ಬದಲಾವಣೆ ಕಾಣದ ದೊಡ್ಡ ಮನುಷ್ಯರ ಅನಾದರ

7

ಬದಲಾವಣೆ ಕಾಣದ ದೊಡ್ಡ ಮನುಷ್ಯರ ಅನಾದರ

ರಾಮಚಂದ್ರ ಗುಹಾ
Published:
Updated:

ಸದ್ಯಕ್ಕೆ ನಾನು ಸಾಕಷ್ಟು ಶ್ರಮ ಬೇಡುವಂತಹ, ನಿಜಕ್ಕೂ ಅನೇಕ ವಿಚಾರಗಳನ್ನು ಕಲಿಸುವಂತಹ ಕಸರತ್ತಿನಲ್ಲಿ ತೊಡಗಿದ್ದೇನೆ. ಅದು ‘ಮಹಾತ್ಮ ಗಾಂಧಿ ಅವರ ಸಂಗ್ರಹ ಕೃತಿಗಳ’ ಎಲ್ಲಾ ಸಂಪುಟಗಳನ್ನು ಒಂದೂ ಸಾಲು ಬಿಡದೆ ಓದುವುದು. ಹಲವಾರು ವಾರಗಳ ಸತತ ಪರಿಶ್ರಮದ ನಂತರ 12ನೇ ಸಂಪುಟವನ್ನು ಓದಿ ಮುಗಿಸಿದ್ದೇನೆ. ಇನ್ನೂ 88 ಸಂಪುಟಗಳು ಬಾಕಿ ಇವೆ. ಸದ್ಯಕ್ಕೀಗ ನಾನು ಬಿಡುವು (ಬಹುಶಃ ದೀರ್ಘ ಅವಧಿಯದ್ದು) ತೆಗೆದುಕೊಳ್ಳುತ್ತೇನೆ. ಏಕೆಂದರೆ ಗಾಂಧಿ ಈಗಷ್ಟೇ ಒಳ್ಳೆಯದಕ್ಕೆ ಎನಿಸುತ್ತದೆ, ದಕ್ಷಿಣ ಆಫ್ರಿಕಾ ಬಿಟ್ಟಿದ್ದಾರೆ. ನಾನು ನನ್ನ ಈ ವಿಷಯದೊಂದಿಗೆ ಬೇರೆ ರಾಷ್ಟ್ರ, ಮತ್ತೊಂದು ಖಂಡಕ್ಕೆ ತೆರಳುವ ಮೊದಲು ಓದಿದ್ದೆಲ್ಲವನ್ನೂ  (ಹಾಗೂ ಕಲಿತಿದ್ದನ್ನು) ಮನನ ಮಾಡಿಕೊಳ್ಳಬೇಕಿದೆ.

ಹಿಂದಿನ ಒಂದು ಅಂಕಣದಲ್ಲಿ ನನ್ನ ಸಂಶೋಧನೆಯ ಆರಂಭದ ಫಲವನ್ನು ವರದಿ ಮಾಡಿದ್ದೆ. ಮಂದಿರ, ಮಸೀದಿಗಳಿಗೆ ಮಾನ್ಯತೆ ನೀಡದ ಅನುಭಾವಿ ಜಲಾಲುದ್ದೀನ್ ರೂಮಿಯ ವಿಚಾರಗಳು ಗಾಂಧಿಯವರ ವಿಚಾರಧಾರೆಗೂ ಹತ್ತಿರವಾಗಿರುವುದನ್ನು ಪ್ರಸ್ತಾಪಿಸಿ ಅದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಅದು ಅಯೋಧ್ಯೆ ವಿವಾದವನ್ನು ಪರಿಹರಿಸಿಕೊಳ್ಳಲು ದಾರಿಯಾಗಬಹುದೇನೊ ಎಂಬಂತಹ ಸಂಗತಿ ಪ್ರಸ್ತಾಪಿಸಿದ್ದೆ. ಗಾಂಧಿಯವರ ಬರಹಗಳ ಪ್ರಸ್ತುತತೆಯನ್ನು ಮುಂದುವರಿಸುವ ಮತ್ತೊಂದು ದೃಷ್ಟಾಂತವನ್ನು ಇಲ್ಲಿ ದಾಖಲಿಸುತ್ತೇನೆ.1909ರ ಬೇಸಿಗೆಯ ಅಂತ್ಯಕಾಲದಲ್ಲಿ, ದಕ್ಷ್ಷಿಣ ಆಫ್ರಿಕಾದ ಭಾರತೀಯರ ಹಕ್ಕುಗಳ ಪರವಾಗಿ ಹೋರಾಟ ನಡೆಸುತ್ತಾ ಗಾಂಧಿಯವರು ಲಂಡನ್‌ನಲ್ಲಿದ್ದರು. ಜನಾಂಗೀಯ ಕಾರಣಗಳಿಗಾಗಿ ತಾರತಮ್ಯ ತೋರುವ ಕಾನೂನುಗಳು ಹಾಗೂ ಆಚರಣೆಗಳ ವಿರುದ್ಧ ರಕ್ಷಣೆ, ಓಡಾಟದ ಸ್ವಾತಂತ್ರ್ಯ, ವ್ಯಾಪಾರದ ಸ್ವಾತಂತ್ರ್ಯವನ್ನು ಭಾರತೀಯರಿಗೆ ನೀಡಲು ನತಾಲ್ ಹಾಗೂ ಟ್ರಾನ್ಸ್‌ವಾಲ್ ಸರ್ಕಾರಗಳ ಮೇಲೆ ಒತ್ತಡ ತರಬೇಕೆಂದು ಒತ್ತಾಯಿಸಲು ಬ್ರಿಟಿಷ್ ಪತ್ರಕರ್ತರು, ಸಂಸತ್ ಸದಸ್ಯರು, ಹಿರಿಯ ಅಧಿಕಾರಿಗಳು ಹಾಗೂ ಸಂಪುಟ ಸಚಿವರನ್ನು ಈ ವಕೀಲ - ಆ್ಯಕ್ಟಿವಿಸ್ಟ್ ಭೇಟಿಯಾಗಿದ್ದರು. ಲಂಡನ್‌ನಲ್ಲಿ ಒಂದು ತಿಂಗಳ ಕಾಲದ ಓಡಾಟದ ನಂತರ, ರೇಗಿ ಹೋಗಿ ಗಾಂಧಿಯವರು ಬರೆದದ್ದು ಹೀಗೆ:

‘ದೊಡ್ಡಮನುಷ್ಯರೆನಿಸಿಕೊಂಡವರು ಅಥವಾ ನಿಜಕ್ಕೂ ದೊಡ್ಡ ಮನುಷ್ಯರೇ ಆದವರನ್ನು ಭೇಟಿಯಾಗುವ ಅನುಭವ ಹೆಚ್ಚಾದಂತೆ ಆ ಪ್ರತಿ ಭೇಟಿಯ ನಂತರ ನನ್ನಲ್ಲಿ ಹೆಚ್ಚು ಹತಾಶೆ ಆವರಿಸುತ್ತದೆ. ಆ ಎಲ್ಲಾ ಪ್ರಯತ್ನಗಳು ತೌಡು ಕುಟ್ಟುವುದಕ್ಕಿಂತ ಹೆಚ್ಚಿನದಾಗಿರುವುದಿಲ್ಲ. ಪ್ರತಿಯೊಬ್ಬರೂ ಅವರವರದೇ ವ್ಯವಹಾರಗಳಲ್ಲಿ ಮಗ್ನರಾಗಿರುವಂತೆ ತೋರುತ್ತದೆ. ಅಧಿಕಾರದ ಸ್ಥಾನಗಳಲ್ಲಿ ಇರುವವರು ನ್ಯಾಯ ಒದಗಿಸಲು ಹೆಚ್ಚಿನ ಆಸಕ್ತಿ ತೋರುವುದಿಲ್ಲ. ತಮ್ಮ ಅಧಿಕಾರಗಳಿಗೆ ಅಂಟಿಕೊಳ್ಳುವುದೇ ಅವರ ಏಕೈಕ ಕಾಳಜಿ. ಒಬ್ಬರು ಅಥವಾ ಇಬ್ಬರು ವ್ಯಕ್ತಿಗಳೊಡನೆ ಸಂದರ್ಶನ ಏರ್ಪಡಿಸಲು ನಾವು ಇಡೀ ದಿನ ಕಳೆಯಬೇಕು. ಸಂಬಂಧಿಸಿದ ವ್ಯಕ್ತಿಗೆ ಪತ್ರ ಬರೆಯಿರಿ, ಆತನ ಉತ್ತರಕ್ಕೆ ಕಾಯಿರಿ, ತಲುಪಿದ್ದನ್ನು ತಿಳಿಸಿ ನಂತರ ಅವರಿರುವ ಸ್ಥಳಕ್ಕೆ ಹೋಗುವುದು.  ಒಬ್ಬರು ಉತ್ತರದಲ್ಲಿ ಮತ್ತೊಬ್ಬರು ದಕ್ಷಿಣದಲ್ಲಿ (ಲಂಡನ್) ವಾಸಿಸುತ್ತಿರಬಹುದು. ಈ ಎಲ್ಲಾ ಗಡಿಬಿಡಿಗಳ ನಂತರವೂ ಫಲಿತಾಂಶದ ಬಗ್ಗೆ ಆಶಾದಾಯಕವಾಗಿರುವುದು ಮಾತ್ರ ಸಾಧ್ಯವಿಲ್ಲ. ನ್ಯಾಯದ ಬಗೆಗಿನ ಪರಿಗಣನೆಗಳಿಗೇನಾದರೂ ಮಾನ್ಯತೆ ಇದ್ದಿದ್ದಲ್ಲಿ, ಬಹಳ ಹಿಂದೆಯೇ ನಮಗೆ ಬೇಕಾದದ್ದನ್ನು ಪಡೆದುಕೊಳ್ಳಬಹುದಿತ್ತು. ಏಕೈಕ ಸಾಧ್ಯತೆ ಎಂದರೆ, ಕೆಲವು ರಿಯಾಯಿತಿಗಳನ್ನು ಹೆದರಿಕೆಯ ಮೂಲಕ ಪಡೆದುಕೊಳ್ಳುವುದು. ಇಂತಹ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವುದು ಸತ್ಯಾಗ್ರಹಿಗೆ ಏನೂ ಸಂತೋಷ ಕೊಡುವಂತಹದ್ದಲ್ಲ.’

 ಗಾಂಧಿಗೆ ಏನನಿಸಿರಬಹುದು, ಅವರೇನು ಹೇಳುತ್ತಿದ್ದಾರೆ ಎಂಬುದು ನನಗೆ ಚೆನ್ನಾಗಿ ಅರ್ಥವಾಗಿತ್ತು. ಲಂಡನ್‌ನಲ್ಲಿ ಈ ಫಲ ನೀಡದ ಶ್ರಮದ ಪ್ರಯತ್ನಗಳಾದ 97 ವರ್ಷಗಳ ನಂತರ ರಾಷ್ಟ್ರದಲ್ಲಿ ಅತ್ಯಂತ ಪ್ರಭಾವಿಗಳಾದ ವ್ಯಕ್ತಿಗಳ ಜೊತೆ ನಿಗದಿತ ಭೇಟಿಗೆ ಅವಕಾಶ ಕೋರಿ ನವದೆಹಲಿಯಲ್ಲಿ ಅನೇಕ ವಾರಗಳನ್ನು ಕಳೆದಿದ್ದೆ. ನಾನೇನೂ ಏಕಾಂಗಿಯಾಗಿರಲಿಲ್ಲ. ನನ್ನ ಜೊತೆ, ನಿಜಕ್ಕೂ ಮಾರ್ಗದರ್ಶನ ಮಾಡುತ್ತಾ ಇದ್ದವರು ಹಿರಿಯ ಪತ್ರಕರ್ತ ಬಿ ಜಿ ವರ್ಗೀಸ್ ಮತ್ತು ಮೇಧಾವಿ ಮಾನವಶಾಸ್ತ್ರಜ್ಞೆ ನಂದಿನಿ ಸುಂದರ್. ಮಾವೊವಾದಿ ಕ್ರಾಂತಿಕಾರಿಗಳು ಮತ್ತು ರಾಜ್ಯ ಸರ್ಕಾರ ಪ್ರಾಯೋಜಿತ ಜಾಗೃತ ತಂಡದ ಮಧ್ಯೆ ಸಂಘರ್ಷ ನಡೆದಿದ್ದ ಛತ್ತೀಸ್‌ಗಢದಲ್ಲಿನ ದಾಂತೇವಾಡ ಜಿಲ್ಲೆಯಲ್ಲಿನ ಪ್ರವಾಸದಿಂದ ಆಗಷ್ಟೇ ಹಿಂದಿರುಗಿದ್ದ ಸ್ವತಂತ್ರ ನಾಗರಿಕರ ತಂಡದ ಭಾಗವಾಗಿದ್ದೆ ನಾನು. ಡಜನ್‌ಗಟ್ಟಲೆ ಹಳ್ಳಿಗಳು ಸುಟ್ಟು ಹೋಗಿದ್ದವು. ನೂರಾರು ಜನರು ಸತ್ತು ಹೋಗಿದ್ದರು. ಜೊತೆಗೆ ಸಾವಿರಾರು ಜನರು ಮನೆಮಠ ಕಳೆದುಕೊಂಡಿದ್ದರು.

ಮಾವೊವಾದಿಗಳು ಯಾರಿಗೂ ಉತ್ತರದಾಯಿತ್ವ ಹೊಂದಿಲ್ಲ. ಆದರೆ  ಜಾಗೃತತಂಡದ (ತಮ್ಮನ್ನು ತಾವು ಅವರು ಸಾಲ್ವಾಜುಡುಂ ಎಂದು ಕರೆದುಕೊಳ್ಳುತ್ತಾರೆ. ಹಾಗೆಂದರೆ ಸ್ಥೂಲವಾಗಿ ‘ಶಾಂತಿ ಶೋಧ’)  ಸುಲಿಗೆಯನ್ನು ಸರ್ಕಾರ ನಿಲ್ಲಿಸಬೇಕು ಎಂದು ನಾವು ಭಾವಿಸಿದೆವು. ಈ ಅಪರಾಧಗಳಲ್ಲಿ ಛತ್ತೀಸ್‌ಗಢ ಆಡಳಿತವೂ ಭಾಗಿಯಾಗಿದೆ ಎಂದು ನಾವು ಕಂಡುಕೊಂಡಾಗ, ಈ ವಿಚಾರವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ನಿರ್ಧರಿಸಿದೆವು. ಅನೇಕ ದೂರವಾಣಿ ಕರೆಗಳ ನಂತರ ಆಗಿನ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಹಾಗೂ ಅಂದಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ ಕೆ ನಾರಾಯಣನ್ ಜೊತೆಗೆ ಭೇಟಿ ಸಮಯ ಪಡೆದುಕೊಳ್ಳುವುದು ನಮಗೆ ಸಾಧ್ಯವಾಯಿತು. ಜಿಲ್ಲೆಯನ್ನು ಆವರಿಸಿರುವ ಭೀತಿ ಹಾಗೂ ಬೆದರಿಕೆಯ ಸಾಮಾನ್ಯ ವಾತಾವರಣದ ಭಾಗವಾಗಿ ರಸ್ತೆಯಲ್ಲಿ ಕರುಣಾಜನಕ ಸ್ಥಿತಿಯಲ್ಲಿರುವ ಕ್ಯಾಂಪ್‌ಗಳಲ್ಲಿ ಕಾಲ ಕಳೆಯುತ್ತಿರುವ ನೆಲೆ ಕಳೆದುಕೊಂಡ ಆದಿವಾಸಿಗಳು, ಪೂರ್ಣ ನಾಶವಾದ ಅಥವಾ ಹಾನಿಗೀಡಾದ ಅವರ ಮನೆಗಳು, ಜಾಗೃತತಂಡದವರಿಂದ ಆಕ್ರಮಣಕ್ಕೊಳಗಾದ ಅವರ ಮಹಿಳೆಯರು, ಈ ಎಲ್ಲವನ್ನೂ ಅವರಿಗೆ ಪರಿಚಯಿಸಿದೆವು.

ಈ ನಮ್ಮ ಪ್ರತ್ಯಕ್ಷದರ್ಶಿ ಸಾಕ್ಷ್ಯಗಳ ವರದಿಯನ್ನು ರಾಷ್ಟ್ರೀಯ ಭದ್ರತಾಸಲಹೆಗಾರರು ಉದಾಸೀನದಿಂದ ಕಂಡರು. ಗೃಹ ಸಚಿವರು ಕಿರಿಕಿರಿ ತೋರಿದರು. ನಕ್ಸಲ್‌ವಾದವನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ಮಾಜಿ ಪೊಲೀಸ್ ಅಧಿಕಾರಿಯಾದ ತಮಗೆ ಪಾಠಗಳ ಅಗತ್ಯ ಇಲ್ಲ ಎಂದು ರಾಷ್ಟ್ರೀಯ ಭದ್ರತಾ ಅಧಿಕಾರಿ ಅನುಗ್ರಹಪೂರ್ವಕವಾಗಿ ನಮಗೆ ಹೇಳಿದರು. ಗೃಹ ಸಚಿವರು ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ನಂದಿನಿ ಸುಂದರ್ ಮತ್ತು ಈ ಲೇಖಕ  ನಕ್ಸಲ್ ಪರ ಸಹಾನುಭೂತಿ ಉಳ್ಳವರು ಎಂದು ನಮ್ಮನ್ನೇ ದೂಷಿಸಿದ್ದರು.

ಆ ನಂತರ, ನಾನು ಪ್ರಧಾನಿ ಡಾ ಮನಮೋಹನ್ ಸಿಂಗ್ ಅವರ ಜೊತೆ ನೇರ ಭೇಟಿಯ ಅವಕಾಶ ಪಡೆದುಕೊಳ್ಳುವುದು ಸಾಧ್ಯವಾಯಿತು. ಅವರು ತಮ್ಮ ಅಸಹಾಯಕತೆ ತೋಡಿಕೊಂಡರು. ಜಾಗೃತ ದಳದ ಅಪರಾಧಗಳನ್ನು ನಾನು ವಿವರಿಸಿದಾಗ, ‘ಈ ವಿಧಾನಗಳು ಅಗತ್ಯ ಎಂದು ಅವರು ಹೇಳುತ್ತಾರೆ’ ಎಂದು ಅವರು ಉತ್ತರಿಸಿದರು. ಆದರೆ ‘ಅವರು’ ಎಂದರೆ ಅವರ ಸಲಹೆಗಾರರೇ ಅಥವಾ ಛತ್ತೀಸ್‌ಗಢ ರಾಜ್ಯ ಸರ್ಕಾರವೇ ಎಂಬುದನ್ನು ಅವರು ನಿರ್ದಿಷ್ಟವಾಗಿ ಹೇಳಲಿಲ್ಲ.

ಈ ಮೂವರು ದೊಡ್ಡ ವ್ಯಕ್ತಿಗಳೊಡನೆ ನಮ್ಮ ಭೇಟಿ ನಡೆದು  ಐದು ವರ್ಷಗಳೇ ಕಳೆದುಹೋಗಿವೆ. ನಾನು ಆಗ ಆ ಬಗ್ಗೆ ಬರೆಯಲಿಲ್ಲ. ಏಕೆಂದರೆ ಅವು ಖಾಸಗಿ ಚರ್ಚೆಗಳಾಗಿದ್ದವು. ಹಾಗೂ ಅನುಭವಿ ಮತ್ತು ಸ್ವತಂತ್ರ ಮನಸ್ಸಿನ ಭಾರತೀಯ ಪ್ರಜಾಸತ್ತಾತ್ಮಕವಾದಿಗಳ ಸಲಹೆ ರಾಜ್ಯ ನೀತಿಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ತರಬಹುದು ಎಂದೂ ಭಾವಿಸಿದ್ದೆ. ಈ ಭೇಟಿಗಳನ್ನು ನಾನು ಈಗ ನೆನಪು ಮಾಡಿಕೊಳ್ಳುತ್ತಿರುವುದು, ಎರಡು ಕಾರಣಗಳಿಗಾಗಿ: ಮೊದಲನೆಯದು, ಏಕೆಂದರೆ, ಎಲ್ಲಾ ದೊಡ್ಡ ಭಾರತೀಯರದೂ ಒಂದೇ ಅನುಭವ. ಮತ್ತು ಎರಡನೆಯದಾಗಿ, ದಾಂತೇವಾಡದ ಆದಿವಾಸಿಗಳ ನೋವುಗಳು ಇನ್ನೂ ಇವೆ. ಇದಕ್ಕೆ ಮುಖ್ಯ ಕಾರಣ, ಈ ನೆಲದ ಕಾನೂನಿನ ಪೂರ್ಣ (ಹಾಗೂ ಕೆಲವೊಮ್ಮೆ ಅನಾಗರಿಕ) ಉಲ್ಲಂಘನೆಗಾಗಿ ರಾಜ್ಯ ಸರ್ಕಾರ ಹಾಗೂ ಅದರ ನೌಕರರನ್ನು ಜವಾಬ್ದಾರರಾಗಿಸಲು ಕೇಂದ್ರ ಸರ್ಕಾರದ ಅಸಾಮರ್ಥ್ಯ  ಅಥವಾ ಇಷ್ಟವಿಲ್ಲದಿರುವುದು.

ಇತ್ತೀಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ನಡೆಸುತ್ತಾ, ಸಾಲ್ವಾಜುಡುಂ ಕ್ಯಾಂಪ್‌ಗಳನ್ನು ತೆರವುಗೊಳಿಸಬೇಕು, ಗ್ರಾಮಸ್ಥರನ್ನು ಅವರವರ ಮನೆಗಳಲ್ಲಿ ನೆಲೆಗೊಳಿಸಬೇಕು ಹಾಗೂ ಹಿಂಸಾಚಾರದ ಬಲಿಪಶುಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಶಾಲೆಗಳು ಹಾಗೂ ಆಶ್ರಮಗಳನ್ನು ಭದ್ರತಾ ಪಡೆಗಳು ತೆರವುಗೊಳಿಸಬೇಕು ಎಂದೂ ಕೋರ್ಟ್ ನಿರ್ದೇಶಿಸಿತ್ತು. ಈ ಹಿಂದಿನ ವಿಚಾರಣೆಗಳಲ್ಲಿ, ತರಬೇತಿ ಇಲ್ಲದ ಹಾಗೂ ಕಡಿಮೆ ವಯಸ್ಸಿನ ಯುವಜನರಿಗೆ ಶಸ್ತ್ರಾಸ್ತ್ರಗಳನ್ನು ವಿತರಿಸುವ ಬಗ್ಗೆ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರವನ್ನು ಟೀಕಿಸಿತ್ತು. ಕೋರ್ಟ್‌ನ ಈ ಆಕ್ಷೇಪಗಳು ಹುರುಳಿರುವಂತಹದ್ದು. ಆದರೆ, ಈಗಿರುವಂತೆ, ಈ ನೆಲದಲ್ಲಿನ ವಿದ್ಯಮಾನಗಳ ಮೇಲ್ವಿಚಾರಣೆಯ ಅಧಿಕಾರ ಕೋರ್ಟ್‌ಗೆ ಇಲ್ಲ. ಕೋರ್ಟ್‌ನ ಸೂಚನೆಗಳನ್ನು ಈ ಹಿಂದೆ ರಾಜ್ಯ ಸರ್ಕಾರ ಕಡೆಗಣಿಸಿದೆ. ಈಗ ಅವನ್ನು ಗೌರವಿಸಲು ಛತ್ತೀಸ್‌ಗಢ ಸರ್ಕಾರ ಶ್ರಮವಹಿಸಿ ಕೆಲಸ ಮಾಡುತ್ತದೆ ಎಂಬುದು ಸಾಧ್ಯವಿಲ್ಲ.

ಹೀಗಾಗಿ ನಕ್ಸಲೀಯ ಹಾವಳಿ ನಿರ್ವಹಿಸಲು ಕೇವಲ ಎರಡು ಮಾರ್ಗಗಳಿವೆ; ತರಬೇತಿ ಪಡೆದ ಸಿಬ್ಬಂದಿಯಿಂದ ಪ್ರಾಮಾಣಿಕ ಹಾಗೂ ದಕ್ಷ ಉಸ್ತುವಾರಿ,  ಶಿಕ್ಷಣ, ಆರೋಗ್ಯ, ಜೀವನದ ಭದ್ರತೆ ಒದಗಿಸಲು ಸುಸ್ಥಿರ ಪ್ರಯತ್ನಗಳು ಮತ್ತು ಆದಿವಾಸಿ ಸಮುದಾಯಗಳಿಗೆ ಸ್ವಯಂ ಆಡಳಿತದ ವಿಧಾನಗಳು. ಬದಲಿಗೆ ಛತ್ತೀಸ್‌ಗಢ ಸರ್ಕಾರ ಒಂದೆಡೆ ಜಾಗೃತ ಸಮಿತಿಯನ್ನು ಹುಟ್ಟುಹಾಕುತ್ತಿದೆ, ಮತ್ತೊಂದೆಡೆ ಶಾಲೆಗಳು ಹಾಗೂ ಕ್ಲಿನಿಕ್‌ಗಳನ್ನು ಮುಚ್ಚಿ ಆದಿವಾಸಿ ಭೂಮಿಗಳನ್ನು ಗಣಿಗಳು ಹಾಗೂ ಕಾರ್ಖಾನೆಗಳಿಗೆ ಹಸ್ತಾಂತರಿಸುತ್ತಿದೆ. ಇದರ ಪರಿಣಾಮವಾಗಿ ನಕ್ಸಲ್‌ವಾದದ ಪ್ರಭಾವ ವಾಸ್ತವವಾಗಿ ಇನ್ನೂ ಹೆಚ್ಚಾಗಿದೆ. ಹಿಂಸಾಚಾರ ಹಾಗೂ ಪ್ರತಿ ಹಿಂಸಾಚಾರಗಳ ಕಿಚ್ಚಿನಲ್ಲಿ ಆದಿವಾಸಿಗಳು ನಲುಗುವ ಸ್ಥಿತಿ ಉಂಟಾಗಿದೆ.

ತನ್ನೆದುರು ಮಂಡಿಸಲಾದ ಬೃಹತ್ ಸಾಕ್ಷಿಗಳ ಆಧಾರದ ಮೇಲೆ 2006ರಲ್ಲಿ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದಲ್ಲಿ, ಈ ಪರಿಸ್ಥಿತಿಯನ್ನು ಬಹುಶಃ ಸರಿಪಡಿಸಬಹುದಿತ್ತು ಮತ್ತು ನಿವಾರಿಸಬಹುದಿತ್ತು. ಐದು ವರ್ಷಗಳ ನಂತರ, ಕೇಂದ್ರ ಸರ್ಕಾರದ ನಿಷ್ಕ್ರಿಯತೆಯನ್ನು ಕುರಿತು ಚಿಂತಿಸಿದಲ್ಲಿ, ಅದು ಹಲವು ಕಾರಣಗಳಿಂದ ಕುಡಿಯೊಡೆದಿದೆ ಎನಿಸುತ್ತದೆ. ಉಗ್ರವಾದದ ಬಗ್ಗೆ ಅವರದು ಮೃದು ಧೋರಣೆ ಎಂಬಂತಹ ಆರೋಪವನ್ನು ಬಿಜೆಪಿ ಮಾಡಬಹುದೆಂಬ ಭೀತಿ ಹಾಗೂ ಕಾನೂನು, ಸುವ್ಯವಸ್ಥೆ ರಾಜ್ಯ ವಿಷಯವಾದ್ದರಿಂದ ಮಧ್ಯ ಪ್ರವೇಶಿಸುವ ವಿಚಾರದಲ್ಲಿ ಕೇಂದ್ರ ಎಚ್ಚರಿಕೆಯಿಂದಿರಬೇಕಾಗುತ್ತದೆ ಎಂಬಂತಹ ಮತ್ತೊಂದು ಭೀತಿಯೂ ಇದ್ದಿರಬಹುದೆನಿಸುತ್ತದೆ. ಆದರೆ ಮುಖ್ಯ ಕಾರಣ, ಗಾಂಧೀ ನಂತರ ಅನಿಸುವುದು, ನ್ಯಾಯದ ಪ್ರತಿಪಾದನೆಗಳಿಗೆ ಉನ್ನತ ಸ್ಥಾನಗಳಲ್ಲಿರುವ ವ್ಯಕ್ತಿಗಳ ಅನಾದರ. ಅವರ ‘ಮುಖ್ಯ ಕಾಳಜಿ’ ನೂರು ವರ್ಷಗಳ ಹಿಂದಿನ ಇಂಗ್ಲೆಂಡ್‌ನಲ್ಲಿದ್ದಂತೆ ಈಗಿನ ಭಾರತದಲ್ಲೂ ಅಧಿಕಾರದ ಸ್ಥಾನಗಳಿಗೆ ಅಂಟಿಕೊಳ್ಳುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry