ಮಂಗಳವಾರ, ಡಿಸೆಂಬರ್ 10, 2019
26 °C

ಬಸವತತ್ವ ಅಲ್ಲಮತತ್ವ

ಪ್ರಸನ್ನ
Published:
Updated:
ಬಸವತತ್ವ ಅಲ್ಲಮತತ್ವ

ಲಿಂಗಾಯತ ಧರ್ಮದ ಬಗ್ಗೆ ನಡೆದಿರುವ ಚರ್ಚೆ ಹಾಗೂ ಮೇಲೆದ್ದು ಬಂದಿರುವ ಹೋರಾಟವು ಅನೇಕರಿಗೆ ಕೆಸರೆರಚಾಟವಾಗಿ ಕಂಡಿದೆ. ಅಥವಾ ಚುನಾವಣೆಗೆ ನಿಂತಿರುವ ಎರಡು ಭ್ರಷ್ಟ ರಾಜಕೀಯ ಪಕ್ಷಗಳ ನಡುವಿನ ಹಗ್ಗಜಗ್ಗಾಟವಾಗಿ ಕಂಡಿದೆ. ಅಥವಾ ವೀರಶೈವ ಎಂಬ ಹಿಂದೂ ಜಾತಿಯೊಂದರ ವಿಘಟನೆಯ ಸೀಮಿತ ಸಮಸ್ಯೆಯಾಗಿ ಕಂಡಿದೆ. ಅಥವಾ ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ನಡೆದಿರುವ ಚೌಕಾಶಿಯಾಗಿ ಕಂಡಿದೆ. ಅತ್ತ ಶುಷ್ಕ ಪಾರಮಾರ್ಥಿಗಳಿಗೆ ಚಳವಳಿಯು ಧರ್ಮ ಒಡೆಯುವ ಘಾತಕ ಕೃತ್ಯವಾಗಿ ಕಂಡಿದೆ. ಇದೆಲ್ಲವೂ ಹೌದಿರಬಹುದು. ಆದರೆ ಇದಾವುದೂ ಅಲ್ಲದ ಆಳದ ಒಂದು ತುಡಿತವೂ ಇದೆ ಚಳವಳಿಯ ಹಿಂದೆ.

ಧರ್ಮಗಳ ಸಾಂಸ್ಥಿಕ ಆಕಾರಕ್ಕೂ ಅದರ ಆಶಯಕ್ಕೂ ನಡುವೆ ಇರುವ ಕಂದಕದ್ದು ಸಮಸ್ಯೆ. ಕೇವಲ ಲಿಂಗಾಯತಕ್ಕೆ ಸೀಮಿತವಾದದ್ದಲ್ಲ, ಅಕಾರ ಮತ್ತು ಆಶಯಗಳ ನಡುವಣ ಬಿರುಕಿನ ಈ ಸಮಸ್ಯೆ. ಇದು, ಧಾರ್ಮಿಕ, ರಾಜಕೀಯ ಹಾಗೂ ಶೈಕ್ಷಣಿಕ ಸಂಸ್ಥೆಗಳೆಲ್ಲವಕ್ಕೂ ಆಗಾಗ ಹಿಡಿಯುವ ಒಂದು ಕಾಯಿಲೆ, ನಿವಾರಿಸಲೇಬೇಕಾದ ಕಾಯಿಲೆ.

ಕ್ರೈಸ್ತ ಧರ್ಮದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಲಿಂಗಾಯತದಲ್ಲಿ ಆದಂತೆಯೇ ಕ್ರೈಸ್ತ ಧರ್ಮದಲ್ಲಿಯೂ, ಕ್ರಿಸ್ತನ ಬಲಿದಾನದ ನಂತರದ ಎರಡು ಶತಮಾನ, ಹೆಚ್ಚಿನ ಸಾಂಸ್ಥಿಕ ಬೆಳವಣಿಗೆ ಆಗಲಿಲ್ಲ. ಕ್ರಿಸ್ತನ ಬೆರಳೆಣಿಕೆಯ ಅನುಯಾಯಿಗಳು ಆತನ ಮೂಲ ಆಶಯವನ್ನು ಆಚರಣೆಯ ಮೂಲಕ ಜೀವಂತವಾಗಿ ಇಟ್ಟಿದ್ದರು, ಅಷ್ಟೆ. ಸಾಂಸ್ಥಿಕ ವಿಸ್ತರಣೆ ಆನಂತರ ಬಂತು, ಶತ್ರು ಪಕ್ಷವಾಗಿದ್ದ ರೋಮನ್ ಚಕ್ರಾಧಿಪತ್ಯವು ತನ್ನ ನಿಲುವನ್ನು ಬದಲಿಸಿಕೊಂಡ ನಂತರ ಬಂತು.

ರೋಮನ್ ಕುದುರೆ ಏರಿದ ಕ್ರೈಸ್ತ ಧರ್ಮವು ರೋಮನ್ ಕತ್ತಿ, ರೋಮನ್ ಕ್ರೌರ್ಯ ಹಾಗೂ ರೋಮನ್ ದರ್ಪದ ಬಲದ ಮೇಲೆ ವಿಶ್ವದಾದ್ಯಂತ ಹರಡಿತು. ಸಾಂಸ್ಥಿಕ ಬೆಳವಣಿಗೆಗೆ ನೀಡಿದ ಅತಿಯಾದ ಮಹತ್ವವೇ ಕ್ರೈಸ್ತ ಧರ್ಮದ ಆಶಯಕ್ಕೆ ಮುಳುವಾಯಿತು. ಮಾತ್ರವಲ್ಲ, ಅತಿಯಾದ ಸಾಂಸ್ಥಿಕತೆಯ ಕಾರಣಕ್ಕಾಗಿಯೇ ಕ್ರೈಸ್ತ ಧರ್ಮದಲ್ಲಿ ಪ್ರಾಟಸ್ಟೆಂಟ್ ಎಂಬ ಹೆಸರಿನ ಒಂದು ಒಳಬಂಡಾಯವೂ ನಡೆಯಿತು.

ಲಿಂಗಾಯತದಲ್ಲಿಯೂ, ವಿವಿಧ ಚಾರಿತ್ರಿಕ ಸಂದರ್ಭಗಳಲ್ಲಿ, ಹಲವು ಒಳಬಂಡಾಯಗಳು ನಡೆದಿವೆ. ನಾವಾರೂ ಇವುಗಳನ್ನು ಗಮನಿಸಿಲ್ಲ ಅಷ್ಟೆ. ಹಾಗಾಗಿ ಹಾಲಿ ನಡೆಯುತ್ತಿರುವುದು ಮೊದಲ ಬಂಡಾಯವೇವಲ್ಲ. ಮತ್ತೊಂದು ಸಂಗತಿಯನ್ನು ಮರೆಯಬಾರದು ನಾವು. ಲಿಂಗಾಯತರಲ್ಲಿ ಒಳ ಬಂಡಾಯಗಳು ನಡೆದಾಗಲೆಲ್ಲ ಅದಕ್ಕೆ ನಾಯಕತ್ವ ನೀಡಿದವನು ಅಲ್ಲಮ, ಅಥವಾ ಅಲ್ಲಮ ಎಂಬ ಒಂದು ರೂಪಕ. ಅಲ್ಲಮನು ಅವತರಿಸಿ ಬರುತ್ತಾನೆ. ಬಂದು ಬಸವತತ್ವಕ್ಕೆ ಹಿಡಿದಿರುವ ಕಿಲುಬನ್ನು ತೊಳೆದು ಫಳ ಫಳ ಹೊಳೆಯುವಂತೆ ಮಾಡುತ್ತಾನೆ. ಬಸವನನ್ನು ಹರಸಿ ಧರ್ಮವನ್ನು ಮುನ್ನಡೆಸುತ್ತಾನೆ ಎಂದು ನಂಬುತ್ತದೆ ಗ್ರಾಮೀಣ ಬಡಜನತೆ.

ಇಷ್ಟಕ್ಕೂ, ಒಳಬಂಡಾಯಗಳು ಧರ್ಮವೊಂದರ ದೌರ್ಬಲ್ಯ ಆಗಬೇಕಿಲ್ಲ. ಅದರ ಚೈತನ್ಯಶೀಲತೆಯ ಸೂಚನೆಯೂ ಆದೀತು. ನನ್ನ ಮಾತಿನ ಅರ್ಥವೇನೆಂದರೆ, ಮತ್ತೊಮ್ಮೆ ಅಲ್ಲಮನ ರೂಪಕವನ್ನು ಬಳಸಿಕೊಂಡು, ಲಿಂಗಾಯತದ ಚಳವಳಿಯನ್ನು ಸರಿ ದಿಕ್ಕಿನಲ್ಲಿ ಕೊಂಡೊಯ್ದರೆ, ವೀರಶೈವ ಧರ್ಮದೊಳಗೆ ಹಾಲಿ ನಡೆದಿರುವ ಒಳಬಂಡಾಯವು ಮಹತ್ವದ ಸಾಮಾಜಿಕ ಕ್ರಾಂತಿಯೊಂದಕ್ಕೆ ಎಡೆಗೊಡಬಲ್ಲದು ಎಂಬುದು.

ಯಾವುದದು ಸರಿ ದಿಕ್ಕು? ಯಾರು ನೀಡಬಲ್ಲರು ಚಳವಳಿಗೆ ಸರಿಯಾದ ನಾಯಕತ್ವವನ್ನು? ಮಠಾಧೀಶರೇ, ಮಂತ್ರಿಗಳೇ ಅಥವಾ ಶ್ರೀಮಂತ ಲಿಂಗಾಯತರುಗಳೇ? ಇವರು ಯಾರನ್ನೂ ತಿರಸ್ಕರಿಸದೆ, ಇವರಾರಿಗೂ ಅಗೌರವ ತೋರಿಸದೆ, ಹೇಳಬಹುದಾದ ಮಾತೊಂದಿದೆ. ಹನ್ನೆರಡನೆಯ ಶತಮಾನದ ಚಳವಳಿಗೆ ದಿಕ್ಕು ತೋರಿಸಿದವರು ಕಾಯಕ ಜೀವಿಗಳು. ಅರ್ಥಾತ್ ಶ್ರಮ ಜೀವಿಗಳು. ಅಥವಾ, ಆನಂತರದಲ್ಲಿ ಒಳಬಂಡಾಯಗಳು ನಡೆದಾಗ, ಅಲ್ಲಮ ಅವತರಿಸಿದ್ದು ಗಲೀಜು ದರಿದ್ರನ ರೂಪದಲ್ಲಿ. ಮಾಂಸಾಹಾರಿ ಹಾಗೂ ಮದ್ಯಪಾನಿ ದರಿದ್ರನ ರೂಪದಲ್ಲಿ ಈಗಲೂ ದರಿದ್ರನೇ ದಿಕ್ಕು ತೋರಿಸಬೇಕು ಲಿಂಗಾಯತದ ಚಳವಳಿಗೆ.

ಶ್ರೀಮಂತ ಬಣಜಿಗರು, ಜಾಣ ಜಂಗಮರು, ಸಕ್ಕರೆ ಕಾರ್ಖಾನೆಗಳ ಯಶಸ್ವಿ ಮಾಲೀಕರು, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳ ಒಡೆಯರು, ಹೈವೇಗಳ ನಿರ್ಮಾಪಕರು, ವಿದೇಶೀಯ ಲಿಂಗಾಯತರು, ಐಎಎಸ್ ಅಧಿಕಾರಿಗಳು, ವಕೀಲರು... ಇತ್ಯಾದಿ ಎಲ್ಲರೂ, ಕಣ್ಣಿಗೆ ಕಾಣಿಸುವ ಲಿಂಗಾಯತರು. ಯಾರ ಕಣ್ಣಿಗೂ ಕಾಣದೆ ಉಳಿಯುವ ಕಾಯಕಜೀವಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿದ್ದಾರೆ, ವೀರಶೈವದ ಒಳಗೂ ಇದ್ದಾರೆ ಹೊರಗೂ ಇದ್ದಾರೆ. ಹೆಚ್ಚಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದ್ದಾರೆ. ಅವರು ದಡ್ಡರಂತೆ ಕಾಣುತ್ತಾರೆ. ದೀನರಂತೆ ಕಾಣುತ್ತಾರೆ. ಮಂಟೇಸ್ವಾಮಿಯಂತೆ ಕಾಣುತ್ತಾರೆ.

ಇರಲಿ. ಆಶಯ ಆ ನಂತರವಾಯಿತು. ಇರುವ ಆಕಾರವನ್ನು ಮೊದಲು ಅರ್ಥ ಮಾಡಿಕೊಳ್ಳೋಣ. ವೀರಶೈವ ಎಂಬುದು ಒಂದು ಮೇಲ್ಜಾತಿ. ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ಪ್ರಬಲವಾಗಿರುವ ಜಾತಿ. ಧಾರ್ಮಿಕವಾಗಿ ಕೂಡ ಇತರೆ ಹಿಂದೂ ಮೇಲ್ಜಾತಿಗಳಿಗಿಂತ ತುಂಬ ಭಿನ್ನವೇನಲ್ಲದ ಜಾತಿ. ಪೂಜೆ– ಪುನಸ್ಕಾರಗಳು, ಮಂದಿರಗಳು, ಮೂರ್ತಿಗಳು, ಆಗಮಶಾಸ್ತ್ರ ಶಂಖ ಜಾಗಟೆ ಎಲ್ಲವನ್ನೂ ಒಳಗೊಂಡಿದೆ ಈ ಜಾತಿ. ಬ್ರಾಹ್ಮಣರಿಗೆ ಸಡ್ಡುಹೊಡೆದು ನಿಂತಿದೆ, ಶ್ರೀಮಂತವಾಗಿದೆ, ಅಚ್ಚುಕಟ್ಟಾದ ಧಾರ್ಮಿಕ ವ್ಯವಸ್ಥೆಯಾಗಿದೆ ಈ ಜಾತಿ.

ವ್ಯತ್ಯಾಸಗಳೂ ಇವೆ. ಮೇಲು ಮೇಲಿನ ವ್ಯತ್ಯಾಸಗಳಷ್ಟೆ ಅವು. ವೈದಿಕ ವ್ಯವಸ್ಥೆಯು ಬ್ರಾಹ್ಮಣರನ್ನು ಬ್ರಾಹ್ಮಣರೆಂದು ಕರೆದರೆ, ಇವರು ಜಂಗಮರೆಂದು ಕರೆಯುತ್ತಾರೆ. ಅಲ್ಲಿ ಶಿವ, ವಿಷ್ಣು ಇಬ್ಬರನ್ನೂ ಪೂಜಿಸಿದರೆ ಇಲ್ಲಿ ಶಿವನೊಬ್ಬನನ್ನೇ ಪೂಜಿಸುತ್ತಾರೆ. ಅಲ್ಲಿ ನಾಮ ಬಳಿದುಕೊಂಡರೆ ಇಲ್ಲಿ ವಿಭೂತಿ ಬಳಿದುಕೊಳ್ಳುತ್ತಾರೆ... ಇತ್ಯಾದಿ.

ಜೊತೆಗೆ ವಿರಕ್ತ ಮಠಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಹರಡಿಕೊಂಡಿವೆ ಇವು. ವಿರಕ್ತ ಮಠಗಳು ಬಸವ ತತ್ವವನ್ನು ಪ್ರತಿಪಾದಿಸುತ್ತವೆ. ಒಟ್ಟು ವೀರಶೈವದ ಅಡಿಯಲ್ಲಿಯೇ ಈವರೆಗೂ ಪ್ರತಿಪಾದಿಸಿಕೊಂಡು ಬಂದಿವೆ. ಇಷ್ಟಕ್ಕೂ, ತಮ್ಮ ಗ್ರಾಮೀಣ ಭಕ್ತರ ಆರ್ಥಿಕ ಸ್ಥಿತಿಗತಿ ಸುಧಾರಿಸುವವರೆಗೆ ಇವರಿಗಿದ್ದ ಮಾನ್ಯತೆ ಅಷ್ಟಕ್ಕಷ್ಟೆ. ಇತರೆ ವೀರಶೈವ ಮಠಗಳಲ್ಲಿ, ಅರ್ಥಾತ್ ಪಂಚಾಚಾರ್ಯರ ಮಠಗಳಲ್ಲಿ, ಅಲ್ಲಮ ಹಾಗೂ ಬಸವರ ಚಿತ್ರ ಕೂಡ ತೂಗು ಹಾಕುತ್ತಿರಲಿಲ್ಲ ಇತ್ತೀಚಿನವರೆಗೆ. ಅವರು ಅವರಂತಿದ್ದರು, ಇವರು ಇವರಂತಿದ್ದರು.

ಕಳೆದ ಆರೇಳು ದಶಕಗಳಲ್ಲಿ ಆಗಿರುವ ಮತ್ತೊಂದು ಪ್ರಮುಖ ಬೆಳವಣಿಗೆಯೆಂದರೆ ನಗರಯಾನ. ಅಥವಾ ನಗರೀಕರಣ. ಮಿಕ್ಕೆಲ್ಲರಂತೆ ವೀರಶೈವರೂ ನಗರೀಕರಣದ ಮೂಲಕವೇ ಪ್ರಬಲರಾಗಿದ್ದಾರೆ. ಈ ಪ್ರಕ್ರಿಯೆಯನ್ನು ಹಿಂದಕ್ಕೆ ತಿರುಗಿಸಿ, ಮತ್ತೊಮ್ಮೆ ಗ್ರಾಮೀಣ ಭಕ್ತರ ಬಳಿಗೆ ಹೋಗಬಲ್ಲುದೆ ಲಿಂಗಾಯತದ ಚಳವಳಿ?

ವೀರಶೈವರಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ. ಸಾಕಷ್ಟು ಮಹತ್ವಪೂರ್ಣ ರಾಜಕೀಯ ಬೆಳವಣಿಗೆಯದು. ಹಿಂದುತ್ವವೆಂಬ ಉಗ್ರವಾದಿ ಹಿಂದೂ ತಾತ್ವಿಕತೆಯೊಂದರ ಮುಂಚೂಣಿ ಕಾರ್ಯಕರ್ತರಾಗಿದ್ದಾರೆ ವೀರಶೈವರು. ಹಾಗೂ ಬಿಜೆಪಿ ಎಂಬ ಹಿಂದೂವಾದಿ ರಾಜಕೀಯ ಪಕ್ಷವೊಂದರ ಪ್ರಮುಖ ವೋಟು ಬ್ಯಾಂಕು ಕೂಡ ಆಗಿದ್ದರು ಅವರು, ಇತ್ತೀಚಿನವರೆಗೆ. ಇನ್ನು ಮುಂದಿನದು ನಾ ತಿಳಿಯೆ. ಹೀಗೆ, ಹಿಂದೂವಾದಿ ವೀರಶೈವ ಹಾಗೂ ಬಸವವಾದಿ ಲಿಂಗಾಯತ, ಎರಡೂ ಪರಸ್ಪರ ಹೆಣೆದುಕೊಂಡಿವೆ ತಮ್ಮ ಬೇರುಗಳಲ್ಲಿ. ಇದು ಇಂದಿನ ಪರಿಸ್ಥಿತಿ.

ಇಂದಿಗೂ ಹಿಂದಿಗೂ ವ್ಯತ್ಯಾಸವೇನಾದರೂ ಇರುವುದೇ ಆದರೆ, ಇಂದು, ಕಾಯಕ ತತ್ವ ಬುಡಮೇಲಾಗಿದೆ. ಬಸವನ ಕಾಲದಲ್ಲಿ ಕಾಯಕ ಜೀವಿಗಳು ಉತ್ಪಾದಕರಾಗಿದ್ದರು. ಇಂದು ಸ್ವಯಂಚಾಲಿತ ಯಂತ್ರಗಳು ಉತ್ಪಾದಕರಾಗಿದ್ದಾವೆ. ಕೈಯಿಂದ ಹಗ್ಗ ಹೊಸೆಯುತ್ತಿದ್ದ ನುಲಿಯ ಚಂದಯ್ಯ, ಮಗ್ಗದಿಂದ ಬಟ್ಟೆ ನೇಯುತ್ತಿದ್ದ ದಾಸಿಮಯ್ಯ, ಅಕ್ಕಿ ಆಯ್ದು ಜೀವಿಸುತ್ತಿದ್ದ ಮಾರಯ್ಯ ಇತ್ಯಾದಿ ಕೈ ಕೆಲಸಗಾರರೆಲ್ಲ ಇಂದು ‘ಅನ್ನಭಾಗ್ಯ’ದ ಅಕ್ಕಿಗಾಗಿ ಕೈಚಾಚಿ ಕುಳಿತಿದ್ದಾರೆ. ಕೈ ಉತ್ಪಾದಕತೆ ಉಳಿಯದೆ ಲಿಂಗಾಯತವು ಖಂಡಿತವಾಗಿ ಉಳಿಯಲಾರದು. ಲಿಂಗಾಯತದ ಕ್ರಾಂತಿ ನಿಜವಾಗಲಿಕ್ಕಿರುವ ನಿಜವಾದ ತೊಡಕು ಇದು.

ಬಸವಣ್ಣ ಕಟ್ಟಬಲ್ಲ, ಆದರೆ ಕಳಚಲಾರ. ಈಗ ಅಗತ್ಯವಿರುವುದು ಕಳಚುವ ಕೆಲಸ. ಕಳಚಲಿಕ್ಕೆ ಅಲ್ಲಮನೇ ಬೇಕು. ಬಸವಣ್ಣ ನಿಸ್ಸೀಮ ಸಂಘಟಕ. ಸಮಾನತೆ ಹಾಗೂ ಸಹಕಾರ ತತ್ವದ ತಳಹದಿಯ ಮೇಲೆ ಕಾಯಕ ಜೀವಿಗಳನ್ನು ಸಂಘಟಿಸಬಲ್ಲವನು. ಆರ್ಥಿಕವಾಗಿಯೂ ಸಂಘಟಿಸಬಲ್ಲವನು, ನೈತಿಕವಾಗಿಯೂ ಸಂಘಟಿಸಬಲ್ಲವನು. ಕಣ್ಣಿಗೆ ಕಾಣಿಸುತ್ತಿರುವ ಲಿಂಗಾಯತ ಕಾಯಕರುಗಳೆಲ್ಲರೂ ಬಸವನ ಪ್ರತಿರೂಪಗಳೇ ಸರಿ. ಕಟ್ಟುವವರು. ಅದೇ ಅವರ ಸಮಸ್ಯೆಯೂ ಹೌದು. ಗಲೀಜು ದಲಿತನ ರೂಪ ಧರಿಸಿ ಮಹಾಮನೆಯ ಬಾಗಿಲಿಗೆ ಬಂದು ಪ್ರತಿಭಟಿಸಲಿಕ್ಕೆ ಅಲ್ಲಮನೇ ಬೇಕು.

ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕದ ಮೂಲೆಮೂಲೆಯ ಗ್ರಾಮೀಣ ಪ್ರದೇಶಗಳಲ್ಲಿ ಅಲೆದಾಡಿದ್ದೇನೆ ನಾನು. ನಗರಗಳ ಸೋಂಕೇ ಇರದ ಗ್ರಾಮಗಳಲ್ಲಿ ಅಲ್ಲಿ ಮಠಗಳಿವೆ. ಈಗಲೂ ಇವೆ. ಹೆಚ್ಚಿನವು ಈಗಲೂ ಸರಳವಾಗಿವೆ. ಸುತ್ತ, ರೈತಾಪಿಗಳು, ನೇಕಾರರು, ಕುಶಲಕರ್ಮಿಗಳು ಬಾಳುವೆ ಮಾಡುತ್ತಿದ್ದಾರೆ. ಪರಸ್ಪರರನ್ನು ಸಲಹುತ್ತಿದ್ದಾರೆ.

ದಲಿತರನ್ನು ಪೀಠಕ್ಕೆ ಏರಿಸಿ ಕೂರಿಸಿದ ಮಠಗಳಿವೆ. ಹೆಂಗಸರನ್ನು ಸನ್ಯಾಸಿನಿಯರನ್ನಾಗಿಸಿ ಗೌರವಿಸಿದ ಮಠಗಳಿವೆ. ಸದ್ದಿರದೆ ರಚನಾತ್ಮಕ ಕಾರ್ಯ ಮಾಡುತ್ತಿರುವ ಮಠಗಳಿವೆ. ಕೆರೆಯ ನಿರ್ಮಾಣ, ಕಾಡಿನ ನಿರ್ಮಾಣ, ಸರಳ ಶಿಕ್ಷಣದ ನಿರ್ಮಾಣ, ಸಂತೆ, ಜಾತ್ರೆ, ಪಂಚಾಯಿತಿ... ಇತ್ಯಾದಿ ಎಲ್ಲದರಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸನ್ಯಾಸಿಗಳನ್ನು ನೋಡಿದ್ದೇನೆ ನಾನು.

ಇತ್ತ ನಗರಗಳಲ್ಲಿ, ತಾಜಮಹಲುಗಳಂತೆ ವೈಭವೋಪೇತವಾಗಿ ಕಟ್ಟಿ ನಿಲ್ಲಿಸಲಾದ ಮಠಗಳನ್ನೂ ನೋಡಿದ್ದೇನೆ ನಾನು. ಇವುಗಳು ಕ್ಯಾಪಿಟೇಷನ್ ಶುಲ್ಕದಿಂದ ಬದುಕುವ ಮಠಗಳು. ಅಥವಾ ಬಂಡವಾಳಶಾಹಿ ಭಕ್ತರಿಂದ. ಶ್ರೀಮಂತ ಮಠಗಳು ಸೇವಾಕಾರ್ಯ ನಡೆಸುತ್ತಿಲ್ಲ ಎಂದು ನನ್ನ ಮಾತಿನ ಅರ್ಥವಲ್ಲ. ಆದರೆ, ಇವತ್ತಿನ ಆಧ್ಯಾತ್ಮಿಕ ಬಿಕ್ಕಟ್ಟಿಗೆ ಕೇವಲ ಸೇವಾಕಾರ್ಯ ಪರಿಹಾರವಲ್ಲ ಎಂಬುದಷ್ಟೆ ನನ್ನ ಮಾತಿನ ಅರ್ಥ. ಅಲ್ಲಮ ಒಪ್ಪುತ್ತಿರಲಿಲ್ಲ ಶ್ರೀಮಂತಿಕೆಯ ಸೇವಾಕಾರ್ಯ, ಜಾಣ ಮಡಿವಂತಿಕೆ ಇತ್ಯಾದಿಗಳನ್ನು.

ಲ್ಯಾಟಿನ್ ಅಮೆರಿಕೆಯ ಅನೇಕ ಕ್ರೈಸ್ತ ಸನ್ಯಾಸಿಗಳು, ‘ಕ್ರಿಸ್ತನು ಬಡವ’ ಎಂದು ಸರಳವಾಗಿ ಘೋಷಿಸಿ ಬಂಡಾಯವೆದ್ದರು. ಬಡವರ ಪರವಾದ ಹೋರಾಟಗಳಲ್ಲಿ ನೇರವಾಗಿ ಭಾಗವಹಿಸತೊಡಗಿದರು. ಲಿಂಗಾಯತ ಮಠಗಳು ಹಾಗೂ ಸನ್ಯಾಸಿಗಳೂ, ‘ಶಿವನು ಬಡವ’ ಎಂದು ಸಾರಿ ಬಡವನ ರೂಪು ಧರಿಸಿ ನಿಲ್ಲಬೇಕಿದೆ ಅಲ್ಲಮನಂತೆ.

ಗ್ರಾಮೀಣ ಕೆಲಸವು ಲಿಂಗಾಯತದ ಮುಂಚೂಣಿ ಕೆಲಸವಾಗಬೇಕು. ಗ್ರಾಮೀಣ ಬಡವರಿಗೆ ಆವರಿರುವೆಡೆಯಲ್ಲೇ ಶಿಕ್ಷಣದ ವ್ಯವಸ್ಥೆಯಾಗಬೇಕು. ಕಾಯಕ ಕಸಿಯುವ ಶಿಕ್ಷಣವಾಗಬಾರದು ಅದು. ಕಾಯಕಪ್ರಣೀತ ಸರಳ ಶಿಕ್ಷಣವಾಗಬೇಕು ಅದು. ಸಂಸ್ಕೃತವನ್ನಾಗಲೀ ಅಥವಾ ಇಂಗ್ಲಿಷನ್ನಾಗಲೀ ತಿರಸ್ಕರಿಸುವ ಅಗತ್ಯವಿಲ್ಲ. ಆದರೆ ಲಿಂಗಾಯತದ ಆಧ್ಯಾತ್ಮಿಕ ಭಾಷೆ ಕನ್ನಡ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕೈ ಉತ್ಪನ್ನಗಳಿಗೆ ಸೂಕ್ತ ಬೆಲೆ ಕೊಡಿಸುವ ಹೋರಾಟ, ಪರಿಸರ ಸಂಬಂಧಿ ಹೋರಾಟ, ನೆಲ–ಜಲಗಳನ್ನು ಸಂರಕ್ಷಿಸುವ ಹೋರಾಟ... ಇತ್ಯಾದಿ ಹೋರಾಟಗಳ ಮುಂಚೂಣಿಯಲ್ಲಿ ನಿಲ್ಲಬೇಕು ಲಿಂಗಾಯತದ ಚಳವಳಿ.

ನಾನು ಲಿಂಗಾಯತನಲ್ಲ. ಲಿಂಗಾಯತದ ಬಗ್ಗೆ ಅಪಾರ ಗೌರವವಿರುವ ಮನುಷ್ಯ. ಹಾಗಾಗಿ ಇಷ್ಟೆಲ್ಲ ಬರೆಯುವ ಧ್ಯೆರ್ಯ ಮಾಡಿದ್ದೇನೆ.

ಪ್ರತಿಕ್ರಿಯಿಸಿ (+)