ಬತ್ತಳಿಕೆಯ ಅಸ್ತ್ರಕ್ಕೆ ಬೆಲೆ ಬರಬೇಕಾದರೆ...

7

ಬತ್ತಳಿಕೆಯ ಅಸ್ತ್ರಕ್ಕೆ ಬೆಲೆ ಬರಬೇಕಾದರೆ...

Published:
Updated:
ಬತ್ತಳಿಕೆಯ ಅಸ್ತ್ರಕ್ಕೆ ಬೆಲೆ ಬರಬೇಕಾದರೆ...

ಅಸ್ತ್ರ ಎಂಬುದು ಬೆನ್ನ ಬತ್ತಳಿಕೆಯಲ್ಲಿನ ರಹಸ್ಯ. ಅದನ್ನು ಹೊರಗೆ ತೆಗೆದು ಬಿಡುವಾಗ ನೂರು ಸಾರಿ ಯೋಚನೆ ಮಾಡಬೇಕು. ಸಮಾನ ಬಲದ ಎದುರಾಳಿಯನ್ನು ಹಣಿಯಲು ಯಾವ ಅಸ್ತ್ರ ಬಳಸಬೇಕು ಎಂದು ನಮಗೆ ಗೊತ್ತಿರಬೇಕು. ದುರ್ಬಲ ಎದುರಾಳಿ ವಿರುದ್ಧ ಬ್ರಹ್ಮಾಸ್ತ್ರ ಬಿಟ್ಟರೆ ಆತ ಭಸ್ಮವಾಗಿ ಬಿಡಬಹುದು.ಆದರೆ, ಅದು ಅಸ್ತ್ರ ಬಿಟ್ಟವನ ಶಕ್ತಿಯನ್ನು ತೋರಿಸುವುದಿಲ್ಲ. ದೌರ್ಬಲ್ಯವನ್ನೇ ತೋರಿಸುತ್ತದೆ. ಭಾರತೀಯ ಜನತಾ ಪಕ್ಷವು ದೆಹಲಿಯಲ್ಲಿನ ರಾಜ್ಯ ಸರ್ಕಾರದ ಮಾಜಿ (?) ವಿಶೇಷ ಪ್ರತಿನಿಧಿ ವಿ.ಧನಂಜಯಕುಮಾರ್ ವಿರುದ್ಧ ಬಳಸಿದ ಉಚ್ಚಾಟನೆಯ ಅಸ್ತ್ರ ಅದರ ಶಕ್ತಿಯನ್ನೇನೂ ತೋರಿಸಲಿಲ್ಲ. ಬದಲಿಗೆ ಎಲ್ಲರೂ ಹೇಳಿದ್ದು ಇದು ಗುಬ್ಬಿಯ ಮೇಲೆ ಪ್ರಯೋಗಿಸಿದ ಬ್ರಹ್ಮಾಸ್ತ್ರ ಎಂದೇ.ಧನಂಜಯಕುಮಾರ್ ದೊಡ್ಡ ಸಮುದಾಯಕ್ಕೆ ಸೇರಿದ ವ್ಯಕ್ತಿಯೇನೂ ಅಲ್ಲ. ಅವರು ಅಂಥ ಯಾವ ಉನ್ನತ ಹುದ್ದೆಯಲ್ಲಿಯೂ ಈಗ ಇರಲಿಲ್ಲ. ಇದ್ದುದು ಪುನರ್ವಸತಿಯಂಥ ಒಂದು ಹುದ್ದೆಯೆಂದು ಎಲ್ಲರಿಗೂ ಗೊತ್ತಿತ್ತು. ಅವರನ್ನು ಉಚ್ಚಾಟನೆ ಮಾಡಿದರೆ ತಮ್ಮ ಮತಬ್ಯಾಂಕ್ ಅನ್ನುವಂಥ ದೊಡ್ಡ ಸಮುದಾಯಕ್ಕೆ ನೋವಾಗುವುದಿಲ್ಲ ಎಂದು ಪಕ್ಷದ ನಾಯಕರಿಗೆ ಗೊತ್ತಿತ್ತು.

 

ಯಡಿಯೂರಪ್ಪನವರಿಗೂ ಅಂಥ ಸಿಟ್ಟು ಬರುವುದಿಲ್ಲ ಎಂದೂ ಅವರಿಗೆ ಗೊತ್ತಿತ್ತು. ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿ ಆಗಿದ್ದಾಗ ಅವರನ್ನು ವಾಚಾಮಗೋಚರ ನಿಂದಿಸಿದ ಹರಿಹರ ಶಾಸಕ ಬಿ.ಪಿ.ಹರೀಶ್ ಅವರ ವಿರುದ್ಧ ಒಂದು ಬೆರಳು ಎತ್ತಲೂ ಪಕ್ಷದ ಹೈಕಮಾಂಡಿಗೆ ಸಾಧ್ಯವಾಗಲಿಲ್ಲ.ಅದೇ ಕೆಲಸ ಮಾಡುತ್ತಿದ್ದ ಬಿ.ಜೆ.ಪುಟ್ಟಸ್ವಾಮಿಯವರನ್ನು ಅಮಾನತು ಮಾಡಿದರೂ ತಕ್ಷಣ ಅದನ್ನು ವಾಪಸು ತೆಗೆದುಕೊಂಡು ಅವರಿಗೆ ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆದ ಚುನಾವಣೆಗೆ ಟಿಕೆಟ್ ಕೊಟ್ಟು ಗೆಲ್ಲಿಸಿ ನಂತರ ಸಚಿವ ಪದವಿಯನ್ನೂ ನೀಡಲಾಯಿತು. ಹೈಕಮಾಂಡ್ ವಿರುದ್ಧ ಅವಕಾಶ ಸಿಕ್ಕಾಗಲೆಲ್ಲ ಟೀಕಿಸುವ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಒಂದು ಕೂದಲು ಕೂಡ ಈಗಲೂ ಕೊಂಕಿಲ್ಲ.ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ನಾಲ್ಕೂವರೆ ವರ್ಷ ಆಗುತ್ತ ಬಂತು. ಈ ಇಡೀ ನಾಲ್ಕೂವರೆ ವರ್ಷದ ಅವಧಿಯುದ್ದಕ್ಕೂ ಪಕ್ಷದಲ್ಲಿ ಹಗರಣ ಇರಲಿಲ್ಲ ಎಂದು ಅಲ್ಲ. ಭಿನ್ನಮತ ಇರಲಿಲ್ಲ ಎಂದು ಅಲ್ಲ. ತಾನು ಭಿನ್ನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ, ಹಗರಣಗಳಲ್ಲಿ ಸಿಲುಕಿದ ನಾಯಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಅವರೇ ಒತ್ತಡಕ್ಕೆ ಸಿಲುಕಿ ಅಧಿಕಾರ ಬಿಟ್ಟರೇ ಹೊರತು ಪಕ್ಷದಲ್ಲಿಯೇ ಉಳಿದರು.ಕಾಂಗ್ರೆಸ್‌ನ ಭ್ರಷ್ಟಾಚಾರದ ವಿರುದ್ಧ ಎತ್ತರದ ಧ್ವನಿಯಲ್ಲಿ ಕೂಗುವ ಬಿಜೆಪಿ, ಜನರಿಗೆ ತಾನು ಒಂದು ಪರ್ಯಾಯ ಎಂದು ಹೇಳಿಕೊಳ್ಳುವ ಬಿಜೆಪಿ, `ಹಗರಣದಲ್ಲಿ ಸಿಲುಕಿದ ನಾಯಕರು ಪಕ್ಷದಿಂದ ಹೊರಗೆ ಹೋಗಬೇಕು; ನಿಷ್ಕಳಂಕರಾಗಿ ಬಂದು ಮತ್ತೆ ಪಕ್ಷ ಸೇರಿಕೊಳ್ಳಬೇಕು~ ಎಂದು ಹೇಳಲಿಲ್ಲ.

 

ಪಕ್ಷದ ನಾಯಕರು ಬಿಡಿ, ಅವರನ್ನು ನಿಯಂತ್ರಿಸುವ ಸಂಘದ ನಾಯಕರೂ ಈ ಮಾತನ್ನು ಹೇಳಲಿಲ್ಲ. ತಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಿದ್ದವರು, ಮಂತ್ರಿಯಾಗಿದ್ದವರು ಜೈಲಿಗೆ ಹೋದರೂ ಅವರ ವಿರುದ್ಧ ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ.

 

ಹಾಗೆ ನೋಡಿದರೆ ಪಕ್ಷದ ವರ್ಚಸ್ಸಿಗೆ ರಾಷ್ಟ್ರಮಟ್ಟದಲ್ಲಿ ಮಸಿ ಬಳಿದ ಜನಾರ್ದನ ರೆಡ್ಡಿ ಅವರು ಜೈಲು ಸೇರಿ ಒಂದು ವರ್ಷ ಕಳೆದು ಹೋದರೂ ಈಗಲೂ ಬಿಜೆಪಿಯಲ್ಲಿಯೇ ಇದ್ದಾರೆ. ಅವರನ್ನು ಪಕ್ಷದಿಂದ ವಜಾ ಮಾಡುವುದು ಹೋಗಲಿ ಕೊನೆಯ ಪಕ್ಷ ಅಮಾನತು ಮಾಡುವ ಧೈರ್ಯವನ್ನೂ ಪಕ್ಷ ತೋರಿಸಲಿಲ್ಲ.ಇತಿಹಾಸದ ಪುಟಗಳನ್ನು ಕೊಂಚ ತಿರುವಿ ಹಾಕೋಣ. ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಅಷ್ಟೇ ಆಗಿತ್ತು. ಆಗಿನ ಸಚಿವ ಜನಾರ್ದನ ರೆಡ್ಡಿಯವರು ಶಾಸಕರ ದಂಡು ಕಟ್ಟಿಕೊಂಡು ಹೈದರಾಬಾದಿಗೆ ಹೋದರು. ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕೆಳಗೆ ಇಳಿಸಬೇಕು ಎಂದು ಪಟ್ಟು ಹಿಡಿದರು.

 

ಆಗ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದ ಕರುಣಾಕರ ರೆಡ್ಡಿಯವರು ಯಡಿಯೂರಪ್ಪನವರನ್ನು `ಕಂಸ~ ಎಂದು ಕರೆದರು. ತಾವು ಕಂಸ ಸಂಹಾರ ಮಾಡುವುದಾಗಿ ಸಾರಿದರು. ಹೈಕಮಾಂಡಿನಲ್ಲಿ ಆಗಲೂ ಮತ್ತು ಈಗಲೂ ನಾಯಕ(ಕಿ) ಆಗಿರುವವರು ರೆಡ್ಡಿ ಸೋದರರಿಗೆ ಯಾವ ಶಿಕ್ಷೆಯನ್ನೂ ಕೊಡಲಿಲ್ಲ.ಬದಲಿಗೆ ಯಡಿಯೂರಪ್ಪ ಅವರನ್ನು ಹೆಡಮುರಿಗೆ ಕಟ್ಟಿಹಾಕಿ ರೆಡ್ಡಿಯವರು ಕೇಳಿದ ಎಲ್ಲ ಕೆಲಸಗಳನ್ನು ಮಾಡಿಕೊಡುವಂತೆ ತಾಕೀತು ಮಾಡಿದರು. ರೆಡ್ಡಿ ಸೋದರರು ಮತ್ತು ಅವರ ಜತೆಗೆ ಹೈದರಾಬಾದಿಗೆ ಹೋಗಿದ್ದ ಶಾಸಕರು ಮೀಸೆ ತಿರುವುತ್ತ ವಾಪಸು ಬಂದರು.ಪಕ್ಷದ ಹೈಕಮಾಂಡಿಗೆ, ರಾಜ್ಯದಲ್ಲಿನ ಪಕ್ಷದ ವರಿಷ್ಠರಿಗೆ ಅದು ಅಶಿಸ್ತು ಅನಿಸಲಿಲ್ಲ. ಮತ್ತೆ ಕೆಲವೇ ತಿಂಗಳಲ್ಲಿ ಮತ್ತಷ್ಟು ಶಾಸಕರು ಗೋವಾಕ್ಕೆ ಹೋದರು. ಅವರೂ ಯಡಿಯೂರಪ್ಪ ನಾಯಕತ್ವ ಬದಲಾಗಬೇಕು ಎಂದರು. ಅವರಿಗೂ ಏನೂ ಆಗಲಿಲ್ಲ. ಸಚಿವರಾಗಿದ್ದವರು ಸಚಿವರಾಗಿಯೇ ಉಳಿದರು. ನಿಗಮ ಮಂಡಳಿ ಅಧ್ಯಕ್ಷರಾಗಿದ್ದವರು ಆ ಹುದ್ದೆಯಲ್ಲಿಯೇ ಉಳಿದರು.ರೆಡ್ಡಿ ಸೋದರರು ಈಗ ಬಿಜೆಪಿಯಲ್ಲಿ ಇದ್ದಾರೆಯೇ? ಅವರ ಬಳಗ ಬಿಜೆಪಿಯಲ್ಲಿ ಇದೆಯೇ? ಅವರು ತಾಂತ್ರಿಕವಾಗಿ ಮಾತ್ರ ಬಿಜೆಪಿಯಲ್ಲಿ ಇದ್ದಾರೆ. ಮಾನಸಿಕವಾಗಿ ಇಲ್ಲ.ತಮ್ಮ ವಿರುದ್ಧ ಲೋಕಾಯುಕ್ತ ವರದಿಯಲ್ಲಿ ಆಕ್ಷೇಪ ವ್ಯಕ್ತವಾದಾಗ ಬಿಜೆಪಿಗೆ ರಾಜೀನಾಮೆ ಕೊಟ್ಟು ಪಕ್ಷೇತರರಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಶ್ರೀರಾಮುಲು ಪರವಾಗಿ ಬಿಜೆಪಿ ಟಿಕೆಟ್ ಮೇಲೆ ಗೆದ್ದಿದ್ದ ಅವರ ಸಂಬಂಧಿ ಶಾಸಕರು, ಸಂಸದರು, ಆಪ್ತರು ಸಕ್ರಿಯವಾಗಿಯೇ ಪ್ರಚಾರ ಮಾಡಿದರು.

 

ಅಲ್ಲಿ ಅಧಿಕೃತ ಬಿಜೆಪಿ ಅಭ್ಯರ್ಥಿ ಸೋತು ಹೋದರು. ಅದು ಹೈಕಮಾಂಡಿಗೆ ಪಕ್ಷ ವಿರೋಧಿ ಕೆಲಸ ಅನಿಸಲಿಲ್ಲ. ನಾಲ್ಕು ತಿಂಗಳ ಹಿಂದೆ ವಿಧಾನಸಭೆಯಿಂದ ವಿಧಾನಪರಿಷತ್ತಿನ ನಾಲ್ಕು ಸೀಟುಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 12 ಮತಗಳು ಜೆ.ಡಿ.ಎಸ್ ಅಭ್ಯರ್ಥಿಗೆ ಹೋದುವು.

 

ಅಡ್ಡ ಮತದಾನ ಮಾಡಿದ ಶಾಸಕರನ್ನು ಪತ್ತೆ ಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಪಕ್ಷದ ರಾಜ್ಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಘೋಷಿಸಿದ್ದರು. ಅವರು ಯಾರು ಎಂದು ಇದುವರೆಗೆ ಬಹಿರಂಗವಾಗಲಿಲ್ಲ. ಅದು ರಹಸ್ಯ ಮತದಾನವಾದ ಕಾರಣ ಪಕ್ಷಕ್ಕೆ ಕೈ ಕೊಟ್ಟವರು ಯಾರು ಎಂಬುದನ್ನು ನಿರ್ದಿಷ್ಟವಾಗಿ ಗುರುತಿಸಲು ಸಾಧ್ಯವಿಲ್ಲ ಎಂಬುದು ನಿಜ.ಆದರೆ, ಮೊನ್ನೆ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರಿಗೆ ಇನ್ನೆರಡು ಇಲಾಖೆಗಳನ್ನು ಹೆಚ್ಚುವರಿಯಾಗಿ ಕೊಟ್ಟ ನಂತರ `ಅಡ್ಡಮತದಾನ ಮಾಡಿದವರು ಜಾರಕಿಹೊಳಿಯವರೇ~ ಎಂದು ರೇಣುಕಾಚಾರ್ಯ ಆಪಾದಿಸಿದ್ದಾರೆ. ಅದು ನಿಜವಲ್ಲ ಎಂದು ಇದುವರೆಗೆ ಯಾರೂ ಹೇಳಿಲ್ಲ! ಅಂದು ಅಡ್ಡಮತದಾನ ಮಾಡಿದವರು ಯಾರು ಎಂದು ಈಶ್ವರಪ್ಪ ಅವರಿಗೆ ನಿಜಕ್ಕೂ ಗೊತ್ತಿಲ್ಲವೇ? ಈಗ ಪಕ್ಷದಲ್ಲಿ ಭಿನ್ನಮತೀಯ ನಾಯಕ ಯಾರಾದರೂ ಇದ್ದರೆ ಅವರು ಬಿ.ಎಸ್.ಯಡಿಯೂರಪ್ಪ. ಪಕ್ಷದ ಶಿಸ್ತನ್ನು ದಿನನಿತ್ಯ ಉಲ್ಲಂಘಿಸುತ್ತಿದ್ದರೆ ಅದು ಯಡಿಯೂರಪ್ಪ. ಅವರು ಹೊಸ ಕಚೇರಿಯನ್ನೇ ತೆರೆದುಬಿಟ್ಟಿದ್ದಾರಲ್ಲ? ಡಿಸೆಂಬರ್ ನಂತರ ಹೊಸ ಪಕ್ಷ ಮಾಡುವುದಾಗಿ ಬಹಿರಂಗವಾಗಿಯೇ ಹೇಳಿದ್ದಾರಲ್ಲ?

 

ಪಕ್ಷದ ಅತ್ಯಂತ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರ ವಿರುದ್ಧ ಅವರು ಏನೆಲ್ಲ ಹೇಳಲಿಲ್ಲ? ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರ ವಿರುದ್ಧ ವಚನಭ್ರಷ್ಟತೆಯ ಆರೋಪವನ್ನು ನಿನ್ನೆ ಮೊನ್ನೆ ಮಾಡಿದರಲ್ಲ? ಅಡ್ವಾಣಿ, ಗಡ್ಕರಿಯವರನ್ನು ಟೀಕಿಸುವುದು ಬಿಡಿ ಸೋನಿಯಾ ಗಾಂಧಿಯವರನ್ನೇ ಯಡಿಯೂರಪ್ಪ ಹೊಗಳಿದರಲ್ಲ? ರಾಜ್ಯ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರಂತೂ ಯಡಿಯೂರಪ್ಪ ಅವರ ಟೀಕಾಸ್ತ್ರಕ್ಕೆ ನಿತ್ಯ ಗುರಿ.ಆದರೆ, ಅದನ್ನೆಲ್ಲ ಈಶ್ವರಪ್ಪ ಅವರು ಆಶೀರ್ವಾದ ಎಂದು ತಿಳಿದುಕೊಂಡಿರುವುದರಿಂದ ಬೇಕಾದರೆ ಮಾಫಿ ಮಾಡಬಹುದು! ಹಾಗೆಂದು ಅಡ್ವಾಣಿಯವರನ್ನು ಟೀಕಿಸಿದರೂ ಸುಮ್ಮನಿರುವುದೇ? ಗಡ್ಕರಿ ಅವರ ವಿರುದ್ಧ ಟೀಕೆ ಮಾಡಬಹುದೇ? ಯಡಿಯೂರಪ್ಪ ಅವರನ್ನು ಪಕ್ಷದಿಂದ ಅಮಾನತು ಮಾಡಿದರೆ ಲಿಂಗಾಯತರಿಗೆ ಬೇಸರ ಆದೀತು ಎಂಬ ಭಯ ಪಕ್ಷವನ್ನು ಕಾಡುತ್ತಿದೆಯೇ?

 

ಅಥವಾ ಈ ನಾಲ್ಕೂವರೆ ವರ್ಷದಲ್ಲಿ ಕೆಲವರು ಕಾಣುವಂತೆ, ಕೆಲವರು ಕಾಣದಂತೆ ಎಲ್ಲರೂ ಒಂದಲ್ಲ ಒಂದು ಕಾಲದಲ್ಲಿ ಭಿನ್ನಮತದ ಚಟುವಟಿಕೆಯಲ್ಲಿ, ಪಕ್ಷದ ವರ್ಚಸ್ಸಿಗೆ ಹಾನಿಯಾಗುವ ರೀತಿಯಲ್ಲಿ ನಡೆದುಕೊಂಡಿರುವುದರಿಂದ ಯಾರನ್ನು ಮುಟ್ಟಿದರೆ ಏನು ಅಪಾಯ ಕಾದಿದೆಯೋ ಎಂಬ ಭಯವೇ?ಅಥವಾ ಪಾಪಪ್ರಜ್ಞೆಯೇ? ರಾಷ್ಟ್ರಮಟ್ಟದಲ್ಲಿ ದೇಶವನ್ನು ಆಳಿದ ಒಂದು ಪಕ್ಷಕ್ಕೆ ಇಂಥ ಗತಿ ಬರಬಾರದು. ಕಾಂಗ್ರೆಸ್ಸಿನಲ್ಲಿ ಯಾರಾದರೂ ಸೋನಿಯಾ ಗಾಂಧಿಯವರನ್ನು ಬಿಡಿ, ರಾಹುಲ್ ಗಾಂಧಿಯವರನ್ನು ಟೀಕಿಸಿ ಪಕ್ಷದಲ್ಲಿ ಉಳಿಯಲು ಸಾಧ್ಯ ಇದೆಯೇ?

ಮಾದರಿಗಳನ್ನು ನಾಯಕರೇ ಹಾಕಬೇಕು. ಅದು ಒಳ್ಳೆಯ ಮಾದರಿ ಆಗಿರಬೇಕು.ಪಕ್ಷದಲ್ಲಿ ಶಿಸ್ತು ತರಬೇಕು ಎಂದು ಸಣ್ಣಪುಟ್ಟವರನ್ನು ಬಲಿ ಹಾಕಿ, ಕೇಕೆ ಹಾಕಿದರೆ ಅದರಿಂದ ತಪ್ಪು ಮಾಡುವ ದೊಡ್ಡವರಿಗೆ ಯಾವ ಪಾಠ ಕಲಿಸಿದಂತೆ ಆಗುತ್ತದೆ? ಧನಂಜಯಕುಮಾರ್ ಅವರನ್ನು ಉಚ್ಚಾಟನೆ ಮಾಡಿರುವುದು ಮತ್ತು ಆಯನೂರು ಮಂಜುನಾಥ್ ಅವರನ್ನು ವಕ್ತಾರ ಹುದ್ದೆಯಿಂದ ಕಿತ್ತು ಹಾಕಿರುವುದು ಯಡಿಯೂರಪ್ಪ ಅವರಿಗೆ ಒಂದು ಎಚ್ಚರಿಕೆ ಎಂದು ಪಕ್ಷದ ನಾಯಕರು ಭಾವಿಸಿದರೆ ಅದರಂಥ `ಹುಸಿ~ ಮತ್ತೊಂದು ಇರಲಾರದು.ಯಡಿಯೂರಪ್ಪ ಕೂಡ ಎಂಥ ಚಾಣಾಕ್ಷ ಮನುಷ್ಯ ಎಂದರೆ, ಸರ್ಕಾರದಲ್ಲಿ ಇದ್ದವರನ್ನು ಮುಟ್ಟಿದರೆ ಮುಖ್ಯಮಂತ್ರಿಗೆ ಅಪಾಯ ಎಂದು ಎಚ್ಚರಿಕೆ ಕೊಡುತ್ತಿದ್ದಾರೆ. ಬಾಕಿಯವರನ್ನು ಮುಟ್ಟಿದರೆ ತಾವು ಏನೂ ಮಾಡುವುದಿಲ್ಲ ಎಂದು ಅವರು ಹೇಳುತ್ತಿದ್ದಾರೆಯೇ? ಯಾರ ತೂಕ ಎಷ್ಟು ಎಂದು ಅವರಿಗೂ ಗೊತ್ತಿದೆಯೇ?ಯಡಿಯೂರಪ್ಪ ಅವರನ್ನು ಕಂಡ ಕಂಡಲ್ಲೆಲ್ಲ, ಸಿಕ್ಕ ಸಿಕ್ಕಲ್ಲೆಲ್ಲ ಸಮರ್ಥಿಸಿದ ಧನಂಜಯಕುಮಾರ್‌ಗೆ ಇದಕ್ಕಿಂತ ಇನ್ನೆಂಥ `ಪ್ರಶಸ್ತಿ~ ಬೇಕು? ರಾಜ್ಯ ಬಿಜೆಪಿಯ ಸಮಸ್ಯೆಯೇನು ಎಂದರೆ ಎಲ್ಲರೂ ತಾವು ಪಕ್ಷಕ್ಕಿಂತ ದೊಡ್ಡವರು; ತಮ್ಮಿಂದಾಗಿ ಪಕ್ಷ, ಸರ್ಕಾರ ಅಸ್ತಿತ್ವದಲ್ಲಿ ಇದೆ ಎಂದು ನಂಬಿರುವುದು. ಅದು ತಕ್ಕ ಮಟ್ಟಿಗೆ ನಿಜ ಇದ್ದರೂ ಇರಬಹುದು. ರಾಷ್ಟ್ರೀಯ ಪಕ್ಷದ ನಾಯಕರಿಗೆ ಕರ್ನಾಟಕದಲ್ಲಿ ಬಂದು ಪ್ರಚಾರ ಮಾಡಿ ಎರಡು ಸೀಟು ಗೆದ್ದು ಕೊಡುವ ಯೋಗ್ಯತೆ ಇಲ್ಲದಿರುವುದು ಸ್ಥಳೀಯ ನಾಯಕರು ಹೀಗೆ ಅಟ್ಟಹಾಸ ಮಾಡುತ್ತಿರುವುದಕ್ಕೆ ಮುಖ್ಯ ಕಾರಣ.

 

ಈ ಅಟ್ಟಹಾಸವನ್ನು ಕಂಡೂ ಕಾಣದಂತೆ ಹೈಕಮಾಂಡ್ ಏಕೆ ತೆಪ್ಪಗಿದೆ ಎಂದರೆ ಅದಕ್ಕೆ ತನ್ನ ಮಿತಿ ಏನು ಎಂದು ಗೊತ್ತಿದೆ. ಎಲ್ಲವನ್ನೂ ಹತ್ತಿರದಿಂದಲೇ ನೋಡಿಯೂ ನೋಡದಂತೆ ಇರುವ ರಾಜ್ಯ ಹೈಕಮಾಂಡ್ ಇದ್ದಕ್ಕಿದ್ದಂತೆ ಗಾಢ ನಿದ್ದೆಯಿಂದ ಎದ್ದು ಇದೀಗ ಮೊದಲ ಶಿಸ್ತಿನ ಕ್ರಮ ಜರುಗಿಸಿದೆ.

 

ತಪ್ಪು ಮಾಡಿದ ದೊಡ್ಡವರನ್ನು ಬಿಟ್ಟು ಚಿಕ್ಕವರನ್ನು ಬಲಿ ಹಾಕಿದರೆ ಏನಾದರೂ ಪ್ರಯೋಜನ ಆದೀತೇ? ಬಲಿಷ್ಠರ ವಿರುದ್ಧ ಬಳಸಿದ ಅಸ್ತ್ರಕ್ಕೆ ಇರುವ ಬೆಲೆ ದುರ್ಬಲರ ವಿರುದ್ಧ ಬಳಸಿದ ಅಸ್ತ್ರಕ್ಕೆ ಇರುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry