ಸೋಮವಾರ, ನವೆಂಬರ್ 18, 2019
21 °C

ಬದಲಾವಣೆ ತರುವ ವಿಧಾನ

ಗುರುರಾಜ ಕರ್ಜಗಿ
Published:
Updated:

ಒಂದೆರಡು ತಿಂಗಳುಗಳ ಹಿಂದೆ ನನ್ನ ಸ್ನೇಹಿತರೊಬ್ಬರು ತಮ್ಮ ಮಗನಿಗೆ ಚೆನ್ನಾಗಿ ಬೈಯುತ್ತಿದ್ದರು. ಅವನು ಮುಖ ಕೆಳಗೆ ಹಾಕಿಕೊಂಡು ನಿಂತಿದ್ದ. ನಾನು ಅವನನ್ನು ಸಮಾಧಾನಗೊಳಿಸಿ ಹೊರಗೆ ಕಳುಹಿಸಿ ಸ್ನೇಹಿತರಿಗೆ ಹೇಳಿದೆ,  ಈ ವಯಸ್ಸಿನಲ್ಲಿ ಬೆಳೆದ ಮಗನಿಗೆ ಹೀಗೆ ಬೈಯುವುದು ಸರಿಯಲ್ಲ  ಅವರು ಮತ್ತಷ್ಟು ಮುಖ ಗಂಟಕ್ಕಿಕೊಂಡು,  ನಿಮಗೆ ಅವನ ಸ್ವಭಾವ ಗೊತ್ತಿಲ್ಲ, ಅವನಿಗೆ ಹೀಗೆ ಕಠಿಣವಾಗಿ ಬೈದರೇ ತಿಳಿಯುವುದು, ಮೃದುವಾಗಿ ಹೇಳಿದರೆ ಅವನನ್ನು ತಾಗುವುದೇ ಇಲ್ಲ ಎಂದರು. ಆಗ ನನಗೆ ಆಫ್ರಿಕೆಯ ಒಂದು ಕಥೆ ನೆನಪಾಯಿತು. ಅದನ್ನು ನನ್ನ ಗೆಳೆಯನೊಬ್ಬ ಹೇಳಿದ್ದ. ಅವನಿಗೆ ಅವನ ಅಜ್ಜಿ ಹೇಳಿದ್ದಳಂತೆ. ಬಹುಶ: ಅವನ ಅಜ್ಜಿಗೆ ಅವಳ ಅಜ್ಜಿ ಹೇಳಿದ್ದಿರಬೇಕು.ಒಂದು ದಿನ ದೇವತೆಗಳು ಆಕಾಶದಲ್ಲಿ ಕುಳಿತು ಕೆಳಗಿನ ಭೂಪ್ರದೇಶವನ್ನು ನೋಡುತ್ತಿದ್ದರಂತೆ. ಅವರಲ್ಲಿ ಮೂವರು ಪ್ರಮುಖ ದೇವತೆಗಳು. ಒಬ್ಬ ಸೂರ್ಯ, ಮತ್ತೊಬ್ಬ ವಾಯು ಇನ್ನೊಬ್ಬ ವರುಣ. ಸುಮ್ಮನೆ ಕುಳಿತರೆ ದೇವತೆಗಳೂ ಅನಾವಶ್ಯಕವಾದ ಕೆಲಸವನ್ನು ಮಾಡುತ್ತಾರೆ. ಆಗ ವಾಯು ಹೇಳಿದ,  ಈಗ ಸ್ವಲ್ಪ ಹೊತ್ತು ನಮಗೆ ಯಾವ ಕೆಲಸವೂ ಇಲ್ಲ. ಒಂದು ಆಟ ಆಡೋಣವೇ? ಉಳಿದಿಬ್ಬರು ಆಗಲಿ ಎಂದರು. ಯಾವ ಆಟವಾಡುವುದು ಎಂದು ಅತ್ತಿತ್ತ ನೋಡುವಾಗ ಭೂಮಿಯ ಮೇಲೆ ಸಣ್ಣ ಬೆಟ್ಟದ ಮೇಲೆ ತರುಣನೊಬ್ಬ ಕೋಟು ಹಾಕಿಕೊಂಡು ಕುಳಿತಿದ್ದ. ಅದನ್ನು ಕಂಡು ವಾಯು ತನ್ನ ಸಂಗಡಿಗರಿಗೆ ಹೇಳಿದ, ಈಗ ನಮ್ಮಲ್ಲಿ ಯಾರು ಅವನು ತೊಟ್ಟಿರುವ ಕೋಟನ್ನು ಕಳಚುವ ಹಾಗೆ ಮಾಡುತ್ತಾರೋ ನೋಡೋಣ .ಆಯ್ತು ಮೊದಲು ನಿನ್ನ ಪ್ರಯತ್ನವೇ ನಡೆಯಲಿ ಎಂದ ವರುಣ. ವಾಯು ನಿಧಾನವಾಗಿ ತರುಣನ ಸುತ್ತ ಬೀಸತೊಡಗಿದ. ತರುಣನ ಕಿವಿಯ ಹತ್ತಿರ ಸುಳಿದ ವಾಯುವಿನ ತರಂಗಗಳು ಪಿಸುಗುಟ್ಟಿದವು, ಹೇ ಹುಡುಗ ಕೋಟು ತೆಗೆ. ತರುಣ ಗಾಳಿಯ ವೇಗವನ್ನು ಗಮನಿಸಿ ಅದನ್ನು ಇನ್ನೂ ಬಿಗಿಯಾಗಿ ಹಿಡಿದುಕೊಂಡ ವಾಯುವಿಗೆ ಕೋಪ ಕೆರಳಿತು. ಇನ್ನೂ ವೇಗವಾಗಿ, ಚಳಿಯನ್ನು ಹೆಚ್ಚಿಸಿಕೊಂಡು ಬೀಸತೊಡಗಿತು. ಅದರ ತರಂಗಗಳು ಗುಡುಗಿದವು. ಹುಚ್ಚಾ, ಕೋಟು ತೆಗೆ, ಇಲ್ಲದಿದ್ದರೆ ನಿನ್ನನ್ನೇ ಹಾರಿಸಿಬಿಡುತ್ತೇನೆ. ಹುಡುಗ ಚಳಿಗೆ ಬೆದರಿ ಮತ್ತಷ್ಟು ಬಿಗಿಯಾಗಿ ಕೋಟನ್ನು ಅಪ್ಪಿಕೊಂಡ. ಗಾಳಿಯಲ್ಲಿಯ ಚಳಿ, ವೇಗ ಹೆಚ್ಚಿದಂತೆ ತರುಣ ಇನ್ನೂ ಅವುಚಿಕೊಂಡು ಕೋಟಿನೊಳಗೆ ಬೆಚ್ಚಗೆ ಇರಲು ಪ್ರಯತ್ನಿಸಿದ.ಆಗ ವರುಣ ಹೇಳಿದ,  ಇನ್ನು ನನ್ನ ಸರದಿ. ಕ್ಷಣದಲ್ಲಿ ತರುಣ ಕೋಟು ಕಳೆಯುವಂತೆ ಮಾಡುತ್ತೇನೆ, ನೋಡುತ್ತಿರಿ. ಮಳೆ ನಿಧಾನವಾಗಿ ಹನಿಯತೊಡಗಿತು. ಹನಿಗಳು ಹುಡುಗನ ಕಿವಿಯಲ್ಲಿ ಹೇಳಿದವು,  ಬೇಗ ಕೋಟು ಕಳೆದುಬಿಡು ಆದರೆ ನೆನೆದು ಹೋಗುವ ಭಯದಲ್ಲಿ ಕೋಟಿನಲ್ಲಿದ ತಲೆಗವುಸನ್ನು ಎಳೆದು ಬಿಗಿದುಕೊಂಡ. ಕೋಟಿನ ಗುಂಡಿಗಳನ್ನು ಬಿಗಿದ. ಮಳೆಗೆ ಕೋಪ ಹೆಚ್ಚಾಗಿ ಜೋರಾಗಿ ಅಪ್ಪಳಿಸತೊಡಗಿತು. ಅದರ ವೇಗ ಹೆಚ್ಚಿದಂತೆ ತರುಣ ಸಾಧ್ಯವಿದ್ದಷ್ಟು ದೇಹದ ಭಾಗಗಳನ್ನು ಕೋಟಿನೊಳಗೆ ಹುದುಗಿಸಿಕೊಂಡು ಕುಳಿತ. ಮಳೆಗೂ ಸುಸ್ತಾಗಿ ಪ್ರಯತ್ನವನ್ನು ಬಿಟ್ಟಿತು.ಆಗ ಸೂರ್ಯ ನಗುತ್ತ ತನ್ನ ಎಳೆ ಬಿಸಿಲನ್ನು ಹುಡುಗನ ಮೇಲೆ ಚೆಲ್ಲಿದ. ನೆನೆದು ಹೋದ ತರುಣ ತಲೆಯ ಮೇಲಿನ ಗವುಸನ್ನು ತೆಗೆದು ಕೂದಲು ಜಾಡಿಸಿ ಒಣಗಿಸಿಕೊಂಡ. ಸೂರ್ಯ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಉಷ್ಣತೆಯನ್ನು ಹೆಚ್ಚು ಮಾಡಿದ. ಕೋಟು ಒಣಗಿ ಶೆಕೆಯಾಗತೊಡಗಿತು. ತರುಣ ಕೋಟಿನ ಗುಂಡಿಗಳನ್ನು ಬಿಚ್ಚಿದ. ಮುಂದೆ ಐದು ನಿಮಿಷಗಳಲ್ಲಿ ಸೂರ್ಯನ ಕಿರಣಗಳು ತರುಣನ ಮೈಮೇಲೆಲ್ಲ ಮೃದುವಾಗಿ ಹರಿದಾಡಿದವು. ಮುಂದೆ ಕೆಲವೇ ಕ್ಷಣಗಳಲ್ಲಿ ತರುಣ ಕೋಟು ಕಳಚಿ ಗಾಳಿ ಹಾಕಿಕೊಳ್ಳುತ್ತ ನಿಂತ. ಸೂರ್ಯ ನಕ್ಕ. ಅವನ ನಗೆಯ ಸಂದೇಶ ಉಳಿದಿಬ್ಬರಿಗೆ ತಲುಪಿತು.ಹೆದರಿಕೆ, ಬೆದರಿಕೆಯಿಂದ ಆಗದ ಕೆಲಸ ಪ್ರೀತಿಯಿಂದ ಆಗುತ್ತದೆ. ಅದರಲ್ಲೂ ಮಕ್ಕಳು ಬೆಳೆದಂತೆ ಅವರನ್ನು ಹೆದರಿಕೆಯಿಂದ, ಬೆದರಿಕೆಯಿಂದ ತಿದ್ದುವುದು ಕಷ್ಟ ಮತ್ತು ಸರಿಯೂ ಅಲ್ಲ. ಅವರೊಂದಿಗೆ ನಿಧಾನವಾಗಿ, ಪ್ರೀತಿಯಿಂದ ಮಾತನಾಡಿ ತಿಳಿಸಿದರೆ ಬದಲಾವಣೆ ಸಾಧ್ಯ.

ಪ್ರತಿಕ್ರಿಯಿಸಿ (+)