ಶನಿವಾರ, ಅಕ್ಟೋಬರ್ 31, 2020
24 °C

ಭರವಸೆಯ ಬೆಳ್ಳಿ ಗೆರೆಗಳು ಕಡಿಮೆಯಾದವೇ?

ಆಕಾರ್‌ ಪಟೇಲ್ Updated:

ಅಕ್ಷರ ಗಾತ್ರ : | |

ಭರವಸೆಯ ಬೆಳ್ಳಿ ಗೆರೆಗಳು ಕಡಿಮೆಯಾದವೇ?

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಕ್ಕೆ ಭೇಟಿ ನೀಡಿರುವ ಸಂದರ್ಭದಲ್ಲಿ ‘ದಿ ಎಕನಾಮಿಸ್ಟ್’ ಪತ್ರಿಕೆಯು ಮೋದಿ ನೇತೃತ್ವದ ಸರ್ಕಾರ ಕುರಿತು ನಕಾರಾತ್ಮಕ ಮುಖಪುಟ ವರದಿ ಪ್ರಕಟಿಸಿದೆ. ಈ ವರದಿ ಪ್ರಧಾನಿಯವರಲ್ಲಿ ಖುಷಿ ಮೂಡಿಸುವುದಿಲ್ಲ.

‘ದಿ ಎಕನಾಮಿಸ್ಟ್’ ಪತ್ರಿಕೆಯು ಸಂಪ್ರದಾಯವಾದಿ, ಉದ್ಯಮಸ್ನೇಹಿ ಪತ್ರಿಕೆ. ಆರ್ಥಿಕತೆಗೆ ಸಂಬಂಧಿಸಿದ ವಿಚಾರದಲ್ಲಿ ಈ ಪತ್ರಿಕೆ ಹೇಳುವ ವಿಚಾರಗಳು ಅಧಿಕಾರಯುತವಾಗಿರುತ್ತವೆ ಎಂದು ವಿಶ್ವದ ನಾಯಕರು ಭಾವಿಸುತ್ತಾರೆ. ಹಾಗಾಗಿ ಈ ವಾರಪತ್ರಿಕೆಯ ಅಭಿಪ್ರಾಯ ಮಹತ್ವ ಪಡೆಯುತ್ತದೆ. ಈ ಪತ್ರಿಕೆ ಯಾವುದೇ ವಿಚಾರದ ಬಗ್ಗೆ ತಕ್ಷಣಕ್ಕೆ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ಹಾಗಾಗಿಯೇ ಪತ್ರಿಕೆ, ಮೋದಿ ಅವರ ಕುರಿತು ಈಗ ವ್ಯಕ್ತಪಡಿಸಿರುವ ಅನಿಸಿಕೆಯು ತೊಂದರೆ ಉಂಟುಮಾಡಬಹುದು ಎನ್ನಲಾಗಿದೆ.

ಮುಖಪುಟವು ಅಷ್ಟೇನೂ ನ್ಯಾಯಸಮ್ಮತವಾಗಿಲ್ಲ, ಭಾರತ ಹಾಗೂ ಮೋದಿ ಅವರ ಬಗ್ಗೆ ತೀರಾ ಕಠಿಣವಾಗಿದೆ ಎಂಬುದು ನನ್ನ ಅನಿಸಿಕೆ. ಸಾಂಕೇತಿಕತೆಗಳಿಗೆ ಪ್ರಾಮುಖ್ಯ ನೀಡುವ ಸಂಸ್ಕೃತಿಯಿಂದ ಬಂದವನ ಅನಿಸಿಕೆ ನನ್ನದಾಗಿರಬಹುದು. ಮೋದಿ ಅವರು ಕಾಗದದಿಂದ ಮಾಡಿದ ಹುಲಿಯೊಂದರ ಮೇಲೆ ಸವಾರಿ ಮಾಡುತ್ತಿರುವಂತೆ ಪತ್ರಿಕೆಯ ಮುಖಪುಟದಲ್ಲಿ ಚಿತ್ರಿಸಲಾಗಿದೆ. ಇದಕ್ಕೆ ‘ಮೋದಿಯ ಭಾರತ: ಸುಧಾರಣೆಯ ಭ್ರಮೆ’ (Modi’s India: The illusion of reform) ಎಂಬ ಶೀರ್ಷಿಕೆ ನೀಡಲಾಗಿದೆ. ಇದರಲ್ಲಿ ಹೊರಿಸಿರುವ ಆರೋಪಗಳು ಹಲವು.

ಸುಧಾರಣೆ ತರುವ ಸಾಮರ್ಥ್ಯ ಮೋದಿ ಅವರಿಗೆ ಇಲ್ಲ ಎಂದು ಪತ್ರಿಕೆಗೆ ಮನವರಿಕೆ ಆಗಿರುವುದು ಅತಿಹೆಚ್ಚು ಹಾನಿ ಮಾಡುವಂಥದ್ದು. ‘ಅರ್ಥವ್ಯವಸ್ಥೆ ಬೆಳವಣಿಗೆ ಕಾಣದಂತೆ ಮಾಡುತ್ತಿರುವ ಸಮಸ್ಯೆಗಳನ್ನು ವ್ಯವಸ್ಥಿತವಾಗಿ ಪರಿಹರಿಸುವ ಕೆಲಸವನ್ನು ಮೋದಿ ಅವರು ಅಷ್ಟೇನೂ ಉತ್ತಮವಾಗಿ ಮಾಡಲಾರರು’ ಎಂಬುದನ್ನು ದಾಖಲೆಗಳು ಹೇಳುತ್ತವೆ ಎಂದು ಪತ್ರಿಕೆಗೆ ಅನಿಸಿದೆ.

‘ನಿರ್ದಿಷ್ಟ ಕಾರ್ಖಾನೆಯೊಂದಕ್ಕೆ ಜಮೀನು ಹುಡುಕಿಕೊಡುವುದು, ವಿದ್ಯುತ್ ಉತ್ಪಾದನಾ ಘಟಕವೊಂದರ ನಿರ್ಮಾಣ ಕಾರ್ಯ ಚುರುಕುಗೊಳಿಸುವುದು ಹಾಗೂ ಈ ಮಾದರಿಯ ಇತರ ಕೆಲಸಗಳನ್ನು ಹುರುಪಿನಿಂದ ಮಾಡುವ ಕಾರಣ ಅವರಿಗೆ ವಾಣಿಜ್ಯೋದ್ಯಮ ಸ್ನೇಹಿ ಎಂಬ ಪಟ್ಟ ಬಂದಿದೆ’ ಎಂದು ಪತ್ರಿಕೆ ಬರೆದಿದೆ.

ಇದಕ್ಕೆ ಪೂರಕವಾಗಿ ಪತ್ರಿಕೆಯು, ಮೋದಿ ಅವರು ತಮ್ಮ ಆಡಳಿತದ ನಾಲ್ಕನೆಯ ವರ್ಷದಲ್ಲಿ ಮಾಡುತ್ತಿರುವ ಸರಕು ಮತ್ತು ಸೇವಾ ತೆರಿಗೆ ವ್ಯವಸ್ಥೆಯ ಅನುಷ್ಠಾನವು ಹಿಂದಿನ ಆಡಳಿತಗಳಿಂದ ರೂಪುಗೊಂಡಿರುವುದೇ ವಿನಾ ಪೂರ್ಣವಾಗಿ ಮೋದಿ ಅವರ ಚಿಂತನೆಯಿಂದ ರೂಪುಗೊಂಡಿದ್ದಲ್ಲ ಎಂದು ಹೇಳಿದೆ.

ಮೋದಿ ಅವರಲ್ಲಿ ಕೆಲಸ ಮಾಡುವ ಶಕ್ತಿಯಿದೆ ಎಂದು ಒಪ್ಪಿಕೊಳ್ಳುವ ಪತ್ರಿಕೆಯು, ‘ಶೌಚಾಲಯ ನಿರ್ಮಾಣದಿಂದ ಆರಂಭಿಸಿ ತಯಾರಿಕಾ ಯೋಜನೆಗಳವರೆಗೆ ಹೊಸದನ್ನು ಆರಂಭಿಸುವಾಗ ಅದನ್ನು ಎಲ್ಲರಿಗೂ ಕಾಣುವಂತೆ ಮಾಡುವವರು’ ಎಂದು ಹೇಳಿದೆ. ಮೋದಿ ಅವರು ದಿಟ್ಟ ವ್ಯಕ್ತಿ. ಆದರೆ, ಸ್ಪಷ್ಟ ಉದ್ದೇಶ ಹೊಂದಿಲ್ಲ.

ನೋಟು ರದ್ದತಿ ತೀರ್ಮಾನದ ಹಿಂದೆ ಧೈರ್ಯ ಇತ್ತು. ಆದರೆ ಅದು ಸ್ವಸ್ಥ ಅಥವಾ ನೆಚ್ಚಿಕೊಳ್ಳಬಹುದಾದ ನೀತಿ ಆಗಿರಲಿಲ್ಲ. ‘ಸ್ಪಷ್ಟ ಯೋಜನೆಯ ಕೊರತೆ ಹಾಗೂ ಉದ್ದೇಶಗಳು ಸ್ಪಷ್ಟವಾಗಿಲ್ಲದಿರುವುದರ ಪರಿಣಾಮವಾಗಿ ಈ ಕಸರತ್ತಿನಿಂದಾಗಿ ಅರ್ಥ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟಾಗಿದೆ’ ಎಂದು ಬರೆಯಲಾಗಿದೆ. ‘ತಾನೇನೋ ಮಾಡುತ್ತಿದ್ದೇನೆ ಎಂದು ಸಾಬೀತುಮಾಡಲು ಸರ್ಕಾರವು ಗೊತ್ತು-ಗುರಿ ಇಲ್ಲದ ತೀರ್ಮಾನಗಳನ್ನು ಕೈಗೊಳ್ಳುವ’ ಭೀತಿಯನ್ನು ಪತ್ರಿಕೆ ವ್ಯಕ್ತಪಡಿಸಿದೆ.

ಕಾರ್ಯತಂತ್ರ ಇಲ್ಲದೆ ಹಾಗೂ ಗಮನ ಕೇಂದ್ರೀಕರಿಸಿ ಕೆಲಸ ಮಾಡದ ಕಾರಣದಿಂದಾಗಿ ಭಾರತದ ಅರ್ಥ ವ್ಯವಸ್ಥೆಯು ಮೂರು ವರ್ಷಗಳ ಹಿಂದಿನ ದರಕ್ಕಿಂತ ಕಡಿಮೆ ಬೆಳವಣಿಗೆ ದರ ಕಾಣುತ್ತಿದೆ. ‘ಚುಟುಕಾಗಿ ಹೇಳಬೇಕು ಎಂದರೆ, ಮೋದಿ ಅವರು ಸುವರ್ಣಾವಕಾಶವೊಂದನ್ನು ಹಾಳು ಮಾಡುತ್ತಿದ್ದಾರೆ’. ಹೀಗಾಗಿ, ಭಾರತದ ಪಾಲಿನ ಅವಕಾಶಗಳಾದ ಜನಸಂಖ್ಯೆಯಲ್ಲಿ ಯುವಕರ ಪಾಲು ಹೆಚ್ಚಿರುವುದು ಹಾಗೂ ಅಗ್ಗದ ಬೆಲೆಗೆ ತೈಲ ಸಿಗುತ್ತಿರುವುದು ವ್ಯರ್ಥವಾಗುತ್ತಿದೆ.

ದಾಖಲೆಗಳನ್ನು ತೀರಾ ಸೂಕ್ಷ್ಮವಾಗಿ ಅವಲೋಕಿಸಿದರೆ, ಕಾರ್ಮೋಡದ ಅಂಚಿನಲ್ಲಿ ಕಾಣಿಸುವ ಬೆಳ್ಳಿ ಗೆರೆಗಳ ಸಂಖ್ಯೆ ಹೆಚ್ಚೇನೂ ಇಲ್ಲ. ಮೋದಿ ಅವರು ‘ಆರ್ಥಿಕ ಸುಧಾರಣಾವಾದಿಯ ಮುಖವಾಡ ಹಾಕಿಕೊಂಡಿರುವ ಹಿಂದೂ ಮೂಲಭೂತವಾದಿಯೇ ಅಥವಾ ಅವರು ಬೇರೆಯವರೇ’ ಎಂಬ ಪ್ರಶ್ನೆಗೆ ‘ದಿ ಎಕನಾಮಿಸ್ಟ್’ ಪತ್ರಿಕೆ ಉತ್ತರ ಕಂಡುಕೊಂಡಿದೆ. ಮೋದಿ ಅವರು ‘ಅರ್ಥಶಾಸ್ತ್ರಜ್ಞನಿಗಿಂತಲೂ ಹೆಚ್ಚಾಗಿ ಒಬ್ಬ ಕಟ್ಟಾಭಿಮಾನಿ’ ಎಂದು ಪತ್ರಿಕೆ ನಂಬಿದೆ. ಇದಕ್ಕೆ ಪೂರಕವಾಗಿ ಪತ್ರಿಕೆಯು, ‘ಬೆಳೆಯುತ್ತಿರುವ ಗೋಮಾಂಸ ರಫ್ತು ವಹಿವಾಟಿನಲ್ಲಿ ಸರ್ಕಾರವು ಅನಾಹುತವನ್ನೇ ಸೃಷ್ಟಿಸಿದೆ’ ಎಂದು ಬರೆದಿದೆ.

ಈ ಮಾತಿನ ನಂತರ ಪತ್ರಿಕೆ ಬಳಸಿರುವ ಭಾಷೆಯು ತೀರಾ ಕಟುವಾಗಿದೆ. ಇದು ಸರ್ಕಾರದಲ್ಲಿರುವ ಹಲವರಿಗೆ ಹಾಗೂ ಸರ್ಕಾರದ ಬೆಂಬಲಿಗರಿಗೆ ಅಸಮಾಧಾನ ಮೂಡಿಸುತ್ತದೆ. ‘ಮೋದಿ ಅವರ ಆಡಳಿತದಲ್ಲಿ, ಸಾರ್ವಜನಿಕ ನೀತಿಗಳು, ಕೋಮು ಸಂಬಂಧಗಳ ಕುರಿತ ಚರ್ಚೆಗಳಿಗೆ ನಿರ್ಬಂಧ ಎದುರಾಗಿದೆ.

ಭಾರತದ ಜಾತ್ಯತೀತ ಪರಂಪರೆಯಿಂದ ಬೇರೆಡೆ ಹೊರಳಿದ್ದಕ್ಕಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವರನ್ನು, ಕಾಶ್ಮೀರದ ಪ್ರತಿಭಟನೆಗಳ ವಿಚಾರದಲ್ಲಿ ತುಸು ಕಡಿಮೆ ಕಾಠಿಣ್ಯದ ಹಾದಿ ತುಳಿಯುವುದರ ಪರ ಮಾತನಾಡಿದವರನ್ನು ಹಿಂದೂ ರಾಷ್ಟ್ರೀಯವಾದಿ ಕಿಡಿಗೇಡಿಗಳು ಬೆದರಿಸುತ್ತಿದ್ದಾರೆ’ ಎಂದು ಪತ್ರಿಕೆ ಹೇಳಿದೆ. ‘ಮೋದಿ ಅವರು ವ್ಯಕ್ತಿಕೇಂದ್ರಿತ ದಾಸ್ಯಮನೋಭಾವದ ಕೇಂದ್ರಬಿಂದುವಾಗಿರುವ’ ವಾತಾವರಣದಲ್ಲೇ ಇದು ನಡೆದಿದೆ.

ಅಸಹಿಷ್ಣುತೆಗೆ ಸಂಬಂಧಿಸಿದಂತೆ ಬೇರೆ ಮಾತುಗಳೂ ಇವೆ. ಈ ವಿಚಾರದ ಕುರಿತ ವಿವಾದಗಳನ್ನು ಗಮನಿಸಿರುವ ಓದುಗರಿಗೆ ಇವು ಆಶ್ಚರ್ಯ ತರಿಸುವುದಿಲ್ಲ.

ಮೋದಿ ಹಾಗೂ ಅವರ ನೇತೃತ್ವದ ಸರ್ಕಾರವನ್ನು ವಿರೋಧಿಸುವವರಲ್ಲಿ ಈ ವರದಿಯು ಖುಷಿ ಮೂಡಿಸುತ್ತದೆ. ತಮ್ಮ ನಿಲುವುಗಳನ್ನು ಪಕ್ಷಪಾತಿಯಲ್ಲದ ಹಾಗೂ ಪಾಂಡಿತ್ಯಪೂರ್ಣ ಪತ್ರಿಕೆಯೊಂದು ಎತ್ತಿಹಿಡಿದಿದೆ ಎಂದು ಅವರು ಖುಷಿಪಡುತ್ತಾರೆ. ಆದರೆ, ಭಾರತೀಯರು ಮೋದಿ ಅವರನ್ನು ಬೆಂಬಲಿಸಲಿ, ಇಲ್ಲದಿರಲಿ ‘ದಿ ಎಕನಾಮಿಸ್ಟ್’ ಪತ್ರಿಕೆಯ ವರದಿಯು ಭಾರತೀಯರೆಲ್ಲರಲ್ಲೂ ಕಳವಳ ಮೂಡಿಸಬೇಕು.

ನಾವು ಹೊಂದಿರುವ ಕೆಲವು ಆರ್ಥಿಕ ಅನುಕೂಲಗಳು ಕಳೆದುಹೋಗುತ್ತಿರುವುದು ಸತ್ಯವಾಗಿದ್ದರೆ, ನಾವು ಆ ಬಗ್ಗೆ ಗಮನ ನೀಡಬೇಕೇ ವಿನಾ ಆರೋಪ-ಪ್ರತ್ಯಾರೋಪಗಳ ಬಗ್ಗೆ ಅಲ್ಲ. ಈ ಕೆಲವು ವಿಚಾರಗಳಲ್ಲಿ ಸರ್ಕಾರವು ತನ್ನ ವೈಫಲ್ಯವನ್ನಲ್ಲದಿದ್ದರೂ, ಕುಂದು-ಕೊರತೆಗಳನ್ನು ಒಪ್ಪಿಕೊಂಡರೆ ಸಹಾಯವಾದೀತು. ಮೋದಿ ನೇತೃತ್ವದ ಸರ್ಕಾರ ಕೊನೆಯ ಎರಡು ವರ್ಷಗಳ ಆಡಳಿತಾವಧಿಯನ್ನು ಪ್ರವೇಶಿಸುತ್ತಿರುವ ಈ ಹೊತ್ತಿನಲ್ಲಿ ಇಂಥ ಕೆಲಸಗಳು ಆಗುತ್ತಿರುವಂತೆ ತೋರುತ್ತಿಲ್ಲ. ಇದು ದುರದೃಷ್ಟಕರ.

ಕೊನೆ ಮಾತು: ಅಸಹಿಷ್ಣುತೆಯ ವಿಚಾರದಲ್ಲಿ ನಾವು ಇಂದು ಎದುರಿಸುತ್ತಿರುವ ಬಹುಪಾಲು ಸಮಸ್ಯೆಗಳ ಮೂಲ ಕಾಂಗ್ರೆಸ್ ಎಂದು ನಾನು ಎರಡು ವಾರಗಳ ಹಿಂದೆ ಈ ಅಂಕಣದಲ್ಲಿ ಬರೆದಿದ್ದೆ. ಪಿ. ಚಿದಂಬರಂ ಅವರು ‘ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ’ (ಎಎಫ್‌ಎಸ್‌ಪಿಎ) ಬಗ್ಗೆ ಇಂದು ಮಾತನಾಡುತ್ತಿದ್ದಾರೆ.

ಈ ಬಗ್ಗೆ ಅವರು ಅಧಿಕಾರದಲ್ಲಿ ಇದ್ದಾಗಲೇ ಕ್ರಮ ಕೈಗೊಳ್ಳಬಹುದಿತ್ತು ಎಂದೂ ನಾನು ಹೇಳಿದ್ದೆ. ನಾನು ಬರೆದಿರುವುದರ ಬಗ್ಗೆ ಅತೃಪ್ತಿ ಸೂಚಿಸಿ ಚಿದಂಬರಂ ಅವರು ಸಂದೇಶ ಕಳುಹಿಸಿದ್ದಾರೆ. ಅವರು ಹೇಳಿದ್ದು ಹೀಗಿದೆ: ‘ನಾನು ಗೃಹ ಸಚಿವ ಆಗಿದ್ದಾಗ, ಎಎಫ್‌ಎಸ್‌ಪಿಎ ತೆರವಿಗೆ ಮನವಿ ಮಾಡಿದ್ದೆ ಅಥವಾ ಕನಿಷ್ಠಪಕ್ಷ ಅದರ ಕೆಲವು ಸೆಕ್ಷನ್‌ಗಳನ್ನು ಮಾರ್ಪಾಡು ಮಾಡಬೇಕು ಎಂದಿದ್ದೆ.

ಈ ವಿಚಾರವನ್ನು ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿಯಲ್ಲಿ ಚರ್ಚಿಸಲಾಯಿತು. ನಾನು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ಸೇರಿ ಕರಡು ತಿದ್ದುಪಡಿಗಳನ್ನು ಸಿದ್ಧಪಡಿಸಿದೆವು. ಪ್ರಧಾನಿಯವರು ನಮಗೆ ಬೆಂಬಲವಾಗಿದ್ದರೂ, ರಕ್ಷಣಾ ಸಚಿವರನ್ನು ಒಪ್ಪಿಸಲು ನನಗೆ ಆಗಲಿಲ್ಲ. ಈ ಬಗ್ಗೆ ನಾನು ಮಾತನಾಡಿದ್ದೇನೆ. ಬರೆದಿದ್ದೇನೆ’.

‘ಕಾಶ್ಮೀರದ ಹಲವು ಪ್ರದೇಶಗಳಿಂದ ಎಎಫ್‌ಎಸ್‌ಪಿಎ ಹಿಂಪಡೆಯಬೇಕು ಎನ್ನುವ ವಿಚಾರವನ್ನು ನಾನು ಮತ್ತು ಒಮರ್ ಅಬ್ದುಲ್ಲಾ ಅವರು ಸೇನೆಯ ಜೊತೆ ಹಲವು ಬಾರಿ ಪ್ರಸ್ತಾಪಿಸಿ, ಮಾತುಕತೆ ನಡೆಸಿದೆವು. ಆದರೆ ತಮ್ಮ ನಿಲುವು ಸಡಿಲಿಸಲು ರಕ್ಷಣಾ ಸಚಿವಾಲಯ ಹಾಗೂ ರಕ್ಷಣಾ ಪಡೆಗಳು ಒಪ್ಪಲಿಲ್ಲ. ನಮ್ಮ ಜಂಟಿ ಪ್ರಯತ್ನಗಳ ಕುರಿತು ಒಮರ್ ಅವರು ಮಾತನಾಡಿದ್ದಾರೆ, ಬರೆದಿದ್ದಾರೆ. ಇವೆಲ್ಲವೂ ಈಗ ಬಹಿರಂಗವಾಗಿಯೇ ಇವೆ. ಆದರೂ ಇವು ನಿಮ್ಮ ಗಮನಕ್ಕೆ ಬಂದಿಲ್ಲ ಎಂದು ಭಾಸವಾಗುತ್ತಿದೆ’.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.