ಶುಕ್ರವಾರ, ಡಿಸೆಂಬರ್ 6, 2019
26 °C

ಬದಲಾಯಿತು ಬಿಡುಗಡೆಯ ದಾರಿ

ಗಂಗಾಧರ ಮೊದಲಿಯಾರ್
Published:
Updated:
ಬದಲಾಯಿತು ಬಿಡುಗಡೆಯ ದಾರಿ

ಕನ್ನಡ ಚಿತ್ರರಂಗದ ಟ್ರೆಂಡ್ ಬದಲಾಗುತ್ತಿದೆಯೇ? ಇಂದಿನ ಬೆಳವಣಿಗೆಗಳನ್ನು ಗಮನಿಸಿದರೆ ಹೌದು ಎನ್ನಿಸುತ್ತದೆ. ಕುಸಿತದ ಹಾದಿಯಲ್ಲಿರುವ ಚಿತ್ರರಂಗವನ್ನು ಉಳಿಸುವ, ಲಾಭ ಮಾಡಲೇಬೇಕೆಂಬ ಧಾವಂತ ಈಗ ಚಿತ್ರರಂಗದಲ್ಲಿ ಎದ್ದು ಕಾಣುತ್ತಿದೆ. 170 ಚಿತ್ರಗಳು ತಯಾರಿಕೆಯ ಹಂತದಲ್ಲಿವೆ. ವಾರಕ್ಕೆ ಮೂರು ಚಿತ್ರಗಳು ಬಿಡುಗಡೆಯಾಗುತ್ತಿವೆ. ನಮ್ಮ ಚಿತ್ರಗಳಿಗೆ ನಮ್ಮ ಚಿತ್ರಗಳೇ ತೊಡರುಗಾಲಾಗುವುದಕ್ಕೆ ಮುನ್ನ ಇಂತಹ ಕ್ರಮಗಳು ಬೇಕು.ಚಲನಚಿತ್ರಗಳು ಶತದಿನ, ರಜತಮಹೋತ್ಸವ ಆಚರಿಸಬೇಕು, ದಾಖಲೆ ನಿರ್ಮಿಸಬೇಕು ಎನ್ನುವ ಎಲ್ಲ ಸಾಂಪ್ರದಾಯಿಕ ಪದ್ಧತಿಗಳಿಗೆ ಚಿತ್ರರಂಗ ಈಗ ತಿಲಾಂಜಲಿ ನೀಡಿದೆ. ಮೊದಲು ಮೈಸೂರು ಪ್ರಾಂತ್ಯ, ಹುಬ್ಬಳ್ಳಿ, ಹೈದರಾಬಾದ್ ಕರ್ನಾಟಕ ಹೀಗೆ ಬೇರೆ ಬೇರೆ ಪ್ರಾಂತ್ಯಗಳಿಗೆ ಬೇರೆಬೇರೆ ಸಮಯದಲ್ಲಿ ಚಲನಚಿತ್ರಗಳನ್ನು ಬಿಡುಗಡೆ ಮಾಡುವುದರ ಹಿಂದೆ ಪ್ರಿಂಟ್ ಖರ್ಚನ್ನು ಉಳಿಸುವ ಇರಾದೆ ಇತ್ತು. ಬೆಳವಣಿಗೆಯ ಹಾದಿಯಲ್ಲಿ ಪೈರಸಿ ಭೂತ ಬಂದು ಕುಳಿತು, ಹೊಸ ಚಿತ್ರಗಳನ್ನು ಹತ್ತು ರೂಪಾಯಿಯ ಬೀದಿ ಸರಕನ್ನಾಗಿಸಿತು.ಹಿಂದಿ, ತಮಿಳು, ತೆಲುಗು ಚಿತ್ರಗಳಂತೂ ಬೇರೆ ರಾಜ್ಯದಲ್ಲಿ ಬಿಡುಗಡೆಯಾಗುವ ಮುನ್ನವೇ ಕರ್ನಾಟಕದ ಬೀದಿಗಳಲ್ಲಿ ಚೆಲ್ಲಾಡತೊಡಗಿದವು. ಅದಕ್ಕಾಗಿ ಬೇರೆ ರಾಜ್ಯದಲ್ಲಿ ಗೂಂಡಾ ಕಾಯ್ದೆಯನ್ನೂ ತಂದಾಯಿತು. ನಕಲಿ ಸಿ.ಡಿ ತಯಾರಕರ ಕೇಂದ್ರಗಳ ಮೇಲೆ ದಾಳಿಯನ್ನೂ ನಡೆಸಲಾಯಿತು. ಚಿತ್ರಮಂದಿರಗಳ ಮೇಲೆ ಬಿಗಿ ಕಾವಲು ಹಾಕಲಾಯಿತು. ಸಿನಿಮಾಗಳ ನಡುವೆ ನಂಬರ್ ಹಾಕುವ ಪದ್ಧತಿಯೂ ಬಂತು. ಯಾರು ಏನೇ ಮಾಡಿದರೂ ಕಳ್ಳರು ರಂಗೋಲಿ ಕೆಳಗೆ ನುಸುಳಿ ಚಿತ್ರ ನಿರ್ಮಾಪಕರನ್ನು ಪಾಪರ್ ಮಾಡಿದರು.ಇಂತಹ ಕಳ್ಳಾಟಗಳಿಂದಾಗಿ ಕನ್ನಡ ಚಿತ್ರಗಳು ನೆಲಕಚ್ಚಲಾರಂಭಿಸಿದವು ಎನ್ನುವುದು ಚಿತ್ರ ನಿರ್ಮಾಪಕರ ಅಭಿಪ್ರಾಯ. ಗುಣಮಟ್ಟದ ಮಾತಿಗಿಂತ ಚಿತ್ರಗಳನ್ನು ಚಿತ್ರಮಂದಿರದಲ್ಲಿ ಉಳಿಸಿಕೊಳ್ಳುವುದೇ ಇಂದಿನ ಆದ್ಯತೆ ಆಗಿದೆ. ಕನ್ನಡ ಚಿತ್ರಗಳಿಗೆ ಮೊದಲ ವಾರವೇ ನಕಲಿ ಸಿ.ಡಿ ಹಾವಳಿ ಕಂಡು ಬರುವುದು ಅಪರೂಪ. ಆದರೆ ಚಿತ್ರದ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಮೂಡುವುದಕ್ಕೆ ಬಿಡುಗಡೆಯಾದ ಮೊದಲದಿನವೇ ಸಾಕು. ಚಿತ್ರ ಬಿಡುಗಡೆಯಾಗದ ಪ್ರಾಂತ್ಯಗಳಲ್ಲಿ ಇದು ತೊಡಕಾಗುತ್ತದೆ. ಇಂತಹ ವಿರುದ್ಧ ಅಲೆಗಳಿಂದ ಕನ್ನಡ ನಿರ್ಮಾಪಕರು ತತ್ತರಿಸಲಾರಂಭಿಸಿದ್ದರು. ಅಂತಹ ದಿನಗಳಲ್ಲಿ ಬೆಳಕಿನಂತೆ ಮೂಡಿಬಂದಿದೆ ಸ್ಯಾಟಲೈಟ್ ಮೂಲಕ ಪ್ರದರ್ಶನ.

ಅದಕ್ಕಾಗಿ ಕಳೆದ ಕೆಲವು ತಿಂಗಳಿಂದ ಬಿಡುಗಡೆಯ ಬದಲಾವಣೆ ಕಂಡುಬರುತ್ತಿದೆ. ‘ಜಾಕಿ’ ಚಿತ್ರವನ್ನು ಏಕಕಾಲಕ್ಕೆ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸ್ಯಾಟಲೈಟ್ ಮೂಲಕ ಬಿಡುಗಡೆ ಮಾಡುವ ಪ್ರಯೋಗ ಯಶಸ್ವಿಯಾದದ್ದೇ ತಡ ಇನ್ನುಳಿದವರೂ ಅದೇ ಹಾದಿ ಹಿಡಿಯಲಾರಂಭಿಸಿದ್ದಾರೆ. ಈ ಬೆಳವಣಿಗೆ ಕೋಟಿಕೋಟಿ ಚೆಲ್ಲಿದ ಚಿತ್ರದ ಬಂಡವಾಳವನ್ನು ಮೂರೇ ವಾರದಲ್ಲಿ ಹೇಗೆ ಹಿಂತಿರುಗಿ ಪಡೆಯಬಹುದು ಎನ್ನುವುದನ್ನು ತೋರಿಸಿಕೊಟ್ಟಿತು.ಅಂತಹ ಹೊಸ ಮಾರ್ಗದಲ್ಲಿ ವಿತರಕರು ಈಗ ನುಗ್ಗಿದ್ದಾರೆ. ‘ಸೂಪರ್’, ‘ಮೈಲಾರಿ’, ‘ಬಾಸ್’ ಈ ಮೂರೂ ಚಿತ್ರಗಳು ‘ಜಾಕಿ’ಯ ಮಾರ್ಗವನ್ನೇ ಹಿಡಿದವು. ‘ಸೂಪರ್’ 113, ‘ಮೈಲಾರಿ’ 129 ಮತ್ತು ‘ಬಾಸ್’ 132 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಯಶಸ್ಸು ಕಂಡಿವೆ. ಈ ಮೂರೂ ಚಿತ್ರಗಳ ಗುಣಮಟ್ಟವನ್ನು, ಪ್ರೇಕ್ಷಕರನ್ನು ಇವು ನಿಜವಾಗಿಯೂ ರಂಜಿಸಿದವೇ ಎನ್ನುವುದನ್ನು ಪ್ರತ್ಯೇಕವಾಗಿ ಪಕ್ಕದಲ್ಲಿ ತೆಗೆದಿಟ್ಟರೆ, ಚಿತ್ರಗಳು ಹಣ ದೋಚುವಲ್ಲಿ ಯಶಸ್ವಿಯಾದವು. ಮೊದಲದಿನವೇ ಚಿತ್ರ ನೋಡಬೇಕು ಎನ್ನುವ ಪ್ರೇಕ್ಷಕನ ಆಸೆಗೆ ಕನ್ನಹಾಕಿದವು. ಇಲ್ಲಿಗೆ ವಿತರಕ, ನಿರ್ಮಾಪಕ ಸೇಫ್.ಹಿಂದಿ, ತೆಲುಗು, ತಮಿಳು ಚಿತ್ರಗಳು ಈ ಹಾದಿ ಹಿಡಿದು ಹಲವು ವರ್ಷಗಳೇ ಆದವು. ರಜನೀಕಾಂತ್ ಅಭಿನಯದ ಇತ್ತೀಚಿನ ಚಿತ್ರ ‘ಎಂದಿರನ್’ ಉದಾಹರಣೆಯನ್ನೇ ನೋಡಿ. ಚಿತ್ರದ ನಾಲ್ಕು ಸಾವಿರ ಪ್ರಿಂಟ್‌ಗಳು ದೇಶದಾದ್ಯಂತ ತೆರೆಕಂಡವು. ಜೊತೆಗೆ ಸ್ಯಾಟಲೈಟ್ ಶೋ ಕೂಡ ಇತ್ತು. ಚಿತ್ರಕ್ಕೆ 200 ಕೋಟಿ ಹೂಡಿ ಹಣ ವಾಪಸು ತೆಗೆಯುವುದು ಹೇಗೆ ಎಂಬುದನ್ನೂ ವಿತರಕರು ಚಿಂತಿಸಿದ್ದರ ಫಲ ಚಿತ್ರ ಮೊದಲವಾರವೇ ದಾಖಲೆ ಯಶಸ್ಸು ಕಂಡಿತು. ಇನ್ನುಮುಂದೆ ಚಿತ್ರ ನಿರ್ಮಿಸುವುದು ದೊಡ್ಡ ಕೆಲಸವಲ್ಲ. ಅದನ್ನು ತೆರೆ ಕಾಣಿಸುವುದೂ, ಹಣ ವಾಪಸು ಹೇಗೆ ಪಡೆಯುವುದು ಎನ್ನುವುದನ್ನೂ ಕಲಿಯಬೇಕಾಗುತ್ತದೆ.ಈ ರೀತಿ ಒಮ್ಮೆಲೆ 130 ಚಿತ್ರಮಂದಿರಗಳಲ್ಲಿ ಚಲನಚಿತ್ರವೊಂದನ್ನು ಬಿಡುಗಡೆ ಮಾಡುವುದರಿಂದ ಏನು ಪ್ರಯೋಜನ?

ಪೈರಸಿ ತಡೆಯಲು ಹೀಗೆ 130 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಚಿತ್ರವೊಂದನ್ನು ಬಿಡುಗಡೆ ಮಾಡುವುದು ಉತ್ತಮ ಉಪಾಯ ಎನ್ನುವುದು ಚಲನಚಿತ್ರ ವಾಣಿಜ್ಯ ಮಂಡಳಿಯ ನಿಲುವೂ ಆಗಿದೆ. ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾದ್ದು ಚಲನಚಿತ್ರ ನಿರ್ಮಾಪಕರ ಕರ್ತವ್ಯ. ಬದಲಾದ ತಂತ್ರಜ್ಞಾನಕ್ಕೆ ಕೊರಳೊಡ್ಡುವುದರಿಂದ ಲಾಭವೇ ಇದೆ. ಈಗ ನೂರಾರು ಪ್ರಿಂಟ್ ಹಾಕುವ ಶ್ರಮ ತಪ್ಪಿದೆ. ಹಣವೂ ಉಳಿಯುತ್ತದೆ. ಕರ್ನಾಟಕದ ಬಹುತೇಕ ಜಿಲ್ಲೆಗಳ ಚಿತ್ರಮಂದಿರಗಳು ಸ್ಯಾಟಲೈಟ್ ನೆಟ್‌ವರ್ಕ್‌ಗೆ ಒಳಪಟ್ಟಿರುವುದರಿಂದ ಏಕಕಾಲಕ್ಕೆ ಚಲನಚಿತ್ರ ಪ್ರದರ್ಶನ ಒಂದೇ ಚಿಪ್ ಮೂಲಕ ಪ್ರಸಾರವಾಗುತ್ತದೆ. ಹೀಗಾಗಿ ನಿರ್ಮಾಪಕ ಒಂದೇ ಪ್ರಿಂಟ್‌ನಿಂದ ರಾಜ್ಯದಾದ್ಯಂತ 139 ಚಿತ್ರಮಂದಿರಗಳಲ್ಲಿ ತನ್ನ ಚಿತ್ರವನ್ನು ಬಿಡುಗಡೆ ಮಾಡಿದಂತಾಗುತ್ತದೆ. ಎರಡನೇ ವಾರದಲ್ಲೇ ಚಿತ್ರದ ಭವಿಷ್ಯವೇನು ಎಂಬುದು ನಿರ್ಧಾರವಾಗುತ್ತದೆ. ಮೂರನೇ ವಾರಕ್ಕೆ ಹಾಕಿದ ಬಂಡವಾಳ ವಾಪಸು ಬಂದಿರುತ್ತದೆ. ನಿರ್ಮಾಪಕನೊಬ್ಬ ಬದುಕಿಕೊಳ್ಳುತ್ತಾನೆ.ಬದಲಾದ ಪರಿಸ್ಥಿತಿಗೆ ಹೊಂದಿಕೊಳ್ಳಲೇಬೇಕು ಎನ್ನುವುದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಬಸಂತ್‌ಕುಮಾರ್ ಪಾಟೀಲ್ ಅವರ ಅಭಿಪ್ರಾಯ. ಮೈಸೂರಿನಲ್ಲಿ ಇತ್ತೀಚೆಗೆ ಸಿ.ಡಿ ಅಂಗಡಿಗಳ ಮೇಲೆ ದಾಳಿ ನಡೆಸಿದಾಗ ಹೊಅ ಕನ್ನಡ ಚಿತ್ರಗಳ ಸಿ.ಡಿ.ಗಳೇ ಸಿಕ್ಕವು. ಏಕಕಾಲದಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದರಿಂದ ಪೈರಸಿ ಭೂತವನ್ನು ದೂರ ಸರಿಸಬಹುದು ಎನ್ನುವುದು ಅವರ ಅಭಿಪ್ರಾಯ.ಸ್ಯಾಟಲೈಟ್ ಮೂಲಕ ಚಿತ್ರಗಳನ್ನು ಬಿಡುಗಡೆ ಮಾಡುವುದರಿಂದ ನಕಲಿ ಕ್ಯಾಸೆಟ್ ಮಾಡುವುದನ್ನು ತಡೆಯಬಹುದು. ಜತೆಗೆ ನಿರ್ಮಾಪಕನೇ ಮೂರೇ ವಾರದಲ್ಲಿ ಟಿವಿಗಳಿಗೆ ಹೊಸ ಚಿತ್ರವನ್ನು ಮಾರಿ ಸಾಲ ತೀರಿಸಬಹುದು. ಸಿ.ಡಿ ರೂಪದಲ್ಲಿ ಕೂಡ ತನ್ನ ಚಿತ್ರವನ್ನು ಮಾರುಕಟ್ಟೆಗೆ ತರಬಹುದಾದ ಸಾಧ್ಯತೆ ಈ ಪ್ರಯತ್ನದಿಂದ ಹೊರಹೊಮ್ಮಿದೆ ಎಂದು ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ಅಭಿಪ್ರಾಯಪಡುತ್ತಾರೆ. ಚಿತ್ರರಂಗದ ಬಹುತೇಕರು ಇದನ್ನು ಆಶಾದಾಯಕ ಬೆಳವಣಿಗೆ ಎಂದೇ ಕರೆಯುತ್ತಿದ್ದಾರೆ.ಹಿಂದಿ ಚಿತ್ರಗಳು ಈಗ ಎರಡುಸಾವಿರ ಪ್ರಿಂಟ್‌ಗಳ ರೂಪದಲ್ಲಿ ಹೊರಬರುತ್ತವೆ. ಅದರೊಂದಿಗೇ ನಿರ್ಮಾಪಕರು ಸಾಗರದಾಚೆಗಿನ ಮಾರುಕಟ್ಟೆಯ ಮೇಲೆ ಕಣ್ಣಿಟ್ಟು ಏಕಕಾಲದಲ್ಲಿ ಸಿ.ಡಿ.ಗಳನ್ನೂ ಬಿಡುಗಡೆ ಮಾಡುತ್ತಾರೆ. ಮೂರೇ ವಾರದಲ್ಲಿ ಆ ಚಿತ್ರ ಟಿವಿ ಚಾನಲ್‌ಗಳಿಗೆ ಮಾರಾಟವಾಗಿ ಕಿರುತೆರೆಯಲ್ಲಿ ಪ್ರಸಾರವೂ ಆಗಿಬಿಡುತ್ತದೆ. ಆರೇ ವಾರದಲ್ಲಿ ಒಂದು ಚಿತ್ರದ ಎಲ್ಲ ರೀತಿಯ ವ್ಯವಹಾರವೂ ನಡೆದುಹೋಗುತ್ತದೆ. ಸಿನಿಮಾ ಬಿಸಿನೆಸ್ ಈಗ ಅಷ್ಟೊಂದು ಕ್ಷಿಪ್ರಗತಿಯಲ್ಲಿ ನಡೆಯುತ್ತಿದೆ. ಕನ್ನಡ ಚಿತ್ರರಂಗವೂ ಈ ಕ್ಷಿಪ್ರವೇಗ ಪಡೆದೀತೇ?ಪುನೀತ್, ಉಪೇಂದ್ರ, ದರ್ಶನ್, ಶಿವರಾಜ್ ಚಿತ್ರಗಳಿಗೆ ಈ ರೀತಿ ಏಕಕಾಲದ ಬಿಡುಗಡೆ ಭಾಗ್ಯ ದೊರಕಬಹುದು. ‘ಮೊದಲಾ ಸಲ’, ‘ಬಿಂದಾಸ್ ಹುಡುಗಿ’, ‘ಒಲವೇ ಮಂದಾರ’ ಚಿತ್ರಗಳ ಗತಿ ಏನು? ಈ ಹೊಸ ನಿಯಮ ಸಣ್ಣ ನಿರ್ಮಾಪಕರಿಗೆ ಮಾರಕವೇ? ಚಿಂತಿಸಬೇಕಾದ ವಿಷಯ.ಪಕ್ಕದ ರಾಜ್ಯಗಳಲ್ಲಿ ಚಿತ್ರಮಂದಿರಗಳು ಜಾಸ್ತಿ ಇವೆ. ಅಲ್ಲಿ ಇಂತಹ ಪ್ರಯೋಗ ಯಶಸ್ವಿಯಾಗಿದೆ. ನಮ್ಮ ರಾಜ್ಯದಲ್ಲಿ ದಿನಕ್ಕೊಂದು ಚಿತ್ರಮಂದಿರ ಬಾಗಿಲು ಹಾಕಿಕೊಳ್ಳುತ್ತಿದೆ. ಇರುವ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರವೇ ಮೇಲುಗೈಯಾಗುತ್ತದೆ. ತೆರಿಗೆ ಹೊರೆ, ದುಬಾರಿ ಬಾಡಿಗೆಯಿಂದಾಗಿ ಸಣ್ಣ ನಿರ್ಮಾಪಕರು ಸಂಕಟಕ್ಕೊಳಗಾಗಿದ್ದಾರೆ. ಸ್ಯಾಟಲೈಟ್‌ನವರ ಕೈಯಲ್ಲಿ ಚಿತ್ರಮಂದಿರವನ್ನು ಕೊಟ್ಟು, ಸಿನಿಮಾ ಪ್ರಿಂಟನ್ನೂ ಕೊಟ್ಟು ದೊಡ್ಡ ನಿರ್ಮಾಪಕ ಬದುಕಿಕೊಳ್ಳಬಹುದು. ಸಣ್ಣ ನಿರ್ಮಾಪಕನ ಉಸಿರೇ ನಿಂತು ಹೋಗಬಹುದು.

ಪ್ರತಿಕ್ರಿಯಿಸಿ (+)