ಭರವಸೆ ತುಂಬುವ ಕಾವಲು ಸಂಸ್ಥೆಗಳ ಕಾರ್ಯವೈಖರಿ

7

ಭರವಸೆ ತುಂಬುವ ಕಾವಲು ಸಂಸ್ಥೆಗಳ ಕಾರ್ಯವೈಖರಿ

ಡಿ. ಮರಳೀಧರ
Published:
Updated:

ಕಾನೂನು ಪಾಲನೆ, ಭ್ರಷ್ಟಾಚಾರ ನಿಗ್ರಹ, ಖರ್ಚುವೆಚ್ಚಗಳ ಲೆಕ್ಕಪತ್ರ ತಪಾಸಣೆ, ಹಣಕಾಸು ಮತ್ತಿತರ ಅವ್ಯವಹಾರಗಳ ತನಿಖೆ ನಡೆಸುವ ಪ್ರಜಾಪ್ರಭುತ್ವ ವ್ಯವಸ್ಥೆಯ ವಿವಿಧ ಕಾವಲು ಸಂಸ್ಥೆಗಳ ಶಕ್ತಿ ಸಾಮರ್ಥ್ಯಗಳೇ ದೇಶದ ಸಾಮರ್ಥ್ಯ ಮತ್ತು ಪ್ರತಿಷ್ಠೆಯನ್ನೂ ನಿರ್ಧರಿಸುತ್ತವೆ.ಈ  ವಿಷಯದಲ್ಲಿ ನಮ್ಮ ದೇಶ ಪ್ರಾಮಾಣಿಕತೆಯಿಂದ ವರ್ತಿಸುತ್ತಿದೆಯೇ ಎನ್ನುವ ಪ್ರಶ್ನೆಗೆ, ನಾವೆಲ್ಲ `ಹೌದು~ ಎಂದು ಅಭಿಮಾನದಿಂದ ಹೇಳುತ್ತ ತಲೆ ಎತ್ತಿ ನಡೆಯುತ್ತೇವೆ. ನಮ್ಮ ಸದೃಢ ಮತ್ತು ಅಚ್ಚರಿದಾಯಕವಾಗಿ ಸ್ವತಂತ್ರ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಈ ಸಂಸ್ಥೆಗಳು ತಮಗೆ ಎದುರಾದ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿವೆ.ಕಳೆದ ಕೆಲ ವರ್ಷಗಳಿಂದ ಈ ಕಾವಲು ಸಂಸ್ಥೆಗಳ ಕಾರ್ಯವೈಖರಿಯು ಒಂದಕ್ಕಿಂತ ಹೆಚ್ಚು ಬಗೆಯಲ್ಲಿ ಗಮನ ಸೆಳೆದಿದೆ. ಎರಡನೆ ತಲೆಮಾರಿನ (2ಜಿ) ಮೊಬೈಲ್ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಲಾಗಿದೆ ಎಂದು ಮಹಾಲೇಖಪಾಲರು (ಸಿಎಜಿ) ಕಟು ಟೀಕೆ ಮಾಡಿದ ನಂತರ, ಒಂದೊಂದೇ ಹಗರಣಗಳು ಬಯಲಿಗೆ ಬರಲು ಆರಂಭಿಸಿದವು. ಈ ಹಗರಣಕ್ಕೆ ಸಂಬಂಧಿಸಿದಂತೆ ಕೋರ್ಟ್, ಕೇಂದ್ರ ಸರ್ಕಾರದ ಕ್ಯಾಬಿನೆಟ್ ದರ್ಜೆ ಸಚಿವರೊಬ್ಬರನ್ನು ಜೈಲಿಗೂ ಕಳಿಸಿತು.ಸುಪ್ರೀಂಕೋರ್ಟ್ ಸೇರಿದಂತೆ ಇತರ ನ್ಯಾಯಾಲಯಗಳು, ಮಹಾಲೇಖಪಾಲರು, ಲೋಕಾಯುಕ್ತ, ಸಿಬಿಐ  ಹಲವಾರು ಹಗರಣಗಳನ್ನು ಬಯಲಿಗೆ ಎಳೆಯುತ್ತಿದ್ದಂತೆ, ಕಳಂಕಿತ ರಾಜಕಾರಣಿಗಳು, ಉದ್ಯಮಿ ಪ್ರಮುಖರು, ಉನ್ನತ ಅಧಿಕಾರಿಗಳು ಎಡಬಿಡದೆ ಜೈಲಿಗೆ ಎಡತಾಕತೊಡಗಿದರು.ಈ ಎಲ್ಲ ಕಳಂಕಿತರು ಆಪಾದನೆಗಳಿಂದ ಪಾರಾಗಲು ಮತ್ತು ರಕ್ಷಣೆ ಪಡೆಯಲು ಸಾಧ್ಯವಾಗಲೇ ಇಲ್ಲ. ಹೀಗಾಗಿ  ಜೈಲುಗಳಿಗೆ ತೆರಳುವುದು ಇವರಿಗೆಲ್ಲ ಅನಿವಾರ್ಯವಾಯಿತು.ಈ ಎಲ್ಲ ಪ್ರಕರಣಗಳ ಒಟ್ಟಾರೆ ಸ್ವರೂಪ ಭಿನ್ನವಾಗಿದ್ದರೂ, ಅಧಿಕಾರ ದುರ್ಬಳಕೆ ಮಾಡಿಕೊಂಡು ಹಣಕಾಸಿನ ಲಾಭ ಮಾಡಿಕೊಂಡಿರುವುದು ಎಲ್ಲ ಪ್ರಕರಣಗಳಲ್ಲಿ ಕಂಡು ಬಂದ ಸಾಮಾನ್ಯ ಸಂಗತಿಯಾಗಿದೆ.ವಹಿವಾಟಿನ ಹಿತಾಸಕ್ತಿ ಕಾಪಾಡಿಕೊಳ್ಳಲು ಯಾವ ಹಂತಕ್ಕಾದರೂ ಇಳಿಯುವುದು, ಎಗ್ಗಿಲ್ಲದೇ ಭ್ರಷ್ಟಾಚಾರ, ವಂಚನೆ ಎಸಗುವುದು, ಕಾನೂನು ಉಲ್ಲಂಘಿಸುವುದೇ ವಂಚಕರ ಸಿದ್ಧಾಂತವಾಗಿತ್ತು. ಸಣ್ಣ ಪುಟ್ಟ ಉದ್ದಿಮೆದಾರರಿಂದ ಹಿಡಿದು, ರಾಷ್ಟ್ರೀಯ ಮಟ್ಟದ ಬೃಹತ್ ಉದ್ದಿಮೆಗಳೂ ಈ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿವೆ.ಉದಾಹರಣೆಗೆ `2ಜಿ~ ಹಗರಣವನ್ನೇ ತೆಗೆದುಕೊಂಡರೆ, ಗಣ್ಯ ವ್ಯಕ್ತಿಗಳ ದೊಡ್ಡ ದಂಡೇ ಈ ವಂಚನೆಯಲ್ಲಿ ಭಾಗಿಯಾಗಿದೆ. ಸಾಮಾಜಿಕ ಹೊಣೆಗಾರಿಕೆ  ನಿಭಾಯಿಸುವಲ್ಲಿ ನಮಗೆ ಯಾರೊಬ್ಬರೂ ಸರಿಸಾಟಿ ಇಲ್ಲ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಮತ್ತು ವೃತ್ತಿನಿರತರು ನಿರ್ವಹಿಸುವ  ಪ್ರತಿಷ್ಠಿತ ಉದ್ದಿಮೆ ಸಂಸ್ಥೆಗಳೂ ಹಗರಣದಲ್ಲಿ ಭಾಗಿಯಾಗಿವೆ.

 

ಅಲ್ಪಾವಧಿ ಗಳಿಕೆಗಾಗಿ ಈ ನೆಲದ ಕಾನೂನನ್ನೇ ನಿರ್ಲಕ್ಷಿಸುವ ಇಂತಹ ಉದ್ದಿಮೆ ಸಂಸ್ಥೆಗಳ ಈ ಬಗೆಯ ಧೋರಣೆಯು, ಅವುಗಳ ಒಟ್ಟಾರೆ ಉದ್ದೇಶದ ಬಗ್ಗೆಯೇ ಅನುಮಾನ ಪಡುವಂತೆ ಮಾಡುತ್ತದೆ.ದೇಶದ ಉದ್ದಿಮೆ ವಹಿವಾಟಿನ ಮೇಲೆ ಪ್ರಭಾವ ಬೀರಿರುವ, ಕಳೆದ ಎರಡು ವಾರಗಳಲ್ಲಿ ನಡೆದಿರುವ ಘಟನಾವಳಿಗಳೇ ಈ ಲೇಖನ ಬರೆಯಲು ನನಗೆ ಸ್ಫೂರ್ತಿಯಾಗಿವೆ.

ಮೊಬೈಲ್ ಸೇವಾ ಸಂಸ್ಥೆ ವೊಡಾಫೋನ್ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್, ಆದಾಯ ತೆರಿಗೆ ಇಲಾಖೆಯ ವಿರುದ್ಧ ತೀರ್ಪು ನೀಡಿ ವೊಡಾಫೋನ್ ನಿಲುವನ್ನು ಎತ್ತಿ ಹಿಡಿಯಿತು.ವೊಡಾಫೋನ್ ಸಂಸ್ಥೆಯು ಬೊಕ್ಕಸಕ್ಕೆ 11 ಸಾವಿರ ಕೋಟಿ ರೂಪಾಯಿಗಳಷ್ಟು ಆದಾಯ ತೆರಿಗೆ ಪಾವತಿಸುವ ಅಗತ್ಯ ಇಲ್ಲ ಎಂದು  ಕೋರ್ಟ್, ಐತಿಹಾಸಿಕ ಮತ್ತು ದೂರಗಾಮಿ ಪ್ರಭಾವ ಬೀರುವ ತೀರ್ಪು ನೀಡಿತು.ಇಡೀ ಉದ್ದಿಮೆ ಸಮೂಹವೇ ಈ ತೀರ್ಪು ಕಂಡು ಸಂಭ್ರಮಿಸಿತು. ಮುಂಬೈ ಷೇರುಪೇಟೆಯೂ ಸಕಾರಾತ್ಮಕವಾಗಿಯೇ ಸ್ಪಂದಿಸಿತು. ಅಂತರರಾಷ್ಟ್ರೀಯ ಮಟ್ಟದ ಅನೇಕ ನಿಯತಕಾಲಿಕೆಗಳು ಭಾರತದ ನ್ಯಾಯಾಂಗ ವ್ಯವಸ್ಥೆಯನ್ನು ಹಾಡಿ ಹೊಗಳಿದವು. ಈ ಬೆಳವಣಿಗೆ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳು ಕೂಡ ಸಕಾರಾತ್ಮಕ ಟಿಪ್ಪಣಿ ಮಾಡಿದವು.ಒಂದು ವಾರ ಕಳೆದ ನಂತರ, ಅದೇ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ `2ಜಿ~ ತರಂಗಾಂತರ ಹಂಚಿಕೆ ಲೈಸನ್ಸ್ ರದ್ದುಪಡಿಸಿತು. ಈ ಪ್ರಕರಣ ಒಳಗೊಂಡಿರುವ ಹಣದ ಮೊತ್ತವು ವೊಡಾಫೋನ್‌ಗಿಂತ ಹಲವು ಪಟ್ಟು ಹೆಚ್ಚಿತ್ತು. ದೇಶದ ಮತ್ತು ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳು ಈ ತೀರ್ಪಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ತಿಳಿಯದೇ ಗೊಂದಲಕ್ಕೆ ಒಳಗಾದವು.ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡಿ ಸಂಶಯಾಸ್ಪದ ರೀತಿಯಲ್ಲಿ ಮತ್ತು ಅಡ್ಡ ದಾರಿಯ ಮೂಲಕ ಪಡೆದುಕೊಂಡ ಲೈಸನ್ಸ್‌ಗಳ ಮೂಲಕ ತಮ್ಮ ಸಂಪತ್ತು ವೃದ್ಧಿಸಬಹುದು ಎಂದೇ ಈ ಹಗರಣದಲ್ಲಿ ಭಾಗಿಯಾಗಿದ್ದ ಎಲ್ಲ ಸಂಸ್ಥೆಗಳು ನಂಬಿಕೊಂಡಿದ್ದವು. ಆದರೆ, ಇಂತಹ ದುರ್ಮಾರ್ಗ ತುಳಿದಿದ್ದರಿಂದ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟ ಮಾಡಿದ್ದವು.ಸದಾ ಸಕ್ರಿಯವಾಗಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಸಾಂಸ್ಥಿಕ ಸ್ವರೂಪವು, ಎಂದಿಗೂ ಸ್ವಜನ ಪಕ್ಷಪಾತಕ್ಕೆ ಅವಕಾಶ ಮಾಡಿಕೊಡಲಾರದು ಎನ್ನುವ ಕಟು ವಾಸ್ತವವನ್ನು ಈ ವಂಚಕರು ಅರಿತುಕೊಳ್ಳದೇ ಹೋಗಿ ಅನಾಹುತ ಆಹ್ವಾನಿಸಿಕೊಂಡರು.ಕಾನೂನು ಉಲ್ಲಂಘಿಸಿ ನಡೆದ ಕಬ್ಬಿಣ ಅದಿರು ಅಕ್ರಮ ಗಣಿಗಾರಿಕೆಯೂ ಮತ್ತೆ ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೆ ಗುರಿಯಾಗಿದೆ. ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ ಪ್ರಭಾವಿ ರಾಜಕಾರಣಿಗಳನ್ನೂ ಜೈಲಿಗೆ ಅಟ್ಟಲಾಗಿದೆ.ಈ ಭ್ರಷ್ಟಾಚಾರಗಳ ಹಗರಣಗಳ ಸಾಲು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ವಿಜ್ಞಾನಿಗಳಿಗೂ `ಉದ್ದಿಮೆ ಹಿತಾಸಕ್ತಿ~ ಕಾಪಾಡಿಕೊಳ್ಳುವ ಕೊಳಕು ರೋಗ ಅಂಟಿಕೊಂಡು, ಬೊಕ್ಕಸಕ್ಕೆ ಸಾವಿರಾರು ಕೋಟಿಗಳ ನಷ್ಟ ಮಾಡಿದ್ದಾರೆ.ಹಣದ ಹಪಾಹಪಿಯ ಕಾರಣಕ್ಕೆ ಅನೇಕರು ಪ್ರಭಾವಿಗಳ ಮೌನ ಸಮ್ಮತಿಯ ನೆರವಿನಿಂದ ನಾಚಿಕೆಗೆಟ್ಟ ರೀತಿಯಲ್ಲಿ ಹಲವಾರು ಅಕ್ರಮಗಳನ್ನು ಬೇಕಾಬಿಟ್ಟಿಯಾಗಿ ಎಸಗಿರುವುದು ಕಂಡು ಬರುತ್ತದೆ.ರಾಜಕಾರಣಿ ಮತ್ತು ಉದ್ದಿಮೆದಾರರು- ಹೀಗೆ  ಎರಡೂ ಕಡೆ ಸಲ್ಲುವ ಹೊಸ ಠಕ್ಕರನ್ನೂ ನಾವು ಈಗ ಕಾಣುತ್ತಿದ್ದೇವೆ. ಬಂಡವಾಳಶಾಹಿ ವ್ಯವಸ್ಥೆಯ ಹೊಸ  ಬಗೆಯ ಅಪಾಯಕಾರಿ ಹೊಂದಾಣಿಕೆಗೆ ಇದು ತಾಜಾ ನಿದರ್ಶನವಾಗಿದೆ.ಕೋರ್ಟ್, ಸಿಬಿಐ, ಮಹಾಲೇಖಪಾಲ, ಲೋಕಾಯುಕ್ತ ಮತ್ತಿತರ ಸಂಸ್ಥೆಗಳು  ಹಗರಣಗಳನ್ನು ಬಯಲಿಗೆ ಎಳೆಯುವ ತಮ್ಮ ಅಧಿಕಾರವನ್ನು ಸಮರ್ಥವಾಗಿ ಜಾರಿಗೆ ತರದೇ ದುರ್ಬಲಗೊಂಡಿದ್ದರೆ, ಅದರ ಪರಿಣಾಮಗಳು ಏನಾಗುತ್ತಿದ್ದವು ಎನ್ನುವುದನ್ನು ಒಂದು ಕ್ಷಣ ಊಹಿಸಿ ನೋಡಿ.

 

ವಿಶ್ವದ ದೃಷ್ಟಿಯಲ್ಲಿ ಭಾರತ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿತ್ತು. ಉದ್ಯಮ ಜಗತ್ತಿನ ವಂಚನೆಯ ಮುಖವು ಜನರಿಗೆ ಗೊತ್ತಾಗದೇ ಹೋಗುತ್ತಿತ್ತು. ರಾಷ್ಟ್ರೀಯ ಸಂಪತ್ತನ್ನು  ನಗೆಪಾಟಲು ಇಲ್ಲವೇ ಬೀಸಾಕುವ ಬೆಲೆಗೆ ಕೊಡುಗೆಯಾಗಿ ನೀಡಿ ದೇಶದ ಮಾನ ಹರಾಜು ಹಾಕಲಾಗುತ್ತಿತ್ತು.ಕೆಲವೇ ಕೆಲ ಪ್ರಭಾವಿ ಉದ್ಯಮ ಸಂಸ್ಥೆಗಳು ಇಡೀ ದೇಶದ ಮೇಲೆ ಸುಲಭವಾಗಿ ಸವಾರಿ ಮಾಡಿಬಿಡುತ್ತಿದ್ದವು. ಹಲವಾರು ದೇಶಗಳಿಗೆ ಶ್ರೀಮಂತಿಕೆ ಮತ್ತು ಘನತೆ ತಂದುಕೊಟ್ಟಿದ್ದ ಬಂಡವಾಳಶಾಹಿ ವ್ಯವಸ್ಥೆಯು ಇಂತಹ ಘಟನೆಗಳಿಂದಾಗಿಯೇ ದುರವಸ್ಥೆಗೆ ಗುರಿಯಾಗುವ ಅಪಾಯ ಆಹ್ವಾನಿಸಿಕೊಂಡಿವೆ.ಸೂಕ್ತ ಪರ್ಯಾಯ ಅರ್ಥ ವ್ಯವಸ್ಥೆ ಇಲ್ಲದಿರುವುದು ಕೂಡ, ರಾಜಕೀಯ ಅಥವಾ ವಹಿವಾಟಿನ ಕೆಟ್ಟ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸತತ ಪ್ರಯತ್ನ ಮಾಡುವ ವಿಕೃತಿಗೆ ಉತ್ತೇಜನ ನೀಡುತ್ತಲೇ ಇರುತ್ತದೆ.ಪ್ರತಿಷ್ಠಿತ ಉದ್ಯಮ ದಿಗ್ಗಜರು ಇಂತಹ ವಿಷಯಗಳ ಬಗ್ಗೆ ಮೌನ ಮುರಿದು ಕಠಿಣ ನಿಲುವು ತಳೆಯುವುದಕ್ಕೆ ಇದು ಸಕಾಲವಾಗಿದೆ. ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಕೃತ್ಯದಲ್ಲಿ ತೊಡಗುವ ಉದ್ದಿಮೆ ಸಮೂಹಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಮತ್ತು ಎಲ್ಲ ವಿವಾದಗಳನ್ನು ಸರ್ವೋಚ್ಚ ನ್ಯಾಯಾಲಯಕ್ಕೆ ಒಯ್ಯದಿರಲು ಕಠಿಣ ಕಾಯ್ದೆ ರೂಪಿಸುವುದನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾಗಿದೆ. ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟಿನ ದೃಷ್ಟಿಕೋನದಿಂದಲೂ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ದೇಶಿ ಮತ್ತು ಬಹುರಾಷ್ಟ್ರೀಯ ಉದ್ದಿಮೆ ಸಂಸ್ಥೆಗಳಿಗೆ ಸರಿಯಾದ ಸಂಕೇತ ರವಾನಿಸಬೇಕಾಗಿದೆ.ಹಗರಣಗಳಲ್ಲಿ ಸಿಲುಕಿಕೊಂಡಿರುವ ಯಾವುದೇ ಪ್ರಭಾವಿ ವ್ಯಕ್ತಿ ಮತ್ತು ಉದ್ದಿಮೆ ಸಮೂಹಗಳಿಗಿಂತ, ನೆಲದ ಕಾನೂನು ಅತ್ಯುನ್ನತವಾದದ್ದು ಎನ್ನುವುದನ್ನು ಸಾಬೀತುಪಡಿಸಬೇಕಾಗಿದೆ.ಬಂಡವಾಳ ಹೂಡಿಕೆದಾರರು ಕೂಡ ದೀರ್ಘಾವಧಿಯಾದರೂ ಚಿಂತೆ ಇಲ್ಲ ಉದ್ಯೋಗಶೀಲತೆಯ ಧೋರಣೆ ರೂಢಿಸಿಕೊಳ್ಳಬೇಕಾಗಿದೆ.  ನೆಲದ ಕಾನೂನನ್ನು ಜಾರಿಗೊಳಿಸುವ ಸಾಂಸ್ಥಿಕ ನಿಯಂತ್ರಣ ಇಟ್ಟುಕೊಂಡೇ ಭಾರತದಲ್ಲಿ ದೀರ್ಘಾವಧಿ ಉದ್ದೇಶದಿಂದಲೇ ಬಂಡವಾಳ ಹೂಡಿಕೆ ಮಾಡಲು ಉತ್ತೇಜಿಸಬೇಕಾಗಿದೆ.

 

ಇದರಿಂದ ದೇಶಿ ಉದ್ದಿಮೆ ಸಂಸ್ಥೆಗಳೂ ಪಾಠ ಕಲಿಯಬೇಕಾಗಿದೆ. ಒಂದು ಬಾರಿ ತಪ್ಪು ಮಾಡಿದ ಸಂಸ್ಥೆಗಳು ಎರಡನೇ ಬಾರಿಗೆ ಸಾಕಷ್ಟು ಎಚ್ಚರಿಕೆ ವಹಿಸುತ್ತವೆ.ಕಾನೂನು ಕಟ್ಟಳೆಗಳನ್ನು ಪಾಲಿಸದಿದ್ದರೆ ತಲೆ ಮೇಲೆ ತೂಗುಕತ್ತಿಯ ಭೀತಿ ಇದ್ದೇ ಇರುತ್ತದೆ ಎನ್ನುವುದನ್ನು ಯಾರೊಬ್ಬರೂ ಮರೆಯಬಾರದು. ಹೆಚ್ಚು ಹೆಚ್ಚು ಉದ್ಯಮಿಗಳುತೋರಿಕೆಗಾದರೂ  ನೈತಿಕ ವಹಿವಾಟು ಅಳವಡಿಸಿಕೊಳ್ಳಲು ಮನಸ್ಸು ಮಾಡಿಯಾರು.ಹದ್ದಿನ ಕಣ್ಣಿನಿಂದ ನಮ್ಮ ಹಿತಾಸಕ್ತಿಗಳನ್ನು ರಕ್ಷಿಸುತ್ತಿರುವ, ನೆಲದ ಕಾನೂನು ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಬಲಪಡಿಸುವ ಹಲವಾರು ಕಾವಲು ಸಂಸ್ಥೆಗಳ ಸಾಮರ್ಥ್ಯ ಮತ್ತು ಕಾರ್ಯವೈಖರಿಯ ಬಗ್ಗೆ ನಾವೆಲ್ಲ ಹೆಮ್ಮೆಪಡಬೇಕು. ದೇಶಬಾಂಧವರು ಇನ್ನಷ್ಟು ಹೆಮ್ಮೆಯಿಂದಲೇ ಈ ಸಂಸ್ಥೆಗಳಲ್ಲಿ ತಮ್ಮ ದೃಢ ವಿಶ್ವಾಸ  ಪುನರುಚ್ಚರಿಸಬೇಕಾಗಿದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry