ಮಂಗಳವಾರ, ಮೇ 18, 2021
22 °C

ಭಾರತ ವಿರೋಧಿ ಭಾವನೆಯಿಂದ ಬಾಂಗ್ಲಾಕ್ಕೆ ಲಾಭವಿಲ್ಲ

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ಬಾಂಗ್ಲಾ ದೇಶ ಪ್ರವಾಸ ಕೈಗೊಂಡಿರುವ ಪ್ರಧಾನಿ ಮನಮೋಹನ್ ಸಿಂಗ್ ಅವರು ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಕ್ಷದ (ಬಿಎನ್‌ಪಿ) ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಅವರನ್ನು ಭೇಟಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿ ಭಾರತವು ಬಾಂಗ್ಲಾ ವಿರೋಧ ಪಕ್ಷದ ನಾಯಕರನ್ನು ಭೇಟಿ ಮಾಡಲು ಆಸಕ್ತಿ ವಹಿಸಿದೆ ಎನ್ನುವುದು ಗಮನಾರ್ಹ ವಿಷಯ. ಸುಮಾರು 11 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದಾರೆ. ಹಾಗಾಗಿ ಈ ಭೇಟಿಯು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಹೊಸದೊಂದು ಆಯಾಮ ನೀಡುವ ನಿರೀಕ್ಷೆಗಳು ಗರಿಗೆದರಿವೆ.

ಖಲೀದಾ ಜಿಯಾ ನೇತೃತ್ವದ ಬಿಎನ್‌ಪಿ ಅಧಿಕಾರದಲ್ಲಿ ಇದ್ದಾಗ, ಅದರ ವಿದೇಶಾಂಗ ಸಚಿವ ಮುರ್ಷದ್ ಖಾನ್ ಭಾರತವನ್ನು ಕುರಿತು ಒಂದು ಆರೋಪ ಮಾಡಿದ್ದರು.`ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವು ಅಧಿಕಾರದಲ್ಲಿ ಇದ್ದಾಗ ಮಾತ್ರವೇ ಭಾರತವು ಢಾಕಾದತ್ತ ಸ್ನೇಹಪೂರ್ವಕ ನೋಟ ಬೀರುತ್ತದೆ~ ಎನ್ನುವುದು ಖಾನ್ ಆರೋಪ. ಇದಕ್ಕೆ ಅವರು ಫರಕ್ಕಾ ಅಣೆಕಟ್ಟು ನೀರು ಹಂಚಿಕೆ ಒಪ್ಪಂದವನ್ನು ಉಲ್ಲೇಖಿಸಿದ್ದರು. ಈ ಒಪ್ಪಂದದ ಪ್ರಕಾರ ಬಾಂಗ್ಲಾ ದೇಶದಲ್ಲಿ ಬರಗಾಲದ ಸಮಯದಲ್ಲಿ ಭಾರತವು ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡಲು ಒಪ್ಪಿಕೊಂಡಿತ್ತು.

`ನಿಮ್ಮ ಪಕ್ಷವು ಯಾವಾಗಲೂ ಭಾರತ ವಿರೋಧಿ ನಿಲುವು ತೆಗೆದುಕೊಂಡಿದೆ.

ಹಾಗಾಗಿ ಅವಾಮಿ ಲೀಗ್ ಆಳ್ವಿಕೆಯಲ್ಲಿ ಭಾರತವು ಬಾಂಗ್ಲಾದೇಶದ ಬಗ್ಗೆ ಒಲವು ತೋರಿಸುವುದು ಸಹಜ~ ಎಂದು ನಾನು ಖಾನ್ ಬಳಿ ಹೇಳಿದ್ದೆ. ಆದರೆ ಅವರು, `ಭಾರತವು ಬಾಂಗ್ಲಾದೇಶವನ್ನು ಒಂದು ನಿರ್ದಿಷ್ಟ ರಾಜಕೀಯ ಪಕ್ಷವನ್ನಾಗಿ ನೋಡದೆ ಒಂದು ದೇಶವನ್ನಾಗಿ ನೋಡಬೇಕು~ ಎಂದು ತಮ್ಮದೇ ವಾದವನ್ನು ಮಂಡಿಸಿ, ಸಮರ್ಥಿಸಿಕೊಂಡಿದ್ದರು.ಖಾನ್ ಟೀಕೆಯ ಹೊರತಾಗಿಯೂ `ಭಾರತವು ಬಾಂಗ್ಲಾದ ವಿರೋಧಪಕ್ಷದ ನಾಯಕಿ ಖಲೀದಾ ಜಿಯಾ ಅವರಿಗಿಂತಲೂ ಪ್ರಧಾನಿ ಶೇಖ್ ಹಸೀನಾ ಅವರೊಂದಿಗೆ ಆಪ್ತವಾಗಿತ್ತು~ ಎನ್ನುವ ಸಾಮಾನ್ಯ ಅಭಿಪ್ರಾಯ ಬಾಂಗ್ಲಾದೇಶದಲ್ಲಿ ಇದೆ. ಹಾಗೆ ನೋಡಿದರೆ ಇಂಥದ್ದೊಂದು ಅನಿಸಿಕೆಯು ಅಚ್ಚರಿಯನ್ನುಂಟು ಮಾಡುವುದಿಲ್ಲ.ಯಾಕೆಂದರೆ ಖಲೀದಾ ಅವರ ಆಳ್ವಿಕೆಯಲ್ಲಿ ಬಾಂಗ್ಲಾದೇಶವು ಭಾರತ ವಿರೋಧಿ ಹಾಗೂ ಪಾಕ್ ಉಗ್ರರ ಪರ ಶಕ್ತಿಗಳಿಗೆ ಸ್ವರ್ಗವಾಗಿತ್ತು. ನಾಗಾ ಬಂಡುಕೋರರು ಮತ್ತು ಮಣಿಪುರದ ಉಗ್ರರು ಅಲ್ಲಿಂದ ಕಾರ್ಯಚಟುವಟಿಕೆ ನಡೆಸುತ್ತಿದ್ದರು. ಈ ವಿಷಯದಲ್ಲಿ ಭಾರತವು ಖಲೀದಾ ಜಿಯಾ ಅವರ ಸರ್ಕಾರವನ್ನು ಬೊಟ್ಟು ಮಾಡಿ ತೋರಿಸಿದರೂ ಅದು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಬಿಎನ್‌ಪಿ ಬಗ್ಗೆ ಭಾರತದ ಅಸಮಾಧಾನಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ. ಇವೆಲ್ಲವುಗಳ ಹೊರತಾಗಿಯೂ ಮುರ್ಷದ್ ಖಾನ್ ಆಕ್ಷೇಪಕ್ಕೆ ಅದರದ್ದೇ ಆದ ಕಾರಣವಿದೆ. ಉಭಯ ದೇಶಗಳ ನಡುವಿನ ಪರಸ್ಪರ ಸಹಕಾರ ವೃದ್ಧಿಗಾಗಿ ಶೇಖ್ ಹಸೀನಾ ಜತೆ ಸರಣಿ ಒಪ್ಪಂದಗಳಿಗೆ ಸಹಿ ಹಾಕಲಿರುವ ಪ್ರಧಾನಿ ಸಿಂಗ್ ಈ ಅಂಶವನ್ನು ಪ್ರಮುಖವಾಗಿ ಗಮನದಲ್ಲಿಟ್ಟುಕೊಳ್ಳಬೇಕು.ಶೇಖ್ ಹಸೀನಾ ಪ್ರಧಾನಿ ಎನ್ನುವ ಕಾರಣಕ್ಕೆ ಭಾರತವು ಢಾಕಾದೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳುತ್ತದೆ ಎಂದು ಅಲ್ಲಿನ ವಿರೋಧ ಪಕ್ಷ ಭಾವಿಸಬಾರದು. ಭಾರತ ವಿರೋಧಿ ಭಾವನೆಗಳನ್ನು ತೊಡೆದುಹಾಕಲು ಮತ್ತು ವೈರತ್ವ ಬಿಟ್ಟು ಸ್ನೇಹಹಸ್ತ ಚಾಚಲು ಬಿಎನ್‌ಪಿಗೆ ಇದೊಂದು ಸದವಕಾಶ.ಉದಾಹರಣೆಗೆ ಹೇಳಬೇಕೆಂದರೆ ಸರಕು ಸಾಗಣೆ ಮಾರ್ಗ ಕುರಿತ ಒಪ್ಪಂದವು ಉಭಯ ದೇಶಗಳಿಗೆ ಲಾಭದಾಯಕ ಅವಕಾಶವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಇದನ್ನು ವಿರೋಧಿಸಲು ಬಿಎನ್‌ಪಿ ತನ್ನದೇ ಆದ ತರ್ಕವನ್ನು ಮಂಡಿಸುತ್ತದೆ. ಇದು `ಭಾರತ ಭದ್ರತಾ ಕಾರಿಡಾರ್~ ಎನ್ನುವುದು ಅದರ ಆರೋಪ. ಅಂದರೆ ಇಲ್ಲಿ ಭಾರತದ ಸ್ವಹಿತಾಸಕ್ತಿ ಅಡಗಿದೆ ಎಂಬುದನ್ನು ಈ ಆರೋಪವು ಧ್ವನಿಸುತ್ತದೆ ಅಲ್ಲವೇ?ಇನ್ನು ಚಿತ್ತಗಾಂಗ್ ಬಂದರಿನ ವಿಷಯಕ್ಕೆ ಬರೋಣ. ಇಲ್ಲಿ ಭಾರತಕ್ಕೆ ರಿಯಾಯ್ತಿ ನೀಡಿರುವುದು ಢಾಕಾಗೆ ಭಾರಿ ಮೊತ್ತದ ರಾಯಧನ ಸಂಗ್ರಹಕ್ಕೆ ನೆರವಾಗಿದೆ. ಇಷ್ಟೇ ಅಲ್ಲ, ರೈಲು ಹಾಗೂ ರಸ್ತೆ ಮಾರ್ಗದಂಥ ಬಳಸು ಮಾರ್ಗವನ್ನು ಬಿಟ್ಟು ಢಾಕಾ ಭಾರತದಿಂದ ಕಡಿಮೆ ಬೆಲೆಯಲ್ಲಿ ಈ ಮೂಲಕ ಸರಕು ಆಮದು ಮಾಡಿಕೊಳ್ಳುತ್ತದೆ ಎನ್ನುವುದನ್ನು ಗಮನಿಸಬೇಕು.ಬಾಂಗ್ಲಾದೇಶದ ಚುನಾವಣೆಯಲ್ಲಿ ಅವಾಮಿ ಲೀಗ್ ಸೋತಾಗಲೆಲ್ಲ ಅಧಿಕಾರಕ್ಕೆ ಬರುವ ಏಕೈಕ ವಿರೋಧ ಪಕ್ಷವೆಂದರೆ ಬಿಎನ್‌ಪಿ. ಹಾಗಾಗಿ ಭಾರತವು ಈ ಪಕ್ಷದೊಂದಿಗೆ ಸಾಮರಸ್ಯದಿಂದ ಇರಬೇಕಾಗುತ್ತದೆ. ಸ್ನೇಹ-ಸೌಹಾರ್ದತೆಯ ವಿಷಯದಲ್ಲಿ ಆಯ್ಕೆಗಿಂತಲೂ ಹೆಚ್ಚು ಅನಿವಾರ್ಯತೆಯೇ ಇಲ್ಲಿ ಪ್ರಧಾನವಾಗುತ್ತದೆ ಎನ್ನುವುದನ್ನು ಮರೆಯಬಾರದು.2013ರಲ್ಲಿ ಅಲ್ಲಿ ಚುನಾವಣೆ ನಡೆಯಲಿದೆ. ಚುನಾವಣೆಗೆ ಆರು ತಿಂಗಳು ಮುನ್ನ ಹಂಗಾಮಿ ಆಡಳಿತಕ್ಕೆ ಅವಕಾಶ ನೀಡುವ ನಿಯಮವನ್ನು ತೆಗೆದು ಹಾಕುವ ಮೂಲಕ ಅವಾಮಿ ಲೀಗ್ ಸಂವಿಧಾನವನ್ನು ಬದಲಾಯಿಸಿದೆ. ಇದೊಂದೇ ಕಾರಣವಲ್ಲ; ಇನ್ನೂ ಅನೇಕ ಕಾರಣಗಳಿಗೆ ಅವಾಮಿ ಲೀಗ್ ದೇಶದಲ್ಲಿ ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದೆ. ಉಸ್ತುವಾರಿ ಸರ್ಕಾರ ಇಲ್ಲದಿದ್ದರೆ 2008ರಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತವಾಗಿ ನಡೆದ ಚುನಾವಣೆಯಲ್ಲಿ ಐತಿಹಾಸಿಕ ವಿಜಯ ಸಾಧ್ಯವಾಗುತ್ತಿರಲಿಲ್ಲ ಎನ್ನುವುದನ್ನು ಅವಾಮಿ ಲೀಗ್ ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ?ಭಾರತ ಬಗ್ಗೆ ಬಿಎನ್‌ಪಿ ಹೊಂದಿರುವ ದ್ವೇಷ ಮನೋಭಾವವನ್ನು ಅರ್ಥಮಾಡಿಕೊಳ್ಳಬಹುದು. ಒಂದು ವೇಳೆ ಈ ಪಕ್ಷವು ಮುಂದಿನ ಚುನಾವಣೆಯನ್ನು ಬಹಿಷ್ಕರಿಸಿದರೆ ಅದು ಖಂಡಿತವಾಗಿಯೂ ಸಮಸ್ಯೆಗೆ ಸಿಲುಕುತ್ತದೆ. ಬಾಂಗ್ಲಾದೇಶದ ಜನರು ಪ್ರಜಾತಂತ್ರ ಮನೋಭಾವವನ್ನು ಬೆಳೆಸಿಕೊಂಡಿದ್ದಾರೆ. ಉಸ್ತುವಾರಿ ಸರ್ಕಾರ ಇಲ್ಲದಿದ್ದರೂ ಅವರು ದೇಶದ ನಾಯಕನ್ನು ಆರಿಸುವಷ್ಟು ಪ್ರಬುದ್ಧರಾಗಿದ್ದಾರೆ. ಆದ ಕಾರಣ ಬಿಎನ್‌ಪಿ, ಮುಂದಿನ ಚುನಾವಣೆಯನ್ನು ಬಹಿಷ್ಕರಿಸುವುದರಲ್ಲಿ ಯಾವುದೇ ಅರ್ಥವಿಲ್ಲ, ಅಗತ್ಯವೂ ಇಲ್ಲ. ಈ ಅಂಶವನ್ನು ಅದು ಮನದಟ್ಟು ಮಾಡಿಕೊಳ್ಳಬೇಕಾಗಿದೆ.ಮುಕ್ತ ಧೋರಣೆಗೆ ಹೆಸರಾದ ಶೇಖ್ ಹಸೀನಾ ಅವರು, ವೈಯಕ್ತಿಕ ಸ್ವಾತಂತ್ರ್ಯ ಹಾಗೂ ಮುಕ್ತ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಇಂಥ ಕ್ರಮಕ್ಕೆ ಮುಂದಾಗಿರುವುದು ದುರದೃಷ್ಟಕರ. ಈ ಹಿಂದೆ ಅವರ ಆಡಳಿತದಲ್ಲಿ ಪತ್ರಿಕೆ ಸಂಪಾದಕ ಮಹಮ್ಮದುರ್ ರಹಮಾನ್ ಅವರನ್ನು ವಾರೆಂಟ್ ಇಲ್ಲದೆಯೇ ಬಂಧಿಸಲಾಗಿತ್ತು. `ತಮಗೆ ಕಣ್ಣಿಗೆ ಬಟ್ಟೆ ಕಟ್ಟಲಾಗಿತ್ತು, ಕೈಗೆ ಕೋಳ ಹಾಕಲಾಗಿತ್ತು, ವಿವಸ್ತ್ರರನ್ನಾಗಿಸಲಾಗಿತ್ತು. ಸಾಲದಕ್ಕೆ ಹಸಿವಿನಿಂದ ಬಳಲುವಂತೆ ಮಾಡಲಾಗಿತ್ತು~ ಎಂದು ರಹಮಾನ್ ನೀಡಿದ ಹೇಳಿಕೆಯು ಹಸೀನಾ ಸರ್ಕಾರದ ಧೋರಣೆಯನ್ನು ಪ್ರಶ್ನಿಸುತ್ತದೆ.ಹಸೀನಾ ಸರ್ಕಾರದ ವಿರುದ್ಧ ನಿರಂತರವಾಗಿ ಚಾಟಿ ಏಟು ಬೀಸಿ ರಹಮಾನ್ ಒಂದು ಹಂತದಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿದ್ದರು.ಹಸೀನಾ ಅವರು, ತಮ್ಮ ತಂದೆ `ವಂಗಬಂಧು~ ಶೇಖ್ ಮುಜಿಬರ್ ರಹಮಾನ್ ಅವರ ಪರವಾಗಿಯೇನು ಕೆಲಸ ಮಾಡುತ್ತಿಲ್ಲ ಮತ್ತು ಅದರ ಅಗತ್ಯವೂ ಇಲ್ಲ. ಯಾಕೆಂದರೆ  ದೇಶದ ರಾಷ್ಟ್ರಪಿತನಾಗಿ ಮುಜಿಬುರ್ ರಹಮಾನ್ ಬೇರೆ ಯಾರಿಗೂ ಸಿಗದ ಮನ್ನಣೆಗೆ ಪಾತ್ರರಾಗಿದ್ದಾರೆ. ಮುಜೀಬುರ್ ರಹಮಾನ್ ಅವರ ತ್ಯಾಗ ಮತ್ತು ಸ್ವತಃ ಅವರು ಹಾಗೂ ಕುಟುಂಬದವರು ಅನುಭವಿಸಿದ ನೋವುಗಳು ಜನರಲ್ಲಿ ಅವರ ಬಗ್ಗೆ ಉದಾತ್ತ ಭಾವನೆಯನ್ನು ಮೂಡಿಸಿದೆ. ಅಲ್ಲದೆ, ಅವರ ತತ್ವಗಳನ್ನು ಪಾಲಿಸುವಂತೆ ಪ್ರೇರೇಪಣೆ ನೀಡಿದೆ. ಎಲ್ಲ ಕಡೆ ಅವರ ಭಾವಚಿತ್ರವನ್ನು ಹಾಕುವ ಪ್ರಯತ್ನವು ಮುಜೀಬುರ್ ರಹಮಾನ್ ಅವರಿಗೆ ಪ್ರಚಾರದ ಅಗತ್ಯವಿದೆ ಎನ್ನುವ ಭಾವನೆ ಮೂಡಲು ಕಾರಣವಾಗುತ್ತದೆ. ಹಾಗಾಗಿ ಈ ಪ್ರಯತ್ನವು ಅವರಿಗಾಗಲೀ, ಅವರ ಲಕ್ಷಾಂತರ ಅನುಯಾಯಿಗಳಿಗಾಲೀ ಒಳ್ಳೆಯದಲ್ಲ.ಇನ್ನು ವಿರೋಧ ಪಕ್ಷ ಬಿಎನ್‌ಪಿ ಬಗ್ಗೆ ಹೇಳುವುದಾದರೆ, ಇದರ ಮುಖಂಡರು, ಅದರಲ್ಲೂ ಖಲೀದಾ ಜಿಯಾ ಅವರ ಪುತ್ರ ತಾರೀಖ್ ರಹಮಾನ್ (ಮತ್ತೊಬ್ಬ ಸಂಜಯ್ ಗಾಂಧಿ) ಅವ್ಯವಹಾರದಲ್ಲಿ ತೊಡಗಿ ಭಾರಿ ಹಣ ಮಾಡಿರುವುದು ರಹಸ್ಯವಾಗಿಯೇನೂ ಉಳಿದಿಲ್ಲ. ಬಿಎನ್‌ಪಿ ಭಾಗಿಯಾದ ಎಲ್ಲ ಪ್ರಕರಣಗಳನ್ನು ಶೇಖ್ ಹಸೀನಾ ಸರ್ಕಾರವು ಅತ್ಯಂತ ಜಾಣತನದಿಂದ ಬಯಲಿಗೆಳೆದಿದೆ. ಹಾಗೆ ನೋಡಿದರೆ, ಅವಾಮಿ ಲೀಗ್ ಮುಖಂಡರ ವಿರುದ್ಧ ಕೂಡ ಉಸ್ತುವಾರಿ ಸರ್ಕಾರ ಭ್ರಷ್ಟಾಚಾರದ ಆರೋಪ ಹೊರಿಸಿದೆ. ಹಾಗಾಗಿ ಈ ವಿಷಯದಲ್ಲಿ ಎರಡೂ ಪಕ್ಷಗಳು ಸಮಾನ ಪಾಲುದಾರರು ಎನ್ನುವಂತಾಗಿದೆ.ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಗಳು ಅವಾಮಿ ಲೀಗ್ ವಿರುದ್ಧದ ಪ್ರಕರಣಗಳನ್ನು ಕೈಬಿಡುತ್ತಿವೆ. ಆದರೆ ಬಿಎನ್‌ಪಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳುತ್ತವೆ ಎನ್ನುವ ಭಾವನೆ ಜನರಲ್ಲಿ ಇದೆ. ಹದಗೆಟ್ಟ ವ್ಯವಸ್ಥೆಯ ವಿರುದ್ಧ, ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಜನರಲ್ಲಿ ಮನೆಮಾಡಿರುವ ಆಕ್ರೋಶವು ಏಕಾಏಕಿ ದೇಶವ್ಯಾಪಿ ಆಂದೋಲನವಾಗಿ ಪರಿವರ್ತನೆಯಾಗುತ್ತದೆ. ಇದಕ್ಕೆ ಭಾರತವೇ ಉತ್ತಮ ಉದಾಹರಣೆ. ಶೇಕ್ ಹಸೀನಾ ಇದನ್ನು ನೋಡಿ ಪಾಠ ಕಲಿಯಬೇಕಾಗಿದೆ. ಆದರೆ, ಬಾಂಗ್ಲಾದೇಶವು ಅಹಿಂಸಾ ಚಳವಳಿಯ ನೆಲವಲ್ಲ ಎನ್ನುವುದು ದುರದೃಷ್ಟಕರ ಸಂಗತಿ!

(ನಿಮ್ಮ ಅನಿಸಿಕೆಗಳನ್ನು  ಇಲ್ಲಿಗೆ ಕಳಿಸಿ: editpagefeedback@prajavani.co.in.)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.