ಮಂಗಳವಾರ, ಮೇ 18, 2021
30 °C

ಬಸವಣ್ಣನವರನ್ನು ಹೇಗೆ ಅರ್ಥ ಮಾಡಿಕೊಳ್ಳುವುದು?

ಎಚ್.ಎಸ್.ಶಿವಪ್ರಕಾಶ್ Updated:

ಅಕ್ಷರ ಗಾತ್ರ : | |

ಬಸವಣ್ಣನವರ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಮತ್ತೊಂದು ಚರ್ಚೆ ನಡೆಯುತ್ತಿರುವುದನ್ನು ಓದುಗರೊಬ್ಬರು ನನ್ನ ಗಮನಕ್ಕೆ ತಂದರು. ಬಸವಣ್ಣನವರು ಬೋಧಿಸಿದ್ದು ವೀರಶೈವ ಧರ್ಮವನ್ನೋ ಲಿಂಗಾಯತ ಧರ್ಮವನ್ನೋ ಎಂಬುದು ಈ ಚರ್ಚೆಯ ಕೇಂದ್ರಬಿಂದುವಾಗಿತ್ತು.ಪ್ರೊ. ಚಿದಾನಂದಮೂರ್ತಿಯವರು ವೀರಶೈವ ಬಸವಪೂರ್ವ ಯುಗದಲ್ಲೇ ಇತ್ತು, ಆ ತತ್ವವನ್ನು ಆಚರಣೆಗೆ ತಂದ ಒಬ್ಬ `ಅನ್ವಯಿಕ ವಿಜ್ಞಾನಿ~ ಎಂದು ತಮ್ಮ ಆಧಾರಪೂರ್ವಕವಾಗಿ ವಾದಿಸಿದ್ದರು. ಅಷ್ಟೇ ಆಧಾರಪೂರ್ವಕವಾಗಿ ಪ್ರೊ. ಚಿದಾನಂದ ಮೂರ್ತಿಯವರ ವಾದವನ್ನು ಅಲ್ಲಗಳೆಯುತ್ತಾ ಬಸವಣ್ಣ ಸ್ಥಾಪಿಸಿದ ಧರ್ಮ ವೀರಶೈವವಲ್ಲ.

 

ಲಿಂಗಾಯತ ಧರ್ಮ ಎಂಬ ವಾದವನ್ನು ಪ್ರೊ. ಕಲ್ಬುರ್ಗಿಯವರು ಮಂಡಿಸಿದ್ದರು. ಇನ್ನೂ ಕೆಲವು ಗಣ್ಯರು ಈ ಚರ್ಚೆಯಲ್ಲಿ ಪಾಲುಗೊಂಡಿದ್ದರು. ಎಲ್ಲಿಯವರೆಗೆ ಸಮಾಜದಲ್ಲಿ ಪರಸ್ಪರ ವಿರುದ್ಧ ಜಾತಿ ಉಪಜಾತಿಗಳ ಪಾಂಥಿಕ ಹಿತಾಸಕ್ತಿಗಳಿರುತ್ತವೋ ಅಲ್ಲಿಯವರೆಗೆ ಈ ಚರ್ಚೆ ನಿಲ್ಲುವಂಥದ್ದಲ್ಲ.ನನ್ನ ಗಮನಕ್ಕೆ ಇದನ್ನು ತಂದ ಓದುಗರು ವೀರಶೈವರಾಗಲಿ ಲಿಂಗಾಯತರಾಗಲಿ ಅಲ್ಲ. ಅವರು ಒಬ್ಬ ಅಂಬೇಡ್ಕರ್‌ವಾದಿ. ಬುದ್ಧ-ಬಸವ-ಅಂಬೇಡ್ಕರ್ ಪರಂಪರೆಯ ಜೊತೆಗೆ ತಮ್ಮನ್ನು ಗುರುತಿಸಿಕೊಂಡವರು. ಈ ಚರ್ಚೆಯನ್ನು ಗಮನಿಸಿ ಅವರು ತುಂಬಾ ಆತಂಕಕ್ಕೊಳಗಾಗಿದ್ದರು.ಹಿರಿಯ ವಿದ್ವಾಂಸರು ಕೊಟ್ಟ ಕರಾರುವಾಕ್ಕು ತೀರ್ಮಾನಗಳಿಗಿಂತ ನನ್ನ ಗೆಳೆಯರ ಆತಂಕವೇ ನನಗೆ ಹೆಚ್ಚು ಅರ್ಥಪೂರ್ಣವಾಗಿ ತೋರಿತು. ಅಲ್ಲದೆ ಆರುಕೋಟಿ ಕನ್ನಡಿಗರಿಗೆ ಮಾನ್ಯರಾದ ಬಸವಣ್ಣನವರ ಬಗೆಗಿನ ಈ ಚರ್ಚೆಯಲ್ಲಿ ಯಾಕೆ ಎರಡು ಬಣದವರು ಮಾತ್ರ ಪಾಲುಗೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಯೂ ನನ್ನನ್ನು ಕೆಣಕತೊಡಗಿತು.ನನ್ನ ಆ ಆತ್ಮೀಯ ಓದುಗರು ಕೇಳಿದ ಪ್ರಶ್ನೆ ಇದು: `ಇಂಥ ವಿವಾದಗಳ ಹಿನ್ನೆಲೆಯಲ್ಲಿ ಬಸವಣ್ಣನವರನ್ನು ಹೇಗೆ ಅರ್ಥಮಾಡಿಕೊಳ್ಳಬೇಕು?~ಬಸವಣ್ಣ ಕೇವಲ ಚರಿತ್ರೆಯಲ್ಲ. ಮತ್ತೆ ಮತ್ತೆ ವರ್ತಮಾನವಾಗಿ ಎಂಟುನೂರು ವರ್ಷಗಳಿಂದ ಕವಿಗಳ, ಚಿಂತಕರ, ಜನಸಾಮಾನ್ಯರ ಮನಸ್ಸಿನಲ್ಲಿ ಇಂದಿಗೂ ಮರುಹುಟ್ಟು ಪಡೆಯುತ್ತಿಲ್ಲವೇ? ಪಾಲ್ಕುರಿಕೆ ಸೋಮನಾಥ ಶುರುಮಾಡಿದ ಬಸವ ಕಥನ ಮುಂದಿನ ಯುಗಗಳಲ್ಲಿ ಆಯಾ ಕಾಲದ ಅಗತ್ಯಗಳ, ಸ್ವಯಂವಿರೋಧಗಳ ಚೌಕಟ್ಟಿನಲ್ಲಿ ಮಾರ್ಪಾಟು ಹೊಂದುತ್ತಾ ಬಂದಿದೆ.ಬಸವಣ್ಣ ಒಬ್ಬ ಮಹಾನ್ ಐತಿಹಾಸಿಕ ವ್ಯಕ್ತಿ ನಿಜ, ಆದರೆ ಅದಕ್ಕಿಂತ ಹೆಚ್ಚಾಗಿ ಅತ್ಯಂತ ಪ್ರಭಾವಿಯಾದ ಒಂದು ಸಾಂಸ್ಕೃತಿಕ ಸಂಕೇತ. ಇಂದು ನಾವು ಹೇಗೆ ಬಸವಣ್ಣನೆಂಬ ಆ ಸಂಕೇತವನ್ನು, ಆ ಮೌಲ್ಯಗಳ ಚೌಕಟ್ಟನ್ನು, ಆ ಆದರ್ಶಗಳ ಕಲ್ಪನೆಯನ್ನು ಸ್ವೀಕರಿಸಬೇಕು?ಮೇಲೆ ಹೆಸರಿಸಿದ ವಿದ್ವಾಂಸರ ಹಾಗೆ ನಾನು ಬಸವಣ್ಣನವರ ಬಗ್ಗೆ ತೀರ್ಮಾನ ಕೊಡಲು ಹೊರಡುತ್ತಿಲ್ಲ. ನಮ್ಮ ತಲೆಮಾರಿನವರು ಬಸವಣ್ಣನವರಿಂದ ಕಲಿತದ್ದು ತೀರ್ಮಾನಗಳ ಭಾಷೆಯನ್ನಲ್ಲ. ಅಂತರ್ ನಿರೀಕ್ಷಣೆಯ, ಆತಂಕದ, ಆತ್ಮಪರೀಕ್ಷೆಯ, ಅನುಭವದಲ್ಲಿ ಆಧಾರವಿಲ್ಲದ ಎಲ್ಲವನ್ನೂ ನಿಕಷಕ್ಕೊಡ್ಡುವ  ಆರ್ದ್ರವಾದ ಭಾಷೆಯನ್ನು ನಾವು ಬಸವಣ್ಣನವರಿಂದ ಕಲಿತೆವು.ಇದಕ್ಕೆ ವಿರುದ್ಧವಾದ ಉಕ್ತಿಗಳನ್ನೂ ಬಸವ ವಚನದಿಂದ ಉಲ್ಲೇಖಿಸಬಹುದೆಂದೂ ನಾನು ಬಲ್ಲೆ. ಭಕ್ತಿಯೆಂಬುದು ಹೋಗುತ್ತ ಬರುತ್ತ ಕೊಯ್ಯುವ ಗರಗಸವಾದಾಗ, ಕೊಲುವನೆಂಬ ಭಾಷೆ ದೇವನದಾದಾಗ ಸರಳ ತೀರ್ಮಾನಗಳು ಅರ್ಥ ಕಳೆದುಕೊಳ್ಳುತ್ತವೆ.ಅಂತಹ ತೀವ್ರ ಕ್ಷಣಗಳಲ್ಲಿ ಅಂತರಂಗ ಬಹಿರಂಗಗಳ ಮಥನದಿಂದ ಭಾಷೆ ಒಂದು ಮಾಂತ್ರಿಕ ಮರುಹುಟ್ಟನ್ನು ಪಡೆಯುತ್ತದೆ. ಈ ಗುಣದಿಂದಲೇ ವಚನಗಳ ಭಾಷೆ ಇಂದಿಗೂ ಹಳಸಿಲ್ಲ. ಅವುಗಳ ಧ್ವನಿಶಕ್ತಿ ಇನ್ನೂ ಹೊಸಹೊಸ ವಿಸ್ತರಣೆಗಳನ್ನು ಪಡೆದುಕೊಳ್ಳುತ್ತಿದೆ.ನನಗೆ ತಿಳುವಳಿಕೆ ಬಂದಾಗಿನಿಂದ ನಾನು ಗಮನಿಸುತ್ತಾ ಬಂದಿರುವ ಬಸವ ಕೇಂದ್ರಿತ  ಚರ್ಚೆ ಅಂತಿಮ ತೀರ್ಮಾನದ ಸಪಾಟು ದಾರಿಯನ್ನು ಹಿಡಿಯುತ್ತಾ ಬಂದಿದೆ.ಕ್ಷಣಕಣಕ್ಕೂ ತನ್ನ ಅಂತರಂಗ ಶುದ್ಧಿಯನ್ನು ಪರೀಕ್ಷಿಸುತ್ತಿದ್ದ ಬಸವಣ್ಣನವರನ್ನು ಅಂತಹ ಆತ್ಮಶೋಧನಾಶಕ್ತಿ ತಿಲಮಾತ್ರವೂ ಇರದ ನಾವು ನಮ್ಮ ವ್ಯಕ್ತಿಗತ ಅಥವಾ ಗುಂಪಿನ ಸ್ವಾರ್ಥಕ್ಕೆ ಅನುಕೂಲವಾದ ಚೌಕಟ್ಟಿನಲ್ಲಿ ತುರುಕಿ ಬಿಡಲು ಹೊರಡುತ್ತಿದ್ದೇವೆ.ಇದಕ್ಕೊಂದು ಮನೋವೈಜ್ಞಾನಿಕ ಕಾರಣವೂ ಇದ್ದೀತು. ಬಸವಣ್ಣನವರಂತಾಗಲು ನಮಗೆ ಧೈರ್ಯವಿಲ್ಲ. ಅಷ್ಟೇ ಅಲ್ಲ, ಅವರ ಆ ವಿಚಿತ್ರ ಧೈರ್ಯವನ್ನು ತಾಳುವ ಶಕ್ತಿಯೂ ಇಲ್ಲ.ಬಹು ಮಗ್ಗುಲಿನ ಬಸವಣ್ಣನೆಂಬ ಸಂಕೇತವನ್ನು ಒಂದು ಫಾರ್ಮುಲಾ ಮಾಡಿ ನಮ್ಮ ಬರಡುತನವನ್ನು ಸಾರಿಕೊಳ್ಳುತ್ತಿದ್ದೇವೇನೋ ಎಂಬ ಅನುಮಾನ ಮೂಡುತ್ತದೆ.ಬಸವಣ್ಣನೆಂಬ ಜಂಗಮ ಸಂಕೇತವನ್ನು (ಈ ಪದವನ್ನು ಜಾತಿ, ಉಪಜಾತಿಯ ಅರ್ಥದಲ್ಲಿ ನಾನು ಬಳಸುತ್ತಿಲ್ಲ) ಸ್ಥಾವರಗೊಳಿಸಲು ಹೊರಟಿರುವ ಇಂಥಾ ತೌಡು ಕುಟ್ಟುವಂಥ ಪ್ರಕ್ರಿಯೆಯ ಬಗ್ಗೆ ನಾವು ಇನ್ನಾದರೂ ಮರುಚಿಂತನೆ ಮಾಡಬೇಕು.

ಹಾಗಾದರೆ ಬಸವಣ್ಣನವರನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು?ಆಧಾರಗಳ ಮೇಲೆ ನಿಂತ ಐತಿಹಾಸಿಕ ದೃಷ್ಟಿ ಒಂದು ಮಟ್ಟದವರೆಗೆ ಮುಖ್ಯ. ಆಧುನಿಕ ಜಗತ್ತಿನಲ್ಲಿ ಇತಿಹಾಸವೂ ಒಂದು ಮುಖ್ಯ ಚಾಲಕ  ಶಕ್ತಿಯೆಂಬುದು ದಿಟ. ಆದರೆ ಇತಿಹಾಸವೂ ಒಂದು ಜಂಗಮ ಪ್ರಕ್ರಿಯೆ. ಅದೂ ನಿಂತ ನೀರಲ್ಲ.ಉದಾಹರಣೆಗೆ, ಈಚೆಗೆ ಚಿಂತಕರ ಬಣವೊಂದು ಕರ್ನಾಟಕದಲ್ಲಿ ಸಕ್ರಿಯವಾಗಿ ವಚನಗಳಲ್ಲಿ ಜಾತಿ ಅನ್ನುವ ಪದದ ಪ್ರಯೋಗವೇ ಇಲ್ಲವೆಂದೂ, ಅಲ್ಲಿ ಬಳಕೆಯಾಗುವ ಕುಲ ಎಂಬ ಪದ ಜಾತಿಗೆ ಸಂವಾದಿಯಲ್ಲವೆಂದೂ, ಹಾಗಾಗಿ ವಚನಕಾರರು ಜಾತಿ ವಿರೋಧ ಮಾಡಲೇ ಇಲ್ಲವೆಂದೂ ವಾದಿಸತೊಡಗಿದೆ.ಇನ್ನೊಬ್ಬ ಪ್ರತಿಭಾವಂತ ಯುವ ಇತಿಹಾಸಕಾರರು ಬಸವಣ್ಣ ಕಲ್ಯಾಣಕ್ಕೆ ಬಂದುದಕ್ಕೆ ಅನುಭವ ಮಂಟಪ ಸ್ಥಾಪಿಸಿದ್ದಕ್ಕೆ ಚಾರಿತ್ರಿಕ ಆಧಾರಗಳಿಲ್ಲವೆಂದು ವಾದಿಸಿದ್ದಾರೆ. ಇಂಥ ಅನುಮಾನಗಳ ಹಿನ್ನೆಲೆಯಲ್ಲಿ ಶಿಸ್ತುಬದ್ಧವಾದ ಸಂಶೋಧನೆ ಮುಂದುವರೆದು ನಾವು ಐತಿಹಾಸಿಕ ಸತ್ಯಕ್ಕೆ ಹತ್ತಿರವಾಗಬಹುದು.ಇಂಥ ಇತಿಹಾಸಕಾರರ ಮಾತುಗಳನ್ನು ಕೇಳಿಸಿಕೊಂಡ ಮೇಲೂ ನನಗನ್ನಿಸುತ್ತದೆ: ಬಸವಣ್ಣ ಒಂದು ಐತಿಹಾಸಿಕ ಪಾತ್ರವೆನ್ನುವುದು ಅದೆಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾಗಿ ಇತಿಹಾಸ ಎಂದು ಮುಟ್ಟಲಾಗದ ಆದರ್ಶ ಕಲ್ಪನೆಯಾಗಿ ಬಸವಣ್ಣ ನಮ್ಮ ನಡುವೆ ಇದ್ದಾರೆ. ಬಸವಣ್ಣ ಕೇವಲ ಚರಿತ್ರೆಯಲ್ಲ, ಚಾರಿತ್ರ್ಯವೂ ಹೌದು.ಈ ಚಾರಿತ್ರ್ಯದ ಭಿತ್ತಿಯಾದ ಕಲ್ಯಾಣವೂ ಅಷ್ಟೆ. ಆದ್ದರಿಂದಲೇ ಅಕ್ಕ ಹೇಳಿದ್ದು: `ಕಲ್ಯಾಣವೆಂಬುದನಾರಿಗೂ ಹೊಗಬಾರದು.~ ಬಸವ ಕಲ್ಯಾಣದ ಕಥೆ ಕಲ್ಲೋಲದಲ್ಲಿ ಮುಗಿಯಿತಾದರೂ ಮುಂದೆ ಸಂಗೋಪನ ಯುಗದವರು ವಿಜಯಕಲ್ಯಾಣವನ್ನೂ ಕೊಡೇಕಲ್ಲು ಪರಂಪರೆಯವರು ಅಮರ ಕಲ್ಯಾಣವನ್ನೂ ಕಟ್ಟಲು ಹೊರಟಿದ್ದು; ಮಲೆ ಮಾದೇಶ್ವರ, ಮಂಟೇಸ್ವಾಮಿ, ಕುರುಬರ ರೇವಣಸಿದ್ಧ, ದೇವಾಂಗದವರ ರುದ್ರಮುನಿಸ್ವಾಮಿ ಮುಂತಾದ ಮುಂದಿನ ಯುಗದ ಸಂತರ ಕಥನಗಳಲ್ಲಿ ಕಲ್ಯಾಣ ಪ್ರವೇಶ ಒಂದು ಮುಖ್ಯ ಘಟನೆಯಾಗಿ ಬಂದದ್ದು.ಭಾರತದಲ್ಲಿ ಇತಿಹಾಸ ರಚನೆಯ ಪರಂಪರೆ ಇರಲಿಲ್ಲವೆಂದು ಕೆಲವರು ತರ್ಕಿಸುತ್ತಾರೆ. ಇದು ನಿಜವಿರಬಹುದು. ಆದರೂ ಆ  ಕಾರಣದಿಂದ `ಇತಿಹಾಸ ರಚನಾಪೂರ್ವ~ ಭಾರತ ಜಡ್ಡುಗಟ್ಟಲಿಲ್ಲ. ಕಾಲಕಾಲಕ್ಕೆ ಸಂಘರ್ಷಗಳೂ ಸುಧಾರಣೆಗಳೂ ನಡೆಯುತ್ತಲೇ ಬಂದವು.ಆದರ್ಶಗಳು ಸಮುದಾಯಗಳಿಗೆ ಚಾಲನೆಯನ್ನು ನೀಡುತ್ತಲೇ ಬಂದವು. ಹಿಂದೊಮ್ಮೆ ಈ ನೆಲದ ತಮ್ಮ ಆಳ್ವಿಕೆಯನ್ನು ಬರ್ಬರ ಶಕ್ತಿಗಳ ಹಲ್ಲೆಯಿಂದ ಕಳೆದುಕೊಂಡೆವೆಂಬ ವೇದನಾಪೂರ್ವಕ ಸ್ಮರಣೆಯ ನೆಳಲಿನಲ್ಲಿರುವ ಅಲೆಮಾರಿ ಸಮುದಾಯಗಳೂ ಮುಂದೊಂದು ದಿನ ಕಳೆದುಕೊಂಡದ್ದನ್ನು ಮತ್ತೆ ಪಡೆದುಕೊಳ್ಳುವೆವೆಂಬ ನಂಬುಗೆಯಿಂದ ಇನ್ನೂ ಬಾಳುತ್ತಿವೆ.ವಸ್ತುನಿಷ್ಠತೆ ಇತಿಹಾಸಕಾರ ತನಗೆ ತಾನೇ ಹಾಕಿಕೊಂಡ ಶಿಸ್ತು. ಆದರೆ ವ್ಯಕ್ತಿನಿಷ್ಠ ಆದರ್ಶಗಳೊಂದಿಗೆ ಬದುಕುವುದು ಸಮುದಾಯಗಳು ತಮಗೆ ತಾವೇ ಕೊಟ್ಟುಕೊಂಡ ಸ್ವಾತಂತ್ರ್ಯ.ಆದ್ದರಿಂದಲೇ ಕಲ್ಪನಾಜನ್ಯವಾದ ಕಾವ್ಯ ಕಲೆಗಳು ನಮ್ಮ ಜೀವದ ಗೆಳೆಯರಾಗಿರುವುದು. ಅಕ್ತೇವಯೋ ಪಾಜ್ ಹೇಳುತ್ತಾನೆ: `ಇತಿಹಾಸವಿಲ್ಲದೆ ಕಾವ್ಯವಿಲ್ಲ. ಆದರೆ ಇತಿಹಾಸ ಕಾವ್ಯವಲ್ಲ.~ ಒಂದು ಅರ್ಥದಲ್ಲಿ ಕಾವ್ಯಾತ್ಮಕ ಪ್ರಕ್ರಿಯೆಗಳು ಇತಿಹಾಸದ ನಿರಾಕರಣೆಗಳೂ ಆಗಿರುತ್ತವೆ.ಈ ಕಾರಣದಿಂದಲೇ ಜೀವಗಳ ಮರ್ತ್ಯಲೋಕ ಕರ್ತಾರನ ಕಮ್ಮಟವಾಗಿರುವುದು. ಹಾಗೆ ನೋಡಿದರೆ ಮಾನವ ಕಲ್ಪನೆಯನ್ನು ಕಲಕುವ, ಕೆಣಕುವ ಅವೆಷ್ಟೋ ಪಾತ್ರಗಳು, ಘಟನೆಗಳು, ಸಂಗತಿಗಳು ಚಾರಿತ್ರಿಕವಲ್ಲವೇ ಅಲ್ಲ. ಬಹುಶಃ ಅವು ಯೂಂಗ್ ಹೇಳಿದ ಹಾಗೆ ಸಾಮುದಾಯಿಕ ಸುಪ್ತಮನಸ್ಸಿನ ಮೂಲಮಾದರಿಗಳು. ಪಾಂಡವರು, ಕೌರವರು, ಗ್ರೀಕರು, ಟ್ರೋಜನ್ನರು,ಕೋವಲ, ಕಣ್ಣಗಿ-ಇವರೆಲ್ಲಾ ಯಾರು? ಇದೇ ಅರ್ಥದಲ್ಲಿ ಜಾರ್ಜಸಂಟಾಯನ ಧಾರ್ಮಿಕ ಅಭಿವ್ಯಕ್ತಿಗಳಾದ ದೇವತೆಗಳನ್ನು ಕಾವ್ಯದ ಉಪಮೆಗಳಿಗೆ ಹೋಲಿಸಿದ.ವಾದಕ್ಕೋಸ್ಕರ ಒಂದು ವಾದವನ್ನು ಮಂಡಿಸೋಣ. ನಾಳೆ ಒಬ್ಬ ಚರಿತ್ರಕಾರ ಬುದ್ಧ ಒಬ್ಬ ಐತಿಹಾಸಿಕ ವ್ಯಕ್ತಿಯಲ್ಲ ಎಂದು ಸಾಕ್ಷ್ಯಾಧಾರ ಸಮೇತ ಸಾಧಿಸಿದ ಅಂದುಕೊಳ್ಳಿ.

ಹಾಗೆಂದ ಮಾತ್ರಕ್ಕೆ ಬೌದ್ಧ ಧರ್ಮದ ಪ್ರಭಾವ ಮುಗಿದುಹೋಗುತ್ತದೆಯೆ? ಹಾಗೆ ನೋಡಿದರೆ ಮಹಾಯಾನ ಬೌದ್ಧ ಪಂಥಗಳು ಆರಾಧಿಸುತ್ತಾ ಬಂದಿರುವುದು ಗತದ ಬುದ್ಧನನ್ನ್ಲ್ಲಲ, ಬೋಧಿಸತ್ವನನ್ನು, ಭವಿಷ್ಯದ ಬುದ್ಧನನ್ನು, ಆಗಿ ಹೋದದ್ದನ್ನಲ್ಲ, ಆಗಬೇಕಾದುದನ್ನು.ಯಾಕೆಂದರೆ ಬೋಧಿಸತ್ವನಷ್ಟು ಉದಾರವಾಗಿ ನರಜೀವಿಗಳು ವಾಸ್ತವದಲ್ಲಿ ನಡೆದುಕೊಳ್ಳುವುದು ಸಾಧ್ಯವೇ ಇಲ್ಲ. ಹುಲಿಯೊಂದು ಹಸಿದಿರುವುದನ್ನು ಕಂಡು ತನ್ನನ್ನು ತಾನೇ ಅದರ ಆಹಾರವಾಗಿ ಅರ್ಪಿಸಿಕೊಂಡ ಬೋಧಿಸತ್ವನ ಮಹಾ ಕರುಣೆ ಆದರ್ಶವೊಂದರ ಅತಿಶಯೋಕ್ತಿಯೇ ಹೊರತು ವಾಸ್ತವದ ಸಹಜೋಕ್ತಿಯಲ್ಲ.

ಹಾಗೆಂದರೆ ಚಾರಿತ್ರಿಕವಾದರೂ ಅದಕ್ಕಿಂತ ಹೆಚ್ಚಾಗಿ ಆದರ್ಶವಾದಿ ಮಾನವೀಯ ಸಂಕೇತವನ್ನಾಗಿ, ಸಾಧ್ಯತೆಯನ್ನಾಗಿ ಬಸವಣ್ಣನವರನ್ನು ನೋಡಬಹುದೆ?ನೋಡಬಹುದು. ಆದರೆ ಇಲ್ಲಿಯೂ ಕೆಲವು ತೊಡಕುಗಳಿವೆ. ಬಸವಣ್ಣನವರನ್ನು ಬೇರೆ ಬೇರೆ ಕಥನಕಾರರು, ಇತಿಹಾಸಕಾರರು ಪರಸ್ಪರ ವಿರೋಧಿ ನಿಲುವುಗಳಲ್ಲಿಟ್ಟು ಬೇರೆಬೇರೆಯೇ ಆದ ಚಿತ್ರಣಗಳನ್ನು ನೀಡುತ್ತಾರೆ. ಹರಿಹರನಲ್ಲಿ ಕಾಣುವ ಬಸವಣ್ಣ ಶಿವಭಕ್ತಿಯ ಪರಾಕಾಷ್ಠೆ.ಬಿಜ್ಜಳನನ್ನು ಜೈನನೆಂದು ತಪ್ಪು ತಿಳಿದು ಅವನನ್ನು ಮೆರೆಸಲು ಹೋಗಿ ಬಸವಣ್ಣನವರ ಪಾತ್ರಕ್ಕೆ ಕುಂದು ತಂದಿರುವ `ಬಿಜ್ಜಳರಾಯ ಪುರಾಣ~ದ ದೃಷ್ಟಿಯೇ ಬೇರೆ. ಪಿ.ಕೆ. ರಾಜಶೇಖರ ಅವರು ಸಂಪಾದಿಸಿರುವ ಮೈಸೂರುಸೀಮೆಯ ಜಾನಪದ ಬಸವ ಪುರಾಣದ ತುಣುಕುಗಳಲ್ಲಿರುವ ಬಸವಣ್ಣ ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳ ಹೊರೆಯನ್ನು ಮಡಿವಾಳ ಮಾಚಿದೇವರಿಗೆ ಇತ್ತು ವಿರಮಿಸುತ್ತಾನೆ.`ಶೂನ್ಯ ಸಂಪಾದನೆ~ಯ ವಿವಿಧ ಪಾಠಗಳಲ್ಲಿ ಅದೇ ರೀತಿ ಮಂಟೇಸ್ವಾಮಿ ಮುಂತಾದ ಜನಪದ ಕಥನಗಳಲ್ಲಿ ಅಲ್ಲಮಪ್ರಭುವಿನ ಅಥವಾ ಆ ಸ್ವರೂಪದ ಗುರುವಿನ ಶಿಷ್ಯನಾಗಿ ಚಿತ್ರಿತವಾಗಿದ್ದಾನೆ. ಅಷ್ಟೇ ಅಲ್ಲದೆ, ಆಧುನಿಕ ಯುಗದಲ್ಲಿ ಬಿ. ಪುಟ್ಟಸ್ವಾಮಯ್ಯ, ಅನಕೃ, ತ.ರಾ.ಸು., ಬಸವರಾಜ ಕಟ್ಟೀಮನಿ ಮುಂತಾದ ಕಾದಂಬರಿಕಾರರರು, ಬೆಳ್ಳಾವೆ ನರಹರಿಶಾಸ್ತ್ರಿಗಳಂಥ ನಾಟಕಕಾರರು ಒಂದು ರೀತಿಯಲ್ಲಿ ಗಾಂಧಿವಾದಿ ಅನ್ನಬಹುದಾದ ಬಸವಣ್ಣನನ್ನು ತಂದಿದ್ದಾರೆ.ಈ ಚಿತ್ರಣಗಳಿಗಿಂತ ಭಿನ್ನವಾಗಿ ಹೆಚ್ಚು ಸಂಕೀರ್ಣವಾಗಿರುವ ಬಸವಣ್ಣನನ್ನು ಲಂಕೇಶ್, ಗಿರೀಶ್ ಕಾರ್ನಾಡ್, ಚಂದ್ರಶೇಖರ ಕಂಬಾರ ಮುಂತಾದ ನಾಟಕಕಾರರರು ರೂಪಿಸಿದ್ದಾರೆ. ಸೃಜನಶೀಲ ಮೂಸೆಯಲ್ಲಿ ಮೂಡಿರುವ ಬಸವಣ್ಣನವರ ಚಿತ್ರಣಗಳಷ್ಟೇ ವೈವಿಧ್ಯಮಯವಾಗಿವೆ ಬಸವಣ್ಣನವರ ವೈಚಾರಿಕ ಚಿತ್ರಣಗಳು.ಎಂ.ಆರ್.ಶ್ರೀ, ಕಪಟರಾಳ ಕೃಷ್ಣರಾವ್, ರಂ.ರಾ. ದಿವಾಕರ ಮುಂತಾದವರು ಆ ನಂತರ ಪ್ರೊ. ಚಿದಾನಂದಮೂರ್ತಿ ಅವರು ಬಸವಣ್ಣನನ್ನು ಹಿಂದೂಧರ್ಮದ ಮುಂದುವರಿಕೆಯಾಗಿ ಕಂಡರೆ ಪ್ರೊ.ಕಲ್ಬುರ್ಗಿ ಮುಂತಾದವರು ಬಸವಣ್ಣನವರ ಸ್ವತಂತ್ರ ಸುಧಾರಣಾವಾದೀ ನಿಲುವುಗಳನ್ನು ಎತ್ತಿ ಹಿಡಿದಿದ್ದಾರೆ.ಮ.ನ.ಜ ಅವರಂಥ ವಿದ್ವಾಂಸರು ಬಸವಣ್ಣನವರ ದಲಿತ ಹಿನ್ನೆಲೆಗಳಿಗೆ ಒತ್ತು ಕೊಟ್ಟಿದ್ದಾರೆ. ಇವೆಲ್ಲಕ್ಕೂ ಮೊದಲು ವಚನ ವಾಙ್ಮಯದಲ್ಲೇ ಬಸವಣ್ಣನವರ  ವಿಭಿನ್ನ ಚಿತ್ರಣಗಳಿವೆ. ಜನಪದ ಮೂಲಗಳಲ್ಲಿ ಬಸವಣ್ಣನವರನ್ನು ಒಂದು ಪಾವಿತ್ರ್ಯದ ಸಂಕೇತವನ್ನಾಗಿ ಸವಾಲನ್ನಾಗಿ ನೋಡಿದ್ದಾರೆ. ಉತ್ತರಭಾರತದ ಸಂತ ಪರಂಪರೆ ಗೋರಖನಾಥನನ್ನು ನೋಡಿದ ಹಾಗೆ, ಆಧುನಿಕರು, ನವ್ಯರು ಬಸವಣ್ಣನವರ ವ್ಯಕ್ತಿತ್ವದ ಸಂಕೀರ್ಣ ಮಾನವೀಯ, ಸಮಾಜ ಶಾಸ್ತ್ರೀಯ ಆಯಾಮಗಳನ್ನು ತೆರೆದಿದ್ದಾರೆ.ಇಷ್ಟೊಂದು ಬಸವಣ್ಣನವರಲ್ಲಿ ನಮ್ಮ ಬಸವಣ್ಣ ಯಾರು? ಬಸವಣ್ಣನವರ ಕುಲ-ಜಾತಿಗಳ ತನಿಖೆ ತನಿಖೆದಾರರಿಗೆ ಎಷ್ಟು ಮುಖ್ಯವಾದರೂ ನಮಗೆ ಮುಖ್ಯವಲ್ಲ. ಅಥವಾ ಐತಿಹಾಸಿಕ ಸಂಶೋಧನೆ ಎಷ್ಟು ಮುಖ್ಯವಾದರೂ ಬಸವಣ್ಣನೆಂಬ ಆದರ್ಶವನ್ನು ಆ ಐತಿಹಾಸಿಕ ತೀರ್ಪುಗಳಿಗೆ ಇಳಿಸುವ ಮಾರ್ಗವೂ ಸಂಕುಚಿತವಾದುದು. ಬಸವಣ್ಣನವರನ್ನು ಒಂದು ಸರಳತತ್ವದ ತೆಕ್ಕೆಗೆ ತೆಗೆದುಕೊಳ್ಳಲು ಪ್ರಯತ್ನಿಸುವ ಧಾರ್ಮಿಕ ದೃಷ್ಟಿಗಳೂ ಅಷ್ಟೆ. ಹಾಗಿದ್ದರೆ ನಮ್ಮ ಬಸವಣ್ಣ ಯಾರು? ಬಸವಣ್ಣನವರನ್ನು ನಾವು ಹೇಗೆ ಅರ್ಥ ಮಾಡಿಕೊಳ್ಳುವುದು?ಬಸವಣ್ಣನವರು ಕೂಡಲಸಂಗಮನನ್ನು ಹೇಗೆ ಅರ್ಥಮಾಡಿಕೊಂಡರು? ಒಂದು ತೀರ್ಮಾನವಾಗಿರುವ ವಿಷಯವಾಗಿ ಅಲ್ಲ. ಸ್ವಾನುಭವದ, ಆತ್ಮಶೋಧನೆಯ, ಆತಂಕದ, ಅನುಮಾನಗಳ, ತಲ್ಲಣದ, ಆರ್ದ್ರವಾದ, ಉತ್ಕಟವಾದ ಭಾವ-ಭಾಷೆಗಳ ಮೂಲಕ. ಇತರ ಬಸವಕಾಲೀನ ವಚನಕಾರರೂ ಹೀಗೇ ಬಸವಣ್ಣನವರನ್ನು ಅರ್ಥಮಾಡಿಕೊಂಡರು.ವಚನಕಾರರಲ್ಲಿ ಆಗಲೇ ಇದ್ದ ಈ ಪ್ರವೃತ್ತಿ ಇನ್ನೊಂದು ಬಗೆಯಲ್ಲಿ ನವ್ಯ, ದಲಿತ ಮತ್ತು ನವ್ಯೋತ್ತರ  ಸಾಹಿತ್ಯಿಕ ಚಿತ್ರಣಗಳಲ್ಲಿ ಮುಂದುವರಿದಿದೆ. ಈ ಹಾದಿಯಲ್ಲಿ ಕ್ರಮಿಸಿದಾಗ ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವಷ್ಟೇ ಮುಖ್ಯವಾಗುತ್ತದೆ ನಮ್ಮನ್ನು ನಾವು ಅರ್ಥಮಾಡಿಕೊಳ್ಳುವ ಬಗೆ.ಹಾಗೆಯೇ ನಮ್ಮ ಉದ್ದಿಶ್ಯಗಳ ಬಗೆಗಿನ ಸ್ಪಷ್ಟತೆ. ಬಸವಣ್ಣನವರ ಸಮಕಾಲೀನ ವಚನಕಾರರು ಹೀಗೆಯೇ ಅರ್ಥಮಾಡಿಕೊಂಡರೆಂದು ತೋರುತ್ತದೆ. ಆ ಹಿರೀಕರ ಹಾದಿಯನ್ನು ಹಿಡಿದು ನಾವೂ ನಮ್ಮ ಬಸವಣ್ಣನನ್ನು ಕಂಡುಕೊಳ್ಳುವ ಅಗತ್ಯ ಇಂದು ಎಂದಿಗಿಂತಲೂ ಹೆಚ್ಚಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.