ಬೆಳಕು ಬಂತು! ಆರಿತು...

7

ಬೆಳಕು ಬಂತು! ಆರಿತು...

ಡಾ. ಆಶಾ ಬೆನಕಪ್ಪ
Published:
Updated:
ಬೆಳಕು ಬಂತು! ಆರಿತು...

`ನಿಮ್ಮ ಕಣ್ಣುಗಳನ್ನು ಸುಡಬೇಡಿ ಅಥವಾ ಮಣ್ಣು ಮಾಡಬೇಡಿ. ಅವುಗಳನ್ನು ದಾನ ಮಾಡಿ~- ವೃತ್ತಿಯಲ್ಲಿ ವಾಣಿಜ್ಯೋದ್ಯಮಿಯಾದ, ಸಜ್ಜನ ಮತ್ತು ಪರೋಪಕಾರಿ ಲಯನ್ ಬಿಎಲ್‌ಎಸ್ ಮೂರ್ತಿ ಅವರು ಉಪನ್ಯಾಸವೊಂದರಲ್ಲಿ ಹೇಳಿದ ಮಾತು ನನಗೆ ನೆನಪಿಗೆ ಬಂತು. ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯ ಸ್ಥಾಪನೆಯಲ್ಲಿ ಅಪ್ಪಾಜಿಗೆ ನೆರವಾದ ಮಹನೀಯರಲ್ಲಿ ಇವರೂ ಒಬ್ಬರು.1982ನೇ ಇಸವಿ. ಆಗ ನಾನು ಇಂಟರ್ನ್‌ಶಿಪ್ ಮಾಡುತ್ತಿದ್ದೆ. ನೇತ್ರದಾನದ ಕುರಿತು ಬಿಎಲ್‌ಎಸ್ ಮೂರ್ತಿ ಅವರ ಉಪನ್ಯಾಸ ಇರುವುದರಿಂದ ನಾವೆಲ್ಲರೂ ಶಿಶುವೈದ್ಯ ವಿಭಾಗದ ಸಭಾಂಗಣದಲ್ಲಿ ಸೇರುವಂತೆ ಸೂಚನೆ ಬಂದಿತು. ಬಿಳಿಯ ಸಫಾರಿ ದಿರಿಸಿನಲ್ಲಿದ್ದ ಅತ್ಯಂತ ಸರಳ, ಸಂಭಾವಿತ, ವಿನಯಶೀಲ ವ್ಯಕ್ತಿತ್ವದ ಅವರೊಂದಿಗೆ ಮುಖಾಮುಖಿಯಾದಾಗ ನನಗೆ ಅಚ್ಚರಿಯಾಯಿತು.ಅವರು ದೇವರ ಪರಮ ಭಕ್ತರಾಗಿದ್ದರು. ಅವರ ಮಾತುಗಳು ಎಷ್ಟು ಸ್ಫೂರ್ತಿದಾಯಕ ಆಗಿದ್ದವೆಂದರೆ, ಅವರ ಉಪನ್ಯಾಸ ಮುಗಿಯುತ್ತಿದ್ದಂತೆ ನೇತ್ರದಾನದ ಅರ್ಜಿಯನ್ನು ತುಂಬಿಸಿದ್ದೆ.ಲಯನ್ ಕಣ್ಣಿನ ಆಸ್ಪತ್ರೆಯಲ್ಲಿ ಆರು ಗಂಟೆಗಳವರೆಗೆ ಕಣ್ಣುಗಳನ್ನು ರಕ್ಷಿಸಿಡಬಹುದಾಗಿದ್ದು, ಕೆಲವು ಪ್ರಕ್ರಿಯೆಗಳ ಬಳಿಕ ಕಾರ್ನಿಯಾ ವರ್ಗಾವಣೆಗೆ ಸಿದ್ಧಗೊಳ್ಳುತ್ತದೆ. ನಿಮ್ಮ ಮನೆಮಂದಿಗೂ ನೇತ್ರದಾನದ ಬಗ್ಗೆ ತಿಳಿಸಬೇಕು ಎಂದವರು ಅಂದು ಹೇಳಿದ್ದು ಈಗಲೂ ನನ್ನ ನೆನಪಿನಲ್ಲಿದೆ.ಅರ್ಜಿ ತುಂಬುವ ಶಿಷ್ಟಾಚಾರಗಳೆಲ್ಲವನ್ನೂ ಮುಗಿಸಿದ ಬಳಿಕ ಅದನ್ನು ಅಪ್ಪಾಜಿಗೆ ಹೇಳಬೇಕೆಂದು ಮನ ತುಡಿಯುತ್ತಿತ್ತು (ಆಗ ಅವರು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮೇಲ್ವಿಚಾರಕರಾಗಿದ್ದರು). ಅವರು ಬಿಡುವಾಗಿದ್ದಾಗ, ಅವರ ಕಚೇರಿ ಒಳಹೊಕ್ಕು ಕಾರ್ಡ್ ಮತ್ತು ಪ್ಲಾಸ್ಟಿಕ್ ಶೀಟ್ ಅನ್ನು ತೋರಿಸಿ ನನ್ನ ಕಣ್ಣುಗಳನ್ನು ದಾನ ಮಾಡಿರುವುದಾಗಿ ಹೇಳಿದೆ. ಕ್ಷಣಕಾಲ ಅಪ್ಪಾಜಿ ಮುಖ ವಿವರ್ಣವಾಯಿತು. ನಾನವರಿಗೆ ಏನನ್ನು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೆನೋ ಅದು ಅರ್ಥವಾಗುವವರೆಗೂ ಅವರು ಹಾಗೆಯೇ ಇದ್ದರು. ಇದು 30 ವರ್ಷಗಳ ಹಿಂದಿನ ಮಾತು!ಇದೇ ರೀತಿಯ ಉಪನ್ಯಾಸವನ್ನು ಆಲಿಸಿದ್ದ 26 ವರ್ಷದ ಯುವಕನೊಬ್ಬ ಅದರಿಂದ ಪ್ರಭಾವಿತನಾಗಿ ತನ್ನ ಕಣ್ಣುಗಳನ್ನು ದಾನ ಮಾಡ್ದ್ದಿದನ್ನು ನಾನು ಕಂಡಿದ್ದೇನೆ. ಆದರೆ ಅದಾದ ಆರೇ ತಿಂಗಳಿನಲ್ಲಿ ಆತ ತೀವ್ರ ಹೃದಯಾಘಾತದಿಂದ ಸಾವನ್ನಪ್ಪುತ್ತಾನೆ ಎಂಬುದು ಆತನ ಕುಟುಂಬಕ್ಕೆ ಅನಿರೀಕ್ಷಿತ ಆಘಾತವಾಗಿತ್ತು.ಆ ಬಡಕುಟುಂಬದ ಒಂದು ಹೊತ್ತಿನ ಊಟಕ್ಕೆ ಆಧಾರಸ್ತಂಭವಾಗಿದ್ದವನು ಆ ಯುವಕ. ತಮಗೆಲ್ಲಾ ಆಧಾರವಾದ ತರುಣ ಚಿಕ್ಕವಯಸ್ಸಿನ್ಲ್ಲಲೇ ತೀರಿಹೋದ ದುಃಖದ ನಡುವೆಯೂ ಆ ಕುಟುಂಬದವರು, ಆತನ ವಾಗ್ದಾನದಂತೆ ಕಣ್ಣುಗಳನ್ನು ಸಂಸ್ಥೆಗೆ (ಹೆಸರನ್ನು ಬಹಿರಂಗಪಡಿಸಿಲ್ಲ) ದಾನ ಮಾಡುವುದನ್ನು ಮರೆಯಲಿಲ್ಲ. ಮನುಷ್ಯನ ಹೃದಯವಂತಿಕೆ ಎಷ್ಟು ಉನ್ನತವಾದುದಲ್ಲವೇ?ಕಣ್ಣು ಎಂದರೆ ಕಣ್ಣಲ್ಲ. ಕಾರ್ನಿಯಾ ಎಂಬ ಕಣ್ಣಿನ ಮಧ್ಯಭಾಗದಲ್ಲಿರುವ ಪಾರದರ್ಶಕ ಪದರವನ್ನು ಸೂಕ್ಷ್ಮವಾಗಿ ಬೇರ್ಪಡಿಸಿ ಬೇರೆಯವರಿಗೆ ಜೋಡಿಸಲಾಗುತ್ತದೆ. ಈ ವರ್ಗಾವಣೆಯಿಂದ ಕಾರ್ನಿಯಾ ಸಮಸ್ಯೆಯುಳ್ಳ ಅಂಧ ಮಕ್ಕಳಿಗೆ ಅನುಕೂಲವಾಗುತ್ತದೆ. ಕತ್ತಲಿನಿಂದ ಬೆಳಕಿನೆಡೆಗೆ ತೆರೆದುಕೊಳ್ಳುವ ಬದುಕಿನ ಕಥೆಗೆ ಕೆಲವು ಅದೃಷ್ಟಶಾಲಿಗಳು ಮಾತ್ರ ಸೇರಿಕೊಳ್ಳುತ್ತಾರೆ. ಏಕೆಂದರೆ ಕಾರ್ನಿಯಾಗಾಗಿ ಕಾದು ನಿಂತಿರುವವರ ಸರದಿ ತುಂಬಾ ಉದ್ದವಿದೆ!ಘಟ್ಟಿಕೊಪ್ಪಳದ ಹನುಮಂತ ಮೂರು ಮಕ್ಕಳ ತಂದೆ. ನೇತ್ರಾವತಿ (ನೈಜ ಹೆಸರು) 10 ವರ್ಷದ ಹುಡುಗಿ. ಅವಳಿಗೆ 8 ವರ್ಷದ ತಮ್ಮ ಮತ್ತು ಐದು ವರ್ಷದ ಪುಟ್ಟ ತಂಗಿ ಇದ್ದರು.

ಮೊದಲ ಮಗಳು ಹುಟ್ಟಿದಾಗ ಸಂಭ್ರಮಿಸಿದ ಬಡ ಪೋಷಕರು ಮಗಳಿಗೆ ನೇತ್ರಾವತಿ ಎಂದು ಹೆಸರಿಟ್ಟರು. ಬದುಕಿನ ವ್ಯಂಗ್ಯವೆಂದರೆ ಇದೇ ಇರಬೇಕು! ನೇತ್ರಾಳಿಗೆ ಐದು ತಿಂಗಳಿರುವಾಗ ತಮ್ಮ ಮಗಳ ಕಣ್ಣುಗಳಲ್ಲಿ ಹೊಳಪಿಲ್ಲ ಎಂಬ ಭಾವನೆ ಅವರಲ್ಲಿ ಮೂಡಿತು. ಕೂಡಲೇ ನೇತ್ರವೈದ್ಯರನ್ನು ಅವರು ಸಂಪರ್ಕಿಸಿದರು.`ಮಗು ಬೆಳೆಯುತ್ತಿದ್ದಂತೆ ದೃಷ್ಟಿ ಸರಿಹೋಗುತ್ತದೆ~ ಎಂದು ವೈದ್ಯರು ಹೇಳಿದರು. ಆದರೆ ಮಗು ಬೆಳೆಯುತ್ತಿದ್ದಂತೆ ದೃಷ್ಟಿ ಸಾಮರ್ಥ್ಯ ಕಾಡತೊಡಗಿತು. ಆಕೆಗೆ ಐದು ವರ್ಷವಾದಾಗ ಇದು ಇನ್ನಷ್ಟು ತೀವ್ರವಾಯಿತು.

 

ಆಕೆಯ ತಂದೆ ಮತ್ತೆ ವೈದ್ಯರನ್ನು ಸಂಪರ್ಕಿಸಿದಾಗ, ಅವರ ಮುದ್ದಿನ ಮಗಳು ಹುಟ್ಟಿನಿಂದಲೇ ಬರುವ `ಎಂಡೋಥೆಲಿಯಲ್ ಡಿಸ್ಟ್ರೊಫಿ~ (ಕಾರ್ನಿಯಾದ ಒಳಪದರದಲ್ಲಿ ಕಂಡುಬರುವ ದೋಷ)ಯಿಂದ ಬಳಲುತ್ತಿದ್ದಾಳೆ ಎನ್ನುವುದು ಗೊತ್ತಾಯಿತು. ಪಾರದರ್ಶಕ ಕಾರ್ನಿಯಾದಲ್ಲಿ ಚುಕ್ಕೆಗಳಂತೆ ಮೂಡುವ ಕಣ್ಣಿಗೆ ಸುಲಭವಾಗಿ ಕಾಣದ ತೂತುಗಳಿರುತ್ತವೆ. ಈ ತೂತುಗಳ ನಡುವೆ ಸ್ಪಷ್ಟವಾದ ಕಾರ್ನಿಯಾ ಇರುತ್ತದೆ. ಸಮಸ್ಯೆಗಳ ಸಾಗರದಲ್ಲಿ ಮುಳುಗಿದ್ದರೂ ಹನುಮಂತ ತಮ್ಮ ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದರು. ಕಣ್ಣಿನ ಸಮಸ್ಯೆ ಇದ್ದರೂ ನೇತ್ರಾ 6ನೇ ತರಗತಿಯಲ್ಲಿ ಓದುತ್ತಿದ್ದಳು. ಪುಸ್ತಕವನ್ನು ಕಣ್ಣಿಗೆ ತೀರಾ ಹತ್ತಿರ ಹಿಡಿದುಕೊಂಡು ಅಭ್ಯಾಸ ಮಾಡುತ್ತಿದ್ದಳು.ನೇತ್ರಾಳ ಪೋಷಕರಿಗೆ ಆಕೆಯ ಜೊತೆಗೆ ಇನ್ನಿಬ್ಬರು ಮಕ್ಕಳು. ದುರದೃಷ್ಟವೆಂದರೆ ಅವರಿಬ್ಬರಿಗೂ ಹುಟ್ಟುವಾಗಲೇ ಇದೇ ವಂಶಾವಳಿ ಕಾಯಿಲೆ ಇತ್ತು. ತಂದೆತಾಯಿಯಿಬ್ಬರೂ ತಮ್ಮ ಮಕ್ಕಳಿಗೆ ದೃಷ್ಟಿ ಭಾಗ್ಯ ಕರುಣಿಸುವಂತೆ ಹಲವಾರು ಸಂಸ್ಥೆಗಳ ಮೆಟ್ಟಿಲೇರಿ ಹತಾಶರಾಗಿದ್ದರು.ಮಗಳ ಕಣ್ಣಿಗೆ ಜೋಡಿಸಲು ಕಾರ್ನಿಯಾ ಲಭ್ಯವಾಗುತ್ತದೆ ಎಂಬ ಮಾಹಿತಿ ಆ ಮಗುವಿನ ತಂದೆಗೆ 2010ರ ಜನವರಿಯಲ್ಲಿ ತಿಳಿಯಿತು. ತನ್ನ ಮೂರು ಮಕ್ಕಳಲ್ಲಿ ತನ್ನ ಮೊದಲ ಮಗಳಿಗೆ ಮೊದಲು ದೃಷ್ಟಿ ಬರಬೇಕು ಎನ್ನುವುದು ಆತನ ಬಯಕೆಯಾಗಿತ್ತು. ತನ್ನ ಅಲ್ಪಸ್ವಲ್ಪ ದುಡಿಮೆಯ ಹಣವನ್ನೆಲ್ಲಾ ಸಂಗ್ರಹಿಸಿ ಕಣ್ಣಿನ ಕಸಿ ಕೇಂದ್ರಕ್ಕೆ ಮಗಳನ್ನು ಕರೆದೊಯ್ದ. ನೇತ್ರಾಳ ಎಡಗಣ್ಣಿನ ಕಸಿಯೂ ಆಯಿತು. ದುರದೃಷ್ಟವಶಾತ್ ಕಾರ್ನಿಯಾ ವರ್ಗಾವಣೆ ಫಲಪ್ರದವಾಗಲಿಲ್ಲ. ತಂದೆ ಮತ್ತು ಮಗಳು ನಿರಾಶೆಯಿಂದ ತಮ್ಮೂರಿನತ್ತ ಪಯಣಿಸಿದರು.2011ರ ಫೆಬ್ರುವರಿಯಲ್ಲಿ ಅವರಿಗೆ ಮತ್ತೊಂದು ಕರೆ ಬಂದಿತು. ಈ ಬಾರಿ ವೈದ್ಯರುಗಳು ಅಪಾರ ಭರವಸೆಯೊಂದಿಗೆ ನೇತ್ರಾಳ ಬಲಗಣ್ಣಿಗೆ ಕಾರ್ನಿಯಾ ಕಸಿ ಮಾಡಿದರು. ಇದಾದ ಎರಡು ಮೂರು ದಿನಗಳ ಬಳಿಕ ಕಣ್ಣಿಗೆ ಕಟ್ಟಿದ ಬ್ಯಾಂಡೇಜನ್ನು ತೆಗೆದಾಗ ಪ್ರಕಾಶಮಯ ಮತ್ತು ವರ್ಣಮಯ ಜಗತ್ತು! ಅದಕ್ಕೂ ಮಿಗಿಲಾಗಿ ತನ್ನ ಆರಾಧ್ಯ ದೈವವಾಗಿದ್ದ ತಂದೆಯನ್ನು ನೋಡಿ ನೇತ್ರಾ ಭಾವೋದ್ವೇಗದಿಂದ ಸಂಭ್ರಮಿಸಿದಳು.

 

ಅವಳ ತಂದೆತಾಯಿಗಳೂ, ಕೊನೆ ಉಸಿರೆಳೆಯುವಾಗ ತಮ್ಮ ಮಗಳಿಗೆ ದೃಷ್ಟಿ ನೀಡಿದ ದಾನಿಯ ಶ್ರೇಷ್ಠ ಗುಣಕ್ಕೆ ವಂದಿಸುತ್ತಾ ಅವರ ಆತ್ಮಕ್ಕೆ ಚಿರಶಾಂತಿಯ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮದೇ ರೀತಿಯಲ್ಲಿ ಮಗಳ ಶಸ್ತ್ರಚಿಕಿತ್ಸೆಯ ಯಶಸ್ಸಿನ ಸಡಗರವನ್ನು ಆಚರಿಸಿಕೊಂಡರು.ವಿಧಿಯ ಆಟ ಎನ್ನುವಂತೆ ಅವರ ಈ ಸಂಭ್ರಮ ಕೇವಲ ಎರಡು ವಾರಗಳಿಗೆ ಕೊನೆಯಾಯಿತು. ನೇತ್ರಾ ಅಸಹಜವಾಗಿ ವರ್ತಿಸತೊಡಗಿದಳು. ಪದೇ ಪದೇ ತಲೆನೋವು, ಅಸಂಬದ್ಧ ಮಾತುಗಳು. ಫ್ಯಾನ್ ಗಾಳಿ ಮುಖದ ಮೇಲೆ ಬೀಸಿದಾಗ ಓಡಿ ಹೋಗುವುದು- ಹೀಗೆ ಅಸ್ವಾಭಾವಿಕ ವರ್ತನೆಗಳು ಕಂಡುಬಂದವು.ಅವಳ ಬಾಯಿ ಜೊಲ್ಲಿನಿಂದ ತುಂಬಿಕೊಳ್ಳುತ್ತಿದ್ದು, ಆಕೆ ಆಗಾಗ ಅದನ್ನು ಉಗುಳುತ್ತಿದ್ದಳು. ಆಕೆಯನ್ನು ಒಂದು ಕಡೆ ಹಿಡಿದಿಡುವುದು ಮತ್ತು ಔಷಧ ನೀಡುವುದು ಕಷ್ಟವಾಗುತ್ತಿತ್ತು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಿಕೊಂಡ 22 ಗಂಟೆಯಲ್ಲಿ ನೇತ್ರಾ ಕೊನೆಯುಸಿರೆಳೆದಳು. ಅದು 2011ಮಾರ್ಚ್ 2ರ ಮುಂಜಾನೆ ಸಮಯ.ಆಗ ಕರ್ತವ್ಯದಲ್ಲಿದ್ದ ಸ್ನಾತಕೋತ್ತರ ಪದವೀಧರ ಡಾ. ಅಬ್ದುಲ್ ರಜಾಕ್ ನನಗೆ ಕರೆ ಮಾಡಿ ಈ ಘಟನೆ ಬಗ್ಗೆ ತಿಳಿಸಿದರು. ನನ್ನ ಸಂಜೆಯ ಆಸ್ಪತ್ರೆ ಭೇಟಿ ವೇಳೆ ಅಲ್ಲಿನ ಎಲ್ಲಾ ವೈದ್ಯರು, ನರ್ಸ್‌ಗಳು ಮತ್ತು ಕುಟುಂಬದ ಸದಸ್ಯರಿಗೆ ಆ ಮಗುವನ್ನು ನೋಡಿಕೊಳ್ಳುವಾಗ ಜಾಗ್ರತೆ ವಹಿಸುವಂತೆ ಸೂಚಿಸಿದೆ. ಏಕೆಂದರೆ ಆಕೆಗೆ ರೇಬಿಸ್ ತಗುಲಿರಬಹುದೆಂಬುದು ನನ್ನ ಅನುಮಾನವಾಗಿತ್ತು. ಯಾರಿಗೂ ಅದನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದಿರುವಾಗ ನಾನು ಏಕೆ ರೇಬಿಸ್ ಎಂದು ರೋಗನಿರ್ಣಯ ಮಾಡಿದೆ?ಮಗುವಿನ ಮೃತದೇಹ ಪರೀಕ್ಷೆ ನಡೆಸಬೇಕೆಂದು ನಾನು ಪಟ್ಟು ಹಿಡಿದೆ. ಆದರೆ, ಆಕೆಯ ತಂದೆಯ ಮನವೊಲಿಸುವುದು ಅಸಾಧ್ಯವಾಗಿತ್ತು. ಹಲವಾರು ಬಾರಿ ಆತನ ಮನವೊಲಿಕೆಯ ಪ್ರಯತ್ನ ನಡೆಸಿದಾಗ ಕೊನೆಗೂ ಒಪ್ಪಿಗೆ ಸೂಚಿಸಿದ.

 

ತನ್ನ ದೂರದೂರಿಗೆ ಮಗಳ ಮೃತದೇಹವನ್ನು ಕೊಂಡೊಯ್ದು ಅಂತಿಮ ವಿಧಿ ವಿಧಾನ ಪೂರೈಸಲು ಅನುಕೂಲವಾಗುವಂತೆ ವೇಗವಾಗಿ ಅದರ ಶಿಷ್ಟಾಚಾರಗಳನ್ನು ಪೂರ್ಣಗೊಳಿಸಿದೆವು. ಪ್ರತಿಯೊಬ್ಬರನ್ನೂ ತಕ್ಷಣ ಕಾರ್ಯಾಚರಣೆ ಶುರುಮಾಡುವಂತೆ ಮತ್ತು ಶೀಘ್ರವಾಗಿ ಕೆಲಸ ಮುಗಿಸುವಂತೆ ನಾವು ಪ್ರೇರೇಪಿಸಿದೆವು.ಅಲ್ಲದೆ, ನಾವು ಆಕೆಯ ತಂದೆಗೆ ರೇಬಿಸ್ ನಿರೋಧಕ ಔಷಧ ನೀಡಿ, ಮೃತಮಗುವನ್ನು ಮುಟ್ಟುವ ಮುನ್ನ ತೊಡಲು ಕೈಗವಸುಗಳನ್ನು ನೀಡಿರುವುದನ್ನು ಖಚಿತಪಡಿಸಿಕೊಂಡೆವು. ಆತನಿಗೆ ಸಾರಿಗೆ ವ್ಯವಸ್ಥೆಯನ್ನು ನಾವೇ ಒದಗಿಸಿದೆವು. ರೇಬಿಸ್ ಮದ್ದನ್ನು ನಿರಂತರವಾಗಿ ತೆಗೆದುಕೊಳ್ಳಬೇಕೆಂದು ಆತನಿಗೆ ಮನದಟ್ಟು ಮಾಡಿದೆವು.ಮಗುವಿನ ಮಿದುಳಿನ ಪರೀಕ್ಷೆ ವರದಿ 24 ಗಂಟೆಯೊಳಗೇ ಹೊರಬಂತು. ಅದು ರೇಬಿಸ್ ವೈರಾಣುಗಳಿಂದ ತುಂಬಿ ಹೋಗಿತ್ತು. ಇದು ಮನುಷ್ಯರಿಂದ ಮನುಷ್ಯರಿಗೆ ಹರಡುವುದು ಖಚಿತವಲ್ಲದಿದ್ದರೂ, ನನಗೆ ಅಪಾಯಕ್ಕೆ ಒಡ್ಡಿಕೊಳ್ಳಲು ಇಷ್ಟವಿರಲಿಲ್ಲ.ಏಕೆಂದರೆ ಇದರಲ್ಲಿ 130ಕ್ಕೂ ಹೆಚ್ಚು ಜನರ ಬದುಕಿನ ಪ್ರಶ್ನೆ ಅಡಗಿತ್ತು (ನೇತ್ರಾಳ ಕುಟುಂಬ, ಕಸಿ ನಿರ್ವಹಿಸಿದ ತಂಡ, ವಾಣಿ ವಿಲಾಸ ಆಸ್ಪತ್ರೆಯ ವೈದ್ಯರು, ಶವಪರೀಕ್ಷೆಯ ತಂಡ ಮತ್ತು ಇನ್ನೂ ಮುಂತಾದವರು). ನಮ್ಮ ಘಟಕದ ಉಪನ್ಯಾಸಕ ಡಾ. ಎಂ. ರಮೇಶ್ ಅವರಿಗೆ ರೇಬಿಸ್ ಮದ್ದು ಸಂಗ್ರಹಿಸುವ ಜವಾಬ್ದಾರಿ ವಹಿಸಲಾಗಿತ್ತು. ನಮಗೆಲ್ಲರಿಗೂ 0, 3, 7, 14 ಮತ್ತು 28 ದಿನಗಳಲ್ಲಿ ಐದು ಇಂಜೆಕ್ಷನ್ ತೆಗೆದುಕೊಳ್ಳಬೇಕಾದ ನೋವಿನ ಕೆಲಸವೂ ಸಿಕ್ಕಿತ್ತು.

ಎಲ್ಲಿ ತಪ್ಪಾಗಿತ್ತು?

ನಮ್ಮ ಪೂರ್ವಕಲ್ಪನೆ ಪ್ರಕಾರ ನೇತ್ರಾಳಿಗೆ ನಾಯಿಯೊಂದು ಕಚ್ಚಿತ್ತು, ಅದನ್ನು ಮನೆಯವರು ಮರೆತುಬಿಟ್ಟಿದ್ದರು. ಹೃದಯಾಘಾತದಿಂದ ಹಠಾತ್ ಸಾವು ಸಂಭವಿಸಲು ರೇಬಿಸ್ ಕಾರಣವಾಗುತ್ತದೆ (ಅನಿಯಂತ್ರಿತ ಅಸಹಜ ಹೃದಯ ಬಡಿತ)  ಅಥವಾ, ಕಣ್ಣು ದಾನ ಮಾಡಿದ ಯುವಕ ಪ್ರಾಣಿಯಿಂದ ಕಡಿತಕ್ಕೊಳಗಾಗಿದ್ದನ್ನು ಮರೆತಿದ್ದನೇ?

ಒಮ್ಮೆ ಪತ್ತೆಯಾದ ರೇಬಿಸ್ ಶೇಕಡಾ 100ರಷ್ಟು ಮಾರಣಾಂತಿಕವಾಗಿದ್ದರೂ, ರೇಬಿಸ್ ಮದ್ದಿನ ಪ್ರಮಾಣ ಮತ್ತು ಅದರ ನಿರ್ವಹಣೆಯ ಬಗ್ಗೆ ಹೆಚ್ಚಿನ ಸಂತೃಪ್ತಿಯಿದೆ.

 

ರೇಬಿಸ್ ತಗುಲಿದಾಗ ಬೇಗನೆ ಚುಚ್ಚುಮದ್ದು ಹಾಕಿಸಬೇಕಾದರೂ ಇದು ಅತಿ ತುರ್ತಾಗಿ ಆಗಬೇಕಿಲ್ಲ. ಕಡಿದ ಜಾಗವನ್ನು ಸೋಪು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಚುಚ್ಚುಮದ್ದು ಕೇಂದ್ರ ತಲುಪುವವರೆಗೂ ಅದಕ್ಕೆ ಸಿಂಪಡಿಸುತ್ತಿರಬೇಕು. ಬಳಿಕ ಐದು ಸುತ್ತು ಚುಚ್ಚುಮದ್ದು ಹಾಕಿಸಿಕೊಳ್ಳಬೇಕು.ನನ್ನ ರೋಗನಿರ್ಣಯ ಮತ್ತು ಮರಣೋತ್ತರ ಪರೀಕ್ಷೆಗೆ ಹಟ ಹಿಡಿದ ಕ್ರಮದ ಬಗ್ಗೆ ಡಾ. ರಜಾಕ್ ಆಶ್ಚರ್ಯಕ್ಕೊಳಗಾಗಿದ್ದರು. ಕಾರ್ನಿಯಾ ಮತ್ತು ಅಂಗಾಂಗ ವರ್ಗಾವಣೆ ಸಂದರ್ಭದಲ್ಲಿ ರೇಬಿಸ್ ಬಹುದೊಡ್ಡ ಸಮಸ್ಯೆಯಾಗಿ ಎದುರಾಗಬಹುದು ಎಂಬ ಬಗ್ಗೆ ನಮ್ಮ ಪುಸ್ತಕಗಳಲ್ಲಿ ಪ್ರಸ್ತಾಪಿಸಲಾಗಿದೆ. ಡಾ. ರಮೇಶ್, `ನೀವು ಹನುಮಂತ ಸೇರಿದಂತೆ ಹಲವಾರು ಜೀವಗಳನ್ನು ಉಳಿಸಿದಿರಿ ಮೇಡಂ~ ಎಂದು ಹೇಳಿದ್ದರು.ಒಂದು ವೇಳೆ ಶವಪರೀಕ್ಷೆ ನಡೆಸದೆ ಹೋಗಿದ್ದರೆ ಮತ್ತು ಚುಚ್ಚುಮದ್ದು ತೆಗೆದುಕೊಳ್ಳದೆ ಹೋಗಿದ್ದರೆ ಈ ಸತ್ಯ ಘಟನೆ ಬರೆಯಲು ನಾನೇ ಇರುತ್ತಿರಲಿಲ್ಲವೇನೋ...

ಅಂಗಾಂಗ ವರ್ಗಾವಣೆಗೆ ಮುಂದಾಗುವ ಜನರು ಅದಕ್ಕೆ ಪೂರ್ವ ಸಮಯೋಚಿತವಾಗಿ ರೋಗನಿರೋಧಕ ಚಿಕಿತ್ಸೆಗೆ (ಒಂದು ವೇಳೆ ಯಾವುದೇ ಪ್ರಾಣಿಯಿಂದ ಕಚ್ಚಿಸಿಕೊಳ್ಳದೆ ಇದ್ದರೂ) ಒಳಗಾಗಲೇ ಬೇಕು ಎಂದು ನಾನು ಮತ್ತು ಡಾ. ರಜಾಕ್ ಅಭಿಪ್ರಾಯಪಟ್ಟೆವು. ಏಕೆಂದರೆ ಕೇವಲ ಮೂರು ಸರಣಿ ಚುಚ್ಚುಮದ್ದುಗಳು ಇಂತಹ ಘೋರ ದುರಂತಗಳನ್ನು ತಡೆಯಬಲ್ಲವು.ಅಂದಹಾಗೆ, ಯಾರೂ ವಿಧಿಯನ್ನು ಪ್ರಶ್ನಿಸಲು ಸಾಧ್ಯವಿಲ್ಲ. ಮೂವರು ಅಂಧ ಮಕ್ಕಳಲ್ಲಿ ನೇತ್ರಾಳನ್ನೇ ಏಕೆ ಕಣ್ಣಿನ ಚಿಕಿತ್ಸೆಗೆ ಆಯ್ಕೆಮಾಡಲಾಯಿತು? ಹನುಮಂತ ಮುಂದೆ ತನ್ನ ಉಳಿದ ಅಂಧ ಮಕ್ಕಳಿಗೆ ದೃಷ್ಟಿ ಮರಳಿ ತರುವ ಸಾಹಸಕ್ಕೆ ಮುಂದಾಗುವನೇ? ಎನ್ನುವ ಪ್ರಶ್ನೆಗಳಿಗೆ ಏನೆಂದು ಉತ್ತರಿಸುವುದು? 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry