ಬಿಜೆಪಿ, ಕಾಂಗ್ರೆಸ್‌ಗೆ ಗುಂಪುಗಾರಿಕೆಯ ಶಾಪ

7

ಬಿಜೆಪಿ, ಕಾಂಗ್ರೆಸ್‌ಗೆ ಗುಂಪುಗಾರಿಕೆಯ ಶಾಪ

ಐ.ಎಂ.ವಿಠಲಮೂರ್ತಿ
Published:
Updated:
ಬಿಜೆಪಿ, ಕಾಂಗ್ರೆಸ್‌ಗೆ ಗುಂಪುಗಾರಿಕೆಯ ಶಾಪ

2000ದ ನವೆಂಬರ್‌ 1ರಂದು ಹೊಸ ರಾಜ್ಯವಾಗಿ  ಉದಯವಾದ  ಛತ್ತೀಸಗಡ ಕ್ಕೀಗ 13 ವರ್ಷ.    ಪ್ರತ್ಯೇಕ ರಾಜ್ಯವಾಗ ಬೇಕೆಂ ಬುದು ಹಲವು ದಶಕಗಳ ಕನಸಾಗಿತ್ತು.  ಇದು ಎನ್‌ಡಿಎ ಆಡಳಿತದಲ್ಲಿ  ಸಾಕಾರಗೊಂಡಿದ್ದರೂ, ಎಲ್ಲ ಪಕ್ಷಗಳೂ ಕೈಜೋಡಿಸಿವೆ.‘ಭತ್ತದ ಕಣಜ’ ಛತ್ತೀಸಗಡದ ಉತ್ತರ, ದಕ್ಷಿಣ ಭಾಗದಲ್ಲಿ ಪ್ರಯಾಣಿಸಿದರೆ ಕಣ್ಣು ಸಂಭ್ರಮಿಸು ವಷ್ಟು ಹಸಿರು... ಗಿರಿ, ಕಂದರಗಳು, ನದಿತೊರೆ, ಕಾಡುಮೇಡು. ರಾಜ್ಯದ ಶೇ. 40ಕ್ಕಿಂತ ಹೆಚ್ಚು ಭಾಗ ಅರಣ್ಯ ಪ್ರದೇಶ. ಅದೂ ದಟ್ಟ ಅರಣ್ಯ. ಅದೇ ಕಾರಣಕ್ಕೆ ನಕ್ಸಲರು ನಿರಾತಂಕವಾಗಿ ಓಡಾಡಿಕೊಂಡಿರುವುದು!ರಾಜ್ಯದ ಜನಸಂಖ್ಯೆ 2001ರ ಜನಗಣತಿ ಯಂತೆ 2.08 ಕೋಟಿ. ಈಗಿದು 2.25 ಕೋಟಿ ದಾಟಿದೆ. ಶೇ. 80ರಷ್ಟು ಜನ ಹಳ್ಳಿಗಳಲ್ಲಿ, ಮಿಕ್ಕವರು ನಗರಗಳಲ್ಲಿ ಇದ್ದಾರೆ.ಹಳ್ಳಿಗಳಲ್ಲಿ ಸಾವಿರ ಪುರುಷರಿಗೆ 989 ಮಹಿಳೆಯರಿದ್ದಾರೆ. ನಗರದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಸಾಮಾಜಿಕ– ಆರ್ಥಿಕವಾಗಿ ಹಿಂದುಳಿದಿರುವ ಜನ ಹೆಣ್ಣು ಮಗುವನ್ನು ಸಮಾನವಾಗಿ ನೋಡುತ್ತಿದ್ದಾರೆ ನ್ನುವುದಕ್ಕೆ ಇದೊಂದು ಉದಾಹರಣೆ ಸಾಕು.ರಾಜ್ಯದಲ್ಲಿ ಶೇ 33ರಷ್ಟು ಆದಿವಾಸಿಗಳು, ಶೇ 12ರಷ್ಟು ಪರಿಶಿಷ್ಟ ಜಾತಿ, ಶೇ 35 ರಷ್ಟು ಇತರೆ ಹಿಂದುಳಿದ ವರ್ಗಗಳು, ಉಳಿದಿದ್ದು ಮುಸ್ಲಿ ಮರು ಮತ್ತು ಬೇರೆ ಸಮುದಾಯಗಳು. ಇತರೆ ಹಿಂದುಳಿದ ಜಾತಿಗಳಲ್ಲಿ ಸಾಹು ಪ್ರಬಲ ಸಮಾಜ.ಕೃಷಿ ಬಿಟ್ಟರೆ, ಅರಣ್ಯ ಉಪ ಉತ್ಪನ್ನಗಳೇ ಜೀವನೋಪಾಯದ ಮೂಲ. ಕಲ್ಲಿದ್ದಲು, ಕಬ್ಬಿಣದ ಅದಿರು ಸೇರಿದಂತೆ ಬಗೆಬಗೆಯ ಖನಿಜ ಸಂಪತ್ತಿದೆ. ಸಿಮೆಂಟ್‌ ಮತ್ತು ಉಕ್ಕು ಒಳ ಗೊಂಡಂತೆ ಹಲವು ಉದ್ಯಮಗಳಿವೆ.ಯೂನಿಸೆಫ್‌ ವರದಿಯಂತೆ ವರ್ಷಕ್ಕೆ ಸುಮಾರು 22 ಸಾವಿರ ಮಕ್ಕಳು ಹುಟ್ಟಿದ ಒಂದು ವಾರದಲ್ಲಿ ಸಾಯುತ್ತಿವೆ. ಮೂರು ವರ್ಷ ದೊಳಗಿನ ಪ್ರತಿ ನಾಲ್ಕು ಮಕ್ಕಳಲ್ಲಿ ಒಂದು ಅಪೌಷ್ಟಿಕತೆಯಿಂದ ಕಣ್ಣು ಮುಚ್ಚುತ್ತಿದೆ. ನವ ಜಾತ ಶಿಶುಗಳ ಸಾವಿನ ಸಂಖ್ಯೆ ಶೇ 57ರಷ್ಟಿದೆ. ಹದಿವಯಸ್ಸಿನ ಹೆಣ್ಣುಮಕ್ಕಳು ರಕ್ತಹೀನತೆ ಯಿಂದ ಬಳಲುತ್ತಿದ್ದಾರೆ. ರಾಜ್ಯ ಸರ್ಕಾರದ ಜತೆಗೂಡಿ ಯೂನಿಸೆಫ್ ಮಕ್ಕಳ ಸುರಕ್ಷತೆಗೆ ಮುಂದಾಗಿದೆ.ಸರ್ಕಾರಕ್ಕೆ ಮಕ್ಕಳ ಶಾಲಾ ದಾಖಲಾತಿ ದೊಡ್ಡ ಸವಾಲು. ಅರ್ಧಕ್ಕೆ ಶಾಲೆ ಬಿಡುವ ಮಕ್ಕಳ ಪ್ರಮಾಣ ಕಳವಳ ಹುಟ್ಟಿಸುತ್ತಿದೆ. ಹಳ್ಳಿಗಳಲ್ಲಿ ವೈದ್ಯರ ಅಲಭ್ಯತೆ, ಶಾಲಾ ಶಿಕ್ಷಕರ ಹುದ್ದೆ ಭರ್ತಿ ತಲೆನೋವಾಗಿದೆ. ಹಳ್ಳಿಗಳು ಹಾಗೂ ಆದಿವಾಸಿ ಹಾಡಿಗಳಿಗೆ ಕೆಲಸ ಮಾಡಲು ಬರುವವರ ಸಂಖ್ಯೆ ಕಡಿಮೆ.ಅರಣ್ಯ, ಖನಿಜ ಹಾಗೂ ಕೃಷಿ ವಲಯದಲ್ಲಿ ಸಂಪದ್ಭರಿತವಾಗಿದ್ದರೂ ಛತ್ತೀಸಗಡ ಹಿಂದುಳಿದ ರಾಜ್ಯವೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ದೇಶದ ಉಳಿದೆಲ್ಲ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚುವರಿ ವಿದ್ಯುತ್‌ ಉತ್ಪಾದಿಸುತ್ತಿದೆ. ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ.  ಇಲ್ಲಿ ಕರ್ನಾಟಕ ಸೇರಿದಂತೆ ಅನೇಕ ರಾಜ್ಯಗಳು ವಿದ್ಯುತ್‌ ಉತ್ಪಾ ದನಾ ಘಟಕಗಳ ಸ್ಥಾಪನೆಗೆ ಮುಂದಾಗಿವೆ. ಛತ್ತೀಸಗಡ ಪಡಿತರ ವಿತರಣಾ ವ್ಯವಸ್ಥೆ ಕುರಿತು ಯೋಜನಾ ಆಯೋಗ ಮೆಚ್ಚುಗೆ ವ್ಯಕ್ತಪಡಿಸಿದೆ.‘ಛತ್ತೀಸಗಡದ ಆರ್ಥಿಕ ಪ್ರಗತಿ ದರ ಶೇ 11. 4ರಷ್ಟಿದೆ . ಅತ್ಯುತ್ತಮವಾದ ವಿಮಾನ ನಿಲ್ದಾಣ, ರಾಷ್ಟ್ರೀಯ ಹೆದ್ದಾರಿ ಜತೆ ಸಂಪರ್ಕ ಕಲ್ಪಿಸುವ ರಸ್ತೆಗಳಿವೆ.  ರಾಯಪುರದಲ್ಲಿ ಹೊಸ ರಾಜಧಾನಿ ನಿರ್ಮಾಣ ಆಗುತ್ತಿದೆ’ ಎಂದು ರಮಣ್‌ಸಿಂಗ್‌ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.ರಾಜ್ಯ ಸರ್ಕಾರ 1.70 ಲಕ್ಷ ಕೋಟಿ ಮೊತ್ತದ ಬಂಡವಾಳ ಹೂಡಿಕೆ ಒಡಂಬಡಿಕೆಗೆ ಸಹಿ ಹಾಕಿದೆ. ಇದರಲ್ಲಿ ಶೇ 40 ಭಾಗ ಜಾರಿ ಯಾಗಿದೆ. ಕೆಲವು ಜಾರಿ ಹಂತದಲ್ಲಿವೆ ಎನ್ನುತ್ತಾರೆ ಈ ಅಧಿಕಾರಿ.ಛತ್ತೀಸಗಡ ಸರ್ಕಾರಕ್ಕೆ ನಕ್ಸಲರ ಹಾವಳಿ ದೊಡ್ಡ ಶಾಪ. ಜಲ್‌– ಜಮೀನ್‌ ಮತ್ತು ಜಂಗಲ್‌ ಘೋಷಣೆ ಮುಂದಿಟ್ಟುಕೊಂಡು ಆದಿ ವಾಸಿಗಳ ಹಕ್ಕುಗಳಿಗಾಗಿ  ನಕ್ಸಲರು ಸಶಸ್ತ್ರ ಹೋರಾಟ ನಡೆಸುತ್ತಿದ್ದಾರೆ. ಬಸ್ತರ್‌ ಪ್ರದೇಶ, ನಕ್ಸಲರ ಕಾರ್ಯಕ್ಷೇತ್ರ. ನೆರೆಯ ಆಂಧ್ರ ಮತ್ತು ಒಡಿಶಾದಲ್ಲೂ ಅವರು ಓಡಾಡಿಕೊಂಡಿದ್ದಾರೆ. 80ರ ದಶಕದಲ್ಲಿ ತಲೆ ಎತ್ತಿದ ನಕ್ಸಲ್‌ ಚಳವಳಿ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಮೊನ್ನೆ ಲಕ್ಷಕ್ಕೂ ಹೆಚ್ಚು ಮಂದಿ ಪೊಲೀಸರಿದ್ದರೂ ಸಭೆ ನಡೆಸಿ ದ್ದಾರೆ. ನಕ್ಸಲರನ್ನು ನಿಗ್ರಹಿಸುವುದಾಗಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿದೆ. ಈ ಬಗ್ಗೆ ಬಿಜೆಪಿ ಏನೂ ಮಾತನಾಡದೆ ಮೌನವಾಗಿದೆ.13 ವರ್ಷದಲ್ಲಿ ಛತ್ತೀಸಗಡ ಎರಡು ಪಕ್ಷಗಳ ಸರ್ಕಾರ ಕಂಡಿದೆ. ಮೊದಲ ಮೂರು ವರ್ಷ ಕಾಂಗ್ರೆಸ್‌, ಹತ್ತು ವರ್ಷ ಬಿಜೆಪಿ ಆಡಳಿತ ನಡೆ ಸಿವೆ. ಇದು ಮೂರನೆ ಚುನಾವಣೆ. ಎರಡು ಪ್ರಮುಖ ಪಕ್ಷಗಳು ಅಧಿಕಾರ ಹಿಡಿಯಲು ಪೈಪೋಟಿಗಿಳಿದಿವೆ. ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರನ್ನೇ ಬಿಜೆಪಿ ಬಿಂಬಿಸಿದೆ. ಹಾಲಿ ಮುಖ್ಯಮಂತ್ರಿ ನೇತೃತ್ವದಲ್ಲಿ ಚುನಾವಣೆ ಎದುರಿಸುವುದು ಬಿಜೆಪಿಯಲ್ಲಿ ನಡೆದು ಬಂದ ಪರಂಪರೆ. ಈಚೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನೇ ಬಿಂಬಿಸಲಾಗಿತ್ತು. ಹೋದ ವರ್ಷ ಗುಜರಾತ್‌ ಚುನಾವಣೆ  ಮೋದಿ ನಾಯಕತ್ವದಲ್ಲೇ ನಡೆದಿತ್ತು. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನೇ ಮುಂದಿಟ್ಟುಕೊಂಡು ಹೊರಟಿದೆ.ಛತ್ತೀಸಗಡ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಯಾರನ್ನೂ ಬಿಂಬಿಸಿಲ್ಲ. ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರಿಗೆ ಒಳ್ಳೆಯ ಹೆಸರಿಲ್ಲ. ಅವರನ್ನು ಬಿಂಬಿಸಿದರೆ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಜೋಗಿ ದುರಾ ಡಳಿತದಿಂದಾಗಿ ಬರೀ ಮೂರು ವರ್ಷದಲ್ಲೇ ಅಧಿಕಾರ ಕಳೆದುಕೊಂಡರು. ಅದನ್ನು ಪಕ್ಷದ ವರಿಷ್ಠರು ಇನ್ನೂ ಮರೆತಿಲ್ಲ.ಮೇ 25ರ ನಕ್ಸಲರ ದಾಳಿಗೆ ಅನೇಕರು ಬಲಿ ಯಾದ ಬಳಿಕ ರಾಜ್ಯ ಕಾಂಗ್ರೆಸ್‌ ಪಕ್ಷವನ್ನು ನಾಯಕರ ಕೊರತೆ ಕಾಡಿದೆ. ಉಳಿದಿರುವ ಮುಖಂಡರಲ್ಲಿ ಒಗ್ಗಟ್ಟಿಲ್ಲ. ಮೂರ್ನಾಲ್ಕು ನಾಯಕರಿಗೆ ಮೂರ್ನಾಲ್ಕು ಗುಂಪು. ಅಜಿತ್‌ ಜೋಗಿ ಅವರದ್ದು ಒಂದು ಬಣ. ಎಐಸಿಸಿ ಖಜಾಂಚಿ ಮೋತಿಲಾಲ್‌ ವೋರಾ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಚರಣ್‌ದಾಸ್‌ ಮಹಾಂತ ಅವರದು ಇನ್ನೊಂದು ಗುಂಪು. ವೋರಾ ಮತ್ತಿತ ರರಿಗೆ ಹೈಕಮಾಂಡ್‌ ಬೆಂಬಲವಾಗಿ ನಿಂತಿರುವುದು ಗುಟ್ಟಾಗಿ ಉಳಿದಿಲ್ಲ.ನಂದಕುಮಾರ್‌ ಪಟೇಲ್‌ ಹತ್ಯೆ ಬಳಿಕ ಜೋಗಿ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷರಾಗಲು ಬಯ ಸಿದ್ದರು. ಹೈಕಮಾಂಡ್‌ ಅದಕ್ಕೆ ಅವಕಾಶ ಕೊಡಲಿಲ್ಲ. ಕೇಂದ್ರ ಸಚಿವ ಚರಣ್‌ ದಾಸ್‌ ಮಹಾಂತ ಅವರನ್ನು ನೇಮಿಸಿತು. ಜೋಗಿ ಅಷ್ಟಕ್ಕೆ ಸುಮ್ಮ ನಾಗಿಲ್ಲ. ಸಣ್ಣ ಪುಟ್ಟ ಕಿತಾಪತಿ ಮಾಡುತ್ತಲೇ ಇದ್ದಾರೆ. ಪಕ್ಷದ ಹೈಕಮಾಂಡ್‌ ಅನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದಾರೆ.ಮಾಜಿ ಮುಖ್ಯಮಂತ್ರಿ ಕಣದಲ್ಲಿ ಇಲ್ಲ ದಿದ್ದರೂ ಪತ್ನಿ ರೇಣು ಮತ್ತು ಪುತ್ರ ಅಮಿತ್‌ ಅವರಿಗೆ ಟಿಕೆಟ್‌ ಕೊಡಿಸಲು ಸಫಲರಾಗಿದ್ದಾರೆ.  ಬಹಳಷ್ಟು ಜೋಗಿ ಬೆಂಬಲಿಗರಿಗೆ ಕಾಂಗ್ರೆಸ್‌ ಮೊದಲು ಟಿಕೆಟ್‌ ನಿರಾಕರಿಸಿತ್ತು. ಇದರಿಂದ ಸಿಟ್ಟಿಗೆದ್ದ ಮಾಜಿ ಮುಖ್ಯಮಂತ್ರಿ ಪ್ರತ್ಯೇಕ ಸಭೆ ಗಳನ್ನು ನಡೆಸಿದರು. ಹೈಕಮಾಂಡ್‌ಗೆ ಪರೋಕ್ಷ ವಾಗಿ ಎಚ್ಚರಿಕೆ ಸಂದೇಶ ರವಾನಿಸಿದರು. ರಾಜ್ಯ ದಲ್ಲಿ ಎರಡು ಸಲ ಸೋತಿರುವ ಕಾಂಗ್ರೆಸ್‌ ಮಾಜಿ ಮುಖ್ಯಮಂತ್ರಿ ಒತ್ತಡಕ್ಕೆ ಮಣಿಯಿತು.ಜೋಗಿ ಈಗಲೂ ಸುಮ್ಮನಿರುವಂತೆ ಕಾಣುವು ದಿಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯ ಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿಯಲಿದ್ದಾರೆ. ಅವ ರನ್ನು ಕಡೆಗಣಿಸುವುದು ಹೈ ಕಮಾಂಡ್‌ಗೆ ಕಷ್ಟ ವೆಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿದೆ.

‘ನಾಯಕರೇ ಇಲ್ಲದ ಪಕ್ಷ  ಕಾಂಗ್ರೆಸ್‌ . ಆ ಪಕ್ಷಕ್ಕೆ ಹೆಸರಿಗೊಬ್ಬ ನಾಯಕರಿಲ್ಲ’ ಎಂದು ಬಿಜೆಪಿ ಪ್ರಚಾರ ಮಾಡುತ್ತಿದೆ. ಕೇಂದ್ರದ ಹಗ ರಣಗಳು, ಸಿಬಿಐ ದುರ್ಬಳಕೆ, ಭಯೋತ್ಪಾದನೆ ಹಾಗೂ ನಕ್ಸಲರನ್ನು ಬಗ್ಗುಬಡಿಯಲು ಯುಪಿಎ    ವಿಫಲವಾಗಿದೆ ಎಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ.‘ರಮಣ್‌ಸಿಂಗ್‌ ದಕ್ಷ ಮುಖ್ಯಮಂತ್ರಿ. ಒಳ್ಳೆಯ ಆಡಳಿತ ನೀಡಿದ್ದಾರೆ. ಯಾವುದೇ  ಭ್ರಷ್ಟಾ ಚಾರದ ಆರೋಪಗಳಿಲ್ಲ. ಅವರೊಬ್ಬ ಸೌಮ್ಯ ಸ್ವಭಾವದ ನಾಯಕ’ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಛತ್ತೀಸಗಡದ ಮತದಾರರು ರಮಣ್‌ಸಿಂಗ್‌ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡುತ್ತಿದ್ದಾರೆ. ‘ಬಿಜೆಪಿ ಸರ್ಕಾರ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದೆ. ಅವರ ಕೆಲಸದ ಬಗ್ಗೆ ಯಾವ  ತಕ ರಾರಿಲ್ಲ. ಪುನಃ ಅವರು ಆಯ್ಕೆಯಾದರೆ ಅಭಿ ವೃದ್ಧಿ ಕೆಲಸ ಗಳು ಆಗುತ್ತವೆ’ ಎಂಬುದು ಕೆಲವರ ಅಭಿ ಪ್ರಾಯ. ಆದರೆ, ಹತ್ತು ವರ್ಷ ಆಡಳಿತ ನಡೆಸಿದ ಬಿಜೆಪಿ ಸರ್ಕಾರ ಬದಲಾಗಬೇಕು. ಹೊಸ ಸರ್ಕಾರ ಬರಬೇಕು ಎಂಬ ನಿಲುವು ಕೆಲವರದ್ದು. ಅಸಮಾಧಾನ, ಗುಂಪುಗಾರಿಕೆ ಬರೀ ಕಾಂಗ್ರೆಸ್‌ಗೆ ಸೀಮಿತವಲ್ಲ. ಬಿಜೆಪಿ ಇದರಿಂದ ಹೊರತಲ್ಲ. ರಮಣ್‌ಸಿಂಗ್‌ ಕೆಲವು ಪ್ರಮುಖ ನಾಯಕರನ್ನು ಪಕ್ಕಕ್ಕೆ ಸರಿಸಿದ್ದಾರೆ. ರಾಯಗಡದ ರಾಜವಂಶಸ್ಥ ದಿವಂಗತ ದಿಲೀಪ್‌ ಸಿಂಗ್‌ ಜುದೇವ್‌ ಬೆಂಬಲಿಗರಿಗೆ ಟಿಕೆಟ್‌ ನಿರಾಕರಿಸ ಲಾಗಿದೆ. ಅನ್ಯಾಯಕ್ಕೊಳಗಾದ ಮುಖಂಡರು ರಮಣ್‌ ಸಿಂಗ್ ಅವರ ರಾಜನಂದಗಾಂವ್‌ ಕ್ಷೇತ್ರದಲ್ಲಿ ಮುಖ್ಯಮಂತ್ರಿ ವಿರುದ್ಧ ತಿರುಗಿ ಬಿದ್ದಿದ್ದಾರೆ.ರಮಣ್‌ಸಿಂಗ್‌ ಚುನಾವಣೆ ಹೊಣೆಯನ್ನು ಏಕಾಂಗಿಯಾಗಿ ನಿಭಾಯಿಸಿದ್ದಾರೆ. ಬೇರೆ ಯಾವ ನಾಯಕರೂ ಹಸ್ತಕ್ಷೇಪ ಮಾಡಲು ಅವಕಾಶ ಕೊಟ್ಟಿಲ್ಲ. ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರಿಗೂ ಮಹತ್ವ ನೀಡಿಲ್ಲ. ನೆಪ ಮಾತ್ರಕ್ಕೆ ಅವರು ಬಂದು ಹೋಗಿದ್ದಾರೆ. ಅಡ್ವಾಣಿ, ಅರುಣ್‌ ಜೇಟ್ಲಿ, ಸುಷ್ಮಾ ಸ್ವರಾಜ್‌ ಎಲ್ಲರಂತೆ ಪ್ರಚಾರ ಮಾಡಿದ್ದಾರೆ.

ಛತ್ತೀಸಗಡ ಬಿಜೆಪಿಯಲ್ಲಿ ರಮಣ್‌ಸಿಂಗ್‌ ಅವರೇ ಜನಪ್ರಿಯ ನಾಯಕ. ಅವರಿಗೆ ಮತ್ತೊ ಬ್ಬರ ಬೆಂಬಲ ಬೇಕಿಲ್ಲ. ಅವರೇ ಸ್ಟಾರ್‌ ಪ್ರಚಾರ ಕರು. ಈ ಚುನಾವಣೆಯೂ ಅವರ ಜನಪ್ರಿ ಯತೆ– ಸಾಧನೆಗಳ ಅಗ್ನಿ ಪರೀಕ್ಷೆ ಎಂಬ ವ್ಯಾಖ್ಯಾನ ಸ್ಥಳೀಯ ಬಿಜೆಪಿ ವಲಯದಲ್ಲಿದೆ.ಛತ್ತೀಸಗಡ ವಿಧಾನಸಭೆ ಒಟ್ಟು 90 ಕ್ಷೇತ್ರ ಗಳನ್ನು ಒಳಗೊಂಡಿದೆ. ಇದರಲ್ಲಿ 46 ಸ್ಥಾನ ಗೆದ್ದ ವರು ಸರ್ಕಾರ ಮಾಡುವ ಅರ್ಹತೆ ಪಡೆಯು ತ್ತಾರೆ. ಕಳೆದ ಸಲ ಬಿಜೆಪಿ 50 ಸ್ಥಾನ ಗೆದ್ದಿತ್ತು. ಕಾಂಗ್ರೆಸ್‌ 38 ಮತ್ತು ಬಿಎಸ್‌ಪಿ ಎರಡು ಸ್ಥಾನ ಪಡೆದಿದ್ದವು. ಬಸ್ತರ್‌ ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಮೆರೆದಿತ್ತು. ಕಾಂಗ್ರೆಸ್‌ ನೆಲ ಕಚ್ಚಿತ್ತು.ಈ ಚುನಾವಣೆಯಲ್ಲಿ ಬಸ್ತರ್‌ ಬಿಜೆಪಿ ಕೋಟೆ ಅಲುಗಾಡುತ್ತಿದೆ. ಕಾಂಗ್ರೆಸ್ ಈ ಕೋಟೆಗೆ ಲಗ್ಗೆ ಹಾಕುವಂತೆ ಕಾಣುತ್ತಿದೆ. ಜಾತ್ಯತೀತ ಪಕ್ಷಗಳು ಕಾಂಗ್ರೆಸ್‌ ಹಾದಿಗೆ ಅಡ್ಡಿಯಾಗದಿದ್ದರೆ ಕಾಂಗ್ರೆಸ್‌– ಬಿಜೆಪಿ ನಡುವಿನ ಪೈಪೋಟಿ ಕುತೂಹಲದ ಘಟ್ಟ ಮುಟ್ಟುವುದು ನಿಶ್ಚಿತ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry