ಗುರುವಾರ , ಮೇ 28, 2020
27 °C

ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

ಶೇಖರ್‌ ಗುಪ್ತ Updated:

ಅಕ್ಷರ ಗಾತ್ರ : | |

ಬಿಜೆಪಿಯ ದಂಗುಬಡಿಸುವ ಚಾಣಾಕ್ಷತೆ

ಒಂದು ವಾರದ ಹಿಂದಿನ ದಿನಪತ್ರಿಕೆಗಳ ಮುಖಪುಟಗಳ ಮೇಲೆ ಕಣ್ಣಾಡಿಸಿದರೆ ಮತ್ತು ಟೆಲಿವಿಷನ್‌ ಚಾನೆಲ್‌ಗಳಲ್ಲಿನ ಅರಚಾಟ ಕೇಳಿದರೆ ಅವೆಲ್ಲವೂ ನೀರವ್‌ ಮೋದಿ ಮತ್ತವರ ಚಿಕ್ಕಪ್ಪ ಮೆಹುಲ್‌ ಚೋಕ್ಸಿ ಅವರು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಿಂದ ಕೋಟ್ಯಂತರ ರೂಪಾಯಿಗಳನ್ನು ಕದ್ದು ಪರಾರಿಯಾದ ಘಟನೆ ಸುತ್ತಲೇ ಗಿರಕಿ ಹೊಡೆಯುತ್ತಿದ್ದವು. ಆನಂತರ ಈ ಪಟ್ಟಿಗೆ, ಚಿಲ್ಲರೆ ವಂಚನೆ ಎಸಗಿದ ರೋಟೊಮ್ಯಾಕ್‌ ಪೆನ್ಸ್ ಕಂಪನಿಯ ವಿಕ್ರಂ ಕೊಠಾರಿ ಮತ್ತಿತರರು ಸೇರ್ಪಡೆಗೊಂಡರು. ನೀರವ್‌ನಂತಹ ದೊಡ್ಡ ವಂಚಕರಿಗೆ ಹೋಲಿಸಿದರೆ ಇವರೆಲ್ಲರ ವಂಚನೆ ಮೊತ್ತ ಒಂದು ಸಾವಿರ ಕೋಟಿ ರೂಪಾಯಿಗಳವರೆಗೆ ಇತ್ತು. ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಲೂಟಿಯೇ ಈ ಎಲ್ಲ ವಂಚಕರ ಮುಖ್ಯ ಉದ್ದೇಶವಾಗಿತ್ತು ಎನ್ನುವುದು ಸ್ಪಷ್ಟಗೊಳ್ಳುತ್ತದೆ.

ಭ್ರಷ್ಟಾಚಾರ ಮೂಲೋತ್ಪಾಟನೆ ಮಾಡುವ ಭರವಸೆ ನೀಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ನೇತೃತ್ವದಲ್ಲಿನ ಎನ್‌ಡಿಎ ಸರ್ಕಾರದ ಪಾಲಿಗೆ ಇವೆಲ್ಲ ತೀವ್ರ ಮುಜುಗರ ಉಂಟುಮಾಡುವ ವಿದ್ಯಮಾನಗಳಾಗಿವೆ. ‘ನಾನು, ಜನರಿಗೆ ಸೇರಿದ ಹಣದ ಕಾವಲುಗಾರ’ ಎಂದು ಎದೆತಟ್ಟಿಕೊಂಡು ಹೇಳಿಕೊಳ್ಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಲು ಟೀಕಾಕಾರರು ಮತ್ತು ಕಾಂಗ್ರೆಸ್‌ ಕೈಗೆ ಮಹಾ ಅಸ್ತ್ರವೊಂದು ಈಗ ದೊರೆತಂತಾಗಿದೆ. ಬಿಜೆಪಿಯ ಭ್ರಷ್ಟಾಚಾರ ವಿರೋಧಿ ಮುಖವಾಡ ಕಳಚಿ ಬಿದ್ದಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ. ಅದರಲ್ಲೂ ನೀರವ್‌ ಮೋದಿ ಅವರು ಪ್ರಧಾನಿ ಜತೆ ದಾವೋಸ್‌ನ ಸಮೂಹ ಛಾಯಾಚಿತ್ರದಲ್ಲಿ ಕಾಣಿಸಿಕೊಂಡ ನಂತರವಂತೂ ಬಿಜೆಪಿಯ ಪ್ರಮುಖ ಪ್ರಚಾರ ಅಸ್ತ್ರವೇ ಮೊಂಡಾಗಿ ಬಿಟ್ಟಿದೆ.

ಸಾಲ ಮರುಪಾವತಿಸದ ಮತ್ತು ತೆರಿಗೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶದಿಂದಲೇ ಪರಾರಿಯಾಗಿರುವ ವಿಜಯ್‌ ಮಲ್ಯ ಮತ್ತು ಲಲಿತ್ ಮೋದಿ ಅವರ ಹೆಸರೂ ಈಗ ಪ್ರಮುಖವಾಗಿ ಕೇಳಿ ಬರುತ್ತಿದೆ. ಧೃತಿಗೆಡದ ಬಿಜೆಪಿ ವಕ್ತಾರರು, ಟೆಲಿವಿಷನ್‌ ಚಾನೆಲ್‌ಗಳಲ್ಲಿ ತಮ್ಮ ವಾದ ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದ್ದರು. ಅವರ ಪ್ರಕಾರ, ನೀರವ್‌ ಮೋದಿ 2011ರಲ್ಲಿಯೇ ವಂಚನೆ ಎಸಗಿದ್ದಾನೆ. ಆಗ ಕೇಂದ್ರದಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿ ಇತ್ತು ಎನ್ನುವುದನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದರು.

ಸಿಬಿಐ ಈಗ ಎಫ್‌ಐಆರ್ ದಾಖಲಿಸಿ ಸಂಚು ಬಯಲಿಗೆ ಎಳೆದಿದೆ ಎನ್ನುವುದು ಅವರ ನಿಲುವಾಗಿತ್ತು. ಇದೆಲ್ಲವೂ ಪತ್ರಿಕೆಗಳ ಮುಖಪುಟದ ಸುದ್ದಿಯಾಗಿ ಗಮನ ಸೆಳೆಯುತ್ತಿದ್ದವು. ಆನಂತರ ಈ ಚಿತ್ರಣವೇ ಬದಲಾಯಿತು. ಇಂತಹ ತಲೆಬರಹಗಳು ಕಾಣೆಯಾಗತೊಡಗಿದವು.

ಹೊಸ ಸುದ್ದಿಯ ತಲೆಬರಹಗಳು ಗಮನ ಸೆಳೆಯತೊಡಗಿದವು. ಇಲ್ಲ, ನಾನು ಇಲ್ಲಿ ಶ್ರೀದೇವಿಯ ಸಾವು ಮತ್ತು ಇತರ ಘಟನೆಗಳ ಬಗ್ಗೆ ಹೇಳುತ್ತಿಲ್ಲ. ಆಕೆಯ ಸಾವು ನಿಜಕ್ಕೂ ದುರಂತಮಯ. ಆದರೆ, ಪತ್ರಿಕೆಗಳಲ್ಲಿ ಗಮನ ಸೆಳೆಯುವಂತಹ ಇತರ ಘಟನೆಗಳು ನಡೆಯುವುದಕ್ಕೆ ಬಿಜೆಪಿಯ ಕೈವಾಡ ಇರುವುದು ಸ್ಪಷ್ಟವಾಗಿತ್ತು.

ಕಾರ್ತಿ ಚಿದಂಬರಂ ಅವರು, ಇಂದ್ರಾಣಿ ಮತ್ತು ಪೀಟರ್‌ ಮುಖರ್ಜಿ ಅವರಿಂದ ₹ 4.55 ಕೋಟಿ ಪಡೆದುಕೊಂಡಿರುವರೇ? ಆ ಒಪ್ಪಂದ ಕುದುರಲು ಕಾರ್ತಿ ಅವರ ತಂದೆ ಪಿ. ಚಿದಂಬರಂ ನೆರವು ನೀಡಿದ್ದರೇ? ಸಿಬಿಐ ವಶದಲ್ಲಿ ಇದ್ದಾಗ ಕಾರ್ತಿಗೆ ಮನೆಯ ಊಟ ನೀಡಲು ನಿರಾಕರಿಸಲಾಗಿತ್ತೇ? ಕಾರ್ತಿ ತಮ್ಮ ಚಿನ್ನದ ಸರ ಧರಿಸಲು ನ್ಯಾಯಮೂರ್ತಿಗಳು ಅನುಮತಿ ನೀಡಿದ್ದರೇ... ಎಂಬಿತ್ಯಾದಿ ಸುದ್ದಿಗಳೇ ಮುಖಪುಟದಲ್ಲಿ ರಾರಾಜಿಸುವಂತೆ ನೋಡಿಕೊಳ್ಳಲಾಯಿತು.

ಹಿಂದಿನ ಕೆಲ ವಾರಗಳಲ್ಲಿ ಯಾವತ್ತಾದರೂ ಅವರನ್ನು ಬಂಧಿಸಬಹುದಾಗಿತ್ತು. ಇಲ್ಲೊಂದು ಸಂಗತಿಯನ್ನು ಗಮನಿಸಲೇಬೇಕು. ಅವರು ವಿದೇಶಕ್ಕೆ ತೆರಳುವಾಗ ಬಂಧಿಸಲಿಲ್ಲ. ವಿದೇಶದಿಂದ ಬಂದಿಳಿಯುತ್ತಿದ್ದಂತೆ ವಶಕ್ಕೆ ಪಡೆಯಲಾಗಿತ್ತು. ಅವರನ್ನು ಬಂಧಿಸುವವರು ಸೂಕ್ತ ಸಮಯಕ್ಕಾಗಿ ಕಾದು ಕುಳಿತಿದ್ದರು ಎನ್ನುವುದು ಇದರಿಂದ ಸ್ಪಷ್ಟಗೊಳ್ಳುತ್ತದೆ. ಇದೊಂದು ಎದುರಾಳಿಗಳ ಮೇಲೆ ನಡೆಸಿದ ದೊಡ್ಡ ಪ್ರಹಾರವಾಗಿತ್ತು. ನಾಲ್ಕು ವರ್ಷಗಳ ಕಾಲ ಶೈತ್ಯಾಗಾರದಲ್ಲಿ ಇರಿಸಲಾಗಿದ್ದ ಲೋಕಪಾಲರ ನೇಮಕಾತಿ ವಿಷಯವನ್ನು ಇದೇ ಸಮಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ.

ನಿರೀಕ್ಷೆಯಂತೆ ಕಾಂಗ್ರೆಸ್‌ ಇದನ್ನು ವಿರೋಧಿಸಿದೆ. ಅದು ಕೂಡ ಮುಖಪುಟದಲ್ಲಿ ಸುದ್ದಿಯಾಗಿ ಗಮನ ಸೆಳೆಯಿತು. ಈ ವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ದೇಶ ತೊರೆಯುವ ವಂಚಕರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಮಸೂದೆಗೆ ಅಂಗೀಕಾರ ನೀಡಿದೆ. ಕಾಯ್ದೆ ಜಾರಿಗೊಳಿಸುವ ಸಂಸ್ಥೆಗಳ ನೋಟಿಸ್‌ ಗೆ ಆರು ವಾರಗಳಲ್ಲಿ ಉತ್ತರ ನೀಡದವರನ್ನು ವಿದೇಶಕ್ಕೆ ಪಲಾಯನ ಮಾಡಿದವರು ಎಂದು ಘೋಷಿಸಲು ಈ ಮಸೂದೆ ನೆರವಾಗಲಿದೆ.

ಮಲ್ಯ ಅಥವಾ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ಅವರನ್ನೂ ದೇಶ ತೊರೆದ ವಂಚಕರು ಎಂದು ಘೋಷಿಸಿದರೆ ಆಗುವ ವ್ಯತ್ಯಾಸವಾದರೂ ಏನು. ಅವರೆಲ್ಲ ಈಗಾಗಲೇ ದೇಶ ತೊರೆದಿದ್ದಾರಲ್ಲ ಎಂದು ನಾವು ಸಹಜವಾಗಿಯೇ ಕೇಳಬಹುದಲ್ಲ? ಇನ್ನೊಂದು ಸಂದರ್ಭದಲ್ಲಾಗಿದ್ದರೆ, ನಾನು ಇದನ್ನು ‘ಲಾಲಿಪಾಪ್‌ ರಾಜಕೀಯ’ (ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದೆ ಹೋದಾಗ ಕಾನೂನನ್ನೇ ಗಾಳಿಗೆ ತೂರುವುದು) ಎಂದು ತಳ್ಳಿ ಹಾಕಬಹುದಿತ್ತು. ಈ ಬಾರಿ ಹಾಗಾಗಲಿಕ್ಕಿಲ್ಲ. ಈ ಮಸೂದೆಯ ಉದ್ದೇಶ ಈ ಬಾರಿ ಖಚಿತವಾಗಿದೆ ಎಂದು ಹೇಳಬಹುದು.

ಬ್ಯಾಂಕ್‌ ಸಾಲದ ಉದ್ದೇಶಪೂರ್ವಕ ಸುಸ್ತಿದಾರರು ದೇಶ ತೊರೆಯುವುದನ್ನು ವಲಸೆ ಅಧಿಕಾರಿಗಳು ತಡೆಯುವ ಹೊಸ ನಿಯಮವನ್ನು ಸರ್ಕಾರ ಜಾರಿಗೆ ತರುತ್ತಿದೆ ಎನ್ನುವ ಸುದ್ದಿಯನ್ನೂ ಸೋರಿಕೆ ಮಾಡಲಾಯಿತು. ಇಲ್ಲೊಂದು ಪ್ರಮುಖ ಸಮಸ್ಯೆ ಎದುರಾಗುತ್ತದೆ. ಕಾನೂನಾತ್ಮಕವಾಗಿ ಮತ್ತು ವ್ಯಕ್ತಿಯ ಮೂಲಭೂತ ಹಕ್ಕಿಗೆ ಸಂಬಂಧಿಸಿ ಹೇಳುವುದಾದರೆ, ನಾಗರಿಕನೊಬ್ಬ ಉದ್ದೇಶಪೂರ್ವಕ ಸುಸ್ತಿದಾರನಾಗಿದ್ದಾನೆ ಅಥವಾ ವಹಿವಾಟಿನಲ್ಲಿ ಉಂಟಾದ ನಷ್ಟದಿಂದ ಈ ಪರಿಸ್ಥಿತಿ ಉದ್ಭವಿಸಿದೆ ಎಂದು ಯಾರು ನಿರ್ಧರಿಸುತ್ತಾರೆ ಎನ್ನುವುದು ಸ್ಪಷ್ಟವಾಗಿಲ್ಲ. ಮನೆಗಳ್ಳತನ ತಡೆಯಲು ವಿಫಲವಾದ ಪೊಲೀಸರು, ಕಳ್ಳತನ ನಡೆದ ಮನೆಯ ಹೊರಗೆ ಪೊಲೀಸರನ್ನು ಕಾವಲಿಗೆ ನೇಮಿಸಿದ ರೀತಿಯಲ್ಲಿಯೇ ಈ ವ್ಯವಸ್ಥೆ ಇರುವಂತಹ ಭಾವನೆ ಮೂಡಿಸುತ್ತದೆ.

ಸದ್ಯದ ರಾಜಕೀಯ ಪರಿಸ್ಥಿತಿಗೂ ಒಂದು ವಾರದ ಹಿಂದೆ ಹಿಗ್ಗಾಮುಗ್ಗಾ ಟೀಕೆಗೆ ಗುರಿಯಾಗಿದ್ದ ಬಿಜೆಪಿಯ ದೈನೇಸಿ ಸ್ಥಿತಿಗೂ ಹೋಲಿಸಿ ನೋಡಿ. ಈಗ ಯಾವುದೇ ಟಿ.ವಿ. ಚಾನೆಲ್‌ ತಿರುಗಿಸಿ ನೋಡಿದರೆ, ಬಿಜೆಪಿ ಮತ್ತೆ ತನ್ನ ಎದುರಾಳಿಗಳ ಮೇಲೆ ವಾಗ್ದಾಳಿ ನಡೆಸುವ ತನ್ನ ಹಿಂದಿನ ಚಾಳಿಗೆ ಮರಳಿದಂತೆ ಭಾಸವಾಗುತ್ತದೆ. ಕಾಂಗ್ರೆಸ್‌, ಚಿದಂಬರಂ ಅವರನ್ನು ರಕ್ಷಿಸಿಕೊಳ್ಳಲು ಹೆಣಗುತ್ತಿದೆ. ಉಳಿದಂತೆ ಪ್ರಮುಖ ದಿನಪತ್ರಿಕೆಗಳ ಸಂಪಾದಕೀಯಗಳಲ್ಲಿ ಲೋಕಪಾಲ, ದೇಶಭ್ರಷ್ಟ ವಂಚಕರ ವಿರುದ್ಧದ ಕ್ರಮ, ಉದ್ದೇಶಪೂರ್ವಕ ಸುಸ್ತಿದಾರರ ವಿರುದ್ಧ ವಲಸೆ ನಿರ್ಬಂಧ ಕ್ರಮಗಳ ಬಗ್ಗೆಯೇ ಟಿಪ್ಪಣಿ ಮಾಡಲಾಗುತ್ತಿದೆ.

ರಾಷ್ಟ್ರೀಕೃತ ಬ್ಯಾಂಕ್‌ಗಳ ಲೆಕ್ಕಪತ್ರ ತಪಾಸಣೆ ನಡೆಸುವ ಚಾರ್ಟರ್ಡ್‌ ಅಕೌಂಟಂಟ್‌ರ ಕಾರ್ಯವೈಖರಿ ಮೇಲೆ ನಿಗಾ ಇರಿಸುವ ಹೊಸ ನಿಯಂತ್ರಣ ಕ್ರಮ ಕೈಗೊಳ್ಳುವುದಾಗಿಯೂ ಕೇಂದ್ರ ಸರ್ಕಾರ ಪ್ರಕಟಿಸಿದೆ. ₹ 50 ಕೋಟಿಗಳಿಗಿಂತ ಹೆಚ್ಚಿನ ಮೊತ್ತದ ಸಾಲ ಮರುಪಾವತಿಸದ ಸುಸ್ತಿದಾರರ ಮಾಹಿತಿಯನ್ನು ಸಿಬಿಐಗೆ ನೀಡುವಂತೆಯೂ ಬ್ಯಾಂಕ್‌ಗಳಿಗೆ ತಾಕೀತು ಮಾಡಲಾಗಿದೆ.

ಈ ಎಲ್ಲ ರಕ್ಷಣಾ ಕ್ರಮಗಳನ್ನು ಕೈಗೊಂಡು ಕೋಟೆ ಭದ್ರಪಡಿಸುವ ಮೊದಲೇ ವಜ್ರಾಭರಣ ಹೆಗ್ಗಣಗಳು ದೇಶದಿಂದ ಪರಾರಿಯಾಗಿರುವುದನ್ನು ನಾವಿಲ್ಲಿ ಮರೆಯಬಾರದು. ಇವರ ಒಟ್ಟಾರೆ ವಂಚನೆಯ ಮೊತ್ತ ₹ 20 ಸಾವಿರ ಕೋಟಿಗಳಷ್ಟಾಗಲಿದೆ. ಅವರಲ್ಲೊಬ್ಬ ಪ್ರಧಾನಿ ಜತೆ ದಾವೋಸ್‌ ಛಾಯಾಚಿತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ಇನ್ನೊಬ್ಬನನ್ನು ಪ್ರಧಾನಿ ‘ಮೆಹುಲ್‌ ಭಾಯಿ’ ಎಂದೇ ಕರೆಯುತ್ತಿದ್ದರು.

ಒಂದೇ ವಾರದಲ್ಲಿ ಇಡೀ ಚಿತ್ರಣವನ್ನೇ ಬದಲಾಯಿಸಲಾಗಿದೆ. ಭಾರಿ ಪ್ರಮಾಣದಲ್ಲಿ ಬ್ಯಾಂಕ್‌ಗಳಿಗೆ ವಂಚನೆ ಎಸಗುವುದನ್ನು ತಡೆಯದ ಸರ್ಕಾರದ ವೈಫಲ್ಯ, ಆರೋಪ ಹೊತ್ತ ಕಳ್ಳರ ಜತೆಗಿನ ಸ್ನೇಹ ಮತ್ತು ತನ್ನ ಕಣ್ಗಾವಲಿನಲ್ಲಿಯೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ದಿವಾಳಿ ಏಳಲು ಕಾರಣವಾದ ವಿದ್ಯಮಾನಗಳನ್ನು ವಾರದೊಳಗೆ ಬದಲಾಯಿಸಲಾಗಿದೆ.

ಸರ್ಕಾರವು, ಭ್ರಷ್ಟರ ವಿರುದ್ಧ ದಯೆ–ದಾಕ್ಷಿಣ್ಯ ಇ‌ಲ್ಲದೆ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಬಿಂಬಿಸಲಾಗುತ್ತಿದೆ. ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿಗಳ ಸ್ವರೂಪವನ್ನೇ ಆಮೂಲಾಗ್ರವಾಗಿ ಬದಲಾಯಿಸುವ ಚಾಣಾಕ್ಷ ರಾಜಕೀಯ ಕಲೆ ಇದಾಗಿದೆ.

ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ ಎದುರಾದ ದೊಡ್ಡ ದೊಡ್ಡ ಬಿಕ್ಕಟ್ಟುಗಳನ್ನು ಇದೇ ಬಗೆಯಲ್ಲಿ ನಿರ್ವಹಿಸಿರುವುದು ಕಂಡು ಬರುತ್ತದೆ. ಉರಿಯಲ್ಲಿನ ಹಿನ್ನಡೆಯನ್ನು ನಾಟಕೀಯ ಸ್ವರೂಪದ ‘ನಿರ್ದಿಷ್ಟ ದಾಳಿ’ ಹೆಸರಿನಲ್ಲಿ ಮರೆಮಾಚಲಾಯಿತು. ಈ ‘ಸರ್ಜಿಕಲ್‌ ದಾಳಿ’ ಪ್ರಶ್ನಿಸುವುದನ್ನು ಸೇನಾ ಪಡೆಗಳ ಬಗ್ಗೆಯೇ ಅನುಮಾನ ಪಡುವ ಬಗೆಯಲ್ಲಿ ಬಿಂಬಿಸಲಾಯಿತು. ಹೀಗಾಗಿ ವಿರೋಧ ಪಕ್ಷಗಳೂ ಈ ಬಗ್ಗೆ ಬಾಯಿ ಮುಚ್ಚಿಕೊಂಡು ಅದನ್ನು ಅನಿವಾರ್ಯವಾಗಿ ಶ್ಲಾಘಿಸಬೇಕಾಯಿತು.

ನೋಟು ರದ್ದತಿ ತಂದೊಡ್ಡಿದ ಸಂಕಷ್ಟಗಳು ಅಸಹನೀಯ ಎನಿಸುವಷ್ಟರ ಮಟ್ಟಿಗೆ ಹೆಚ್ಚಾದಾಗ, ದೇಶದ ವಿವಿಧ ಭಾಗಗಳಲ್ಲಿ ಕೋಟ್ಯಂತರ ರೂಪಾಯಿಗಳನ್ನು ವಶಪಡಿಸಿಕೊಂಡ ಚಿತ್ರಗಳನ್ನು ಮಾಧ್ಯಮಗಳಲ್ಲಿ ಹರಿಯಬಿಡಲಾಯಿತು. ಕಾಲ ಗತಿಸಿದಂತೆ, ಬಹುತೇಕ ಇಂತಹ ಚಿತ್ರಗಳು ನಕಲಿ ಎನ್ನುವುದು ಸಾಬೀತಾಯಿತು. ಆದರೆ, ಆ ಕ್ಷಣದಲ್ಲಿ ಜನರ ಮನೋಭಾವ ಬದಲಿಸುವಲ್ಲಿ ಈ ನಕಲಿ ಚಿತ್ರಗಳು ಪ್ರಭಾವ ಬೀರಿದ್ದು ಮಾತ್ರ ನಿಜ.

ರೋಹಿತ್‌ ವೆಮುಲ ಅವರ ಆತ್ಮಹತ್ಯೆ ವರದಿಯಾಗುತ್ತಿದ್ದಂತೆ ಎಲ್ಲರ ಗಮನ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದತ್ತ (ಜೆಎನ್‌ಯು) ಹರಿಯುವಂತೆ ಮಾಡಲಾಯಿತು. ‘ಭಾರತವನ್ನು ತುಂಡು ತುಂಡು ಮಾಡಲಾಗುವುದು ಎಂದು ಕನ್ಹಯ್ಯಾ ಕುಮಾರ್‌ ಮತ್ತು ಉಮರ್‌ ಖಾಲಿದ್ ಭಾಷಣ ಮಾಡಿದ್ದಾರೆ’ ಎಂದು ಆರೋಪಿಸಿ ದೇಶದ್ರೋಹದ ಆರೋಪ ಹೊರಿಸಲಾಯಿತು. ಇವರಿಬ್ಬರೂ ಹಾಗೆ ಹೇಳಿದ್ದಾರೆ ಎನ್ನುವ ವಿಡಿಯೊವನ್ನು ಇದುವರೆಗೂ ಯಾರೊಬ್ಬರೂ ನೋಡಿಲ್ಲ.

ಚೀನಾ ಗಡಿಯಲ್ಲಿನ ದೋಕಲಾ ವಿವಾದ ಭುಗಿಲೆದ್ದಾಗ, ದೇಶದ ಹಿತಾಸಕ್ತಿ ರಕ್ಷಣೆ ದೃಷ್ಟಿಯಿಂದ ಅದನ್ನು ದೊಡ್ಡದಾಗಿ ಮಾಡದಂತೆ ಟಿ.ವಿ. ಚಾನೆಲ್‌ ಮತ್ತು ದಿನಪತ್ರಿಕೆಗಳಿಗೆ ಮನಗಾಣಿಸಲಾಯಿತು. ಕಾಶ್ಮೀರದ ಎಲ್‌ಒಸಿ ಬಗ್ಗೆ ಚಾನೆಲ್‌ಗಳಲ್ಲಿ ತಮ್ಮದೇ ಆದ ರೀತಿಯಲ್ಲಿ ವಾಗ್ದಾಳಿ ನಡೆಸುವ ವಿದೂಷಕರು ದೋಕಲಾ ವಿವಾದದ ಉದ್ದಕ್ಕೂ ಜಾಣ ಮೌನಕ್ಕೆ ಶರಣಾಗಿದ್ದರು.

ಪ್ರತಿಯೊಂದು ಸರ್ಕಾರವು ದೇಶಬಾಂಧವರಿಗೆ ಯಾವ ಸಂದೇಶ ಹೋಗಬೇಕು ಎಂದು ತಲೆಕೆಡಿಸಿಕೊಂಡು ಆ ನಿಟ್ಟಿನಲ್ಲಿಯೇ ಕಾರ್ಯಪ್ರವೃತ್ತವಾಗಿರುತ್ತದೆ. ಆದರೆ, ಮೋದಿ – ಅಮಿತ್ ಶಾ ಜೋಡಿ, ಅದನ್ನು ಅಪೂರ್ವ ಕಲೆಯನ್ನಾಗಿ ಅಭಿವೃದ್ಧಿಪಡಿಸಿದೆ. ಪತ್ರಿಕೆಗಳ ಮುಖಪುಟದಲ್ಲಿ ಸುದ್ದಿಯಾಗುವುದೆಲ್ಲ ಮತದಾರರ ಮನದಲ್ಲಿ ಮೋದಿ ಅವರ ವಿಶಿಷ್ಟ ಬ್ರ್ಯಾಂಡ್‌ ಅಚ್ಚೊತ್ತುವ ರೀತಿಯಲ್ಲಿ ಇರಬೇಕೆಂದು ಪ್ರಜ್ಞಾಪೂರ್ವಕ ಕಾಳಜಿ ತೋರಿಸಲಾಗುತ್ತಿದೆ.

ಭ್ರಷ್ಟತೆಯ ಕಳಂಕ ಮೆತ್ತದ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಹಿಂದುತ್ವ ರಾಷ್ಟ್ರೀಯತೆಯ ಪಕ್ಷಪಾತರಹಿತ ರಕ್ಷಕ ಮತ್ತು ವಿಶಾಲ ಬಾಹು ಮತ್ತು ಅಗಲವಾದ ಎದೆ, ಯಾವುದೇ ಬಿಕ್ಕಟ್ಟು ಅವರ ಮುಖದ ಮೇಲೆ ಸುಕ್ಕುಗಳನ್ನು ಮೂಡಿಸಲು ಅವಕಾಶ ನೀಡುವುದಿಲ್ಲ ಎನ್ನುವ ರೀತಿಯಲ್ಲಿ ಅವರ ವ್ಯಕ್ತಿತ್ವ ಬಿಂಬಿಸುವ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗುತ್ತಿದೆ. ತಾನು ಯಾವುದೇ ತಪ್ಪು ಮಾಡುವುದಿಲ್ಲ ಎನ್ನುವ ಕಾರಣಕ್ಕೆ ಯಾರೊಬ್ಬರೂ ತಮ್ಮ ವಿರುದ್ಧ ಟೀಕಾಪ್ರಹಾರ ನಡೆಸಬಾರದು ಎನ್ನುವುದು ಅವರ ಧೋರಣೆಯಾಗಿದೆ.

ಇದೇ ಕಾರಣಕ್ಕೆ ಅವರು ಯಾವುದೇ ಹಿನ್ನಡೆಗೂ ಪ್ರತಿಕ್ರಿಯಿಸುವ ಗೋಜಿಗೆ ಹೋಗುವುದಿಲ್ಲ. ಸರ್ಕಾರವು ತೀವ್ರ ಬಿಕ್ಕಟ್ಟು ಎದುರಿಸುತ್ತಿರುವಾಗಲೂ ಅವುಗಳನ್ನು ಸಮರ್ಥವಾಗಿ ಎದುರಿಸುವ ಕಾರ್ಯತಂತ್ರ ರೂಢಿಸಿಕೊಂಡಿರುವ ಬಿಜೆಪಿಯ ವೈಖರಿಯನ್ನು ವಿರೋಧಿಗಳು ಭಯಾಶ್ಚರ್ಯದಿಂದ ನೋಡುತ್ತಿದ್ದಾರೆ. ಜತೆಗೆ ಅದರ ರಾಜಕೀಯದ ಅಸಾಧಾರಣ ಮೇಧಾವಿತನವನ್ನೂ ಕೊಂಡಾಡುತ್ತಿದ್ದಾರೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.