ಬೆಳಗು ಯಾವಾಗ?

7

ಬೆಳಗು ಯಾವಾಗ?

ಗುರುರಾಜ ಕರ್ಜಗಿ
Published:
Updated:

ಒಬ್ಬ ಯಹೂದಿ ಗುರು ತನ್ನ ಶಿಷ್ಯರೊಂದಿಗೆ ಕುಳಿತಿದ್ದ. ಆತ ಅವರಿಗೆ     ಕಲಿಸುವ ರೀತಿಯೇ ಬೇರೆಯದಾಗಿತ್ತು. ಇಡೀ ದಿನ ಅವನ ಶಿಷ್ಯರು ಅವನೊಂದಿಗೇ ತೋಟದಲ್ಲಿ ಕೆಲಸ ಮಾಡುವರು. ಅವನಿಗೆ ಯಾವುದೋ ಕ್ಷಣದಲ್ಲಿ ಯಾವುದಾದರೂ ಒಂದು ಚಿಂತನೆ ಹೊಳೆದರೆ ಅವರನ್ನೆಲ್ಲ ತಕ್ಷಣವೇ ಒಂದೆಡೆಗೆ ಸೇರಿಸುವನು. ತನಗೆ ಹೊಳೆದದ್ದನ್ನು ಅವರೊಂದಿಗೆ ಹಂಚಿ­ಕೊಂಡು ಸಂಭಾಷಣೆ ನಡೆಸುವನು. ಆ ಚರ್ಚೆ ಕೆಲವೊಮ್ಮೆ ಐದೇ ನಿಮಿಷದಲ್ಲಿ ಮುಗಿಯಬಹುದು, ಕೆಲವೊಮ್ಮೆ ಅದು ನಾಲ್ಕಾರು ಗಂಟೆಗಳ ಕಾಲ ನಡೆದದ್ದೂ ಉಂಟು. ಅವನು ಎಷ್ಟು ತೆರೆದ ಮನಸ್ಸಿನವನೆಂದರೆ ತಾನು ಹೇಳಿದ ವಿಷಯವನ್ನು ಶಿಷ್ಯನೊಬ್ಬ ಒಪ್ಪದಿದ್ದರೆ ಅವನೊಂದಿಗೆ ಕುಳಿತು, ಅವನ ದೃಷ್ಟಿಕೋನವನ್ನು ತಿಳಿದುಕೊಂಡು ತನಗೆ ಒಪ್ಪಿಗೆಯಾದರೆ, ಹೌದಲ್ಲವೇ? ನೀನು ಹೇಳುವುದೆಷ್ಟು ಸರಿಯಾಗಿದೆಯಲ್ಲ. ನಾನೇ ತಪ್ಪು ತಿಳಿದುಕೊಂಡಿದ್ದೆ ಎನ್ನುವನು.ಒಂದು ದಿನ ಸಾಯಂಕಾಲ ಊಟವಾದ ಮೇಲೆ ಗುರು, ಶಿಷ್ಯರೊಂದಿಗೆ ಹರಟುತ್ತ ಮರದ ಕೆಳಗೆ ಕುಳಿತಿದ್ದ. ರಾತ್ರಿಯಾದದ್ದು ತಿಳಿಯಲೇ ಇಲ್ಲ. ಒಬ್ಬ ಶಿಷ್ಯ, ‘ಬಹುಶಃ ಇನ್ನೊಂದು ತಾಸಿಗೆ ರಾತ್ರಿ ಮುಗಿದು ಬೆಳಗಾಗುತ್ತದೆ’ ಎಂದ. ತಕ್ಷಣ ಗುರು, ‘ಬೆಳಗಾಯಿತು ಎಂದು ಹೇಗೆ ಗೊತ್ತಾಗುತ್ತದೆ?’ ಎಂದು ಕೇಳಿದ. ಒಬ್ಬ ಶಿಷ್ಯ ಜೋರಾಗಿ ನಕ್ಕು, ‘ಅದೇನು ಮಹಾ? ಬೆಳಗಾದ ತಕ್ಷಣ ಎಲ್ಲವೂ ಸ್ಪಷ್ಟವಾಗಿ ಕಾಣತೊಡಗುತ್ತದೆ, ಎಲ್ಲರ ಮುಖಗಳು ಕಾಣುತ್ತವೆ’ ಎಂದ. ‘ಅದು ಬೆಳಗಾದ ಲಕ್ಷಣವಲ್ಲ’ ಎಂದ ಗುರು. ಅವನ ಮುಖ ಬಿರುಸಾಗಿತ್ತು. ಈ ಉತ್ತರ ಅವನಿಗೆ ಇಷ್ಟವಾಗಿಲ್ಲವೆಂಬುದು ಸ್ಪಷ್ಟವಾಗಿತ್ತು.ಮತ್ತೊಬ್ಬ ಶಿಷ್ಯ ಹೇಳಿದ, ‘ದೂರದಲ್ಲಿರುವ ಮರವನ್ನು ನೋಡಿ ಅದು ಯಾವ ಜಾತಿಯ ಮರ ಎಂಬುದನ್ನು ಸರಿಯಾಗಿ ಹೇಳಲು ಸಾಧ್ಯವಾದರೆ ಮತ್ತು ಹತ್ತಿರ ಬಂದ ಪ್ರಾಣಿ ನಾಯಿಯೋ, ಮೇಕೆಯೋ ಎಂಬುದು ತಕ್ಷಣ ಗೊತ್ತಾದರೆ ಅದು ಬೆಳಗಾದ ಲಕ್ಷಣ’. ‘ಅಲ್ಲ, ಮೂರ್ಖರ ಹಾಗೆ ಮಾತನಾಡಬೇಡ. ಸರಿಯಾಗಿ ಯೋಚನೆ ಮಾಡಿ ಹೇಳು’ ಎಂದ ಗುರು. ಒಂದು ಕ್ಷಣ ಎಲ್ಲವೂ ಮೌನ. ಶಿಷ್ಯರಿಗೆ ತಿಳಿಯಿತು, ಗುರು ಏನನ್ನೋ ವಿಶೇಷವಾದದ್ದನ್ನು ಹೇಳಲು ಬಯಸಿದ್ದಾರೆ. ಅವರು ಯೋಚಿಸಿ ಬೇರೆ ಬೇರೆ ಉತ್ತರಗಳನ್ನು ನೀಡಿದರು. ಸೂರ್ಯ ಉದಯಿಸಿದರೆ ಬೆಳಗಾದಂತೆ. ಎಲ್ಲ ಜೀವಗಳು ಚಟುವಟಿಕೆಯಿಂದ ಚಲನಶೀಲವಾದಾಗ ಬೆಳಗು. ಜಡ, ಚೈತನ್ಯವಾದಾಗ ಬೆಳಗು ಎಂಬೆಲ್ಲ ಉತ್ತರಗಳಿಗೂ ಗುರು ನಿರಾಸೆಯಿಂದ ತಲೆ ಅಲ್ಲಾಡಿಸಿದ.ಆಗ ಮತ್ತೊಬ್ಬ ಶಿಷ್ಯ ಕೇಳಿದ, ‘ಗುರುಗಳೇ, ನಿಮ್ಮ ಮನಸ್ಸಿನಲ್ಲೇನೋ ವಿಶೇಷವಾದ ಉತ್ತರವಿದೆ. ಅದನ್ನು ನಮ್ಮಿಂದ ಬಯಸುತ್ತಿದ್ದೀರಿ. ಅದು ನಮಗೆ ಹೊಳೆಯುತ್ತಿಲ್ಲ. ಆದ್ದರಿಂದ ದಯವಿಟ್ಟು ತಾವೇ ಬೆಳಗು ಎಂದರೇನು ಎಂಬುದನ್ನು ತಿಳಿಸಿ’. ಆಗ ಗುರು ಮೇಲೆದ್ದು ಎಲ್ಲರ ಮುಖಗಳನ್ನು ಗಂಭೀರವಾಗಿ ನೋಡಿ ಹೇಳಿದ, ‘ಯಾವಾಗ ನಿಮ್ಮ ಎದುರಿಗೆ ಬಂದ ಒಬ್ಬ ಮಹಿಳೆ ಅಥವಾ ಪುರುಷ ನಿಮಗೆ ನಿಮ್ಮ ಸಹೋದರಿ ಅಥವಾ ಸಹೋದರ ಎಂದೇ ಕಾಣುತ್ತಾರೋ ಆವಾಗಲೇ ನಿಮಗೆ ಬೆಳಗಾದಂತೆ. ಅವರು ನಿಮಗೆ ಹಾಗೆ ನಿಮ್ಮವರಂತೆಯೇ, ನಿಮಗೆ ಪ್ರಿಯರಾದ­ವ­ರಂತೆಯೇ ಕಾಣದೇ ಹೋದರೆ ಅದು ಹಗಲಾಗಿದ್ದರೂ ನಿಮ್ಮ ಪಾಲಿಗೆ ಕತ್ತಲೆಯೇ’.ಈ ಮಾತು ನನಗೆ ಇಂದು ಅತ್ಯಂತ ಮಹತ್ವದ್ದು ಎನ್ನಿಸುತ್ತದೆ. ದಿನ ನಿತ್ಯ ಅತ್ಯಾಚಾರದ, ಅನಾಚಾರದ ಮಾತುಗಳನ್ನು ಕೇಳಿದಾಗ ನಮಗೆ ಬೆಳಕೇ ಆಗಿಲ್ಲ ಎನ್ನಿಸುವುದಿಲ್ಲವೇ? ಯಾಕೆ ಮನುಷ್ಯ ರಾಕ್ಷಸನಾಗುತ್ತಾನೆ? ತನ್ನ ಎದುರಿಗೆ ಬಂದ ಹೆಂಗಸೊಬ್ಬಳು ಯಾರದೋ ತಂಗಿಯೋ, ಮಗಳೋ ಆಗಿರಬಹುದು. ಆಕೆ ತನ್ನ ತಂಗಿಯೋ, ತಾಯಿಯೋ ಆಗಿದ್ದರೆ ಮತ್ತೊಬ್ಬರು ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ­ದಾಗ ತನ್ನ ರಕ್ತ ಕುದಿಯುವುದಿಲ್ಲವೇ? ಇದು ಯಾಕೆ ಹೊಳೆಯದೇ ಮನುಷ್ಯ ಮೃಗಕ್ಕಿಂತ ಕಡೆಯಾಗುತ್ತಾನೆ? ತನ್ನ ಸಂಪರ್ಕಕ್ಕೆ ಬಂದವರು ತನ್ನವರು ಎಂಬ ಭಾವನೆ ಬರುವವರೆಗೆ ನಾವು ಕತ್ತಲಲ್ಲೇ ಕೊಳೆಯುತ್ತೇವೆ, ಬೆಳಕಾಗುವುದೇ ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry