ಬಹು ಭಾಷಾ ನೀತಿಯ ಪ್ರಸ್ತುತತೆ

‘ಭಾರತೀಯ ವಿದ್ಯಾರ್ಥಿಯು ಇಂಗ್ಲಿಷ್ ಕೋಳ ಸರಪಳಿಗಳಲ್ಲಿ ಬಂದಿಯಾಗಿದ್ದಾನೆ; ಆತನ ಮನಸ್ಸು ತುಕ್ಕು ಹಿಡಿದಿದೆ.’
1958ರಲ್ಲಿ ಸಮಾಜವಾದಿ ನಾಯಕ ರಾಮ ಮನೋಹರ ಲೋಹಿಯಾ ಹೇಳಿದ್ದ ಮಾತುಗಳಿವು. ಬ್ರಿಟಿಷ್ ವಸಾಹತುಶಾಹಿಯಿಂದ ಬಿಡುಗಡೆಗೊಂಡ ಸ್ವತಂತ್ರ ಭಾರತದಲ್ಲಿ ಜನಭಾಷೆಗಳಿಗೆ ಸಿಗಬೇಕಾದ ಮಹತ್ವ ಕುರಿತು ಮಾತನಾಡುತ್ತಾ ಲೋಹಿಯಾ ಈ ಮಾತುಗಳನ್ನು ಹೇಳಿದ್ದರು.
ಈಗ 21ನೇ ಶತಮಾನದಲ್ಲಿ ಜಾಗತೀಕರಣದ ಯುಗದಲ್ಲಿದ್ದೇವೆ. ಇಂಗ್ಲಿಷ್ ಭಾಷೆಯ ವ್ಯಾಪ್ತಿ ಹಾಗೂ ಪರಿಣಾಮ ಮತ್ತೊಂದು ಬಗೆಯ ವಸಾಹತುಶಾಹಿಗೆ ನಾಂದಿಯಾಗುತ್ತಿರುವ ದಿನಗಳಿವು. ಅಧಿಕಾರ ಎಂದರೆ ಅದು ರಾಜಕೀಯ ಅಧಿಕಾರವಷ್ಟೇ ಆಗಿರುವುದಿಲ್ಲ. ಹಣದ ಬಲ, ಮಿಲಿಟರಿ ಬಲ, ತೋಳ್ಬಲಗಳಷ್ಟೇ ಅಲ್ಲ ಭಾಷಾ ಬಲದಲ್ಲೂ ಅಧಿಕಾರ ಎಂಬುದು ವ್ಯಕ್ತವಾಗುತ್ತಿರುತ್ತದೆ. ಹೀಗಾಗಿ ವಸಾಹತುಶಾಹಿ , ಸಾಮ್ರಾಜ್ಯಶಾಹಿ ಎಂಬುದು ಸಾಂಸ್ಕೃತಿಕ ವಸಾಹತುಶಾಹಿ, ಭಾಷಾ ಸಾಮ್ರಾಜ್ಯಶಾಹಿಗಳ ರೂಪಗಳಲ್ಲೂ ಇರಬಹುದು. ಬ್ರಿಟಿಷ್ ಸಾಮ್ರಾಜ್ಯಶಾಹಿ ಈಗ ಇಲ್ಲದಿರಬಹುದು.
ಆದರೆ ಪಶ್ಚಿಮದ ಸಾಮ್ರಾಜ್ಯಶಾಹಿ ಹಲವು ರೂಪಗಳಲ್ಲಿ ನಮ್ಮ ನಡುವೆ ಇದೆ. ಬ್ರಿಟಿಷ್ ಸಾಮ್ರಾಜ್ಯದ ಸೂರ್ಯ ಎಂದಿಗೂ ಮುಳುಗುವುದಿಲ್ಲ ಎಂದು ಈ ಹಿಂದೆ ಬ್ರಿಟಿಷರು ಪ್ರತಿಪಾದಿಸಿಕೊಂಡದ್ದಿದೆ. ಈಗ ಕ್ವರ್ಕ್ ಮತ್ತು ವಿಡ್ಡೋಸನ್ ಎಂಬ ಭಾಷಾತಜ್ಞರು ಹೇಳುವಂತೆ, ಇಂಗ್ಲಿಷ್ ಎಂಬ ಭಾಷೆಯ ಸೂರ್ಯ ಎಂದೆಂದಿಗೂ ಮುಳುಗುವುದು ಸಾಧ್ಯವಿಲ್ಲ. ಏಕೆಂದರೆ ಇಂಗ್ಲಿಷ್ ಭಾಷೆಯ ಸಾಮ್ರಾಜ್ಯ ಅಷ್ಟು ಚೆನ್ನಾಗಿ ಸ್ಥಾಪಿತಗೊಂಡಿದೆ.
ಸ್ವತಂತ್ರ ಭಾರತದಲ್ಲಂತೂ ವಿಶೇಷವಾಗಿ ಉನ್ನತ ಶಿಕ್ಷಣದಲ್ಲಿ ಪಾಶ್ಚಿಮಾತ್ಯ ಪರಿಕಲ್ಪನೆ ಹಾಗೂ ವಿಚಾರಗಳ ಮೇಲಿನ ಅವಲಂಬನೆ ಮುಂದುವರಿದಿರುವುದನ್ನು ನೋಡುತ್ತಿದ್ದೇವೆ. ಇದರಿಂದಾಗಿ ಬದುಕಿನ ಪ್ರತಿ ವಲಯದಲ್ಲೂ ಪಾಶ್ಚಿಮಾತ್ಯ ಪರಿಕಲ್ಪನೆ, ಚಿಂತನೆಗಳಿಂದ ಮುಪ್ಪುರಿಗೊಂಡ ‘ಸ್ವೀಕೃತ ಜ್ಞಾನ’ವನ್ನೇ ರಾಷ್ಟ್ರ ಅವಲಂಬಿಸುವಂತಾಗಿದ್ದು. ವಸಾಹತುಶಾಹಿ ಮನಸ್ಥಿತಿ ಚೆನ್ನಾಗಿಯೇ ಬೇರೂರಿದೆ.
ಇಂತಹದೊಂದು ಸನ್ನಿವೇಶದಲ್ಲಿ ಕಳೆದ ವಾರ ಫೆಬ್ರುವರಿ 21ರಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಾತೃಭಾಷಾ ದಿನ ಆಚರಿಸಲಾಗಿದೆ. ವಿಶ್ವದಾದ್ಯಂತ ಇರುವ ಭಾಷಾ ವೈವಿಧ್ಯದ ಸಂಪತ್ತನ್ನು ಎತ್ತಿ ಹಿಡಿಯುವ ದಿನವಿದು. ಹಾಗೆಯೇ ಉರ್ದು ಭಾಷೆ ಹೇರಿಕೆ ವಿರೋಧಿಸಿ ತಮ್ಮ ಮಾತೃಭಾಷೆ ಬಂಗಾಳಿ ಭಾಷೆಯನ್ನು ಅಧಿಕೃತವಾಗಿ ಬಳಸುವ ವಿಚಾರಕ್ಕಾಗಿ ಬಾಂಗ್ಲಾದೇಶದ ಢಾಕಾ ವಿಶ್ವವಿದ್ಯಾಲಯದಲ್ಲಿ (ಆಗಿನ ಪೂರ್ವ ಪಾಕಿಸ್ತಾನ) ಆಂದೋಲನ ನಡೆಸಿ 1952ರ ಫೆ 21ರಂದು ಜೀವ ತೆತ್ತ ನಾಲ್ವರು ವಿದ್ಯಾರ್ಥಿಗಳನ್ನು ಸ್ಮರಿಸುವ ದಿನವೂ ಇದಾಗಿತ್ತು.
ಜಾಗತೀಕರಣದ ವಿಶ್ವದಲ್ಲಿ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಕಲಿತು ಬಳಸುವುದಲ್ಲದೆ ತಾಯ್ನುಡಿಯ ಜ್ಞಾನ ಸಂಪತ್ತನ್ನು ಉಳಿಸಿ ಬೆಳೆಸಲು ಯುನೆಸ್ಕೊ ಉತ್ತೇಜನ ನೀಡುತ್ತದೆ. ರಾಷ್ಟ್ರೀಯ ಅಭಿವೃದ್ಧಿಗೆ ಸ್ಥಳೀಯ ಭಾಷೆಗಳ ಬಳಕೆಯ ಅಗತ್ಯವನ್ನು ಮನಗಾಣುವ ದಿನವಾಗಿ ಇದನ್ನು ಆಚರಿಸಲಾಗುತ್ತಿದೆ.
ಜಾಗತೀಕರಣ ಎಂದರೆ ‘ಗ್ಲೋಬಲೈಜೇಷನ್’ ಎಂಬಂಥ ಪದಪುಂಜ ಮೊದಲು ಬಳಕೆಯಾದದ್ದು 1983ರಲ್ಲಿ. ‘ಹಾರ್ವರ್ಡ್ ಬಿಸಿನೆಸ್ ರಿವ್ಯೂ’ನಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಥಿಯೊಡೊರ್ ಲೆವಿಟ್ ಈ ಪದ ಬಳಕೆ ಮಾಡಿದ್ದರು. ಈಗ ಈ ಪದ ವ್ಯಾಪಕ ಬಳಕೆಯಲ್ಲಿದೆ. ಜಾಗತೀಕರಣ ಪ್ರಕ್ರಿಯೆ ಅರ್ಥ ಮಾಡಿಕೊಳ್ಳಲು ಅಂತರರಾಷ್ಟ್ರೀಯ ಆರ್ಥಿಕತೆಯಲ್ಲಾದ ಬಿಕ್ಕಟ್ಟನ್ನು ಅರ್ಥ ಮಾಡಿಕೊಳ್ಳಬೇಕು. ಎರಡನೇ ಮಹಾಯುದ್ಧದ ನಂತರದ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆ ನಿಯಂತ್ರಿಸಲು ಅಭಿವೃದ್ಧಿ ಹೊಂದಿದ ದೇಶಗಳು ನಡೆಸಿದ ಪ್ರಯತ್ನಗಳ ಫಲ ಇದು.
ಜಾಗತೀಕರಣ ಎಂಬುದು ಬರೀ ಆರ್ಥಿಕ ಪ್ರಕ್ರಿಯೆಯಲ್ಲ. ಅಧಿಕಾರ ಸಂಬಂಧಗಳನ್ನೇ ಬದಲಿಸುವ ಸಾಮರ್ಥ್ಯ ಇರುವಂತಹದ್ದು ಇದು. ಜಾಗತಿಕ ಹಾಗೂ ದೇಶಿ ನೆಲೆಗಳಲ್ಲಿ ರಾಜಕೀಯ, ಸಾಂಸ್ಕೃತಿಕ ಬದಲಾವಣೆಗಳಿಗೆ ಪ್ರೇರಕವಾಗುವಂತಹದ್ದು. ಈ ಪ್ರಕ್ರಿಯೆಯಲ್ಲಿ ಭಾಷಾ ಶ್ರೇಣೀಕರಣವೂ ಪಲ್ಲಟಗೊಳ್ಳುತ್ತದೆ. ನಮ್ಮನ್ನು ಏಕರೂಪ ನಾಗರೀಕತೆಯತ್ತ ಕೊಂಡೊಯ್ಯುವ ಜಾಗತೀಕರಣ ಸಾರ್ವತ್ರಿಕ ಭಾಷೆಯೊಂದರ ಸೃಷ್ಟಿಗೂ ಕಾರಣವಾಗುತ್ತದೆಯೆ ಎಂಬುದು ಪ್ರಶ್ನೆ.
ಈ ನಿಟ್ಟಿನಲ್ಲಿ ಆಲೋಚಿಸುವುದಾದರೆ, ವಿಶ್ವದ ಭಾಷೆ ಇಂಗ್ಲಿಷ್ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಸಂಪಾದಕರು ಈ ಹಿಂದೆ ಪ್ರತಿಪಾದಿಸಿದ್ದರು. ಹಾಗೆಂದಾಕ್ಷಣ ಜಗತ್ತಿನ ಹೆಚ್ಚಿನ ಜನ ಇಂಗ್ಲಿಷ್ ಭಾಷೆಯಲ್ಲೇ ಮಾತನಾಡುತ್ತಾರೆ ಎಂದೇನಿಲ್ಲ. ತೊಂಬತ್ತರ ದಶಕದ ಸಮೀಕ್ಷೆಯೊಂದರ ಪ್ರಕಾರ ವಿಶ್ವದ ಕೇವಲ ಶೇ 7.6 ಜನರು ಇಂಗ್ಲಿಷ್ ಮಾತನಾಡುತ್ತಾರೆ. ಶೇ 18.8 ಮಂದಿ ಚೀನಿ ಭಾಷೆಗಳನ್ನು ಮಾತನಾಡುತ್ತಾರೆ (ಇದರಲ್ಲಿ ಮಾಂಡಾರಿನ್ ಮಾತನಾಡುವ ಶೇ 15.2 ಜನರೂ ಸೇರಿದ್ದಾರೆ). ಶೇ 6.4 ಮಂದಿ ಹಿಂದಿ ಮಾತನಾಡುತ್ತಾರೆ. ಶೇ 6.1 ಮಂದಿ ಸ್ಪ್ಯಾನಿಷ್ ಮಾತನಾಡುತ್ತಾರೆ.
ಒಂದು ಅರ್ಥದಲ್ಲಿ ವಿಶ್ವದ ಶೇ 92ರಷ್ಟು ಜನರಿಗೆ ವಿದೇಶಿ ಆಗಿರುವ ಭಾಷೆ ವಿಶ್ವ ಭಾಷೆಯಾಗುವುದು ಹೇಗೆ ಸಾಧ್ಯ? ನಿಜ ಹೇಳಬೇಕೆಂದರೆ ಇಂಗ್ಲಿಷ್ ಎಂಬುದು ಸಂಪರ್ಕ ಭಾಷೆ (lingua franca). ಪರಸ್ಪರ ಸಂವಾದ ನಡೆಸಲು ವಿವಿಧ ಭಾಷಾ ಗುಂಪುಗಳು ಹಾಗೂ ಸಂಸ್ಕೃತಿಗಳ ಜನರಿಗೆ ಇದು ಸಂವಹನ ಸಾಧನ ಎನ್ನಬಹುದು.
ಭಾರತದ ವಿಷಯವನ್ನೇ ತೆಗೆದುಕೊಂಡಲ್ಲಿ ಹಿಂದಿ ಭಾಷೆ ದಕ್ಷಿಣ ಭಾರತೀಯರಿಗೆ ಪಥ್ಯವಾಗುವುದು ಸಾಧ್ಯವಿಲ್ಲ. ಏಕೆಂದರೆ ಅದು ಒಂದು ನಿರ್ದಿಷ್ಟ ಸಮುದಾಯದ ಭಾಷೆ. ಆದರೆ ಸ್ವತಂತ್ರ ಭಾರತದಲ್ಲಿ ಇಂಗ್ಲಿಷ್ ಯಾವುದೇ ಜನಾಂಗಕ್ಕೆ ಸೇರಿದ್ದೆಂಬ ಭಾವನೆ ಉಳಿದಿಲ್ಲ. ಈ ಹಿಂದೆ ಸಂಸ್ಕೃತ ಹಾಗೂ ಪರ್ಷಿಯನ್ ಭಾಷೆ ಭಾರತೀಯ ಸಂಸ್ಕೃತಿಯಲ್ಲಿ ಮಿಳಿತವಾಗಿದ್ದಂತೆ ಈಗ ಇಂಗ್ಲಿಷ್ ಭಾಷೆ ಮಿಳಿತವಾಗಿದೆ. ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲೂ ಇದು ಇದೇ ರೀತಿ ಬಳಕೆ ಆಗುತ್ತಿದೆ.
ಭಾರತದಲ್ಲಿ ಇಂಗ್ಲಿಷ್ ಕುರಿತಂತಹ ಅಧಿಕೃತ ನೀತಿ ಅನೇಕ ವಿರೋಧಾಭಾಸಗಳಿಂದ ಕೂಡಿದೆ. 1947ರಲ್ಲಿ ಭಾರತ ಸ್ವತಂತ್ರಗೊಂಡ ನಂತರ, ಸಂವಿಧಾನದ 8ನೇ ಷೆಡ್ಯೂಲ್ ನಲ್ಲಿ 14 ( ಈಗ 22) ಭಾರತೀಯ ಭಾಷೆಗಳನ್ನು ಪಟ್ಟಿ ಮಾಡಲಾಯಿತು. ಹಿಂದಿಗೆ ಅಧಿಕೃತ ಭಾಷೆ ಹಾಗೂ ಇಂಗ್ಲಿಷ್ಗೆ ‘ಸಹಅಧಿಕೃತ’ ಭಾಷೆಯ ಸ್ಥಾನಮಾನ ನೀಡಲಾಯಿತು.
ಭಾರತ ಸಂವಿಧಾನದ 343(1)ನೇ ವಿಧಿ ಪ್ರಕಾರ, 1965ರಲ್ಲಿ ಭಾರತದ ‘ಸಹ ಅಧಿಕೃತ ಭಾಷೆ’ಯಾಗಿ ಇಂಗ್ಲಿಷ್ ಮುಂದುವರಿಯುವುದು ಸ್ಥಗಿತಗೊಳ್ಳಬೇಕಿತ್ತು. ಇಂಗ್ಲಿಷ್ ಭಾಷೆಗೆ ಬದಲಿಯಾಗಿ ಹಿಂದಿಯನ್ನು ಬಳಸುವ ಪ್ರಯತ್ನ ಇತ್ತು. ಆದರೆ ಇದರ ವಿರುದ್ಧ ತಮಿಳು ನಾಡಿನಲ್ಲಾದ ಹೋರಾಟ ಹಾಗೂ ಭಾರತದ ಇತರ ಭಾಗಗಳಲ್ಲಿನ ಅತೃಪ್ತಿ ಇದಕ್ಕೆ ಅವಕಾಶ ನೀಡಲಿಲ್ಲ. ಪರಿಣಾಮವಾಗಿ ಸಂವಿಧಾನ ತಿದ್ದುಪಡಿ ಮಾಡಿ ಇಂಗ್ಲಿಷ್ ಅನ್ನು ‘ಸಹ ಅಧಿಕೃತ ಭಾಷೆ’ಯಾಗಿ ಈಗಲೂ ಮುಂದುವರಿಸಲಾಗಿದೆ. ಇದರಿಂದಾಗಿ ಕ್ರಮೇಣ ಇಂಗ್ಲಿಷ್ ಭಾರತದಲ್ಲಿ ಪ್ರಮುಖ ಸ್ಥಾನ ಗಳಿಸಿಕೊಳ್ಳತೊಡಗಿತು.
ರಾಷ್ಟ್ರದ ಅಧಿಕೃತ ಭಾಷೆಯಾಗಿದ್ದು ಸರ್ಕಾರದ ಆಡಳಿತ, ನ್ಯಾಯಾಲಯಗಳು, ಮಾಧ್ಯಮ, ಶಿಕ್ಷಣ, ಉದ್ಯಮ ಕ್ಷೇತ್ರಗಳಲ್ಲಿ ಬಳಕೆಯಾಗುತ್ತಿದ್ದರೆ ಅದನ್ನು ಎರಡನೇ ಭಾಷೆ ಎನ್ನಬಹುದು. ಈ ಪ್ರಕಾರ, ಭಾರತ, ಘಾನಾ, ನೈಜೀರಿಯಾ ಹಾಗೂ ಸಿಂಗಪುರಗಳಲ್ಲಿ ಇಂಗ್ಲಿಷ್ ಎರಡನೇ ಭಾಷೆಯಾಗಿದೆ. ಈ ಪಟ್ಟಿ ಹೆಚ್ಚಾಗುತ್ತಲೇ ಇದೆ. 1996ರಲ್ಲಿ ರ್್್್ವಾಂಡಾ, ಇಂಗ್ಲಿಷ್ಗೆ ಅಧಿಕೃತ ಸ್ಥಾನಮಾನ ನೀಡಿದೆ.
ಭಾರತದ 1986ರ ಶಿಕ್ಷಣ ಕುರಿತಾದ ರಾಷ್ಟ್ರೀಯ ನೀತಿ ಹಾಗೂ ಕ್ರಿಯಾ ಯೋಜನೆ, ಮಾತೃಭಾಷೆಯಲ್ಲಿ ಶಿಕ್ಷಣದ ಮಹತ್ವವನ್ನೇನೊ ಗುರುತಿಸಿದೆ. ಆದರೆ ಭಾರತೀಯ ವಿದ್ಯಾರ್ಥಿಗಳನ್ನು ಜಾಗತಿಕವಾಗಿ ಸ್ಪರ್ಧಾತ್ಮಕವಾಗಿಸಲು ಇಂಗ್ಲಿಷ್ಅನ್ನು ಉತ್ತಮವಾಗಿ ಕಲಿಸಬೇಕೆಂಬ ಶಿಫಾರಸನ್ನೂ ಮಾಡಿದೆ.
ಇಂಗ್ಲಿಷ್ ಗೊತ್ತಿದ್ದವರನ್ನು ‘ಮೆಕಾಲೆ ಮಕ್ಕಳು’ ಎಂದು ಟೀಕಿಸುತ್ತಾ ‘ಅಂಗ್ರೇಜಿ ಹಟಾವೊ’ ಎಂಬಂತಹ ಕಾಲ ಈಗ ಇಲ್ಲ. ಏಕ ಸಂಸ್ಕೃತಿ, ಏಕ ಭಾಷೆ ಎಂಬುದಕ್ಕೆ ಬದಲಾಗಿ ಏಕ ಸಂಸ್ಕೃತಿ ಬಹು ಭಾಷೆ ಎಂಬಂತಹ ಪರಿಕಲ್ಪನೆಗಳು ಮೊಳಕೆಯೊಡೆಯುತ್ತಿವೆ. ಆರ್.ಕೆ. ನಾರಾಯಣ್. ಮುಲ್ಕ್ ರಾಜ್ ಆನಂದ್, ಹಾಸನ ರಾಜಾರಾವ್ ಅವರಂತಹ ಭಾರತೀಯ ಲೇಖಕರು ಹಾಗೂ ನೈಜೀರಿಯಾದ ಚಿನುವಾ ಅಚಿಬೆ ಸೇರಿದಂತೆ ವಿಶ್ವದ ಅನೇಕ ಲೇಖಕರು ಪಶ್ಚಿಮದ ಸಂಸ್ಕೃತಿಗಿಂತ ಭಿನ್ನವಾದ ಸಾಮಾಜಿಕ, ಸಾಂಸ್ಕೃತಿಕ ಲೋಕಗಳನ್ನು ತೆರೆದಿಡಲು ಇಂಗ್ಲಿಷ್ ಭಾಷೆಯನ್ನು ಪರಿಣಾಮಕಾರಿಯಾಗಿ ಬಳಸಿದ್ದಾರೆ. ಆಧುನೀಕರಣ ಹಾಗೂ ಇಂಗ್ಲಿಷ್ ಕಲಿಕೆ ಎಂಬುದು ಪಾಶ್ಚಮಾತ್ಯೀಕರಣವಲ್ಲ.
ಇಂಗ್ಲಿಷ್ ಕಲಿಕೆಯ ಮೂಲಕ ಅಸ್ಮಿತೆಯನ್ನು ಕಳೆದುಕೊಳ್ಳಬೇಕಿಲ್ಲ ಎಂಬ ಚಿಂತನೆಗಳು ಪ್ರಾಧಾನ್ಯ ಪಡೆಯುತ್ತಿವೆ. ಇಂಗ್ಲಿಷ್ ಹಾಗೂ ಭಾರತೀಯ ಭಾಷೆಗಳ ಮಧ್ಯದ ಕೊಡುಕೊಳ್ಳುವಿಕೆ ಎಷ್ಟರ ಮಟ್ಟಿಗೆ ಇದೆ ಎಂದರೆ ಇಂಗ್ಲಿಷ್ ಶಬ್ದಕೋಶಗಳಲ್ಲಿ ಸಾವಿರಾರು ಭಾರತೀಯ ಪದಗಳು ಇಂದು ಸೇರ್ಪಡೆಯಾಗಿವೆ. ಹಾಗೆಯೇ ಭಾರತೀಯ ಭಾಷೆಗಳಲ್ಲೂ ಇಂಗ್ಲಿಷ್ ಪದಗಳು ಸೇರ್ಪಡೆಯಾಗಿವೆ. ಆದರೆ ಅಗತ್ಯ ಇಲ್ಲದ ಸನ್ನಿವೇಶಗಳಲ್ಲೂ ಇಂಗ್ಲಿಷ್ ಭಾಷೆಯನ್ನು ಫ್ಯಾಷನ್ ಆಗಿ ಬಳಸುತ್ತಾ, ಭಾರತೀಯ ಭಾಷೆಗಳ ಜೊತೆ ಇಂಗ್ಲಿಷ್ ಬೆರೆಸುತ್ತಾ ಭಾಷೆಗಳ ಸತ್ವ ಕಳೆಗುಂದಿಸುವ ಬೆಳವಣಿಗೆಗಳನ್ನೂ ಕಾಣುತ್ತಿದ್ದೇವೆ.
ಈ ಪ್ರಕ್ರಿಯೆಯಲ್ಲಿ ಕನ್ನಡ, ಇಂಗ್ಲಿಷ್ ಬೆರೆತು ‘ಕಂಗ್ಲಿಷ್’ ಬೆಳವಣಿಗೆಯಾಗುತ್ತಿರುವುದನ್ನು ಕಾಣಬಹುದು. ಭಾಷೆಯ ಅಸ್ಮಿತೆಯನ್ನು ಬುಡಮೇಲಾಗಿಸುತ್ತಿರುವ ಈ ಪ್ರಕ್ರಿಯೆಗಳ ಜೊತೆಗೆ ಭಾರತದ ಸಣ್ಣ ಊರುಗಳು, ಹಳ್ಳಿಗಳಲ್ಲಿನ ಬಹುಸಂಖ್ಯಾತ ಜನರು ಇಂಗ್ಲಿಷ್ ಕಲಿತ ಮಂದಿಯೊಂದಿಗೆ ಸ್ಪರ್ಧಿಸಲಾಗದೆ ಅಂಚಿಗೆ ಸರಿದುಹೋಗುತ್ತಿರುವ ವಿದ್ಯಮಾನಗಳನ್ನು ಕಡೆಗಣಿಸುವುದಾದರೂ ಹೇಗೆ?
ಚಾರಿತ್ರಿಕವಾಗಿ ಭಾರತ ಬಹುಭಾಷೆಗಳ ನಾಡು. ಯಾವಾಗಲೂ ಯಾವುದೇ ಭಾಷೆ ಇಲ್ಲಿ ಪ್ರಾಬಲ್ಯ ಹೊಂದಿರಲಿಲ್ಲ. ಆದರೆ ಬ್ರಿಟಿಷ್ ಆಳ್ವಿಕೆಯ ನಂತರ ಇಂಗ್ಲಿಷ್ ಪ್ರಬಲ ಭಾಷೆಯಾಗಿ ಬೆಳೆದದ್ದಲ್ಲದೆ ಭಾರತೀಯ ಸಮಾಜದಲ್ಲಿ ಅಸಮಾನತೆಗಳ ಬೆಳವಣಿಗೆಗೂ ಕಾರಣವಾದದ್ದು ಇತಿಹಾಸ. ವಾಸ್ತವವಾಗಿ ನಮ್ಮದಾಗಿಸಿಕೊಂಡಿರುವ ವಿದೇಶಿ ಭಾಷೆ ಇಂಗ್ಲಿಷ್ ಪ್ರಾಬಲ್ಯವನ್ನು ಮೆರೆಸುವ ಭರದಲ್ಲಿ ಪ್ರಾದೇಶಿಕ ಭಾಷೆಗಳನ್ನು ‘ವರ್ನ್ಯಾಕ್ಯುಲರ್ ’ ಎಂದು ಕೀಳಾಗಿ ಕರೆಯುವ ಪ್ರವೃತ್ತಿ ಭಾರತದ್ದೇ ವಿಶೇಷತೆ ಇರಬೇಕು. ‘
ವರ್ನ್ಯಾಕ್ಯುಲರ್’ ಎಂದರೆ ಒಂದು ಪ್ರದೇಶಕ್ಕೆ ಸೀಮಿತವಾದ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಪರಂಪರೆ ಇಲ್ಲದ ಆಡುಭಾಷೆ. ಇಂತಹ ಎಲ್ಲಾ ನಿರ್ಲಕ್ಷ್ಯ ದ ಧೋರಣೆಗಳನ್ನು ಮೆಟ್ಟಿ ನಿಲ್ಲಲು ಸ್ಥಳೀಯ ಭಾಷೆಗಳನ್ನು ಅಭಿವೃದ್ಧಿ ಪಡಿಸುವ ನೀತಿಗಳನ್ನು ಜಾರಿಗೊಳಿಸುವುದು ಸರ್ಕಾರಗಳ ಕರ್ತವ್ಯ. ಅದು ರಾಷ್ಟ್ರದ ಆರ್ಥಿಕ ಪ್ರಗತಿಗೂ ಪೂರಕ. ಇದಕ್ಕೆ ನಮ್ಮ ನಡುವೆ ಇರುವ ಸ್ಯಾಮ್ ಸಂಗ್, ಎಲ್.ಜಿಯಂತಹ ದಕ್ಷಿಣ ಕೊರಿಯಾ ಕಂಪೆನಿಗಳ ಯಶೋಗಾಥೆಗಳನ್ನು ಉದಾಹರಣೆಗಳಾಗಿ ನೋಡಬಹುದು.
‘ಜಾಗತೀಕರಣ ಎಂಬುದು ಸಂಸ್ಕೃತಿಗಳನ್ನು ಏಕರೂಪಗೊಳಿಸುತ್ತದೆ. ಹಾಗೆಯೇ ತಮ್ಮ ಅನನ್ಯತೆಗಳನ್ನು ದೂರದೂರದವರೆಗೆ ದೊಡ್ಡದಾಗಿ ಹಂಚಿಕೊಳ್ಳಲೂ ವೇದಿಕೆಯಾಗುತ್ತದೆ. ಇದು ಈ ಹಿಂದೆಂದಿಗಿಂತಲೂ ವಿಶ್ವವನ್ನು ತಲುಪುವುದು ನಮಗೆ ಸಾಧ್ಯವಾಗಿಸುತ್ತದೆ. ಹಾಗೆಯೇ ಈ ಹಿಂದೆಂದಿಗಿಂತಲೂ ವಿಶ್ವ ನಮ್ಮನ್ನು ತಲುಪುವುದೂ ಸಾಧ್ಯವಾಗಿಸುತ್ತದೆ’ ಎಂಬುದು ಪುಲಿಟ್ಜರ್ ಪ್ರಶಸ್ತಿ ಪುರಸ್ಕೃತ ಥಾಮಸ್ ಎಲ್ ಫ್ರೀಡ್ ಮನ್ ಅವರ ಮಾತುಗಳು. ಜಾಗತೀಕರಣ ಪ್ರಕ್ರಿಯೆಯ ದ್ವಂದ್ವವನ್ನು ಸ್ಪಷ್ಟವಾಗಿ ಈ ಮಾತುಗಳು ಹಿಡಿದಿರಿಸುತ್ತದೆ.
ಜಾಗತೀಕರಣವನ್ನು ಅವಕಾಶವಾಗಿ ಬಳಸುವುದಕ್ಕೆ ಸರ್ಕಾರಗಳು ನೀತಿಗಳನ್ನು ರೂಪಿಸಬೇಕು. ಇದು ಜಾಗತಿಕ ಸಂಪರ್ಕ ಜಾಲಕ್ಕೆ ಸ್ಥಳೀಯ ಭಾಷೆಗಳನ್ನು ತರಲು ಅವಕಾಶ ವಾಗಬೇಕು. ವಾಣಿಜ್ಯ, ಶಿಕ್ಷಣ ಹಾಗೂ ಸಮೂಹ ಮಾಧ್ಯಮಗಳಲ್ಲಿ ಸ್ಥಳೀಯ ಭಾಷೆಗಳ ಬಳಕೆ ಹೆಚ್ಚಿಸುವ ಮೂಲಕ ಸ್ಥಳೀಯ ಭಾಷೆಗಳನ್ನು ಉಳಿಸಲು ಬದ್ಧವಾಗಬೇಕು.
ತ್ವರಿತ ಗತಿಯಲ್ಲಿ ಇಂದು ತಂತ್ರಜ್ಞಾನದಲ್ಲಿ ಪ್ರಗತಿಯಾಗುತ್ತಿದೆ. ಹೀಗಾಗಿ ಬ್ಲಾಗ್ ಬರೆಯುವವರು, ಟ್ವೀಟ್ ಮಾಡುವವರು ಅಥವಾ ಸಾಮಾಜಿಕ ಮಾಧ್ಯಮ ತಾಣಗಳಲ್ಲಿ ವಿಷಯಗಳನ್ನು ಹಂಚಿಕೊಳ್ಳುವವರು ಸ್ಥಳೀಯ ಭಾಷೆ-ಗಳನ್ನು ಬಳಸುವುದು ಹೆಚ್ಚುತ್ತಿದೆ. ಸ್ಥಳೀಯ ಭಾಷೆಗಳ ದೇಸಿ ಜ್ಞಾನ ಸಂಪತ್ತನ್ನು ಉಳಿಸಿ, ಪೋಷಿಸುವುದಲ್ಲದೆ, ಹೊಸ ಬೆಳವಣಿಗೆಗಳಿಗೂ ಅವಕಾಶ ಮಾಡಿಕೊಡುವ ನೀತಿಗಳ ರಚನೆಯಾಗಬೇಕು.
ಭಾಷೆಗಳ ಅಭಿವೃದ್ಧಿಯೊಂದಿಗೆ ಒಕ್ಕೂಟ ವ್ಯವಸ್ಥೆಯಲ್ಲಿ ರಾಷ್ಟ್ರದ ಪ್ರಗತಿಗೂ ಇದು ಪೂರಕವಾಗಬೇಕು. ಈ ನಿಟ್ಟಿನಲ್ಲಿ ಭಾಷಾ ವೈವಿಧ್ಯವನ್ನು ಎತ್ತಿ ಹಿಡಿದಿರುವ 24 ಅಧಿಕೃತ ಭಾಷೆಗಳನ್ನು ಹೊಂದಿರುವ ಯೂರೋಪಿಯನ್ ಒಕ್ಕೂಟದ ಸದ್ಯದ ಭಾಷಾ ನೀತಿ ನಮಗೆ ಮಾದರಿಯಾಗಬೇಕು.
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.