ಶುಕ್ರವಾರ, ಡಿಸೆಂಬರ್ 13, 2019
17 °C

ಬಿಹಾರದ ಬಿರುಗಾಳಿಯ ಹಿಂದೆ ಮೂರನೆಯವರು...?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಬಿಹಾರದ ಬಿರುಗಾಳಿಯ ಹಿಂದೆ ಮೂರನೆಯವರು...?

ರಾಜಕೀಯವೇ ಹಾಗೆ, ಅದರಷ್ಟು ಅನಿರೀಕ್ಷಿತವಾದುದು ಇನ್ನೊಂದು ಇರಲಾರದು. ಅಲ್ಲಿ ಇಂದು ಶತ್ರುಗಳು ಎಂದೆನಿಸಿದವರು ನಾಳೆ ಮಿತ್ರರು ಆಗುತ್ತಾರೆ;  ಮಿತ್ರರು ಶತ್ರುಗಳೂ ಆಗುತ್ತಾರೆ. ಅದಕ್ಕೆ ಕಾರಣಗಳು ಆಯಾ ಸಂದರ್ಭದಲ್ಲಿ ಇರುತ್ತವೆಯೇ ಅಥವಾ ಕಾಲವೇ ಅದನ್ನು ಸೃಷ್ಟಿಸುತ್ತದೆಯೇ ಎಂದು ಹೇಳುವುದು ಕಷ್ಟ. ಬಿಹಾರದಲ್ಲಿ ಬೀಸುತ್ತಿರುವ ರಾಜಕೀಯ ಬಿರುಗಾಳಿ ನೋಡಿದರೆ ಅಲ್ಲಿನ ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಮತ್ತು ಅವರ ಹೊಸಕಾಲದ ಮಿತ್ರ ಲಾಲುಪ್ರಸಾದ್‌ ನಡುವಣ ಸಂಬಂಧ ಮುರಿಯುವ ಹಂತಕ್ಕೆ ಬಂದು ಮುಟ್ಟಿದೆ. ನಿತೀಶ್‌ ಮತ್ತು  ಲಾಲು ಅವರ ನಡುವಿನದು ಕೇವಲ ಎರಡು ವರ್ಷಗಳಿಗಿಂತ ಕಡಿಮೆ ಅವಧಿಯ ಸಂಬಂಧ. 2015ರ ವಿಧಾನಸಭೆ ಚುನಾವಣೆಯಲ್ಲಿ  ರಾಜಕೀಯ ಲಾಭಕ್ಕಾಗಿ ಜನ್ಮತಳೆದ ಸಂಬಂಧವದು. ಅದುವರೆಗೆ ಆ ಎರಡು ಪಕ್ಷಗಳ ನಡುವೆ ಸಂಬಂಧವೇ ಇರಲಿಲ್ಲ. ಒಂದು ಪೂರ್ವ ದಿಕ್ಕಾದರೆ, ಇನ್ನೊಂದು ಪಶ್ಚಿಮ ದಿಕ್ಕು. ಅದಕ್ಕೆ ಕಾರಣವಿತ್ತು, ಎರಡೂ ಪಕ್ಷಗಳು ಒಂದೇ ಮತ ಬ್ಯಾಂಕಿನ ಮೇಲೆ ಕೈಯೂರಿದ್ದುವು.

ಸೈದ್ಧಾಂತಿಕವಾಗಿ ಎರಡೂ ಪಕ್ಷಗಳ ನಡುವೆ ಅಂಥ ವ್ಯತ್ಯಾಸ ಇಲ್ಲದೇ ಇದ್ದರೂ ವೈಯಕ್ತಿಕ ಮಟ್ಟದಲ್ಲಿ ತೀವ್ರವಾದ ಸಮಸ್ಯೆಗಳು ಇದ್ದುವು. ಹಾಗೆ ನೋಡಿದರೆ ಲಾಲು ಪ್ರಸಾದ್‌ ಮತ್ತು ನಿತೀಶ್ ಕುಮಾರ್‌ 1970ರ ದಶಕದಲ್ಲಿ, ಕಾಂಗ್ರೆಸ್‌ ವಿರುದ್ಧದ ಹೋರಾಟದಲ್ಲಿ, ಜೊತೆಯಾಗಿ ಇದ್ದವರು. ಇಬ್ಬರದೂ ಸಮಾಜವಾದಿ ಹಿನ್ನೆಲೆ. 1994ರಲ್ಲಿ ಅವರ ದಾರಿಗಳು ಬೇರೆಯಾದುವು. ನಿತೀಶ್‌ ಅವರು ಜಾರ್ಜ್‌ ಫರ್ನಾಂಡಿಸ್‌ ಅವರ ಜೊತೆಯಾಗಿ ಜನತಾದಳವನ್ನು ಬಿಟ್ಟು ಹೊರಗೆ ಬಂದರು. ಇಬ್ಬರೂ ಸೇರಿಕೊಂಡು ಸಮತಾಪಕ್ಷವನ್ನು ಕಟ್ಟಿದ್ದರು. ನಂತರ ಇಬ್ಬರೂ ಬಿಜೆಪಿ ನೇತೃತ್ವದ ಎನ್‌ಡಿಎ ಭಾಗವಾದರು. ಆದರೆ, ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರು ಮುಂಚೂಣಿಗೆ ಬರುತ್ತಿದ್ದಾರೆ ಮತ್ತು ಅವರು ಇನ್ನೇನು ರಾಷ್ಟ್ರ ರಾಜಕಾರಣದಲ್ಲಿ ಕೇಂದ್ರ ಸ್ಥಾನಕ್ಕೆ ಬರುತ್ತಾರೆ ಎನಿಸಿದಾಗ ನಿತೀಶ್‌ ಅವರು ಎನ್‌ಡಿಎ ಮೈತ್ರಿಕೂಟದಿಂದ ದೂರ ಸರಿಯ ತೊಡಗಿದರು. ಅದಕ್ಕೆ ಮುಖ್ಯ ಕಾರಣ, ರಾಜ್ಯದಲ್ಲಿನ ತಮ್ಮ ಮತ ಬುನಾದಿ ಕುಸಿಯಬಹುದು ಎಂಬ ಅಳುಕು. ಆ ಅಳುಕಿನಿಂದಾಗಿಯೇ  ತಮ್ಮ ಸರ್ಕಾರದಲ್ಲಿ ಇದ್ದ ಬಿಜೆಪಿಯ 11 ಮಂದಿ ಸಚಿವರನ್ನು ವಜಾ ಮಾಡಲು ಶಿಫಾರಸು ಮಾಡುವ ಅವರು ವಿಧಾನಸಭೆಯಲ್ಲಿ ವಿಶ್ವಾಸಮತವನ್ನೂ ಯಾಚಿಸುತ್ತಾರೆ. ಇದೆಲ್ಲ ಆದುದು 2013ರಲ್ಲಿ.

ಅಂತಿಮವಾಗಿ 2014ರ ಲೋಕಸಭೆ ಚುನಾವಣೆ ಈ ದೂರವನ್ನು ಎಷ್ಟು ಹೆಚ್ಚಿಸಿತು ಎಂದರೆ ನಿತೀಶ್‌ ಅವರು ಬಿಹಾರದಲ್ಲಿ ಪರ್ಯಾಯ ರಾಜಕೀಯದ ಪರ್ವವನ್ನೇ ಬರೆದುಬಿಟ್ಟರು. ಆ ಚುನಾವಣೆಯಲ್ಲಿ ಬಿಜೆಪಿಗೆ ಸಿಕ್ಕ ಅಭೂತಪೂರ್ವ ಎನ್ನುವಂಥ ಗೆಲುವು ಅವರ ಜಂಘಾಬಲವನ್ನೇ ಉಡುಗಿಸಿತ್ತು. ಅವರು ಬಿಜೆಪಿ ಜೊತೆಗಿನ ಸಂಬಂಧ ಕಡಿದುಕೊಂಡಾಗಿತ್ತು. ಮತ್ತೆ ಅಧಿಕಾರಕ್ಕೆ ಬರಲು ಅವರಿಗೆ ಬೇರೆ ದಾರಿಗಳೇ ಇರಲಿಲ್ಲ. ಒಂದು ಕಾಲದಲ್ಲಿ ಪರಮ  ವೈರಿಯಾಗಿದ್ದ, ತಾವೇ ಕಟುವಾಗಿ ಟೀಕಿಸಿದ್ದ ಲಾಲು ಪ್ರಸಾದ್‌  ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ಅವರು ಕಂಡುಕೊಂಡರು. ಲಾಲು ಅವರಿಗಿಂತ ಇನ್ನೂ ಒಂದಿಷ್ಟು ಹೆಚ್ಚೇ ಎನ್ನುವಂತೆ ತಾವು ತಮ್ಮ ರಾಜಕೀಯ ಜೀವನದುದ್ದಕ್ಕೂ ವಿರೋಧಿಸಿಕೊಂಡು ಬಂದಿದ್ದ ಕಾಂಗ್ರೆಸ್‌ ಜೊತೆಗೂ ಮೈತ್ರಿಯಾಯಿತು. ಮುಖ್ಯವಾಗಿ ಇದು ಬಿಹಾರ ರಾಜ್ಯದಲ್ಲಿನ ಪ್ರಮುಖ ಜಾತಿಗಳ ಮೈತ್ರಿಯಾಗಿತ್ತು. ಈ ಮೂರು ಪಕ್ಷಗಳ ಮೈತ್ರಿಕೂಟಕ್ಕೆ ಮಹಾಘಟಬಂಧನ್‌ (ಎಂಜಿಬಿ)  ಎಂದು ಹೆಸರು ಕೊಟ್ಟರು.

2014ರ ಚುನಾವಣೆಯಲ್ಲಿ 40 ಲೋಕಸಭಾ ಸೀಟುಗಳಲ್ಲಿ 31ರಲ್ಲಿ ಗೆದ್ದಿದ್ದ ಬಿಜೆಪಿಗೆ ಒಂದೇ ವರ್ಷದ ಅಂತರದಲ್ಲಿ ಬಂದಿದ್ದ ವಿಧಾನಸಭೆ ಚುನಾವಣೆ ಪ್ರತಿಷ್ಠೆಯದಾಗಿತ್ತು. ಅದುವರೆಗೆ ಜೊತೆಗೆ ಇದ್ದ  ನಿತೀಶ್‌ ಅವರು ಬಿಜೆಪಿಯ ಬದ್ಧ ವೈರಿಯಾಗಿದ್ದ ಲಾಲುಪ್ರಸಾದ್‌ ಜೊತೆಗೆ ಕೈ ಜೋಡಿಸಿದ್ದರು, ಬಿಜೆಪಿಗೆ ಇದಕ್ಕಿಂತ ದೊಡ್ಡ ಪೆಟ್ಟು ಬೇರೆಯದು ಇರಲಿಲ್ಲ. ಒಂದು ರೀತಿ, ಗಾಯದ ಮೇಲೆ ಉಪ್ಪು ಸವರಿದಂತೆ ಆಗಿತ್ತು. ಹಾಗೆ ಅನಿಸಲು ಇನ್ನೂ ಒಂದು ಕಾರಣವಿತ್ತು : 1990ರ ದಶಕದಲ್ಲಿ ಲಾಲ್‌ಕೃಷ್ಣ ಅಡ್ವಾಣಿಯವರ ರಾಮ ರಥಯಾತ್ರೆಯನ್ನು ತಡೆದು ನಿಲ್ಲಿಸಿದವರು ಆಗ ಬಿಹಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಲಾಲುಪ್ರಸಾದ್‌ ಎಂಬುದು ಬಿಜೆಪಿಗೆ ಮರೆತು ಹೋಗಿರುತ್ತದೆಯೇ? ರಥಯಾತ್ರೆ ತಡೆದುದು ಮಾತ್ರವಲ್ಲ ಅಡ್ವಾಣಿಯವರನ್ನು ಲಾಲು ಅವರ ಸರ್ಕಾರ ಬಂಧಿಸಿಯೂ ಬಿಟ್ಟಿತ್ತು.

ನಿತೀಶ್‌ ಮತ್ತು ಲಾಲು ಅವರ ಮೈತ್ರಿಕೂಟವನ್ನು ಸೋಲಿಸಿ ಬಿಟ್ಟರೆ ಅವರಿಬ್ಬರೂ ಮತ್ತೆ ತಲೆಎತ್ತಲಾರರು ಎಂದು ಬಿಜೆಪಿ ಲೆಕ್ಕ ಹಾಕಿದ್ದರೆ ಅದು ಸಹಜವೇ ಆಗಿತ್ತು. ಅದೇ ಕಾರಣಕ್ಕಾಗಿ ನರೇಂದ್ರ ಮೋದಿ ಅವರೇ ಪ್ರಚಾರದ ನೇತೃತ್ವ ವಹಿಸಿದರು; 40ಕ್ಕೂ ಹೆಚ್ಚು ಸಭೆಗಳಲ್ಲಿ ಭಾಗವಹಿಸಿದರು. ಆಗ, ನಿತೀಶ್‌ ಮತ್ತು ಮೋದಿಯವರು ಪರಸ್ಪರರ ವಿರುದ್ಧ ಮಾಡಿದ ವಾಗ್ದಾಳಿಗೆ, ಬಳಸಿದ ಪದಗಳಿಗೆ ಯಾವ ಅಂಕೆಯೂ ಇರಲಿಲ್ಲ. ‘ನಿತೀಶ್‌ ಅವರ ಡಿಎನ್‌ಎದಲ್ಲಿಯೇ ಏನೋ ದೋಷವಿದೆ’ ಎಂದು ಮೋದಿ ಹೇಳಿದ್ದು ಆಗಲೇ!

ಆದರೆ, ನಿತೀಶ್‌, ಲಾಲು ಮತ್ತು ಕಾಂಗ್ರೆಸ್‌ ಪಕ್ಷಗಳು ಕೂಡಿಕೊಂಡು ರಚಿಸಿದ ಘಟಬಂಧನ್‌ ಎಷ್ಟು ಭದ್ರವಾಗಿತ್ತು ಮತ್ತು ರಾಜಕೀಯವಾಗಿ ಎಷ್ಟು ಮುಂಧೋರಣೆಯದಾಗಿತ್ತು ಎಂದರೆ ಚುನಾವಣೆ ಫಲಿತಾಂಶ ಬಂದಾಗ ಬಿಜೆಪಿಯ ಮಗ್ಗುಲು ಮುರಿದಿತ್ತು. ಮೈತ್ರಿಕೂಟದ ಜಾತಿ ಲೆಕ್ಕಾಚಾರ ಹಾಗೂ ವೈಯಕ್ತಿಕವಾಗಿ ನಿಷ್ಕಳಂಕ ಚಾರಿತ್ರ್ಯದ ನಿತೀಶ್‌ ನಾಯಕತ್ವ ಸೇರಿಕೊಂಡು ಮಹಾಘಟಬಂಧನ್‌ ಜಯಭೇರಿ ಬಾರಿಸಿತು. 243 ಸದಸ್ಯಬಲದ ಬಿಹಾರ ವಿಧಾನಸಭೆಯಲ್ಲಿ 171 ಸ್ಥಾನಗಳಲ್ಲಿ ಮೈತ್ರಿಕೂಟಕ್ಕೆ ಗೆಲುವು ಸಿಕ್ಕಿತು. ವಿಪರ್ಯಾಸ ಎಂದರೆ ಮೈತ್ರಿಕೂಟದಿಂದ ಜೆ.ಡಿ.ಯುಗೆ ಹೆಚ್ಚಿನ ಲಾಭ ಆಗುವ ಬದಲು ಆರ್‌.ಜೆ.ಡಿ ಮೇಲುಗೈ ಸಾಧಿಸಿತು. ಜೆ.ಡಿ.ಯು 71 ಸ್ಥಾನಗಳಲ್ಲಿ ಗೆದ್ದರೆ ಆರ್‌.ಜೆ.ಡಿ 80 ಸೀಟುಗಳಲ್ಲಿ ಗೆದ್ದಿತು. ಸರ್ಕಾರ ರಚನೆ ಸಮಯದಲ್ಲಿ ಮುಖ್ಯಮಂತ್ರಿ ಪದವಿ ನಿತೀಶ್‌ ಬಳಿ ಉಳಿದರೂ ಇದುವರೆಗೆ ಸಂಪುಟದಲ್ಲಿ ಯಾವ ಅಧಿಕಾರವನ್ನೂ ಚಲಾಯಿಸಿ ಅನುಭವ ಇರದ, ಆದರೆ, ಲಾಲು ಪ್ರಸಾದ್‌ ಅವರ ಮಗ ಎಂಬ ಏಕೈಕ ಕಾರಣಕ್ಕಾಗಿ ತೇಜಸ್ವಿ ಪ್ರಸಾದ್‌  ಉಪಮುಖ್ಯಮಂತ್ರಿ

ಯಾದರು. ಮಹತ್ವದ ಖಾತೆಗಳನ್ನೂ ಅವರ ಪಕ್ಷವೇ ಕಬಳಿಸಿಕೊಂಡಿತು.

ಈ ಚುನಾವಣೆ ಪ್ರಧಾನವಾಗಿ  ನಿತೀಶ್‌ ಮತ್ತು ಮೋದಿ ನಡುವಣ ಹೋರಾಟವಾಗಿತ್ತು. ನಿತೀಶ್‌ ಗೆದ್ದಿದ್ದರು. ಆಗಾಗಲೇ ಪ್ರಧಾನಿ ಹುದ್ದೆಗೆ ಏರಿದ್ದ ಮೋದಿಯವರು ಈ ಸೋಲನ್ನು ಅರಗಿಸಿಕೊಳ್ಳುವುದು ಸಾಧ್ಯ ಇರಲಿಲ್ಲ. ಬಹುಶಃ ಬಿಹಾರ ರಾಜ್ಯದಲ್ಲಿನ ಈಗಿನ ಬಿಕ್ಕಟ್ಟಿನ ಬೀಜಗಳು ಆಗಲೇ ಬಿದ್ದಿದ್ದುವು ಎಂದು ಅನಿಸುತ್ತದೆ.

ಬಿಹಾರ ದೊಡ್ಡ  ರಾಜ್ಯ. ಲೋಕಸಭೆಯಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ನಿರ್ಣಯಿಸುವ ರಾಜ್ಯಗಳಲ್ಲಿ ಅದೂ ಒಂದು. ಈಗ ಮಹಾಘಟಬಂಧನ್‌ ಕಾರಣವಾಗಿ ಅಲ್ಲಿ ಬಿಜೆಪಿ ನೆಲೆ ಕಳೆದುಕೊಂಡಿದೆ. ಮತ್ತೆ ತನ್ನ ನೆಲೆ ಭದ್ರಪಡಿಸಿಕೊಳ್ಳಬೇಕಾದರೆ ಘಟಬಂಧನದಲ್ಲಿ ಬಿರುಕು ಬಿಡಲೇ ಬೇಕು. ಬಿರುಕು ತಾನಾಗಿಯೇ ಬಿಡದೇ ಇದ್ದರೆ ಬಿರುಕು ಬೀಳುವಂತೆಯಾದರೂ ಮಾಡಬೇಕು. ಈಗ ಬಿರುಕು ಬಿದ್ದಿದೆ. ಅದಕ್ಕೆ ಎರಡು ಕಾರಣಗಳು ಇರಬಹುದು : ಮೊದಲ ಕಾರಣ, ಲಾಲು ಅವರ ಮಹತ್ವಾಕಾಂಕ್ಷೆ ಮತ್ತು ಅಧಿಕಾರದ ಲಾಲಸೆ. ಸಮಾಜವಾದಿ ಹಿನ್ನೆಲೆಯಿಂದ ರಾಜಕೀಯಕ್ಕೆ ಬಂದವರಾದರೂ ವಂಶಾಡಳಿತಕ್ಕೆ ಸಂಬಂಧಿಸಿದಂತೆ ಅವರು ಯಾರಿಗೂ ಕಡಿಮೆಯಿಲ್ಲ. ತಾನು, ಇಲ್ಲವಾದರೆ ತನ್ನ ಹೆಂಡತಿ, ಆಕೆಯೂ ಇಲ್ಲವಾದರೆ ಮಕ್ಕಳು ಅಧಿಕಾರದಲ್ಲಿ ಇರಬೇಕು ಎಂದು ಎಲ್ಲ ಪ್ರಾದೇಶಿಕ ಪಕ್ಷಗಳ ಹಾಗೆಯೇ ಲಾಲು ಕೂಡ ಯೋಚಿಸುವವರು.

ಕರ್ನಾಟಕದಲ್ಲಿ ಜನತಾದಳ (ಎಸ್‌) ಪಕ್ಷದ ನಿಲುವಿನಲ್ಲಿ ಬಿಹಾರದಲ್ಲಿ ಲಾಲು ನಿಲುವಿನಲ್ಲಿ ಮತ್ತು ಉತ್ತರ ಪ್ರದೇಶದಲ್ಲಿ ಮುಲಾಯಂ ನಿಲುವಿನಲ್ಲಿ ಅನೇಕ ಸಾಮ್ಯಗಳು ಇವೆ. ಈ ಎಲ್ಲ ಪಕ್ಷಗಳು ರಾಜಕೀಯವನ್ನು ಒಂದು ಜಹಗೀರಿನ ಹಾಗೆ ಪರಿಭಾವಿಸಿವೆ. ಈ ಎಲ್ಲ ಪಕ್ಷಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ಆಯಾ ಕುಟುಂಬದವರೇ ಇರುತ್ತಾರೆ. ಉಳಿದವರು ಗ್ರಹಗಳ ಹಾಗೆ ದೂರದಲ್ಲಿ ಸುತ್ತುತ್ತ ಇರುತ್ತಾರೆ. ಪಕ್ಷ ಅಧಿಕಾರಕ್ಕೆ ಬಂದಾಗಲೂ ಆಯಾ ಕುಟುಂಬದವರಿಗೇ ಪ್ರಮುಖ ಖಾತೆಗಳು ಸಿಗುತ್ತವೆ. ಇದೆಲ್ಲ ಒಂದು ರೀತಿ ಹಣ ಹಾಕಿ ಹಣ ತೆಗೆಯುವ ಕೆಲಸ. ಸೂಟ್‌ಕೇಸ್‌ಗಳ ಮಾತು ಬರುವುದು ಕೂಡ ಈ ಹಿನ್ನೆಲೆಯಲ್ಲಿಯೇ. ಅದರಲ್ಲಿ ಅಂಥ ರಹಸ್ಯವಾದುದು ಏನೂ ಇರುವುದಿಲ್ಲ. ಕುಟುಂಬದ ಒಳಗೇ ಅಧಿಕಾರಕ್ಕಾಗಿ ಹಿತಾಸಕ್ತಿಯ ಸಂಘರ್ಷ ಹುಟ್ಟಿಕೊಂಡಾಗ ಒಳಗಿನ ಹುಳುಕುಗಳು ಹೊರಗೆ ಬರುತ್ತವೆ.  ಉತ್ತರ  ಪ್ರದೇಶದಲ್ಲಿ ಮುಲಾಯಂ ಮತ್ತು ಅವರ ಮಗ ಅಖಿಲೇಶ್‌ ಅವರ  ದಾರಿಗಳು ಬೇರೆ ಬೇರೆಯಾದುದು ಕೂಡ ಇಂಥದೇ ಸಂಘರ್ಷಕ್ಕೆ ಒಂದು ಉದಾಹರಣೆ.

ಬಿಹಾರದಲ್ಲಿ ಅದೃಷ್ಟಕ್ಕೆ ಲಾಲು ಮತ್ತು ಅವರ ಮಕ್ಕಳ ನಡುವೆ ಸದ್ಯಕ್ಕೆ ಯಾವ ಸಂಘರ್ಷವೂ ಇಲ್ಲ. ಆದರೆ, ಇಡಿಯಾಗಿ ಅವರ ಕುಟುಂಬದ ವಿರುದ್ಧ ನಡೆದಿರುವ ಆದಾಯ ತೆರಿಗೆ ಮತ್ತು ಜಾರಿದಳದ ದಾಳಿಗಳು ಆ ರಾಜ್ಯದ ಆಡಳಿತ ಮೈತ್ರಿಕೂಟದಲ್ಲಿ ಬಹುದೊಡ್ಡ ಸಂಘರ್ಷವನ್ನು ಹುಟ್ಟು ಹಾಕಿವೆ. ಮುಖ್ಯಮಂತ್ರಿ ನಿತೀಶ್‌ಕುಮಾರ್‌ ಇದುವರೆಗೆ ಒಳಗೇ ನುಂಗಿಕೊಂಡಿದ್ದ ಸಂಕಟ ಮತ್ತು ಅಸಹನೆಯನ್ನೆಲ್ಲ ಈಗ ಹೊರಗೆ  ಹಾಕುತ್ತಿದ್ದಾರೆ. ಆಡಳಿತದಲ್ಲಿ ಲಾಲು ಅವರ ಕೈ ಮೇಲಾಗಿರುವುದನ್ನು ಮತ್ತು ಅವರ ಮಕ್ಕಳು ಅಧಿಕಾರ ದುರ್ಬಳಕೆ ಮಾಡುತ್ತಿರುವುದನ್ನು ನೋಡಿಯೂ ಅವರು ಇದುವರೆಗೆ ಸುಮ್ಮನೆ ಇದ್ದರು. ಲಾಲು ಅವರ ಅನನುಭವಿ ಮಗ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡಾಗಲೇ ಇಂಥ ಒಂದು ಸಂದರ್ಭ ಉದ್ಭವಿಸಬಹುದು ಎಂದು ಅನೇಕರು ಊಹಿಸಿದ್ದರು. ಮೈತ್ರಿಕೂಟದ ಸರ್ಕಾರಗಳಲ್ಲಿ ಇಂಥ ಇರುಸುಮುರುಸುಗಳು ಸಾಮಾನ್ಯ ಅಥವಾ ಅನಿವಾರ್ಯ. ಅನ್ನಲೂ ಆಗದು; ನುಂಗಲೂ ಆಗದು ಎನ್ನುವಂಥ ಸಂದರ್ಭಗಳೇ ಹೆಚ್ಚು. ಆದರೆ, ನಿತೀಶ್‌ ಅವರ ಕೈಗೆ ಕೇಂದ್ರ ಸರ್ಕಾರ ಈಗ ಒಂದು ಪರೋಕ್ಷ ಅಸ್ತ್ರವನ್ನು ಕೊಟ್ಟಿದೆ.

ಆದಾಯ ತೆರಿಗೆ ಮತ್ತು ಜಾರಿದಳ (ಇ.ಡಿ)ಗಳು ಲಾಲು ಕುಟುಂಬದ ಮೇಲೆ ಮಾಡಿರುವ ದಾಳಿಯಲ್ಲಿ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಿಗೆ ಹತ್ತಿರವಾದಷ್ಟು ಅಕ್ರಮ ಆಸ್ತಿಪಾಸ್ತಿ  ಪತ್ತೆಯಾಗಿದೆ. ಕಬ್ಬಿಣ ಕಾದಾಗಲೇ ಬಡಿಯಬೇಕು ಎನ್ನುವಂತೆ ‘ನಿಮ್ಮ ಅಕ್ರಮ ಸಂಪತ್ತಿನ ಮೂಲವನ್ನು ಬಹಿರಂಗಪಡಿಸಬೇಕು’ ಎಂದು ನಿತೀಶ್‌ ಅವರು ಲಾಲು ಅವರ ಮಕ್ಕಳಿಗೆ ಕೇಳುತ್ತಿದ್ದಾರೆ; ‘ಇಲ್ಲವಾದರೆ ರಾಜೀನಾಮೆ ಕೊಡಬೇಕು’ ಎಂಬ ಇಂಗಿತ ಅದರಲ್ಲಿ ಇರುವಂತಿದೆ. ನಿತೀಶ್‌ ಅವರು ಹೀಗೆ ಮಾಡಬಹುದು ಎಂದು ಮೊದಲೇ ಅಂದಾಜು ಮಾಡಿದವರಂತೆ, ‘ಅದು ಅಸಂಭವ’ ಎಂದು ಲಾಲು ಹೇಳಿ ಬಿಟ್ಟಿದ್ದಾರೆ.

ಇದು ಬಿಹಾರ ರಾಜ್ಯದ ರಾಜಕೀಯದ ಒಂದು ಮಹತ್ವದ ಘಟ್ಟ. ಒಂದು ತಿರುವುಬಿಂದುವಿನಂಥ ಹಂತ. ಲಾಲು ಕುಟುಂಬದ ಮೇಲಿನ ದಾಳಿಯ ಹಿಂದೆ ರಾಜಕೀಯ ಇಲ್ಲವೇ? ಮಹಾಘಟಬಂಧನವನ್ನು ಸಡಿಲ ಮಾಡಬೇಕು, ಸಾಧ್ಯವಾದರೆ ಮುರಿದೇ ಹಾಕಬೇಕು ಎನ್ನುವ ಹುನ್ನಾರ ಇಲ್ಲವೇ? ಇಲ್ಲ ಎಂದು ಹೇಳುವುದು ಬಹಳ ಕಷ್ಟ. ಸಿ.ಬಿ.ಐ, ಆದಾಯ ತೆರಿಗೆ ಮತ್ತು ಜಾರಿದಳಗಳಂಥ ಇಲಾಖೆಗಳು ಸ್ವಾಯತ್ತ ಎಂದೆಲ್ಲ ಹೇಳುವುದು ಕಣ್ಣೊರೆಸುವ ಮಾತು ಅಷ್ಟೇ. ಎಲ್ಲ ಕಾಲಕ್ಕೂ ಅವು ರಾಜಕೀಯ ದಾಳಗಳಾಗಿಯೇ ಬಳಕೆಯಾಗಿವೆ. ಇಂದಿರಾ ಗಾಂಧಿಯವರು ಪ್ರಧಾನಿ ಯಾಗಿದ್ದಾಗ ಈ ಸಂಸ್ಥೆಗಳನ್ನು ಬಳಸಿಕೊಂಡು ತಮ್ಮ ಪಕ್ಷದಲ್ಲಿಯೇ ತಮಗೆ ಸವಾಲು ಒಡ್ಡಬಹುದಾದ ನಾಯಕರ ರಹಸ್ಯ ಕಡತಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳುತ್ತಿದ್ದರು. ಯಾರಾದರೂ ಉಸಿರು ಎತ್ತಿದರೆ ಸಾಕು ಅವರನ್ನು ಕರೆಸಿ ಅವರ ಜಾತಕವನ್ನು  ಬಿಚ್ಚಿ ಇಡುತ್ತಿದ್ದರು. ರಾಜ್ಯಮಟ್ಟದಲ್ಲಿ ಗುಪ್ತದಳಗಳು ಇದೇ ಕೆಲಸ ಮಾಡುತ್ತವೆ.

ಲಾಲು ಮತ್ತು ನಿತೀಶ್‌ ನಡುವಿನ ಮೈತ್ರಿಯನ್ನು ಮುರಿಯಬೇಕಾದರೆ ನಿತೀಶ್‌ ನಂಬಿಕೊಂಡು ಬಂದ ಸ್ವಚ್ಛ ರಾಜಕೀಯ ವರ್ಚಸ್ಸಿಗೆ ಮುಕ್ಕು ತರುವುದು ಒಂದೇ ದಾರಿಯಾಗಿತ್ತು. ಲಾಲು ಕುಟುಂಬದ ಮೇಲಿನ ದಾಳಿ ಈ ಪ್ರಕ್ರಿಯೆಯ ಒಂದು ಭಾಗವಾಗಿರುವಂತೆ ಕಾಣುತ್ತದೆ. ಬಿಜೆಪಿ ವಿರುದ್ಧ ಸದಾ ಕತ್ತಿ ಮಸಿಯುವ ಲಾಲು ವಿರುದ್ಧವೇ ಈಗ ಸಿಬಿಐ, ಆದಾಯ ತೆರಿಗೆ ಮತ್ತು ಜಾರಿದಳ ಎಂಬ ಛದ್ಮರೂಪದ ಖಡ್ಗ, ಭರ್ಚಿಗಳು ಎದ್ದು ನಿಂತಿವೆ. ಅವುಗಳ ಹಿಡಿಕೆ ಯಾರ ಕೈಯಲ್ಲಿ ಇದೆ ಎಂಬುದು ಕಾಣದೇ ಇದ್ದರೂ ಕಾಣುತ್ತಿದೆ!

ಇದಕ್ಕೆ ಕಾರಣ ಇದೆ. ಇದು 2017ನೇ ವರ್ಷ. ಇನ್ನೇನು 2019ನೇ ಇಸವಿಯಲ್ಲಿ ಲೋಕಸಭೆಗೆ ಮತ್ತೆ ಚುನಾವಣೆ ನಡೆಯುತ್ತದೆ. 2014ರ ಚುನಾವಣೆಯಲ್ಲಿ ತನಗೆ ಸಿಕ್ಕ ಜಯವನ್ನು ಬಿಜೆಪಿ ಉಳಿಸಿಕೊಳ್ಳಬೇಕಾದರೆ ಬಿಹಾರದಲ್ಲಿ ಮಹಾಘಟ ಬಂಧನ್‌ ಎಂಬ ಮೈತ್ರಿಕೂಟ ಅಸ್ತಿತ್ವದಲ್ಲಿ ಇರಬಾರದು. ಇರಬಾರದು ಎನ್ನುವುದಾದರೆ ಮೈತ್ರಿಕೂಟದಲ್ಲಿ ಅಪನಂಬಿಕೆ ಮೂಡಿಸಬೇಕು, ಭಿನ್ನಾಭಿಪ್ರಾಯಗಳನ್ನು ಹುಟ್ಟು ಹಾಕಬೇಕು. ಹೇಗೂ ಅಪನಂಬಿಕೆ  ಮೊದಲೇ ಇತ್ತು, ಈಗ ಭಿನ್ನಾಭಿಪ್ರಾಯಗಳೂ ಹುಟ್ಟಿಕೊಂಡಿವೆ. ಹಾಗೆ ನೋಡಿದರೆ ಇದೆಲ್ಲ ಆಗುವುದಕ್ಕಿಂತ ಮುಂಚೆಯೇ ನಿತೀಶ್‌ ಅವರು ಬಿಜೆಪಿಗೆ ಹತ್ತಿರ ಬರುತ್ತಿದ್ದಂತೆ ಇತ್ತು.  ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆದ ‘ನಿರ್ದಿಷ್ಟ ದಾಳಿ’ಯನ್ನು ಅವರು ಸ್ವಾಗತಿಸಿದ್ದರು. ನೋಟು ರದ್ದತಿಯನ್ನು ಮನಸಾರೆ ಮೆಚ್ಚಿ ಕೊಂಡಾಡಿದ್ದರು. ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ತಮ್ಮ ಬೆಂಬಲ ಘೋಷಿಸಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿಯಷ್ಟೇ ಮೋದಿ ಅವರ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದ, ಹಾಗೆ ನೋಡಿದರೆ  ಮೋದಿ ಅವರಿಗೆ ಪ್ರತಿನಾಯಕ ಎಂದೇ ಬಿಂಬಿತರಾಗಿದ್ದ ನಿತೀಶ್‌ಕುಮಾರ್‌ ಬಹಳ ಬದಲಾಗಿದ್ದಾರೆ. ಎಷ್ಟು ಬದಲಾಗಿದ್ದಾರೆ ಎಂದರೆ,  ಅವರನ್ನು ಪರೋಕ್ಷವಾಗಿ, ‘ಬಿಜೆಪಿ ಮನಃಸ್ಥಿತಿಯವರು’ ಎಂದು ಲಾಲು ಪ್ರಸಾದ್‌ ಹಳಿಯುವಷ್ಟು ಬದಲಾಗಿದ್ದಾರೆ! ಆದರೆ, ನಿತೀಶ್‌ ರಾಜಕೀಯವಾಗಿ ಬಹಳ ಅನುಭವ ಇರುವ ಚಾಣಾಕ್ಷ ವ್ಯಕ್ತಿ. ಅವರು ಬಿಹಾರ ರಾಜ್ಯದ ರಾಜಕೀಯದಲ್ಲಿ ತಮ್ಮ ಕೈ ಮೇಲೆ ಇರಬೇಕು ಎಂಬ ಕಾರಣಕ್ಕಾಗಿ ಈಗಿನ ಆಟ ಆಡುತ್ತಿದ್ದಾರೆಯೇ ಅಥವಾ ಅವರಿಗೆ ಮೈತ್ರಿಕೂಟದಲ್ಲಿ ಮುಂದುವರಿಯುವುದು ಬೇಡವಾಗಿದೆಯೇ? ಇದನ್ನು ಅವರು ಇಬ್ಬರೇ ನಿರ್ಧರಿಸುತ್ತಾರೆಯೇ ಅಥವಾ ಮೂರನೆಯವರು ನಿರ್ಧರಿಸುತ್ತಾರೆಯೇ?

ಬಿಹಾರ ರಾಜಕೀಯದಲ್ಲಿ ಹೊಸ ಅಧ್ಯಾಯವನ್ನೇ ಬರೆದ ಮಹಾಘಟಬಂಧನ್‌ನ ಕೊನೆಯ ಅಧ್ಯಾಯ ಆರಂಭವಾಗಿದೆಯೇ? ಪರಿಣಾಮಕ್ಕಾಗಿ ನಾವು ಬಹಳ ದಿನ ಕಾಯಬೇಕಿಲ್ಲವೇನೋ? 

ಪ್ರತಿಕ್ರಿಯಿಸಿ (+)