ಬಿಜೆಪಿ ಸೋಲಿಸುವ ಶಕ್ತಿ ವಿರೋಧ ಪಕ್ಷಗಳಿಗಿಲ್ಲ

7

ಬಿಜೆಪಿ ಸೋಲಿಸುವ ಶಕ್ತಿ ವಿರೋಧ ಪಕ್ಷಗಳಿಗಿಲ್ಲ

ರಾಮಚಂದ್ರ ಗುಹಾ
Published:
Updated:
ಬಿಜೆಪಿ ಸೋಲಿಸುವ ಶಕ್ತಿ ವಿರೋಧ ಪಕ್ಷಗಳಿಗಿಲ್ಲ

ಆಡಳಿತಾರೂಢ ಬಿಜೆಪಿಯ ‘ವಿರೋಧ ಪಕ್ಷಗಳು’ ಎಂದು ಗುರುತಿಸಿಕೊಂಡಿರುವ ಪಕ್ಷಗಳಿಗೆ ಅನ್ವಯ ಮಾಡಬಹುದಾದ ಹಲವು ಗುಣವಾಚಕಗಳಿವೆ. ಭ್ರಷ್ಟ, ಸ್ವಜನಪಕ್ಷಪಾತಿ, ದುರ್ಬಲ, ಪುಕ್ಕಲ, ನಿರ್ಜೀವ, ಉತ್ಸಾಹಶೂನ್ಯ, ಸೋಮಾರಿ ಮತ್ತು ಅದಕ್ಷ ಎಂಬುದರಿಂದ ಈ ಪಟ್ಟಿಯನ್ನು ಆರಂಭಿಸಬಹುದು.

ಕೊನೆಯ ಎರಡು ಲಕ್ಷಣಗಳು ಇತ್ತೀಚಿನ ವಾರಗಳಲ್ಲಿ ಹೆಚ್ಚು ಎದ್ದು ಕಾಣಿಸಿವೆ. ಮಧ್ಯಪ್ರದೇಶದ ಮಂದ್‌ಸೌರ್‌ನಲ್ಲಿ ರೈತರ ಪ್ರತಿಭಟನೆ ಮತ್ತು ಅವರ ಮೇಲೆ ಪೊಲೀಸರು ಗುಂಡು ಹಾರಿಸಿದ ನಂತರ ಅಲ್ಲಿಗೆ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ನೀಡಿದ್ದರು. ಸೋಮಾರಿಯಲ್ಲದ ಯಾವುದೇ ರಾಜಕಾರಣಿ ಅಲ್ಲಿಯೇ ಮೊಕ್ಕಾಂ ಹೂಡಿ ಹೋರಾಟ ನಡೆಸುತ್ತಿದ್ದ ರೈತರ ಜತೆ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದರು.  ತಪ್ಪೆಸಗಿದ ಅಧಿಕಾರಿಗಳಿಗೆ ಶಿಕ್ಷೆ ವಿಧಿಸುವ ತನಕ, ಸಂತ್ರಸ್ತ ರೈತರ ಕುಟುಂಬಕ್ಕೆ ಸಾಕಷ್ಟು ಪರಿಹಾರ ದೊರೆಯುವ ತನಕ ಮತ್ತು ರೈತರ ಸಂಕಷ್ಟ ನಿವಾರಣೆಗೆ ಮಧ್ಯಪ್ರದೇಶ ಸರ್ಕಾರವು ಪರಿಹಾರೋಪಾಯಗಳನ್ನು ಕೈಗೊಳ್ಳುವತನಕ ಅಲ್ಲಿಯೇ ಇರುತ್ತಿದ್ದರು.

ಆದರೆ ರಾಹುಲ್‌ ಗಾಂಧಿ ಅವರು ಮಂದ್‌ಸೌರ್‌ಗೆ ಭೇಟಿ ಕೊಟ್ಟರು, ಫೋಟೊ ತೆಗೆಸಿಕೊಂಡರು, ದೆಹಲಿಗೆ ಹಿಂದಿರುಗಿದರು ಮತ್ತು ತಕ್ಷಣವೇ ರಜೆ ಕಳೆಯುವುದಕ್ಕಾಗಿ ಯುರೋಪ್‌ನತ್ತ ಹಾರಿದರು.

ರಾಷ್ಟ್ರಪತಿ ಹುದ್ದೆಗೆ ಸಮರ್ಥ ಅಭ್ಯರ್ಥಿಯೊಬ್ಬರನ್ನು ಆಯ್ಕೆ ಮಾಡುವಲ್ಲಿ ಆಗಿರುವ ವಿಳಂಬವೂ ವಿರೋಧ ಪಕ್ಷಗಳ ಅದಕ್ಷತೆಗೆ ಕನ್ನಡಿ ಹಿಡಿದ ಇನ್ನೊಂದು ಅಂಶ. ವಿದ್ವಾಂಸ ಮತ್ತು ರಾಜತಂತ್ರಜ್ಞ ಗೋಪಾಲಕೃಷ್ಣ ಗಾಂಧಿ ಅವರ ಹೆಸರು ವಿರೋಧ ಪಕ್ಷಗಳು ಪರಿಗಣನೆಗೆ ತೆಗೆದುಕೊಂಡ ಹೆಸರುಗಳಲ್ಲಿ ಮುಖ್ಯವಾದುದಾಗಿತ್ತು. ಅವರು ಎಷ್ಟೊಂದು ಉನ್ನತ ವ್ಯಕ್ತಿತ್ವ ಹೊಂದಿದ್ದಾರೆ ಎಂದರೆ, ಬೇರೆ ಯಾವ ವಿಚಾರದಲ್ಲಿಯೂ ಒಮ್ಮತ ಸಾಧ್ಯವೇ ಇಲ್ಲದ ಮಮತಾ ಬ್ಯಾನರ್ಜಿ ಮತ್ತು ಸೀತಾರಾಂ ಯೆಚೂರಿ ಅವರು ಗೋಪಾಲಕೃಷ್ಣ ಗಾಂಧಿ ಅವರ ಬಗ್ಗೆ ಆದರ ಹೊಂದಿದ್ದಾರೆ ಮತ್ತು ಅವರಿಗೆ ಬೆಂಬಲ ಸೂಚಿಸಿದ್ದಾರೆ. ಅತ್ಯಂತ ದೊಡ್ಡ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ನೇತೃತ್ವ ವಹಿಸಿಕೊಂಡು ಗೋಪಾಲಕೃಷ್ಣ ಗಾಂಧಿ ಅವರನ್ನು ಅಭ್ಯರ್ಥಿಯಾಗಿ ಪ್ರಕಟಿಸಿದ್ದರೆ ಅದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿತ್ತು. ಹಾಗಿದ್ದರೂ ರಾಷ್ಟ್ರಪತಿ ಚುನಾವಣೆ ಗೆಲ್ಲುವಷ್ಟು ಬೆಂಬಲ ಬಿಜೆಪಿಗೇ ಇರುತ್ತಿತ್ತು. ಆದರೆ ನೈಜ ಸ್ಪರ್ಧೆ ನಡೆಯುತ್ತಿತ್ತು ಮತ್ತು 2019ರ ಲೋಕಸಭಾ ಚುನಾವಣೆಗೆ ಈಗಿನಿಂದಲೇ ರಂಗ ಸಜ್ಜುಗೊಳ್ಳುತ್ತಿತ್ತು. ವಿರೋಧ ಪಕ್ಷಗಳ ಜಡತ್ವದ ನಡುವೆಯೇ ಅಭ್ಯರ್ಥಿಯನ್ನು ಪ್ರಕಟಿಸಿ ಆ ಮೂಲಕ ಇಡೀ ಚರ್ಚೆ ತಮ್ಮ ಪರವಾಗಿ ರೂಪುಗೊಳ್ಳುವಂತೆ ನರೇಂದ್ರ ಮೋದಿ ಮತ್ತು ಅಮಿತ್‌ ಷಾ ಅವರು ನೋಡಿಕೊಂಡರು. ಕಾಂಗ್ರೆಸ್‌ ಅಧ್ಯಕ್ಷರ ಮೌನ ಮತ್ತು ನಿಷ್ಕ್ರಿಯತೆ ಇಂತಹ ಅವಕಾಶವನ್ನು ಅವರಿಗೆ ಕೊಟ್ಟಿತು.

ಈ ಎರಡು ಪ್ರಕರಣಗಳು ನನ್ನ ವಾದ ಏನು ಎಂಬುದನ್ನು ಸ್ಪಷ್ಟಪಡಿಸುತ್ತವೆ– ಕುಟುಂಬದ ಹಿಡಿತದಲ್ಲಿರುವ ಕಾಂಗ್ರೆಸ್‌ ಪಕ್ಷವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ಅಪ್ರಸ್ತುತವಾಗುತ್ತಾ ಸಾಗುತ್ತಿದೆ. ತಾನು ರಾಷ್ಟ್ರೀಯ ಪಕ್ಷ ಎಂಬ ಮನೋಭಾವವನ್ನಾದರೂ ಕಾಂಗ್ರೆಸ್‌ ಹೊಂದಿದೆ. ಆದರೆ ಬಿಜೆಪಿಯನ್ನು ವಿರೋಧಿಸುವ ಇತರ ಪಕ್ಷಗಳು ಒಂದೊಂದು ರಾಜ್ಯಕ್ಕಷ್ಟೇ ಸೇರಿದ್ದಾಗಿವೆ ಮತ್ತು ಸಾಮಾನ್ಯವಾಗಿ ಆ ರಾಜ್ಯದ ಒಂದು ಸಾಮಾಜಿಕ ಗುಂಪಿಗೆ ಸೀಮಿತವಾಗಿವೆ. ಈ ಸಣ್ಣ ಪಕ್ಷಗಳು ನಿರಂಕುಶ ನಾಯಕನ ಅಧೀನದಲ್ಲಿರುತ್ತವೆ ಅಥವಾ ತೀವ್ರವಾದ ಭ್ರಷ್ಟಾಚಾರದಲ್ಲಿ ಮುಳುಗಿರುತ್ತವೆ. ಹಾಗಾಗಿ ಮುಂದಿನ ವರ್ಷಗಳಲ್ಲಿ ಬಿಜೆಪಿಗೆ ಈ ಪಕ್ಷಗಳು ಸವಾಲೊಡ್ಡಬಹುದು ಎಂಬ ನಿರೀಕ್ಷೆ ಇಲ್ಲ.

ವಿರೋಧ ಪಕ್ಷಗಳು ಎಂತಹ ದಯನೀಯ ಸ್ಥಿತಿಯಲ್ಲಿವೆ ಎಂದರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಗೆಲ್ಲವುದು ಬಹುತೇಕ ಖಚಿತ ಎಂದೇ ಆಗಿದೆ. ಬಿಹಾರವನ್ನು ಬಿಟ್ಟು ಉತ್ತರ ಮತ್ತು ಪಶ್ಚಿಮ ಭಾರತದ ಎಲ್ಲ ದೊಡ್ಡ ರಾಜ್ಯಗಳ ಸರ್ಕಾರಗಳೂ ಬಿಜೆಪಿಯ ನಿಯಂತ್ರಣದಲ್ಲಿವೆ. ಪೂರ್ವ ಮತ್ತು ದಕ್ಷಿಣ ಭಾಗದಲ್ಲಿ ಬಿಜೆಪಿಯ ಪ್ರಭಾವ ವ್ಯಾಪಕವಾಗಿಲ್ಲ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದರೆ, ಒಡಿಶಾದಲ್ಲಿ ಅಧಿಕಾರ ಪಡೆಯಲು ಯತ್ನಿಸುತ್ತಿದೆ. ಮುಂದಿನ ವರ್ಷ ನಡೆಯುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ 50:50ರಷ್ಟು ಇದೆ.

ಚುನಾವಣೆ ದೃಷ್ಟಿಯಲ್ಲಿ ನೋಡುವುದಾದರೆ, ಭಾರತದ ಹೆಚ್ಚಿನ ಭಾಗಗಳಲ್ಲಿ ಬಿಜೆಪಿ ಪ್ರಬಲವಾಗಿದೆ. ಈ ಪ್ರಾಬಲ್ಯ ಇನ್ನಷ್ಟು ಹೆಚ್ಚಲಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲಿನ ಹಿಡಿತವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡ ಬಳಿಕ ಮುಂದಿನ ಒಂದು ದಶಕದ ಅವಧಿಯಲ್ಲಿ ಭಾರತದ ಸಮಾಜ ಮತ್ತು ರಾಜಕಾರಣವನ್ನು ಬಿಜೆಪಿಯು ತನಗೆ ಬೇಕಾದ ರೀತಿಯಲ್ಲಿ ಮರುರೂಪಿಸಲಿದೆ. ಬಿಜೆಪಿಯನ್ನು ಅದರ ಈಗಿನ ಸ್ಥಿತಿಗೆ ತಂದಿಟ್ಟಿರುವ ಇಬ್ಬರು ವ್ಯಕ್ತಿಗಳಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಅವರೇ ಈ ಮರುರೂಪಿಸುವಿಕೆಯ ಮುನ್ನೆಲೆಯಲ್ಲಿ ಇರುತ್ತಾರೆ.

ಬಿಜೆಪಿಯ ರಾಜಕೀಯ ಪ್ರಾಬಲ್ಯದಿಂದಾಗಿ ಪ್ರಜಾಪ್ರಭುತ್ವ ಮತ್ತು ರಾಷ್ಟ್ರತ್ವದ (nationhood) ಮೇಲೆ ಉಂಟಾಗುವ ಪರಿಣಾಮ ಏನು? ಬಿಜೆಪಿಯೊಳಗೆ ಮೋದಿ ಮತ್ತು ಷಾ ಅವರ ಪ್ರಾಬಲ್ಯದ ಪರಿಣಾಮ ಏನು? ಮೋದಿ ಮತ್ತು ಷಾ ಅವರ ಬಗ್ಗೆ ನೆನಪಿಸಿಕೊಳ್ಳಬೇಕಾದ ಮೊದಲನೆಯ ಅಂಶ ಏನೆಂದರೆ, ಚುನಾವಣೆ ಗೆಲ್ಲಬಹುದು ಎಂಬ ಒಂದು ಅಂಶ ಬಿಟ್ಟರೆ, ಪ್ರಜಾಪ್ರಭುತ್ವದಲ್ಲಿ ಅವರಿಗೆ ಯಾವುದೇ ಬದ್ಧತೆ ಇಲ್ಲ. ಮೊದಲು ಗುಜರಾತ್‌ನಲ್ಲಿ ಹಾಗೂ ಈಗ ರಾಷ್ಟ್ರ ಮಟ್ಟದಲ್ಲಿ ಅವರು ತೋರಿಸಿಕೊಟ್ಟಿರುವಂತೆ, ಸರ್ಕಾರಗಳು ಮತ್ತು ರಾಜಕಾರಣಿಗಳು ಬದ್ಧವಾಗಿರಬೇಕಾದ ಶಾಸಕಾಂಗ ಮತ್ತು ಮಾಧ್ಯಮದ ಬಗ್ಗೆ ಅವರಿಗೆ ಅಸಡ್ಡೆ ಇದೆ.

ಸಂಸತ್ತಿನ ಬಗ್ಗೆ ಇರುವ ತಾತ್ಸಾರದ ಜತೆಗೆ ಮೋದಿ ಮತ್ತು ಷಾ ಅವರು ಭಾರತದ ಪ್ರಜಾಪ್ರಭುತ್ವದ ಸ್ವಾಯತ್ತ ಸಂಸ್ಥೆಗಳಾದ ನ್ಯಾಯಾಂಗ ಮತ್ತು ಸೇನೆಯನ್ನು ಕೂಡ ಶಿಥಿಲಗೊಳಿಸಲು ಬಯಸುತ್ತಿದ್ದಾರೆ. ಆರ್‌ಬಿಐನಂತಹ ನಿಯಂತ್ರಣ ಸಂಸ್ಥೆಗಳು ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳನ್ನು ತಮ್ಮ ಹತೋಟಿಗೆ ತೆಗೆದುಕೊಂಡು ತಮಗೆ ಇಷ್ಟ ಬಂದ ಹಾಗೆ ಬಳಸಿಕೊಳ್ಳಲು ಮತ್ತು ಆ ಮೂಲಕ ಅವುಗಳನ್ನು ಆಡಳಿತ ಪಕ್ಷದ ಉಪಕರಣಗಳಾಗಿಸುವುದನ್ನೂ ಅವರು ಬಯಸುತ್ತಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಗಳ ಬಗ್ಗೆ ಮೋದಿ ಮತ್ತು ಷಾ ಅವರು ಹೊಂದಿರುವ ಗ್ರಹಿಕೆ ಅತ್ಯಂತ ದುರ್ಬಲ. ಧಾರ್ಮಿಕ ಬಹುತ್ವದ ಬಗ್ಗೆಯೂ ಅವರಿಗೆ ಯಾವುದೇ ಬದ್ಧತೆ ಇಲ್ಲ. ನಮ್ಮ ರಾಷ್ಟ್ರೀಯ ಅಸ್ತಿತ್ವವನ್ನು ಯಾವುದೇ ಒಂದು ಧರ್ಮ ಅಥವಾ ಭಾಷೆ ನಿರ್ಧರಿಸಬಾರದು ಅಥವಾ ಒತ್ತೆ ಇರಿಸಿಕೊಳ್ಳಬಾರದು ಎಂಬ ಬಗ್ಗೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಂವಿಧಾನ ಸಿದ್ಧಪಡಿಸಿದವರಿಗೆ ಖಚಿತತೆ ಇತ್ತು. ಆದರೆ ಆರ್‍ಎಸ್‍ಎಸ್‌ನಲ್ಲಿ ಬೆಳೆದ ಮೋದಿ ಮತ್ತು ಷಾ ಅವರು ಭಿನ್ನವಾಗಿ ಚಿಂತಿಸುತ್ತಾರೆ. ಹಿಂದೂಗಳಲ್ಲದವರು ಈ ನೆಲದ ಸಮಾನ ಪ್ರಜೆಗಳಲ್ಲ ಎಂಬುದು ಈ ಇಬ್ಬರು ಭಾರತದ ಬಗ್ಗೆ ಹೊಂದಿರುವ ನಿಲುವಾಗಿದೆ. ವಿಶೇಷವಾಗಿ ಮುಸ್ಲಿಮರು ಎರಡನೇ ದರ್ಜೆಯ ಸ್ಥಾನವನ್ನು ಒಪ್ಪಿಕೊಳ್ಳಬೇಕು ಎಂದು ಅವರು ಬಯಸುತ್ತಾರೆ. ಷಾ ಅವರ ನಡೆಯಲ್ಲಿ ಬಹುಸಂಖ್ಯಾತವಾದ ಅತ್ಯಂತ ಢಾಳಾಗಿ ಕಾಣಿಸುತ್ತದೆ (ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಿಂದ ಮುಸ್ಲಿಮರನ್ನು ಹೊರಗೆ ಇರಿಸುವುದು ಇಂತಹ ಒಂದು ಗಮನಾರ್ಹ ನಡೆ). ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಮುಗ್ಧ ಮುಸ್ಲಿಮರ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳ ಬಗ್ಗೆ ಮೋದಿ ಅವರು ಏನನ್ನೂ ಹೇಳುತ್ತಿಲ್ಲ. ಹೀಗಾಗಿ ಮೋದಿ ಅವರು ತಮ್ಮ ಜನಾಂಗದ್ವೇಷದ ಭೂತಕಾಲವನ್ನು ಬಿಟ್ಟು ಬೆಳೆದಿದ್ದಾರೆ ಎಂದು 2014ರಲ್ಲಿ ಯೋಚಿಸಿದವರು ಮರು ಚಿಂತನೆ ನಡೆಸಬೇಕಾಗಿದೆ. ದೂರದ ಪೋರ್ಚುಗಲ್‌ನಲ್ಲಿ ಕಾಳ್ಗಿಚ್ಚಿಗೆ ಬಲಿಯಾದವರಿಗೆ ಸಂತಾಪ ಸೂಚಿಸಿ ಮೋದಿ ಅವರು ಟ್ವೀಟ್ ಮಾಡುತ್ತಾರೆ. ಆದರೆ ತಮ್ಮದೇ ದೇಶದಲ್ಲಿ ತಮ್ಮದೇ ಪಕ್ಷದ ಕಾರ್ಯಕರ್ತರಿಂದ ಆಗಿರುವ ಹತ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ವಿರೋಧ ಪಕ್ಷಗಳು ಸಂಪೂರ್ಣ ಅಸ್ತವ್ಯಸ್ತವಾಗಿವೆ. ಆದರೆ ಪ್ರಜಾಪ್ರಭುತ್ವ ಎಂದರೆ ಪಕ್ಷ ರಾಜಕಾರಣ ಅಷ್ಟೇ ಅಲ್ಲ.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದ ಒಂದು ದೊಡ್ಡ ವರ್ಗ ಆಡಳಿತ ಪಕ್ಷದ ಮುಖವಾಣಿಯಾಗಿದೆ. ಆದರೆ ಕೆಲವು ಪತ್ರಿಕೆಗಳು, ಕೆಲವು ಸಂಪಾದಕರು ಮತ್ತು ವರದಿಗಾರರು ಬಿಜೆಪಿ ಮತ್ತು ಅದರ ನೇತೃತ್ವದ ಸರ್ಕಾರದ ಅಪರಾಧಗಳು ಮತ್ತು ತಪ್ಪುಗಳ ಬಗ್ಗೆ ನಿರ್ಭೀತಿಯಿಂದ ವರದಿ ಮಾಡುತ್ತಿದ್ದಾರೆ. ಕೆಲವು ವೆಬ್‌ಸೈಟ್‌ಗಳು ಕೂಡ ಸ್ವತಂತ್ರ ಮನೋಭಾವವನ್ನು ಉಳಿಸಿಕೊಂಡಿವೆ. ಈ ಮಧ್ಯೆ, ಬಲಪಂಥೀಯರ ಪರವಾಗಿ ಟ್ರೋಲ್ ಮಾಡಲು ಹಣ ಪಡೆದಿರುವವವರ ಉಪಟಳದ ನಡುವೆಯೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಜಾಪ್ರಭುತ್ವ ಮತ್ತು ಉದಾರವಾದಿ ನಿಲುವಿನ ಧ್ವನಿಗಳು ಕಾಣಿಸಿಕೊಳ್ಳುತ್ತಿವೆ ಮತ್ತು ಸಕ್ರಿಯವಾಗಿವೆ.

ಮುಖ್ಯವಾಹಿನಿ ಮತ್ತು ಸಾಮಾಜಿಕ ಜಾಲ ತಾಣಗಳನ್ನು ನಿಯಂತ್ರಿಸಲು ಬಿಜೆಪಿ ಸಾಕಷ್ಟು ಸಮಯ, ಹಣ ಮತ್ತು ಶಕ್ತಿಯನ್ನು ವ್ಯಯ ಮಾಡುತ್ತಿದ್ದರೂ ತಾರ್ಕಿಕ ಸಂವಾದಗಳು, ಸ್ವತಂತ್ರ ದಾಖಲೀಕರಣ ಮತ್ತು ವಿಶ್ಲೇಷಣೆಯನ್ನು ದಮನ ಮಾಡಲು ಸಾಧ್ಯವಾಗಿಲ್ಲ. ಇದಲ್ಲದೆ, ಹಿಂದುತ್ವವನ್ನು ದೃಢವಾಗಿ ವಿರೋಧಿಸುವ ಸಾಂವಿಧಾನಿಕ ದೇಶಪ್ರೇಮದ ಯೋಚನೆಗೆ ಬದ್ಧವಾಗಿರುವ ಲಕ್ಷಾಂತರ ಜನರು ಭಾರತದ ಸಮಾಜಗಳಲ್ಲಿ ಇದ್ದಾರೆ. ಈ ಭಾರತೀಯರಿಗೆ ತಮ್ಮ ದೇಶ ಹಿಂದೂ ಪಾಕಿಸ್ತಾನ ಆಗುವುದು ಬೇಕಿಲ್ಲ. ಏನು ತಿನ್ನಬೇಕು, ಏನು ಧರಿಸಬೇಕು, ಯಾರನ್ನು ಪ್ರೀತಿಸಬೇಕು ಮತ್ತು ಯಾರನ್ನು ಅಪಮಾನಿಸಬೇಕು ಎಂದು ತಮಗೆ ಯಾರೂ ಹೇಳುವುದನ್ನು ಇವರು ಬಯಸುವುದಿಲ್ಲ. ಎಪ್ಪತ್ತು ವರ್ಷಗಳ ಸ್ವಾತಂತ್ರ್ಯ ಮತ್ತು ಸಂವಿಧಾನ ಪ್ರಕಾರವಾದ ಜೀವನ ಜನರಲ್ಲಿ ನಿರಂಕುಶವಾದ ಮತ್ತು ಬಹುಸಂಖ್ಯಾತವಾದದ ವಿರುದ್ಧ ನಿಲ್ಲುವ ಅಭ್ಯಾಸವನ್ನು ಬೆಳೆಸಿಬಿಟ್ಟಿದೆ.

ಬಿಜೆಪಿ ಬಗೆಗಿನ ಈ ಸ್ವತಂತ್ರ, ಪಕ್ಷೇತರ ವಿರೋಧ ಕಾಲಕ್ರಮೇಣ ಸ್ಪುಟಗೊಂಡು ಒಂದು ಪಕ್ಷವಾಗಿ (ಅಥವಾ ಪಕ್ಷಗಳಾಗಿ) 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸೀತೇ? ಭಾರತದಲ್ಲಿಯೂ ಎಮ್ಯಾನುವೆಲ್ ಮ್ಯಾಕ್ರೊನ್ ರೀತಿಯ ವಿದ್ಯಮಾನ ರೂಪುಗೊಳ್ಳಬಹುದೇ? ಈ ಇತಿಹಾಸಕಾರ ಈ ಪ್ರಶ್ನೆಗಳಿಗೆ ಉತ್ತರಿಸುವುದು ಸಾಧ್ಯವಿಲ್ಲ. ಆದರೆ, ಈ ಅಂಕಣದ ತಿರುಳು ಏನು ಎಂಬುದನ್ನು ಇಲ್ಲಿ ಪುನರುಚ್ಚರಿಸಬಹುದು- ಪ್ರಜಾಪ್ರಭುತ್ವವನ್ನು ಚುನಾವಣೆ ಗೆಲ್ಲುವುದು ಅಥವಾ ಸೋಲುವುದಕ್ಕಷ್ಟೇ ಸೀಮಿತಗೊಳಿಸುವುದು ಅಥವಾ ಸಮೀಕರಿಸುವುದಕ್ಕೆ ಸಾಧ್ಯವಿಲ್ಲ. ಪ್ರಜಾಪ್ರಭುತ್ವ ಎಂದರೆ ಅದೊಂದು ಜೀವನ ವಿಧಾನ, ಮೌಲ್ಯ ವ್ಯವಸ್ಥೆ ಮತ್ತು ನಿತ್ಯವೂ ಅನುಸರಿಸಬೇಕಾದ ಅಂಶಗಳೇ ಹೊರತು ಪ್ರತಿ ಐದು ವರ್ಷಕ್ಕೊಮ್ಮೆ ಸುಪ್ತ ಸ್ಥಿತಿಯಿಂದ ಹೊರಗೆಳೆಯಬೇಕಾದುದು ಅಲ್ಲ. ಭಾರತದ ಬಹಳಷ್ಟು ಜನರಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಇಂತಹ ಗ್ರಹಿಕೆ ಇದೆ. ಹಾಗಾಗಿಯೇ ಚುನಾವಣೆಗಳಲ್ಲಿ ಒಂದೇ ಪಕ್ಷದ ಪ್ರಾಬಲ್ಯ ಇದ್ದಾಗಲೂ ಸರ್ಕಾರದ ನೀತಿಗಳು ಮತ್ತು ರಾಜಕಾರಣಿಗಳು ಸಾರ್ವಜನಿಕವಾಗಿ ಮುಟ್ಟಿನೋಡುವಂತಹ  ಟೀಕೆಗೆ ಒಳಗಾಗುತ್ತಾರೆ.

ಹಿಂದೆ, ಹಿಂದುತ್ವ ಸಿದ್ಧಾಂತವಾದಿಗಳು ಮುಸೋಲಿನಿ ಮತ್ತು ಹಿಟ್ಲರ್ ಬಗ್ಗೆ ಭಾರಿ ಆದರ ಹೊಂದಿದ್ದರು; ಈಗ, ಬಿಜೆಪಿ ಮುಖಂಡರು ನಿರ್ಲಜ್ಜ ಮತ್ತು ದಮನಕಾರಿ ಶೈಲಿಯನ್ನು ತೋರುತ್ತಿದ್ದಾರೆ; ಟೀಕಾಕಾರರನ್ನು ಸರ್ಕಾರದ ಅಧಿಕಾರ ಬಳಸಿ ಬೆದರಿಸುತ್ತಿದ್ದಾರೆ ಮತ್ತು ಕಿರುಕುಳ ನೀಡುತ್ತಿದ್ದಾರೆ; ಗೋ ಗೂಂಡಾಗಳು ಬೀದಿಯಲ್ಲಿ ಜನರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ- ಹೀಗಾಗಿಯೇ ಎಡಪಂಥೀಯ ಚಿಂತಕರು ‘ಧರ್ಮಾಂಧತೆ’ಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಆದರೆ ಇಂತಹ ಅತಿಶಯೋಕ್ತಿಯ ಮಾತುಗಳು ಭಾರತದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಇತಿಹಾಸವನ್ನು ಮುಕ್ಕಾಗಿಸುತ್ತವೆ ಮತ್ತು ಭಾರತದಲ್ಲಿನ ಜನತಾಂತ್ರಿಕ ಪ್ರವೃತ್ತಿಯನ್ನು ಅಲ್ಲಗಳೆಯುತ್ತವೆ. ಈಗಿನ ವಿರೋಧ ಪಕ್ಷಗಳು ಒಗ್ಗಟ್ಟಿನಲ್ಲಿರಲಿ, ಅಥವಾ ಛಿದ್ರವಾಗಿರಲಿ, ಬಿಜೆಪಿಯನ್ನು ಎದುರಿಸುವ ಅಥವಾ ತಡೆಯುವ ಶಕ್ತಿಯನ್ನು ಹೊಂದಿಲ್ಲ. ಆದರೆ, ಸವಾಲೆಸೆಯುವ, ಪ್ರಶ್ನಿಸುವ ಮತ್ತು ಆಡಳಿತ ಪಕ್ಷ ಹಾಗೂ ಅದರ ಮುಖಂಡರನ್ನು ಉತ್ತರದಾಯಿಗಳನ್ನಾಗಿಸುವುದನ್ನು ಭಾರತೀಯರು ಮುಂದುವರಿಸಲಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಂಥವರನ್ನು ಮೋದಿ ಮತ್ತು ಷಾ ಅವರು ಈಗಾಗಲೇ ಸೋಲಿಸಿರಬಹುದು. ಆದರೆ ನಮ್ಮ ಗಣರಾಜ್ಯಕ್ಕೆ ಪ್ರಜಾಪ್ರಭುತ್ವ ಮತ್ತು ಬಹುತ್ವದ ಮಾದರಿಯನ್ನು ಹಾಕಿಕೊಟ್ಟ ಅಂಬೇಡ್ಕರ್ ಮತ್ತು ನೆಹರೂ ಅಂಥವರ ಪರಂಪರೆ ನಮ್ಮಲ್ಲಿ ಇನ್ನೂ ಇದೆ. ಇದನ್ನು ಹಾನಿಗೊಳಿಸಲು ಹಿಂದುತ್ವವಾದಿಗಳು ಬಯಸುತ್ತಿದ್ದರೂ ಅದು ನಾಶವಾಗದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry