ಭಾನುವಾರ, ಮೇ 9, 2021
19 °C

ಬುದ್ಧ: ಕನ್ನಡನಾಡಿನ ಕುತೂಹಲಕರ ವ್ಯಾಖ್ಯಾನಗಳು

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಬುದ್ಧ: ಕನ್ನಡನಾಡಿನ ಕುತೂಹಲಕರ ವ್ಯಾಖ್ಯಾನಗಳು

ನಡುರಾತ್ರಿ ಮೂರು ಗಂಟೆ. ‘ಕರ್ನಾಟಕದಲ್ಲಿ ಮೂವರು ಹುಟ್ಟಾ ಬುದ್ಧಿಸ್ಟ್‌ಗಳಿದ್ದಾರೆ ಗೊತ್ತೇನ್ರೀ, ರೆಡ್ಡೀ?’ ಎಂದರು ಪೂರ್ಣಚಂದ್ರ ತೇಜಸ್ವಿ. ತೇಜಸ್ವಿಯವರ ಜೊತೆ ಕೂತು ಕುವೆಂಪು ಸಮಗ್ರ ಕೃತಿಗಳನ್ನು ಪ್ರಕಟಣೆಗೆ ಸಿದ್ದಪಡಿಸುತ್ತಿದ್ದ ಲೇಖಕ ಕೆ.ಸಿ.ಶಿವಾರೆಡ್ಡಿಯವರ ಕುತೂಹಲ ಕೆರಳಿ ‘ಯಾರು ಸಾ?’ ಎಂದರು.

‘ದೇವನೂರ ಮಹಾದೇವ, ಕಿ.ರಂ.ನಾಗರಾಜ, ಕಡಿದಾಳು ಶಾಮಣ್ಣ! ಈ ಬಡ್ಡೀ ಮಕ್ಕಳ ಸಾವಾಸ ಅಲ್ಲ ನೋಡು! ಇವರ ಜೊತೆ ಸೇರಿದರೆ ಕತೆಯೇ ಮುಗಿದೋಯ್ತು’ ಎಂದು ತೇಜಸ್ವಿ ನಕ್ಕರು. ಈ ಘಟನೆಯನ್ನು ನೆನೆಸಿಕೊಳ್ಳುತ್ತಾ ಶಿವಾರೆಡ್ಡಿ ಬರೆಯುತ್ತಾರೆ: ‘ಈ ಮೂವರ ಜನಪರ ಕಾಳಜಿ, ಸಾಮಾಜಿಕ ಹೋರಾಟಗಳಲ್ಲಿನ ನಂಬಿಕೆ; ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಗೌರವ, ಸ್ವಂತ ಕುಟುಂಬಕ್ಕಿಂತ ಸಮಾಜವನ್ನೇ ತಮ್ಮ ಕುಟುಂಬವನ್ನಾಗಿಸಿಕೊಂಡು ಆಧುನಿಕ ಫಕೀರರಂತೆ ಬದುಕುವ ಈ ಮೂವರ ಬಗ್ಗೆಯೂ ತೇಜಸ್ವಿಯವರಿಗೆ ಅಪಾರ ಗೌರವ. ಅಂಥ ಗೌರವ, ಪ್ರೀತಿಗಳಿಂದ ತೇಜಸ್ವಿ ಆ ನಡುರಾತ್ರಿ ಈ ಮೂವರನ್ನೂ ನೆನೆಸಿಕೊಳ್ಳುತ್ತಾ ‘ಹುಟ್ಟಾ ಬುದ್ಧಿಸ್ಟ್’ಗಳು ಎಂದಿದ್ದರು.’

ಹಿಂದೊಮ್ಮೆ ನಾನು ಓದಿದ್ದ ಈ ಮಾತನ್ನು ಬುದ್ಧಿಸಂನಲ್ಲಿ ಆಸಕ್ತಿಯಿರುವ ಹುಡುಗನೊಬ್ಬ ಮತ್ತೆ ನನಗೆ ತೋರಿಸಿದ. ನಾನು ಓದಿದ ವ್ಯಾಖ್ಯಾನಗಳಲ್ಲೆಲ್ಲ ಇದು ಕುತೂಹಲಕರವಾದ ಸಮಕಾಲೀನ ವ್ಯಾಖ್ಯಾನವಾಗಿತ್ತು. ಈ ‘ಹುಟ್ಟಾ ಬುದ್ಧಿಸ್ಟ್’ಗಳಲ್ಲಿ ಒಬ್ಬರಾದ ಕಿ.ರಂ.ನಾಗರಾಜ್ ಝೆನ್ ಬುದ್ಧಿಸಂನ ಕತೆಯೊಂದನ್ನು ಹೇಳಿದ್ದರು: ಒಬ್ಬ ಒಂದು ಊರಿಗೆ ಬಂದು ‘ಇಲ್ಲಿ ಝೆನ್ ಮಾಸ್ಟರ್ ಎಲ್ಲಿದ್ದಾರೆ?’ ಎಂದು ಆ ಊರಿನವನನ್ನು ಕೇಳಿದ. ಆತ ಟೀ ಅಂಗಡಿಯತ್ತ ಕೈ ತೋರಿಸುತ್ತಾ, ‘ಅಗೋ, ಅಲ್ಲಿ ಟೀ ಮಾಡ್ತಾ ಇದಾರಲ್ಲ, ಅವರೇ’ ಎಂದ. ಈ ಕತೆಯನ್ನು ಚರ್ಚಿಸುತ್ತಾ ಕಿ.ರಂ. ಹೇಳಿದರು: ‘ಝೆನ್ ಬುದ್ಧಿಸಂನಲ್ಲಿ ಹಾಗೇ! ಗುರು ಅನ್ನೋನು ಬೇರೆ ಥರ ಇರಲ್ಲ. ಅವನು ಬಡಗಿ ಕೆಲಸ ಮಾಡ್ತಿರ್ತಾನೆ, ಗಾರೆ ಕೆಲಸ ಮಾಡ್ತಿರ್ತಾನೆ. ಅವನು ಎಲ್ಲರಿಗಿಂತ ಡಿಫರೆಂಟ್ ಆಗಿ ‘ಗುರು’ ಥರ ಆಡ್ತಿರಲ್ಲ.’ ಝೆನ್ ನೋಟಕ್ರಮದಲ್ಲಿ ‘ಗುರು ಎನ್ನುವವನು ಯಾರೂ ಇಲ್ಲ; ಎಲ್ಲರೂ ವಿದ್ಯಾರ್ಥಿಗಳೇ’ ಎಂಬುದನ್ನು ಕಿ.ರಂ.ಗೆ ನೆನಪಿಸಬೇಕಾಗಿರಲಿಲ್ಲ. ಅದು ಅವರ ವ್ಯಕ್ತಿತ್ವದಲ್ಲೇ ಇತ್ತು!

ಕರ್ನಾಟಕದಲ್ಲಿ ಹಲವು ರೀತಿಗಳಲ್ಲಿ ಹರಡಿರುವ ಬುದ್ಧಚಿಂತನೆ ಹಾಗೂ ಬುದ್ಧನ ನಂತರದ ವ್ಯಾಖ್ಯಾನಗಳನ್ನು ನೆನೆಯುತ್ತಿರುವಾಗ, ಇಂಡಿಯಾದುದ್ದಕ್ಕೂ ಬೌದ್ಧಧರ್ಮ ಪ್ರಸಾರ ಮಾಡುವ ಬೋಧಕರನ್ನು ತರಬೇತು ಮಾಡುವ ಬುದ್ಧಿಸ್ಟ್ ಸೆಮಿನರಿಯೊಂದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಅಂಬೇಡ್ಕರ್ ಯೋಚಿಸಿದ್ದು ನೆನಪಾಗುತ್ತದೆ. 1954ರಲ್ಲಿ ಬೆಂಗಳೂರಿಗೆ ಬಂದಿದ್ದ ಅಂಬೇಡ್ಕರ್ ಅವರಿಗೆ ಮೈಸೂರು ಮಹಾರಾಜರು ಐದು ಎಕರೆ ಜಮೀನು ಕೊಟ್ಟಿದ್ದರು. ಈ ವಿವರಗಳು ಧನಂಜಯ ಕೀರ್ ಅವರ ‘ಡಾ.