ಬಿಸಿಯೂಟ ತರಬಲ್ಲ ಹಾರುವ ತಟ್ಟೆಗಳು

7

ಬಿಸಿಯೂಟ ತರಬಲ್ಲ ಹಾರುವ ತಟ್ಟೆಗಳು

Published:
Updated:
ಬಿಸಿಯೂಟ ತರಬಲ್ಲ ಹಾರುವ ತಟ್ಟೆಗಳು

ಒಂದು ಸಣ್ಣ ಒಗಟಿನ ಪ್ರಶ್ನೆ: ಚಳ್ಳಕೆರೆಯ ಕುರಿಗಾರರನ್ನು, ಬಾಂಗ್ಲಾದೇಶದ ನುಸುಳು­ಕೋರರನ್ನು, ಫ್ಲಾರಿಡಾದ ಸೊಳ್ಳೆಗಳನ್ನು, ಪಾಕಿಸ್ತಾನದ ಮಿಲಿಟರಿಯನ್ನು ಕಂಗೆಡಿಸಿದ ಪುಟ್ಟ ಯಂತ್ರ ಯಾವುದು?ಅದು ಡ್ರೋನ್. ಅಂದರೆ, ಆಟಿಗೆ ವಿಮಾನ­ದಂತೆ ಕಾಣುವ ಚಾಲಕರಹಿತ ಹಾರುವಾಹನ. ಇಂಗ್ಲಿಷ್‌ನಲ್ಲಿ ಅವಕ್ಕೆ ಯುಎವಿ (ಅನ್‌ಮ್ಯಾನ್ಡ್ ಏರಿಯಲ್ ವೆಹಿಕಲ್) ಎಂತಲೂ ಹೇಳುತ್ತಾರೆ. ಈ ಕಳೆದ ಎರಡು ಮೂರು ವರ್ಷಗಳಲ್ಲಿ ಅವುಗಳ ಹಾರಾಟ ಅದೆಷ್ಟು ಹೆಚ್ಚಾಗಿದೆ ಎಂದರೆ- ನೀವು ಅಂತರಜಾಲಕ್ಕೆ ಹೊಕ್ಕು, ಡ್ರೋನ್ ಎಂಬ ಶೋಧಪದವನ್ನು ಕೊಟ್ಟರೆ ಪುತಪುತನೆ ಸಾವಿರ ಸುದ್ದಿಗಳು, ಚಿತ್ರಗಳು, ವಿಡಿಯೊದೃಶ್ಯಗಳು ಉದುರು­­ತ್ತವೆ. ಕೆಲವು ಉದಾಹರಣೆಗಳನ್ನು ನೋಡಿ:ಅಲ್‌ಖೈದಾ ರುದ್ರರಿಗೆ ಆಶ್ರಯ ಕೊಟ್ಟ ಯೆಮೆನ್ ದೇಶದ ಮೇಲೆ ಅಮೆರಿಕ ಇದುವರೆಗೆ ೨೧ ಬಾರಿ ಡ್ರೋನ್ ದಾಳಿ ನಡೆಸಿದೆ. ಹನ್ನೆರಡು ಮಂದಿ ಶಂಕಿತ ಉಗ್ರರು ಕಳೆದ ವಾರ ಹತ­ರಾಗಿದ್ದಾರೆ. ಕಾಂಗೋದ ಶಾಂತಿಪಡೆಯ ಮೇಲೆ ಕಣ್ಣಿಡಲೆಂದು ವಿಶ್ವಸಂಸ್ಥೆ ಹೊಸದಾಗಿ ಇಟಲಿ­ಯಲ್ಲಿ ತಯಾರಾದ ಡ್ರೋನ್‌ಗಳನ್ನು ಆಗಸ್ಟ್ ತಿಂಗಳಲ್ಲಿ ಖರೀದಿಸಿದೆ.

ಪೆರುವಿನ ದುರ್ಗಮ ಬೆಟ್ಟಗಳಲ್ಲಿ ಪುರಾತನ ಅವಶೇಷಗಳನ್ನು ಪತ್ತೆ ಹಚ್ಚಲು ಡ್ರೋನ್‌ಗಳ ಸೇವೆಯನ್ನು ಪುರಾತತ್ವ ವಿಜ್ಞಾನಿಗಳು ಬಳಸಲು ಸಿದ್ಧತೆ ನಡೆಸಿದ್ದಾರೆ. ಬಾಂಗ್ಲಾದೇಶದ ಗಡಿದಾಟಿ ಭಾರತದೊಳಕ್ಕೆ ನುಗ್ಗುವವರ ಮೇಲೆ ನಿಗಾ ಇಡಲು ಭಾರತದ ರಕ್ಷಣಾ ಇಲಾಖೆ ಇಂಥ ವಾಹನಗಳನ್ನು ಬಳಸುತ್ತಿದೆ. ಪಾಕಿಸ್ತಾನದ ಗಡಿಯ ಮೇಲೆ ಪಹರೆ ಇಡುವ ಪೂರ್ವ ಸಿದ್ಧತೆಯಾಗಿ ಈ ಚಟುವಟಿಕೆ ನಡೆದಿದೆ.

ಜೇನ್ನೊಣಗಳಂತೆ ಸಾವಿರ ಸಂಖ್ಯೆಯಲ್ಲಿ ದಾಳಿ ಮಾಡಬಲ್ಲ ಯುಎವಿಗಳ ವಿಡಿಯೊ ಚಿತ್ರಣವನ್ನು ಅಮೆರಿಕದ ವಾಯುಪಡೆ ಬಿಡುಗಡೆ ಮಾಡಿದೆ. ಪಾರಿವಾಳದಂತೆ ವಿದ್ಯುತ್ ತಂತಿಯ ಮೇಲೆ ಕೂತು ಅಲ್ಲಿಂದಲೇ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುತ್ತ ಚಳಿಮಳೆಯಲ್ಲೂ ಪಹರೆ ಕಾಯುವ ಡ್ರೋನ್‌ಗಳೂ ಸಿದ್ಧವಾಗಿವೆ.ಆಫ್ಘಾನಿಸ್ತಾನದ ಅಂಚಿನ ವಝೀರಿಸ್ತಾನ್ ಎಂಬ ಗಡಿಪ್ರಾಂತದ ಬುಡಕಟ್ಟು ಜನರ ಪಾಲಿಗೆ ಮಾರುದ್ದದ ಡ್ರೋನ್‌ಗಳು ದುಃಸ್ವಪ್ನವೇ ಆಗಿವೆ. ಜುಲೈ ತಿಂಗಳಲ್ಲಿ ಉಗ್ರ ಹಿಕ್ಕಾನಿ ತಂಡದ ೧೬ ಜನರನ್ನು ಡ್ರೋನ್‌ಗಳು ಕೊಂದು ಹಾಕಿವೆ. ಅಮೆರಿಕದಿಂದ ಪದೇ ಪದೇ ಹಾರಿ ಬರುವ ಈ ಯಂತ್ರಗಳು ಕೇವಲ ಸಮೀಕ್ಷೆಗೆಂದು ಬರುತ್ತಿವೆಯೊ ಅಥವಾ ಕ್ಷಿಪಣಿಗಳನ್ನು ತೂರಲು ಬರುತ್ತಿವೆಯೊ ಒಟ್ಟಾರೆ ಭಯದಿಂದ ಹಳ್ಳಿಗರ ಬದುಕೇ ಮೂರಾಬಟ್ಟೆ ಆಗಿದೆ.

ಮುಗ್ಧ ಜನರ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರು­ವುದರಿಂದ ಅಮೆರಿಕದ ಈ ಯಂತ್ರಗಳಿಗೆ ಬಿಡಿಭಾಗಗಳ ಸರಬರಾಜು ನಿಲ್ಲಿಸಬೇಕು ಎಂದು ಬ್ರಿಟನ್ನಿನ ಕೆಲವು ಪಾಕ್‌ಪರ ಸಂಘಟನೆಗಳು ತಮ್ಮ ದೇಶವನ್ನು ಒತ್ತಾಯಿಸಿವೆ. ಇತ್ತ ಭೂಮಿಯ ವಾತಾವರಣ ಬಿಸಿಯಾಗುತ್ತಿರು­ವುದರಿಂದ ಉತ್ತರ ಧ್ರುವದ ನಿರ್ಜನ ಪ್ರದೇಶ­ಗಳಲ್ಲಿ ಹಿಮದ ವ್ಯಾಪ್ತಿ ಎಷ್ಟು ಕಡಿಮೆಯಾಗಿದೆ ಎಂದು ಅಳತೆ ಮಾಡಲೆಂದು ಡ್ರೋನ್‌ಗಳು ಹೋಗುತ್ತಿವೆ.ಅಮೆರಿಕದ ಫ್ಲಾರಿಡಾ ಆಸುಪಾಸಿನ ನಡುಗಡ್ಡೆ­­ಗಳಲ್ಲಿ ಸೊಳ್ಳೆಗಳ ಉತ್ಪತ್ತಿಗೆ ಕಾರಣ­ವಾಗುವ ಅಗೋಚರ ನೀರಿನ ಹೊಂಡಗಳನ್ನು ಪತ್ತೆಹಚ್ಚಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ನಮ್ಮದೇ ಛತ್ತೀಸಗಡದ ಕಾಡುಗಳಲ್ಲಿ ನಕ್ಸಲರ ಅಡಗುತಾಣಗಳನ್ನು ಡ್ರೋನ್‌ಗಳೇ ಶೋಧಿಸುತ್ತಿವೆ. ಜರ್ಮನಿಯ ರೈಲ್ವೆ ನಿಲ್ದಾಣಗಳ ಗೋಡೆಗಳ ಮೇಲೆ ಕಾಟುಗೀಟು ಗೀಚುವ ಪುಂಡರ ತಂಡಗಳ ಮೇಲೆ ಕಣ್ಣಿಡಲು ಡ್ರೋನ್‌­ಗಳನ್ನು ಬಳಸಲು ರೈಲ್ವೆ ಕಂಪನಿಗೆ ಸರ್ಕಾರ ಅನುಮತಿ ನಿರಾಕರಿಸಿದೆ.

ಮತ್ತು- ತೀರ ಈಚಿನ ಸುದ್ದಿ ಏನೆಂದರೆ ಚೀನಾ ಮತ್ತು ಜಪಾನ್ ನಡುವೆ ಡ್ರೋನ್ ಕಾಳಗ ಕಾವೇರುತ್ತಿದೆ. ಅವೆರಡು ದೇಶಗಳ ನಡುವಣ ಸಮುದ್ರದಲ್ಲಿ ಸೆಂಕಾಕು ದ್ವೀಪಮಾಲೆ ಇದೆ. ಅಲ್ಲಿನ ಸರಣಿ ದ್ವೀಪಗಳ ತಳದಲ್ಲಿ ಭಾರೀ ದೊಡ್ಡ ತೈಲ ನಿಕ್ಷೇಪ ಇದೆಯೆಂದು ಅಂದಾಜು ಮಾಡಲಾಗಿದೆ. ಚೀನಾದ ಡ್ರೋನಾಚಾರ್ಯರ ಯುಎವಿ­ಗಳಿಂದಾಗಿ ಜಪಾನೀ ಜೆಟ್ ಪೈಲಟ್‌ಗಳು ಹೈರಾಣಾಗಿದ್ದಾರೆ. ಕನ್ನಡದಲ್ಲಿ ಅದಕ್ಕಿನ್ನೂ ಸಮರ್ಪಕ ಪದವೇ ಬಂದಿಲ್ಲ. ಆಗಲೇ ಎಷ್ಟೊಂದು ದೇಶಗಳಲ್ಲಿ ಈ ಯಂತ್ರಸಂತಾನ ಬಾವಲಿಗಳಂತೆ, ಮಿಡತೆಗಳಂತೆ ಹೊಕ್ಕು ಹೊರಡುತ್ತವೆ. ಶಾಂತಿಸ್ಥಾಪನೆಯ ಹೆಸರಿನಲ್ಲಿ ಹೊಸ ಅಸ್ತ್ರಗಳಾಗಿ ಬಂದ ಇವು ಈಗಂತೂ ವಾಣಿಜ್ಯ ರಂಗದಲ್ಲಿ ಹೊಸ ಹೊಸ ಪಡಖಾನೆಗಳ ಶೋಧ ನಡೆಸಿವೆ. ಅವುಗಳಲ್ಲಿ ನಮ್ಮ ಆಸಕ್ತಿಯನ್ನು ಕೆರಳಿಸಬಹುದಾದ ಮ್ಯಾಟರ್‌­­ನೆಟ್ ಎಂಬ ಪರಿಕಲ್ಪನೆಯನ್ನು ನೋಡೋಣ: ಮಾಹಿತಿ ವಿನಿಮಯಕ್ಕೆ ಅಂತರ­ಜಾಲ ಎಂಬ ಜಗದ್ವ್ಯಾಪಿ ವ್ಯವಸ್ಥೆ ಬಂದಿರುವ ಹಾಗೆ, ವಸ್ತುಗಳ ವಿನಿಮಯಕ್ಕೆ ದ್ರವ್ಯಜಾಲ ಎಂಬ ಹೊಸ ವ್ಯವಸ್ಥೆಯನ್ನು ಆರಂಭಿಸಲು ರಂಗಸಜ್ಜಿಕೆ ನಡೆದಿದೆ.

ಹಿಂದಿನ ಕಾಲದಲ್ಲಿ ಪತ್ರಗಳನ್ನು ಪಾರಿವಾಳಗಳ ಕಾಲಿಗೆ ಕಟ್ಟಿ ಹಾರಿಸಿ ಬಿಡುತ್ತಿದ್ದ ಹಾಗೆ ಈಗ ಡ್ರೋನ್‌ಗಳಿಂದಲೂ ಅಂಥದ್ದೇ ಸೇವೆ ಪಡೆಯುವ ಹೈಟೆಕ್ ಕನಸುಗಳು ಕಾರ್ಯರೂಪಕ್ಕೆ ಬರುತ್ತಿವೆ. ಕೊರಿಯರ್ ಕಂಪನಿಗಳ ವಿನಿಮಯ ಜಾಲವನ್ನೇ ಹೋಲುವ, ಆದರೆ ಆಕಾಶಮಾರ್ಗದಲ್ಲಿ ತ್ವರಿತವಾಗಿ ಚಿಕ್ಕ­ಪುಟ್ಟ ಸಾಮಗ್ರಿಗಳನ್ನು ರವಾನಿಸುವ ದ್ರವ್ಯಜಾಲ­ಗಳ ಹೊಸ ಲೋಕ ಇದು.

ಹೊನ್ನಾಳಿ ಸಮೀಪದ ನ್ಯಾಮತಿಯ ಗದ್ದೆಯಲ್ಲಿ ಹಾವು ಕಡಿಸಿಕೊಂಡ ವ್ಯಕ್ತಿಗೆ ಶಿವಮೊಗ್ಗದಿಂದ ಇಪ್ಪತ್ತೇ ನಿಮಿಷಗಳಲ್ಲಿ ತುರ್ತು ಔಷಧ ತಲುಪಿ ಆಕೆಯ ಜೀವ ಉಳಿಸುವಂತಾದರೆ? ಅಥವಾ ಬೆಂಗಳೂರಿನಂಥ ದಟ್ಟ ವಾಹನ ಸಂದಣಿ ಇರುವ ನಗರಗಳಲ್ಲಿ ಪೀಟ್ಸಾ ಅಥವಾ ಬಿರಿಯಾನಿ ಊಟದ ಪ್ಯಾಕೆಟ್‌­ಗಳನ್ನು ಹೊತ್ತ ಪುಟ್ಟ ಹಾರುವ ತಟ್ಟೆಗಳು ನಿಮ್ಮ ಬಾಲ್ಕನಿಗೇ ಬಂದು ಇಳಿಯುವಂತಾದರೆ? ಜೀವ ಉಳಿಸುವ, ಅಥವಾ ಬಿಸಿ ಊಟ ಉಣಿಸುವ ಅಂಥ ಹಾರುವ ತಟ್ಟೆ ಯಾರಿಗೆ ಬೇಡ?ಅಮೆರಿಕದ ಸಿಲಿಕಾನ್ ಕಣಿವೆಯಲ್ಲಿರುವ ಸಿಂಗ್ಯುಲಾರಿಟಿ ಯುನಿವರ್ಸಿಟಿಯ ಒಂದು ತಂಡ ಈ ಕಲ್ಪನೆಯನ್ನು ಸಾಕಾರಗೊಳಿಸಲು ಹೊರಟಿದೆ. ಆಂಡ್ರಿಯಾಸ್ ರಾಪ್ಟೊಪೌಲೋಸ್ ಎಂಬಾತ ಈ ಉದ್ದೇಶಕ್ಕೆಂದೇ ಮ್ಯಾಟರ್‌ನೆಟ್ ಹೆಸರಿನ ಕಂಪನಿಯೊಂದನ್ನು ಆರಂಭಿಸಿದ್ದಾನೆ. ಬಂಡವಾಳ ಸಲೀಸಾಗಿ ಹರಿದು ಬಂದಿದ್ದರಿಂದ ಹೊಸ ಮುದ್ದಾದ ವಿನ್ಯಾಸದ ಡ್ರೋನ್‌ಗಳು ಸಜ್ಜಾಗಿವೆ. ನಾಲ್ಕು ಪುಟ್ಟ ಬುಟ್ಟಿಗಳನ್ನು ಜೋಡಿಸಿ­ದಂತೆ ಕಾಣುವ ಇವುಗಳಿಗೆ ಹಾರುವ ಮೊದಲೇ ದಿಶಾ ನಿರ್ದೇಶನ ಕೊಡಬಹುದು.

ಅಥವಾ ರಿಮೋಟ್ ಮೂಲಕವೂ ಅದರ ಚಲನೆಯ ದಿಕ್ಕನ್ನು ನಿಯಂತ್ರಿಸಬಹುದು. ಉಪಗ್ರಹ­ಗಳಿಂದ ಜಿಪಿಎಸ್ ಸಂಕೇತಗಳನ್ನು ಗ್ರಹಿಸುತ್ತ ಸಾಗುವ ಇವುಗಳನ್ನು ಮೊದಲು ಹೈಟಿಯ ಹಳ್ಳಿಗಾಡಿನಲ್ಲಿ ಹಾರಾಡಿಸಿ ಪರೀಕ್ಷೆ ಮಾಡಲಾಗಿದೆ. ಗರಿಷ್ಠ ಎರಡು ಕಿಲೊ ತೂಕದ ವಸ್ತುಗಳನ್ನು ಹೇರಿ, ಡೊಮೀನಿಯನ್ ರಿಪಬ್ಲಿಕ್‌ನ ಜನನಿಬಿಡ ಪ್ರದೇಶದಲ್ಲೂ ಪರೀಕ್ಷಿಸ­ಲಾಗಿದೆ.

ಹೊಚ್ಚಹೊಸ, ಕ್ರಾಂತಿಕಾರಿ ತಂತ್ರ­ಜ್ಞಾನ­ವನ್ನು ಪರಿಚಯಿಸುವ ಪಾಪ್‌ಟೆಕ್ ಮೇಳ­ದಲ್ಲೂ ಇದು ಪ್ರದರ್ಶಿತಗೊಂಡು ಮೆಚ್ಚುಗೆ ಪಡೆದಿದೆ. ಆದರೂ ಹತ್ತಾರು ಕಠಿಣ ಸವಾಲು­ಗಳನ್ನು ಎದುರಿಸಬೇಕಿದೆ. ಎಲ್ಲಕ್ಕಿಂತ ದೊಡ್ಡ ಸವಾಲೆಂದರೆ ಬ್ಯಾಟರಿ,- ಅದು ದೊಡ್ಡದಿದ್ದರೆ ಭಾರ; ಚಿಕ್ಕದಿದ್ದರೆ ದುರ್ಬಲ! ಆದ್ದರಿಂದಲೇ ಮೊಬೈಲ್ ಟವರ್‌ಗಳಂತೆ ಅಲ್ಲಲ್ಲಿ ಬ್ಯಾಟರಿ ರೀಚಾರ್ಜಿಂಗ್ ಗೋಪುರಗಳನ್ನು ನಿರ್ಮಿಸ­ಬೇಕು. ರೀಚಾರ್ಜಿಂಗ್ ಸಮಯವನ್ನು ಉಳಿಸ­ಬೇಕೆಂದರೆ ಅಲ್ಲಿ ಬ್ಯಾಟರಿಯನ್ನು ಬದಲಿಸಿ­ಕೊಳ್ಳುವ ಸ್ವಯಂಚಾಲಿತ ವ್ಯವಸ್ಥೆ ಇರಬೇಕು.

ಅದಕ್ಕೆಂದೇ ಇಂಟರ್‌ನೆಟ್ ಮಾದರಿಯ ಸಂಚಾರ­ಜಾಲವನ್ನು ರಚಿಸಬೇಕು. ಎರಡನೆ­ಯದಾಗಿ ಅದು ಯಾವುದೇ ರೀತಿಯಲ್ಲೂ ಜನರಿಗೆ ಅಥವಾ ಕಟ್ಟಡಗಳಿಗೆ ಡಿಕ್ಕಿ ಹೊಡೆಯ­ಬಾರದು ಅಥವಾ ವಿದ್ಯುತ್ ತಂತಿಗಳಿಗೆ ಸಿಕ್ಕಿ ನೇತಾಡಬಾರದು. ಮನುಷ್ಯರಿಗೆ ಡಿಕ್ಕಿ ಹೊಡೆ­ದರೂ ನೋವುಗಾಯ ಆಗದಂತೆ ನವಿರಾದ ವಿನ್ಯಾಸದ ಡ್ರೋನ್‌ಗಳು ರೂಪುಗೊಂಡಿವೆ ನಿಜ. ಅದೇ ಕಾರಣಕ್ಕೆ ಯಾರಾದರೂ ಅದನ್ನು ಹೊಡೆದು ಬೀಳಿಸದಂತೆ, ಎಗರಿಸದಂತೆ ಆತ್ಮರಕ್ಷಣಾ ಅಥವಾ ಆಕ್ರಂದನ ವ್ಯವಸ್ಥೆ ಅದಕ್ಕಿರಬೇಕು. ಯಾವುದೇ ಊರಲ್ಲಿ ಇದರ ಹಾರಾಟವನ್ನು ಆರಂಭಿಸುವುದಾದರೂ ಅಲ್ಲಿನ ವಾಯುವಾಹನ ಸಂಚಾರ ನಿಯಮಗಳಲ್ಲಿ ಬದಲಾವಣೆ ಮಾಡಿರಬೇಕು.ಡ್ರೋನ್‌ಗಳ ಶಾಂತಿಯುತ ಬಳಕೆಯ ಸಾಧ್ಯತೆ ಎಷ್ಟೆಲ್ಲ ಇವೆಯೆಂದರೆ, ಸಂಚಾರ ನಿಯಮ­ಗಳನ್ನು ಹೇರುವ ಪೊಲೀಸರಿಗೇ ಅದು ಮೊದಲು ಬೇಕು. ಮುಷ್ಕರ, ಅಪಘಾತ, ಆಕಸ್ಮಿಕಗಳು ನಡೆದ ತಾಣಕ್ಕೆ ತುರ್ತಾಗಿ ಹೋಗಿ ಆಕಾಶ­ದಿಂದಲೇ ಯಥಾರ್ಥ ಚಿತ್ರಣ ಪಡೆಯಬಹುದು. ಅದೇ ಕಾರಣಕ್ಕೆ ಮಾಧ್ಯಮಗಳಿಗೂ ಅದು ಬೇಕು. ಇನ್ನು, ಆನೆಗಳ ದಾಳಿ, ಚಿರತೆಗೆ ಸಂಕಟ, ಅರಣ್ಯ ಒತ್ತುವರಿ ಮುಂತಾದವುಗಳ ಚಿತ್ರಣ ಪಡೆಯಲು ಅರಣ್ಯ ಇಲಾಖೆಗೆ ಇದು ಬೇಕು.

ಕೆರೆಗಳ ಒತ್ತುವರಿ, ಕಡಲ ಕೊರೆತದ ನಷ್ಟ ಪರಿಹಾರ, ಗಡಿವಿವಾದ ಇತ್ಯರ್ಥವೇ ಮುಂತಾದ ಕಾರಣಗಳಿಗೆ ಕಂದಾಯ ಇಲಾಖೆಗೂ ಇದು ಬೇಕು. ಗಣಿ ಅಕ್ರಮ ದಾಖಲಿಸಲು ಲೋಕಾ­ಯುಕ್ತಕ್ಕೆ, ಮನೆ ಅಕ್ರಮ ಸಕ್ರಮ ಮಾಡಲು ನಗರಪಾಲಿಕೆಗೆ, ತ್ಯಾಜ್ಯ ವಿಲೇವಾರಿ ನೋಡಲು ಮಾಲಿನ್ಯ ನಿಯಂತ್ರಣ ಮಂಡಲಿಗೆ, ಕೊನೆಗೆ ಗಾಂಧೀನಗರದ ಸಿನಿಮಾ ನಿರ್ಮಾಪಕರಿಗೂ ಈ ತಂತ್ರಜ್ಞಾನ ಬಾಡಿಗೆಗೆ ಬೇಕು.

ಸಿ.ಎಮ್. ಸಾಹೇಬರು ಚಿಕ್ಕಮಗಳೂರಿಗೆ ಹೆಲಿಕಾಪ್ಟರ್‌ನಲ್ಲಿ ಧಾವಿಸಿದರೆ ಅವರಿಗೆ ಆಕಾಶದಿಂದಲೇ ಹಾರ ಬೀಳಿಸಿ ಬೇಳೆ ಬೇಯಿಸಿಕೊಳ್ಳಬಲ್ಲ ಭೂಪತಿ­ಗಳಿಗೂ ಅದು ಬಾಡಿಗೆಗೆ ಬೇಕು. ಇಷ್ಟೆಲ್ಲ ಸಾಧ್ಯತೆ ಇರುವುದರಿಂದಲೇ ಮ್ಯಾಟರ್‌ನೆಟ್ ಕಂಪನಿಯ ಜೊತೆಗೆ ಗೂಗಲ್ ಈಗಾಗಲೇ ಒಪ್ಪಂದಕ್ಕೆ ಸಜ್ಜಾಗಿದೆಯೆಂದು ಸುದ್ದಿ ಬಂದಿದೆ. ಅಂದಮೇಲೆ ತಡವಿನ್ನೇನು? ಒಂದು ಬಾಟಲಿ ರಕ್ತವನ್ನು ಹೊತ್ತು ಬೀದಿತುಂಬ ಘೀಳಿಡುತ್ತ ಸಾಗುವ ಅಂಬುಲೆನ್ಸ್ ಗಲಾಟೆಯಿಂದ ರೋಸಿಹೋದವರು ಇಂಥ ಆಕಾಶಬುಟ್ಟಿಗಳು ಬೇಗ ಬರಲವ್ವಾ ಎಂದು ಹಾರೈಸಬಹುದು. ಪಕ್ಷಿಪ್ರೇಮಿಗಳಂತೂ ಇದು ದುಃಸ್ವಪ್ನದ ಮಾತೇ ಸರಿ. ಹಾಗೆಂದು ಈ ಹೊಸ ಕಂಟಕ ಸದ್ಯಕ್ಕಂತೂ ಬರಲಿಕ್ಕಿಲ್ಲ ಎಂದು ಹೇಳುವುದೂ ತಪ್ಪಾದೀತು. ಈಗೀಗ ತಂತ್ರಜ್ಞಾನ ಅದೆಷ್ಟು ವೇಗದಲ್ಲಿ ಜನಬಳಕೆಗೆ ಬರುತ್ತದೆ ಎಂಬುದು ನಮಗೆ ಗೊತ್ತೇ ಇದೆ. ಮೂವತ್ತು ವರ್ಷಗಳ ಹಿಂದೆ ‘ಸುಧಾ’ದಲ್ಲಿ ಫ್ಯಾಕ್ಸ್ ಬಂತು ಫ್ಯಾಕ್ಸ್ ಹೆಸರಿನ ಲೇಖನ ಪ್ರಕಟವಾಗಿತ್ತು.

ಅದರ ಕೊನೆಯಲ್ಲಿ ಇನ್ನೇನು ನಗರದಲ್ಲಿರುವ ಮಗನಿಗೆ ಹೊಸ ಚೊಣ್ಣವನ್ನೂ ಕ್ರಿಕೆಟ್ ಬ್ಯಾಟನ್ನೂ ಅಪ್ಪ ಫ್ಯಾಕ್ಸ್ ಮೂಲಕವೇ ಕಳಿಸಬಹುದಾದ ವ್ಯವಸ್ಥೆ­ಯೂ ಬಂದೀತು ಎಂದು ಬರೆದಿತ್ತು. ಕ್ರಿಕೆಟ್ ಬ್ಯಾಟಿನ ಅಚ್ಚು ತೆಗೆಯಬಹುದಾದ ಥ್ರೀಡೀ ಪ್ರಿಂಟರ್‌ಗಳು ಆಗಲೇ ಬಂದಿವೆ. ಪಾಲಿವಿನೈಲ್ ಚೊಣ್ಣವನ್ನೂ ಮುದ್ರಿಸಬಹುದಾಗಿದೆ. ಅಂಜನ ಹಚ್ಚಿದಂತೆ ಸುದ್ದಿಚಿತ್ರಗಳನ್ನು ಅಂಗೈಯಲ್ಲೇ ತಿಕ್ಕಿ ನೋಡಬಲ್ಲ ಸೆಲ್‌ಫೋನ್‌ಗಳು ಬರುತ್ತವೆಂದು ಹತ್ತು ವರ್ಷಗಳ ಹಿಂದೆ ಯಾರಿಗೆ ಗೊತ್ತಿತ್ತು?ಅದೆಲ್ಲ ಸರಿ, ಆದರೆ ಆರಂಭದಲ್ಲಿ ಚಳ್ಳಕೆರೆ ಕುರಿಗಾರರ ಪ್ರಸ್ತಾಪ ಬಂತಲ್ಲ, ಅವರೇಕೆ ಡ್ರೋನ್‌ಗಳಿಂದ ಕಂಗಾಲಾಗಬೇಕು? ಉತ್ತರ ತೀರಾ ಸರಳವಾಗಿದೆ: ಚಳ್ಳಕೆರೆಯ ಬಳಿ ರಕ್ಷಣಾ ಸಂಶೋಧನಾ ಇಲಾಖೆಯವರು ಹೊಸ ಹೊಸ ಡ್ರೋನ್‌ಗಳ ಪರೀಕ್ಷೆಗೆಂದು ೪೨೯೦ ಎಕರೆ ಒಣಭೂಮಿಯನ್ನು ವಶಪಡಿಸಿಕೊಂಡಿದ್ದಾರೆ. ಹಾರುವ ತಟ್ಟೆಯ ಸಮೂಹವೇ ಬಂದಿಳಿದಂತೆ ಅಲ್ಲಿ ಇಸ್ರೊ, ಪರಮಾಣು ಇಲಾಖೆ, ಐಐಎಸ್‌ಸಿ ಮುಂತಾದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಆ ವಿಶಾಲ ಭೂಪ್ರದೇಶವನ್ನು ತಮ್ಮ ಪ್ರಯೋಗ­ಭೂಮಿಯನ್ನಾಗಿ ಮಾಡಲಿವೆ.

ಶತಮಾನ­ಗಳಿಂದ ಅಲ್ಲಿನ ಪ್ರಕೃತಿಯ ಜೊತೆ ಬದುಕುತ್ತಿದ್ದ ಕುರಿಗಾರರು ಪೈಸಾ ಪರಿಹಾರವಿಲ್ಲದೆ ಜಾಗ ಖಾಲಿ ಮಾಡಬೇಕು. ಆದ್ದರಿಂದಲೇ ಸುತ್ತಲಿನ ಹತ್ತಾರು ಊರುಗಳ ಜನರು ಕಂಗಾಲಾ­ಗಿದ್ದಾರೆ. ಅಲ್ಲಿ ಹೊಸ ವಿನ್ಯಾಸದ ಡ್ರೋನ್‌ಗಳ ಪರೀಕ್ಷೆ ಅದೆಷ್ಟೇ ಸುರಕ್ಷಿತ ವಿಧಾನದಲ್ಲಿ ನಡೆದರೂ ಅವು ಸಿಡಿಮದ್ದು ಹೊತ್ತು ಸಾಗಬಲ್ಲ ವಾಹನವಾದೀತೆ ವಿನಾ ಗ್ರಾಮೀಣ ಜನರಿಗೆ ಔಷಧ, ಬ್ಯಾಂಡೇಜು ಒಯ್ಯುವ ಹಾರುಬುಟ್ಟಿ ಆಗಲಾರದು. ಅಂಥ ಜನೋಪಕಾರಿ ತಂತ್ರಜ್ಞಾನವನ್ನು ನಮ್ಮ ಮಿಲಿಟರಿ ಶೋಧಿಸಿ ಬಿಡುಗಡೆ ಮಾಡಿದ್ದು ಎಲ್ಲಾದರೂ ಉಂಟೆ? 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry