ಬಾಯಾರಿದೆ ಕೇಂದ್ರೀಯ ವಿವಿ, ನೀರು ಕೊಡಿ!

7

ಬಾಯಾರಿದೆ ಕೇಂದ್ರೀಯ ವಿವಿ, ನೀರು ಕೊಡಿ!

Published:
Updated:
ಬಾಯಾರಿದೆ ಕೇಂದ್ರೀಯ ವಿವಿ, ನೀರು ಕೊಡಿ!

ಕೇಂದ್ರ ಉನ್ನತ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ವಿನಯಶೀಲ ಒಬೆರಾಯ್‌ ಈಚೆಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ ಅವರಿಗೆ ಬರೆದ ಪತ್ರದ ಸಾರಾಂಶ ಹೀಗಿದೆ:ರಾಜ್ಯ ಸರ್ಕಾರ ತನ್ನ ‘ಒಪ್ಪಂದ’ದಂತೆ ಕಲಬುರ್ಗಿ ಸಮೀಪದ ಕಡಗಂಚಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ನೀರಿನ ಸಮಸ್ಯೆಯನ್ನು ಪರಿಹರಿಸಲು ಶಾಶ್ವತ ಯೋಜನೆ ರೂಪಿಸಬೇಕಿತ್ತು. ಆದರೆ ಅದು ವಿಳಂಬವಾಗಿದೆ. ಸದ್ಯಕ್ಕೆ ಆಸರೆಯಾಗಿರುವ ಅಮರ್ಜಾ ಜಲಾಶಯದಲ್ಲಿ ನೀರಿನ ಕೊರತೆ ಇದೆ. ಡಿಸೆಂಬರ್‌ ಮಧ್ಯಭಾಗದಿಂದ ನೀರಿನ ಸಮಸ್ಯೆ ತೀವ್ರವಾಗಿ ಬಾಧಿಸುವ ಸಾಧ್ಯತೆ ಇದೆ. ಇದರಿಂದಾಗಿ ವಿಶ್ವವಿದ್ಯಾಲಯದ ಶೈಕ್ಷಣಿಕ ಚಟುವಟಿಕೆಗಳನ್ನು ‘ಸ್ಥಗಿತ’ಗೊಳಿಸಬೇಕಾದ ಅನಿವಾರ್ಯತೆ ಎದುರಾಗಬಹುದು. ಈ ಪತ್ರವನ್ನು ನೋಡಿದ ರಾಜ್ಯ ಸರ್ಕಾರ ಆತಂಕಕ್ಕೆ ಒಳಗಾಗಬೇಕಿತ್ತು. ಏಕೆಂದರೆ ನೀರಿನ ಸಮಸ್ಯೆಯಿಂದಾಗಿ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದು ಶೈಕ್ಷಣಿಕ ಚಟುವಟಿಕೆಯನ್ನು ‘ಸ್ಥಗಿತ’ಗೊಳಿಸುವುದು ರಾಜ್ಯಕ್ಕೆ ಆಗುವ ಅವಮಾನ. ಆದರೆ ರಾಜ್ಯ ಸರ್ಕಾರ ಇನ್ನೂ ಪತ್ರ ವ್ಯವಹಾರದಲ್ಲೇ ತಲ್ಲೀನವಾಗಿದೆ.ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ಹನ್ನೆರಡು ಕಿಲೋಮೀಟರ್‌ ದೂರದಲ್ಲಿರುವ ಅಮರ್ಜಾ ಜಲಾಶಯದಿಂದ ನೀರು ಪೂರೈಸಲಾಗುತ್ತದೆ. ಇದೇ ಜಲಾಶಯದಿಂದ ಆಳಂದ ಪಟ್ಟಣ ಮತ್ತು ವಿಶ್ವವಿದ್ಯಾಲಯ ಸಮೀಪ ಇರುವ ಒಂಬತ್ತು ಗ್ರಾಮಗಳಿಗೂ ನೀರು ಪೂರೈಸಲಾಗುತ್ತದೆ. ಮಳೆ ಇಲ್ಲದ ಕಾರಣ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿದೆ. ಮುಂದಿನ ದಿನಗಳಲ್ಲಿ ಇಲ್ಲಿಂದ ನೀರು ಪೂರೈಸುವುದು ಕಷ್ಟವಾಗುತ್ತದೆ.ವಿಶ್ವವಿದ್ಯಾಲಯದಲ್ಲಿ ಒಂದೂವರೆ ಸಾವಿರದಷ್ಟು ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಏಳುನೂರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಹಾಸ್ಟೆಲ್‌ ವಾಸಿಗಳು. ಬೋಧಕರು ಹಾಗೂ ಬೋಧಕೇತರರ ವಸತಿಗೃಹಗಳೂ ಇವೆ. ಇಲ್ಲಿಗೆ ನಿತ್ಯ 12 ಲಕ್ಷ  ಲೀಟರ್‌ ನೀರು ಕೊಡುವ ಸಾಮರ್ಥ್ಯದ ಪೈಪ್‌ಲೈನ್‌ ಅಳವಡಿಸಲಾಗಿದೆ. ಆದರೆ ವಿಶ್ವವಿದ್ಯಾಲಯಕ್ಕೆ ಕೇವಲ 4 ಲಕ್ಷ ಲೀಟರ್‌ ತಲುಪುತ್ತದೆ.ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಇದೀಗ ಆರು ವರ್ಷದ ಕೂಸು. ರಾಜ್ಯದಲ್ಲಿ ಇರುವ ಏಕೈಕ ಕೇಂದ್ರೀಯ ವಿಶ್ವವಿದ್ಯಾಲಯ. ಇದು ಕಲಬುರ್ಗಿ ಜಿಲ್ಲೆ ಆಳಂದ ತಾಲ್ಲೂಕಿನ ಕಡಗಂಚಿ ಬಳಿ 651 ಎಕರೆಯಲ್ಲಿ  ಜೀವ ತಳೆಯುತ್ತಿದೆ. ಇದೇ ಕ್ಯಾಂಪಸ್‌ನಲ್ಲಿ ಹದಿನೈದು ತಿಂಗಳುಗಳಿಂದ ತರಗತಿಗಳು ನಡೆಯುತ್ತಿವೆ. ಇಲ್ಲಿ ಆರಂಭದಿಂದಲೂ ನೀರಿನ ಸಮಸ್ಯೆ ಇದೆ. ಆದರೆ ಈಗ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿದೆ. ಈ ವಿಶ್ವವಿದ್ಯಾಲಯ ಇರುವ ಆಳಂದ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿದೆ. ಸ್ಥಳೀಯರು ಹೇಳುವ ಪ್ರಕಾರ ನಾಲ್ಕು ದಶಕಗಳ ನಂತರ ಭೀಕರ ಬರಗಾಲ ಎದುರಾಗಿದೆ. ಜಾನುವಾರುಗಳಿಗೆ ಕುಡಿಯಲು ನೀರು ಇಲ್ಲದೆ ಗೋಶಾಲೆಗಳನ್ನು ಆಶ್ರಯಿಸಬೇಕಾಗಿದೆ. ದಿನ ಬಳಕೆಗೆ ನೀರು ಸಿಗುವುದು ಕಷ್ಟವೇ ಸರಿ.ಶುರುವಿನಿಂದಲೂ ವಿಶ್ವವಿದ್ಯಾಲಯದ ನೀರಿನ ಸಮಸ್ಯೆ ಕುರಿತು ಕುಲಪತಿಗಳು ರಾಜ್ಯ ಸರ್ಕಾರದ ಗಮನವನ್ನು ಸೆಳೆಯುತ್ತಲೇ ಬಂದಿದ್ದಾರೆ. ಹೀಗಾಗಿ ಒಂದೂವರೆ ವರ್ಷದ ಹಿಂದೆ ಬೆಣ್ಣೆತೊರಾ ಜಲಾಶಯದಿಂದ ನೀರು ಪೂರೈಸುವ ಯೋಜನೆ ಸಿದ್ಧವಾಗಿತ್ತು. ಈ ಯೋಜನೆಗೆ ₹ 25 ಕೋಟಿ ವೆಚ್ಚದ ಅಂದಾಜು ಮಾಡಲಾಗಿತ್ತು. ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ.ಹೆಸರಾಂತ ಆರ್ಥಿಕ ತಜ್ಞ ಡಾ.ಡಿ.ಎಂ. ನಂಜುಂಡಪ್ಪ ಅವರು ತಮ್ಮ ವರದಿಯಲ್ಲಿ ಹಿಂದುಳಿದ ಪ್ರದೇಶವಾದ ಹೈದರಾಬಾದ್‌ ಕರ್ನಾಟಕದ ಕಲಬುರ್ಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕು ಎಂದು ಶಿಫಾರಸು ಮಾಡಿದ್ದರು. ಹೀಗಾಗಿ ಕೇಂದ್ರ ಸರ್ಕಾರ ವಿಶ್ವವಿದ್ಯಾಲಯ ಸ್ಥಾಪಿಸಲು ಆಸಕ್ತಿ ತೋರಿಸಿತು. ಆ ಸಂದರ್ಭದಲ್ಲಿ ಸ್ಥಳ ಪರಿಶೀಲನಾ ಸಮಿತಿಗೆ ರಾಜ್ಯ ಸರ್ಕಾರ ಅಮರ್ಜಾ ಜಲಾಶಯವನ್ನು ತೋರಿಸಿ ನೀರಿಗೆ ತೊಂದರೆ ಇಲ್ಲ ಎಂದು ಮನವರಿಕೆ ಮಾಡಿಕೊಟ್ಟಿತ್ತು. ಈಗ ಪರಿಸ್ಥಿತಿ ಬದಲಾಗಿದೆ.ಕೇಂದ್ರೀಯ ವಿಶ್ವವಿದ್ಯಾಲಯವು ವೈವಿಧ್ಯಮಯ ಕೋರ್ಸ್‌ಗಳಿಂದಾಗಿ ಉಳಿದ ವಿಶ್ವವಿದ್ಯಾಲಯಗಳಿಂತ ವಿಭಿನ್ನ ಎನಿಸಿಕೊಂಡಿದೆ. ಹಿಮಾಚಲ ಪ್ರದೇಶ, ಪಶ್ಚಿಮ ಬಂಗಾಳ, ದೆಹಲಿ, ಬಿಹಾರ, ಆಂಧ್ರಪ್ರದೇಶ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಸೇರಿದಂತೆ ದೇಶದ ಹಲವು ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿ ಕಲಿಯಲು ಬಂದಿದ್ದಾರೆ. ರಾಜ್ಯದ ವಿವಿಧ ಭಾಗದ ಆರುನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ.‘ಮುಂದಿನ ಐದು ವರ್ಷಗಳಲ್ಲಿ ಕ್ಯಾಂಪಸ್‌ನಲ್ಲಿ ಒಂಬತ್ತು ಸಾವಿರ ವಿದ್ಯಾರ್ಥಿಗಳು ಕಲಿಯಲು ಅವಕಾಶ ಮಾಡಿಕೊಡುವ ಗುರಿಯನ್ನು ಹೊಂದಲಾಗಿದೆ. ಆದರೆ ನೀರಿನ ಸಮಸ್ಯೆ ನಮ್ಮ ಉತ್ಸಾಹವನ್ನು ಹಾಳು ಮಾಡುತ್ತಿದೆ’ ಎಂದು ಕುಲಪತಿ ಡಾ.ಎಚ್‌.ಎಂ.ಮಹೇಶ್ವರಯ್ಯ ಬೇಸರ ವ್ಯಕ್ತಪಡಿಸುತ್ತಾರೆ. ಭವಿಷ್ಯದಲ್ಲಿ ನೀರಿನ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದ ಕುಲಪತಿಗಳು ಕ್ಯಾಂಪಸ್‌ನಲ್ಲಿರುವ ತಗ್ಗು ಪ್ರದೇಶವನ್ನು ಬಳಸಿಕೊಂಡು 35 ಎಕರೆಯಷ್ಟು ವಿಸ್ತಾರವಾದ ಕೆರೆಯನ್ನು ನಿರ್ಮಿಸುವ ಬಗ್ಗೆ ಗಂಭೀರವಾಗಿ ಚಿಂತಿಸುತ್ತಿದ್ದಾರೆ. ಇದು ಒಳ್ಳೆಯ ಯೋಚನೆ.‘ಕೇಂದ್ರೀಯ ವಿಶ್ವವಿದ್ಯಾಲಯದ ನೀರಿನ ಸಮಸ್ಯೆ ಬಗೆಹರಿಸಲು ಜಿಲ್ಲಾಡಳಿತ ಸಿದ್ಧವಿದೆ. ಈಗಾಗಲೇ ಅವರಿಗೆ ಎರಡು ನೀರಿನ ಟ್ಯಾಂಕರ್‌ಗಳನ್ನು ಕೊಡಲಾಗಿದೆ. ಅಮರ್ಜಾ ಜಲಾಶಯದಿಂದ ವಿಶ್ವವಿದ್ಯಾಲಯಕ್ಕೆ ಅಗತ್ಯ ಇರುವಷ್ಟು ನೀರು ಲಭ್ಯವಿದೆ’ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ಹೇಳುತ್ತಾರೆ. ವಿಶ್ವವಿದ್ಯಾಲಯವೊಂದು ನೀರಿನ ಕಾರಣಕ್ಕಾಗಿ ಶೈಕ್ಷಣಿಕ ಚಟುವಟಿಕೆಗಳನ್ನು ‘ಸ್ಥಗಿತ’ಗೊಳಿಸುತ್ತದೆ ಎನ್ನುವುದು ಕಲ್ಪನೆಗೆ ನಿಲುಕದ್ದು. ಒಂದು ವೇಳೆ ಹೀಗೆ ಮಾಡಿದರೆ ವಿದ್ಯಾರ್ಥಿಗಳ ಭವಿಷ್ಯ ಮಸುಕಾಗುತ್ತದೆ. ವಿಶ್ವವಿದ್ಯಾಲಯವೆಂದರೆ ಕೇವಲ ಪದವಿಗಳನ್ನು ಕೊಡುವ ಅಥವಾ ಪದವೀಧರರನ್ನು ಸೃಷ್ಟಿಸುವ ಕಾರ್ಖಾನೆಯಲ್ಲ.ವಿಶ್ವವಿದ್ಯಾಲಯವೆಂದರೆ ಜ್ಞಾನ ಕೇಂದ್ರ. ವೈಚಾರಿಕತೆಯನ್ನು ಬಿತ್ತಿ ಬೆಳೆಸುವ ಜಾಗ. ಮಾನವೀಯ ಮೌಲ್ಯ ಮತ್ತು ಸಹನೆಯನ್ನು ಜೀವನಕ್ರಮವಾಗಿಸುವ ತಾಣ. ದೇಶದ ಆರೋಗ್ಯ ಮತ್ತು ಭವಿಷ್ಯವನ್ನು ಸೂಚಿಸುವ ಸ್ಥಳ. ಸಮಾಜದ ಜ್ವಲಂತ ಸಮಸ್ಯೆಗಳಿಗೆ ಪ್ರತಿಕ್ರಿಯಿಸುವ, ವಾಗ್ವಾದ ನಡೆಸುವ, ಸಂವಾದಿಸುವ, ಅಭಿಪ್ರಾಯ ರೂಪಿಸುವ ಆವರಣ. ಚಳವಳಿಗಳ ಗಂಗೋತ್ರಿ. ಹಲವು ಭಾಷೆ ಮತ್ತು ಸಂಸ್ಕೃತಿಗಳ ವಿನಿಮಯ ಬಿಂದು. ಹೀಗಾಗಿ ಸ್ಥಳೀಯರಿಗೆ ವಿಶ್ವವಿದ್ಯಾಲಯ ‘ನಮ್ಮದು’ ಅನಿಸಬೇಕು. ರಾಜ್ಯ ಸರ್ಕಾರಕ್ಕೂ ಅನಿಸಬೇಕು. ಇಲ್ಲದೇ ಹೋದರೆ ಉನ್ನತ ಜ್ಞಾನ ಕೇಂದ್ರವೊಂದು ಬರಡಾಗಿ ಹೋಗುವ ಅಪಾಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry