ಸೋಮವಾರ, ಮಾರ್ಚ್ 30, 2020
19 °C

ಬದಲಾವಣೆಯ ಹೊಸ್ತಿಲಲ್ಲಿ ದೇಶಿ ಕ್ರಿಕೆಟ್‌

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಬದಲಾವಣೆಯ ಹೊಸ್ತಿಲಲ್ಲಿ ದೇಶಿ ಕ್ರಿಕೆಟ್‌

ಐದು ರಾಜ್ಯಗಳ ಚುನಾವಣಾ ಫಲಿತಾಂಶದ ಸಮಗ್ರ ಚಿತ್ರಣ ಓದುವ ಕುತೂಹಲದಿಂದ ನೀವು ಬೆಳಗೆದ್ದು ದಿನಪತ್ರಿಕೆ ಕೈಗೆ ತೆಗೆದುಕೊಂಡರೆ, ಕ್ರಿಕೆಟ್‌ನಲ್ಲಿ ಆಟಗಾರರು ಪರಸ್ಪರ ರೇಗಿಸುವ ವಾದವಿವಾದದಲ್ಲಿ ತೊಡಗಿರುವುದರ ಬಗ್ಗೆ ನಿಮ್ಮ ಗಮನ ಸೆಳೆಯಲು ನಾನಿಲ್ಲಿ ಉದ್ದೇಶಿಸಿರುವೆ. ಸದ್ಯಕ್ಕೆ ಭಾರತದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ–ಭಾರತ ಕ್ರಿಕೆಟ್‌ ಸರಣಿಯು ತಪ್ಪು ಕಾರಣಗಳಿಗಾಗಿ ಮುಖಪುಟದಲ್ಲಿ ಸುದ್ದಿ ಮಾಡುತ್ತಿದೆ.

ಸಭ್ಯ, ಸ್ನೇಹಮಯಿ ಸ್ವಭಾವ ಮತ್ತು ಉತ್ತಮ ನಡತೆಯ ಹಿನ್ನೆಲೆಯಿಂದ ಬಂದಿದ್ದ ಆಟಗಾರರು ಆಡುವವರೆಗೂ ನಮ್ಮ ಕ್ರಿಕೆಟ್‌, ಸದ್ಯಕ್ಕೆ ಬಾಂಗ್ಲಾದೇಶದ ಕ್ರಿಕೆಟ್‌ ತಂಡ ಇರುವಂತೆ ಇತ್ತು. ಸಣ್ಣ ಪಟ್ಟಣಗಳಿಂದ ಬಂದಿದ್ದ ವಿನಯಶೀಲ, ಉತ್ತಮ ಹುಡುಗರು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದ ಆಟಗಾರರ ಸಂಖ್ಯೆ ಕಡಿಮೆಯಾಗಿ, ‘ಕೆಟ್ಟ ಸ್ವಭಾವ’ದ ಹಣೆಪಟ್ಟಿ ಹಚ್ಚಿಕೊಂಡ ಆಟಗಾರರ ಸಂಖ್ಯೆ ಈಗ ಹೆಚ್ಚುತ್ತಿದೆ. 25 ವರ್ಷಗಳಲ್ಲಿ ಆಟದ ಗುಣಮಟ್ಟವೂ ಗಮನಾರ್ಹವಾಗಿ ಸುಧಾರಣೆ ಕಂಡಿದೆ.

1992ರ ಮುಂಚಿನ ಕ್ರಿಕೆಟ್‌ ತಾರೆಯರಾದ ಗಾವಸ್ಕರ್‌, ವಿಶ್ವನಾಥ್‌ ಮತ್ತು ಕಪಿಲ್‌ ದೇವ್ ಅವರು ಭಾರತದ ಸಾರ್ವಕಾಲೀನ ಶ್ರೇಷ್ಠ ಆಟಗಾರರ ತಂಡದಲ್ಲಿ ಸ್ಥಾನ ಗಿಟ್ಟಿಸುವ ಅರ್ಹತೆ ಹೊಂದಿದ್ದಾರೆ. ಈ ಮೂವರ ಪೈಕಿ ಅತ್ಯಂತ ಹಳಬರಾಗಿರುವ ವಿಶ್ವನಾಥ್‌ ಅವರು 1969ರಲ್ಲಿ ಮೊದಲ ಬಾರಿಗೆ ಕ್ರಿಕೆಟ್‌ ಲೋಕಕ್ಕೆ ಪಾದಾರ್ಪಣೆ ಮಾಡಿದ್ದರು. 1932ರಿಂದ 1969ರ ಮಧ್ಯೆ ನಡೆದ 115 ಟೆಸ್ಟ್‌ಗಳಲ್ಲಿ ಆಡಿದ ಆಟಗಾರರ ಪೈಕಿ ಯಾರೊಬ್ಬರೂ ಇಂತಹ ಸಾಧನೆಗೆ ಅರ್ಹರಾಗಿಲ್ಲ.

ಈ ಹಿಂದಿನ ನಾಲ್ವರು ಸ್ಪಿನ್‌ ಮಾಂತ್ರಿಕರಾದ ಬಿಷನ್‌ಸಿಂಗ್ ಬೇಡಿ, ಇ.ಪ್ರಸನ್ನ, ಬಿ.ಎಸ್‌.ಚಂದ್ರಶೇಖರ್‌ ಮತ್ತು ಎಸ್.ವೆಂಕಟರಾಘವನ್‌ ಅವರು ಪ್ರತಿಭಾವಂತ ಆಟಗಾರರಾಗಿದ್ದರು.  ಸಮಕಾಲೀನ ನಾಲ್ವರು  ಬೌಲರುಗಳಾದ ಅನಿಲ್‌ ಕುಂಬ್ಳೆ, ಹರಭಜನ್‌ ಸಿಂಗ್‌, ರವಿಚಂದ್ರನ್‌ ಅಶ್ವಿನ್‌ ಮತ್ತು  ರವೀಂದ್ರ ಜಡೇಜಾ ಅವರು ಈಗ ಹಿಂದಿನ ಬೌಲರ್‌ಗಳ ಸಾಧನೆ ಮರೆಯಾಗುವಂತೆ ಮಾಡಿದ್ದಾರೆ.

ಕ್ರಿಕೆಟ್‌ಗೆ ಸಂಬಂಧಿಸಿದಂತೆ ನನಗೆ ಇಬ್ಬರು ಅತ್ಯುತ್ತಮ ಜತೆಗಾರರಿದ್ದಾರೆ. ದೇಶಿ ಕ್ರಿಕೆಟ್‌ನ ಅಂಕಿಅಂಶ ತಜ್ಞ ಮೋಹನದಾಸ್‌ ಮೆನನ್‌ ಮತ್ತು ಎರಡನೆಯದಾಗಿ, ಕ್ರಿಕೆಟ್‌ಗೆ ಸಂಬಂಧಿಸಿದ ಹೊಸ ಪುಸ್ತಕದಿಂದ ನನ್ನ ಕ್ರಿಕೆಟ್‌ ತಿಳಿವಳಿಕೆ ಗಮನಾರ್ಹವಾಗಿ ವಿಸ್ತರಿಸಿದೆ. ಹಾರ್ಪರ್‌ ಕೊಲಿನ್ಸ್‌ ಪ್ರಕಾಶನದ, ಮಾಜಿ ಟೆಸ್ಟ್‌ ಆಟಗಾರ ಆಕಾಶ್‌ ಚೋಪ್ರಾ ಅವರು ಬರೆದಿರುವ ‘ನಂಬರ್ಸ್‌ ಡು (ನಾಟ್‌) ಲೈ’ ಪುಸ್ತಕದಲ್ಲಿನ ವಿವರಗಳು ನನಗೆ ಹೆಚ್ಚು ಉಪಯುಕ್ತವಾಗಿ ಕಂಡಿವೆ.

ಕ್ರಿಕೆಟ್‌ ಕುರಿತ ಅಧಿಕೃತ ಅಂಕಿಅಂಶಗಳಿಗೆ ನಾನು ಮೆನನ್‌ ಅವರನ್ನು ಹೆಚ್ಚಾಗಿ ನೆಚ್ಚಿಕೊಂಡಿರುವೆ.

ಆಟಗಾರನೊಬ್ಬನ ಬಗ್ಗೆ ದಂತಕಥೆ ಹೇಳುವ ಅಥವಾ ಹಳೆಯದನ್ನು ನೆನಪಿಸಿಕೊಂಡು ಆತನನ್ನು ದೊಡ್ಡವನನ್ನಾಗಿ ಮಾಡುವುದಕ್ಕಿಂತ ಹೆಚ್ಚಿನದನ್ನು ಈ ಪುಸ್ತಕ ಹೇಳುತ್ತದೆ. ಕ್ರಿಕೆಟ್‌ ತಂಡದ ಪ್ರಭಾವ ಸೂಚ್ಯಂಕದ ಕುರಿತು ಮಾಜಿ ಟೆಸ್ಟ್ ಆಟಗಾರರಾಗಿರುವ, ಸದ್ಯಕ್ಕೆ ಕ್ರಿಕೆಟ್‌ ವೀಕ್ಷಕ ವಿವರಣೆಗಾರರಾಗಿರುವ  ಆಕಾಶ್‌ ಚೋಪ್ರಾ ಅವರು ಈ ಪುಸ್ತಕ ರಚಿಸಿದ್ದಾರೆ.

ಭಾರತವು 1932ರಿಂದ 1967ರವರೆಗಿನ ಅವಧಿಯಲ್ಲಿ  ತನ್ನ ಮೊದಲ 100 ಟೆಸ್ಟ್‌ಗಳನ್ನು ಆಡಿತ್ತು. 40 ಪಂದ್ಯಗಳಲ್ಲಿ ಸೋಲು ಕಂಡು 10ರಲ್ಲಷ್ಟೇ ಗೆಲುವು ಸಾಧಿಸಿತ್ತು. ಅಂದಿನ ನಮ್ಮ ಕ್ರಿಕೆಟ್‌ ಸಾಧನೆಯನ್ನು  ಸದ್ಯಕ್ಕೆ ಬಾಂಗ್ಲಾದೇಶದ ಸಾಧನೆಗೆ ಹೋಲಿಸಬಹುದು. 2000ದಿಂದೀಚೆಗೆ ಟೆಸ್ಟ್ ಕ್ರಿಕೆಟ್‌ ಆಡುತ್ತಿರುವ ಬಾಂಗ್ಲಾದೇಶವು ಇದುವರೆಗೆ 98 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಕೇವಲ 8ರಲ್ಲಿ ಗೆಲುವು ಕಂಡಿದೆ. 

ದೇಶಿ ಕ್ರಿಕೆಟ್‌ಗೆ ಹೊಸ ಮೆರುಗು ನೀಡಿದ ಖ್ಯಾತಿಗೆ ಪಾತ್ರರಾದವರಲ್ಲಿ, ವಿನೂ ಮಂಕಡ್‌, ಲಾಲಾ ಅಮರನಾಥ, ಪಾಲಿ ಉಮ್ರಿಗಾರ್‌, ಪಂಕಜ್‌ ರಾಯ್‌, ಸಿ.ಕೆ.ನಾಯ್ಡು, ಸುಭಾಷ್‌ ಗುಪ್ತೆ, ನಾರಿ ಕಾಂಟ್ರ್ಯಾಕ್ಟರ್‌, ಬಾಪು ನಾಡಕರ್ಣಿ, ಪಟೌಡಿ, ಚಂದು ಬೋರ್ಡೆ  ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. 

ವರ್ಣಭೇದ ನೀತಿ ಆಚರಣೆ ಕಾರಣಕ್ಕೆ ದಕ್ಷಿಣ ಆಫ್ರಿಕಾದ ಮೇಲೆ ನಿಷೇಧ ವಿಧಿಸಲಾಗಿತ್ತು. ಹೀಗಾಗಿ 1967ರಿಂದ 1991ರ ನಡುವಣ 25 ವರ್ಷಗಳಲ್ಲಿ ಭಾರತದ ಗೆಲುವಿನ ಶೇಕಡ ಪ್ರಮಾಣ ದುಪ್ಪಟ್ಟುಗೊಂಡಿತ್ತು. 174 ಪಂದ್ಯಗಳಲ್ಲಿ 34 ಗೆಲುವು ಸಾಧಿಸಲಾಗಿತ್ತು. ನಂತರದ 25 ವರ್ಷಗಳಲ್ಲೂ (1992ರಿಂದ 2017) ಇದು ಮತ್ತೆ ದುಪ್ಪಟ್ಟುಗೊಂಡಿದೆ.  ಇಲ್ಲಿಯವರೆಗೆ ಭಾರತದ ಗೆಲುವಿನ ಪ್ರಮಾಣ ಶೇ 39.2 ರಷ್ಟಿದೆ. ಇತ್ತೀಚಿನ ವರ್ಷಗಳಲ್ಲಿ ಭಾರತ ಕ್ರಿಕೆಟ್‌ ತಂಡದ ಸೋಲಿನ ಪ್ರಮಾಣ ಕಡಿಮೆಯಾಗುತ್ತ ಬಂದಿದೆ.

ಭಾರತ ಕ್ರಿಕೆಟ್‌ ತಂಡದಲ್ಲಿನ ಈ ಅದ್ಭುತ ಸುಧಾರಣೆಗೆ ಇನ್ನೊಂದು ರಸವತ್ತಾದ ತಿರುವು ಕೂಡ ಇದೆ. 2000ದ ನವೆಂಬರ್‌ನಲ್ಲಿ ನಮ್ಮ ಕ್ರಿಕೆಟ್‌ನ ‘ಬ್ಯಾಡ್‌ ಬಾಯ್‌’ ಖ್ಯಾತಿಯ ಸೌರವ್‌ ಗಂಗೂಲಿ ಅವರು ತಂಡದ ನಾಯಕತ್ವ ವಹಿಸಿಕೊಂಡಿದ್ದರು.  ನಂತರದ 177 ಟೆಸ್ಟ್‌ಗಳಲ್ಲಿ ಗೆಲುವಿನ ದಾಖಲೆ ಪ್ರಮಾಣವು ಸುಧಾರಣೆ ಕಾಣುತ್ತಲೇ ಹೋಯಿತು. ಸೋಲುಗಳ ಸಂಖ್ಯೆ ಕಡಿಮೆಯಾಗ ತೊಡಗಿತ್ತು. ಅಲ್ಲಿಂದಾಚೆಗೆ ನಮ್ಮ ಗೆಲುವಿನ ಪ್ರಮಾಣವು ಶೇ 43.5ರಷ್ಟಾಯಿತು ಎಂದು ಮೆನನ್‌ ನನಗೆ ನೆನಪಿಸಿದ್ದರು. ನಿಜಕ್ಕೂ ಅದೊಂದು ಪ್ರಶಂಸನೀಯ ಸಾಧನೆಯಾಗಿತ್ತು. ನಮಗಿಂತ ಆಸ್ಟ್ರೇಲಿಯಾ (ಶೇ 60.6) ಮತ್ತು ದಕ್ಷಿಣ ಆಫ್ರಿಕಾ ಮಾತ್ರ (ಶೇ 49)  ಮುಂಚೂಣಿಯಲ್ಲಿದ್ದವು. ನಮ್ಮ ಸಾಧನೆಯು ಇಂಗ್ಲೆಂಡ್‌, ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕಿಂತ ಹೆಚ್ಚಿನ ಮಟ್ಟದಲ್ಲಿತ್ತು.

ಗಂಗೂಲಿ ಅವರ ನಾಯಕತ್ವದ ದಿನಗಳಲ್ಲಿ ದೇಶಿ ಕ್ರಿಕೆಟ್‌ ಕೆಲ ಅಭಿರುಚಿಹೀನ ವಿವಾದಗಳಿಂದಲೂ ಗಮನ ಸೆಳೆದಿತ್ತು. ಇದಕ್ಕೆ ಅಂಕಿ ಅಂಶ ತಜ್ಞರ ಅಗತ್ಯವೇನೂ ಬೇಕಾಗಿಲ್ಲ. ಬೆಂಕಿ ಜತೆ ಸರಸವಾಡುವ ಗಂಗೂಲಿ  ಅವರ ಪ್ರವೃತ್ತಿ, ಆಸ್ಟ್ರೇಲಿಯಾದ ಆಟಗಾರರನ್ನು ತೆಗಳುವುದು, ಲಾರ್ಡ್ಸ್‌ನಲ್ಲಿ ಮೇಲಂಗಿ ತೆಗೆದು ಗಾಳಿಯಲ್ಲಿ ಬೀಸುತ್ತ ಬರಿಮೈಯಲ್ಲಿಯೇ ಸಂಭ್ರಮಿಸಿದ್ದನ್ನು ಹಿಂದಿನ ಆಟಗಾರರು ಟೀಕಿಸಿದ್ದರು.

ಒಂದೆಡೆ ಗಂಗೂಲಿ ಅವರು ಉತ್ತುಂಗಕ್ಕೆ ಏರುತ್ತಿದ್ದ ದಿನಗಳಲ್ಲಿಯೇ ಕಾಕತಾಳೀಯ ಎಂಬಂತೆ, ಭಾರತದ ಕ್ರಿಕೆಟ್‌ ತಂಡಕ್ಕೆ ಸಣ್ಣಪುಟ್ಟ ನಗರಗಳಿಂದ ಬಂದ, ಒರಟು ಸ್ವಭಾವದ, ಇಂಗ್ಲಿಷ್‌ ಮಾಧ್ಯಮದಲ್ಲಿ ಕಲಿಯದ, ಕಾಲೇಜ್‌ ಕಟ್ಟೆಯನ್ನೂ ಹತ್ತದ (ಸಚಿನ್‌ ತೆಂಡೂಲ್ಕರ್‌ ಸೇರಿದಂತೆ) ಆಟಗಾರರ ಸೇರ್ಪಡೆಯೂ ನಡೆದಿತ್ತು. ಮೇನಕಾ ಗಾಂಧಿ ಅವರು ಇತ್ತೀಚೆಗೆ ನೀಡಿರುವ ವಿವಾದಾತ್ಮಕ ಹೇಳಿಕೆಯಾದ ‘ಉಕ್ಕೇರಿ ಹರಿಯುವ ಹಾರ್ಮೋನ್‌ಗಳು’  ಆ ದಿನಗಳಲ್ಲಿ  ದೇಶಿ ಕ್ರಿಕೆಟ್‌ನಲ್ಲಿ ಕಂಡು ಬಂದಿದ್ದವು.

ಇದೇ ಅವಧಿಯಲ್ಲಿ ಭಾರತದ ಹಾಕಿ ತಂಡದ ಸಾಧನೆಯಲ್ಲಿಯೂ ಗಮನಾರ್ಹ ಬದಲಾವಣೆ ಕಂಡು ಬಂದಿತ್ತು. ರಮೇಶ್‌ ಕೃಷ್ಣನ್‌ ಅಥವಾ ವಿಜಯ್‌ ಅಮೃತ್‌ರಾಜ್‌ ಅವರ ಪ್ರತಿಭೆಯ  ಹತ್ತಿರಕ್ಕೂ ಬಾರದ ಟೆನ್ನಿಸ್‌ ಆಟಗಾರ ಲಿಯಾಂಡರ್‌ ಪೇಸ್‌ ಅವರು ಡೇವಿಸ್‌ ಕಪ್‌ ಸೇರಿದಂತೆ ವಿವಿಧ ಟೂರ್ನಿಗಳಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದರು.

ಇನ್ನೊಂದೆಡೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಉದ್ಯಮಿಗಳು ಅಥವಾ ರಾಜಕಾರಣಿಗಳ ಪ್ರಭಾವ ಹೆಚ್ಚಾಗಿ ಕಂಡು ಬರತೊಡಗಿತು. ಇಂಗ್ಲೆಂಡ್‌ ಜನರ ಬಗ್ಗೆ ವಿನೀತಭಾವ ಹೊಂದಿದ್ದ ರಾಜಮನೆತನದ ರಾಜಕುಮಾರರು ಮತ್ತು ಕೈಗಾರಿಕೋದ್ಯಮಿಗಳ ಹಿಡಿತ ಸಡಿಲಗೊಂಡಿತ್ತು.

ನಂತರದ ದಿನಗಳಲ್ಲಿ ಬಿಸಿಸಿಐನಲ್ಲಿ ಜಗಮೋಹನ್ ದಾಲ್ಮಿಯಾ ಮತ್ತು ಗಂಗೂಲಿ, ಐ.ಎಸ್‌.ಬಿಂದ್ರಾ, ಲಲಿತ್‌ ಮೋದಿ, ಎನ್‌.ಶ್ರೀನಿವಾಸನ್‌ ಅವರು ಮೇಲುಗೈ ಸಾಧಿಸತೊಡಗಿದ್ದರು.  ವಿಜಯ್‌ ಮರ್ಚಂಟ್‌, ರಾಜ್‌ ಸಿಂಗ್‌ ಡುಂಗರ್‌ಪುರ್‌, ಮಾಧವ್‌ ರಾವ್‌ ಸಿಂಧಿಯಾ, ಆರ್‌.ಪಿ.ಮೆಹ್ರಾ, ಫತೇಸಿಂಗ್‌ ರಾವ್‌ ಗಾಯಕವಾಡ್‌ ಮತ್ತು ಇವರೆಲ್ಲರಿಗಿಂತ ಹೆಚ್ಚು ಸುಸಂಸ್ಕೃತ ವ್ಯಕ್ತಿಯಾಗಿದ್ದ, ‘ವಿಜ್ಜಿ’ ಎಂದೇ ಖ್ಯಾತರಾಗಿದ್ದ ವಿಜಿನಗರಂನ ಮಹಾರಾಜ್‌ಕುಮಾರ್‌ ಅವರು ಕ್ರಿಕೆಟ್‌ ಆಡಳಿತಗಾರರಾಗಿ ಗಮನ ಸೆಳೆದಿದ್ದರು. ಭಾರತಕ್ಕೆ ಭೇಟಿ ನೀಡಿದ್ದ ಇಂಗ್ಲಿಷ್‌ ಕ್ರಿಕೆಟ್‌ ಆಟಗಾರರಿಗೆ ತಮ್ಮ ಅರಮನೆಗಳಲ್ಲಿ ಔತಣಕೂಟ ಏರ್ಪಡಿಸುವುದು ಆ ತಲೆಮಾರಿನವರಿಗೆ ತಮ್ಮ ಕ್ರಿಕೆಟ್‌ ಬದುಕಿನ ಅತ್ಯಂತ ಅವಿಸ್ಮರಣೀಯ ಘಟನೆಯಾಗಿರುತ್ತಿತ್ತು.

ಭಾರತದ ಕ್ರಿಕೆಟ್‌ ಲೋಕವು ಈಗ ಶ್ರದ್ಧೆಯಿಂದ ಆಟದಲ್ಲಿ ತೊಡಗಿಸಿಕೊಂಡ ಮತ್ತು ಅಹಂಕಾರ ಪ್ರದರ್ಶಿಸುವ ಕಾಲಘಟ್ಟದಲ್ಲಿ ಇದೆ. ಭಾರತದ ಕ್ರಿಕೆಟ್‌ನಲ್ಲಿ ಸದ್ಯಕ್ಕೆ ಕಂಡುಬಂದಿರುವ ಈ ಬಗೆಯ ಬದಲಾವಣೆಯು ಕ್ರಿಕೆಟ್‌ನ ಸಾಂಪ್ರದಾಯಿಕ ಮತ್ತು ಹಳೆಯ ಹುಲಿಗಳಾದ ಇಂಗ್ಲೆಂಡ್‌– ಆಸ್ಟ್ರೇಲಿಯಾಗಳಿಗೆ ಹಲವಾರು ವಿಭಿನ್ನ ಕಾರಣಗಳಿಗಾಗಿ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಮ್ಮ ಹಾಲಿ ಸ್ಪಿನ್‌ ಆಟಗಾರರು ಬೇಡಿ ಅಥವಾ ಪ್ರಸನ್ನ ಅವರಷ್ಟು ಪ್ರಭಾವಶಾಲಿಯಾಗಿಲ್ಲ. ತಮ್ಮ ಬೌಲಿಂಗ್‌ನಲ್ಲಿ ಬ್ಯಾಟ್ಸ್‌ಮನ್‌ ಬೌಂಡರಿ ಬಾರಿಸಿದಾಗ ಅದನ್ನು ಶ್ಲಾಘಿಸಿ ಚಪ್ಪಾಳೆ ತಟ್ಟುವುದನ್ನು ಈ ಹೊಸ ಆಟಗಾರರಲ್ಲಿ ನೀವು ಯಾವತ್ತೂ ಕಂಡಿಲ್ಲ. ಇದೊಂದು ನಿಜಕ್ಕೂ ಕ್ರಿಕೆಟ್‌ಗೆ ಅಂಟಿರುವ ಶಾಪವಾಗಿದೆ.

ಗಂಗೂಲಿ ಅವರಿಗಿಂತ ಮುಂಚೆ ಕಪಿಲ್ ದೇವ್ ಅವರಲ್ಲಿ ಮಾತ್ರ ಆಕ್ರಮಣಕಾರಿ ಸ್ವಭಾವ ಮತ್ತು ಒರಟು ಧೋರಣೆಯನ್ನು ಕಾಣಬಹುದಾಗಿತ್ತು. ಆದರೂ ಅವರು, 1992ರಲ್ಲಿ ಪೋರ್ಟ್ ಎಲಿಜಬೆತ್‌ನಲ್ಲಿ  ಕೆಪ್ಲರ್ ವೆಸೆಲ್ಸ್ ಬ್ಯಾಟ್ ಅಡ್ಡ ಹಿಡಿದು ಬೀಳಿಸಿದಾಗ ತಮಗಾದ ದೈಹಿಕ ನೋವು ಮತ್ತು ಸಾರ್ವಜನಿಕ ಅವಮಾನವನ್ನು  ಸಹಿಸಿಕೊಂಡಿದ್ದರು. ಘಟನೆಯಲ್ಲಿ ಅವರ ಮೊಣಕಾಲಿಗೆ ತರಚು ಗಾಯವೂ ಆಗಿತ್ತು.

ಈಗ ವಿರಾಟ್ ಕೊಹ್ಲಿ, ಇಶಾಂತ್‌ ಶರ್ಮಾ, ಅಶ್ವಿನ್ ಅಥವಾ ಜಡೇಜಾ ಅವರ ವಿರುದ್ಧ ಅಂತಹ ಕೃತ್ಯವನ್ನು ಎಸಗಲು ಯಾರೊಬ್ಬರೂ ಧೈರ್ಯ ತೋರಿಸುವುದಿಲ್ಲ.

ಪಾಕಿಸ್ತಾನದ ಇಮ್ರಾನ್‌ ಖಾನ್‌ ಅವರು ತಮ್ಮ ಬಹುತೇಕ ಅನಕ್ಷರಸ್ಥ ಪಂಜಾಬಿ ಭಾಷೆ ಆಡುವ ಹೊಸ ತಂಡವನ್ನು 1970ರ ನಂತರದ ವರ್ಷಗಳಲ್ಲಿ ವಿಶ್ವದ ಇತರ ಪ್ರಮುಖ ತಂಡಗಳನ್ನು ಸೋಲಿಸುವ ಹಂತಕ್ಕೆ ರೂಪಿಸಿರುವುದರ ಹಿಂದೆ ದೊಡ್ಡ ಕತೆಯೇ ಇದೆ.

ತಮ್ಮಲ್ಲಿನ ಹೆದರಿಕೆಯಿಂದ ಹೊರಬರಬೇಕು ಎಂದು ಇಮ್ರಾನ್‌ ತಮ್ಮ ತಂಡದ ಸದಸ್ಯರಿಗೆ ಹೇಳಿದ ಮೊದಲ ಪಾಠವಾಗಿತ್ತು. ಕ್ರಿಕೆಟ್‌ನ ಅಧಿಕೃತ ಸಮಾರಂಭಗಳಲ್ಲಿ ಸೂಟ್‌, ಟೈ ಧರಿಸಿ ಭಾಗವಹಿಸುವುದು ಇರಿಸುಮುರಿಸು ಮೂಡಿಸಿದರೆ ಸಲ್ವಾರ್‌ ಕಮೀಜ್‌ ಧರಿಸಲು ಸೂಚಿಸಿದ್ದರು. ‘ಪ್ರತಿಸ್ಪರ್ಧಿ ಕ್ರೀಡಾಪಟುವಿಗೆ ಯಾವತ್ತೂ ಸರ್‌ ಎಂದು  ಕರೆಯಬೇಡಿ, ಯಾವುದಕ್ಕೂ ತಪ್ಪಾಯಿತು ಎಂದು ಹೇಳಬೇಡಿ. ಇಂಗ್ಲಿಷ್‌ ಗೊತ್ತಿಲ್ಲದಿದ್ದರೆ ಏನಂತೆ, ಆಟದಲ್ಲಿ ಅಗತ್ಯ ಬಿದ್ದರೆ ಪಂಜಾಬಿ ಭಾಷೆಯಲ್ಲಿಯೇ ಬೈದುಬಿಡಿ’ ಎಂದು ಬುದ್ಧಿಮಾತು ಹೇಳಿ ಅವರನ್ನು ತಿದ್ದಿ ತೀಡಿ ಅವರಿಗೆ ಹೊಸ ವ್ಯಕ್ತಿತ್ವ ನೀಡಿದ್ದರು. ತಂಡದ ಸದಸ್ಯರೆಲ್ಲ ಇಮ್ರಾನ್‌ ಸಲಹೆಯನ್ನು ಚಾಚೂತಪ್ಪದೆ ಪಾಲಿಸಿಕೊಂಡು ಬಂದಿದ್ದರು.

ಸೌರವ್‌ ಗಂಗೂಲಿ ಅವರು ತಂಡದ ನಾಯಕನಾಗುತ್ತಿದ್ದಂತೆ ಭಾರತದ ಕ್ರಿಕೆಟ್‌ನಲ್ಲಿಯೂ  ಅಂತಹದ್ದೇ ಬದಲಾವಣೆ ಕಂಡು ಬಂದಿತ್ತು.

ಹೃದಯ ವೈಶಾಲ್ಯದ ಕಪಿಲ್ ದೇವ್‌ ಅವರು ಆಕಾಶ್ ಚೋಪ್ರಾ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಲು ಒಪ್ಪಿಕೊಂಡಿದ್ದರು.

‘ಆ ದಿನಗಳಲ್ಲಿ   ವೇಗದ ಬೌಲರ್‌ನನ್ನು ಚೆನ್ನಾಗಿ ದಂಡಿಸಿ ಬೌಂಡರಿಗೆ ಅಟ್ಟಿದರೆ, ಬೌಲರನು ತನ್ನನ್ನು ಪೀಡಿಸಬಹುದು ಎನ್ನುವ ಕಾರಣಕ್ಕೆ ಬೌಲರ್‌ನ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಬ್ಯಾಟ್ಸ್‌ಮನ್‌ ಹಿಂದೇಟು ಹಾಕುತ್ತಿದ್ದ. ಆದರೆ, ಈಗ ಕೊಹ್ಲಿ ಮತ್ತು ಅವರ ತಂಡ ಬೌಂಡರಿ ಹೊಡೆದು, ‘ಓಡು ಫೆಚ್‌’ ಎಂದು ಅಣಕಿಸುತ್ತಾರೆ’ ಎಂದು ಕಪಿಲ್‌ ದೇವ್‌, ಕ್ರಿಕೆಟ್‌ನಲ್ಲಿ ಆಗಿರುವ ಬದಲಾವಣೆಗಳನ್ನು ಹೋಲಿಕೆ ರೂಪದಲ್ಲಿ ವಿವರಿಸಿದರು.

ನಮ್ಮ ಅತ್ಯಂತ ಶ್ರೇಷ್ಠ  ಸ್ಪಿನ್‌ ಆಟಗಾರರು ಯಾರು ಎನ್ನುವ ಪ್ರಶ್ನೆ ಹಾಕಿಕೊಂಡಾಗ, ಅನೇಕರ ಹೆಸರುಗಳು ಕೇಳಿ ಬರುತ್ತವೆ. ಅಶ್ವಿನ್‌ ಅವರು ಪ್ರತಿ 51 ಬಾಲ್‌ಗೆ ವಿಕೆಟ್‌ ಪಡೆದು ವಿಶ್ವದ ಅತಿ ಹೆಚ್ಚಿನ ಪ್ರಮಾಣದ ಯಶಸ್ವಿ ಬೌಲರ್‌ ಆಗಿದ್ದಾರೆ. ಮುರಳಿ (55), ವಾರ್ನ್‌ (57) ಅವರಿಗಿಂತಲೂ ಅಶ್ವಿನ್‌ ಮುಂಚೂಣಿಯಲ್ಲಿ ಇದ್ದಾರೆ. ಭಾರತದ ಸ್ಪಿನ್‌ ಬೌಲರುಗಳಲ್ಲಿ ಜಡೇಜಾ (62) ಮತ್ತು ಕುಂಬ್ಳೆ (66) ಅವರು ನಂತರದ ಸ್ಥಾನದಲ್ಲಿ ಇದ್ದಾರೆ.

ಹಳೆಯ ತಲೆಮಾರಿನವರಲ್ಲಿ ಚಂದ್ರಶೇಖರ್‌ (66), ಪ್ರಸನ್ನ (76), ಬೇಡಿ (80) ಮತ್ತು ವೆಂಕಟ್‌ (95) ನಂತರದ ಸ್ಥಾನದಲ್ಲಿ ಇದ್ದಾರೆ. ಇದೇ ಕಾರಣಕ್ಕೆ ಇವರೆಲ್ಲ ಆಕಾಶ್‌ ಚೋಪ್ರಾ ಅವರ ‘ಪ್ರಭಾವ ಬೀರಿದ ಆಟಗಾರರ ಪಟ್ಟಿ’ಯಲ್ಲಿ ಸ್ಥಾನ ಪಡೆದಿಲ್ಲ.

ದೇಶಿ ಕ್ರಿಕೆಟ್ ಕುರಿತ ನನ್ನ ಅನಿಸಿಕೆಗಳನ್ನು ಇಷ್ಟಕ್ಕೇ ಅರ್ಧದಲ್ಲಿಯೇ ಕೈಬಿಡುವ ಉದ್ದೇಶವೇನೂ ನನಗಿಲ್ಲ. ನಮ್ಮ ಠಾಕುಠೀಕಿನ ಕ್ರಿಕೆಟ್‌ ಮಂಡಳಿಯು, ಕ್ರಿಕೆಟ್‌ ಈಗಲೂ ಸಭ್ಯರ ಆಟ ಎಂದು ತಪ್ಪಾಗಿ ಭಾವಿಸಿ ಹಳೆಯ ವಿಧಾನಗಳನ್ನು ಮರಳಿ ಕಾರ್ಯರೂಪಕ್ಕೆ ತರಲು ಮುಂದಾಗಿರುವುದು ಮಾತ್ರ ನನ್ನಲ್ಲಿ ಅಚ್ಚರಿ ಮೂಡಿಸಿರುವುದಂತೂ ನಿಜ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)