ಬಜೆಟ್ಟುಗಳ ಭ್ರಮಾಲೋಕದಲ್ಲಿ...

7

ಬಜೆಟ್ಟುಗಳ ಭ್ರಮಾಲೋಕದಲ್ಲಿ...

ಆರ್. ಇಂದಿರಾ
Published:
Updated:

ಕಳೆದ ಗುರುವಾರವಷ್ಟೇ ಕರ್ನಾಟಕದ ವಿಧಾನ ಸಭೆಯಲ್ಲಿ 1,03,176 ಕೋಟಿ ರೂಪಾಯಿ ಮೊತ್ತದ ಬಜೆಟ್ ಮಂಡನೆಯಾಗಿದೆ. ಇದರಲ್ಲಿ ಕೃಷಿ ಬಜೆಟ್‌ನ ಪಾಲು 17,857 ಹಾಗೂ ಸಾಮಾನ್ಯ ಬಜೆಟ್‌ನ ಪಾಲು 85,319 ಕೋಟಿ ರೂಪಾಯಿಗಳು. ಇಡೀ ದೇಶದಲ್ಲಿಯೇ ಪ್ರಪ್ರಥಮ ಬಾರಿಗೆ ಮಂಡನೆಯಾಗಿರುವ ಕೃಷಿ ಬಜೆಟ್ಟನ್ನು ಕುರಿತಂತೆ ಆಳುವ ಪಕ್ಷದ ವಲಯದಿಂದ ಹೊಗಳಿಕೆಗಳ ಮಹಾಪೂರ ಹರಿದು ಬರುತ್ತಿದ್ದರೆ, ವಿರೋಧ ಪಕ್ಷಗಳಿಂದ ‘ಇದೊಂದು ರಾಜಕೀಯ ತಂತ್ರವಷ್ಟೇ’ ಎಂಬ ತೆಗಳಿಕೆ ಸಹಜವಾಗಿಯೇ ಮೂಡಿ ಬರುತ್ತಿದೆ. ಬಜೆಟ್ಟಿನ ಪರ-ವಿರೋಧ ವಾದಗಳೇನೇ ಇರಲಿ, ಅದರ ಮಂಡನೆಯ ಪೂರ್ವದಲ್ಲಿ ನಡೆದ ಮೆರವಣಿಗೆ, ಪೂಜೆ-ಪುನಸ್ಕಾರಗಳು ಹಾಗೂ ನಂತರದಲ್ಲಿ ರೈತರಿಗೆ ಬಜೆಟ್‌ನ ಪ್ರತಿಯನ್ನು ಹಸ್ತಾಂತರಿಸಿದ್ದು-ಇವುಗಳನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ರಾಜಕೀಯ ವ್ಯವಸ್ಥೆಯ ರೀತಿ-ನೀತಿಗಳ ಬಗ್ಗೆ ಒಂದು ರೀತಿಯ ಜುಗುಪ್ಸೆ ಮೂಡುತ್ತದೆ.ಬಜೆಟ್ ಎನ್ನುವುದು ಒಂದು ಆಶಯ. ಇಷ್ಟೊಂದು ವೈವಿಧ್ಯತೆಯಿಂದ ಕೂಡಿರುವ ಹಾಗೂ ಸಮಸ್ಯೆಗಳಿಂದ ಆವೃತ್ತವಾಗಿರುವ ಈ ದೇಶದಲ್ಲಿ ಎಲ್ಲ ವರ್ಗಗಳನ್ನೂ ಮೆಚ್ಚಿಸುವಂಥ ಬಜೆಟ್ಟನ್ನು ತಯಾರಿಸುವುದು ಸುಲಭ ಸಾಧ್ಯವಾದ ಕೆಲಸವಲ್ಲ. ಆದರೆ ಪ್ರತಿ ಬಾರಿಯೂ ಸರ್ಕಾರಗಳು ತಮ್ಮ ಬಜೆಟ್ಟು  ‘ಜನಪರ’ ಎಂದು ಹೇಳಿಕೊಂಡು ತೆರೆಮರೆಯಲ್ಲಿ ಪಕ್ಷದ ‘ಜನಪ್ರಿಯತೆ’ಯನ್ನು ಹೆಚ್ಚಿಸಿಕೊಳ್ಳುವ ತಮ್ಮ ರಹಸ್ಯ ಕಾರ್ಯಸೂಚಿಯನ್ನು ಸಾಧಿಸಲು ಹವಣಿಸುತ್ತಿರುವುದು ಬಜೆಟ್ಟುಗಳ ಸಾಮಾಜಿಕ ಕಳಕಳಿಯ ಬಗ್ಗೆ ತೀವ್ರ ಅನುಮಾನವನ್ನು ಸೃಷ್ಟಿಸುತ್ತದೆ. ಇದಕ್ಕೆ ಈಗ ಮಂಡನೆಯಾಗಿರುವ ಕೃಷಿ ಬಜೆಟ್ಟೇ ಸಾಕ್ಷಿ.ಕೃಷಿ ಪ್ರಧಾನವಾದ ಈ ದೇಶದಲ್ಲಿ ಪ್ರತಿಯೊಂದು ಅಭಿವೃದ್ಧಿಪರ ಪ್ರಯತ್ನವೂ ಕೃಷಿ ಕ್ಷೇತ್ರಕ್ಕೆ ಆದ್ಯತೆಯನ್ನು ನೀಡಬೇಕೆಂಬುದು ತೀರಾ ಸರಳವಾದ ಸತ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೂ ಎಲ್ಲ ರಾಜಕೀಯ ಪಕ್ಷಗಳೂ ಹಾಡುತ್ತಿರುವುದು ರೈತಪರ ರಾಗವನ್ನೇ. ರೈತರಿಗಾಗಿಯೇ ಪ್ರತ್ಯೇಕ ಬಜೆಟ್ಟನ್ನು ತಯಾರಿಸುವುದರ ಮೂಲಕ ಅವರ ಬದುಕಿನಲ್ಲಿ ವಿಶೇಷವಾದ ಬದಲಾವಣೆಗಳೇನಾದರೂ ಉಂಟಾಗುತ್ತವೆಯೇ? ಈಗಾಗಲೇ ರೈತ ಸಮುದಾಯವನ್ನು ಕೇಂದ್ರವನ್ನಾಗಿಟ್ಟುಕೊಂಡು ರೂಪಿತವಾಗಿರುವ ನೂರಾರು ಯೋಜನೆಗಳು, ನೀತಿಗಳು ಹಾಗೂ ಕಾರ್ಯಕ್ರಮಗಳ ಫಲಶ್ರುತಿಯಾಗಿ ರಾಜ್ಯದ ಎಷ್ಟು ಜನ ರೈತರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಗಳು ಉಂಟಾಗಿವೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯೇನಾದರೂ ಲಭ್ಯವಿದೆಯೇ? ಸಾಮಾನ್ಯ ಬಜೆಟ್ಟಿನಲ್ಲಿಯೇ ರೈತರ ಬದುಕನ್ನು ಹಸನು ಮಾಡುವಂಥ ಕಾರ್ಯಕ್ರಮಗಳನ್ನು ಸೇರಿಸಲಿಲ್ಲವೇಕೆ?- ಇವೇ ಮುಂತಾದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಇದುವರೆಗೂ ದೊರೆತಿರುವುದಿಲ್ಲ.ರೈತ ಬಜೆಟ್ಟೇನೋ ಮಂಡನೆಯಾಯ್ತು, ಆದರೆ ರೈತರು ತಮ್ಮ ದಿನ-ನಿತ್ಯದ ಬದುಕಿನಲ್ಲಿ  ಎದುರಿಸುತ್ತಿರುವ ಸಮಸ್ಯೆಗಳ ಭಾರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಬಜೆಟ್ಟು ವಹಿಸಬಹುದಾದ ಪಾತ್ರದ ಸ್ವರೂಪವಾದರೂ ಎಂತಹುದು? ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಲಾಗಲಿ, ಕೃಷಿ ಭೂಮಿಯ ಮಾರಾಟವನ್ನು ತಡೆಗಟ್ಟಲಾಗಲಿ, ಸಣ್ಣ ರೈತರ ಮಕ್ಕಳು ಶಾಲೆಗಳಿಂದ ಹೊರಬಂದು ದುಡಿಮೆಯಲ್ಲಿ  ತೊಡಗುತ್ತಿರುವ ಪ್ರವೃತ್ತಿಯನ್ನು ಎದುರಿಸಲಾಗಲಿ, ದುಡಿಯುತ್ತಿರುವ ರೈತ ಕುಟುಂಬಗಳ ಮಹಿಳೆಯರ ಬವಣೆಗಳನ್ನು ತಪ್ಪಿಸಲಾಗಲಿ ಈ ಬಜೆಟ್ಟು ಯಾವ ಕಾರ್ಯಕ್ರಮಗಳನ್ನು ಸೂಚಿಸಿದೆ? ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಹಾಗೂ ಕೃಷಿ ಪದಾರ್ಥಗಳ ಬೆಲೆ ಇಳಿಮುಖವಾಗುತ್ತಿರುವುದು - ಈ ವರ್ತುಲದಿಂದ ರೈತ ಕುಟುಂಬಗಳನ್ನು ರಕ್ಷಿಸಲು ಸೂಚಿಸಿರುವ ಸ್ಪಷ್ಟ ಕ್ರಮವಾದರೂ ಯಾವುದು? ಈ ಪ್ರಶ್ನೆಗಳಿಗೆ ಬಜೆಟ್ಟಿನಿಂದ ಉತ್ತರ ಸಿಗುವುದೇ?ಈ ಬಜೆಟ್ಟು ಮಂಡನೆಯಾದ ಮೂರೇ ದಿನಗಳ ನಂತರ ರೇಷ್ಮೆ ಬೆಳೆಗಾರರು ಬೆಲೆ ಇಳಿಕೆಯನ್ನು ಪ್ರತಿಭಟಿಸಿ ಬೆಂಗಳೂರು - ಮೈಸೂರು ರಸ್ತೆ ತಡೆ ನಡೆಸಿದ್ದು, ಇದರಿಂದ ಸಾರ್ವಜನಿಕರಿಗೆ ಅಪಾರ ತೊಂದರೆಯಾದದ್ದು - ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗಲೇ ತಿಳಿಯುತ್ತದೆ ರೈತರ ಬದುಕಿನ ಅನೇಕ ವಾಸ್ತವಗಳಿಗೂ ಬಜೆಟ್‌ರೂಪಿ ರಾಜಕೀಯ ಪ್ರಣಾಳಿಕೆಗಳಿಗೂ ಎಷ್ಟೊಂದು ಅಂತರವಿದೆ ಎನ್ನುವುದು.

ರೈತರ ಮೂಲಭೂತ ಸಮಸ್ಯೆಗಳನ್ನು ತೊಡೆದು ಹಾಕಲು ಸ್ಪಷ್ಟ ಹಾಗೂ ಸರಳವಾದ ಕಾರ್ಯಕ್ರಮಗಳನ್ನು ರೂಪಿಸುವುದು ಇಂದಿನ ಅಗತ್ಯವೆಂದು ತಿಳಿದಿದ್ದರೂ ಅವರಿಗಾಗಿ ಮತ್ತೊಮ್ಮೆ ಸಾಲ ಯೋಜನೆಗಳನ್ನು ಘೋಷಿಸಿರುವುದರಲ್ಲಿ ಸೂಕ್ಷ್ಮತೆಯ ಅಭಾವ ಎದ್ದು ಕಾಣುತ್ತದೆ. ಕಡಿಮೆ ಬಡ್ಡಿ ದರದಲ್ಲಿ  ರೈತರಿಗೆ ಕೃಷಿ ಸಾಲ ಒದಗಿಸುವ ಭರವಸೆಯಾಗಲಿ, ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಲು ಬಡ್ಡಿರಹಿತ ಸಾಲವನ್ನು ನೀಡುವ ಆಶ್ವಾಸನೆಯಾಗಲಿ ರೈತರನ್ನು ಮತ್ತೊಮ್ಮೆ ಸಾಲದ ವರ್ತುಲದಲ್ಲಿ ಸಿಲುಕಿಸುವ ಒಂದು ಅಪ್ರತ್ಯಕ್ಷ ಆಹ್ವಾನವೆನಿಸುತ್ತದೆ. ರೈತರಿಗೆ ನ್ಯಾಯಬದ್ಧವಾಗಿ ದೊರೆಯಬೇಕಾದ ಹಕ್ಕುಗಳನ್ನು ಅನುಭವಿಸಲು ಅವಕಾಶ ನೀಡಲು ಅಸಮರ್ಥವಾಗಿರುವ ವ್ಯವಸ್ಥೆ, ಇದೇ ಹಕ್ಕುಗಳನ್ನು ಅವರು ಸಾಲ ಮಾಡಿ ಪಡೆಯಬೇಕೆಂದು ಸುತ್ತಿ ಬಳಸಿ ಸೂಚಿಸುತ್ತಿರುವುದು ವಿಷಾದನೀಯ.ಕೃಷಿಯನ್ನೇ ಏಕೈಕ ಜೀವನಾಧಾರವಾಗಿ ಆಶ್ರಯಸಿರುವವರಿಗೆ ಕೃಷಿಯೇತರ ಉದ್ಯೋಗಗಳಲ್ಲಿ  ತೊಡಗಿಸಿಕೊಳ್ಳಲು ಅವಶ್ಯವಾದ ಕೌಶಲ್ಯಗಳನ್ನು ದಕ್ಕಿಸಿಕೊಳ್ಳಲು ಒಂದು ವ್ಯವಸ್ಥೆಯ ನಿರ್ಮಾಣ ಈ ದೇಶದಲ್ಲಿ ಆಗಬೇಕೆಂಬ ಆಶಯವನ್ನು ಬಹು ಕಾಲದಿಂದಲೂ ಕೃಷಿ ಕ್ಷೇತ್ರದ ಬಗ್ಗೆ ಸೂಕ್ಷ್ಮ ಅರಿವಿರುವ ಅನೇಕ ತಜ್ಞರು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಪ್ರಾಕೃತಿಕ ವಿಕೋಪ, ಹವಾಮಾನ ಬದಲಾವಣೆ, ಬೆಲೆ ಕುಸಿತ, ಫಸಲು ನಾಶ, ಆರ್ಥಿಕ ಮುಗ್ಗಟ್ಟು ಹಾಗೂ ವೈಯಕ್ತಿಕ ದುರಂತ - ಇಂಥ ಪರಿಸ್ಥಿತಿಗಳು ಎದುರಾದಾಗ ಕೃಷಿಯೊಂದನ್ನೇ ಅವಲಂಬಿಸಿರುವವರಿಗೆ ಜೀವನ ನಿರ್ವಹಣೆಯೇ ಸಮಸ್ಯೆಯಾಗುತ್ತದೆ. ಇದಕ್ಕೆ ಮುಖ್ಯ ಕಾರಣವೆಂದರೆ ಅವರಿಗೆ ಬೇರೆ ಯಾವುದೇ ಬಗೆಯ ಕೌಶಲ್ಯವಿಲ್ಲದಿರುವುದು. ಇಂಥ ಕೌಶಲ್ಯಗಳನ್ನು ಅವರಿಗೆ ನೀಡುವಂಥ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದಕ್ಕೋ ಅಥವಾ ಈಗಾಗಲೇ ಇರುವ ಶಿಕ್ಷಣ ಸಂಸ್ಥೆಗಳಲ್ಲಿ ವಿಶೇಷವಾಗಿ ರೈತರ ಆಸಕ್ತಿಗಳಿಗೆ ಪೂರಕವಾದ ಕೋರ್ಸುಗಳನ್ನು ಪ್ರಾರಂಭಿಸುವುದಕ್ಕೆ ಬಜೆಟ್ಟಿನಲ್ಲಿ ಅನುವು ಮಾಡಿಕೊಟ್ಟಿದ್ದರೆ, ಅದು ನಿಜಕ್ಕೂ ರೈತಪರವಾಗುತ್ತಿತ್ತು. ಮತ್ತೆ ಈ ಬಜೆಟ್ಟಿನಲ್ಲೂ ‘ಭಾಗ್ಯಲಕ್ಷ್ಮೀ’ ಯೋಜನೆಗೆ 400 ಕೋಟಿ ರೂಪಾಯಿಗಳನ್ನು ಕಾದಿರಿಸುವ ಬದಲು ಬಡ ಕುಟುಂಬಗಳ ಮಹಿಳೆಯರಿಗೆ ಸ್ವಾವಲಂಬಿಗಳಾಗಲು ಉದ್ಯೋಗ ತರಬೇತಿಯನ್ನು ನೀಡಲು ಹಣವನ್ನು ಮೀಸಲಿಟ್ಟಿದ್ದರೆ ಹೆಚ್ಚು ಪ್ರಸ್ತುತವೆನಿಸುತ್ತಿತ್ತು.ದೇಶದಲ್ಲಿ ಉಚಿತ ಕಡ್ಡಾಯ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂದು ಅರವತ್ತು ವರ್ಷಗಳಾದರೂ ಇಂದಿಗೂ ದೇಶದ ಎಲ್ಲ ಮಕ್ಕಳೂ ಕಿರಿಯ ಪ್ರಾಥಮಿಕ ಶಾಲಾ ಹಂತವನ್ನೇ ದಾಟಲು ಸಾಧ್ಯವಾಗುತ್ತಿಲ್ಲ. ತೀರಾ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದ ಶಿಕ್ಷಣ ಹಕ್ಕು ಕಾಯಿದೆಯ ಅನುಷ್ಠಾನ ಎಲ್ಲೆಲ್ಲಿ, ಹೇಗೆ ಆಗುತ್ತಿದೆ ಎಂಬುದು ಕೂಡ ನಮಗೆ ತಿಳಿದೇ ಇದೆ. ಸಂವಿಧಾನಾತ್ಮಕ ಹಕ್ಕುಗಳನ್ನೇ ಅನುಭವಿಸಲಾಗದ ಸ್ಥಿತಿಯಲ್ಲಿ ಇರುವ ಅನೇಕ ರೈತ ಅಥವಾ ಇತರ ಬಡಕುಟುಂಬಗಳು ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣವನ್ನು ಪಡೆಯಲು ಕಳುಹಿಸುತ್ತಾರೆಂಬುದು ತೀರಾ ಅನುಮಾನಾಸ್ಪದವಾದ ವಿಚಾರ. ಈ ಸಾಲ ನೀಡುವವರು ಯಾರು? ಆ ಸಾಲ ಪಡೆಯಲು ರೈತರು ಸಲ್ಲಿಸಬೇಕಾದ ದಾಖಲೆಗಳಾದರೂ ಯಾವುವು? ಸಾಲದ ಮರುಪಾವತಿಯ ಸ್ವರೂಪವಾದರೂ ಎಂತಹುದು? - ಇವೇ ಮುಂತಾದ ಪ್ರಶ್ನೆಗಳಿಗೆ ಉತ್ತರಗಳು ಬಜೆಟ್ಟಿನಲ್ಲಿ ಲಭ್ಯವಿಲ್ಲ.ಈಗಾಗಲೇ ಬಂದು ಹೋಗಿರುವ ಇಂಥ ಅನೇಕ ಯೋಜನೆಗಳ ಅನುಭವಗಳ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ವಿಶ್ಲೇಷಣೆಗೆ ಒಳಪಡಿಸಿದಾಗ ನಮ್ಮ ಮುಂದೆ ಮೂಡಿಬರುವಂಥವು ಮತ್ತಷ್ಟು ಪ್ರಶ್ನೆಗಳೇ ಹೊರತು ಉತ್ತರಗಳಲ್ಲ.ಇನ್ನು ಬಜೆಟ್ಟಿನಲ್ಲಿ ಸೂಚಿಸಿರುವ ಹೊಸ ಕೃಷಿ ಸಂಬಂಧಿ ಕೋರ್ಸುಗಳ ವಿಚಾರ. ಕೃಷಿ ಹಾಗೂ ನೆಲ-ಜಲ ಆಧಾರಿತ ಅಧ್ಯಯನ ವಿಷಯಗಳಲ್ಲಿ ವಿವಿಧ ಬಗೆಯ ಕೋರ್ಸುಗಳು ಈಗಾಗಲೇ ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಲಭ್ಯವಿದ್ದು, ಅವುಗಳು ರೈತ ಸಮುದಾಯವನ್ನು ಎಷ್ಟರಮಟ್ಟಿಗೆ ತಲುಪುತ್ತಿವೆ ಎಂಬ ಪ್ರಶ್ನೆಯನ್ನೆತ್ತಿ ಆ ಕೋರ್ಸುಗಳ ಪಠ್ಯಕ್ರಮ, ಬೋಧನಾ-ಕಲಿಕಾ ವಿಧಾನಗಳು ಹಾಗೂ ಉದ್ಯೋಗಾರ್ಹತೆ ಇವುಗಳನ್ನು ನುರಿತವರಿಂದ ಮೌಲ್ಯಮಾಪನಕ್ಕೆ ಒಳಪಡಿಸಿ ಅವುಗಳ ಬಲವರ್ಧನೆ ಅಥವಾ ಬದಲಾವಣೆ ಮಾಡಲು ಕ್ರಮವನ್ನು ಕೈಗೊಂಡಿದ್ದರೆ ಹೊಸ ಕೋರ್ಸುಗಳನ್ನು ಪ್ರಾರಂಭಿಸುವುದಕ್ಕಿಂತ ಹೆಚ್ಚು ಸೂಕ್ತವಾಗುತ್ತಿತ್ತೇನೋ?ಜಾಗತೀಕರಣದ ನಂತರದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸರ್ಕಾರಗಳು ಒದಗಿಸುತ್ತಿರುವ ಸಂಪನ್ಮೂಲ ಕ್ರಮೇಣ ಇಳಿಮುಖವಾಗುತ್ತಿದ್ದು ಖಾಸಗಿ ಸಂಸ್ಥೆಗಳು ಈಗಾಗಲೇ ಬಹುಮಟ್ಟಿಗೆ ತಮ್ಮ ಪ್ರಭಾವವನ್ನು ಶಾಲಾ ಹಂತದಿಂದ ಹಿಡಿದು ವಿಶ್ವವಿದ್ಯಾನಿಲಯಗಳ ಮಟ್ಟದವರೆಗೂ ಬೀರುತ್ತಿವೆ. ಇದಕ್ಕೆ ಪ್ರಮುಖ ಕಾರಣವೆಂದರೆ ಅನೇಕ ಸರ್ಕಾರಿ ಕಾರ್ಯಕ್ರಮಗಳು ಭ್ರಷ್ಟಾಚಾರ, ಅಶಿಸ್ತು ಹಾಗೂ ಸಮರ್ಥ ನಾಯಕತ್ವದ ಕೊರತೆಯಿಂದ ನರಳುತ್ತಿರುವುದು.ಪರಿಸ್ಥಿತಿ ಹೀಗಿದ್ದರೂ, ಶಾಲಾ ಶಿಕ್ಷಣದ ಅಭಿವೃದ್ಧಿಗಾಗಿ ಒದಗಿಸಿರುವ ಹಣದಲ್ಲಿ ಕಳೆದ ಸಾಲಿಗಿಂತ ಈಗ ಕೇವಲ ಎರಡು ಸಾವಿರ ಕೋಟಿ ಹೆಚ್ಚಳವಾಗಿರುವುದು ಒಂದೆಡೆ ನಿರಾಶೆಗೆ ಕಾರಣವಾದರೆ, ಸಾರ್ವಜನಿಕ ಹಣದ ವ್ಯಾಪಕ ದುರುಪಯೋಗ ಮಾಡಿದ ಕುಖ್ಯಾತಿಯನ್ನು ಪಡೆದ ಸರ್ವ ಶಿಕ್ಷಾ ಅಭಿಯಾನಕ್ಕೆ ಮತ್ತೆ 900 ಕೋಟಿ ರೂಪಾಯಿಗಳನ್ನು ಒದಗಿಸಿರುವುದು ಕೂಡ ಪ್ರಶ್ನಾರ್ಹವೇ.ರೈತರೇ ಆಗಲಿ, ಇತರ ಗ್ರಾಮೀಣ ಜನತೆಯೇ ಆಗಲಿ, ಅವರಿಗೆ ದೊರೆಯಬೇಕಾದ ಒಂದು ಮೂಲಸೌಕರ್ಯವೆಂದರೆ ಗುಣಮಟ್ಟದ ಆರೋಗ್ಯ ಸೇವೆಗಳು. ಈ ಸೇವೆಗಳಲ್ಲಿ ಸಂಖ್ಯಾತ್ಮಕ ಹೆಚ್ಚಳ ಹಾಗೂ ಗುಣಮಟ್ಟದ ವೃದ್ಧಿ- ಇವೆರಡೂ ಏಕಕಾಲದಲ್ಲಿ ಆಗಬೇಕಾಗಿದ್ದುದರಿಂದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವ ಯೋಜನೆಯಡಿ ತರುವ ಪ್ರಸ್ತಾವನೆಯನ್ನು ಈ ಬಜೆಟ್ಟಿನಲ್ಲಿ ಮಾಡಲಾಗಿದೆ. ಒಂದು ಸೈದ್ಧಾಂತಿಕ ಮಟ್ಟದಲ್ಲಿ ಈ ಸಹಭಾಗಿತ್ವ ಆದರ್ಶ ಮಾದರಿಯಂತೆ ಕಂಡರೂ ವಾಸ್ತವದಲ್ಲಿ ಖಾಸಗಿ ವಲಯದ ಪ್ರವೇಶ ನಿಜಕ್ಕೂ ಸರ್ಕಾರಿ ಆರೋಗ್ಯ ರಕ್ಷಕ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸುವುದೇ ಅಥವಾ ನಿಧಾನವಾಗಿ ಈ ಕ್ಷೇತ್ರದ ವಾಣಿಜ್ಯೀಕರಣಕ್ಕೆ ದಾರಿ ಮಾಡಿಕೊಡುವುದೇ ಎಂಬ ಪ್ರಶ್ನೆ ಏಳುತ್ತದೆ. ಅಭಿವೃದ್ಧಿಯ ಎರಡು ಪ್ರಮುಖ ಸೂಚ್ಯಂಕಗಳಾದ ಶಿಕ್ಷಣ ಹಾಗೂ ಆರೋಗ್ಯ- ಇವೆರಡಕ್ಕೂ ರಾಜ್ಯ ಬಜೆಟ್ಟಿನಲ್ಲಿ ಕಾಣುವುದು ಮೇಲು ಮೇಲಿನ ತೋರಿಕೆಯೇ ಹೊರತು ನೈಜ ಕಾಳಜಿಯಲ್ಲ ಎನಿಸದೆ ಹೋಗುವುದಿಲ್ಲ.ಮಧ್ಯಮ ಹಾಗೂ ಶ್ರೀಮಂತ ವರ್ಗಗಳು ಹೆಚ್ಚಾಗಿ ಬಳಸುವ ವಸ್ತುಗಳ ಹಾಗೂ ಅವರ ಜೀವನ ಶೈಲಿಯ ಕೆಲ ದ್ಯೋತಕಗಳ ಮೇಲಿನ ತೆರಿಗೆಯನ್ನು ಏರಿಸಿ, ಸಮಾಜದ ಅನುಕೂಲಗಳಿಂದ ವಂಚಿತರಾದ ಜನಸಮುದಾಯಗಳ ಬದುಕಿಗೆ ಅಗತ್ಯವಾದ ವಸ್ತುಗಳ ಮೇಲಿನ ತೆರಿಗೆಯನ್ನು ಇಳಿಸುವುದರ ಮೂಲಕ ಜನಪರವಾದ ಕಾಳಜಿಗಳನ್ನು ಈ ಬಜೆಟ್ಟು ವ್ಯಕ್ತಪಡಿಸುತ್ತಿದೆ ಎಂಬ ಭ್ರಮೆಯನ್ನು ಸೃಷ್ಟಿಸಲಾಗಿದೆ. ಆದರೆ ಇಲ್ಲಿ ಘೋಷಿಸಲಾಗಿರುವ ಉತ್ತುಂಗವೆನಿಸುವ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನು ಹೊರುವಂಥ ಸಂಸ್ಥೆಗಳು, ಇವುಗಳ ಅನುಷ್ಠಾನಕ್ಕಿರುವ ಕಾಲಮಿತಿ ಹಾಗೂ ಅನುಸರಿಸಬೇಕಾದ ಮಾರ್ಗದರ್ಶಕ ಸೂಚಿಗಳ ಬಗ್ಗೆ ಯಾವುದೇ ಸ್ಪಷ್ಟ ವಿವರಗಳು ಲಭ್ಯವಾಗಿಲ್ಲವಾದ್ದರಿಂದ ಹಿಂದಿನ ಬಜೆಟ್ಟುಗಳಂತೆ ಇದೂ ಕೂಡ ‘ಆಡಿದ್ದು ಜಾಸ್ತಿ, ಮಾಡಿದ್ದು ಕಡಿಮೆ’ ಎನ್ನುವಂತೆ ಸರ್ಕಾರಿ ಕಾರ್ಯಕ್ರಮಗಳ ಸಾಲಿಗೆ ಸೇರಿ ಹೋಗುತ್ತದೇನೋ ಎನಿಸದಿರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry