ಬರುತ್ತಾಳೆಂದು ಕಾಯುತ್ತಿದ್ದಾನೆ

7

ಬರುತ್ತಾಳೆಂದು ಕಾಯುತ್ತಿದ್ದಾನೆ

Published:
Updated:

ಈತ ತನ್ನ ಸುದೀರ್ಘ ನಿಟ್ಟುಸಿರಿನೊಂದಿಗೆ ನನ್ನೆದುರಿಗೆ ಬರುತ್ತಾನೆ. ಹದಿ ಹರೆಯದಲ್ಲಿ ಹುಟ್ಟಿದ ಪ್ರೇಮ ಈತನಿಗೆ ಸರಿಯಾಗಿ ಬುದ್ಧಿ ಕಲಿಸಿದೆ. ಈತ ಸೋತು ಸುಣ್ಣವಾಗಿ ಹೋಗಿದ್ದಾನೆ. ಅವನ ಕಣ್ಣುಗಳು ನಿರಾಸೆಗಳ ಸಹಿಸಿ, ಸಹಿಸಿ, ತಮ್ಮ ಅಂದವನ್ನೇ ಕಳೆದುಕೊಂಡಿವೆ. ಕಣ್ಣಿನ ಗುಡ್ಡೆಗಳ ಸುತ್ತ ಚಿಂತೆ ಕಪ್ಪಾಗಿ ಹೆಪ್ಪುಗಟ್ಟಿದೆ. ನಗುವುದನ್ನೇ ಮರೆತ ಆತ ಅಕಾಲಿಕ ಮುದುಕನಂತೆ ಕಾಣುತ್ತಾನೆ.  ಹಣೆಯ ಮೇಲೆ ನೇಗಿಲು ಹೂಡಿದಂತೆ ಚಿಂತೆಯ ಗೆರೆಗಳು ಹುಟ್ಟಿಕೊಂಡಿವೆ. ಕುರುಚಲು ಗಡ್ಡ, ಮಾಸಿದ ಬಟ್ಟೆಗಳಲ್ಲಿರುವ ಅವನು ಅವಳಿಗಾಗಿ ಇನ್ನೂ ಕಾಯುತ್ತಲೇ ಇದ್ದಾನೆ. ಕೇಳಿದರೆ ನಿರ್ಲಿಪ್ತವಾಗಿ ‘ಬಂದೇ ಬರ್ತಾಳೆ ಕಣೋ’ ಎನ್ನುತ್ತಾನೆ.ತಾನು ಪ್ರೀತಿ ಮಾಡಿದ್ದು ತಪ್ಪು ಅಂತ ಈ ತನಕವೂ ಅವನಿಗನ್ನಿಸಿಲ್ಲ. ಹದಿಹರೆಯದ ಹುಚ್ಚು ಪ್ರೀತಿ ಶಾಪವಾದ ಬಗ್ಗೆ ಕಿಂಚಿತ್ತು ಬೇಸರವೂ ಅವನಿಗಿಲ್ಲ. ಸಾವು ತನ್ನನ್ನು ಹಿಂಬಾಲಿಸುತ್ತಿದೆ ಎನ್ನುವಂತೆ ಒಮ್ಮೊಮ್ಮೆ ಹೆದರುತ್ತಾನೆ. ತಾನಾಗಿಯೇ ಸುಟ್ಟುಕೊಂಡ ಬದುಕಿನ ಬೂದಿಯಲ್ಲೂ ಬಾಳುವ ಚೈತನ್ಯ ಹುಡುಕುತ್ತಿರುವ ಈ ಗೆಳೆಯನ ಹೆಸರು ರವಿ. ಆಕೆ ಅನಸೂಯ.

ಇದು ಹೀಗೆ ನಡೆದುಹೋದ ಘಟನೆ. ನಾನು ಇವರ ಜೊತೆ ಪಿಯುಸಿ ಓದುತ್ತಿದ್ದೆ. ರವಿ ಶ್ರೀಮಂತ ರೈತನ ಮಗ. ಓದು ಅವನಿಗೆ ಟೈಂಪಾಸ್. ವರ್ಷಕ್ಕೊಂದು ಹೊಸ ದ್ವಿಚಕ್ರ ವಾಹನ ಖರೀದಿಸುವ ಶೋಕಿ. ನಮ್ಮ ಕಾಲೇಜಿನ ಉಪನ್ಯಾಸಕರು ಸೈಕಲ್ಲಿನಲ್ಲಿ ಬರುವಾಗ ಇವನು ವೆಹಿಕಲ್ಲಿನಲ್ಲಿ ಬರುತ್ತಿದ್ದ. ಈತನ ಕಪ್ಪು ಕನ್ನಡಕ, ಹೊಸ ಬಟ್ಟೆ, ದುಡ್ಡು ಖರ್ಚು ಮಾಡುವ ಖಯಾಲಿಗೆ ಮನಸೋತವರೆಲ್ಲಾ ಇವನ ಗೆಳೆಯರಾದರು.ರವಿ ಹಣದಿಂದಲೇ ಸುಖವೆಂದು ತಿಳಿದಿದ್ದ. ದುಡ್ಡಿದ್ದರೆ ಏನು ಬೇಕಾದರೂ ಖರೀದಿಸಬಹುದೆಂದು ಹೇಳುತ್ತಿದ್ದ. ಹುಡುಗಿಯರ ಕುರಿತ ಇವನ ಒರಟುತನ, ಉಡಾಫೆ, ನೆಗೆಟಿವ್ ಧೋರಣೆಗಳು ಅದ್ಯಾವ ಹೊತ್ತಿನಲ್ಲಿ ಪ್ರೇಮವಾಗಿ ಪರಿವರ್ತನೆಯಾದವೋ?  ಪ್ರಾಯಶಃ ಅವನಿಗೂ ತಿಳಿಯಲಿಲ್ಲ.ಇದು ಮನುಷ್ಯನ ದೌರ್ಬಲ್ಯವೋ? ಬದಲಾವಣೆಯೋ ಗೊತ್ತಿಲ್ಲ. ಆತ ಯಾವುದನ್ನು ಅತಿಯಾಗಿ ವಿರೋಧಿಸುತ್ತಾನೋ ಆ ಅತಿವಿರೋಧವೇ ಮುಂದೊಂದು ಕಾಲಕ್ಕೆ ಆತನಲ್ಲಿ ಆರಾಧನೆಯಾಗಿ ಬದಲಾಗಿ ಬಿಡುತ್ತದೆ. ಅತಿಯಾದ ದ್ವೇಷ ಒಂದು ದಿನ ಪ್ರೀತಿಯಾಗಿ ಪರಿವರ್ತನೆಯಾಗುತ್ತದೆ. ಸದಾ ತನ್ನ ಶತ್ರುಗಳ ಬಗ್ಗೆ, ಹುಡುಗಿಯರ ಬಗ್ಗೆ, ರೌಡಿಸಂ ಬಗ್ಗೆ ಹೆಚ್ಚು ಹೆಚ್ಚಾಗಿ ಮಾತಾಡುತ್ತಿದ್ದ ರವಿ ಈಗ ಪೂರ್ತಿ ತದ್ವಿರುದ್ಧವಾಗಿದ್ದಾನೆ.ಸಿಕ್ಕಾಪಟ್ಟೆ ಪ್ರೀತಿಸಲ್ಪಡುವ ಜೀವವೊಂದು ಬದುಕಿನಲ್ಲಿ ಬದ್ಧ ವೈರಿಯಾಗುವುದು. ಬದ್ಧ ವೈರಿ ಕೊನೆಗೆ ಗೆಳೆಯನಾಗುವುದು ಯಾಕಿರಬೇಕು?  ‘ದ್ವೇಷದ ತುತ್ತ ತುದಿ ಪ್ರೀತಿ, ಪ್ರೀತಿಯ ಕೊನೆ ದ್ವೇಷ. ಆಸೆಯ ಅಂತ್ಯ ವೈರಾಗ್ಯ’ ಎಂದು ಯಾರೋ ಹೇಳಿದ ಮಾತು ಸತ್ಯವೇ ಇರಬೇಕು.ಈಗ ನಮ್ಮ ಪ್ರೇಮ ಕಥೆ ಕಡೆಗೆ ಬರೋಣ. ರವಿಯ ಪ್ರೇಮದಿಂದ ಅನಸೂಯ ತ್ವರಿತಗತಿಯಲ್ಲಿ ಬದಲಾದಳು. ನೆಲವನ್ನು ಅಳತೆ ಮಾಡಿಕೊಂಡು, ಕತ್ತನ್ನು ಕಿತ್ತು ನೆಲಕ್ಕೆ ಬಗ್ಗಿಸಿಕೊಂಡು ಸಾಕ್ಷಾತ್ ಗೌರಮ್ಮಳಂತೆ ಬರುತ್ತಿದ್ದ ಅನಸೂಯ ಯಾವಾಗ ಬದಲಾದಳೋ ತಿಳಿಯಲಿಲ್ಲ. ಇವರಿಬ್ಬರ ಪ್ರೇಮದ ಕಣ್ಣೋಟ, ಒಪ್ಪಿಗೆ ಯಾವ ಕ್ಷಣದಲ್ಲಿ ನಡೆಯಿತು ಎಂಬುದೆಲ್ಲರಿಗೂ ಸೋಜಿಗ. ‘ಈ ನನ್ಮಗ ಯಾವ ಮಾಯದಲ್ಲಿ ಅವಳನ್ನು ಪಟಾಯಿಸಿಕೊಂಡನೋ?’ ಎಂದು ಗೆಳೆಯರೆಲ್ಲಾ ಆಶ್ಚರ್ಯ ಪಟ್ಟವರೇನೆ. ಕೆಲವರಂತೂ ಸಂಕಟದಿಂದ ಕೈಕೈ ಹಿಸುಕಿಕೊಂಡು ಅಂಡುಸುಟ್ಟ ಬೆಕ್ಕಿನಂತೆ ಚಡಪಡಿಸಿದರು.ಅವಳ ಬಗ್ಗೆ ಒಳಗೊಳಗೇ ಕನಸು ಕಾಣುತ್ತಿದ್ದವರು ಆಕಾಶ ಕಳಚಿ ಬಿದ್ದಂತೆ ಒದ್ದಾಡಿದರು. ಕೆಲವರೋ ಹಾವಿನಂತೆ ಬುಸುಗುಟ್ಟಿದರು. ಈ ವಿಷಯದಲ್ಲಿ ನಯಾಪೈಸೆಯ ಧೈರ್ಯವಿಲ್ಲದ ನನ್ನಂಥವರು ಒಳಗೆ ಹೊಟ್ಟೆಕಿಚ್ಚು  ತುಂಬಿಟ್ಟುಕೊಂಡೇ ವಿಷಾದದಿಂದ ರವಿಯ ಕೈ ಕುಲುಕಿದೆವು. ಕಾಲೇಜು, ಪಾಠ, ನೋಟ್ಸು, ಓದು, ಪರೀಕ್ಷೆಗಳೆಂಬ ಭೂತಗಳ ಜೊತೆಗೆ ಮನೆಯ ಕಿರಿಕಿರಿಯ ಪ್ರೇತಗಳೂ ಸೇರಿ  ಇಡೀ ವಿದ್ಯಾರ್ಥಿ ಜೀವನದ ಮೇಲೆ ನಮಗೆ ಅಗಾಧ ಸಿಟ್ಟು ಉಕ್ಕುತ್ತಿತ್ತು. ಆಗ ನಮಗೆ ಸುಖವಾಗಿ ಕಾಣಿಸುತ್ತಿದ್ದವೆಂದರೆ; ಸಿನಿಮಾ, ಐಸ್‌ಕ್ರೀಂ ಪಾರ್ಲರ್, ಕ್ಯಾಂಟೀನ್, ಹರಟೆ, ಪ್ರೇಮ ಪತ್ರಗಳು, ತಿರುಗಾಟ, ಇತ್ಯಾದಿಗಳು. ಕೈಯಲ್ಲಿ ಕಾಸಿಲ್ಲದೆ, ಹಾಕಲು ಒಳ್ಳೆಯ ಬಟ್ಟೆಗಳಿಲ್ಲದೆ ಅನಾಥರಂತೆ ಕಾಲ ನೂಕುತ್ತಿದ್ದ ನಮಗೆಲ್ಲಾ ರವಿ ಥೇಟ್ ಸಿನಿಮಾ ಹೀರೊ ಥರ ಕಾಣಿಸತೊಡಗಿದ.‘ನಾವು ಪಾಪ ಮಾಡಿ ಹುಟ್ಟಿದ್ದೇವೆ ಕಣಲೆ. ಬಡ್ಡೀಮಗಂದು ಅದೃಷ್ಟ ಅಂದ್ರೆ ಅವಂದು ನೋಡು. ಹುಟ್ಟಿದ್ರೆ ಶ್ರೀಮಂತರಾಗಿ ಹುಟ್ಟಬೇಕು ಕಣೋ. ಥೂ.. ನಮ್ಮದು ಒಂದು ಜನ್ಮನಾ. ಆ ದೇವ್ರಿಗೆ ಕಣ್ಣಿಲ್ಲ ಕಣೋ. ನಮ್ಮ ಹಣೆಬರಹ ಕತ್ತೆ ಲದ್ದಿಯಲ್ಲಿ ಬರೆದ್ಬಿಟ್ಟ. ಆ ರವಿಯ ಹಣೇಬರಹ ನೋಡೋ ದೇವ್ರು ಬಂಗಾರದ ಪೆನ್ನಲ್ಲಿ ಬರೆದಿದ್ದಾನೆ. ಛಾನ್ಸು ಅಂದ್ರೆ ಇದಪ್ಪ’ ಎಂದು ನಾನು, ಪಚ್ಚಿಶಿವು ವೇದನೆಯಿಂದ ಮಾತಾಡಿಕೊಂಡೆವು.ಅಷ್ಟರಲ್ಲೇ ರವಿ ಅನಸೂಯ ಲಗುಬಗೆಯಿಂದ ಸಿನಿಮಾ, ಪಾರ್ಕು, ಐಸ್‌ಕ್ರೀಮ್ ಪಾರ್ಲರ್, ತುಂಗಾ ಡ್ಯಾಮು ಎಲ್ಲಾ ಕಡೆ ಸುತ್ತಾಡಿದರು. ಸಿನಿಮಾ ಶೈಲಿಯಲ್ಲಿ ಓಡಾಡಿದರು.  ಒಂದೇ ವಾರದ ಪ್ರೇಮದಲ್ಲಿ ಒಂದು ಸ್ಪಷ್ಟ ನಿರ್ಧಾರಕ್ಕೂ ಬಂದು ಬಿಟ್ಟರು.ಇಷ್ಟು ಬೇಗ ಹೀಗೆಲ್ಲಾ ಆಗುತ್ತದೆ ಎಂಬ  ಕಲ್ಪನೆಯೂ ನಮಗಿರಲಿಲ್ಲ. ಮೂರನೆಯ ದಿನ ಕಾಲೇಜಿಗೆ ಹೋದಾಗ ಆಶ್ಚರ್ಯದ ಸುದ್ದಿ ಕಾದಿತ್ತು. ರವಿ ಅನಸೂಯ ನಿನ್ನೆಯೇ ದೇವಸ್ಥಾನದಲ್ಲಿ ಮದುವೆ ಯಾಗಿದ್ದರು. ಫೋಟೊಗಳ ಆಲ್ಬಂ ಹಿಡಿದು ತಂದಿದ್ದರು. ಯಾರಿಗೂ ಸುಳಿವು ಕೊಡದೆ ಆಯ್ದ ಕೆಲ ಗೆಳೆಯರನ್ನು ಕರೆದುಕೊಂಡು ಹೋಗಿ ಎಲ್ಲಾ ಮುಗಿಸಿದ್ದರು. ಅನಸೂಯ ನಮಗೆಲ್ಲಾ ಕಾಣುವಂತೆ ತಾಳಿಯನ್ನು ಆಗಾಗ ಮುಟ್ಟಿ ಮುಟ್ಟಿ ನೋಡಿಕೊಂಡು ಸಂಭ್ರಮ ಪಡುತ್ತಿದ್ದಳು. ರವಿಗೆದ್ದ ಖುಷಿಯಲ್ಲಿದ್ದಾನೆ.ಹುಚ್ಚು ಹುರುಪಿನಲ್ಲಿ ತಾಳಿ ಬಿಗಿದ ರವಿಗೆ ಮುಂದೇನು ಎಂಬುದೇ ಗೊತ್ತಿರಲಿಲ್ಲ. ಈ ವಿಷಯದಲ್ಲಿ ಅವನಿಗೆ ಸೂಕ್ತ ಬುದ್ಧಿವಾದ, ಸಲಹೆ ಕೊಡುವಷ್ಟು ಕನಿಷ್ಠ ಅನುಭವ, ಧೈರ್ಯವೂ ನಮಗಿರಲಿಲ್ಲ. ಆಗಷ್ಟೇ ಹೈಸ್ಕೂಲಿನ ಚಡ್ಡಿ ಬಿಸಾಕಿ,  ಪ್ಯಾಂಟು ತೊಟ್ಟು ಕಾಲೇಜಿನ ಮೆಟ್ಟಿಲು ಎಣಿಸುತ್ತಿದ್ದ ಉಳಿದವರ್‍್ಯಾರು ರವಿಗೆ ಈ ವಿಷಯದಲ್ಲಿ ಸಹಾಯ ಮಾಡದೆ ಹೋದರು. ಅವನಿಗೆ ನಿಜವಾಗಿಯೂ ಈಗ ಹೆದರಿಕೆ ಕಾಡತೊಡಗಿತು. ಅವಳಿಲ್ಲದೆ ನಾನಿಲ್ಲ. ಅವಳೆಂದೂ ನನ್ನ ಹತ್ತಿರವೇ ಇರಬೇಕೆಂದು ನಿರ್ಧಾರ ತಳೆದು ತಾಳಿ ಬಿಗಿದ ರವಿಗೆ  ಅನಸೂಯಳನ್ನ ಎಲ್ಲಿಗೆ ಕರೆದುಕೊಂಡು ಹೋಗಬೇಕು ಎಂಬುದೇ ಒಂದು ದೊಡ್ಡ ಸಮಸ್ಯೆಯಾಗಿ ಕಾಣತೊಡಗಿತು. ಮದುವೆಯಾದ ಮೇಲೆ ತಾವಿಬ್ಬರೂ ಇರುವುದಾದರೂ ಎಲ್ಲಿ? ಈ ಕಿರು ವಯಸ್ಸಲ್ಲಿ ಹೇಗೆ ಬಾಳ್ವೆ ನಡೆಸುವುದು? ಮನೆಯವರು ಏನೆನ್ನುತ್ತಾರೆ? ದುಡಿದು ತಿನ್ನಲು ಏನು ಕೆಲಸ ಮಾಡಬೇಕು? ಎಂಬೆಲ್ಲಾ ಪ್ರಶ್ನೆಗಳು ಒಮ್ಮೆಲೇ ಎದ್ದು ನಿಂತವು.ಅದೇ ದಿನ ಸಂಜೆ ತನಕ ಕೂತು ಅತ್ತು, ಪರಸ್ಪರ ಬೈಯ್ದಾಡಿಕೊಂಡ ಅವರಿಬ್ಬರೂ ಒಂದು ನಿರ್ಧಾರಕ್ಕೆ ಬಂದರು. ರವಿ, ತಾಳಿ ಬಿಗಿದ ಮೇಲೆ ಮನೆಯವರು ತನ್ನನ್ನೇನು ಮಾಡಿಯಾರು? ಅಳಿಮಯ್ಯ ಎಂದು ಒಪ್ಪೇ ಒಪ್ಪುತ್ತಾರೆ. ಒಂದೆರಡು ಮಾತು ಬೈಯ್ಯಬಹುದು ಅಷ್ಟೇ. ಎಂಥದ್ದಾದರೂ ಆಗಲಿ ನೀನು ಧೈರ್ಯವಾಗಿರು. ಹೆದರಬೇಡ ಎಂದು ಅನಸೂಯಳನ್ನು ಒಪ್ಪಿಸಿದ. ತನ್ನ ಮನೆಗೆ ಕರೆದುಕೊಂಡು ಹೋಗುವ ಧೈರ್ಯ ರವಿಗೆ ಲವಲೇಶವೂ ಇರಲಿಲ್ಲ. ‘ನಮ್ಮಪ್ಪನಿಗೆ ಗೊತ್ತಾದರೆ ಅಡ್ಡಡ್ಡ ಉದ್ದುದ್ದ ಸಿಗಿದು ಹಾಕ್ತರೆ’ ಎಂದು ಅವನೇ ಬಡಬಡಿಸುತ್ತಿದ್ದ.ಅವರಿಬ್ಬರ ಸಡಗರ ನೋಡಿ ಸಂಭ್ರಮಿಸಿದ ಗೆಳೆಯರೆಲ್ಲಾ ಸಂಜೆಯಾದಂತೆ ಜಾಗ ಖಾಲಿ ಮಾಡ ತೊಡಗಿದರು. ಕೊನೆಗೆ ಉಳಿದವರು ರವಿ ಮತ್ತು ಅನಸೂಯ ಇವರಿಬ್ಬರೇನೆ. ಗೆಳತಿ ಊರಿಗೆ ಹಬ್ಬಕ್ಕೆ ಹೋಗುತ್ತಿದ್ದೇನೆಂದು ಸುಳ್ಳು ಹೇಳಿ ಬಂದಿದ್ದ ಅನಸೂಯ ಮನೆಗೆ ಹೋಗಲು ತಯಾರಿರಲಿಲ್ಲ. ರವಿ ಅವಳನ್ನು ಎಲ್ಲಿಗೆ ಕರೆದುಕೊಂಡು ಹೋಗಬೇಕೆಂಬ ತಯಾರಿಯನ್ನೂ ಮಾಡಿಕೊಂಡಿರಲಿಲ್ಲ. ಇಬ್ಬರೂ ಕೈ ಕೈ ಹಿಸುಕಿಕೊಂಡು ನಿಂತರು.ಕೊನೆಗೆ ರವಿಗೆ ಏನೆನ್ನಿಸಿತೋ ಏನೋ? ‘ಬಾ ಇಲ್ಲಿ’ ಎಂದವನೆ ಅನಸೂಯಳನ್ನು ಬೈಕಿನಲ್ಲಿ ಹತ್ತಿಸಿಕೊಂಡ. ಸೀದಾ ಅನಸೂಯಳ ಅಪ್ಪನ ಮುಂದೆ ಸಿನಿಮಾ ಶೈಲಿಯಲ್ಲಿ ಪ್ರತ್ಯಕ್ಷನಾದ. ಅನಸೂಯ ಅಪ್ಪ ಅಮ್ಮನ ಎದುರಿಸುವ ತಾಕತ್ತಿಲ್ಲದ ಹುಡುಗಿ. ರವಿಯ ಭಂಡ ಧೈರ್ಯ ಅವಳಿಗೂ ಚಕಿತಗೊಳಿಸಿತು. ಆಕೆ ತುಂಬಾ ಸಂದಿಗ್ಧದಲ್ಲಿದ್ದಳು. ಮನೆಯಲ್ಲಿ ನಡೆಯಬಹುದಾದ ಕೋಲಾಹಲದ ಕಲ್ಪನೆ ಅವಳಿಗೆ ಖಂಡಿತಾ ಇತ್ತು. ಹೀಗಾಗಿ, ಅಂಜುತ್ತಾ, ನಡುಗುತ್ತಲೇ ಮನೆ ಬಾಗಿಲಿಗೆ ಬಂದಳು.ಅಷ್ಟರಲ್ಲಾಗಲೇ, ಅನಸೂಯಳ ಮನೆಗೆ ಈ ಮದುವೆ ಸುದ್ದಿ ಮುಟಿತ್ತು. ಅವರೋ ಮಹಾ ಬುದ್ಧಿವಂತರು. ಮನಸ್ಸನ್ನು ತಾತ್ಕಾಲಿಕವಾಗಿ ಸಮಾಧಾನ ಮಾಡಿಕೊಂಡು ಒಂದು ಮೆಗಾಪ್ಲಾನ್ ಹೊಸೆದುಕೊಂಡು ಒಳಗೊಳಗೇ ಸಿದ್ಧರಾಗಿದ್ದರು. ಇದೆಲ್ಲಾ ಈ ಪ್ರೇಮಿಗಳಿಗೆ ತಿಳಿಯದ ಸಂಗತಿ. ರವಿಯೋ ‘ಆರತಿ ಎತ್ತಿ ಸ್ವಾಗತಿಸುತ್ತಾರೆ. ಬಾ ಅಳೀಮಯ್ಯ ಎಂದು ಬಾಯ್ತುಂಬ ಕರೆದು ಮನೆಗೆ ಕರೆದುಕೊಳ್ತಾರೆ. ಹಾಲು ತುಪ್ಪದ ಅಡಿಗೆ ಇಕ್ಕುತ್ತಾರೆ’ ಅಂತೆಲ್ಲಾ ಕನಸು ಕಂಡು ಹೋಗಿದ್ದ. ಮಗಳನ್ನು ಮೊದಲು ಮನೆಯೊಳಗೆ ಉಪಾಯವಾಗಿ ಕರೆದುಕೊಂಡ ಅವರು ಇವನನ್ನು ಬಾಗಿಲ ಹೊರಗೇ ನಿಲ್ಲಿಸಿದರು.ಅನಸೂಯಳ ಅಪ್ಪ ರವಿಗೆ ಸೌಮ್ಯವಾಗಿ ‘ನೀವು ನಾಲ್ಕು ದಿನ ಬಿಟ್ಟು ಬನ್ನಿ ಎಲ್ಲಾ ಮಾತಾಡೋಣ ಈಗ ಮನೆಯಲ್ಲಿ ವಾತಾವರಣ ಸರಿಯಿಲ್ಲ’ ಎಂದು ನಯವಾಗಿ ಹೇಳಿ ಬಾಗಿಲು ಮುಚ್ಚಿಕೊಂಡರು. ಗೆದ್ದೆನೆಂದು ಭಾವಿಸಿದ ರವಿ ಸಂತೋಷದಿಂದ ಬೈಕು ಹತ್ತಿ ತನ್ನ ಮನೆ ಸೇರಿದ. ಮರ್ಯಾದಸ್ಥರಾದ ಅವರು ಸೋತು ತನ್ನ ಮುಂದೆ ಶರಣಾಗುತ್ತಾರೆ ಎಂದು ಆತ ತಪ್ಪಾಗಿ ಭ್ರಮಿಸಿಕೊಂಡ. ಇತ್ತ  ಅನಸೂಯಳ ಮನೆಯಲ್ಲಿ ಆ ದಿನ ಏನೇನೋ ನಡೆದು ಹೋಯಿತು.

ಮೂರು ತಂಗಿಯರಿಗೆ ಹಿರಿಯಕ್ಕಳಾದ ಅನಸೂಯ ನೀಡಿದ ಆಘಾತದಿಂದ ಹೇಗೆ ಚೇತರಿಸಿಕೊಳ್ಳಬೇಕೆಂದು ಆ ಕುಟುಂಬ ಇಡೀ ರಾತ್ರಿ ಚಿಂತಿಸಿತು.ತಂದೆಯ ಸಂಕಟ, ತಾಯಿಯ ರೋಧನ, ತಂಗಿಯರ ಭವಿಷ್ಯ, ಆಣೆ, ಪ್ರಮಾಣ, ವಿಷದ ಬಾಟಲು, ಅಪ್ಪ ಅಮ್ಮನ ಆತ್ಮಹತ್ಯೆಗಳ ಯತ್ನಗಳು, ಹೀಗೆ ಏನೇನೋ ನಡೆದು  ಹೋದವು. ರವಿಯ ರೂಪ, ಅವನ ರಂಗಿನ ಮಾತು, ಶ್ರೀಮಂತಿಕೆಯ ಹಾವಭಾವಗಳಿಗೆ ಉತ್ತೇಜಿತಳಾಗಿ ಮನಸ್ಸೊಪ್ಪಿಸಿದ್ದ  ಅನಸೂಯಳ ಭ್ರಮೆಯ ಪ್ರಪಂಚ ಈಗ ಅವಳಿಗೇ ಭಾರವೆನಿಸಹತ್ತಿತು. ತನ್ನ ಮನೆಯವರೆದು ಸೋತ ಆಕೆ ಕೊನೆಗೆ ಎಲ್ಲದಕ್ಕೂ ಹ್ಞೂ ಎಂದಳು. ಎರಡೇ ದಿನದಲ್ಲಿ ಅನಸೂಯಳ ಕುಟುಂಬ ಸದ್ದಿಲ್ಲದೆ ಊರು ಖಾಲಿ ಮಾಡಿತು. ಅವರೆಲ್ಲಾ ಎಲ್ಲಿಗೆ ಹೋದರು? ಯಾರಿಗೂ ತಿಳಿಯಲಿಲ್ಲ.ನಾಲ್ಕು ದಿನ ಬಿಟ್ಟು ಅನುಸೂಯಳ ಮನೆ ಹತ್ತಿರ ಹೋದ ರವಿ ಕಂಗಾಲಾಗಿ ನಿಂತ. ಆಕೆಗಾಗಿ ಎಲ್ಲೆಲ್ಲೋ ಹುಡುಕಾಡತೊಡಗಿದ. ಕಾಲೇಜು ಬಿಟ್ಟು ಹುಚ್ಚನಂತಾದ. ಮೊದಮೊದಲು ಅವನ ಪ್ರೇಮ ಕಥೆಯನ್ನು ಸಹನೆಯಿಂದ ಕೇಳುತ್ತಿದ್ದ ಗೆಳೆಯರೆಲ್ಲಾ ಕೊನೆಕೊನೆಗೆ ಚುಡಾಯಿಸಿ, ಗೇಲಿ ಮಾಡಿ  ನಗತೊಡಗಿದರು. ಮನಸ್ಸಿನ ಆಘಾತ ತಡೆದುಕೊಳ್ಳುವ ಶಕ್ತಿ ಅವನ ಶ್ರೀಮಂತಿಕೆ ಅವನಿಗೆ ಕಲಿಸಿರಲಿಲ್ಲ. ಊರೂರು ಅಲೆಯತೊಡಗಿದ. ಗಡ್ಡ ಬಿಟ್ಟ, ಸಿಗರೇಟ್ ಸುಟ್ಟ, ಕುಡಿದು ಹೊರಳಾಡಿದ. ಯಾವುದರಲ್ಲೂ ನೆಮ್ಮದಿ ಸಿಗಲಿಲ್ಲ.  ಕೊನೆ ಕೊನೆಗೆ ರವಿ ದಾರಿಯಲ್ಲಿ ನಡೆಯುವಾಗ ಒಬ್ಬನೇ ಗಾಳಿಯೊಂದಿಗೆ ಮಾತಾಡತೊಡಗಿದ. ಏನೋ ನಿನ್ನ ಕಥೆ?’ ಎಂದರೆ; ‘ಒಡೆದು ಹೋದ ನನ್ನ ಕನಸುಗಳ ರಿಪೇರಿ ಮಾಡೋಕೆ ಅವಳೇ ಬರಬೇಕು ಕಣೊ. ಈಗವಳು ದೊಡ್ಡ ಹೆಂಗಸಾಗಿರಬೇಕು. ನನ್ನ ನೆನಪಾಗಿ ಒಂದು ದಿನ ಬಂದೇ ಬರ್ತಾಳೆ...!’ ಎಂದು ಒಗಟಾಗಿ ನಕ್ಕ.ಅವನ ಗುಳಿ ಬಿದ್ದ ಕಣ್ಣುಗಳ ನೋಡಿದೆ. ಅವನ ಮೇಲೆ ಕನಿಕರ, ಸಿಟ್ಟು ಒಟ್ಟಿಗೆ ಬಂದವು. ಪ್ರೀತಿಯ ಈಟಿಯಿಂದ ಅಪ್ರಬುದ್ಧ ವಯಸ್ಸಿನಲ್ಲಿ ಚುಚ್ಚಿಸಿಕೊಂಡು ಓದು, ತಾರುಣ್ಯ, ಜೊತೆಗೆ ಬದುಕಿನ ಎಲ್ಲಾ ನೆಮ್ಮದಿ ಹಾಳು ಮಾಡಿಕೊಂಡು ಯೌವನದಲ್ಲೇ ಮುದುಕನಂತೆ ಕಾಣುವ ಇವನ ಕಹಿ ನಗೆ ಪಿಯುಸಿ ಓದುತ್ತಾ ಪ್ರೀತಿಸಲು ಹಪಹಪಿಸುವ ಎಲ್ಲಾ ಮಕ್ಕಳಿಗೆ ಒಂದು ಪಾಠ ಎಂದೇ ಭಾವಿಸುತ್ತೇನೆ. ಇವತ್ತಿಗೂ ಕಾಲೇಜುಗಳಲ್ಲಿ ಪ್ರೀತಿ, ಪ್ರೇಮ ಎಂದು ಸುಖಾಸುಮ್ಮನೆ ಅಂಡಲೆಯುವ ಈ ಹುಡುಗರ ಕಣ್ಣುಗಳಲ್ಲಿ ಆ ರವಿಯೇ  ಎದ್ದು ಕಾಣುತ್ತಾನೆ.ಮನೆಯವರ ಹಿಡಿತವಿಲ್ಲದೆ, ಅಂದಾದುಂದಿಯಾಗಿ ಬೆಳೆಯುವ ರವಿಯಂಥವರಿಗೆ ಹಣ ಮತ್ತು  ಶ್ರೀಮಂತಿಕೆಗಳು ಒಂದು ಶಾಪ. ಬದುಕಿನ ಕಷ್ಟಗಳ ಅರಿವೇ ಇಲ್ಲದೆ ಬೆಳೆಯುವ ಮಕ್ಕಳು ನಿಜವಾದ ಸುಖದ ಅರ್ಥ ತಿಳಿಯಲಾರರು. ಸ್ವೇಚ್ಛೆಯಿಂದ ಬೆಳೆವ ಮಕ್ಕಳು ಜೀವನದಲ್ಲಿ ಸಂಕಟಗಳು ಬಂದಾಗ ಹೀಗೆ ರವಿಯಂತೆ ಕಂಗಾಲಾಗಿ ಹೋಗುತ್ತವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry