ಭಾನುವಾರ, ಡಿಸೆಂಬರ್ 15, 2019
19 °C

ಬಿಜೆಪಿಗೆ ಎದುರಾದ ಹೊಸ ಸವಾಲು

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಬಿಜೆಪಿಗೆ ಎದುರಾದ ಹೊಸ ಸವಾಲು

ದೇಶದ ಮತದಾರರಲ್ಲಿ ಶೇ 15ರಷ್ಟಿರುವ ಮುಸ್ಲಿಮರು ಯಾವತ್ತೂ ಬಿಜೆಪಿ ಪರ ಮತ ಹಾಕಿಲ್ಲ ಎನ್ನುವುದು ಯಾರೊಬ್ಬರೂ ನಿರಾಕರಿಸಲಾಗದ ಸಂಗತಿಯಾಗಿದೆ. 1989ರ ನಂತರದ ರಾಜಕೀಯದಲ್ಲಿ ಕಾಂಗ್ರೆಸ್‌, ದೇಶದ ಹೃದಯಭಾಗದಲ್ಲಿನ ತನ್ನ ಪರಂಪರಾಗತ ವೋಟ್‌ ಬ್ಯಾಂಕ್‌ ಕಳೆದುಕೊಂಡರೂ ಮುಸ್ಲಿಮರು, ಯಾದವ್‌, ಇತರೆ ಹಿಂದುಳಿದ ಪ್ರಬಲ ಜಾತಿಗಳು (ಒಬಿಸಿ) ಮತ್ತು ಕೆಲವೊಮ್ಮೆ ಮಾಯಾವತಿ ಅವರನ್ನು ಬೆಂಬಲಿಸಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇರಿಸಿದ್ದರು. ಇಂತಹ ಜಾತಿ ಲೆಕ್ಕಾಚಾರದಿಂದ ಹತಾಶರಾಗಿದ್ದ ಬಿಜೆಪಿ ಮುಖಂಡರು, ‘ಭಾರತವನ್ನು ಯಾರು ಆಳಬೇಕು ಎಂದು ತೀರ್ಮಾನಿಸುವ ವಿಶೇಷ ಅಧಿಕಾರವನ್ನು ಮುಸ್ಲಿಮರು ಹೊಂದಿದ್ದಾರೆ’ ಎಂದು ಹೇಳಿಕೊಂಡು ತಿರುಗುತ್ತಿದ್ದರು.

ನರೇಂದ್ರ ಮೋದಿ ಅವರು 2014ರಲ್ಲಿ ಈ ಲೆಕ್ಕಾಚಾರದ ಸೂತ್ರವನ್ನು ಬದಲಿಸಿದರು. ಜಾತ್ಯತೀತತೆ ನಟನೆಯ ಸಾಂಕೇತಿಕ ಪ್ರದರ್ಶನ ಮತ್ತು ಆಷಾಢಭೂತಿತನವನ್ನು ನಿರುಪಯುಕ್ತಗೊಳಿಸಿದರು. ‘ಮುಸ್ಲಿಮರು ನಮಗೆ ವೋಟ್‌ ಹಾಕದಿದ್ದರೆ ಹಾಗೆ ಮಾಡಲು ಅವರನ್ನು ಬಿಟ್ಟುಬಿಡೋಣ. ಇತರೆಡೆ ಸಾಕಷ್ಟು ವೋಟ್‌ಗಳಿವೆ’ ಎನ್ನುವುದು ಅವರ ವಾದವಾಗಿತ್ತು. ಈ ವಿಷಯದಲ್ಲಿ ಅವರು ಸ್ಪಷ್ಟ ಚಿಂತನೆ ಹೊಂದಿದ್ದರು. ಅಲ್ಪಸಂಖ್ಯಾತರಿಗೆ ವಿಶೇಷ ಅನುಗ್ರಹ ನೀಡಬೇಕಾಗಿಲ್ಲ. ಎಲ್ಲರನ್ನೂ ಒಳಗೊಳ್ಳುವ ‘ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್‌’ ಎನ್ನುವುದು ಅವರು ಅಳವಡಿಸಿಕೊಂಡಿದ್ದ ಧೋರಣೆಯಾಗಿತ್ತು.

ಮುಸ್ಲಿಮರು ವೋಟ್‌ ಹಾಕದಿದ್ದರೂ, ಚುನಾವಣೆಯಲ್ಲಿ ಮೋದಿ ಭರ್ಜರಿ ಗೆಲುವು ಸಾಧಿಸಿದ್ದರು. ಗೆದ್ದ 282 ಸೀಟುಗಳಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದ ಇದ್ದಿರಲಿಲ್ಲ. ಇತರ ರಾಜ್ಯಗಳ ವಿಧಾನಸಭೆ ಚುನಾವಣೆಗಳಲ್ಲೂ ಇದು ಪುನರಾವರ್ತನೆಗೊಂಡಿತು. ಉತ್ತರ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯಾ ಬಾಹುಳ್ಯ ಶೇ 19ರಷ್ಟಿದ್ದರೂ ಒಬ್ಬ ಮುಸ್ಲಿಂ ವ್ಯಕ್ತಿಗೂ ಅವರು ಟಿಕೆಟ್ ನೀಡಿರಲಿಲ್ಲ. ಆದಾಗ್ಯೂ ಒಟ್ಟು ಮತಕ್ಷೇತ್ರಗಳ ಪೈಕಿ ಶೇ 77ರಷ್ಟು ಕಡೆ ಬಿಜೆಪಿ ಗೆಲುವು ಸಾಧಿಸಿತ್ತು. ‘ಭಾರತವನ್ನು ಯಾರು ಆಳಬೇಕು ಎನ್ನುವುದನ್ನು ಮುಸ್ಲಿಮರು ನಿರ್ಧರಿಸುತ್ತಾರೆ’ ಎನ್ನುವುದು ಈ ಸಂದರ್ಭದಲ್ಲಿ ಸಂಪೂರ್ಣವಾಗಿ ಸುಳ್ಳಾಗಿತ್ತು. ‘ನೀವು ನಮಗೆ ವೋಟ್‌ ನೀಡುವುದಿಲ್ಲ. ಹೀಗಾಗಿ ನಿಮ್ಮೊಂದಿಗೆ ಅಧಿಕಾರ ಹಂಚಿಕೊಳ್ಳಬೇಕು ಎನ್ನುವುದನ್ನು ನೀವು ನಮ್ಮಿಂದ ನಿರೀಕ್ಷಿಸಬೇಡಿ’ ಎನ್ನುವುದು ಬಿಜೆಪಿಯ ಧೋರಣೆಯಾಗಿತ್ತು. ಬಿಜೆಪಿ ಸ್ನೇಹಿಯಾದ ಹೊಸ ಮುಸ್ಲಿಂ ರಾಜಕಾರಣಿಗಳನ್ನು ಬೆಳೆಸಲೂ ಅವರು ತಲೆಕೆಡಿಸಿಕೊಳ್ಳಲಿಲ್ಲ.

ಅಲ್ಲಿಯವರೆಗೆ ತಮ್ಮ ಜಾತಿಯ ಮುಖಂಡರಿಗೆ ನಿಷ್ಠರಾಗಿದ್ದ ವಿವಿಧ ಹಿಂದೂ ಸಮುದಾಯಗಳ ಜನರು ಅದರಲ್ಲೂ ಯಾದವಯೇತರ ಇತರ ಹಿಂದುಳಿದ ವರ್ಗಗಳ ಜನರು ಕ್ರಮೇಣ ಬಿಜೆಪಿಯತ್ತ ವಾಲತೊಡಗಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಮಾಯಾವತಿ ಶೂನ್ಯ ಸಾಧನೆ ಮಾಡಿದ್ದರು. ಆನಂತರ ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೇವಲ 19 ಸೀಟುಗಳನ್ನು ಗೆದ್ದಿರುವುದನ್ನು ನೋಡಿದರೆ, ಗಮನಾರ್ಹ ಪ್ರಮಾಣದ ದಲಿತರು ಕೂಡ ಬಿಜೆಪಿಯತ್ತ ಆಕರ್ಷಿತರಾಗಿರುವುದು ಕಂಡು ಬರುತ್ತದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ 19ರಷ್ಟು ಇರುವ ಮುಸ್ಲಿಮರ ವೋಟ್‌ಗಳಿಗೆ ಎರವಾಗಿದ್ದರೂ ಬಿಜೆಪಿ ಗರಿಷ್ಠ ಸಂಖ್ಯೆಯಲ್ಲಿ ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಇದೇ ಕಾರಣ. ಲೋಕಸಭೆಯಲ್ಲಿ ಬಿಜೆಪಿಯ ಒಟ್ಟು 282 ಸಂಸದರ ಪೈಕಿ, ಮೀಸಲು ಕ್ಷೇತ್ರದಿಂದ ಗೆದ್ದು ಬಂದಿರುವ 40 ಮಂದಿ ದಲಿತ ಸಂಸದರು ಇದ್ದಾರೆ.

ಇತ್ತೀಚಿನ ಕೆಲ ತಿಂಗಳುಗಳಿಂದ ದೇಶದಾದ್ಯಂತ ದಲಿತರಲ್ಲಿ ಆಕ್ರೋಶ ಹೆಚ್ಚುತ್ತಿರುವುದು ಕಂಡು ಬರುತ್ತಿದೆ. ರೋಹಿತ್‌ ವೇಮುಲ ಆತ್ಮಹತ್ಯೆ ಮತ್ತು ಊನಾ ಘಟನೆಯಿಂದಲೇ ಇದಕ್ಕೆ ಚಾಲನೆ ಸಿಕ್ಕಿತ್ತು. ತಳಮಟ್ಟದ ರಾಜಕೀಯ ಮತ್ತು ವಿದ್ಯಾರ್ಥಿ ಸಂಘಟನೆಯಿಂದ ದಲಿತ ಮುಖಂಡರು ಹೊರ ಹೊಮ್ಮುತ್ತಿದ್ದಾರೆ. ಭೀಮಾ– ಕೋರೆಗಾಂವ್‌ ಘಟನೆಯಿಂದ ಹಿಡಿದು, ಇತ್ತೀಚೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ವಿರುದ್ಧದ ದೌರ್ಜನ್ಯಗಳ ಬಗ್ಗೆ ಸುಪ್ರೀಂ ಕೋರ್ಟ್‌ನ ಆದೇಶ ವಿರೋಧಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಯು ಬಿಜೆಪಿಯ ಲೆಕ್ಕಾಚಾರ ತಳೆಕೆಳಗು ಮಾಡಲಿದೆ. ಮುಸ್ಲಿಮರನ್ನು ಹೊರತುಪಡಿಸಿದ ಅದರ ರಾಜಕೀಯ ಧೋರಣೆಯನ್ನು ಕ್ಲಿಷ್ಟಕರಗೊಳಿಸಲಿದೆ. ಶೇ 85ರಷ್ಟು ಮತದಾರರನ್ನು ನೆಚ್ಚಿಕೊಂಡೇ ನಾವು ರಾಜಕೀಯ ಮಾಡುತ್ತೇವೆ ಎನ್ನುವ ಧೋರಣೆ ಮೇಲೆ ಈ ಬೆಳವಣಿಗೆಗಳು ವ್ಯತಿರಿಕ್ತ ಪರಿಣಾಮ ಬೀರಲಿವೆ.

ದಲಿತರ ಆಕ್ರೋಶವು ಹೀಗೆಯೇ ಮುಂದುವರೆದರೆ ಬಿಜೆಪಿಯು ನೆಚ್ಚಿಕೊಂಡಿರುವ ಶೇ 85ರಷ್ಟು ಮತದಾರರ ಪ್ರಮಾಣವು ಅಪಾಯಕಾರಿ ಎನ್ನಬಹುದಾದ ಶೇ 70ಕ್ಕೆ ಇಳಿಯಲಿದೆ. ಉತ್ತರ ಪ್ರದೇಶದ ಮೂವರು ಬಿಜೆಪಿ ದಲಿತ ಸಂಸದರು ಬಹಿರಂಗವಾಗಿಯೇ ಈ ಬಗ್ಗೆ ದನಿ ಎತ್ತಿದ್ದಾರೆ.

‘ಬಿಜೆಪಿಯು 2014ರಲ್ಲಿ ಗರಿಷ್ಠ ಪ್ರಮಾಣದಲ್ಲಿ ದಲಿತರ ವೋಟುಗಳನ್ನು ಬಾಚಿಕೊಂಡಿತ್ತು’ ಎಂದು ದೇಶದ ಪ್ರಮುಖ ಚುನಾವಣಾ ವಿಶ್ಲೇಷಕರಾಗಿರುವ ಸಂಜಯ್‌ ಕುಮಾರ್‌ ಅವರು ತಮ್ಮ ಒಂದು ಅಂಕಣದಲ್ಲಿ ಸಕಾರಣವಾಗಿ ವಿಶ್ಲೇಷಿಸಿದ್ದಾರೆ. ‘ಹಿಂದಿನ ಹಲವಾರು ಲೋಕಸಭಾ ಚುನಾವಣೆಗಳಲ್ಲಿ ಸರಿ ಸುಮಾರು ಶೇ 12 ರಿಂದ ಶೇ 14ರಷ್ಟು ಪ್ರಮಾಣದಲ್ಲಿ ದಲಿತರು ಬಿಜೆಪಿಗೆ ವೋಟ್‌ ಹಾಕಿದ್ದಾರೆ. ಆದರೆ, 2014ರಲ್ಲಿ ಇದು ಶೇ 24ಕ್ಕೆ ಗಮನಾರ್ಹ ಏರಿಕೆ ಕಂಡಿತ್ತು. ಇದರಿಂದಾಗಿ ಬಿಜೆಪಿಯು ಕಾಂಗ್ರೆಸ್‌ (ಶೇ 19) ಮತ್ತು ಬಿಎಸ್‌ಪಿ (ಶೇ 14)ಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ದಲಿತರ ವೋಟ್‌ಗಳನ್ನು ಬಾಚಿಕೊಂಡಿತ್ತು’ ಎಂದು ಅವರು ಹೇಳಿದ್ದಾರೆ.

ದಲಿತರಲ್ಲಿ ಇತ್ತೀಚೆಗೆ ಕಂಡು ಬಂದಿರುವ ಅಸಹನೆಯು ಬಿಜೆಪಿಯ ಈ ಮತ ಗಳಿಕೆಗೆ ಕಲ್ಲು ಹಾಕಲಿದೆ. ಎಸ್‌ಪಿ ಮತ್ತು ಬಿಎಸ್‌ಪಿ ಕೈಜೋಡಿಸುವುದರಿಂದ ಇದು ಇನ್ನಷ್ಟು ಸಂಕೀರ್ಣಗೊಳ್ಳಲಿದೆ. ಗೋರಖ್‌ಪುರ ಮತ್ತು ಫೂಲ್ಪುರ ಉಪಚುನಾವಣೆಗಳಲ್ಲಿ ಇದು ಸ್ಪಷ್ಟಗೊಂಡಿದೆ.

ಬಿಜೆಪಿಯ ಮೂವರು ದಲಿತ ಸಂಸದರ ಆರೋಪಗಳು ಈ ಹೊಸ ಅಭದ್ರತೆಯ ಭಾವವನ್ನು ಪುಷ್ಟೀಕರಿಸುತ್ತವೆ. ಮೇಲ್ಜಾತಿಗೆ ಸೇರಿದ ವ್ಯಕ್ತಿಯೊಬ್ಬ ಗ್ವಾಲಿಯರ್‌ನಲ್ಲಿ ದಲಿತ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿರುವುದು ವೇಮುಲ, ಭೀಮಾ – ಕೋರೆಗಾಂವ್‌ ವಿದ್ಯಮಾನಗಳಿಗೆ ಹೊಸ ಸೇರ್ಪಡೆಯಾಗಿದೆ.

ಎಸ್‌ಸಿ– ಎಸ್‌ಟಿ ಕಾಯ್ದೆ ಕುರಿತ ಸುಪ್ರೀಂ ಕೋರ್ಟ್‌ ಆದೇಶದಲ್ಲಿ ಕೇಂದ್ರ ಸರ್ಕಾರದ ಪಾತ್ರವೇನೂ ಇಲ್ಲ. ಆದೇಶವನ್ನು ಸೂಕ್ಷ್ಮವಾಗಿ ಓದಿದರೆ, ಉತ್ತಮ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳೇನೂ ಕಂಡು ಬರುವುದಿಲ್ಲ. ಆದರೆ, ಇದಕ್ಕೆ ದೇಶದಾದ್ಯಂತ ದಲಿತರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ವ್ಯಾಪಕ ಪ್ರತಿಭಟನೆ ನಡೆಸಿರುವುದು ಇಲ್ಲಿವರೆಗೆ ಅವರಲ್ಲಿ ಅದುಮಿಟ್ಟಿದ್ದ ಆಕ್ರೋಶ ಹೊರ ಚೆಲ್ಲಿದೆ ಎಂದೇ ವ್ಯಾಖ್ಯಾನಿಸಬೇಕಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಈ ವಿದ್ಯಮಾನವನ್ನು ಹಗುರವಾಗಿ ಪರಿಗಣಿಸಬಾರದು. 2019ರಲ್ಲಿಯೂ ಮೋದಿ ಮಾಂತ್ರಿಕತೆಯು ಎಲ್ಲವನ್ನೂ ಗುಡಿಸಿ ಹಾಕಲಿದೆ ಎಂದು ಊಹಿಸುವುದೂ ಸರಿಯಲ್ಲ. ಒಂದು ವೇಳೆ, 2014ರಲ್ಲಿ ಪಕ್ಷಕ್ಕೆ ಬಿದ್ದಿದ್ದ ಶೇ 24ರಷ್ಟು ದಲಿತ ವೋಟುಗಳಿಗೆ ಎರವಾದರೆ ಅದರ ಶೇಕಡಾವಾರು ಮತ ಪ್ರಮಾಣ ಗಮನಾರ್ಹವಾಗಿ ತಗ್ಗಲಿದೆ. ಸದ್ಯಕ್ಕೆ ಪಕ್ಷದಲ್ಲಿ ಮೇಲ್ಜಾತಿಯವರ ಪ್ರಭಾವ ಗರಿಷ್ಠ ಪ್ರಮಾಣದಲ್ಲಿ ಕಂಡು ಬರುತ್ತಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರು ಮೀಸಲಾತಿ ಬಗ್ಗೆ ಹೆಚ್ಚು ದೃಢವಾಗಿ ಮಾತನಾಡುತ್ತಿದ್ದಾರೆ. ಅಮಿತ್‌ ಶಾ ಅವರು ಒಡಿಶಾದ ದಲಿತರ ಮನೆಯಲ್ಲಿ ಊಟ ಮಾಡಿ ಗಮನ ಸೆಳೆಯುತ್ತಾರೆ.

ದಲಿತರಲ್ಲಿ ಈ ಬಾರಿ ಕಂಡು ಬಂದಿರುವ ಜಾಗೃತಿಯು ಈ ಹಿಂದಿನದಕ್ಕಿಂತ ಭಿನ್ನವಾಗಿದೆ. ಈಗ ಹೆಚ್ಚೆಚ್ಚು ಜನರು ಶಾಲೆ – ಕಾಲೇಜುಗಳಿಗೆ ತೆರಳುತ್ತಿದ್ದಾರೆ. ಇಂಟರ್‌ನೆಟ್‌ ಸುಲಭವಾಗಿ ಸಿಗುತ್ತಿದೆ. ಈಗಿನ ತಲೆಮಾರಿನಲ್ಲಿ ಹೆಚ್ಚಿನ ಅರಿವು ಕಂಡು ಬರುತ್ತಿದೆ. ಬರೀ ದೈಹಿಕ ರಕ್ಷಣೆ, ಆಹಾರ, ವಸತಿ ಮತ್ತು ಸಾಂಪ್ರದಾಯಿಕ ವೃತ್ತಿ ಕಸುಬಿಗಷ್ಟೇ ಅವರ ನಿರೀಕ್ಷೆಗಳು ಸೀಮಿತಗೊಂಡಿಲ್ಲ.

ದಲಿತ ಯುವಕರು ಹಿಂದಿನ ಬಲೆಯಿಂದ ಹೊರಬರಲು ಹವಣಿಸುತ್ತಿದ್ದಾರೆ. ಎಲ್ಲೆಡೆ ಸುಲಭವಾಗಿ ಸಂಪರ್ಕ ಸಾಧಿಸಲು ಸಾಮಾಜಿಕ ಮಾಧ್ಯಮಗಳು ಮತ್ತು ವಾಟ್ಸ್‌ಆ್ಯಪ್‌ ಅವರ ನೆರವಿಗೆ ಬಂದಿವೆ. ಯುವ ಮುಖಂಡ ಮತ್ತು ಮೊದಲ ಬಾರಿಗೆ ಶಾಸಕರಾಗಿರುವ ಜಿಗ್ನೇಶ್‌ ಮೇವಾನಿ ಉತ್ತರ, ಮಧ್ಯ ಮತ್ತು ಪಶ್ಚಿಮ ಭಾರತದಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ಜನರನ್ನು ಸೆಳೆಯುತ್ತಿದ್ದಾರೆ. ದಲಿತರಲ್ಲಿನ ಈ ಎಚ್ಚರವು ಈ ಮೊದಲಿಗಿಂತ ಹೆಚ್ಚು ಸೈದ್ಧಾಂತಿಕವಾಗಿದೆ. ಈ ಎಚ್ಚರದ ದನಿ ಮತ್ತು ಆಶಯದಲ್ಲಿ ಎಡಪಂಥೀಯ ಛಾಯೆಯ ಪ್ರಭಾವ ದಟ್ಟವಾಗಿದೆ. ಹೀಗಾಗಿ ಇದು ಸ್ಪಷ್ಟವಾಗಿ ಬಿಜೆಪಿ ವಿರೋಧಿಯಾಗಿದೆ.

ಹಿಂದೂ ಸಮಾಜದಲ್ಲಿನ ಜಾತಿ ವಿಭಜನೆಯಿಂದಾಗಿ ಚುನಾವಣೆಗಳಲ್ಲಿ ತನಗೆ ಗೆಲುವು ಸುಲಭವಾಗಿ ದಕ್ಕುವುದಿಲ್ಲ ಎಂದೇ ಬಿಜೆಪಿ 1989ರವರೆಗೆ ಗಾಢವಾಗಿ ನಂಬಿಕೊಂಡಿತ್ತು. ಇದನ್ನು ಭೇದಿಸಲು ಎಲ್‌.ಕೆ.ಅಡ್ವಾಣಿ ಅವರು ಮುಂದಡಿ ಇಟ್ಟಿದ್ದರು. ಸಮಾಜವನ್ನು ವಿಭಜಿಸಿರುವ ಜಾತಿಗಳ ಬದಲಿಗೆ, ಅಯೋಧ್ಯೆ ಹೆಸರಿನಲ್ಲಿ ಧರ್ಮ ಬಳಸಿಕೊಂಡು ಜಾತಿ – ಜಾತಿಗಳನ್ನು ಒಂದುಗೂಡಿಸುವ ಪ್ರಯತ್ನ ಮಾಡಿದರು. ಈ ಪ್ರಯತ್ನ ಭಾರಿ ಯಶಸ್ವಿಯಾಯಿತು.

ಪಕ್ಷದ ಪರವಾದ ಜಾತಿ ನಿಷ್ಠೆಯು ದೀರ್ಘ ಸಮಯದವರೆಗೆ ಉಳಿದುಕೊಂಡು ಬರಲಿಲ್ಲ. ಅಧಿಕಾರ ಪಡೆದ ಬಿಜೆಪಿಯು ಬಹಳ ದಿನಗಳವರೆಗೆ ಅದನ್ನು ಕಾಯ್ದುಕೊಂಡು ಹೋಗಲೂ ಸಾಧ್ಯವಾಗಲಿಲ್ಲ. ಹಿಂದೊಮ್ಮೆ ಉತ್ತರ ಪ್ರದೇಶದಲ್ಲಿ ಬಹುಮತ ಹೊಂದಿದ್ದ ಪಕ್ಷವು ಆನಂತರ ಮಾಯಾವತಿ ಮತ್ತು ಅಖಿಲೇಶ್ ಯಾದವ್‌ ಅವರಿಗೆ ಅಧಿಕಾರ ಬಿಟ್ಟುಕೊಡಬೇಕಾಯಿತು.

25 ವರ್ಷಗಳ ಹಿಂದೆ ಅಡ್ವಾಣಿ ನಡೆಸಿದ ಪ್ರಯೋಗಕ್ಕಿಂತ 2014ರಲ್ಲಿ ಮೋದಿ – ಅಮಿತ್‌ ಶಾ ಜೋಡಿ ಹೆಚ್ಚು ಸುಸಂಬದ್ಧ ರೀತಿಯಲ್ಲಿ ರಾಜಕೀಯ ತಂತ್ರಗಾರಿಕೆ ಹೆಣೆದಿತ್ತು. ಅದನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಿತ್ತು. ಗುಜರಾತ್‌ ಆಡಳಿತದ ದಾಖಲೆ, ಹಿಂದುತ್ವದ ರಾಷ್ಟ್ರೀಯತೆ, ಮೋದಿ ಜನಾಕರ್ಷಣೆ ಮತ್ತು ‘ಒಳ್ಳೆಯ ದಿನ’ಗಳ ಭರವಸೆಗಳು ಮತದಾರರ ಮನಗೆಲ್ಲಲು ನೆರವಾಗಿದ್ದವು.

ಜಾತಿ ವಿಭಜನೆಯನ್ನು ಇದು ಮತ್ತೆ ಬಲಪಡಿಸಿತು. ಇದರಿಂದಲೇ ರಾಜಕೀಯವಾಗಿ ಪ್ರಭಾವಿಯಾಗಿ ಬೆಳೆಯುತ್ತಿದ್ದ ಇತರ ಎಲ್ಲ ಪಕ್ಷಗಳು ತೀವ್ರ ಹಿನ್ನಡೆ ಕಂಡವು. ಇನ್ನೊಂದೆಡೆ ಬಿಜೆಪಿಯು ದೇಶದ ಹೃದಯ ಭಾಗದಲ್ಲಿ ಗಮನಾರ್ಹವಾಗಿ ಚೇತರಿಸಿಕೊಂಡಿತು. ಇತರೆ ಹಿಂದುಳಿದ ವರ್ಗಗಳು (ಒಬಿಸಿ) ಮತ್ತು ದಲಿತರಿಂದ ಪಕ್ಷದ ಪರವಾಗಿ ಗಮನಾರ್ಹ ಪ್ರಮಾಣದಲ್ಲಿ ವೋಟುಗಳು ಬರದೇ ಇದು ಸಾಧ್ಯವಿರಲಿಲ್ಲ.

ಬದಲಾಗುತ್ತಿರುವ ಜಾತಿ ಸಮೀಕರಣ, ಆಡಳಿತಾರೂಢ ಪಕ್ಷದ ವಿರುದ್ಧದ ಅಸಮಾಧಾನ, ಉದ್ಯೋಗ ಅವಕಾಶಗಳ ಕೊರತೆ, ಪ್ರಭಾವಿ ಜಾತಿಗೆ ಸೇರಿದವರು ಮುಖ್ಯಮಂತ್ರಿ ಆಗಿರುವುದು ಎಲ್ಲವೂ ಮೇಳೈಸಿ ಜಾತಿಯ ಹೊಸ ಸಮೀಕರಣ ಮತ್ತೆ ಚಲಾವಣೆಗೆ ಬರುತ್ತಿದೆ.

ಈ ಬದಲಾವಣೆಯನ್ನು ಬಿಜೆಪಿ ತ್ವರಿತವಾಗಿ ಅರ್ಥೈಸಿಕೊಂಡಿದೆ. ಇದೇ ಕಾರಣಕ್ಕೆ ಮೋದಿ ಮತ್ತು ಶಾ, ಈಗ ದಲಿತರ ಮತ್ತು ಮೀಸಲಾತಿ ಪರ ದೊಡ್ಡದಾಗಿ ಮಾತನಾಡುತ್ತಿದ್ದಾರೆ. ಆದರೆ, ಅವರು ಮೂರು ಪ್ರಮುಖ ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದೆ. ಬಿಜೆಪಿಯಲ್ಲಿ ಪ್ರಭಾವಿ ದಲಿತ ಮುಖಂಡರು ಇಲ್ಲದಿರುವುದು, 2014ರ ನಂತರ ಪಕ್ಷದಲ್ಲಿ ಮೇಲ್ಜಾತಿಯವರ ಪ್ರಭಾವ ಹೆಚ್ಚುತ್ತಿರುವುದು ಮತ್ತು ದಲಿತ ಸಮುದಾಯದಲ್ಲಿ ಹೆಚ್ಚುತ್ತಿರುವ ಹತಾಶೆಯನ್ನು ಆರಂಭದಲ್ಲಿಯೇ ಗುರುತಿಸದಿರುವುದು ಪಕ್ಷದ ಮುಂದಿರುವ ಸವಾಲುಗಳಾಗಿವೆ.

ಪಕ್ಷದಲ್ಲಿ ಹಿಂದೆ ಒಬಿಸಿ ಮುಖಂಡರಾದ ಮೋದಿ ಮತ್ತು ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಪ್ರವರ್ಧಮಾನಕ್ಕೆ ಬಂದಿದ್ದರು. ಈಗ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮೇಲ್ಜಾತಿಯವರು ಮುಂಚೂಣಿಯಲ್ಲಿ ಇದ್ದಾರೆ. ದಲಿತರಲ್ಲಿನ ಅಸಮಾಧಾನದ ಕಿಚ್ಚನ್ನು ಸರ್ಕಾರ ಮತ್ತು ಪಕ್ಷವು ಸಕಾಲದಲ್ಲಿ ಗುರುತಿಸಲು ವಿಫಲವಾಗಿವೆ. ಈಗ ಪಕ್ಷವು ಈ ಸಿಕ್ಕುಗಳನ್ನು ಬಿಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಪಕ್ಷಕ್ಕೆ ಆಗಿರುವ ಹಾನಿಯನ್ನು ಎಷ್ಟರಮಟ್ಟಿಗೆ ತಡೆಗಟ್ಟಲು ಯಶಸ್ವಿಯಾಗಲಿದೆ ಎನ್ನುವುದರ ಮೇಲೆ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅದರ ಯಶಸ್ಸು ಅವಲಂಬಿಸಿದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರತಿಕ್ರಿಯಿಸಿ (+)