ಬದುಕುವ ದಾರಿ ಕಲಿಸುವ ಕಾವ್ಯದಿಂದ ದೂರ ಬಂದು...

7

ಬದುಕುವ ದಾರಿ ಕಲಿಸುವ ಕಾವ್ಯದಿಂದ ದೂರ ಬಂದು...

Published:
Updated:
ಬದುಕುವ ದಾರಿ ಕಲಿಸುವ ಕಾವ್ಯದಿಂದ ದೂರ ಬಂದು...

ಮನಸ್ಸು ತುಂಬ ಮೃದುವಾಗಿತ್ತು. ಕಣ್ಣಲ್ಲಿ ತನ್ನಿಂದ ತಾನೇ ನೀರು ಬರುತ್ತಿತ್ತು. `ಇದೇನು? ಯಾರಾದರೂ ನೋಡಿದರೆ ಏನೆಂದುಕೊಂಡಾರು? ಛೇ!' ಎಂದರೂ ಎದೆಯಲ್ಲಿ ಭಾವದ ತಿದಿ ಮತ್ತೆ ಮತ್ತೆ ಒತ್ತಿದಂತೆ ಆಗುತ್ತಿತ್ತು. ಭರ್ತಿ ಮೂವತ್ತೈದು ವರ್ಷಗಳು ಕಳೆದು ಹೋಗಿದ್ದುವು, ನನ್ನ ವಿದ್ಯಾಗುರು ಎಂ.ಎಂ.ಕಲಬುರ್ಗಿಯವರ ಪಾಠ ಕೇಳಿ. ಎಂ.ಎ. ಮುಗಿಸಿ ಬರುವಾಗಲೂ ಅವರ ಪಾಠ ಕೇಳುತ್ತ ಹೀಗೆಯೇ ಅತ್ತಿದ್ದೆ.ಈಗ ಅವರು ಶ್ರೀವಿಜಯ ಮತ್ತು ಪಂಪನ ಪದ್ಯಗಳನ್ನು ಓದುತ್ತಿದ್ದರು. ಅವೇನು ಕರುಣ ರಸ ಉಕ್ಕಿಸುವ ಪದ್ಯಗಳಲ್ಲ. ಅವರು ಶ್ರೀವಿಜಯ ಕವಿ ತನ್ನ ಕವಿರಾಜ ಮಾರ್ಗದಲ್ಲಿ ನಾಡು ಮತ್ತು ನಾಡವರ ಬಗ್ಗೆ ಬರೆದ ಪದ್ಯಗಳನ್ನು, ಪಂಪನ `ಚಾಗದ ಭೋಗದಕ್ಕರದ...' ಪದ್ಯವನ್ನು ಓದುತ್ತಿದ್ದರು. ಹಳಗನ್ನಡ ಪದ್ಯ ಓದಿದರೆ ಮನಸ್ಸು ಏಕೆ ಮೃದು ಆಗಬೇಕು? ನಾನೇ ಭಾವುಕನಾಗಿರಬೇಕು ಎಂದುಕೊಂಡೆ.ಧಾರವಾಡ ಸಾಹಿತ್ಯ ಸಂಭ್ರಮದ ಈ ಪ್ರಾಚೀನ ಕಾವ್ಯ ವಾಚನ ಗೋಷ್ಠಿ ಮುಗಿಸಿಕೊಂಡು ಹೊರಗೆ ಬಂದರೆ, `ಏನ್ರಿ ನಿಮ್ಮ ಗುರುಗಳು ಇವತ್ತು ನನ್ನನ್ನು ಅಳಿಸಿಬಿಟ್ಟರು' ಎಂದರು ಸಂಪಾದಕರು! ಸಭಾಂಗಣದ ಇನ್ನಾವುದೋ ಮೂಲೆಯಲ್ಲಿ ಕುಳಿತ ಲೇಖಕ ಗೆಳೆಯ ವಿವೇಕ ಶಾನಭಾಗರಿಗೂ ಅದೇ ಅನುಭವ ಆಗಿತ್ತು. ಹಾಗಿದ್ದರೆ ನಾನೊಬ್ಬನೇ ತೀರಾ ಹೆಣ್ಣು ಹೃದಯದವನಲ್ಲ ಎಂದು ಸಮಾಧಾನ ಮಾಡಿಕೊಂಡೆ!ಅದೇ ಗೋಷ್ಠಿಯಲ್ಲಿ ಶಾಂತಿನಾಥ ದಿಬ್ಬದ ಅವರು ಹರಿಹರನ ಪದ್ಯಗಳನ್ನು, ಕೃಷ್ಣಮೂರ್ತಿ ಹನೂರರು ಕುಮಾರವ್ಯಾಸನ ಕಾವ್ಯವನ್ನು ವಾಚನ ಮಾಡಿದ್ದರು. ಬಹುಶಃ ಧಾರವಾಡ ಸಾಹಿತ್ಯ ಸಂಭ್ರಮದ ಅತ್ಯುತ್ತಮ ಗೋಷ್ಠಿ ಇದೇ ಆಗಿತ್ತು. ಅದರ ಪರಿಣಾಮ ಗೋಷ್ಠಿ ಮುಗಿದ ನಂತರ ಗೊತ್ತಾಯಿತು.ಕೆಲವರು ಕಲಬುರ್ಗಿಯವರಿಗೆ ಮುಗಿಬಿದ್ದರೆ, ಇನ್ನು ಕೆಲವರು ದಿಬ್ಬದ ಅವರಿಗೆ ಮತ್ತೆ ಹಲವರು ಹನೂರು ಅವರಿಗೆ ಸರದಿಯಂತೆ ಅಭಿನಂದನೆ ಹೇಳುತ್ತಿದ್ದರು. ಯಾರು ಚೆನ್ನಾಗಿ ಕಾವ್ಯವಾಚನ ಮಾಡಿದರು ಎಂದರೆ ಉತ್ತರ ಹೇಳುವುದು ಕಷ್ಟವಾಗುತ್ತಿತ್ತು. ಮೂವರೂ ಭಾಷೆಯನ್ನು ಹಿಂದೆ ಹಾಕಿ ಭಾವವನ್ನು ಮುಂದೆ ತಂದು ನಿಲ್ಲಿಸಿಬಿಟ್ಟಿದ್ದರು. ಸಭಿಕರ ಮುಷ್ಟಿ ಗಾತ್ರದ ಹೃದಯದಲ್ಲಿ ಹದವಾಗಿ ವೀಣೆ ಮೀಟಿದಂತೆ ಆಗಿತ್ತು.ಹರಿಹರ, ಕುಮಾರವ್ಯಾಸ ಓದಲು ಅಂಥ ಕಠಿಣ ಕವಿಗಳೇನೂ ಅಲ್ಲ. ದಿಬ್ಬದ ಮತ್ತು ಹನೂರರು ಹೆಚ್ಚೂ ಕಡಿಮೆ ಕಂಠಪಾಠದ ಹಾಗೆ ಉಭಯ ಕವಿಗಳ ಪದ್ಯಗಳನ್ನು ಓದಿದರು. ಕಲಬುರ್ಗಿಯವರೂ ಪಂಪನ ಚಂಪೂ ಪದ್ಯಗಳನ್ನು, ಶ್ರೀವಿಜಯನ ಕಂದ ಪದ್ಯಗಳನ್ನು ಬಾಯಿಪಾಠ ಮಾಡಿದವರ ಹಾಗೆಯೇ ಓದಿದರು. ಅವರು ಓದಿದ್ದು ಕೊಂಚ ಕಠಿಣ ಪದ್ಯಗಳನ್ನಾದರೂ ಅವುಗಳ ಅರ್ಥ ಹೆಚ್ಚು ಬಿಡಿಸಿ ಹೇಳಲಿಲ್ಲ; ಓದುತ್ತಿದ್ದಂತೆಯೇ ತನ್ನಿಂದ ತಾನೇ ಅರ್ಥವೆಲ್ಲ ತೆರೆದುಕೊಳ್ಳುತ್ತ ಹೋಯಿತು. ಸಂಧಿ ಸಮಾಸಗಳನ್ನು ಬಿಡಿಸಿ, ಅಲ್ಲಲ್ಲಿ ಒಂದೆರಡು ಕಠಿಣ ಪದಗಳಿಗೆ ಅರ್ಥ ಹೇಳಿ ಹೆಚ್ಚಿನ ವಿಮರ್ಶೆ, ವಿವರಣೆ ಇಲ್ಲದೆ ಕಾವ್ಯವನ್ನು ಸಂವಹನ ಮಾಡುವುದೇ ಗೋಷ್ಠಿ ಏರ್ಪಡಿಸಿದವರ ಉದ್ದೇಶ ಆಗಿತ್ತು. ಹಳಗನ್ನಡ ಓದುವುದು ಕಷ್ಟ, ಸಂಧಿ ವಿಗ್ರಹ ಮಾಡುವುದು ಕಷ್ಟ.ಸಮಾಸ ಒಡೆಯುವುದು ಕಷ್ಟ. ಎಲ್ಲಿ ನಿಲ್ಲಬೇಕು ಎಂದು ತಿಳಿದುಕೊಳ್ಳುವುದು ಕಷ್ಟ ಎಂದು ಎಲ್ಲರೂ ಹಳಗನ್ನಡವೇಕೆ ನಡುಗನ್ನಡವನ್ನೂ ಬಿಟ್ಟು ದೂರ ಓಡುತ್ತಿರುವಾಗ ಮತ್ತೆ ನಮ್ಮ ಕಾವ್ಯ ಪರಂಪರೆಯ ಜತೆಗೆ ಕೊಂಡಿ ಸಾಧಿಸಿದಂತೆ ಆಗಿತ್ತು.

ನಮ್ಮ ಪ್ರಾಚೀನ ಕಾವ್ಯದ ಜತೆಗೆ ನಮ್ಮ ಸಂಪರ್ಕ ಯಾವಾಗ ಕಡಿದು ಹೋಯಿತು? ನೆನಪು ಮಾಡಿಕೊಳ್ಳುವುದೇನೂ ಕಷ್ಟವಲ್ಲ.ನನಗಿಂತ ವಯಸ್ಸಿನಲ್ಲಿ ಹಿರಿಯರಾದ ಹನೂರರೇ ನೆನಪಿಸಿಕೊಂಡರು : ಅವರು ಎಂ.ಎ ಓದುತ್ತಿದ್ದಾಗ ಹಳಗನ್ನಡ ಕಾವ್ಯದ ಮೇಲಿನ ಪ್ರೌಢಿಮೆ ಅವರಿಗೆ ಹಿರಿಯರಿಮೆಯನ್ನೇನೂ ತಂದಿರಲಿಲ್ಲ! ಆ `ಕೀಳರಿಮೆ'ಯಿಂದ ಹೊರಗೆ ಬರಲು ಅವರು ಆಧುನಿಕ ಕನ್ನಡ ಸಾಹಿತ್ಯವನ್ನೂ ಚೆನ್ನಾಗಿ ಓದಿಕೊಂಡರು; ನವ್ಯದ ಉರವಣೆಯ ಕಾಲದಲ್ಲಿ ಬಚಾವಾದರು. ನಮಗೂ ಅದೇ ಸಮಸ್ಯೆಯಾಯಿತು.ನಲವತ್ತು ವರ್ಷಗಳ ಹಿಂದೆ ನಮ್ಮ ಸಮಕಾಲೀನರು ಪದವಿ ತರಗತಿಗೆ ಓದುತ್ತಿದ್ದಾಗಲೇ ಇಡಿಯಾಗಿ ಒಬ್ಬ ಹಳಗನ್ನಡ ಕವಿಯನ್ನು ಓದುವ ರೂಢಿ ಬಿಟ್ಟು ಹೋಯಿತು. ಆಗಲೇ ಹಳಗನ್ನಡ, ನಡುಗನ್ನಡ ಕವಿಗಳ ಒಂದೆರಡು ಖಂಡಗಳನ್ನು `ಸಂಪಾದಿಸಿ' ಪಠ್ಯಪುಸ್ತಕ ಬರೆದು ಹಣ `ಸಂಪಾದಿಸುವ' ಅಧ್ಯಾಪಕರು ಹುಟ್ಟಿಕೊಂಡಿದ್ದರು.ನನಗಿಂತ ಹಿರಿಯರಾದ ಹನೂರರಿಗೇ ಹಳಗನ್ನಡದ ಓದು ಕೀಳರಿಮೆ ಹುಟ್ಟಿಸಿದ್ದರೆ ನನ್ನ ವಾರಿಗೆಯವರದು ಇನ್ನೂ ಕಷ್ಟ. ಗೋಪಾಲಕಷ್ಣ ಅಡಿಗ, ಅನಂತಮೂರ್ತಿ, ಕಂಬಾರ, ಲಂಕೇಶ, ಶಾಂತಿನಾಥ ದೇಸಾಯಿ, ಕಾರ್ನಾಡ ಮುಂತಾದವರನ್ನು ಓದಿದ್ದರೆ ಸಾಕಿತ್ತು. ನಡು ನಡುವೆ ಕಮು, ಕಾಫ್ಕ, ಸಾರ್ತ್ರ ಎಂದು ಕೆಲವು ಪಾಶ್ಚಾತ್ಯ ಲೇಖಕರ ಹೆಸರು ಉರುಳಿಸಲು ಸಾಧ್ಯವಿದ್ದಿದ್ದರೆ ಬೇಕಾದಷ್ಟು ಆಗುತ್ತಿತ್ತು. ನನ್ನ ಸಹಪಾಠಿಗಳಿಗೆಲ್ಲ ಇವೇ ಹೆಸರು ಮತ್ತೆ ಮತ್ತೆ ಹೇಳಿ ನಾನೂ ಹೆದರಿಸುತ್ತಿದ್ದೆ!ನವ್ಯದ ಉರವಣೆಯ ಜತೆಗೆ ನಮಗೆಲ್ಲ ಒಂದು ವಿಸ್ಮೃತಿಯೂ ಬಂತು ಎಂದು ಅನಿಸುತ್ತದೆ. ಆಧುನಿಕ ಕಾಲದಲ್ಲಿ ಇದ್ದ ಸಮಸ್ಯೆಗಳು ಹಿಂದೆಯೂ ಇದ್ದುವು. ಅದಕ್ಕೆ ಅಲ್ಲಿ ಉತ್ತರಗಳೂ ಇದ್ದುವು. ಕೃಷ್ಣ, ಸಂಧಿಗೆ ಬಂದ ಸಂದರ್ಭದಲ್ಲಿ ದುರ್ಯೋಧನನ ಆಸ್ಥಾನದಲ್ಲಿ ಇದ್ದ ಮಂತ್ರಿಗಳಿಗೂ ಈಗಿನ ಮಂತ್ರಿಗಳಿಗೂ ಅಂಥ ವ್ಯತ್ಯಾಸವೇನೂ ಇಲ್ಲ. ಆಗ `ನೂಲೆಳೆಯಿಂದ ಕತ್ತು ಕುಯ್ಯುವವರು' ಇದ್ದರೆ ಈಗ ಕೂದಲೆಳೆಯಿಂದ ಅದೇ ಕೆಲಸ ಮಾಡುವವರು ಇದ್ದಾರೆ! ಸಮಸ್ಯೆ ಏನಾಯಿತು ಎಂದರೆ ಕಲಬುರ್ಗಿಯವರಿಗೆ ಪ್ರಾಥಮಿಕ ಹಂತದಲ್ಲಿಯೇ ಹಳಗನ್ನಡ ಕವಿಗಳ ಪದ್ಯಗಳನ್ನು ಸಂಧಿ ಬಿಡಿಸಿ ಕಲಿಸುವ ಗುರುಗಳು ಇದ್ದರು.ದಿಬ್ಬದ ಅವರಿಗೂ ಅಂಥ ಗುರುಗಳು ಸಿಕ್ಕಿದ್ದರು. ಕಲಬುರ್ಗಿಯವರು ನಮಗೆ ಕಲಿಸಿದರಾದರೂ ಹಳಗನ್ನಡದ ಪಾಠ ತೆಗೆದುಕೊಳ್ಳಲಿಲ್ಲ. ಆಗ ಯಾರು ಹಳಗನ್ನಡ ಪಾಠ ಮಾಡಿದರು ಎಂಬುದು ಈಗ ನೆನಪು ಉಳಿದಿಲ್ಲ. ನಾವು ಕಾಲೇಜು ಓದುತ್ತಿದ್ದಾಗಲೇ ಹಳಗನ್ನಡ ಪಠ್ಯಗಳಿಗೆ ಗೈಡುಗಳು ಬಂದು ಬಿಟ್ಟಿದ್ದವು. ಮುಂದೆ ಹಳಗನ್ನಡ ಕಾವ್ಯಗಳ ಜತೆಗೆ ಅದರ `ಗದ್ಯಾನುವಾದ' ಪ್ರಕಟಿಸುವ ಪರಂಪರೆಯೂ ಶುರುವಾಯಿತು. ಅಲ್ಲಿಗೆ ಹಳಗನ್ನಡ ಮೂಲ ಕಾವ್ಯದ ಓದು ನಿಂತೇ ಹೋಯಿತು. ನಮ್ಮ ಕಾವ್ಯ ಪರಂಪರೆಯ ಜತೆಗಿನ ನಂಟೂ ಕಡಿದು ಹೋಯಿತು.ಹಳಗನ್ನಡ, ನಡುಗನ್ನಡ ಮಾತ್ರವಲ್ಲ ಹೊಸಗನ್ನಡದ ಕವಿಗಳನ್ನೂ ಓದಿದವರು ನಮ್ಮ ಕಾಲದಲ್ಲಿಯೇ ಕಡಿಮೆ ಆಗಿದ್ದರು. ಕುವೆಂಪು, ಬೇಂದ್ರೆ ಅವರ ಕಾವ್ಯಕ್ಕಿಂತ ಅವರ ಸಮಕಾಲೀನ ಗದ್ಯ ಲೇಖಕರನ್ನು ಓದುವುದು ಸುಲಭ ಎಂದುಕೊಂಡರು. ನನ್ನ ಸಮಕಾಲೀನರು ಬರೀ ನವ್ಯರು ಮಾತ್ರವಲ್ಲ ನವೋದಯದ ಬಹುತೇಕ ಗದ್ಯ ಲೇಖಕರ ಎಲ್ಲ ಕೃತಿಗಳನ್ನಾದರೂ ಓದಿದ್ದರು. ಈಗಿನ ಪೀಳಿಗೆಯವರು ಅದನ್ನೂ ಬಿಟ್ಟುಬಿಟ್ಟರು.ಈಗಿನ ಕನ್ನಡ ಎಂ.ಎ ಪದವೀಧರರು ನಮಗಿಂತ ಹೆಚ್ಚು ಅಂಕ ಗಳಿಸುವಲ್ಲಿ `ಗಟ್ಟಿಗರು'! ಆದರೆ, ಅವರು ಮಾಸ್ತಿಯವರ ಎಲ್ಲ ಕಥೆಗಳನ್ನು ಓದಿದ್ದಾರೆಯೇ? ಶಿವರಾಮ ಕಾರಂತರ ಎಲ್ಲ ಕಾದಂಬರಿಗಳನ್ನು ಓದಿದ್ದಾರೆಯೇ? ಬೇಡ ಬಿಡಿ, ಅನಂತಮೂರ್ತಿ, ಲಂಕೇಶ,  ಕಂಬಾರರ ಎಲ್ಲ ಕೃತಿಗಳನ್ನಾದರೂ ಓದಿದ್ದಾರೆಯೇ? ಅವರಿಗೆ ಪೂರ್ಣಚಂದ್ರ ತೇಜಸ್ವಿ ಮಾತ್ರ ಗೊತ್ತಿರುವಂತೆ ಕಾಣುತ್ತದೆ. ಹಾಗೆಂದು ಅವರ ಎಲ್ಲ ಕೃತಿಗಳನ್ನಾದರೂ ಇವರು ಓದಿರಬೇಕಲ್ಲ? ಒಂದೋ ಎರಡೋ ಓದಿದ್ದರೆ ಹೆಚ್ಚು. ಅದೇ `ಮಿಂಚುಳ್ಳಿ', ಅದೇ `ಪರಿಸರದ ಕಥೆಗಳು' ಅಷ್ಟೇ! ಹಳಗನ್ನಡ, ನಡುಗನ್ನಡ, ಹೊಸಗನ್ನಡ ಯಾವುದನ್ನೂ ಸರಿಯಾಗಿ ಓದದವರು ಪದವಿ ಗಳಿಸುವುದಾದರೂ ಹೇಗೆ? ಗಳಿಸಿದ್ದಾರಲ್ಲ!ಕಾವ್ಯ ಸುಮ್ಮನೆ ಒಲಿಯುವುದಿಲ್ಲ. ಗಟ್ಟಿಯಾಗಿ ಓದುವವರು ಬೇಕು. ಹಾಡುವವರು ಇದ್ದರೆ ಇನ್ನೂ ಚೆನ್ನ. ಕವಿಯ ಅಂತರಂಗವನ್ನು ಹೊಕ್ಕು ಭಾಷೆಯನ್ನು ಹಿಂದೆ ಇಕ್ಕಿ ಆತನ ಭಾವವನ್ನು ಸಂವಹನ ಮಾಡುವ ಅಧ್ಯಾಪಕರು ಇಂದು ಎಷ್ಟು ಮಂದಿ ಇದ್ದಾರೆ? `ಹಳಗನ್ನಡ ಮತ್ತು ವ್ಯಾಕರಣ ಕಲಿಸಲು ಆಗುವುದಿಲ್ಲ. ಯಾವುದಾದರೂ ಹೊಸಗನ್ನಡದ ಪಠ್ಯ ಇದ್ದರೆ ಹೇಳಿ' ಎಂದು ವೇಳಾಪಟ್ಟಿ ನಿಗದಿ ಮಾಡುವಾಗ ಹೇಳುವ ಅಧ್ಯಾಪಕರೇಈಗ ಎಲ್ಲ ಕಡೆಯೂ! ಕೇಶಿರಾಜನ ಶಬ್ದಮಣಿ ದರ್ಪಣವನ್ನು ಕಲಿಸುವ ಅಧ್ಯಾಪಕರನ್ನು ಈಗ ಎಲ್ಲಿ ಹುಡುಕಬೇಕು? ಕಲಬುರ್ಗಿಯವರಿಗೆ ಕಲಿಸಿದ ಬಿ.ಟಿ.ಸಾಸನೂರರಿಗೆ, ಹನೂರರಿಗೆ ಕಲಿಸಿದ ಜಿ.ವಿ.ವೆಂಕಟಸುಬ್ಬಯ್ಯ ಅವರಿಗೆ ಇದ್ದ ಸಂಬಳ ಎಷ್ಟು? ನಮಗೆ ಕಲಿಸಿದ ಕಲಬುರ್ಗಿಯವರಿಗೂ ಹೆಚ್ಚು ಸಂಬಳ ಇರಲಿಲ್ಲ. ಈಗ ವಿಶ್ವವಿದ್ಯಾಲಯ ಬಿಡಿ ಕಾಲೇಜು ಅಧ್ಯಾಪಕರಿಗೇನು ಸಂಬಳ ಕಡಿಮೆ ಇದೆಯೇ? ಆದರೆ, ಅವರ ಒಳಗಿನ ಶಿಕ್ಷಕ ಎಲ್ಲಿ ಹೋದ? ಪ್ರಾಥಮಿಕ ಮತ್ತು ಪ್ರೌಢ ಹಂತದಲ್ಲಿಯೇ ಶಿಕ್ಷಣದ ದಾರಿ ತಪ್ಪುತ್ತಿದೆಯೇ? ಓದುವ ಆಸಕ್ತಿ ಹುಟ್ಟಬೇಕಾದುದು ಅಲ್ಲಿಯೇ.ಅದು ಬೆಳೆಯಬೇಕಾದುದು ಕಾಲೇಜು ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ. ನಮ್ಮ ಬೇರುಗಳೇ ಒಣಗುತ್ತಿವೆಯೇ? ಇದರಲ್ಲಿ ಪಾಲಕರ ತಪ್ಪೇನೂ ಇಲ್ಲವೇ? ಈಗ ಕನ್ನಡ ಯಾರಿಗೆ ಬೇಕಾಗಿದೆ? ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿ ಎಂಜಿನಿಯರ್ ಆಗಿ ಡಾಲರ್‌ಗಳನ್ನು ತಂದುಕೊಟ್ಟರೆ ಸಾಕು ಎಂದೇ ಅಲ್ಲವೇ ನಾವೆಲ್ಲ ಬಯಸುತ್ತಿರುವುದು.ಪ್ರಾಥಮಿಕ ಹಂತದಲ್ಲಿಯೇ ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ಮಕ್ಕಳಿಗೆ ಪಂಪ, ರನ್ನ, ಕುಮಾರವ್ಯಾಸ ಏಕೆ ಬೇಕು? ಬುದ್ಧಿವಂತರೆಲ್ಲ ಎಂಜಿನಿಯರಿಂಗ್ ಕಾಲೇಜು ಸೇರಿದ ಮೇಲೆ ಕನ್ನಡ ಎಂ.ಎ ಮಾಡಲು ಯಾರು ಬರುತ್ತಾರೆ? ಮೂಲ ವಿಜ್ಞಾನದ ತರಗತಿಗಳು ವಿದ್ಯಾರ್ಥಿಗಳು ಇಲ್ಲದೆ ಭಣಗುಡುತ್ತಿರುವುದಕ್ಕೂ ಇದೇ ಕಾರಣ ಇರಬೇಕು.ಹಾಗಾದರೆ ಮತ್ತೆ ನಮ್ಮ ಕಾವ್ಯ ಪರಂಪರೆಯ ಜತೆಗೆ ನಂಟು ಸಾಧಿಸುವುದು ಹೇಗೆ? ಧಾರವಾಡ ಸಾಹಿತ್ಯ ಸಂಭ್ರಮದ ಪ್ರಾಚೀನ ಕನ್ನಡ ಕಾವ್ಯ ವಾಚನ ಗೋಷ್ಠಿ ಈ ದಿಸೆಯಲ್ಲಿ ಒಂದು ದೊಡ್ಡ ಪ್ರಯತ್ನ ಎಂದು ಅನಿಸಿತು. ಗೋಷ್ಠಿ ಮುಗಿದ ಮೇಲೆ ನಾನು ಗಿರಡ್ಡಿ ಗೋವಿಂದರಾಜರ ಬಳಿ ಹೋಗಿ ಕೈ ಕುಲುಕಿ ಅಭಿನಂದನೆ ಹೇಳಿದೆ, ಕೃತಜ್ಞತೆ ಸಲ್ಲಿಸಿದೆ. ಅದೇನು ದೊಡ್ಡ ಸಂಗತಿಯಲ್ಲ.ಈ ಗೋಷ್ಠಿ ನಡೆದಾಗ ನನ್ನ ಪಕ್ಕದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಿಂದ ಈಚೆಗಷ್ಟೇ ಪದವಿ ಪೂರೈಸಿದ ಒಬ್ಬ ವಿದ್ಯಾರ್ಥಿನಿ ಕುಳಿತಿದ್ದರು `ನೋಡಿ ಸರ್ ನಮ್ಮ ವಿಭಾಗದಿಂದ ಒಬ್ಬ ಅಧ್ಯಾಪಕರು ಬಿಟ್ಟರೆ ಬೇರೆ ಯಾರೂ ಈ ಗೋಷ್ಠಿಗೆ ಬರುವುದು ಹೋಗಲಿ, ಈ ಸಭಾಂಗಣದ ಕಡೆಗೇ ಮೂರೂ ದಿನ ತಲೆ ಹಾಕಿಲ್ಲ. ಸಭಾಂಗಣ ದೂರವೇನೂ ಇಲ್ಲ.

 ನಮ್ಮ ವಿಭಾಗದ ಮುಂದೆಯೇ ಇದೆ' ಎಂದರು! ಅವರಿಗೆಲ್ಲ ಸಾಹಿತ್ಯ ಸಂಭ್ರಮದ ಜತೆಗೆ ತಾತ್ವಿಕ ಭಿನ್ನಾಭಿಪ್ರಾಯವಿತ್ತೇ? ಎಲ್ಲರಿಗೂ ಇರಲಿಕ್ಕಿಲ್ಲ. ಕಲಿಸುವವರಿಗೇ ಸಾಹಿತ್ಯದಲ್ಲಿ ಆಸಕ್ತಿ ಇರದೇ ಇದ್ದರೆ ಕಲಿಯುವವರಿಗೆ ಎಲ್ಲಿಂದ ಬರುತ್ತದೆ?ಹಾಗಾದರೆ ನಮ್ಮ ಕಾವ್ಯ ಪರಂಪರೆಯ ಜತೆಗೆ ನಂಟು ಸಾಧಿಸುವುದು ಹೇಗೆ? ಬಹಳ ಕಷ್ಟ. ನಾವು ಬಹು ದೂರ ಬಂದು ಬಿಟ್ಟಿದ್ದೇವೆ. ಹಳ್ಳಿಗಳಲ್ಲಿ ರೈತರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿ ಎಂಜಿನಿಯರುಗಳೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ನಮ್ಮ ಹಳಗನ್ನಡ ಕವಿಗಳು ಜನ ಬದುಕಬೇಕು ಎಂದು ಕಾವ್ಯ ಬರೆದಿದ್ದರು. ಎಂಥ ವಿಪರ್ಯಾಸ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry