ಶುಕ್ರವಾರ, ಆಗಸ್ಟ್ 23, 2019
21 °C

ಬೆಂಗಳೂರಿನ ರಾತ್ರಿ ಡೆಡ್ಲೈನ್ ಕಗ್ಗಂಟು

ಎಸ್.ಆರ್. ರಾಮಕೃಷ್ಣ
Published:
Updated:
ಬೆಂಗಳೂರಿನ ರಾತ್ರಿ ಡೆಡ್ಲೈನ್ ಕಗ್ಗಂಟು

ರಾತ್ರಿ ಹತ್ತು ಗಂಟೆಯ ಮೇಲೆ ಬಾರ್ ಮತ್ತು ರೆಸ್ಟೋರೆಂಟ್ ಗಳಿಂದ ಸಂಗೀತ ಕೇಳಿಬರಬಾರದು ಎಂದು ಪೊಲೀಸರು ಈಗೊಂದು ಕಟ್ಟಪ್ಪಣೆ ಹೊರಡಿಸಿದ್ದಾರೆ. 2005ರ ಸುಪ್ರೀಂ ಕೋರ್ಟ್ ಆದೇಶವೊಂದನ್ನು ಉಲ್ಲೇಖಿಸಿ ಈ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಮ್ಯೂಸಿಕ್ ಕೇಳಿಬಂದ ಕಡೆಯೆಲ್ಲ ನುಗ್ಗಿ ಬಾಗಿಲು ಮುಚ್ಚಿಸುತ್ತಿದ್ದಾರೆ. ಕೇಸ್ ಜಡಿಯುತ್ತಿದ್ದಾರೆ. ಲೈಸನ್ಸ್ ರದ್ದು ಮಾಡುವುದಾಗಿ ಬೆದರಿಸುತ್ತಿದ್ದಾರೆ. ಇದು ಹೋದ ವಾರದ ಬೆಳವಣಿಗೆ.ಹಳೆಯದೊಂದು ಇಂಥದ್ದೇ ನಿಯಮ ಬೆಂಗಳೂರಿನಲ್ಲಿ ಜಾರಿಯಲ್ಲಿದೆ. ಮದ್ಯ ಇರುವಲ್ಲಿ ಹಾಡು, ಡಾನ್ಸ್ ಇರಕೂಡದು ಎಂಬ ಪೊಲೀಸ್ ಅಭಿಪ್ರಾಯ ಜಗ್ಗಿಸಲಾರದ ನಿಯಮವಾಗಿಬಿಟ್ಟಿದೆ. ರಾತ್ರಿ ಹನ್ನೊಂದೂವರೆ ಗಂಟೆಯ ಮೇಲೆ ಯಾವ ಊಟದ ಜಾಗವೂ ತೆರೆದಿರಬಾರದು ಎಂಬ ಆಜ್ಞೆ ಜಾರಿಯಲ್ಲಿದೆ. ಈ ನಿಯಮವನ್ನು ಅತ್ಯುತ್ಸಾಹದಿಂದ ಪೊಲೀಸರು ಅನುಷ್ಠಾನಗೊಳಿಸುವುದನ್ನು ಬೆಂಗಳೂರಿನ ನಾಗರಿಕರು ಅನುಭವಿಸಿರುತ್ತಾರೆ. ಊಟ ಮಾಡುತ್ತಿರುವವರನ್ನು ದೊಣ್ಣೆ ಬಡಿದು ಮೇಲೆಬ್ಬಿಸುವ ಅನಾಗರಿಕ ದೃಶ್ಯವು ಪ್ರತಿ ದಿನ ನೋಡಸಿಗುತ್ತದೆ.2008ರಲ್ಲಿ ಒಂದು ಧರಣಿ ನಡೆಯಿತು. ಹೆಚ್ಚಾಗಿ ಇಂಗ್ಲಿಷ್ ಮಾತಾಡುವ ಕಂಟೋನ್ಮೆಂಟ್ ಕಡೆಯಿಂದ ಬಂದ ಒಂದಷ್ಟು ಜನ ಎಂ. ಜಿ. ರಸ್ತೆಯಲ್ಲಿ ಪ್ರತಿಭಟನೆ ಮಾಡಿದರು. ಅಲ್ಲಿ ನೆರೆದಿದ್ದವರು ಸಾಮಾನ್ಯವಾಗಿ ಧರಣಿ ಕೂರುವವರ ಪೈಕಿಯಲ್ಲ; ಧರಣಿ ಕೂರುವವರನ್ನು ಟೀಕಿಸುವ ಪೈಕಿ! ಫ್ಯಾಷನ್ ಡಿಸೈನರ್‌ಗಳು, ಡಿಜೆಗಳು ಬೀದಿಗಿಳಿದು ಸ್ಲೋಗನ್ ಕೂಗುವುದು ಕಣ್ಣಿಗೆ ಬೀಳುವುದು ಅಪರೂಪ. ಒಳ್ಳೆ ಬಟ್ಟೆ ಧರಿಸಿ, ಕೈಯಲ್ಲಿ ಗಿಟಾರ್ ಹಿಡಿದು ಪ್ರತಿಭಟನೆ ಮಾಡುವವರನ್ನು ಎಷ್ಟು ಬಾರಿ ನೋಡಿದ್ದೀರ ಹೇಳಿ! ಮಾಧ್ಯಮದವರಿಗೆ ಗ್ಲ್ಯಾಮರಸ್ ಚಿತ್ರ ತೆಗೆಯುವ ಅವಕಾಶವೂ ಅದಾಗಿತ್ತು.  ಧರಣಿ ಕೂತವರ ಬೇಡಿಕೆ: ಬೆಂಗಳೂರಿನ ಬಾರ್ ಮತ್ತು ರೆಸ್ಟೋರೆಂಟ್‌ಗಳು ಬೇಗ ಮುಚ್ಚಬೇಕು ಎನ್ನುವ ನಿಯಮವನ್ನು ರದ್ದು ಗೊಳಿಸಬೇಕು.  ಡಾನ್ಸ್ ಮೇಲಿನ ಬ್ಯಾನ್ ಹಿಂತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಮನೋರಂಜನೆ, ನೈಟ್ ಲೈಫ್ ಇಲ್ಲ ಎಂಬ ಕೊರಗಿಗೆ ಮತ್ತೆ ಮತ್ತೆ ದನಿಗೊಡುತ್ತಿದ್ದ ಈ ಪ್ರತಿಭಟನಕಾರರು ಒಂದು ವರ್ಗದ ಮೋಜು ಮಾಡುವ ಹಕ್ಕನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ ಎಂದು ಹಲವರಿಗೆ ಅನಿಸಿದ್ದು ನಿಜ.  1990ರ ನಂತರ ಬೆಂಗಳೂರಿಗೆ ಸಾಫ್ಟ್‌ವೇರ್ ವ್ಯಾಪಾರ ದೊಡ್ಡ ಪ್ರಮಾಣದಲ್ಲಿ ಬಂತು. ಉತ್ತರ ಭಾರತದಿಂದ ಜನ ದೊಡ್ಡ ಸಂಖ್ಯೆಯಲ್ಲಿ ಇಲ್ಲಿಗೆ ಬಂದು ನೆಲೆಸಲು ಪ್ರಾರಂಭಿಸಿದರು. ಮುಂಬೈ, ದಿಲ್ಲಿಯಿಂದ ಬಂದವರು ಇಲ್ಲಿ ನೈಟ್ ಲೈಫ್ ಇಲ್ಲ ಎಂದು ಹೇಳಲು ಶುರು ಮಾಡಿದ್ದು ಸುಮಾರು ಆ ಸಮಯಕ್ಕೆ. ಅದೇ ಘಟ್ಟದಲ್ಲಿ ಇಲ್ಲಿ ಬಂದು ನೆಲೆಸಿದ ಇಂಗ್ಲಿಷ್ ಪತ್ರಕರ್ತರೂ ಅದೇ ರಾಗ ಹಾಡಲು ಹಚ್ಚಿಕೊಂಡರು. ಕೆಲವು ಪತ್ರಿಕೆಗಳಲ್ಲಿ ಈ ವಿಷಯ ಮತ್ತೆ ಮತ್ತೆ ಪ್ರಕಟವಾಗಲು ಇದೂ ಒಂದು ಕಾರಣ. ಇದೊಂದು ಸ್ಮಾಲ್ ಟೌನ್, ಇಲ್ಲಿ ಮಹಾನಗರಗಳಲ್ಲಿ ಇರುವಂತೆ ರಾತ್ರಿ ಮೋಜು ಇಲ್ಲ ಎಂದು ದರ್ಪದಿಂದಲೇ ಆಗಾಗ ಹೇಳಿಕೆ ಕೊಡುವವರು ಸಾಕಷ್ಟಿದ್ದರು.ಅವರಿಗೆ ಬೆಂಗಳೂರೇ ಗೊತ್ತಿಲ್ಲ ಎಂದು ನನಗನ್ನಿಸುತ್ತಿತ್ತು. ಅತಿ ಹೆಚ್ಚು ಪಾಶ್ಚಾತ್ಯ ಪ್ರಭಾವ ಇರುವ ಭಾರತೀಯ ನಗರ ಬೆಂಗಳೂರು. ಮುಖ್ಯಮಂತ್ರಿ ಎಂ ಜಿ ಆರ್ ಕಾಲದಲ್ಲಿ ಮದ್ಯ, ಕುದುರೆ ರೇಸ್ ನಿಷೇಧ ತಮಿಳು ನಾಡಿನಲ್ಲಿ ಜಾರಿಯಲ್ಲಿತ್ತು. ಬೆಂಗಳೂರಿನಲ್ಲಿ ಅಂಥ ನಿಷೇಧಗಳು ಎಂದೂ ಅನುಷ್ಠಾನಗೊಂಡಿಲ್ಲ. ವೀಕೆಂಡ್ ಆಯಿತು ಅಂದರೆ ಅಂದಿನ ಮದರಾಸಿನಿಂದ ರಾತ್ರಿ ರೈಲು ಹತ್ತಿ ಸಾವಿರಾರು ಜನ ಬೆಂಗಳೂರಿಗೆ ಬಂದು, ರೇಸ್ ಆಡಿ, ಬಿಯರ್ ಕುಡಿದು ಮರಳುತ್ತಿದ್ದರು. ಅವರ ಮಟ್ಟಿಗೆ ಬೆಂಗಳೂರು ತುಂಬ ಉದಾರ ಜೀವನಶೈಲಿಯ, ನಿರರ್ಥಕ ಕಟ್ಟುಪಾಡುಗಳಿಲ್ಲದ ನಗರವಾಗಿತ್ತು. ಇಂಥ ನಗರ ಯಾವುದೋ ಆಫ್ಘಾನಿಸ್ತಾನದ ತಾಲಿಬಾನ್ ನಿಯಂತ್ರಣದ ತಾಣ ಎಂಬಂತೆ ಹೊಸ ಬೆಂಗಳೂರಿಗರು ಮಾತನಾಡಲು ಶುರು ಮಾಡಿಬಿಟ್ಟಿದ್ದರು.   ಇವರ ವಾದವನ್ನು ಕೇಳಿದ ಹಳೆ ಬೆಂಗಳೂರಿಗರಿಗೆ ಒಂದು ಪ್ರಶ್ನೆ ಕಾಡತೊಡಗಿತು. ಪ್ರತಿ ದಿನವೂ ಪಬ್‌ಗೆ ಹೋಗಿ ಪಾರ್ಟಿ ಮಾಡುವಷ್ಟು ಸಮಯ, ದುಡ್ಡು, ಮನೋಸ್ಥಿತಿ  ಎಷ್ಟು ಜನರಿಗೆ ಇರಲು ಸಾಧ್ಯ? ಹೀಗೆ ಮತ್ತೆ ಮತ್ತೆ ಪತ್ರಿಕೆಗಳಲ್ಲಿ ಗೋಳು ಕರೆಯುವವರು ಯಾರು? ಈ ಫ್ಯಾಷನ್ ಮಂದಿಗೆ ಕುಡಿಯುವುದು ಬಿಟ್ಟರೆ ಬೇರೆ ಮನರಂಜನೆಯೇ ಗೊತ್ತಿಲ್ಲವೇ? ಬೆಂಗಳೂರಿನ ಸಾಂಸ್ಕೃತಿಕ ಬದುಕಿನಲ್ಲಿ ಇವರಿಗೆ ಆಸಕ್ತಿಯೇ ಇಲ್ಲವೇ? ರವಿಂದ್ರ  ಕಲಾಕ್ಷೇತ್ರ, ಚೌಡಯ್ಯ  ಭವನ, ಗಾಯನ ಸಮಾಜ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ನಲ್ಲಿ ನಡೆಯುವ  ಸಂಗೀತ,  ಭಾಷಣ, ಗೋಷ್ಠಿಗಳ ಬಗ್ಗೆ ಇವರಿಗೆ ಏನೂ ತಿಳಿದಿಲ್ಲವೆ? ಇಲ್ಲಿಯ ಸಾಮಾಜಿಕ ಬದುಕಿನಿಂದ ದೂರ ಉಳಿದು ಏಕೆ ಹೀಗೆ ನಗರವನ್ನೇ ಹೀಗಳೆಯುತ್ತಾರೆ?ನಮ್ಮ ನಗರ ಜೀವನದ ಇಂಥ ವಿಚಿತ್ರ ಗೊಂದಲಗಳಿಗೆ ಏನು ಕಾರಣ? ನಿಜವಾದ ಕಾನೂನು ಸುವ್ಯವಸ್ಥೆಯ ತೊಂದರೆಯಿದೆಯೇ? ಅಹೋರಾತ್ರಿ ಬಾರ್ ಮತ್ತು ರೆಸ್ಟೋರೆಂಟ್ ತೆರೆದಿದ್ದರೆ ಅಪರಾಧಗಳು ಹೆಚ್ಚಾಗಿಬಿಡುತ್ತವೆಯೇ? ಬೆಂಗಳೂರಿಗಿಂತ ದೊಡ್ಡ ನಗರಗಳು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಿಕೊಂಡಿವೆ? ಇದು ನೈತಿಕತೆಯ ಪ್ರಶ್ನೆಯೆ? ಸಣ್ಣ ಸಣ್ಣ ವಿಷಯಕ್ಕೂ ಲಂಚ ಹೊಡೆಯುವ ಪೊಲೀಸರು ನೈತಿಕತೆಯ ಪ್ರಶ್ನೆಗಳನ್ನು ನಿರ್ಧರಿಸಲು ಯೋಗ್ಯರೆ? ಪೊಲೀಸರ ಸಂಖ್ಯೆ ಕಡಿಮೆಯಿರುವುದರಿಂದ ಈ ನಿಯಮ ಮಾಡಿದ್ದಾರೆಯೆ?ಇನ್ನಷ್ಟು ಪೊಲೀಸರು ನೇಮಕ ಆದರೆ ಈ ನಿಯಮ ರದ್ದಾಗುತ್ತದೆಯೇ? ತಾವು ಕಷ್ಟ ಪಡುತ್ತಿರುವಾಗ ದುಡ್ಡಿದ್ದವರು ಕುಡಿದು ಕುಣಿಯುವುದು ಸರಿಯಲ್ಲ ಎಂಬ ಧೋರಣೆಯಿಂದ ಪೊಲೀಸರು ಇಂಥ ನಿಯಮಗಳನ್ನು ಹೇರುತ್ತಾರೆಯೇ? ಇದೊಂದು ಬಡವ-ಶ್ರೀಮಂತರ ನಡುವಿನ ಸಮಸ್ಯೆಯೇ? ಹೊಸ ಬೆಂಗಳೂರಿನ ಕೆಲಸ ಮತ್ತು ಜೀವನ ಶೈಲಿ ಪೊಲೀಸರಿಗೆ ಅರ್ಥವಾಗುತ್ತಿಲ್ಲವೆ? ಅರ್ಧ ರಾತ್ರಿಯೂ ಜನ ಎದ್ದಿರಬಹುದು, ಕೆಲಸ ಕಾರ್ಯದಲ್ಲಿ ತೊಡಗಿರಬಹುದು ಎಂಬ ಕಲ್ಪನೆ ಅವರಿಗೆ ಇನ್ನೂ ಮನವರಿಕೆಯಾಗಿಲ್ಲವೆ? ಅವರ ಧೋರಣೆ ಇನ್ನಾವುದೋ ಕಾಲಘಟ್ಟದಲ್ಲಿ ಸ್ಥಗಿತವಾಗಿದೆಯೇ?ಬೆಂಗಳೂರು ಇಂದು ಜಗತ್ತಿನಲ್ಲೆಲ್ಲಾ ಹೆಸರಾಗಿರುವುದು ರಾತ್ರಿಯೆಲ್ಲ ಕೆಲಸ ಮಾಡುವುದಕ್ಕೆ. ಇಲ್ಲಿನ ಬಿ.ಪಿ.ಓಗಳು ಪಶ್ಚಿಮದ ಕ್ಲೈಂಟ್‌ಗಳಿಗೆ ಅನುಕೂಲವಾದ ಸಮಯದಲ್ಲಿ ಕೆಲಸ ಮಾಡುತ್ತವೆ. ಸಾವಿರಾರು ಜನ ರಾತ್ರಿ ಉದ್ಯೋಗ ಮಾಡುವ ನಗರ ಇದು. ಎಷ್ಟೋ ವಲಯಗಳಲ್ಲಿ ರಾತ್ರಿ ಪಾಳಿ ಸರ್ವೇ ಸಾಮಾನ್ಯ. ಪಶ್ಚಿಮ ದೇಶಗಳು ಎದ್ದಿರುವ, ನಮ್ಮ ದೇಶ ಮಲಗಿರುವ ಸಮಯದಲ್ಲಿ ಉದ್ಯೋಗ ಮಾಡುವುದರಿಂದ ಈ ನಗರದಲ್ಲಿ ನೌಕರಿ ಸೃಷ್ಟಿಯಾಗಿದೆ. ದೇಶಕ್ಕೆ ಅಮೂಲ್ಯವಾದ ಡಾಲರ್ ಆದಾಯ ಬರುತ್ತಿದೆ. ಇದು ಪೊಲೀಸರಿಗೆ ಅರಿವಾದಂತಿಲ್ಲ. ನೀವು ಗಮನಿಸಿರಬಹುದು: ರಾತ್ರಿ ದುಡಿಯುವವರನ್ನು, ಲೇಟಾಗಿ ಹೊರಗೆ ಊಟ ಮಾಡುವವರನ್ನು ಪೊಲೀಸರು ಅನುಮಾನದಿಂದ ಕಾಣುತ್ತಾರೆ. ಅಂಥವರನ್ನು ಹದ್ದುಬಸ್ತಿನಲ್ಲಿಡಬೇಕು ಎಂದು ಕಾನೂನುಗಳನ್ನು ರೂಪಿಸುವ ಉಮೇದಿನಲ್ಲಿರುತ್ತಾರೆ.ಈ ಹತ್ತು ಗಂಟೆಯ ನಿರ್ಬಂಧ ತೆಗೆದುಕೊಳ್ಳಿ. ಬಾರ್, ಹೋಟೆಲ್‌ಗಳ ನೆರೆ ಹೊರೆಯವರಿಗೆ ಅಬ್ಬರದ ಮ್ಯೂಸಿಕ್ ತೊಂದರೆ ಮಾಡಬಾರದು ಎಂಬ ಉದ್ದೇಶ ಒಳ್ಳೆಯದಿರಬಹುದು. ಆದರೆ ವಾಣಿಜ್ಯ ಮತ್ತು ನಿವಾಸಿ ವಲಯಗಳ ನಿಯಮಗಳನ್ನು ಜಾರಿಗೊಳಿಸದೇ ಇರುವುದಕ್ಕೆ ಯಾರು ಕಾರಣ? ಅವರ ಮೇಲೂ ಕ್ರಮ ಜಾರಿಯಾಗಬೇಕಲ್ಲವೆ?ಹಾಡುವವರು, ಡಾನ್ಸ್ ಮಾಡುವವರು, ಊಟಕ್ಕೆ ಕುಳಿತವರು, ಆಹಾರ ಬಡಿಸುವವರು, ರೆಸ್ಟೋರೆಂಟ್ ನಡೆಸುವವರು ಇಂಥವರೆಲ್ಲರನ್ನು ಅಪರಾಧಿಗಳಾಗಿ ಕಾಣುವ ವ್ಯವಸ್ಥೆ ಬಿಗಿಯಾಗುತ್ತಿದೆ, ಅತಿಯಾಗುತ್ತಿದೆ. ಪೊಲೀಸರ ಅಧಿಕಾರ ವಿಪರೀತವಾಗುತ್ತಿದೆ. ಇದನ್ನು ರಾಜಕೀಯ ನಾಯಕರು ಗಮನಿಸಿ ಸಾಮಾನ್ಯ ಪ್ರಜೆಗಳಿಗೆ ಅವಮಾನವಾಗದ ಕಾನೂನು ಮಾಡಬೇಕಿದೆ. ಬಿ.ಪಿ.ಓ ಉದ್ಯೋಗಿಗಳು, ಕ್ಯಾಬ್ ಚಾಲಕರು, ವೈದ್ಯರು, ಪತ್ರಕರ್ತರು ಮತ್ತು ಪೊಲೀಸರು ರಾತ್ರಿಯೆಲ್ಲ ದುಡಿಯುತ್ತಾರೆ. ಅವರು ಕೆಲಸ ಮುಗಿಸಿ ಹೊರಬಂದು ಊಟ ಮಾಡುವ ಅವಕಾಶವನ್ನೇ ತಪ್ಪಿಸುವುದು ಸರಿಯಲ್ಲ. ಗ್ಲಾಮರ್ ಉದ್ಯೋಗದವರ ವಿಷಯ ಬಿಡಿ. ಅತ್ಯಗತ್ಯ ಕೆಲಸ ಮಾಡುವ ವರ್ಗದ ಎಷ್ಟೋ ಜನ ರಾತ್ರಿಯೆಲ್ಲ ಮನೆಯಿಂದ ಹೊರಗಿರಬೇಕಾಗುತ್ತದೆ. ಯಾರೋ ರಾಜಕೀಯ ನಾಯಕರ ಮಕ್ಕಳು ಕುಡಿದು ಆಗೊಮ್ಮೆ ಈಗೊಮ್ಮೆ ಗಲಾಟೆ ಮಾಡುವ ವರದಿ ಬರುತ್ತಿರುತ್ತದೆ. ಅವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕೆ ಹೊರತು ಎಲ್ಲರಿಗೂ ಊಟ ಇಲ್ಲದಂತೆ ಮಾಡಬಾರದು. ಕೆಲಸ ಮಾಡುವವರು ಕುಡಿದು ರಂಪ ಮಾಡುವವರಲ್ಲ. ಏನಾದರೂ ಒಂದಷ್ಟು ಬಿಸಿ ಊಟ  ಮನೆಗೆ ಹೋಗಿ ಮಲಗುವವರು. ಇದನ್ನು ನಮ್ಮ ನಗರವನ್ನು ಆಳುವವರು, ಕಾಯುವವರು ಮರೆಯಬಾರದು.ಹಾಡು ಕಲಿಸುವ ಕಾರ್ಯಾಗಾರ

ಸುನಿಲ್ ಕೋಶಿ ಹಾಡುಗಾರ. `ರೀಬೂಟ್' ಎಂಬ ಆಲ್ಬಮ್ ಮಾಡಿದ್ದಾರೆ. ಅದಕ್ಕೆ ಮೊನ್ನೆ ಒಂದು ಪ್ರಶಸ್ತಿಯನ್ನೂ ಪಡೆದಿದ್ದಾರೆ.  ಕಂಪ್ಯೂಟರ್ ಎಂಜಿನಿಯರ್ ಆಗಿದ್ದ ಇವರು ಈಗ ಸಂಗೀತದ ಕಾರ್ಯಾಗಾರಗಳನ್ನು ನಡೆಸಲು ಶುರು ಮಾಡಿದ್ದಾರೆ.ಬಹಳ ಜನರಿಗೆ ಹಾಡುವ ಆಸೆ ಇರುತ್ತದೆ. ಅಂಥವರಿಗೊಂದಿಷ್ಟು ಸಲಹೆ, ತರಬೇತಿ ನೀಡುವ ಉದ್ದೇಶ ಇವರದು. ಯಾರು ಬೇಕಾದರೂ ಇವರ ಕಾರ್ಯಾಗಾರಗಳಲ್ಲಿ ಭಾಗವಹಿಸಬಹುದು. `ಮಗ್ ಟು ಮೈಕ್' ಎಂದು ಕಾರ್ಯಾಗಾರಕ್ಕೆ ಹೆಸರು ಕೊಟ್ಟಿದ್ದಾರೆ. ಬಾತ್ ರೂಂನಲ್ಲಿ ಮಗ್ ಹಿಡಿದು ಹಾಡುವವರು ಮೈಕ್ ಹಿಡಿದು ಕೂಡ ಹಾಡಬಹುದು ಎಂಬುದು ಈ ಹೆಸರಿನ ಇಂಗಿತ! ಬೇಸಿಕ್ ಕಾರ್ಯಾಗಾರದ ಅವಧಿ ಐದು ಗಂಟೆ. ಪೂರ್ಣ ದಿನದ ಕಾರ್ಯಾಗಾರವನ್ನೂ ಇವರು ನಡೆಸುತ್ತಾರೆ. ಆಗಸ್ಟ್ 18 ಒಂದು ಬೇಸಿಕ್ ಕಾರ್ಯಾಗಾರವನ್ನು ಯವನಿಕಾದಲ್ಲಿ ಏರ್ಪಡಿಸಿದ್ದಾರೆ.  ರಾಜನ್ ನಾಗೇಂದ್ರ ಖ್ಯಾತಿಯ ಸಂಗೀತ ನಿರ್ದೇಶಕ ರಾಜನ್ ಅಂದಿನ ಮುಖ್ಯ ಅತಿಥಿ.

ಕಾರ್ಯಾಗಾರದಲ್ಲಿ ಪಾಲ್ಗೊಂಡವರು ಚಿತ್ರಗೀತೆಗಳನ್ನು ಹಾಡುತ್ತಾರೆ. ವ್ಯವಸ್ಥಾಪಕರ ಫೋನ್ ನಂಬರ್ 98452 86308.

ಸುನಿಲ್ ಕೋಶಿ

 

Post Comments (+)