ಭಾನುವಾರ, ಡಿಸೆಂಬರ್ 15, 2019
20 °C

ಬಹೂಪಯೋಗಿ ಮುದ್ರಕ, ಕಾಪಿಯರ್ ಮತ್ತು ಸ್ಕ್ಯಾನರ್

ಯು.ಬಿ. ಪವನಜ Updated:

ಅಕ್ಷರ ಗಾತ್ರ : | |

ಬಹೂಪಯೋಗಿ ಮುದ್ರಕ, ಕಾಪಿಯರ್ ಮತ್ತು ಸ್ಕ್ಯಾನರ್

ಗಣಕ ಬಳಸಿ ಮುದ್ರಿಸಲು ಅನುವು ಮಾಡಿಕೊಡುವ ಮುದ್ರಕಗಳಲ್ಲಿ ಮೂರು ಪ್ರಮುಖ ನಮೂನೆಗಳು - ಅತಿ ಕಡಿಮೆ ಗುಣಮಟ್ಟ ಮತ್ತು ದೊಡ್ಡ ಮಟ್ಟದ ಮುದ್ರಣಕ್ಕೆ ಡಾಟ್‌ಮ್ಯಾಟ್ರಿಕ್ಸ್ ಮುದ್ರಕ, ಮನೆಗಳಲ್ಲಿ ಮತ್ತು ಆಫೀಸುಗಳಲ್ಲಿ ಅತಿ ಕಡಿಮೆ ಖರ್ಚಿನಲ್ಲಿ ಮತ್ತು ಮಧ್ಯಮ ಗುಣಮಟ್ಟದಲ್ಲಿ ಮುದ್ರಿಸಲು ಇಂಕ್‌ಜೆಟ್ ಮುದ್ರಕ ಹಾಗೂ ಉತ್ತಮ ಗುಣಮಟ್ಟದ ಮುದ್ರಣಕ್ಕೆ ಲೇಸರ್ ಮುದ್ರಕ. ಇವಲ್ಲದೆ ಇನ್ನೂ ಒಂದು ನಮೂನೆ ಇದೆ. ಅದು ಬಹೂಪಯೋಗಿಗಳು. ಇವುಗಳಲ್ಲಿ ಸ್ಕ್ಯಾನರ್, ಕಾಪಿಯರ್ ಮತ್ತು ಮುದ್ರಕ ಎಲ್ಲ ಒಂದರಲ್ಲೇ ಇರುತ್ತವೆ. ಇಂತಹವುಗಳಲ್ಲಿ ಹೆಚ್ಚಿನವು ಇಂಕ್‌ಜೆಟ್ ಮುದ್ರಕಗಳಾಗಿರುತ್ತವೆ. ಅಂತಹ ಒಂದು ಬಹೂಪಯೋಗಿ ಸಾಧನ ಎಪ್ಸನ್ ಕಂಪೆನಿಯ ಎಲ್ 485 (Epson L485 Wi-Fi All-in-One Ink Tank Printer). ಇದು ನಮ್ಮ ಈ ವಾರದ ಗ್ಯಾಜೆಟ್.

ಗುಣವೈಶಿಷ್ಟ್ಯಗಳು

ಸ್ಕ್ಯಾನರ್, ಕಾಪಿಯರ್ ಮತ್ತು ಇಂಕ್‌ಜೆಟ್ ಮುದ್ರಕ, ಬಣ್ಣ ಮತ್ತು ಕಪ್ಪು ಬಿಳುಪು ಮುದ್ರಣ, 5,760 x 1,440 dpi ಮುದ್ರಣದ ರೆಸೊಲೂಶನ್, 1.44 ಇಂಚು ಗಾತ್ರದ ಎಲ್‌ಸಿಡಿ ಪರದೆ, ನಿಮಿಷಕ್ಕೆ 10 ಪುಟ ತನಕ ಮುದ್ರಣ ವೇಗ, ಫ್ಲಾಟ್‌ಬೆಡ್ ಸ್ಕ್ಯಾನರ್, 1,200 x 2,400 dpi ಸ್ಕ್ಯಾನರ್‌ನ ರೆಸೊಲೂಶನ್, ಎ4 ಗಾತ್ರದ ಪುಟವನ್ನು ಸ್ಕ್ಯಾನ್ ಮಾಡಬಹುದು, ಯುಎಸ್‌ಬಿ ಮತ್ತು ವೈಫೈ ಸಂಪರ್ಕ, 100ರ ತನಕ ಕಾಗದ ಇಡಬಹುದು, ಮೆಮೊರಿ ಕಾರ್ಡ್ ಹಾಕಬಹುದು, 482 x 300 x 145 ಮಿ.ಮೀ. ಗಾತ್ರ, 4.5 ಕಿ.ಗ್ರಾಂ. ತೂಕ, ಇತ್ಯಾದಿ. ನಿಗದಿತ ಬೆಲೆ ₹16,099.

ಮೊದಲನೆಯದಾಗಿ ಮುದ್ರಕವಾಗಿ ಇದನ್ನು ಗಮನಿಸೋಣ. ಈಗಾಗಲೇ ಹೇಳಿದಂತೆ ಇದು ಬಣ್ಣದ ಇಂಕ್‌ಜೆಟ್ ಮುದ್ರಕ. ಅತಿ ಹೆಚ್ಚಿನ ಅಂದರೆ ಪ್ರತಿ ಇಂಚಿಗೆ 5,760 x 1,440 ಚುಕ್ಕಿಗಳ (DPI = dots per inch) ರೆಸೊಲೂಶನ್. ನಿಮಿಷಕ್ಕೆ ಅಂದಾಜು 10 ಪ್ರತಿ ಮುದ್ರಣ ವೇಗ. ಇದು ಬಣ್ಣ ಹಾಗೂ ಕಪ್ಪು ಬಿಳುಪು ಮುದ್ರಕ. ಇಂಕ್‌ಜೆಟ್ ಮುದ್ರಕ ಎಂಬುದುನ್ನು ಮನಸ್ಸಿನಲ್ಲಿಟ್ಟುಕೊಂಡು ಗಮನಿಸಿದಾಗ ಮುದ್ರಣದ ವೇಗ ಚೆನ್ನಾಗಿದೆ.

ಮುದ್ರಿಸಿದ ಕಾಗದದ ಮೇಲೆ ಸ್ವಲ್ಪ ನೀರು ಚೆಲ್ಲಿ ನೋಡಿದೆ. ಶಾಯಿ ಹರಡಿತು. ಮುದ್ರಕದಿಂದ ಹೊರಬರುತ್ತಿದ್ದಂತೆ ಕಾಗದವನ್ನು ಮುಟ್ಟಿದರೆ ಶಾಯಿ ಹರಡಲಿಲ್ಲ. ಅಂದರೆ ಶಾಯಿ ಕಾಗದ ಹೊರಬರುತ್ತಿದ್ದಂತೆ ಒಣಗಿ ಹೋಗಿದೆ ಎಂದು ಅರ್ಥ. ಪಠ್ಯ, ಚಿತ್ರ, ಫೋಟೊ ಎಲ್ಲ ಮುದ್ರಿಸಿ ನೋಡಿದೆ. ಕಪ್ಪು ಬಿಳುಪು ಮುದ್ರಣ ಚೆನ್ನಾಗಿದೆ. ಬಣ್ಣದ ಗ್ರಾಫಿಕ್ಸ್ (vector art work) ಮುದ್ರಣ ಚೆನ್ನಾಗಿದೆ. ಆದರೆ ಬಣ್ಣದ ಫೋಟೊ ಮುದ್ರಣ ತೃಪ್ತಿದಾಯಕವಾಗಿಲ್ಲ. ಇಂಕ್‌ಜೆಟ್ ಮುದ್ರಕ ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಂಡರೆ ಇದಕ್ಕೆ ಪಾಸು ಮಾರ್ಕು ನೀಡಬಹುದು.

ಇದರ ಎರಡನೆಯ ಉಪಯೋಗ ಸ್ಕ್ಯಾನರ್ ಆಗಿ. ನಿಮ್ಮಲ್ಲಿ ಹಳೆಯ ಫೋಟೊಗಳಿದ್ದಲ್ಲಿ ಅವುಗಳನ್ನು ಸ್ಕ್ಯಾನ್ ಮಾಡಿ ಗಣಕಕ್ಕೆ ವರ್ಗಾಯಿಸಲು, ಇಮೇಲ್ ಮೂಲಕ ಕಳುಹಿಸಲು, ಫೇಸ್‌ಬುಕ್‌ಗೆ ಏರಿಸಲು ಇದನ್ನು ಬಳಸಬಹುದು. ಸ್ಕ್ಯಾನರ್ ಆಗಿ ಇದರ ರೆಸೊಲೂಶನ್ ಪ್ರತಿ ಇಂಚಿಗೆ 1200 x 2400 ಚುಕ್ಕಿ. ಅಂದರೆ ಒಂದು ಮೇಲ್ಮಟ್ಟದ ಸ್ಕ್ಯಾನರ್‌ನ ಗುಣಮಟ್ಟ ಇದೆ ಎಂದು ತೀರ್ಮಾನಿಸಬಹುದು.

ಇದು ಹೆಚ್ಚು ಅಂದರೆ ಎ4 ಗಾತ್ರದ ಹಾಳೆಯನ್ನು ಸ್ಕ್ಯಾನ್ ಮಾಡಬಲ್ಲುದು. ಇದು ಬಣ್ಣದಲ್ಲೂ ಸ್ಕ್ಯಾನ್ ಮಾಡಬಲ್ಲುದು. ಸ್ಕ್ಯಾನರ್ ಆಗಿ ಇದರ ಗುಣಮಟ್ಟ ತುಂಬ ಚೆನ್ನಾಗಿದೆ. ಎಲ್ಲ ಬಣ್ಣಗಳನ್ನು ಸರಿಯಾಗಿ ಗುರುತಿಸಿತು. ಮೂಲ ಫೋಟೊ ಮತ್ತು ಸ್ಕ್ಯಾನ್ ಮಾಡಿದ ಚಿತ್ರದಲ್ಲಿ ಯಾವ ಗಣನೀಯ ವ್ಯತ್ಯಾಸ ಕಂಡುಬರಲಿಲ್ಲ. ಹಳೆಯ ಪುಸ್ತಕ ಅಥವಾ ದಾಖಲೆಗಳನ್ನು ಡಿಜಿಟೈಸ್ ಮಾಡಲು ಇದನ್ನು ಬಳಸಬಹುದು.

ಇದರ ಮೂರನೆಯ ಉಪಯೋಗ ಕಾಪಿಯರ್ ಆಗಿ. ಅಂದರೆ ಇದನ್ನು ನೆರಳಚ್ಚು ಯಂತ್ರವಾಗಿ ಬಳಸಬಹುದು. ಕಾಪಿಯರ್ ಆಗಿ ಇದರ ಗುಣಮಟ್ಟ ತೃಪ್ತಿಕರವಾಗಿದೆ. ಕಾಪಿಯರ್ ಕೆಲಸ ಮಾಡಲು ಮೂಲ ದಾಖಲೆಯ ಹಾಳೆಯನ್ನು ಫ್ಲಾಟ್‌ಬೆಡ್ ಸ್ಕ್ಯಾನರ್ ಮೇಲೆ ಇಡಬೇಕು. ಇದು ಕಪ್ಪು ಬಿಳುಪು ಹಾಗೂ ಬಣ್ಣದಲ್ಲಿ ಪ್ರತಿ ಮಾಡುತ್ತದೆ. ಕಾಪಿಯರ್ ಆಗಿಯೂ ಇದಕ್ಕೆ ಪಾಸ್ ಮಾರ್ಕು ನೀಡಬಹುದು.

ಈ ಬಹೂಪಯೋಗಿ ಮುದ್ರಕವನ್ನು ಯುಎಸ್‌ಬಿ ಮೂಲಕ ಗಣಕಕ್ಕೆ ಅಥವಾ ವೈಫೈ ಮೂಲಕ ಗಣಕಜಾಲಕ್ಕೆ ಜೋಡಿಸಬಹುದು. ವೈಫೈ ಸೌಲಭ್ಯ ನೀಡಿರುವುದು ನಿಜಕ್ಕೂ ಉತ್ತಮ. ಇದರ ಮೂಲಕ ಈಗಿನ ಸ್ಮಾರ್ಟ್‌ಫೋನ್‌ಗಳಿಂದಲೂ ನೇರವಾಗಿ ಮುದ್ರಿಸಬಹುದು.

ಈ ಮುದ್ರಕದಲ್ಲಿ ಮೆಮೊರಿ ಕಾರ್ಡ್ ಹಾಕಲು ಕಿಂಡಿ ಇದೆ. ಇದರಲ್ಲಿ ಎಸ್‌ಡಿ ಕಾರ್ಡ್ ಹಾಕಬಹುದು. ನಂತರ ಮುದ್ರಕದ ಎಲ್‌ಸಿಡಿ ಪರದೆಯಲ್ಲಿ ನೋಡಿಕೊಂಡು ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿಕೊಂಡು ಮುದ್ರಿಸಬಹುದು. ಇದರ ಶಾಯಿ ತೊಟ್ಟಿ (ಇಂಕ್ ಟ್ಯಾಂಕ್) ಮುದ್ರಕದ ಹೊರಗೆ ಪ್ರತ್ಯೇಕವಾಗಿ ಜೋಡಣೆಯಾಗಿದೆ. ಅದು ಸ್ವಲ್ಪ ನಾಜೂಕಾಗಿದೆ.

ಮುದ್ರಕವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಜರುಗಿಸುವಾಗ ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕು. ಇಲ್ಲದಿದ್ದಲ್ಲಿ ಈ ಶಾಯಿ ತೊಟ್ಟಿ ಕಳಚಿಕೊಳ್ಳಬಹುದು. ಹಾಗೆ ನೋಡಿದರೆ ಇಡಿಯ ಮುದ್ರಕವನ್ನೇ ಸ್ವಲ್ಪ ಎಚ್ಚರಿಕೆಯಿಂದ ಬಳಸಬೇಕು. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಹಣಕ್ಕೆ ತೊಂದರೆ ಇಲ್ಲ ಎನ್ನಬಹುದು.

*

ವಾರದ ಆಪ್‌ (app) – ವಾಲ್‌ನಟ್

ನೀವು ಎಟಿಎಂನಿಂದ ಹಣ ತೆಗೆದಿದ್ದೀರಿ. ಆಗ ಒಂದು ಎಸ್‌ಎಂಎಸ್ ಸಂದೇಶ ಬಂದಿರುತ್ತದೆ. ಅಂಗಡಿಯಲ್ಲಿ ಕ್ರೆಡಿಟ್ ಕಾರ್ಡ್ ನೀಡಿ ಸಾಮಾನು ಕೊಂಡಿದ್ದೀರಿ. ಆಗಲೂ ಎಸ್‌ಎಂಎಸ್‌ ಸಂದೇಶ ಬಂದಿರುತ್ತದೆ. ಜೀವವಿಮೆಯ ಕಂತು ಕಟ್ಟಬೇಕು ಎಂದು ಎಸ್‌ಎಂಎಸ್ ಸಂದೇಶ ಬಂದಿದೆ. ಬ್ಯಾಂಕಿನ ಖಾತೆಯಲ್ಲಿ ಹಣ ಜಮಾವಣೆ ಆದರೂ ಸಂದೇಶ ಬಂದಿರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಬಳಸಿ ಪೇಟಿಎಂ, ಓಲಾ, ಉಬರ್, ಭೀಮ್ ಇತ್ಯಾದಿ ಬಳಸಿ ಖರ್ಚು ಮಾಡಿರುತ್ತೀರಿ.

ನಿಮ್ಮ ಫೋನಿನಲ್ಲಿರುವ ಎಸ್‌ಎಂಎಸ್, ಇಮೈಲ್ ಮತ್ತು ಇತರೆ ಕಿರುತಂತ್ರಾಂಶಗಳನ್ನು ವಿಶ್ಲೇಷಿಸಿ ನೀವು ದಿನಕ್ಕೆ, ವಾರಕ್ಕೆ, ತಿಂಗಳಿಗೆ, ವರ್ಷಕ್ಕೆ ಎಷ್ಟು ಖರ್ಚು ಮಾಡಿದ್ದೀರಿ, ಅದರಲ್ಲಿ ಪ್ರಯಾಣಕ್ಕೆ ಎಷ್ಟು, ಆಹಾರಕ್ಕೆ ಎಷ್ಟು, ಇತ್ಯಾದಿ ಎಲ್ಲ ವಿವರಗಳನ್ನು ನೀಡುವ ಒಂದು ಉತ್ತಮ ಕಿರುತಂತ್ರಾಂಶ ಬೇಕಿದ್ದಲ್ಲಿ ಗೂಗಲ್‌ ಪ್ಲೇ ಸ್ಟೋರಿಗೆ ಭೇಟಿ ನೀಡಿ Walnut All Banks Money Manager ಎಂದು ಹುಡುಕಿ ಅಥವಾ bit.ly/gadgetloka286 ಜಾಲತಾಣಕ್ಕೆ ಭೇಟಿ ನೀಡಿ.

*

ಗ್ಯಾಜೆಟ್ ಸುದ್ದಿ– ಜಿಲೇಬಿ ತಯಾರಿಸುವ ಯಂತ್ರ

ಜಿಲೇಬಿ ಪ್ರಿಯರಿಗೆ ಸಿಹಿ ಸುದ್ದಿ. ಅದರಲ್ಲೂ ಅಡುಗೆ ಗುತ್ತಿಗೆದಾರರಿಗೆ, ಹೋಟೆಲು ನಡೆಸುವವರಿಗೆ, ಬೇಕರಿಗಳಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಈಗ ಜಿಲೇಬಿ ತಯಾರಿಸುವ ಯಂತ್ರ ತಯಾರಾಗಿದೆ. ಪಂಜಾಬಿನ ಡಿ.ಎ.ಎಸ್. ಟೆಕ್ನಾಲಜೀಸ್‌ ಎಂಬ ಹೆಸರಿನ ಕಂಪೆನಿ ಸ್ವಯಂಚಾಲಿತವಾಗಿ ಜಿಲೇಬಿ ಹೊಯ್ಯುವ ಯಂತ್ರ ವಿನ್ಯಾಸ ಮಾಡಿದೆ. ಇದು ಹಲವು ಆಕಾರ, ವಿನ್ಯಾಸಗಳಲ್ಲಿ ಜಿಲೇಬಿ ತಯಾರಿಸಬಲ್ಲುದು. ಹಾಗೆಯೇ ನಿಮ್ಮ ಅಥವಾ ನಿಮಗಿಷ್ಟವಾದವರ ಹೆಸರಿನ ಅಕ್ಷರಗಳ ರೂಪದಲ್ಲೂ ಜಿಲೇಬಿ ತಯಾರಿಸಬಲ್ಲುದು. ಅಂದ ಹಾಗೆ ಇದು ಅಪ್ಪಟ ಭಾರತೀಯ ಅನ್ವೇಷಣೆ.

*

ಗ್ಯಾಜೆಟ್ ಸಲಹೆ – ಸೋಮಲಿಂಗ ಅವರ ಪ್ರಶ್ನೆ: Sunsui ಯಾವ ದೇಶದ ಕಂಪನಿ?

ಉ: ಅದು ಜಪಾನ್ ದೇಶದಲ್ಲಿ 1947ರಲ್ಲಿ ಪ್ರಾರಂಭವಾದ ಕಂಪೆನಿ. ಭಾರತದಲ್ಲಿ 1997ರಿಂದ ಅಸ್ತಿತ್ವದಲ್ಲಿದೆ.

*

ಗ್ಯಾಜೆಟ್ ತರ್ಲೆ 

ಸಂತೆಯೊಳಗೊಂದು ಮನೆಯ ಮಾಡಿ

ಶಬ್ದಗಳಿಗಂಜಿದೊಡೆಂತಯ್ಯ?

ಫೇಸ್‌ಬುಕ್‌ನಲ್ಲಿ ಪೋಸ್ಟ್‌ಮಾಡಿ

ಕಮೆಂಟುಗಳಿಗಂಜಿದೊಡೆಂತಯ್ಯ?

ಪ್ರತಿಕ್ರಿಯಿಸಿ (+)