ಭಾನುವಾರ, ಮೇ 16, 2021
29 °C

ಭಗವಂತನಾಗುವ ಸಾಧ್ಯತೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಇದು ಸಹೋದರಿ ರೇಖಾ ಭಟ್‌ರವರು ಕಳುಹಿಸಿದ ಕಥೆ.

ಹದಿನೈದು ಸೈನಿಕರ ಒಂದು ತಂಡ ಒಬ್ಬ ಮೇಜರ್ ನೇತೃತ್ವದಲ್ಲಿ ಹಿಮಾಲಯದ ಕಡೆಗೆ ಹೊರಟಿತ್ತು.  ಇದು ಮೂರು ತಿಂಗಳಿಗೊಮ್ಮೆ ಆಗುವ ಕ್ರಿಯೆ.  ಒಂದು ತಂಡ ಮರಗಟ್ಟಿಸುವ ಚಳಿಯಲ್ಲಿ ಮೂರು ತಿಂಗಳು ಗಡಿ ಕಾಯಬೇಕು. ಈ ಅವಧಿ ಮುಗಿದ ದಿನವೇ ಮತ್ತೊಂದು ತಂಡ ಬಂದು ಇವರನ್ನು ಬಿಡುಗಡೆ ಮಾಡುತ್ತದೆ. ಅವರು ಮೂರು ತಿಂಗಳು ಕೆಲಸ ನಿರ್ವಹಿಸಬೇಕು.ಇವರು ಯಾವಾಗ ಬಂದಾರೆ ಎಂದು ಮೇಲಿದ್ದವರು ಕಾಯುತ್ತಿರುತ್ತಾರೆ.  ಅವರಿಗೆ ಮರಳಿ ತಮ್ಮ ಊರಿಗೆ ಹೋಗಿ ಪರಿವಾರದವರನ್ನು ಭೇಟಿಯಾಗುವ ಕನಸು ಹೆಪ್ಪುಗಟ್ಟುತ್ತಿರುತ್ತದೆ.ಈ ಹದಿನೈದು ಜನರ ಪ್ರವಾಸ ಕಷ್ಟದ್ದಾಗಿತ್ತು. ಎಲ್ಲಿ ನೋಡಿದರೂ ಹಿಮ,  ಆಗಾಗ ಎರಚುವ ಮಳೆ ಹನಿಗಳು, ಚರ್ಮವನ್ನೇ ಕತ್ತರಿಸುವಂತಹ ತೀಕ್ಷ್ಣಗಾಳಿ. ಆಗ ಮೇಜರ್, `ಈಗ ಎಲ್ಲಿಯಾದರೂ ಒಂದು ಕಪ್ ಬಿಸಿಬಿಸಿ ಚಹ ಸಿಕ್ಕರೆ ಎಷ್ಟು ಚೆನ್ನ' ಎಂದರು.ಹಾಗೇ ಮುಂದೆ ನಡೆದಾಗ ಅಲ್ಲೊಂದು ರಸ್ತೆಯ ಬದಿ ಸಣ್ಣ ಅಂಗಡಿ, ಅದಕ್ಕೆ ಕೀಲಿ ಹಾಕಿದೆ.  ಅದೊಂದು ಚಹಾ ಅಂಗಡಿಯಂತೆ ಕಂಡಿತು. ಆಗಲೇ ಮಧ್ಯರಾತ್ರಿ ದಾಟಿದೆ, ಹತ್ತಿರದಲ್ಲಿ ಯಾವ ಮನೆಗಳೂ ಇಲ್ಲ. ಅಲ್ಲೊಂದು ಇಲ್ಲೊಂದು ಇದ್ದರೂ ಈ ವೇಳೆಯಲ್ಲಿ ಅವರಿಗೆ ತೊಂದರೆ ಕೊಡುವುದು ಸರಿಯಲ್ಲ.  ಅದರಲ್ಲೂ ಉಗ್ರಗಾಮಿಗಳ ಹಾವಳಿ ಇದ್ದಾಗ ಯಾರು ಬಾಗಿಲು ತೆಗೆದಾರು ಎಂದುಕೊಂಡರು.  ಸೈನಿಕರು ಮುಖ ನೋಡಿಕೊಂಡು, `ಸರ್, ನಾವೇ ಚಹಾ ಮಾಡಿಕೊಳ್ಳಬಹುದು. ಅಂಗಡಿಯ ಬಾಗಿಲನ್ನು ತೆರೆದು ನೋಡೋಣವೇ' ಎಂದು ಕೇಳಿದರು. ಮೇಜರ್ ಕ್ಷಣಕಾಲ ಚಿಂತಿಸಿದರು. ಹೀಗೆ ಬೀಗ ಮುರಿದು ಒಳನುಗ್ಗುವುದು ತಮಗೆ ಘನತೆಯನ್ನು ತರದು. ಆದರೂ ಸೈನಿಕರ ಚಹಾದ ಬಯಕೆಯನ್ನು ನಿರಾಕರಿಸಲಾಗದು. ನಂತರ ಏನೋ ಚಿಂತಿಸಿ, ಬೀಗ ಮುರಿಯಲು ಹೇಳಿದರು.ಸೈನಿಕರು ಕ್ಷಣದಲ್ಲಿ ಕೀಲಿ ಮುರಿದು ಒಳಗೆ ನಡೆದರು. ಅವರ ದೈವ ಚೆನ್ನಾಗಿತ್ತು. ಚಹಾ ಮಾಡುವ ಎಲ್ಲ ವಸ್ತುಗಳೂ ಇದ್ದವು.  ಒಂದಿಷ್ಟು ಪ್ಯಾಕೆಟ್ ಬಿಸ್ಕತ್ತುಗಳೂ ಇದ್ದವು.  ಎಲ್ಲರೂ ಎರಡೆರಡು ಕಪ್ ಚಹಾ ಕುಡಿದು ಬಿಸ್ಕತ್ತು ತಿಂದರು. ಹುಮ್ಮಸ್ಸು ಮರಳಿ ಬಂತು. ಸೈನಿಕರು ಹೊರಟು ನಿಂತರು. ಆಗ ಮೇಜರ್ ತಮ್ಮ ಜೇಬಿನಿಂದ ಸಾವಿರ ರೂಪಾಯಿ ನೋಟನ್ನು ತೆಗೆದು ಎದುರಿಗೇ ಕಾಣುವಂತೆ ಸಕ್ಕರೆಯ ಡಬ್ಬಿಯ ಕೆಳಗೆ ಇಟ್ಟರು.  ನಂತರ ಬಾಗಿಲಿಗೆ ಚಿಲಕವನ್ನು ಹಾಕಿ ನಡೆದರು.ಮೂರು ತಿಂಗಳಿನ ಕೆಲಸ ಮುಗಿಸಿ ಆ ಸೈನಿಕರು ಮರಳುತ್ತಿದ್ದಾಗ ಮತ್ತದೇ ಅಂಗಡಿಯ ಹತ್ತಿರ ಬಂದರು. ಈ ಬಾರಿ ಅಂಗಡಿ ತೆರೆದಿತ್ತು. ಅಂಗಡಿಯಾತ ಸಂಭ್ರಮದಿಂದ ಇವರಿಗೆಲ್ಲ ಚಹಾ ಮಾಡಿಕೊಟ್ಟ. ಆತ ತುಂಬ ಒಳ್ಳೆಯ ಮನುಷ್ಯ ಎನ್ನಿಸಿತು ಎಲ್ಲರಿಗೂ. ಆದರೆ ಅವನಿಗೆ ಗೊತ್ತಿಲ್ಲದಂತೆ ಅವನ ಅಂಗಡಿಯ ಬಾಗಿಲ ಕೀಲಿಯನ್ನು ಮುರಿದು, ಎಲ್ಲ ವಸ್ತುಗಳನ್ನು ಖಾಲಿ ಮಾಡಿದ್ದು ಅವರ ಮನಸ್ಸಿನಲ್ಲಿ ಅಪರಾಧಿ ಭಾವವನ್ನು ತಂದಿತ್ತು.ಆಗ ಮೇಜರ್ ಕೇಳಿದರು,  `ನೀವು ಇಷ್ಟು ಒಳ್ಳೆಯವರಾಗಿದ್ದರೂ ಭಗವಂತ ನಿಮಗೆ ಏಕೆ ಇಷ್ಟು ಕಷ್ಟಕೊಡುತ್ತಾನೆ'. ಆತ ತಕ್ಷಣ ಕಿವಿ ಹಿಡಿದುಕೊಂಡು ಹೇಳಿದ,  `ದಯವಿಟ್ಟು ಹಾಗೆ ಹೇಳಬೇಡಿ ಸರ್, ಭಗವಂತ ದಯಾಮಯ. ಅವನಷ್ಟು ಕರುಣೆ ಯಾರಿಗಿದ್ದೀತು'.  ಆಗ ಮೇಜರ್,  `ಅದೆಂಥ ಕರುಣೆ? ನೀವಿಷ್ಟು ಒದ್ದಾಡುತ್ತಿದ್ದರೂ ಅವನು ಏನೂ ಮಾಡುತ್ತಿಲ್ಲ' ಎಂದರು. ಆತ ಭಾವುಕನಾಗಿ ಹೇಳಿದ,  `ಸರ್, ತಮಗೆ ಗೊತ್ತಿಲ್ಲ ಅವನ ಕರುಣೆ. ನನಗೆ ಮೂರು ತಿಂಗಳ ಹಿಂದೆ ಅದರ ಅನುಭವ ಆಯಿತು. ನನ್ನ ಒಬ್ಬನೇ ಮಗನನ್ನು ಉಗ್ರಗಾಮಿಗಳು ಹಿಡಿದುಕೊಂಡು ಹೋಗಿ ಚಿತ್ರಹಿಂಸೆ ಕೊಟ್ಟರು.  ಆಗ ನನ್ನ ಮಗನನ್ನು ಆಸ್ಪತ್ರೆಗೆ ಸೇರಿಸಿದೆ.  ಔಷಧಿ ತರಲು ಒಂದು ಕಾಸೂ ಇಲ್ಲ. ಏನು ಮಾಡಲಿ ಭಗವಂತ ಎಂದುಕೊಂಡು ಅಂಗಡಿಗೆ ಬಂದೆ.  ಬಾಗಿಲ ಕೀಲಿ ಮುರಿದಿತ್ತು. ಗಾಬರಿಯಿಂದ ತೆರೆದು ನೋಡಿದರೆ ಮುಂದೆಯೇ ಸಾವಿರ ರೂಪಾಯಿಯ ನೋಟಿತ್ತು ಸ್ವಾಮಿ.  ನನ್ನ ಭಗವಂತ ನನಗಾಗಿ ಅಂಗಡಿಗೆ ಬಂದು ಕೀಲಿ ಮುರಿದು ಸಾವಿರ ರೂಪಾಯಿ ಇಟ್ಟು ನನ್ನ ಮಗನ ಜೀವ ಕಾಪಾಡಿದ. ಇದು ಸಾಕಲ್ಲವೇ ಭಗವಂತನ ಕರುಣೆಯನ್ನು ಸಾರಲು'.ಸೈನಿಕನೊಬ್ಬ ಸತ್ಯ ಹೇಳಲು ಬಾಯಿ ತೆರೆದ. ಆದರೆ ಮೇಜರ್ ಕಣ್ಸನ್ನೆಯಿಂದಲೇ ಅವನನ್ನು ತಡೆದರು.  ನಂತರ ಎದ್ದು ಆ ಅಂಗಡಿಯಾತನ ಬೆನ್ನು ತಟ್ಟಿ ಅಪ್ಪಿಕೊಂಡು, ಬಿಲ್ ಕೊಟ್ಟು ಹೇಳಿದರು. `ನೀವು ಹೇಳಿದ್ದು ಸತ್ಯ ಬಾಬಾ. ಭಗವಂತನಿದ್ದಾನೆ'.  ಅವರ ಕಣ್ಣಂಚಿನಲ್ಲಿ ನೀರು ಒಸರಿದ ಅಪೂರ್ವ ದೃಶ್ಯವನ್ನು ಸೈನಿಕರೆಲ್ಲ ಕಂಡರು.ಹೌದು, ಭಗವಂತ ಯಾವ ರೂಪದಲ್ಲಿ ಬರುತ್ತಾನೋ ತಿಳಿಯದು. ಅಲ್ಲದೆ, ನಾವೂ ಕೂಡ ಯಾವುದೋ ಕ್ಷಣದಲ್ಲಿ ಮತ್ತೊಬ್ಬರಿಗೆ ಭಗವಂತನಾಗುವ ಸಾಧ್ಯತೆಯುಂಟು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.