ಅಂಬೇಡ್ಕರ್: ಲೈಫ್ ಅಂಡ್ ಮಿಷನ್’ ಪುಸ್ತಕದಲ್ಲಿವೆ: ಈ ಸೆಮಿನರಿಯಲ್ಲಿ ವಿಹಾರಗಳು, ಶಾಲಾಕೊಠಡಿಗಳು, ಬೃಹತ್ ಗ್ರಂಥಭಂಡಾರ; ಬೋಧಕರು, ವಿದ್ಯಾರ್ಥಿಗಳು, ಸಂಶೋಧಕರಿಗೆ ವಸತಿಗೃಹಗಳು, ಜಗತ್ತಿನ ದೊಡ್ಡ ವಿದ್ವಾಂಸರು ಬುದ್ಧಿಸಂ ಬಗ್ಗೆ ಬರೆದ ಪುಸ್ತಕಗಳನ್ನು ಮುದ್ರಿಸಲು ಮುದ್ರಣಾಲಯ- ಇವೆಲ್ಲವೂ ಇರಬೇಕೆಂಬುದು ಅಂಬೇಡ್ಕರ್ ಕನಸಾಗಿತ್ತು. ಅದಕ್ಕಿಂತ ಕೆಲವು ವರ್ಷಗಳ ಕೆಳಗೆ ಬನಾರಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆದುರು ಮಾತಾಡುತ್ತಾ, ಅಂಬೇಡ್ಕರ್ ಆತ್ಮವಿಶ್ವಾಸದಿಂದ ಹೇಳಿದ್ದರು: ‘ಶಂಕರಾಚಾರ್ಯರು ಹಿಂದೂಧರ್ಮಕ್ಕೆ ಏನು ಮಾಡಿದರೋ, ಅದನ್ನು ನಾನು ಬೌದ್ಧಧರ್ಮಕ್ಕೆ ಮಾಡುತ್ತೇನೆ.’ ಬೌದ್ಧಧರ್ಮವನ್ನು ಪುನರುಜ್ಜೀವನಗೊಳಿಸುವ ಮಹತ್ತರ ಆಶಯ ಅಂಬೇಡ್ಕರ್ ಅವರಲ್ಲಿ ಬೆಳೆಯತೊಡಗಿತ್ತು. ಆದರೆ ಬೌದ್ಧಧರ್ಮ ಸೇರಿದ ಕೆಲವೇ ತಿಂಗಳುಗಳಲ್ಲಿ ಅಂಬೇಡ್ಕರ್ ಪರಿನಿಬ್ಬಾಣವಾದ್ದರಿಂದ ಈ ಕೆಲಸ ಅಪೂರ್ಣವಾಯಿತು. ಸಾಮ್ರಾಟ್ ಅಶೋಕನ ನಂತರ ಬೌದ್ಧ ಧರ್ಮವನ್ನು ಇಂಡಿಯಾದುದ್ದಕ್ಕೂ ಹಬ್ಬಿಸುವ ಅಂಬೇಡ್ಕರ್ ಮಹತ್ವಾಕಾಂಕ್ಷೆ ಈಡೇರಲಿಲ್ಲ. ‘ಬುದ್ಧ ಅಂಡ್ ಮಾರ್ಕ್ಸ್’ ಅಪೂರ್ಣ ಪುಸ್ತಕದ ಚಿಂತನೆಯ ವಿಸ್ತರಣೆ; ಬೌದ್ಧಧರ್ಮ ಸ್ವೀಕಾರದ ನಂತರ ಅಂಬೇಡ್ಕರ್ ಹೊಸ ನೆಲೆಯಲ್ಲಿ ಆರಂಭಿಸಬಹುದಾಗಿದ್ದ ಸಾಮಾಜಿಕ ವ್ಯಾಖ್ಯಾನಗಳ ಸಾಧ್ಯತೆ -ಎರಡೂ ಹಾಗೇ ಉಳಿದವು. ಎಲ್ಲಕ್ಕಿಂತ ಮುಖ್ಯವಾಗಿ, ಭಾರತದ ಎರಡು ಶ್ರೇಷ್ಠ ಧರ್ಮಗಳಿಗೆ ಸೇರಿದ ಇಬ್ಬರು ಧೀಮಂತರ ತಾತ್ವಿಕ ಬೆಸುಗೆ- ಜೈನ ಗಾಂಧೀಜಿ ಹಾಗೂ ಬೌದ್ಧ ಬಾಬಾಸಾಹೇಬರ ಹೊಸ ತಾತ್ವಿಕ ಬೆಸುಗೆ- ಅಂಬೇಡ್ಕರ್ ಚಿತ್ತದಲ್ಲಿ ಸಾಧ್ಯವಾಗಬಹುದಿತ್ತೇ? ಮಹಾತ್ಮರ ಬಗ್ಗೆ ಬೌದ್ಧ ಬಾಬಾಸಾಹೇಬರ ಕಹಿ ಕಡಿಮೆಯಾಗಬಹುದಿತ್ತೇ? ಬುದ್ಧಿಸಂ ದೊಡ್ಡ ಪ್ರಮಾಣದಲ್ಲಿ ಜನಸಾಮಾನ್ಯರ ಕಡೆಗೆ ಚಲಿಸಬಹುದಿತ್ತೆ? ಈ ಪ್ರಶ್ನೆಗಳು ಹಾಗೇ ಉಳಿದವು.

ಬೆಂಗಳೂರಿನಲ್ಲಿ ಅಂಬೇಡ್ಕರ್ ಅವರಿಗೆ ಕೊಟ್ಟ ಐದು ಎಕರೆಯಲ್ಲಿ ಈಗ ಬುದ್ಧವಿಹಾರವಿದೆ. ಆದರೆ ಬೌದ್ಧ ಧರ್ಮ ಪ್ರಚಾರಕರ ಸೆಮಿನರಿ ಸ್ಥಾಪನೆಯಾಗಲಿಲ್ಲ. ಅದೇನೇ ಇದ್ದರೂ, ಕರ್ನಾಟಕದಲ್ಲಿ ಬೌದ್ಧಚಿಂತನೆಯನ್ನು ಜೀವಂತವಾಗಿಟ್ಟಿರುವುದು ಕನ್ನಡ ಸಾಹಿತ್ಯ ವಲಯ ಹಾಗೂ ದಲಿತ ಚಳವಳಿಯ ವಲಯ ಎಂಬುದು ಚರಿತ್ರೆಯಲ್ಲಿ ಖಚಿತವಾಗಿ ದಾಖಲಾಗಲಿದೆ. ಒಮ್ಮೆ ಕತೆಗಾರ ಕರೀಗೌಡ ಬೀಚನಹಳ್ಳಿ, ಅಂಬೇಡ್ಕರ್ ಬೌದ್ಧಧರ್ಮ ಸೇರುವ ಮೊದಲೇ ಕುವೆಂಪು ಅವರ ‘ಕಾನೂರು ಹೆಗ್ಗಡಿತಿ’ (1936) ಕಾದಂಬರಿಯ ನಾಯಕ ಹೂವಯ್ಯ ಬೆಂಗಳೂರಿನಿಂದ ಬುದ್ಧನ ವಿಗ್ರಹ ತರಿಸಿ ಮಲೆನಾಡಿನ ಮೂಲೆಯ ಕಾನುಬೈಲಿನ ಶಿಖರದಲ್ಲಿ ಪ್ರತಿಷ್ಠಾಪಿಸುವ ರೂಪಕದ ಮಹತ್ವವನ್ನು ಚರ್ಚಿಸಿದ್ದರು. ಹಿಂದೂ ಧರ್ಮದ ಶೋಷಣೆಯ ಮೂಲಗಳನ್ನು ಪ್ರಶ್ನಿಸುವ ಹೂವಯ್ಯ ಮತಾಂತರವಾಗದಿದ್ದರೂ ಬುದ್ಧಮಾರ್ಗವನ್ನು ಸ್ವೀಕರಿಸುವುದು, ಬುದ್ಧಜಯಂತಿಯ ದಿನ ‘ಜ್ಞಾನದ ವಿಜ್ಞಾನದ ಮತಿಖಡ್ಗದಿ ಮೈದೋರುವಳೈ ನವಕಾಳಿ!’ ಎಂಬ ನವಜೀವನಗಾನದೊಂದಿಗೆ ಕಾದಂಬರಿ ಮುಕ್ತಾಯವಾಗುವುದು ಬೌದ್ಧ ಮಾರ್ಗ ಹಾಗೂ ಆಧುನಿಕ ವೈಚಾರಿಕತೆಯನ್ನು ಬೆಸೆಯುವ ಅಂಬೇಡ್ಕರ್ ದರ್ಶನವನ್ನು ಎದುರು ನೋಡುತ್ತಿರುವಂತಿದೆ. ಆನಂತರ ಬೇಂದ್ರೆ ನಿತ್ಯದ ಪರಿಚಿತ ವಿವರಗಳನ್ನೇ ರೂಪಕವಾಗಿಸಿ ‘ಬುದ್ಧ, ಬುದ್ಧ- / ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ/…ಇದ್ದರೇನಿಲದಿದ್ದರೇನೆನಲು ಗೆದ್ದ’ ಎನ್ನುತ್ತಾ ಬುದ್ಧಪ್ರತಿಮೆಯನ್ನು ಆಕರ್ಷಕವಾಗಿ ಕಡೆದಿಟ್ಟರು. ಜಿ.ಪಿ. ರಾಜರತ್ನಂ ಹಾಗೂ ಆ ನಂತರ ರಾಜಶೇಖರ್ ಮಕ್ಕಳಿಂದ ಹಿರಿಯರವರೆಗೆ ಓದಬಲ್ಲ ಭಾಷೆಯಲ್ಲಿ ಬುದ್ಧಚಿಂತನೆಯನ್ನು ಬರೆದು ಜನಪ್ರಿಯಗೊಳಿಸಿದರು. ನೂರಾರು ಪದ್ಯಗಳು, ನಾಟಕಗಳು, ಕತೆಗಳು, ಲಂಕೇಶರ ‘ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’, ಡಿ.ಆರ್. ನಾಗರಾಜರು ಅಂಬೇಡ್ಕರ್ ಲೇಖನವನ್ನು ವಿಶ್ಲೇಷಿಸಿ ಬರೆದ ‘ಬುದ್ಧನೋ? ಕಾರ್ಲ್ ಮಾರ್ಕ್ಸೋ?’ ಬರಹದಲ್ಲಿ ಈ ಎರಡೂ ದಾರಿಗಳು ಕೂಡುವ, ಬೇರೆಯಾಗುವ ಬಿಂದುಗಳನ್ನು ಕಾಣಿಸಿದ ರೀತಿ, ಗುಲಬರ್ಗಾದ ಬುದ್ಧವಿಹಾರ… ಹೀಗೆ ಕರ್ನಾಟಕದಲ್ಲಿ ಬುದ್ಧ ದರ್ಶನ, ವ್ಯಾಖ್ಯಾನಗಳ ಪರಂಪರೆ ಮೊನ್ನೆ ‘ಪ್ರಜಾವಾಣಿ’ಯ ‘ಮುಕ್ತಛಂದ’ದಲ್ಲಿ ಪ್ರಕಟವಾದ ನಟರಾಜ ಬೂದಾಳು ಅವರ ವ್ಯಾಖ್ಯಾನದವರೆಗೂ ಬೆಳೆಯುತ್ತಲೇ ಇದೆ…      

ಇದೆಲ್ಲದರ ನಡುವೆ, ಸಮೂಹದ ನೆಲೆಯಲ್ಲಿ ಬುದ್ಧನನ್ನು ಜೀವಂತವಾಗಿಟ್ಟ ಯಶಸ್ಸು ಕರ್ನಾಟಕದ ದಲಿತ ಚಳವಳಿಗೆ ಸಲ್ಲಬೇಕು. ದಲಿತಚಳವಳಿಯ ಪ್ರೇರಕರಲ್ಲೊಬ್ಬರಾದ ಬಿ. ಬಸವಲಿಂಗಪ್ಪ ಬೌದ್ಧಮಾರ್ಗವನ್ನು ಜನಪ್ರಿಯಗೊಳಿಸಲೆತ್ನಿಸಿದರು. ದಲಿತ ಸಂಘಟನೆಗಳು ಏರ್ಪಡಿಸಿದ ಬೌದ್ಧಧರ್ಮಸ್ವೀಕಾರ ಸಮಾರಂಭಗಳು ಬೌದ್ಧಚಳವಳಿಯಾಗಿ ಬೆಳೆಯದೇ ಬೃಹತ್ ಪ್ರದರ್ಶನದ ಮಟ್ಟದಲ್ಲೇ ನಿಂತರೂ, ಅವು ಬೌದ್ಧ ಮಾರ್ಗವನ್ನು ವೈದಿಕ ಚಿಂತನೆಯ ಎದುರು ಪ್ರಬಲವಾಗಿ ಪ್ರತಿಪಾದಿಸುತ್ತಲೇ ಬಂದಿವೆ. ಚಾಮರಾಜನಗರದ ಮನೋರಖ್ಖಿತ ಭಂತೇಜಿ ಕಾಲೇಜಿನಲ್ಲಿ ಚರಿತ್ರೆಯ ಉಪನ್ಯಾಸಕರಾಗಿ, ಚೇತವನದಲ್ಲಿ ನೆಲೆಸಿ ಬೌದ್ಧಧರ್ಮವನ್ನು ಅರ್ಥಪೂರ್ಣವಾಗಿ ಪ್ರಸಾರ ಮಾಡುತ್ತಲೇ ಇದ್ದಾರೆ. ಅವರೊಮ್ಮೆ ಕೇಳಿದರು: ‘ಹಿಂದುಳಿದ ವರ್ಗದ ಹುಡುಗ, ಹುಡುಗಿಯರಿಗೆ ಬೌದ್ಧಮಾರ್ಗದ ಬಗ್ಗೆ ಹೇಳುವ ಚಿಂತಕರೇ ಇಲ್ಲವಲ್ಲ?’ ಈ ಪ್ರಶ್ನೆಯನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕಾದ ತುರ್ತು ಈಗ ಹೆಚ್ಚಿದೆ. ಹಿಂದುಳಿದ ವರ್ಗಗಳ ಹುಡುಗರಿಗೆ ಬುದ್ಧಮಾರ್ಗದ ಪರ್ಯಾಯಗಳನ್ನು ತೋರಿಸದಿದ್ದುದರಿಂದ ಕೂಡ ಅವರು ಧರ್ಮದ ಹೆಸರಿನಲ್ಲಿ ಹಿಂಸೆ ಹರಡುವ ಮೇಲುಜಾತಿಯ ನಾಯಕರ ಕಾಲಾಳುಗಳಾಗಿ ನಾಶವಾಗುತ್ತಿದ್ದಾರೆ ಅಥವಾ ಜೈಲು ಸೇರುತ್ತಿದ್ದಾರೆ. ಕರ್ನಾಟಕದ ದಲಿತ ಚಳವಳಿ ಅಂಬೇಡ್ಕರರನ್ನೂ, ಅಂಬೇಡ್ಕರ್ ಮೂಲಕ ಬುದ್ಧನನ್ನೂ ಹೇಳಿಕೊಟ್ಟಿದ್ದರಿಂದ ದಲಿತ ಹುಡುಗರಿಗೆ ಹೆಚ್ಚಿನ ಪ್ರಬುದ್ಧತೆ ಬಂದಿದೆಯೆಂಬುದನ್ನು ಗಮನಿಸಬೇಕು.

ಆದರೂ ಮಹಾರಾಷ್ಟ್ರದಲ್ಲಾದಂತೆ ದೊಡ್ಡ ಮಟ್ಟದ ಬೌದ್ಧಧರ್ಮಸ್ವೀಕಾರ ಕರ್ನಾಟಕದಲ್ಲಾಗಲಿಲ್ಲ. ಡಾ.ಸಿದ್ಧಲಿಂಗಯ್ಯನವರು ದಶಕಗಳ ಕೆಳಗೆ ವಿಧಾನಪರಿಷತ್ತಿನಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮೀಯರ ಸಂಖ್ಯೆ ಕುರಿತು ಪ್ರಶ್ನೆ ಕೇಳಿದಾಗ, ಸರ್ಕಾರ ಕೊಟ್ಟ ಅಧಿಕೃತ ಸಂಖ್ಯೆ ನಿರಾಶಾದಾಯಕವಾಗಿತ್ತು. ‘ಮಹಾರಾಷ್ಟ್ರದಲ್ಲಿ ಮಹರ್ ಜನರು ತಮಗೆ ಪರಿಶಿಷ್ಟ ಜಾತಿಯ ಮೀಸಲಾತಿ ಸಿಗದಿದ್ದರೂ ಪರವಾಗಿಲ್ಲ ಎಂದು ಬೌದ್ಧಧರ್ಮವನ್ನು ಸ್ವೀಕರಿಸಿದರು. ಮೀಸಲಾತಿಯಿಲ್ಲದ ಸ್ಥಿತಿಯನ್ನೇ ಸವಾಲಾಗಿ ತೆಗೆದುಕೊಂಡು ಎಲ್ಲ ರಂಗಗಳಲ್ಲೂ ಸ್ಪರ್ಧಿಸಿ ಯಶಸ್ಸು ಪಡೆದರು. ತೊಂಬತ್ತರ ದಶಕದಲ್ಲಿ ವಿ.ಪಿ.ಸಿಂಗ್ ನವಬೌದ್ಧರಿಗೂ ಮೀಸಲಾತಿ ವಿಸ್ತರಿಸಿದರು. ಆದರೆ ಕರ್ನಾಟಕದ ಸರ್ಕಾರಗಳು ಈ ಸರ್ಟಿಫಿಕೇಟ್ ಕೊಡಲು ಹಿಂದೆಮುಂದೆ ನೋಡುತ್ತಿವೆ’ ಎನ್ನುತ್ತಾರೆ ಸಿದ್ಧಲಿಂಗಯ್ಯ. ಸರ್ಕಾರ ಈಗಲಾದರೂ ಈ ಪ್ರಶ್ನೆಯನ್ನು ಗಂಭೀರವಾಗಿ ಕೈಗೆತ್ತಿಕೊಳ್ಳಬೇಕು.

ಇಷ್ಟೆಲ್ಲದರ ನಡುವೆಯೂ, ತೇಜಸ್ವಿ ಹೇಳಿದ ಹುಟ್ಟಾ ಬುದ್ಧಿಸ್ಟರ ಸಂಖ್ಯೆ ಹೊಸತಲೆಮಾರಿನಲ್ಲಿ ಬೆಳೆಯದಿದ್ದರೆ ಇವತ್ತಿನ ಕರ್ನಾಟಕದಲ್ಲಿ ಬುದ್ಧಿಸಂ ಹೊಸ ವ್ಯಾಖ್ಯಾನಗಳನ್ನು, ಆಯಾಮಗಳನ್ನು ಪಡೆಯುವುದು ಕಷ್ಟ!       

ಕೊನೆಟಿಪ್ಪಣಿ: ಧರ್ಮ ಮತ್ತು ಆಹಾರ ಪದ್ಧತಿ

ಬೌದ್ಧಧರ್ಮದ ಒಳಗೆ ನುಸುಳಿರುವ ಸಂಪ್ರದಾಯವಾದಿಗಳು ಅನಗತ್ಯವಾಗಿ ಸಸ್ಯಾಹಾರದ ಜೊತೆಗೆ ಅದನ್ನು ತಳಕು ಹಾಕಿ ಗೊಂದಲ ಹುಟ್ಟು ಹಾಕುವುದುಂಟು. ಕೆಲವು ವರ್ಷಗಳ ಕೆಳಗೆ ಲೇಖಕರೊಬ್ಬರು ಬೌದ್ಧಧರ್ಮ ಸ್ವೀಕಾರ ಮಾಡಿದರು. ಅವತ್ತು ಮಧ್ಯಾಹ್ನ ಆ ಲೇಖಕರ ಜೊತೆ ಹೋಟೆಲಿಗೆ ಹೋದ ಮಿತ್ರರೊಬ್ಬರು ‘ಸಾರಿ ಸಾರ್! ನಾವು ನಾನ್ ವೆಜ್ ಆರ್ಡರ್ ಮಾಡಿದೇವೆ’ ಎಂದರು. ‘ನನಗೂ ಅದೇ ಇರಲಿ’ ಎಂದರು ಲೇಖಕರು. ‘ಇದೀಗ ಪ್ರತಿಜ್ಞಾ ಸ್ವೀಕಾರವಾಯಿತಲ್ಲ?’ ಎಂದರೆ, ‘ನೋ! ನೋ! ನೋ! ಮಾಂಸಾಹಾರದ ಬಗೆಗಿನ ಪ್ರತಿಜ್ಞಾವಿಧಿ ಬಂದಾಗ ನಾನು ಸೈಲೆಂಟಾಗಿದ್ದೆ, ಪ್ರತಿಜ್ಞೆ ಸ್ವೀಕರಿಸಲಿಲ್ಲ!’ ಎಂಬ ಮಿಂಚಿನ ಉತ್ತರ ಬಂತು.  ಆಗ ಬೌದ್ಧಧರ್ಮದಲ್ಲಿ ‘ಸಸ್ಯಾಹಾರ ಭಯೋತ್ಪಾದನೆ’ ಇಲ್ಲ ಎಂಬುದನ್ನು ವಿದ್ವಾಂಸರೊಬ್ಬರು ವಿವರಿಸಿ ಗೊಂದಲ ಪರಿಹರಿಸಿದರು. 

ಮತ್ತೊಬ್ಬ ಲೇಖಕರು ಈ ಪ್ರತಿಜ್ಞಾವಿಧಿಯನ್ನೂ ಸ್ವೀಕರಿಸಿದ್ದರು. ಹಾಗೂ ಹೀಗೂ ಒಂದೆರಡು ತಿಂಗಳು ಅದನ್ನು ಪಾಲಿಸಿಯೂ ನೋಡಿದರು. ಈ ನಡುವೆ ಒಂದು ದಿನ ಬೆಂಗಳೂರಿನ ನಾನ್ ವೆಜ್ ಹೋಟೆಲಿನಲ್ಲಿ ಸಿಕ್ಕರು. ‘ಇದೇನ್ಸಾರ್!’ ಎಂದು ತಮಾಷೆಯಾಗಿ ಹುಬ್ಬೇರಿಸಿದಾಗ, ಅವರು ನಗುತ್ತಾ ಕೊಟ್ಟ ಉತ್ತರ: ‘ಬುದ್ಧಿಸಂ ಪ್ರಕಾರ ಯಾವುದೇ ಆಹಾರವನ್ನು ಭಿಕ್ಷೆಯಾಗಿ ಪಡೆಯಬಹುದಲ್ಲವೆ!  ಇವತ್ತು ಇದು ಸ್ನೇಹಿತರೊಬ್ಬರು ಕೊಟ್ಟ ಭಿಕ್ಷೆ… ಆದ್ದರಿಂದ ದೋಷವಿಲ್ಲ!’

ಆಹಾರಪದ್ಧತಿಗಳ ಬಗ್ಗೆ ಫರ್ಮಾನು ಹೊರಡಿಸುವ ಯಾವುದೇ ಧರ್ಮ ಈ ಕಾಲದಲ್ಲಂತೂ ಬೆಳೆಯಲಾರದು. ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಂ ವೇಗವಾಗಿ ಬೆಳೆದದ್ದಕ್ಕೆ ಹಲವು ಕಾರಣಗಳಿರುವಂತೆಯೇ ಅವು ಆಹಾರಪದ್ಧತಿಯ ಬಗ್ಗೆ ಇಟ್ಟುಕೊಂಡಿರುವ ಮುಕ್ತ ಧೋರಣೆಯೂ ಕಾರಣವಿರಬಹುದು. ಕೆ.ಎಸ್.ಭಗವಾನ್ ‘ಹಿಂದೂಧರ್ಮ ಬೆಳೆಯದಿರುವುದಕ್ಕೆ ಅದು ಸಸ್ಯಾಹಾರವನ್ನು ಕುರಿತು ಅತಿಯಾದ ವ್ಯಸನ ಹೊಂದಿರುವುದು ಕೂಡ ಕಾರಣ’ ಎಂದಿದ್ದು ನೆನಪಾಗುತ್ತದೆ. ಡಿ.ಆರ್. ನಾಗರಾಜರು ಕಂಡಂತೆ ಥಾಯ್ಲೆಂಡಿನಲ್ಲಿ ಬೌದ್ಧ ಭಿಕ್ಷುಗಳೆಲ್ಲ ಮಾಂಸಾಹಾರಿಗಳು. ಬೌದ್ಧಧರ್ಮದ ಕೆಲವು ಅನುಯಾಯಿಗಳು ಆಹಾರ ಪದ್ಧತಿಯ ಬಗ್ಗೆ ಏನಾದರೂ ಹೇಳಲಿ, ಬೌದ್ಧರಲ್ಲಿ ಸಸ್ಯಾಹಾರ ಪರವಾದ ಕ್ರೌರ್ಯವಂತೂ ಇಲ್ಲ ಎನ್ನುವುದನ್ನು ಇತರ ಧರ್ಮಗಳ ‘ಸಸ್ಯಾಹಾರ ಭಯೋತ್ಪಾದಕರು’ ಪರಾಂಬರಿಸಬೇಕು. ಜೊತೆಗೆ, ಅಹಿಂಸೆಯ ಉದಾತ್ತ ತತ್ವವನ್ನು ಸೀಮಿತಗೊಳಿಸಿ ಮಾಂಸಾಹಾರಕ್ಕೆ ಮಾತ್ರ ಅನ್ವಯಿಸಿ ಬೋಧಿಸುತ್ತಾ, ಮೇಲುಜಾತಿಗಳು ಮಾಡುವ ಮಾನವಹಿಂಸೆಯನ್ನು ಬೆಂಬಲಿಸುವ ಬೂಟಾಟಿಕೆಯನ್ನು ಈ ವರ್ಗಗಳು ಮೊದಲು ಬಿಡಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.