ಭಾನುವಾರ, ಡಿಸೆಂಬರ್ 15, 2019
21 °C

ಬೂದಿಯೇ ಕೆಂಡವಾಗುವ ಅಕ್ಷಯ ಮಾಯಾದಂಡ

ನಾಗೇಶ ಹೆಗಡೆ Updated:

ಅಕ್ಷರ ಗಾತ್ರ : | |

ಬೂದಿಯೇ ಕೆಂಡವಾಗುವ ಅಕ್ಷಯ ಮಾಯಾದಂಡ

‘ಮಂಗಳಯಾನ’ಕ್ಕಿಂತ ಅದೆಷ್ಟೊ ಪಟ್ಟು ದೊಡ್ಡ, ಅದೆಷ್ಟೊ ಪಟ್ಟು ಕ್ಲಿಷ್ಟ ತಾಂತ್ರಿಕ ಸಾಧನೆಯೊಂದನ್ನು ಭಾರತದ ವಿಜ್ಞಾನಿಗಳು ಸದ್ಯದಲ್ಲೇ ಜಗತ್ತಿಗೆ ಪ್ರದರ್ಶಿಸಲಿದ್ದಾರೆ. ಏಳು ವರ್ಷಗಳ ಹಿಂದೆಯೇ ಅದನ್ನು ತೋರಿಸಬೇಕಿತ್ತು. ಆದರೆ ಒಂದಲ್ಲ ಒಂದು ತಾಂತ್ರಿಕ ಅಡಚಣೆ ಎದುರಾಗುತ್ತಿತ್ತು. ಈಗ ಅವೆಲ್ಲ ನಿವಾರಣೆಯಾಗಿ, ಪಟಾಕಿ ಸಜ್ಜಾಗಿದೆ. ಇನ್ನೇನು ಯಾವ ಕ್ಷಣದಲ್ಲಾದರೂ ಕಡ್ಡಿ ಗೀರಲು ಅಣಿಯಾಗಿದ್ದೇವೆ ಎಂಬರ್ಥದಲ್ಲಿ ಅಣುಶಕ್ತಿ ಇಲಾಖೆ (ಡಿಎಇ) ಹೇಳಿದೆ.

ಆ ಪಟಾಕಿಯ ಹೆಸರು ‘ಫಾಸ್ಟ್ ಬ್ರೀಡರ್’ ಪರಮಾಣು ಸ್ಥಾವರ. ಅದು ಮಾಮೂಲು ಅಣುಸ್ಥಾವರಗಳಿಗಿಂತ ಭಿನ್ನವಾದದ್ದು. ಚೆನ್ನೈ ಬಳಿಯ ಕಲ್ಪಾಕ್ಕಮ್‌ನ ಇಂದಿರಾ ಗಾಂಧಿ ಸಂಶೋಧನ ಕೇಂದ್ರದಲ್ಲಿ ಕಳೆದ 30 ವರ್ಷಗಳಿಂದ ಅದನ್ನು ಕಟ್ಟಿ ನಿಲ್ಲಿಸುವ ಯತ್ನ ನಡೆದಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶಗಳು ಫಾಸ್ಟ್ ಬ್ರೀಡರ್ ತಂತ್ರಜ್ಞಾನವನ್ನು ಕರಗತ ಮಾಡಲೆಂದು ಸಾವಿರಾರು ಕೋಟಿ ಹಣವನ್ನು ವ್ಯಯಿಸಿ, ಕೊನೆಗೂ ಅದು ತೀರಾ ಅಪಾಯಕಾರಿ ಎಂದು ಕೈಬಿಟ್ಟಿವೆ. ರಷ್ಯ ದೇಶವೊಂದೇ ಈಗ ಫಾಸ್ಟ್ ಬ್ರೀಡರ್ ತಂತ್ರಜ್ಞಾನದಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಚೀನಾ ತಾನೂ ಒಂದು ಕೈ ನೋಡುತ್ತೇನೆಂದು ಕಳೆದ ಹತ್ತು ವರ್ಷಗಳಿಂದ ಪ್ರಯೋಗದಲ್ಲಿ ನಿರತವಾಗಿದೆ. ಆದರೆ ಅದಕ್ಕೆ ಇನ್ನೂ ಹತ್ತಾರು ವರ್ಷಗಳು ಬೇಕಾಗಿದ್ದು ರಷ್ಯ ಬಿಟ್ಟರೆ ನಾವೇ ಈಗ ಮುಂಚೂಣಿಯಲ್ಲಿದ್ದೇವೆ. ಕೊನೇ ನಿಮಿಷದ ಚೆಕಪ್ ನಡೆಯುತ್ತಿದೆ.

ಈ ತಂತ್ರಜ್ಞಾನ ಅಪಾಯಕಾರಿ, ದುಬಾರಿ ಎಂದು ಗೊತ್ತಿದ್ದರೂ ಅಣುತಂತ್ರಜ್ಞರು ಅದನ್ನು ಪಳಗಿಸಲು ಹೆಣಗುವುದೇಕೆ? ಅದಕ್ಕೆ ಕೆಲವು ವಿಶೇಷ ಕಾರಣಗಳಿವೆ: ಫಾಸ್ಟ್ ಬ್ರೀಡರ್ ಯಶಸ್ವಿಯಾದರೆ ಅದು ತಾನು ಉರಿಸಿದ ಇಂಧನಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ ಹತ್ತು ಕಿಲೊ ಕೆಂಡದಿಂದ 17 ಕಿಲೊ ಇದ್ದಿಲನ್ನು ಪಡೆದ ಹಾಗೆ. ವಿಜ್ಞಾನದ ತತ್ವಗಳ ಪ್ರಕಾರ ಅದು ಎಂದಿಗೂ ಸಾಧ್ಯವಾಗಲಾರದು. ಆದರೆ ತಮ್ಮ ಅನುಕೂಲಕ್ಕಾಗಿ ವಿಜ್ಞಾನಿಗಳು ಒಂದು ಸಣ್ಣ ತಿದ್ದುಪಡಿ ಮಾಡಿಕೊಂಡಿದ್ದಾರೆ. ಹತ್ತು ಕಿಲೊ ಪರಮಾಣು ಇದ್ದಿಲನ್ನು ಸುಡುವಾಗ ಅದರೊಂದಿಗೆ ಒಂದಿಷ್ಟು ಇಂಧನವಲ್ಲದ ಥೋರಿಯಂ ಮರಳನ್ನು ಸೇರಿಸಿರುತ್ತಾರೆ. ಇದ್ದಿಲು ಉರಿಯುತ್ತ ಹೋದಂತೆ ಈ ಮರಳು ಕೂಡ ಇದ್ದಿಲಾಗುತ್ತದೆ. ಅದನ್ನು ಮತ್ತೆ ಉರಿಸಬಹುದು. ಎರಡನೆಯ ಮುಖ್ಯ ಕಾರಣ ಏನೆಂದರೆ, ಥೋರಿಯಂ ಎಂಬ ಮೂಲವಸ್ತು ಮರಳಿನ ರೂಪದಲ್ಲಿ ನಿರುಪಯುಕ್ತವೆಂಬಂತೆ ನಮ್ಮಲ್ಲಿ ಹೇರಳವಾಗಿ ಹಾಸಿಬಿದ್ದಿದೆ. ಹೇರಳ ಎಂದರೆ ನಮ್ಮಲ್ಲಿದ್ದಷ್ಟು ಥೋರಿಯಂ ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ! ಕೇರಳದಿಂದ ಹಿಡಿದು ತಮಿಳುನಾಡು, ಆಂಧ್ರ, ಒಡಿಶಾ, ಬಂಗಾಳದವರೆಗೂ ಕಡಲಂಚಿನ ಮರಳರಾಶಿಯಲ್ಲಿ ಅದರದ್ದೇ ದರ್ಬಾರು. ಅದನ್ನು ಅಣು ಇಂಧನವನ್ನಾಗಿ ಕುಲುಮೆಯಲ್ಲಿ ಪರಿವರ್ತನೆ ಮಾಡುತ್ತಿದ್ದರೆ ಮುಂದೆ ನೂರಿನ್ನೂರು ವರ್ಷಗಳ ಕಾಲ ವಿದ್ಯುತ್ತನ್ನು ಉತ್ಪಾದಿಸುತ್ತಿರಬಹುದು. ಮೂರನೆಯ ಮುಖ್ಯ ಕಾರಣ ಎಂದರೆ, ಪರಮಾಣು ತ್ಯಾಜ್ಯಗಳನ್ನೇ ಉರಿಸಿ ಶಕ್ತಿ ಪಡೆಯುವುದರಿಂದ ತ್ಯಾಜ್ಯದ ವಿಲೆವಾರಿಯ ಸಮಸ್ಯೆಯೇ ಇರುವುದಿಲ್ಲ. ಅಂತೂ ಎಲ್ಲ ದೃಷ್ಟಿಯಿಂದಲೂ ಸೂಪರ್ ಸೂಪರ್.

ಫಾಸ್ಟ್ ಬ್ರೀಡರ್ ತಂತ್ರವನ್ನು ಸರಳವಾಗಿ ಹೀಗೆ ಹೇಳಬಹುದು: ಮಾಮೂಲು ಅಣುಸ್ಥಾವರಗಳಲ್ಲಿ ಯುರೇನಿಯಂ ಸರಳುಗಳನ್ನು ನೀರಲ್ಲಿ ಅಥವಾ ಭಾರಜಲದಲ್ಲಿ ಉರಿಸಿ, ಉಗಿಯಿಂದ ಚಕ್ರ ತಿರುಗಿಸಿ ವಿದ್ಯುತ್ ಉತ್ಪಾದಿಸುತ್ತಾರೆ. ಉರಿದ ಸರಳುಗಳು ಪ್ಲುಟೋನಿಯಂ ಎಂಬ ಪ್ರಳಯಾಂತಕ ರೂಪ ತಾಳುತ್ತವೆ. ಅದನ್ನು ಹೊರಕ್ಕೆ ತೆಗೆದು ಆ ಜಾಗದಲ್ಲಿ ಹೊಸದಾಗಿ ಯುರೇನಿಯಂ ಸರಳುಗಳನ್ನು ತೂರಿಸಬೇಕು.  ಹಾಗೆ ತೆಗೆದ ಪ್ಲುಟೋನಿಯಂ ಭಾರೀ ವಿಕಿರಣ ಸೂಸುತ್ತದೆ. ಅದನ್ನು ಆಸಿಡ್‌ನಲ್ಲಿ ಮುಳುಗಿಸಿಟ್ಟು ಲಕ್ಷಾಂತರ ವರ್ಷ ಸುರಕ್ಷಿತ ಕಾಪಾಡಬೇಕು ಅಥವಾ ಬಾಂಬ್ ತಯಾರಿಕೆಗೆ ಬಳಸಬೇಕು. ಎರಡೂ ಅಪಾಯಕಾರಿಯೇ. ಅದು ಈಗ ಎಲ್ಲೆಡೆ ಚಾಲ್ತಿಯಲ್ಲಿರುವ ತಂತ್ರಜ್ಞಾನ. ಫಾಸ್ಟ್ ಬ್ರೀಡರ್ ತಂತ್ರದಲ್ಲಿ ಇದೇ ನಿಗಿನಿಗಿ ಪ್ಲುಟೋನಿಯಮ್ಮಿಗೆ ಒಂದಿಷ್ಟು ಥೋರಿಯಂ ಮರಳು ಸೇರಿಸಿ ನೀರಿನ ಬದಲು ಸೋಡಿಯಂ ದ್ರವದಲ್ಲಿ ಮುಳುಗಿಸುತ್ತಾರೆ. ಆ ಮಿಶ್ರ ಇಂಧನ ಇನ್ನೂ ‘ಫಾಸ್ಟ್’ ಆಗಿ ಉರಿಯುತ್ತ (ವಿದ್ಯುತ್ ಉತ್ಪಾದಿಸುತ್ತಲೇ) ಹೊಸ ಇಂಧನವನ್ನು ‘ಬ್ರೀಡ್’ ಮಾಡುತ್ತದೆ. ಅರ್ಥಾತ್ ‘ಶೀಘ್ರ ಹೆರುತ್ತದೆ’. ಒರಟಾಗಿ ಹೇಳಬೇಕೆಂದರೆ ಅಲ್ಲಿ ರಕ್ತ ಬೀಜಾಸುರನ ಸಂತತಿ ಚಾಲೂ ಆಗುತ್ತದೆ. ಆದರೆ ಆ ಹೆರಿಗೆ ಮನೆಯೇ ಸಮಸ್ಯೆಗಳ ಗೂಡಾಗಿರುತ್ತದೆ. ಪ್ಲುಟೋನಿಯಂ ಸ್ಪರ್ಶದಿಂದ ಸೋಡಿಯಂ ಕುದಿತಾಪದಲ್ಲಿರುವಾಗ ಅದರೊಳಗೆ ಸುರುಳಿ ಕೊಳವೆಯ ಮೂಲಕ ನೀರನ್ನು ಹಾಯಿಸಬೇಕು. ನೀರು ಉಗಿಯಾಗಿ ದೂರ ಹೋಗಿ ಚಕ್ರವನ್ನು ತಿರುಗಿಸಿ ವಿದ್ಯುತ್ ಉತ್ಪಾದಿಸಬೇಕು. ಸೋಡಿಯಂ ದ್ರವದಲ್ಲಿರುವ ನೀರಿನ ಕೊಳವೆ ತುಸುವೇ ಸೀಳು ಬಿಟ್ಟರೂ ಗೊತ್ತಲ್ಲ, ಸೋಡಿಯಂ ಸಿಡಿಯುತ್ತದೆ. ಹೀಗೆ ಅತಿ ಶಾಖ, ಅತಿ ಒತ್ತಡ, ಅತಿ ವಿಕಿರಣದ ಬಗ್ಗಡವನ್ನು ದೂರ ನಿಯಂತ್ರಣದಲ್ಲೇ ನಿಭಾಯಿಸಬೇಕು. ಚೂರೇಚೂರು ಹೆಚ್ಚುಕಮ್ಮಿಯಾಗಿ ಬೆಂಕಿ ಹೊತ್ತಿಕೊಂಡಿತೊ, ಎಲ್ಲವನ್ನೂ ಶಟ್‌ಡೌನ್ ಮಾಡಿ, ಇಡೀ ವ್ಯವಸ್ಥೆ ತಂಪಾಗಲು ತಿಂಗಳುಗಟ್ಟಲೆ ಕಾದು, ಬಿರುಕಿಗೆ ದೂರದಿಂದಲೇ ಬೆಸುಗೆ ಹಾಕಿ ಮತ್ತೆ ಚಾಲೂ ಮಾಡಬೇಕು.

ಸುಧಾರಿತ ದೇಶಗಳಲ್ಲಿ ಫಾಸ್ಟ್‌ಬ್ರೀಡರ್ ಎಂತೆಂಥ ಮಹಾನ್ ವೈಫಲ್ಯಗಳ ಖೆಡ್ಡಾಗುಂಡಿಯಾಗಿದೆ ಎಂಬುದನ್ನು ನೋಡಿದರೆ ನಮ್ಮ ಯಶಸ್ವಿಗೆ ಅದೆಂಥ ಪ್ರಭಾವಳಿ ಬರಲಿದೆ ಎಂಬುದು ಗೊತ್ತಾಗುತ್ತದೆ. ಜಪಾನ್ ಮೇಲೆ ಬಾಂಬ್ ಬೀಳಿಸಿ ಅಮೆರಿಕ ಛೀಥೂ ಎನ್ನಿಸಿಕೊಂಡ ಮರುವರ್ಷವೇ ಈ ಅಣುರಾಕ್ಷಸನನ್ನು ಸೇವಕನನ್ನಾಗಿ ಪರಿವರ್ತಿಸುವ ಕನಸನ್ನು ಅದು ಎಲ್ಲೆಡೆ ಹಂಚಿತು. ಮೀಟರೇ ಅನಗತ್ಯವೆಂಬಷ್ಟು ಅಗ್ಗದಲ್ಲಿ ವಿದ್ಯುತ್ ಶಕ್ತಿಯನ್ನು ಕೊಡಬಹುದು ಎಂದು ಹೇಳಿ ಅಣುಸ್ಥಾವರ ಹೂಡಲು ಕಂಡಕಂಡ ದೇಶಗಳಲ್ಲಿ ತಂತ್ರಜ್ಞರು ಗುಮ್ಮಟ ಕಟ್ಟಿದರು. ಆದರೆ ಹಾಗೆ ಮಾಡಿದರೆ ಎಲ್ಲ ದೇಶಗಳಿಗೂ ಸಾಲುವಷ್ಟು ಯುರೇನಿಯಂ ಇಂಧನ ಈ ಪ್ರಪಂಚದಲ್ಲಿಲ್ಲ ಎಂಬುದು ಗೊತ್ತಾಯಿತು. ಆಗ ಫಾಸ್ಟ್ ಬ್ರೀಡರ್ ಎಂಬ ಮಂತ್ರದಂಡ ಗೋಚರಿಸಿತು. ಥೋರಿಯಂ ಎಂಬ ಅತ್ಯಲ್ಪ ವಿಕಿರಣವುಳ್ಳ ಮರಳನ್ನೂ ವಿದ್ಯುತ್ ಶಕ್ತಿಯ ‘ಅಕ್ಷಯ ಪಾತ್ರೆ’ಯಾಗಿ ಪರಿವರ್ತಿಸಬಹುದು ಎಂದು ಅಣುವಿಜ್ಞಾನಿಗಳು ಮುತ್ಸದ್ದಿಗಳಿಗೆ ಬಿಂಬಿಸಿದರು. ಮೊದ್ದು ಥೋರಿಯಂನಿಂದ ವಿದ್ಯುತ್ ಉತ್ಪಾದಿಸಲೆಂದು ನ್ಯೂಯಾರ್ಕ್ ಬಳಿ ಇಂಡಿಯನ್ ಪಾಯಿಂಟ್ ಎಂಬಲ್ಲಿ ಮೊದಲ ಸ್ಥಾವರ 1962ರಲ್ಲಿ ತಲೆಯೆತ್ತಿತು. ಅದರ ಒಳಿತು-ಕೆಡುಕು ಗೊತ್ತಾಗುವ ಮೊದಲೇ ಬ್ರಿಟನ್, ಫ್ರಾನ್ಸ್, ಜರ್ಮನಿ, ಜಪಾನ್‌ಗಳಲ್ಲೂ ಅಂಥದ್ದೇ ಹೊಸ ಸ್ಥಾವರಗಳಿಗೆ ಹಣ ಹೂಡಿದ್ದಾಯಿತು. ಪರಮಾಣು ತಂತ್ರಜ್ಞಾನದ ಹೆಚ್ಚುಗಾರಿಕೆ ಏನೆಂದರೆ ತಂತ್ರ ಚುರುಕಾಗಿರುತ್ತದೆ, ಜ್ಞಾನ ನಿಧಾನಕ್ಕೆ ಬರುತ್ತದೆ.

ಭಸ್ಮವೇ ಮತ್ತೆ ಇಂಧನವಾಗುವ ಚಮತ್ಕಾರ ಹೆಚ್ಚಿನವರಿಗೆ ಅರ್ಥವಾಗದಿದ್ದರೂ ಎಲ್ಲರನ್ನೂ ಆಕರ್ಷಿಸಿತ್ತು. ಫ್ರಾನ್ಸ್ ತನ್ನ ಸ್ಥಾವರಕ್ಕೆ ‘ಫೀನಿಕ್ಸ್’ ಎಂದೇ ಹೆಸರಿಟ್ಟಿತು. ಆದರಲ್ಲಿ ವಿದ್ಯುತ್ ಉತ್ಪಾದನೆ ಆರಂಭವಾಗುವ ಮೊದಲೇ ಅಮೆರಿಕದ ಸ್ಥಾವರದಲ್ಲಿ ಒಂದರ ಮೇಲೊಂದು ಸಮಸ್ಯೆ ಬರತೊಡಗಿತ್ತು. ಇಂಧನ ಸೋರಿಕೆ, ಸ್ಫೋಟ, ಅತಿಶಾಖ, ದೀರ್ಘಾವಧಿ ರಿಪೇರಿ, ಮಿತಿಮೀರಿದ ವೆಚ್ಚ ಒಂದೆರಡಲ್ಲ. ವೈಫಲ್ಯಗಳ ಗುಪ್ತ ಕತೆಗಳೆಲ್ಲ ಒಂದೊಂದಾಗಿ ಸೋರಿಕೆಯಾಗುವಷ್ಟರಲ್ಲಿ ಯುರೋಪ್ ಮತ್ತು ಜಪಾನಿನಲ್ಲಿ ಅದೇ ಮಾದರಿಯ ಹೊಸ ಗುಮ್ಮಟಗಳು ತಲೆ ಎತ್ತಿಬಿಟ್ಟಿದ್ದವು. 1973ರಲ್ಲಿ ತೈಲ ಬಿಕ್ಕಟ್ಟು ಗಂಭೀರವಾದಾಗ, ಫಾಸ್ಟ್ ಬ್ರೀಡರ್ ತಂತ್ರಕ್ಕೆ ಇನ್ನಷ್ಟು ಹಣ ಸುರಿಯಲಾಯಿತು. ಫ್ರಾನ್ಸ್ ತನ್ನ ಕುಂಟುತ್ತಿದ್ದ ಫೀನಿಕ್ಸ್ ಯೋಜನೆಯನ್ನು ಇನ್ನಷ್ಟು ಹಿಗ್ಗಿಸಿ ಸೂಪರ್‌ಫೀನಿಕ್ಸ್ ಎಂಬ ಮಹಾಸ್ಥಾವರವನ್ನು ಕಟ್ಟತೊಡಗಿತು. ಅದೇ ವೇಳೆಗೆ ಅಮೆರಿಕ ತನ್ನದನ್ನು ನಿಲ್ಲಿಸಿತು; ಬ್ರಿಟನ್ನಿನ ಡೌನ್ರೀ ಸ್ಥಾವರ ಕೆಟ್ಟು ಕೂತಿತು. ಜರ್ಮನಿ 700 ಕೋಟಿ ಡಿಎಮ್ ವೆಚ್ಚದಲ್ಲಿ ಕಲ್ಕಾರ್ ಎಂಬಲ್ಲಿ ಫಾಸ್ಟ್ ಬ್ರೀಡರ್ ಗುಮ್ಮಟವನ್ನು ಕಟ್ಟಿ ನಿಲ್ಲಿಸಿತು. ಫ್ರೆಂಚರ ಸೂಪರ್‌ಫೀನಿಕ್ಸ್ ರಗಳೆ ದಿನದಿನಕ್ಕೆ ಹೆಚ್ಚುತ್ತಿತ್ತು. ಅದೇನೂ ಸಿಡಿಯಲಿಲ್ಲ, ಆದರೆ ಜನ ಸಿಡಿದೆದ್ದರು. ಅಪಾರ ವೆಚ್ಚ, ವಿಕಿರಣ ಸೋರಿಕೆ, ಅತೀವ ರಹಸ್ಯ, ಅತಿಬಿಗಿ ಕಟ್ಟುಪಾಡು ಎಲ್ಲಕ್ಕೂ ಪ್ರತಿಭಟನೆ ಜೋರಾಯಿತು. ನಾಲ್ಕುನೂರು ವಿಜ್ಞಾನಿಗಳು ಅದನ್ನು ನಿಲ್ಲಿಸುವಂತೆ ಒತ್ತಾಯಿಸಿದರು. ಉಪವಾಸ ಸತ್ಯಾಗ್ರಹ ಕೂಡ ನಡೆಯಿತು! ಅತ್ತ ತಂತ್ರಜ್ಞರು ಶತಾಯ ಗತಾಯ ಫಾಸ್ಟ್‌ಬ್ರೀಡರನ್ನು ಪಳಗಿಸಲು ಯತ್ನಿಸುತ್ತಿದ್ದಾಗ ಇತ್ತ ಜನಸಾಮಾನ್ಯರೇ ವ್ಯಗ್ರರಾಗಿ, ಉಗ್ರರಾಗಿ, ಬೀದಿಗಿಳಿದು ಪೆಟ್ರೋಲ್‌ಬಾಂಬ್ ಸಿಡಿಸಿದರು. ಗೋಲಿಬಾರ್ ನಡೆದು, ವಿಟಾಲ್ ಮೈಕಲಾನ್ ಎಂಬ ಹೈಸ್ಕೂಲ್ ಫಿಸಿಕ್ಸ್ ಶಿಕ್ಷಕ ಗುಂಡಿಗೆ ಬಲಿಯಾದ. ಅದಾಗಿ ಕೆಲವೇ ತಿಂಗಳ ನಂತರ ಇನ್ನೊಬ್ಬ ಹೈಸ್ಕೂಲ್ ಶಿಕ್ಷಕ ಹಾರ್ಟ್‌ಮುಟ್ ಗ್ರುಂಡ್ಲರ್ ತನ್ನ ಮೇಲೆ ಪೆಟ್ರೋಲ್ ಸುರಿದು ಉರಿದು ಭಸ್ಮವಾದ. ಕೆಲವರು ರಾಕೆಟ್ ಮೂಲಕ ಇಡೀ ಸ್ಥಾವರವನ್ನೇ ಉಡಾಯಿಸಲು ಯತ್ನಿಸಿದರು. ವೆಚ್ಚ 6000 ಕೋಟಿ ಫ್ರಾಂಕ್ ತಲುಪಿದಾಗ 1997ರಲ್ಲಿ ಸರ್ಕಾರವೇ ಸೂಪರ್‌ಫೀನಿಕ್ಸನ್ನು ಸ್ಥಗಿತಗೊಳಿಸಿತು. ಪಕ್ಕದ ಜರ್ಮನಿಯ ಕಲ್ಕಾರ್ ಸ್ಥಾವರದಲ್ಲಿ ಇಂಧನ ತುಂಬಿದ್ದರೂ ಒಮ್ಮೆಯೂ ಚಾಲೂ ಮಾಡದೆ ಹರಾಜು ಹಾಕಲಾಯಿತು. ಇಂಧನ ಖಾಲಿಮಾಡಿ 2005ರಲ್ಲಿ ಅದನ್ನು ಡಿಸ್ನೆಲ್ಯಾಂಡ್ ಥರಾ ಮನರಂಜನಾ ತಾಣವನ್ನಾಗಿ ಪರಿವರ್ತಿಸಲಾಯಿತು. ಸ್ಥಾವರದ ನಿರ್ದೇಶಕನೇ ಇಂದು ಜರ್ಮನಿಯ ಅಣುವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದಾನೆ.

ಇತ್ತ ಜಪಾನಿನ ಮೊಂಜು ಫಾಸ್ಟ್ ಬ್ರೀಡರ್ ಕತೆ ಇನ್ನೂ ತಮಾಷೆಯಾಗಿದೆ. 850 ಕೋಟಿ ಡಾಲರ್ ಹೂಡಿ ಕಟ್ಟಲು ತೊಡಗಿ ಹದಿನೈದು ವರ್ಷಗಳ ನಂತರ 1995ರಲ್ಲಿ ಚಾಲೂ ಮಾಡಿದ್ದೇ ತಡ, ಬೆಂಕಿ ಹೊತ್ತಿಕೊಂಡು ಸ್ಥಗಿತಗೊಂಡಿತ್ತು. 15 ವರ್ಷಗಳ ರಿಪೇರಿಯ ನಂತರ 2010ರಲ್ಲಿ ಚಾಲೂ ಮಾಡಿದರೂ ಅದೇ ವರ್ಷ ಮತ್ತೆ ಕೆಟ್ಟು ನಿಂತಿತು. ಫುಕುಶಿಮಾ ದುರಂತದ ವೇಳೆಗೆ ಇದು ಕೆಟ್ಟು ಕೂತಿತ್ತು. ಇಲ್ಲಾಂದರೆ ಎಲ್ಲ ಅಣುಸ್ಥಾವರಗಳ ಜೊತೆಗೆ ಇದನ್ನೂ ಸ್ಥಗಿತಗೊಳಿಸಬೇಕಿತ್ತು. ಕೆಟ್ಟು ಕೂತಿದ್ದಾಗಲೂ ಪ್ರತಿದಿನ ಐದು ಕೋಟಿ ಯೆನ್ ಖರ್ಚನ್ನು ತಾಳಲಾರದೆ ಕಳೆದ ಡಿಸೆಂಬರಿನಲ್ಲಿ ಅದಕ್ಕೆ ಅಂತಿಮ ವಿದಾಯ ಹೇಳಿದ್ದಾಯಿತು.

ಹಟಕ್ಕೆ ಬಿದ್ದಂತೆ ರಷ್ಯ ಮಾತ್ರ ಯೆಕೇಟರಿಂಗ್‌ಬರ್ಗ್ ಎಂಬಲ್ಲಿ 30 ವರ್ಷಗಳಿಂದ ಚಿಕ್ಕ ಫಾಸ್ಟ್‌ಬ್ರೀಡರ್ ಸ್ಥಾವರವನ್ನು ನಡೆಸುತ್ತಿದೆ. ರಷ್ಯದಲ್ಲಿ ಥೋರಿಯಂ ಇಲ್ಲವಾದ್ದರಿಂದ ಯು-238 ಎಂಬ ನಿಷ್ಪ್ರಯೋಜಕ ಲೋಹದ ಪುಡಿಯನ್ನೇ ಚುರುಕಾಗಿಸಿ ಉರಿಸುತ್ತಿದ್ದಾರೆ. ಕಳೆದ ವರ್ಷವಷ್ಟೆ ಫಾಸ್ಟ್‌ಬ್ರೀಡರಿನ ದೊಡ್ಡ ಮಾದರಿಯೊಂದು 800 ಮೆಗಾವಾಟ್ ವಿದ್ಯುತ್ ಪೂರೈಕೆ ಆರಂಭಿಸಿದೆ. ಹತ್ತು ದಿನಗಳ ಹಿಂದಷ್ಟೆ ಜಗತ್ತಿನ 700 ಪರಮಾಣು ತಂತ್ರಜ್ಞರನ್ನು ಸೇರಿಸಿ ಸಂಭ್ರಮಾಚರಣೆ ನಡೆಸಿದೆ. ಅಲ್ಲಿಗೆ ಹೋಗಿದ್ದ ಭಾರತೀಯ ವಿಜ್ಞಾನಿಗಳು ಅಲ್ಲೇ ನಮ್ಮ ಕಲ್ಪಾಕ್ಕಮ್ ಸ್ಥಾವರದ ಗುಟ್ಟು ಬಿಚ್ಚಿಟ್ಟಿದ್ದಾರೆ. ರಷ್ಯದ್ದಕ್ಕಿಂತ ನಮ್ಮದು ಭಿನ್ನವಾಗಿದ್ದು, ಎಲ್ಲೆಡೆ ವಿಫಲವಾಗಿರುವ ಥೋರಿಯಂ ಮರಳಿಗೇ ಚುರುಕು ಮುಟ್ಟಿಸಿ ಇಂಧನವನ್ನಾಗಿ ಪರಿವರ್ತಿಸಲಿದೆ ಎಂದು ಹೇಳಿದ್ದಾರೆ.

ಅದು ಬರೀ ಪಟಾಕಿಯಾಗದಿರಲಿ, ಅಮೆರಿಕದ ಇಂಡಿಯನ್ ಪಾಯಿಂಟ್‌ನಲ್ಲಿ ಆರಂಭವಾದ ತಂತ್ರಯಾತ್ರೆ ನಮ್ಮ ಇಂಡಿಯಾದಲ್ಲೇ ಯಶಸ್ವಿಯಾಗಿ ಹೊಸ ಬೆಳಕನ್ನು ಥೋರಲಿ (ಥೋರಿಯಂ ಹೆಸರು ಐರೋಪ್ಯ ಸಿಡಿಲ ದೇವತೆ ಥೋರ್‌ನಿಂದ ಬಂದಿದ್ದು); ತೆರಿಗೆದಾರರಿಗೆ, ಅಣುಭಕ್ತರಿಗೆ ಅದು ಬರಸಿಡಿಲು ಆಗದಿರಲಿ ಎಂದು ಹಾರೈಸೋಣ.

ಪ್ರತಿಕ್ರಿಯಿಸಿ (+)