ಭಾರತ, ಪಾಕ್ ನಡುವೆ ನಂಬಿಕೆಯದೇ ಪ್ರಶ್ನೆ

7

ಭಾರತ, ಪಾಕ್ ನಡುವೆ ನಂಬಿಕೆಯದೇ ಪ್ರಶ್ನೆ

ಕುಲದೀಪ ನಯ್ಯರ್
Published:
Updated:
ಭಾರತ, ಪಾಕ್ ನಡುವೆ ನಂಬಿಕೆಯದೇ ಪ್ರಶ್ನೆ

ಪ್ಯಾರಿಸ್ ಮಹಾನಗರದಲ್ಲಿರುವ ಭಾರತದ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲು ತಾಲಿಬಾನ್ ಸಂಘಟನೆಯು ಹಿಂದೆ ಯೋಜಿಸಿತ್ತು. ಆದರೆ ಆ ಯೋಜನೆ ವಿಫಲಗೊಂಡಿದ್ದು ಗೊತ್ತಾದಾಗ ನನಗೆ ಅತೀವ ನಿರಾಳ ಎನಿಸಿತು.

 

ಒಂದು ವೇಳೆ ಆ ಭಯೋತ್ಪಾದಕ ಮಹಮ್ಮದ್ ಮೆರಾ ದಾಳಿ ನಡೆಸಿಯೇ ಬಿಟ್ಟಿದ್ದರೆ, ಭಾರತ ತನ್ನ ತಾಳ್ಮೆಯನ್ನು ಕಳೆದುಕೊಳ್ಳುತ್ತಿತ್ತು ಎಂಬುದಾಗಿ ಕೇಳಿ ಬರುವ ಮಾತಿನ ಹಿಂದಿರುವ ತರ್ಕ ನನಗೆ ಅರ್ಥವೇ ಆಗುತ್ತಿಲ್ಲ.

 

ಭಾರತ ಮತ್ತು ಪಾಕಿಸ್ತಾನ ನಡುವಣ ಶಾಂತಿ, ಸೌಹಾರ್ದ ಸಂಬಂಧ ಅಷ್ಟೊಂದು ತೆಳುವಾದ ಗೋಡೆಯ ಆಚೆ ಈಚೆ ಇದೆಯಾ. ಆ ಗೋಡೆ ಯಾವುದೇ ಸಣ್ಣದೊಂದು ಘಟನೆಗೂ ಕುಸಿದು ಬೀಳುವಂತದ್ದಾ... ಯಾವುದೋ ಒಂದು ಮೂಲಭೂತವಾದಿ ಸಂಘಟನೆ ಅಥವಾ ಭಯೋತ್ಪಾದಕ ಗುಂಪು ಇಂಥದ್ದನ್ನೆಲ್ಲಾ ನಿರ್ಧರಿಸುತ್ತಾ ಎಂದು ಯೋಚಿಸಿದಾಗ ಎಲ್ಲವೂ ಕ್ಲೀಷೆ ಎನಿಸತೊಡಗುತ್ತದೆ.ಯಾವುದೋ ಒಂದು ಗುಂಪು ಅಥವಾ ಒಬ್ಬ ವ್ಯಕ್ತಿಯ ಮೂರ್ಖತನ, ಹುಚ್ಚುತನ ಶಾಂತಿಯ ಬಣವೆಗೆ ಬೆಂಕಿ ಹಚ್ಚಲು ಸಾಧ್ಯ ಎಂಬಂತಾಯಿತಲ್ಲ. ಈ ಹಿನ್ನೆಲೆಯಲ್ಲಿ ನವದೆಹಲಿಯ ರಾಜತಾಂತ್ರಿಕರು ಮತ್ತು ರಾಜಕೀಯ ನೀತಿ ನಿರೂಪಕರು ತಮ್ಮ ವಿದೇಶ ನೀತಿಯನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಲು ಯತ್ನಿಸಬೇಕಿದೆ.ಭಯೋತ್ಪಾದಕರ ಕೈಗಳಿಗೆ ಸಿಲುಕಿ ಪಾಕಿಸ್ತಾನ ಕೂಡ ನಲುಗಿ ಹೋಗಿದೆ. ಪಾಕ್‌ನ ಮೈನಿಂದ ರಕ್ತ ಒಸರುತ್ತಿದೆ. ಇಸ್ಲಾಮಾಬಾದ್‌ನ ಅಧಿಕಾರಸ್ತರು ತಾವು ಎಸಗಿದ ಪಾಪಕ್ಕೆ ತಕ್ಕ ಫಲ ಉಣ್ಣುತ್ತಿದ್ದಾರೆ ಎಂದು ಕೆಲವರು ಹೇಳುವುದನ್ನೂ ನಾನು ಕೇಳಿಸಿಕೊಂಡಿದ್ದೇನೆ.ಹೌದು, ಹಿಂದೆ ಪಾಕ್‌ನ ಸೇನೆ ಮತ್ತು ನಾಗರಿಕ ಸೇವೆ ಇಲಾಖೆಗಳ ಆಯಕಟ್ಟಿನ ಉನ್ನತ ಸ್ಥಾನಗಳಲ್ಲಿ ಕುಳಿತಿದ್ದವರು ತಾಲಿಬಾನ್ ಶಕ್ತಿಗಳನ್ನು ತಲೆಯ ಮೇಲೆ ಹೊತ್ತು ಕುಣಿದಿದ್ದ ದಿನಗಳೂ ಇದ್ದವು. ಅದರಿಂದ ಪಾಕ್‌ನಷ್ಟೇ ಭಾರತ ಕೂಡಾ ತೊಂದರೆಗೆ ಒಳಗಾಯಿತು ಎನ್ನುವುದರಲ್ಲಿ ಎರಡು ಮಾತೇ ಇಲ್ಲ.

 

ಆದರೆ ಈಗ ವಿದೇಶದಲ್ಲೆಲ್ಲೋ ಭಾರತದ ಕಚೇರಿಯ ಮೇಲೆ ತಾಲಿಬಾನ್‌ಗಳು ದಾಳಿ ನಡೆಸುತ್ತಾರೆಂದರೆ, ಅದರ ಹಿಂದೆ ಇಸ್ಲಾಮಾಬಾದ್ ಅಧಿಕಾರಸ್ತರು ಇದ್ದಾರೆಂದು ಏಕಾಏಕಿ ನಿರ್ಧಾರಕ್ಕೆ ಬರಬೇಕೆ?ತಾಲಿಬಾನ್ ಮಂದಿ ಜಿಹಾದ್ ಚಿಂತನೆಯನ್ನೇ ಮೈಗೂಡಿಸಿಕೊಂಡಿದ್ದಾರೆ. ಅವರು ಎಂದೂ  ತಮ್ಮ ವರ್ತನೆಯಲ್ಲೇ ಆಗಲಿ, ಕಾರ್ಯಚಟುವಟಿಕೆಗಳಲ್ಲೇ ಆಗಲಿ ಸಾಮಾನ್ಯರಂತಿಲ್ಲ. ತಾಲಿಬಾನ್‌ಗಳ ಮೇಲುಗೈ ಕಂಡು ಬರುತ್ತಿರುವ ಪಾಕಿಸ್ತಾನದ ಸ್ವಾತ್ ಕಣಿವೆಯ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ.ಈ ಹಿನ್ನಲೆಯಲ್ಲಿ ನವದೆಹಲಿಯ ರಾಜತಾಂತ್ರಿಕರು ತಾಲಿಬಾನ್‌ಗಳ ಹುಚ್ಚುತನವನ್ನು ಇಸ್ಲಾಮಾಬಾದ್‌ನ ವಿದೇಶಾಂಗ ನೀತಿಯೊಂದಿಗೆ ತಾಳೆ ಹಾಕಿ ನೋಡಲು ಹೊರಟರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ.ಹೌದು, ಮುಂಬೈ ಮೇಲೆ ನಡೆದ ದಾಳಿಯ ಸಂದರ್ಭದಲ್ಲೇ ಆಗಲಿ, ಇನ್ನಾವುದೇ ಭಯೋತ್ಪಾದಕ ದಾಳಿಯ ವೇಳೆ ತಾಲಿಬಾನ್ ಮಂದಿ ಪಾಕಿಸ್ತಾನದ ನೆಲವನ್ನೇ ಬಳಸಿಕೊಂಡಿದೆ. ಆ ನೆಲದ ಮೂಲಭೂತವಾದಿ ಸಂಘಟನೆಯ ಕೆಲವರು ಅಂತಹ ಸಂದರ್ಭಗಳಲ್ಲಿ ಉಗ್ರರಿಗೆ ಹೆಗಲು ಕೊಟ್ಟಿರಬಹುದು. ಆದರೆ ಫ್ರಾನ್ಸ್‌ನಲ್ಲಿ ಭಾರತದ ಕಚೇರಿ ಮೇಲೆ ವಿಫಲ ದಾಳಿ ಯತ್ನವನ್ನು ಮುಂಬೈ ಘಟನೆಗೆ ಹೋಲಿಸಬೇಕೇ.ಪ್ಯಾರಿಸ್‌ನಲ್ಲಿ ಫ್ರಾನ್ಸ್‌ನ ಭದ್ರತಾ ಪಡೆಗಳಿಂದ ಕೊಲ್ಲಲ್ಪಟ್ಟ ಭಯೋತ್ಪಾದಕನನ್ನು ಪಾಕ್ ಮೂಲದ ತಾಲಿಬಾನ್ ಸಂಘಟನೆಯ ಸದಸ್ಯ ಎಂದು ನಂತರ ಗುರುತಿಸಲಾಗಿದೆ. ಈ ಬಗ್ಗೆ ಪ್ಯಾರಿಸ್‌ನ ದಿನಪತ್ರಿಕೆ `ಲೀ ಮೊಂಡೆ~ಯಲ್ಲಿ ಪಾಕಿಸ್ತಾನದಲ್ಲಿರುವ ಕಾಣದ ಕೈಗಳು ಈ ಉಗ್ರನಿಗೆ ಭಾರತದ ರಾಯಭಾರ ಕಚೇರಿಯ ಮೇಲೆ ದಾಳಿ ನಡೆಸಲು ಆದೇಶಿಸಿತ್ತು ಎಂದು ಬರೆಯಲಾಗಿದೆ.2011ರ ಬೇಸಿಗೆಯಲ್ಲಿ ನಡೆದ ತರಬೇತಿ ಶಿಬಿರದಲ್ಲಿ ಆ ಉಗ್ರನಿಗೆ ಈ ಕುರಿತು ತರಬೇತಿ ನೀಡಲಾಗಿದೆ ಎಂಬ ಮಾಹಿತಿಯನ್ನೂ ಆ ಪತ್ರಿಕೆ ಬಯಲುಗೊಳಿಸಿತು. ಆ ಪತ್ರಿಕೆ ತನ್ನ ಸುದ್ದಿ ಮೂಲ ಅತ್ಯಂತ ಕರಾರುವಾಕ್ಕಾಗಿದೆ ಎನ್ನುವುದಕ್ಕೆ ಗುಪ್ತಚರ ಇಲಾಖೆ ಕೇಂದ್ರ ನಿರ್ದೇಶನಾಲಯದಿಂದ ಸುದ್ದಿ ಪಡೆದಿರುವುದಾಗಿ ಹೇಳಿಕೊಂಡಿದೆ.ಇಂತಹ ವಾಸ್ತವಗಳ ನಡುವೆ ಭಾರತ ಸರ್ಕಾರ ಪಾಕ್‌ನ ಜತೆಗೆ ಜಗಳಗಂಟ ಧೋರಣೆ ಅಥವಾ ಹಠಮಾರಿತನ ಮುಂದುವರಿಸುವುದೂ ಒಳ್ಳೆಯದಲ್ಲ. ಪಾಕಿಸ್ತಾನವೇ ಭಯೋತ್ಪಾದಕರು ಎಸಗುತ್ತಿರುವ ಅನಾಹುತಗಳಿಂದ ಜರ್ಜರಿತಗೊಂಡಿದೆ. ಭಾರತದಂತೆಯೇ ಪಾಕಿಸ್ತಾನ ಕೂಡಾ ಅಣ್ವಸ್ತ್ರಗಳನ್ನು ತನ್ನ ಬಗಲಲ್ಲಿರಿಸಿಕೊಂಡಿದೆ. ಒಂದಿನಿತು ಹೆಚ್ಚು ಕಮ್ಮಿಯಾದರೂ ಉಭಯ ರಾಷ್ಟ್ರಗಳೂ ಸರ್ವನಾಶವಾಗಿ ಬಿಡುವ ಅಪಾಯವಿದೆ.ತಾಲಿಬಾನ್ ಉಗ್ರರ ಗಂಪುಗಳು ಭಾರತದಲ್ಲಿ ಶಾಂತಿ ಕೆಡಿಸಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಹೌದು. ಪಾಕಿಸ್ತಾನಕ್ಕೂ ಇದರ ಸಂಪೂರ್ಣ ಅರಿವಿದೆ. ಆದರೆ ಆ ಸರ್ಕಾರ ಅಸಹಾಯಕ.ಅಲ್ಲಿನ ಗೃಹಸಚಿವ ರಹಮಾನ್ ಮಲಿಕ್ ಅವರು ಕೆಲವು ದಿನಗಳ ಹಿಂದೆ ಭಾರತ ಸರ್ಕಾರವನ್ನು ಸಂಪರ್ಕಿಸಿ ಕೆಲವು ತಾಲಿಬಾನ್ ಉಗ್ರರು ಭಾರತದ ಗಡಿಯೊಳಗೆ ಪ್ರವೇಶಿಸಿದ ಬಗ್ಗೆ ಮಾಹಿತಿ ನೀಡಿದ್ದರು. ಕಾಶ್ಮೀರದಲ್ಲಿ ಈಚೆಗೆ ನಡೆದ ಎರಡು ದಾಳಿಗಳು ಬಹುಶಃ ಹೀಗೆ ಬಂದ ಉಗ್ರರಿಂದಲೇ ನಡೆದಿರಬಹುದೆಂದು ಶಂಕಿಸಲಾಗಿದೆ.ಇಂತಹ ಸಂದಿಗ್ಧತೆಯಲ್ಲಿ ಭಾರತ ಮತ್ತು ಪಾಕಿಸ್ತಾನಗಳೆರಡೂ ತಾಲಿಬಾನ್ ಉಗ್ರರಿಂದಾಗಿ ಇನ್ನಿಲ್ಲದ ಪಡಿಪಾಟಲು ಪಡುತ್ತಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಮತ್ತು ಭಾರತಗಳೆರಡೂ ಸೇರಿ ತಾಲಿಬಾನ್ ಭಯೋತ್ಪಾದಕತೆಯನ್ನು ಬಗ್ಗುಬಡಿಯಲು ಕಾರ್ಯಾಚರಣೆ ಹಮ್ಮಿಕೊಳ್ಳಬೇಕಾಗಿದೆ.2014ರಿಂದ ಅಮೆರಿಕ ಮತ್ತು ನ್ಯಾಟೊ ಸೇನೆ ಪಾಕ್ ನೆಲದಿಂದ ವಾಪಸಾಗಲಿವೆ. ಆಗ ಉಗ್ರರ ಉಪಟಳ ಇನ್ನಷ್ಟೂ ಅಧಿಕಗೊಳ್ಳುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ ಭಾರತ, ಪಾಕಿಸ್ತಾನ, ಆಫ್ಘಾನಿಸ್ತಾನ ಜಂಟಿಯಾಗಿ ಉಗ್ರರ ವಿರುದ್ಧ ಕಾರ್ಯಕ್ರಮ ರೂಪಿಸಲೇ ಬೇಕಾಗಿದೆ.ಇಂತಹ ಸಮಸ್ಯೆಗಳ ಬಗ್ಗೆ ಭಾರತ ಮತ್ತು ಪಾಕಿಸ್ತಾನಗಳ ಆಡಳಿತಗಾರರು ಪರಿಹಾರ ಕಂಡುಕೊಳ್ಳುವಲ್ಲಿ ಅದೇಕೆ ವಿಫಲರಾಗುತ್ತಿದ್ದಾರೊ ಗೊತ್ತಾಗುತ್ತಿಲ್ಲ. ಪರಿಸ್ಥಿತಿ ಇನ್ನಷ್ಟು ತಿಳಿಗೊಂಡರೆ ಉಭಯ ದೇಶಗಳ ನಡುವಣ ವ್ಯಾಪಾರ ವಹಿವಾಟು ಅಭಿವೃದ್ಧಿಗೆ ಸಂಬಂಧಿಸಿದಂತೆ ದಾಪುಗಾಲು ಇಡಲು ಸಾಧ್ಯವಿದೆ.

 

ಹೀಗೆ ಉಭಯ ದೇಶಗಳ ಜನರಲ್ಲಿ ಶಾಂತಿ ಮತ್ತು ನೆಮ್ಮದಿಯ ವಾತಾವರಣ ಉಂಟು ಮಾಡಲು ಎರಡೂ ದೇಶಗಳ ಆಡಳಿತಗಾರರು ಮುಂದಾಗಬೇಕು. ಈ ಹಿನ್ನೆಲೆಯಲ್ಲಿ ದಶಕಗಳಿಂದ ಎರಡೂ ದೇಶಗಳ ನಡುವೆ ವೈಮನಸ್ಸಿಗೆ ಕಾರಣವಾಗಿರುವ ಅಂಶಗಳನ್ನು ಬಗೆಹರಿಸಿಕೊಳ್ಳಬೇಕಿದೆ.ಈ ದಿಸೆಯಲ್ಲಿ `ಸರ್ ಕ್ರೀಕ್~ ಸಮಸ್ಯೆಯ ಪರಿಹಾರದ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ಸಕಾರಾತ್ಮಕ ಅನಿಸಿಕೆಗಳನ್ನು ವ್ಯಕ್ತ ಪಡಿಸಿದ್ದಾರೆ. ಕಾಶ್ಮೀರ ಸಮಸ್ಯೆಯೂ ಸೇರಿದಂತೆ ಎರಡೂ ದೇಶಗಳ ನಡುವಣ ವಿವಾದಾತ್ಮಕ ಸಂಗತಿಗಳ ಪರಿಹಾರಕ್ಕೆ ಮಾತುಕತೆಗೆ ಚಾಲನೆ ನೀಡಬೇಕೆಂದು ಪಾಕ್ ಸೇನೆಯ ಮುಖ್ಯಸ್ಥ ಪರ್ವೇಜ್ ಕಯಾನಿ ಅಭಿಪ್ರಾಯ ಪಟ್ಟಿದ್ದಾರೆ. ಸಿಯಾಚಿನ್ ಗ್ಲೇಸಿಯರ್ ಅನ್ನು ಸೈನಿಕರಹಿತ ಪ್ರದೇಶವನ್ನಾಗಿಸುವ ಆಶಯಕ್ಕೆ ಪುಷ್ಠಿ ಸಿಗಬಹುದು.ಸುಮಧುರ ಬಾಂಧವ್ಯಕ್ಕೆ ಸಂಬಂಧಿಸಿದಂತೆ `ಸರ್ ಕ್ರೀಕ್~, ಸಿಯಾಚಿನ್ ಗ್ಲೇಸಿಯರ್ ಅಥವಾ ಕಾಶ್ಮೀರ ಸಮಸ್ಯೆಗಳೇ ಬಲು ದೊಡ್ಡ ಅಡ್ಡಿ ಎನಿಸುತ್ತಿಲ್ಲ. ಎರಡೂ ದೇಶಗಳ ನಡುವೆ ಪರಸ್ಪರ ನಂಬಿಕೆ ಇಲ್ಲದಿರುವುದೇ ಬಹುದೊಡ್ಡ ಕೊರತೆಯಾಗಿದೆ.

ಸಿಯಾಚಿನ್‌ನಲ್ಲಿ ತೀರಾ ಪ್ರತಿಕೂಲ ಪರಿಸ್ಥಿತಿಯಿಂದ ಸಾಯುತ್ತಿರುವವರ ಸಂಖ್ಯೆಯೇ ಹೆಚ್ಚಾಗಿದೆ ಎಂಬ ಸತ್ಯ ಎರಡೂ ದೇಶಗಳ ಸೈನಿಕರಿಗೆ ಗೊತ್ತಾಗಿದೆ.ಪಾಕಿಸ್ತಾನವು ತನ್ನ ಸೇನೆಯನ್ನು ಸಿಯಾಚಿನ್‌ನಲ್ಲಿರಿಸಲಿದೆ ಎಂಬ ಮಾಹಿತಿಯನ್ನು ಆಧರಿಸಿ 1982ರಲ್ಲಿ ಭಾರತವು ಅವಸರದಲ್ಲೇ ತನ್ನ ಸೈನಿಕರನ್ನು ಸಿಯಾಚಿನ್‌ಗೆ ಕಳುಹಿಸಿತು.ಇವೆಲ್ಲಾ ಹಳೆಯ ಕಥೆ. ಪ್ರಸಕ್ತ ಎರಡೂ ದೇಶಗಳ ಜನರಿಗೆ ಶಾಂತಿ ಬೇಕಾಗಿದೆ. ನೆಮ್ಮದಿಯ ಅಗತ್ಯವಿದೆ. ಜನರ ಜೀವನ ಮಟ್ಟ ಸುಧಾರಿಸಬೇಕಿದೆ. ಎರಡೂ ದೇಶಗಳು ಸ್ವಾತಂತ್ರ್ಯ ಗಳಿಸಿ ಆರು ದಶಕಗಳು ಉರುಳಿವೆ. ಆದರೂ ಬಡವರ ಸಂಖ್ಯೆ ದೊಡ್ಡದಿದೆ. ಬಡವರ ಜೀವನಮಟ್ಟವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಯೋಚಿಸಬೇಕಿದೆ.

 (ನಿಮ್ಮ ಅನಿಸಿಕೆ ತಿಳಿಸಿ;editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry