ಬರೀ ಹೆಸರಿಗಿರುವ ವೆಬ್ ಪಾವತಿ ಸೌಕರ್ಯ

7

ಬರೀ ಹೆಸರಿಗಿರುವ ವೆಬ್ ಪಾವತಿ ಸೌಕರ್ಯ

ಎಸ್.ಆರ್. ರಾಮಕೃಷ್ಣ
Published:
Updated:
ಬರೀ ಹೆಸರಿಗಿರುವ ವೆಬ್ ಪಾವತಿ ಸೌಕರ್ಯ

ನೀರಿನ ಬಿಲ್ ಇಂಟರ್‌ನೆಟ್‌ನಲ್ಲಿ ಸಲೀಸಾಗಿ ಕಟ್ಟಬಹುದು, ಕ್ಯೂ ನಿಲ್ಲುವ ಅಗತ್ಯವಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಡಿಸೆಂಬರ್‌ನಲ್ಲಿ, ಅಂದರೆ ಈಗ್ಗೆ ಎರಡು ತಿಂಗಳ ಹಿಂದೆ, ಪ್ರಕಟಿಸಿತು.

ಪತ್ರಿಕೆಗಳು ಈ ಸುದ್ದಿಗೆ  ಪ್ರಚಾರ ಕೊಟ್ಟವು. ಆದರೆ ಮಂಡಳಿಯ ವೆಬ್‌ಸೈಟ್ ನಿಜವಾಗಿಯೂ ಗ್ರಾಹಕ ಸ್ನೇಹಿಯಾಗಿದೆಯೇ? ಸೌಕರ್ಯವನ್ನು ಬಳಸಲು ಹೋಗಿ ನನಗೆ ಇಡೀ ಒಂದು ದಿನ ವ್ಯರ್ಥವಾಯಿತು.ಸೈಟ್ ಸಮರ್ಪಕವಾಗಿ ಕೆಲಸ ಮಾಡುವುದಿಲ್ಲ. ಮೊದಲು ನೋಂದಣಿ: ಎಂಟು ಸಲ ಪಾಸ್‌ವರ್ಡ್ ಕೇಳುತ್ತದೆ. ಹೀಗೆ ಕೇಳುವ ಪ್ರಪಂಚದ ಏಕೈಕ ಸೈಟ್ ಇದಿರಬೇಕು! ಮತ್ತು ಅಸಮಂಜಸ ಪ್ರಶ್ನೆಗಳು ಬೇರೆ. ನಿಮ್ಮ ಬಯಾಗ್ರಫಿ ಬರೆಯಿರಿ ಎಂದು ಒಂದಷ್ಟು ಜಾಗ. ಇಲ್ಲಿಗೆ ಜನ ಬರುವುದು ನೀರಿನ ಬಿಲ್ ಕಟ್ಟುವುದಕ್ಕೆಯೇ ಹೊರತು ತಮ್ಮ ಜೀವನದ ಕಥೆಯನ್ನು ಹೇಳಿಕೊಳ್ಳುವುದಕ್ಕಲ್ಲ ಎಂಬ ಅರಿವು ಈ ಸೈಟ್ ವಿನ್ಯಾಸ ಮಾಡುವವರಿಗೆ ಇಲ್ಲವೇ? ಲಿಂಕ್‌ಗಳು ಕೂಡ ಅಸ್ತವ್ಯಸ್ತವಾಗಿವೆ. ಈ ಸೇವೆ ತುಂಬ ಸುಧಾರಿಸಬೇಕಾಗಿದೆ.ಸಾರ್ವಜನಿಕ ಸೌಕರ್ಯಕ್ಕೆ ಸಂಬಂಧ ಪಟ್ಟ ವಿಷಯವಾದ್ದರಿಂದ ಸ್ವಂತ ಅನುಭವ ಹಂಚಿಕೊಳ್ಳುತ್ತಿದ್ದೇನೆ. ಈ ಮೊದಲೇ ಬ್ಯಾಂಕ್ ಖಾತೆಯಿಂದ ಪ್ರತಿ ತಿಂಗಳು ಹಣ ಪಾವತಿಯಾಗುವಂತೆ ನಾನು ಇಸಿಎಸ್ ಮಾಡಿಸಿದ್ದೆ. ಕೆಲವು ತಿಂಗಳು ಸರಿಯಾಗಿ ಪಾವತಿಯಾಯಿತು.ಮಂಡಳಿಯ ಸೈಟ್ ಹೇಳುವ ಪ್ರಕಾರ ನನ್ನ ಕಡೆಯಿಂದ ಏನೂ ಬಾಕಿಯಿಲ್ಲ. ಆದರೆ ಅದೆಷ್ಟೋ ತಿಂಗಳಿಂದ ದುಡ್ಡು ಕಟ್ಟಿಲ್ಲ ಎಂದು ಮಂಡಳಿಯ ಸಿಬ್ಬಂದಿಯವರು ಚೀಟಿ ಕೊಟ್ಟು ಹೋಗಿದ್ದಾರೆ. ಇದೇನು ಗೊಂದಲ? ಸೈಟ್‌ನಿಂದ ಪರಿಹಾರ ಆಗಲಿಲ್ಲ. ಏನೂ ಬಾಕಿಯಿಲ್ಲ ಎಂದು ಹೇಳಿ, ಅದು ಹಣ ಕಟ್ಟಲು ಮುಂದುವರೆಯಲು ಬಿಡುವುದಿಲ್ಲ. ಮಂಡಳಿಯ ಕಚೇರಿಗೆ ಹೋಗಿ, ಬ್ಯಾಂಕ್‌ಗೆ ಕರೆಗಳು ಮಾಡಿದ ಮೇಲೆ ತಿಳಿದ ವಿಷಯ: ಇಸಿಎಸ್‌ಗೆ ಬಿಲ್ ಪ್ರೆಸೆಂಟ್ ಮಾಡುವಾಗ ಮಂಡಳಿಯ ಸಿಬ್ಬಂದಿ ತಪ್ಪು ನಂಬರ್ ತುಂಬಿಸಿದ್ದಾರೆ.ಸುಮಾರು ಇದೇ ಸಮಯಕ್ಕೆ ಒಂದು ಖಾಸಗಿ ವೆಬ್‌ಸೈಟ್ ಕೂಡ ಬಳಸಿದೆ. ಇದು ಐನಾಕ್ಸ್ ಸಿನಿಮಾ ಮಂದಿರದ್ದು. ಎಷ್ಟು ಚೆನ್ನಾಗಿ ಕೆಲಸ ಮಾಡಿತು ಅಂದರೆ ಕೇವಲ ಐದೇ ನಿಮಿಷದಲ್ಲಿ ಟಿಕೆಟ್ ಬುಕ್ ಆಗಿ ಹೋಯಿತು. ಬೇಕಾದ ಸೀಟ್ ಆರಿಸಿಕೊಳ್ಳುವ ಸೌಲಭ್ಯವನ್ನೂ ಈ ಸೈಟ್ ಒದಗಿಸುತ್ತದೆ. ಮಲ್ಟಿಪ್ಲೆಕ್ಸ್‌ಗೆ ಹೋದಾಗ ಪಾಪ್‌ಕಾರ್ನ್, ಕೋಲಾ ಬೇಕೇ ಎಂದು ಬೇರೆ ಕೇಳುತ್ತದೆ. ಎಲ್ಲವೂ ಟಿಕೆಟ್ ಬುಕ್ ಮಾಡುವಾಗಲೇ ಕ್ರೆಡಿಟ್ ಕಾರ್ಡ್ ಹಾಕಿ ಮುಂಗಡವಾಗಿ ಕಾದಿರಿಸಬಹುದು. ಟಿಕೆಟ್ ಖರೀದಿ ಮಾಡಲು ಬಳಸಿದ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡನ್ನು ಥಿಯೇಟರ್ ಬಾಗಿಲಲ್ಲಿ ಇಟ್ಟಿರುವ ಕಂಪ್ಯೂಟರ್‌ನಲ್ಲಿ ಉಜ್ಜಿದರೆ ಟಿಕೆಟ್ ನಿಮ್ಮ ಕೈಗೆ ಬರುತ್ತದೆ.(ಅಂದ ಹಾಗೆ ನಾನು ನೋಡಿದ ಸಿನಿಮಾ ಮಣಿರತ್ನಂ ಅವರ ಕಡಲ್. ಸಾಧ್ಯವಾದರೆ ನೋಡಿ. ನಿಧಾನಗತಿಯ ಸಿನಿಮಾ ಆದರೂ, ಎಲ್ಲರೂ ಹೇಳುವಷ್ಟು ಕೆಟ್ಟದಾಗಿಲ್ಲ. ಸಮುದ್ರದ ತಡಿಯಲ್ಲಿ ಬದುಕುವ ಕ್ರಿಶ್ಚಿಯನ್ ಸಮುದಾಯದ ಕಥೆಯೊಂದನ್ನು ಮಣಿರತ್ನಂ ಹೇಳಿದ್ದಾರೆ. ನಾಯಗನ್, ದಳಪತಿ, ರಾವಣನ್ ಥರದ- ಅವರಿಗೆ ತೀರ ಇಷ್ಟವಾದ ಕಳ್ಳ-ಪೋಲಿಸ್ ಕಥೆಯನ್ನು ಬಿಟ್ಟು- ನಂಬಿಕೆ, ಆಸ್ತಿಕತೆಯ ಸುತ್ತ ಚಿತ್ರವನ್ನು ಹೆಣೆದಿದ್ದಾರೆ. ನಿರ್ದೇಶಕರ ಮಾಗಿದ ದನಿ ಅಲ್ಲಲ್ಲಿ  ಕೇಳುತ್ತದೆ). ಈ ಎರಡು ಸೈಟ್‌ಗಳ ಕಾಂಟ್ರಾಸ್ಟ್ ನೋಡಿ ನೀವು ಕೆಲವು ನಿರ್ಧಾರಗಳಿಗೆ ಬರಬಹುದು. ಸರ್ಕಾರಿ ಸಂಸ್ಥೆಗಳ ಸಿಬ್ಬಂದಿಗೆ ನೀವು ಕಚೇರಿಗೆ ಅಲೆಯುವುದು ಇಷ್ಟ. ದೂರದಿಂದಲೇ ಕೆಲಸ ಮುಗಿಸಿಬಿಟ್ಟರೆ ಅವರಿಗಿರುವ ನಿಮ್ಮ ಮೇಲಿನ ಹಿಡಿತ ಕಡಿಮೆಯಾಗಿಬಿಡುತ್ತದೆ! ಅದಕ್ಕೆ ವಿರುದ್ಧವಾಗಿ, ಖಾಸಗಿಯವರು ಆದಷ್ಟೂ ಕಡಿಮೆ ಸಿಬ್ಬಂದಿ ನಿಯೋಜಿಸಿ ಬೇಗ ನಿಮ್ಮಿಂದ ದುಡ್ಡು ವಸೂಲಿ ಮಾಡುವುದರಲ್ಲಿ ನಿಪುಣರು. ಈ ಥಿಯರಿಗೆ ಹಲವು ಉದಾಹರಣೆಗಳು ಸಿಗುತ್ತವೆ. ಇಂಟರ್ನೆಟ್‌ನಲ್ಲಿ ರೈಲ್ವೆ ಬುಕಿಂಗ್ ಕಷ್ಟ. ಆದರೆ ಮೊಬೈಲ್ ಬಿಲ್ ಪಾವತಿ ಮಾಡುವುದು ಸುಲಭ! ಹೀಗೆ ಚಿಂತಿಸುತ್ತಿದ್ದಾಗ ನಮ್ಮ ರಾಜ್ಯದ ಸರ್ಕಾರಿ ಸಾರಿಗೆ ಸಂಸ್ಥೆಯ ಸೈಟ್ ಕೂಡ ತೆರೆದು ಹೇಗೆ ಕೆಲಸ ಮಾಡುತ್ತದೆ ಎಂದು ನೋಡುವ ಅವಕಾಶ ದೊರಕಿತು. ಮೊದಲ ಬಾರಿಗೆ ಸರ್ವರ್ ತೊಂದರೆ ಇರುವಂತೆ ಕಂಡರೂ, ಮತ್ತೆ ಪ್ರಯತ್ನಿಸಿದಾಗ ಚೆನ್ನಾಗಿ ಕೆಲಸ ಮಾಡಿತು. ಅಷ್ಟು ಹೊತ್ತಿಗಾಗಲೇ ಖಾಸಗಿ ಸೈಟ್‌ನಲ್ಲಿ  ಪರ್ಯಾಯ ಹುಡುಕುತ್ತಿದ್ದ ನಾನು ಕೆಎಸ್‌ಆರ್‌ಟಿಸಿಯಲ್ಲಿಯೇ ಶೀಘ್ರವಾಗಿ ಬುಕ್ ಮಾಡಲು ಸಾಧ್ಯವಾಯಿತು. ಆ ಸಂಸ್ಥೆಯ ಸಹಾಯವಾಣಿಗೆ ಮಧ್ಯರಾತ್ರಿ ಆಸುಪಾಸಿನಲ್ಲಿ ಫೋನ್ ಮಾಡಿದಾಗ ಮಾಹಿತಿಯನ್ನು ಸ್ನೇಹಪೂರ್ವಕವಾಗಿ ಕೊಟ್ಟರು.ಸರ್ಕಾರಿ ಸಂಸ್ಥೆಗಳು ಮನಸ್ಸು ಮಾಡಿದರೆ ಖಾಸಗಿಯವರಷ್ಟೇ, ಅಥವಾ ಖಾಸಗಿಯವರಿಗಿಂತ ಉತ್ತಮವಾಗಿಯೇ, ಅನುಕೂಲಗಳನ್ನು ಒದಗಿಸಬಲ್ಲರು ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ.ದೇವನೂರ ಮಹಾದೇವರ ಪ್ರಶ್ನೆಗಳು  

ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯ ಯೂನಿವರ್ಸಿಟಿಯಲ್ಲಿ  ದಲಿತ ಸಾಹಿತ್ಯ ಮತ್ತು ಚಳುವಳಿಯ ಕುರಿತು ಮೊನ್ನೆ ಒಂದು ವಿಚಾರಗೋಷ್ಠಿ ನಡೆಯಿತು. ಹಲವು ಸಾಹಿತಿಗಳು, ಚಿಂತಕರು, ಅನುವಾದಕರು ಬಂದಿದ್ದರು. ಬೇರೆ ಬೇರೆ ಊರುಗಳಿಂದ ಬಂದಿದ್ದ ಕಿರಿಯ ಸಾಹಿತಿಗಳ ಅನುಭವಗಳನ್ನು ಕೇಳುವ ಅವಕಾಶ ಸಿಕ್ಕಿತು. ಅವೆಷ್ಟು ತೀವ್ರವಾದ ಅನುಭವಗಳು ಅಂದರೆ ಸುಮ್ಮನೆ ಅಕ್ಷರಕ್ಕಿಳಿಸಿ ಪ್ರಕಟಿಸಿಬಿಟ್ಟರೆ ಒಳ್ಳೆಯ ಪುಸ್ತಕವಾಗಿಬಿಡುತ್ತದೆ ಅನಿಸಿತು.ಅನಸೂಯಾ ಕಾಂಬ್ಳೆ, ರಾಮಪ್ಪ ಮಾದಾರ, ಬಸವರಾಜ್ ಸಿರಿವರ, ಲಕ್ಕೂರ್ ಆನಂದ, ಟಿ.ಕೆ. ದಯಾನಂದ್ ಮಾತಾಡಿದ್ದನ್ನು ನಾನು ಕೇಳಿದೆ. ದು. ಸರಸ್ವತಿ ಶಿಷ್ಟ ಭಾಷೆಯಲ್ಲಿ ಮಾತಾಡುತ್ತಲೇ ತಮ್ಮ ನಾಟಕದ ಒಂದು ಜನಪದ ಪಾತ್ರವಾಗಿಬಿಟ್ಟರು. ರಾಮಾಯಣದ ಕಥೆಯನ್ನು ಸೀತೆಯ ದೃಷ್ಟಿಯಿಂದ, ಜನಪದ ಭಾಷೆಯಲ್ಲಿ ಹೇಳಿಬಿಟ್ಟರು. ಹಾಗೆಯೇ ಈಜಿಪುರದಲ್ಲಿ ಮಾಲ್ ಪ್ರಾಜೆಕ್ಟ್‌ನಿಂದಾಗಿ ಬೀದಿಗೆ ಬಿದ್ದಿರುವ ಬಡವರ ಪಾಡನ್ನೂ ಪ್ರಸ್ತಾಪಿಸಿದರು.ಹಾಡಿನಂತಿರುವ ಕಾದಂಬರಿ `ಕುಸುಮಬಾಲೆ'ಯನ್ನು ಕೊನೆಗೆ ಓದಿದ ದೇವನೂರ ಮಹಾದೇವ ಅವರ ಮಾತನ್ನು ಕೇಳಲು ಎಲ್ಲರೂ ಕಾತರರಾಗಿದ್ದರು. ಅವರು ಕೆಲವು ಪ್ರಶ್ನೆಗಳನ್ನು ಎತ್ತಿದರು. ದಲಿತ ಸಾಹಿತ್ಯ ದಲಿತ ಎಂದು ಯಾವಾಗ ಆಗುತ್ತದೆ: ಬರೆಯುವ ಮುಂಚೆಯೇ, ಬರೆಯುವಾಗಲೇ, ಅಥವಾ ಬರೆದ ನಂತರವೇ? ದಲಿತೇತರರು ದಲಿತ ಸಾಹಿತ್ಯ ಬರೆಯಲು ಸಾಧ್ಯವಿಲ್ಲವೇ? ಇಲ್ಲ ಎಂದಾದರೆ ದಲಿತರು ದಲಿತೇತರ ಸಾಹಿತ್ಯ ಬರೆಯಲು ಸಾಧ್ಯವಿಲ್ಲವೇ? ಎರಡೂ ಪ್ರಶ್ನೆಗೆ ಉತ್ತರ ಇಲ್ಲ ಎಂದೇ ಆದರೆ ಅದು ಸೃಜನಶೀಲತೆಯ ಚಲನಶೀಲತೆಗೇ ವಿರುದ್ಧವಲ್ಲವೆ?ಹ್ಯಾರಿಸ್ ಕಾರ್ನರ್

ಈಜಿಪುರದಲ್ಲಿ ಮನೆ ಕಳೆದುಕೊಂಡು ಬಡವರು ಪಾಡು ಪಡುತ್ತಿದ್ದಾಗ ಅಲ್ಲಿಯ ಶಾಸಕ ಎನ್.ಎ. ಹ್ಯಾರಿಸ್ ಕಾಣಿಸಿಕೊಳ್ಳಲೇ ಇಲ್ಲವಂತೆ. ಯಾಕಿರಬಹುದು ಹೇಳಿ? ಅವರ ಹೆಸರಲ್ಲೇ ಇದೆಯಲ್ಲ: `ನಾಟ್ ಅವೈಲಬಲ್' ಹ್ಯಾರಿಸ್ ಅಂತ! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry