಹಾರ ರಕ್ತಸಿಕ್ತ ರಾಮನವಮಿ

ಡಿ. ಉಮಾಪತಿ
Published:
Updated:
ಬಂಗಾಳ, ಬಿಹಾರ ರಕ್ತಸಿಕ್ತ ರಾಮನವಮಿ

ಬಾಬಾಸಾಹೇಬ ಅಂಬೇಡ್ಕರ್ ಅವರ ಮೊದಲ ಪತ್ನಿ ರಮಾಬಾಯಿ ಸಾಯುವ ಮುನ್ನ ಪಂಢರಾಪುರದ ವಿಠಲನ ದರ್ಶನಕ್ಕಾಗಿ ಹಾತೊರೆದು ಕರೆದೊಯ್ಯುವಂತೆ ಪತಿಯನ್ನು ಕೋರುತ್ತಾರೆ. ಆದರೆ ವಿಠಲನ ಬಾಗಿಲುಗಳು ಅಸ್ಪೃಶ್ಯರಿಗೆ ತೆರೆದಿರುವುದಿಲ್ಲ. ನಿರಾಶರಾಗಿ ಕೊನೆಯುಸಿರೆಳೆಯುತ್ತಾರೆ ರಮಾಬಾಯಿ. 'ನನಗೆ ಆಯ್ಕೆ ಇರಲಿಲ್ಲ, ಹಿಂದುವಾಗಿ ಜನಿಸಿದೆ. ಆದರೆ ಹಿಂದುವಾಗಿ ಸಾಯಲಾರೆ, ಯಾಕೆಂದರೆ ನನಗೆ ಆಯ್ಕೆ ಇದೆ' ಎಂದು ತಮ್ಮ ಸಾವಿಗೆ ಎರಡು ತಿಂಗಳ ಮುನ್ನ ಬೌದ್ಧ ಧರ್ಮಕ್ಕೆ ಸೇರಿದ್ದರು ಅಂಬೇಡ್ಕರ್. ಹುಟ್ಟಿನಿಂದ ಬ್ರಾಹ್ಮಣರಾಗಿದ್ದ ಅವರ ಎರಡನೆಯ ಪತ್ನಿ ಸವಿತಾ ಮತ್ತು ಸುಮಾರು ಆರು ಲಕ್ಷ ಅನುಯಾಯಿಗಳು ತಮ್ಮ ನಾಯಕನನ್ನು ಹಿಂಬಾಲಿಸಿದರು.

The Riddle of Rama And Krishna (ರಾಮ ಮತ್ತು ಕೃಷ್ಣರ ಒಗಟು)  ಪುಸ್ತಕದಲ್ಲಿ ಶ್ರೀರಾಮನ ಹಿರಿಮೆ ಕುರಿತು ಪ್ರಶ್ನೆಗಳನ್ನು ಎತ್ತಿರುವ ಇಂತಹ ಅಂಬೇಡ್ಕರ್ ಹೆಸರಿನ ನಡುವೆ ಮೊನ್ನೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರ ಬಲವಂತವಾಗಿ 'ರಾಮಜಿ' ಸೇರಿಸಿತು. ಈ ಸೇರ್ಪಡೆಗೆ ಅಂಬೇಡ್ಕರ್ ಅವರ ಮೊಮ್ಮಕ್ಕಳು ಅಸಮ್ಮತಿ ಸೂಚಿಸಿದ್ದಾರೆ. 'ರಾಮಜಿ' ಎಂಬುದು ಅಂಬೇಡ್ಕರ್ ತಂದೆಯ ಹೆಸರು ನಿಜ. ಆದರೆ ಸಹಿ ಮಾಡುವಾಗ ಮಾತ್ರ 'ರಾಮಜಿ' ಬಳಸುತ್ತಿದ್ದ ಬಾಬಾ ಸಾಹೇಬ, ಉಳಿದಂತೆ ತಮ್ಮನ್ನು ಬಿ.ಆರ್.ಅಂಬೇಡ್ಕರ್ ಎಂದೇ ಗುರುತಿಸಿಕೊಂಡಿದ್ದರು. ಮುಂದಿನ ವರ್ಷದ ಲೋಕಸಭಾ ಚುನಾವಣೆಯ ವೇಳೆಗೆ ಅಂಬೇಡ್ಕರ್ ಅವರನ್ನು ರಾಮ ಭಕ್ತ ಎಂದು ಬಣ್ಣಿಸಿದರೂ ಆಶ್ಚರ್ಯವಿಲ್ಲ ಎಂಬುದಾಗಿ ಅವರ ಮೊಮ್ಮಕ್ಕಳಾದ ಪ್ರಕಾಶ್ ಮತ್ತು ಆನಂದ್ ಅಂಬೇಡ್ಕರ್ ವ್ಯಂಗ್ಯವಾಡಿದ್ದಾರೆ.

ತಾರಕಕ್ಕೇರಿಸಿದ್ದವರಿಗೆ ಅಧಿಕಾರ ಗಳಿಸಿಕೊಟ್ಟು ತಣ್ಣಗಾಗಿದ್ದ ರಾಮನಾಮದ ಉದ್ಯಮಕ್ಕೆ ಮತ್ತೆ ಕಾವೇರುತ್ತಿದೆ. ಅದನ್ನು ಕುದಿ ಬಿಂದುವಿಗೆ ಕೊಂಡೊಯ್ಯುವ ಪ್ರಯತ್ನಗಳು ಬಂಗಾಳ, ಬಿಹಾರ, ರಾಜಸ್ಥಾನದಲ್ಲಿ ಆರಂಭ ಆಗಿವೆ. ದಿನಗಳೆದಂತೆ ದೇಶದ ಉದ್ದಗಲಕ್ಕೆ ಆಸ್ಪದ ಇರುವೆಡೆಯೆಲ್ಲ ಈ ಪ್ರಯತ್ನಗಳ ಸೀಮೋಲ್ಲಂಘನ ನಿಶ್ಚಿತ.

2014ರ ಲೋಕಸಭಾ ಚುನಾವಣೆಗಳಲ್ಲಿ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ದಲಿತಮತ ನೆಲೆಗಟ್ಟು ಬಿರುಕು ಬಿಟ್ಟಿತ್ತು. ನರೇಂದ್ರ ಮೋದಿಯವರಿಗೆ ದಲಿತರೂ ಮತ ನೀಡಿದ್ದರು. ಈ ಬಿರುಕು ಈಗ ಮುಚ್ಚಿಕೊಳ್ಳುತ್ತಿರುವ ಸೂಚನೆಗಳು ಕಾಣಿಸಿವೆ. ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷ ಇತ್ತೀಚೆಗೆ ಒಂದಾಗಿ ಸೆಣೆಸಿದ ಉತ್ತರಪ್ರದೇಶದ ಗೋರಖಪುರ ಮತ್ತು ಫೂಲ್ಪುರ ಲೋಕಸಭಾ ಉಪಚುನಾವಣೆಗಳ ಫಲಿತಾಂಶ ಈ ಸೂಚನೆಗಳತ್ತ ಬೆರಳು ಮಾಡಿದೆ.

2019ರ ಲೋಕಸಭಾ ಚುನಾವಣೆಗಳನ್ನು ಗೆದ್ದು ಮರಳಿ ದಿಲ್ಲಿಯಲ್ಲಿ ತನ್ನ ಸರ್ಕಾರ ರಚಿಸುವ ಬಿಜೆಪಿ ಉದ್ದೇಶ ನಿಚ್ಚಳ. ಈ ಗುರಿ ಈಡೇರಿಕೆಗೆ ಅಭಿವೃದ್ಧಿಯ ಕಾರ್ಯಸೂಚಿ ಕೈಕೊಟ್ಟರೆ ಬತ್ತಳಿಕೆಯಲ್ಲಿ ಮತ್ತೊಂದು ಅಸ್ತ್ರ ಇರಿಸಿಕೊಂಡಿರುವುದು ಗುಟ್ಟೇನೂ ಅಲ್ಲ. ಅದು ಕೋಮುವಾದದ ಕಾರ್ಯಸೂಚಿಯ ಅಸ್ತ್ರ. ಉತ್ತರಪ್ರದೇಶದಂತಹ ಭಾರೀ ರಾಜ್ಯದ ಅಧಿಕಾರ ಸೂತ್ರಗಳನ್ನು ಯೋಗಿ ಆದಿತ್ಯನಾಥರ ಕೈಗಿರಿಸಿದಾಗಲೇ ಈ 'ದೂರದೃಷ್ಟಿ' ಗೋಚರಿಸಿತ್ತು.  ಉತ್ತರಪ್ರದೇಶ ಮಾತ್ರವಲ್ಲ, ಸಾಧ್ಯವಿರುವೆಡೆಯಲ್ಲೆಲ್ಲ ಕೋಮು ರಾಜಕಾರಣದ ಕೊಪ್ಪರಿಗೆಯನ್ನು ಕುದಿ ಬಿಂದುವಿಗೆ ಒಯ್ಯುವ ಕಾರ್ಯಸೂಚಿ ಜಾರಿಗೆ ಬರತೊಡಗಿದೆ.

ಬಿಹಾರದ ನಗರಪ್ರದೇಶದಲ್ಲಿ ಭುಗಿಲೆದ್ದ ಕೋಮು ಹಿಂಸೆಯ ಒಂದೆರಡು ಘಟನೆಗಳು ತೀವ್ರತೆ ಪಡೆದು ಹತ್ತು ಜಿಲ್ಲೆಗೆ ಹಬ್ಬಿವೆ. ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಹುಬ್ಬುಗಳನ್ನೇರಿಸಿದೆ. ಪ್ರಚೋದನೆಯ ಜ್ವಾಲೆಗಳನ್ನು ಭುಗಿಲೆಬ್ಬಿಸಲು ಈಗಿನ ತೀವ್ರತೆಯಲ್ಲಿ ತಿದಿ ಒತ್ತಲಾಗುತ್ತಿರುವ ಪರಿಯನ್ನು ಕಳೆದ ಮೂರು ದಶಕಗಳಲ್ಲಿ ಬಿಹಾರ ಕಂಡಿಲ್ಲ. 2005-2013ರ ಬಿಜೆಪಿ- ಜೆಡಿ(ಯು) ಆಡಳಿತದ ಅವಧಿಯಲ್ಲೂ ನಿತೀಶ್ ಈಗಿನಷ್ಟು ಅಸಹಾಯಕರಾಗಿ ಕಂಡು ಬಂದಿರಲಿಲ್ಲ.

ಮಿತ್ರಪಕ್ಷ ಮತ್ತು ಶತ್ರುಪಕ್ಷ ಎರಡೂ ಅವರನ್ನು ನಂಬಲಾರದ ವಿಚಿತ್ರ ಸನ್ನಿವೇಶವನ್ನು ಕೈಯಾರೆ ನಿರ್ಮಿಸಿಕೊಂಡಿದ್ದಾರೆ. ಕನಿಷ್ಠಪಕ್ಷ ಕಾನೂನು ಸುವ್ಯವಸ್ಥೆಯನ್ನು ಎತ್ತಿ ಹಿಡಿಯುತ್ತಾರೆ ಎಂದು ಬಿಹಾರದ ಜನ ಅವರನ್ನು 'ಸುಶಾಸನ ಬಾಬು' ಎಂದು ಪ್ರೀತಿಯಿಂದ ಕರೆದಿ

ದ್ದರು. ಕೋಮುಜ್ವಾಲೆಯ ಮುಂದೆ ಕೈಚೆಲ್ಲಿ ನಿಂತಿರುವ ನಿತೀಶ್, 'ಸುಶಾಸನ ಬಾಬು' ಎಂಬ ಅಭಿದಾನಕ್ಕೂ ಎಳ್ಳು ನೀರು ಎರೆದಂತಿದೆ. ಬಿಜೆಪಿ-ಜೆಡಿ(ಯು) ಮೈತ್ರಿ ಇತ್ತೀಚಿನ ಉಪಚುನಾವಣೆಗಳಲ್ಲಿ ಎರಡು ಮುಖ್ಯ ಕ್ಷೇತ್ರಗಳಲ್ಲಿ ಸೋತಿದ್ದು ಮತ್ತು ಈ ಕೋಮುವಾದಿ ಕಿಚ್ಚು ಹೊತ್ತಿ ಹಬ್ಬುತ್ತಿರುವುದು ಕೇವಲ ಕಾಕತಾಳೀಯ ಇರಲಾರದು.

2019ರ ಲೋಕಸಭಾ ಚುನಾವಣೆಗೆ ಬಿಜೆಪಿ ರಂಗ ಸಜ್ಜುಗೊಳಿಸುತ್ತಿದೆ ಎನ್ನಲಾಗಿದೆ.

ಈ ಹಿಂದೆ ನಿತೀಶ್ ತಮ್ಮ ಮಿತ್ರಪಕ್ಷ ಬಿಜೆಪಿಯನ್ನು ಅಂಕೆಯಲ್ಲಿಟ್ಟುಕೊಂಡಿದ್ದರು. ಮಹಾಮೈತ್ರಿಕೂಟ ತೊರೆದು ಬಿಜೆಪಿಯ ಗೆಳೆತನಕ್ಕೆ ಮರಳಿದ ನಂತರ ನಿತೀಶ್ ಅವರನ್ನು ಕೇಸರಿ ಪಕ್ಷ ತನ್ನ ಅಂಕೆಯಲ್ಲಿ ಇರಿಸಿಕೊಂಡಿದೆ. ವಿಶ್ವಾಸಾರ್ಹತೆಗೆ ಕುಂದು ಬಂದು  ‘ಬಲಗುಂದಿದ’ ನಿತೀಶ್ ಈಗ ಬಿಜೆಪಿ ಪಾಲಿಗೆ ಬಹುಪಾಲು ಉಪಯುಕ್ತತೆ ತೀರಿದ ಸರಕು. 2019ರ ಲೋಕಸಭಾ ಚುನಾವಣೆಗಳಲ್ಲಿ ತನ್ನ ಶಕ್ತಿಯನ್ನೇ ನೆಚ್ಚಲು ನಿರ್ಧರಿಸಿರುವ ಕೇಸರಿ ಪಕ್ಷ, ನೆಲವನ್ನು 'ಫಲವತ್ತು' ಮಾಡತೊಡಗಿದೆ.

ಇತ್ತ ಬಂಗಾಳವೂ ಕೋಮು ದಳ್ಳುರಿಯಲ್ಲಿ ಬೇಯತೊಡಗಿದೆ. ರಾಜ್ಯದಲ್ಲಿ ಎರಡು ಲೋಕಸಭಾ ಕ್ಷೇತ್ರಗಳು ಮತ್ತು ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿ ಮುಂಬರುವ ದಿನಗಳಿಗೆ ಏಳಿಗೆಯ ನೀಲನಕಾಶೆಯನ್ನು ತಯಾರು ಮಾಡಿಟ್ಟುಕೊಂಡಿದೆ. ಎಡಪಂಥೀಯರನ್ನು ಅಧಿಕೃತ ಪ್ರತಿಪಕ್ಷದ ಸ್ಥಾನದಿಂದ ಕೆಡವುವುದು ಹಾಗೂ ತ್ರಿಪುರಾದಲ್ಲಿ ಸಾಧಿಸಿದಂತೆ ಕಡೆಗೆ ಅಧಿಕಾರ ಹಿಡಿಯುವುದು ಸಂಘಪರಿವಾರದ ಗುರಿ. ಸದ್ಯಕ್ಕೆ ಅದರ ಕಣ್ಣು ಮುಂದಿನ ವರ್ಷದ ಲೋಕಸಭಾ ಚುನಾವಣೆಗಳ ಮೇಲೆ ನೆಟ್ಟಿದೆ. ಬಾಂಗ್ಲಾ ದೇಶದ ಮೂಲಭೂತವಾದಿ ಮುಸಲ್ಮಾನರ ದೌರ್ಜನ್ಯಗಳನ್ನು ಎದುರಿಸಿ, ಪಶ್ಚಿಮ ಬಂಗಾಳವನ್ನು ಪ್ರವೇಶಿಸಿ ನೆಲೆಸತೊಡಗಿರುವ ಬಾಂಗ್ಲಾ ಹಿಂದೂ ವಲಸಿಗರು ದೊಡ್ಡ ಪ್ರಮಾಣದಲ್ಲಿ ಬಿಜೆಪಿಯೊಡನೆ ಗುರುತಿಸಿಕೊಳ್ಳತೊಡಗಿರುವ ವರದಿಗಳಿವೆ.

ರಾಮ ಮತ್ತು ಹನುಮರ ಹೆಸರಿನಲ್ಲಿ ಸಂಘಪರಿವಾರ ಇಲ್ಲಿ ಕೋಮು ಧ್ರುವೀಕರಣ ನಡೆಸತೊಡಗಿದೆ. ಮೂವತ್ತು ಲಕ್ಷ ಜನ ಭಾಗವಹಿಸಿದ್ದ ಏಳುನೂರು ರಾಮನವಮಿ ಶೋಭಾಯಾತ್ರೆಗಳನ್ನು ನಡೆಸಲಾಯಿತೆಂದು ವಿಶ್ವ ಹಿಂದೂ ಪರಿಷತ್ ತನ್ನ ಪ್ರಕಟಣೆಯಲ್ಲಿ ಹೇಳಿಕೊಂಡಿದೆ.

ಆದರೆ ಪಶ್ಚಿಮ ಬಂಗಾಳದ್ದು ವಿಭಿನ್ನ ಸಂಸ್ಕೃತಿ. ಇತರೆ ಹಲವೆಡೆಗಳಂತೆ ಶ್ರೀರಾಮ ಇಲ್ಲಿ ಆರಾಧ್ಯದೈವ ಅಲ್ಲ. ಮೂಲ ಸಾಂಸ್ಕೃತಿಕ ನೇಯ್ಗೆಯ ಮರು ಸಮೀಕರಣದ ಹುನ್ನಾರ ಕಳೆದ ಕೆಲವು ವರ್ಷಗಳಿಂದ ಬಂಗಾಳದಲ್ಲಿ ಜರುಗಿದೆ. ಇಸ್ಲಾಂ ಒಡ್ಡಿರುವ ಬೆದರಿಕೆಯಲ್ಲಿ ಹಿಂದೂ ಅಸ್ಮಿತೆ ಅಪಾಯದಲ್ಲಿದೆ ಎಂಬ ಸಂವಾದವನ್ನು ಹುಟ್ಟಿ ಹಾಕುವ ದಟ್ಟ ಪ್ರಯತ್ನಗಳು ನಡೆದಿವೆ. ಖಡ್ಗ-ತ್ರಿಶೂಲ- ಬಂದೂಕು ಹಿಡಿದ ಕಾರಣಕ್ಕಾಗಿ ರಾಮನವಮಿ ಮೆರವಣಿಗೆಗಳು ಕಳೆದ ವರ್ಷದಿಂದ ಸದ್ದು ಮಾಡತೊಡಗಿವೆ. ಆದರೆ ಕಳೆದ ವರ್ಷ ದೂರ ಉಳಿದಿದ್ದ ಹಿಂಸಾಚಾರ ಈ ವರ್ಷ ಭುಗಿಲೆದ್ದಿದೆ. ಎರಡೂ ಕೋಮುಗಳು ಮುಖಾಮುಖಿ ಆಗಿರುವುದಲ್ಲದೆ ಪೊಲೀಸರೊಂದಿಗೂ ಘರ್ಷಣೆಗಳಿಗೆ ಇಳಿದಿವೆ. ಶತಮಾನಗಳಿಂದಲೂ ದುರ್ಗೆ-ಕಾಳಿಯರನ್ನು ಆರಾಧಿಸುವ ಸೀಮೆ ಬಂಗಾಳ. ಮೊಗಲರು ಮತ್ತು ಬ್ರಿಟಿಷರಿಗೆ ಬಹಳ ಮುನ್ನ ಬೌದ್ಧ ಮತಾವಲಂಬಿ ಪಾಲ ವಂಶದ ನಾಲ್ಕು ಶತಮಾನಗಳಷ್ಟು ದೀರ್ಘ ಆಳಿಕೆಯಲ್ಲಿ ಅರಳಿದ ವಂಗ ಸಂಸ್ಕೃತಿಯಿದು.

ವಜ್ರಯಾನ ಬೌದ್ಧ ಶಾಖೆಯ ಹೆಣ್ಣುಬುದ್ಧ ಎಂದು ಕರೆಯಲಾದ ತಾರಾಳನ್ನು ಆರಾಧಿಸಿದ್ದ ನೆಲವಿದು. ಕಾಳಿಮಾತೆಯ ದೇಗುಲ ನಿರ್ಮಾಣಕ್ಕೆ ಮುನ್ನ ತಾರಾಪೀಠದಲ್ಲಿದ್ದದ್ದು ತಾರಾ ದೇವಾಲಯ. ಪಾಲ ಸಾಮ್ರಾಜ್ಯದ ಕಾಲದಿಂದಲೂ ಶಕ್ತಿಯ ಆರಾಧನೆ ನಿರಂತರ ನಡೆದಿದೆ. ಕಾಳಿ ಮತ್ತು ದುರ್ಗೆ ಈಗ ವಂಗಭೂಮಿಯ ಜನಪ್ರಿಯ ದೇವತೆಗಳು. ಸತಿ ಪದ್ಧತಿ ವಿರುದ್ಧ ಮತ್ತು ವಿಧವಾ ವಿವಾಹದ ಪರವಾಗಿ ಸಾಮಾಜಿಕ ಆಂದೋಲನಗಳು ಸಿಡಿದದ್ದು ಇದೇ ಶಕ್ತಿ ಆರಾಧಕ ಬಂಗಾಳದಿಂದ. ಇಲ್ಲಿನ ಸಾಂಸ್ಕೃತಿಕ ಪುನರುಜ್ಜೀವನ ದೇಶದ ಹಲವು ಮೂಲೆಗಳವರೆಗೆ ವ್ಯಾಪಿಸಿತು.

ಆದರೆ ಇದೀಗ 'ಬಂಗಾಳದಲ್ಲಿ ಬೆಳೆಯುತ್ತಿರುವ ಜಿಹಾದಿ ಚಟುವಟಿಕೆಗಳ' ವಿರುದ್ಧ 'ಹಿಂದೂಗಳನ್ನು ಸಂಘಟಿಸಲು' ಪೇಟೆ ಪಟ್ಟಣಗಳ ಮೇಲೆ ನಿಧಾನವಾಗಿ ಹಿಂದೂ-ಮುಸ್ಲಿಂ ಧ್ರುವೀಕರಣ ಕವಿಯತೊಡಗಿದೆ. ಅಸ್ತ್ರಗಳನ್ನು ಝಳಪಿಸುವ ರಾಮನವಮಿಯ ಮೆರವಣಿಗೆಗಳ ಬಾಯಲ್ಲಿ 'ನ ದುರ್ಗಾ, ನ ಕಾಳೀ, ಕೇವಲ್ ರಾಮ್ ಔರ್ ಭಜರಂಗಬಲೀ' ಘೋಷಣೆಗಳು.

ರಾಮನವಮಿ ಮೆರವಣಿಗೆಗಳನ್ನು ಬಿಜೆಪಿಯ ಕೈಯಿಂದ ಕಸಿಯುವ ತಂತ್ರವಾಗಿ ತಾನೂ ಮೆರವಣಿಗೆಗಳನ್ನು ಸಂಘಟಿಸಿತು ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ. ಆದರೆ ತಾನು ಅನುಸರಿಸಿರುವ ಮತಬ್ಯಾಂಕ್ ರಾಜಕಾರಣವೇ ಕೇಸರಿ ಶಕ್ತಿಗಳ ಯಾನದ ಇಂಧನ ಎಂಬುದನ್ನು ಕಡೆಗಣಿಸಿತು. ಅಲ್ಪಸಂಖ್ಯಾತರ ತುಷ್ಟೀಕರಣದ ರಾಜಕಾರಣ ನಡೆಸುತ್ತಿರುವ ಆರೋಪವನ್ನು ಮಮತಾ ಹೊತ್ತಿದ್ದಾರೆ. 2006ರ ಸಾಚಾರ್ ವರದಿಯ ಪ್ರಕಾರ ಉತ್ತರಪ್ರದೇಶ ಮತ್ತು ಬಿಹಾರದ ನಂತರ ಬಂಗಾಳದ ಮುಸಲ್ಮಾನರು ದೇಶದಲ್ಲೇ ಅತ್ಯಂತ ಬಡವರು. ಮಮತಾ ಆಡಳಿತಾವಧಿಯಲ್ಲಿ ಕೋಮುಗಲಭೆಗಳ ಸಂಖ್ಯೆಗಳಲ್ಲಿ ತೀವ್ರ ಜಿಗಿತ ಕಂಡು ಬಂದಿದೆ. ಆದರೆ ಬಿಜೆಪಿಯು ವಂಗಭೂಮಿಯನ್ನು ಗೆಲ್ಲಲು ಕದನ ಭೂಮಿಗೆ ಇಳಿದಿರುವ ಕಾಲವೂ ಇದೇ ಎಂಬುದನ್ನು ಗಮನಿಸಬೇಕು.

ಪಶ್ಚಿಮ ಬಂಗಾಳದ ಮುಸ್ಲಿಮರ ಜನಸಂಖ್ಯೆಯ ಪ್ರಮಾಣ 2011ರ ಜನಗಣತಿಯ ಪ್ರಕಾರ ಶೇ 27. ಬಾಂಗ್ಲಾ ನಿರಾಶ್ರಿತರೂ ಸೇರಿದಂತೆ ಈ ಪ್ರಮಾಣ ಇದೀಗ ಶೇ 30ರಷ್ಟನ್ನು ತಲುಪಿದೆಯೆಂದು ಅಂದಾಜು ಮಾಡಲಾಗಿದೆ. ಬಲಿಷ್ಠ ಮತಬ್ಯಾಂಕ್ ಆಗಬಲ್ಲ ಈ ಜನಮುದಾಯವನ್ನು ಮಮತಾ ಯಾವ ಕಾರಣಕ್ಕೂ ತಡವಲಾರರು ಎಂಬುದು ಹಿಂದೂವಾದಿಗಳ ಆರೋಪ.

ಕೋಮುಗಲಭೆಯಲ್ಲಿ ಹದಿವಯಸ್ಸಿನ ಮಗನನ್ನು ಕಳೆದುಕೊಂಡ ಅಸನ್ಸೋಲ್‌ನ ಇಮಾಮ್ ತನ್ನ ಕೋಮಿನ ಸಭೆಯನ್ನು ಉದ್ದೇಶಿಸಿ ಹೇಳಿದ್ದು-’ನೀವೇನಾದರೂ ಪ್ರತೀಕಾರದ ಕ್ರಮಕ್ಕೆ ಇಳಿದರೆ ನಾನು ಊರು ತೊರೆದು ಹೋಗುತ್ತೇನೆ. ನೀವು ಯಾರೂ ಕಿರುಬೆರಳನ್ನೂ ಎತ್ತಕೂಡದು. ನನ್ನಂತೆ ಇತರರೂ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಶೋಕದಲ್ಲಿ ಬೇಯಬಾರದು. ಇನ್ನಷ್ಟು ಮನೆಗಳು ಉರಿಯದಿರಲಿ. ಶಾಂತಿ ಮರಳಲಿ.’ ಅಸನ್ಸೋಲ್‌ನ ಜನ ಇಂತಹವರಲ್ಲ. ಏನೋ ಪಿತೂರಿ ನಡೆದಿದೆ.

ಜೀವಪರ ಹಿಂದಿ ಕವಿ ಕುಂವರ ನಾರಾಯಣ ಅವರ ಕವಿತೆ 'ಅಯೋಧ್ಯೆ'ಯ ಉಲ್ಲೇಖ ಈ ಸಂದರ್ಭದಲ್ಲಿ ಅತ್ಯಂತ ಪ್ರಸ್ತುತ-

'ಹೇ ರಾಮ/ ಬದುಕು ಒಂದು ಕಟು ಯಥಾರ್ಥ/ ಮತ್ತು ನೀನೊಂದು ಮಹಾಕಾವ್ಯ!/  ನಿನ್ನ ಕೈಯಿಂದಾಗದು/ ಆ ಅವಿವೇಕವನು ಗೆಲುವುದು/ ಹತ್ತು ಇಪ್ಪತ್ತಲ್ಲ, ಅದಕೆ/ ಈಗ ಲಕ್ಷ ತಲೆಗಳು- ಲಕ್ಷಾಂತರ ಹಸ್ತಗಳು/ ಮತ್ತು ವಿಭೀಷಣ ಕೂಡ ಈಗ/ ಯಾರ ಜೊತೆಗಿರುವನೋ ತಿಳಿಯದು/ ಇದಕ್ಕಿಂತ ಇನ್ನೇನಾ ಗಬೇಕು/ ನಮ್ಮ ದೌರ್ಭಾಗ್ಯ/ ಒಂದು ವಿವಾದಿತ ಸ್ಥಳಕ್ಕೆ ಕುಗ್ಗಿ/ ಕುಸಿಯಿತಲ್ಲ ನಿನ್ನ ಸಾಮ್ರಾಜ್ಯ/ ಅಯೋಧ್ಯೆ ಈಗ ನಿನ್ನ ಆಯೋಧ್ಯೆ ಅಲ್ಲ/ ಅದು ಯೋಧರ ಲಂಕೆ/ 'ಮಾನಸ' ನಿನ್ನ 'ಚರಿತೆ' ಅಲ್ಲ/ ಅದು ಚುನಾವಣೆಯ ನಗಾರಿ!/ ಹೇ ರಾಮ, ಈ ಯುಗವೆಲ್ಲಿ/ ಎಲ್ಲಿ ನಿನ್ನ ತ್ರೇತಾಯುಗ/ ಎಲ್ಲಿ ನೀನು ಮರ್ಯಾದಾ ಪುರುಷೋತ್ತಮ/ ಎಲ್ಲಿ ಈ ನೇತಾ ಯುಗ!/ ಸವಿನಯ ನಿವೇದನೆ ಪ್ರಭೂ, ವಾಪಸು ಹೋಗಿಬಿಡು/ ಯಾವುದಾದರೂ ಪುರಾಣ- ಮತ್ಯಾವುದೋ ಧರ್ಮಗ್ರಂಥದೊಳಕ್ಕೆ/ ಸಕುಶಲ ಸಪತ್ನೀಕ...'

ಪ್ರತಿಕ್ರಿಯಿಸಿ (+)