ಭಾವದಲ್ಲಿ ಸಂವಹನಿಸುವ ಕಲಾಚೇತನರು

7

ಭಾವದಲ್ಲಿ ಸಂವಹನಿಸುವ ಕಲಾಚೇತನರು

ಬನ್ನಂಜೆ ಸಂಜೀವ ಸುವರ್ಣ
Published:
Updated:
ಭಾವದಲ್ಲಿ ಸಂವಹನಿಸುವ ಕಲಾಚೇತನರು

ಮುಂಜಾನೆ ನಾಲ್ಕು ಗಂಟೆಗೆ ಸೈಕಲ್ ಏರಿ ಇಳಿಗತ್ತಲೆಯನ್ನು ಸೀಳಿಕೊಂಡು ತುಳಿಯುತ್ತ ಉಡುಪಿ ಬಸ್‌ಸ್ಟ್ಯಾಂಡಿನಲ್ಲಿಳಿದು, ಯಾವುದಾದರೊಂದು ಸರ್ಕಾರಿ ಬಸ್‌ಗೆ ಕೈ ಅಡ್ಡಹಾಕುತ್ತಿದ್ದೆ. ಅಲ್ಲಿಂದ ಬಂದಿಳಿಯುವುದು ಕುಂದಾಪುರದ ಶಾಸ್ತ್ರಿ ಸರ್ಕಲ್‌ನಲ್ಲಿ. ಅಲ್ಲಿ ‘ನಮ್ಮ ಭೂಮಿ’ಯವರ ವಾಹನ ಕಾದಿರುತ್ತಿತ್ತು. ಬೆಳಿಗ್ಗೆ ೬ರ ಹೊತ್ತಿಗೆ ಹಟ್ಟಿಯಂಗಡಿಯ ‘ನಮ್ಮ ಭೂಮಿ’ಯ ಮಕ್ಕಳಿಗೆ ಹೆಜ್ಜೆಗಳ ತರಗತಿ ಆರಂಭ. ಅದು ಎಂಟು- ಎಂಟೂವರೆಯವರೆಗೂ ಮುಂದುವರಿಯುತ್ತಿತ್ತು. ‘ನಮ್ಮ ಭೂಮಿ’ಯೆಂದರೆ ಬೀದಿ ಮಕ್ಕಳೆಂದು ಎಲ್ಲರೂ ಕರೆಯುವ ಮಕ್ಕಳಿಗೆ ಸ್ವಾಭಿಮಾನದಿಂದ ಬದುಕುವುದನ್ನೂ ಬದುಕುವ ಹಕ್ಕನ್ನೂ ಹೇಳಿಕೊಡುತ್ತಿರುವ ಸಂಸ್ಥೆ. ನಾನಾ ಮನಸ್ಥಿತಿಯಲ್ಲಿ ಚದುರಿದ ಮಕ್ಕಳ  ಕ್ರಿಯಾಶೀಲತೆಯನ್ನು ಯಕ್ಷಗಾನವೆಂಬ ಒಂದೇ ಪಾತ್ರದಲ್ಲಿ ಹರಿಯಬಿಟ್ಟಾಗ ಅದು ಅರಳುವ ರೀತಿಗೆ ಬೆರಗುಪಡುತ್ತಿರುವಾಗಲೇ ಅಲ್ಲಿಯೇ ಎಂಟು ದಿನ ಯಕ್ಷಗಾನ ಕಾರ್ಯಾಗಾರವನ್ನು ನಡೆಸುವ ಅವಕಾಶವೂ ಸಿಕ್ಕಿತು. ‘ನಮ್ಮ ಭೂಮಿ’ಯ ಮುನ್ನೆಲೆಯಲ್ಲಿರುವ ನಂದನಾ ರೆಡ್ಡಿಯವರೂ ದಾಮೋದರ ಆಚಾರ್ಯರೂ ಕವಿತಾರತ್ನರವರೂ ಮಕ್ಕಳೊಂದಿಗೆ ಹೆಜ್ಜೆಗಳನ್ನು ಹಾಕಿ, ಬಿಲ್ಬಾಣಗಳನ್ನು ಹಿಡಿದು ಯುದ್ಧನೃತ್ಯಗಳನ್ನು ಕುಣಿದರು. ಈಗ ಅಲ್ಲಿ ನನ್ನ ಶಿಷ್ಯರು ಯಕ್ಷಗಾನ ತರಬೇತಿಯನ್ನು ಮುಂದುವರಿಸುತ್ತಿದ್ದಾರೆ.ಸಾಮಾಜಿಕವಾಗಿ ಉಪೇಕ್ಷಿಸಲ್ಪಟ್ಟ ವರ್ಗದ ಹುಡುಗರಿಗೆ ಯಕ್ಷಗಾನದಲ್ಲಿ ಭಾಗವಹಿಸುವ ಅವಕಾಶ ತಪ್ಪಿದಾಗ ಅಂಥವರನ್ನು ಸೇರಿಸಿ ತರಬೇತಿ ಕೊಟ್ಟು, ಸ್ಪರ್ಧೆಗೂ ಸಿದ್ಧಗೊಳಿಸಿದ ಯೌವನದ ದಿನಗಳು ನೆನಪಾಗುತ್ತಿವೆ. ಈ ಪ್ರಯತ್ನವನ್ನು ಅದೇನೋ ಕಾರಣದಿಂದ ಮುಂದುವರಿಸಲಾಗಲಿಲ್ಲ. ಅಂದ ಹಾಗೆ, ಲಂಡನ್‌ನ ಶಾಲೆಗಳಲ್ಲೊಮ್ಮೆ ಯಕ್ಷಗಾನ ತರಗತಿಗಳನ್ನು ನಡೆಸಿದ್ದು ಕೂಡ ನನ್ನ ಸಾಂದ್ರ ಅನುಭವಗಳಲ್ಲೊಂದು. ಬುದ್ಧಿಮಾಂದ್ಯರೆಂದು ಭಾವಿಸಲಾಗುವ ಭಿನ್ನಸಾಮರ್ಥ್ಯದ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುವ ಪ್ರಯತ್ನ ಮಾಡಿದ ದಿನಗಳು ನನ್ನ ಮನಸ್ಸಿನಲ್ಲಿ ನಿಚ್ಚಳವಾಗಿ ನಿಂತಿವೆ. ಲಂಡನ್‌ನಲ್ಲಿ ಅಂಥ ಮಕ್ಕಳನ್ನು ಪೋಷಿಸಲು ವಿಶೇಷ ಸೌಲಭ್ಯದ ಶಾಲೆಗಳಿವೆ. ನಡೆದಾಡಲು ಅಸಮರ್ಥರಾಗಿ ಗಾಲಿಕುರ್ಚಿಗಳನ್ನು ಆಶ್ರಯಿಸಿರುವ ಮಕ್ಕಳ ಮುಂದೆ ಚೆಂಡೆಯನ್ನು ನುಡಿಸಿದಾಗ ಅವರ ಮುಖದಲ್ಲಿ ಹರ್ಷ ಭಾವ ವ್ಯಕ್ತವಾಗಿ ಕೈಕಾಲುಗಳನ್ನು ಆಡಿಸಲು ಪ್ರಯತ್ನಿಸುತ್ತ ಕುಣಿಯುವ ಆಸೆ ವ್ಯಕ್ತಪಡಿಸುತ್ತಿದ್ದುದು ಯಾತನೆಯ ನಡುವೆಯೂ ಉಲ್ಲಾಸ ಉಂಟುಮಾಡುತ್ತಿತ್ತು.ಶರೀರದ ಕೆಲವು ಅಂಗಗಳ ಬಳಕೆಯ ಸಾಧ್ಯತೆ ಕುಂದಿರುವ ಮಕ್ಕಳನ್ನು ವಿಕಲ ಚೇತನರೆಂದೂ, ಅವರ ಚೇತನ ವಿಕಲವೆಂದೂ ನಾವೆಲ್ಲ ತಪ್ಪಾಗಿ ತಿಳಿದಿರುವಾಗ ಯಕ್ಷಗಾನಾಚಾರ್ಯ ಹೊಸ್ತೋಟ ಮಂಜುನಾಥ ಭಾಗವತರು ಶಿವಮೊಗ್ಗದಲ್ಲಿ ಅಂಧ ಮಕ್ಕಳ ಕಣ್ಣಾಗಿ ಯಕ್ಷಗಾನ ಪ್ರದರ್ಶನ ಮಾಡಿದ್ದನ್ನು ನಾನು ಕೇಳಿದ್ದೆ. ಇಂಥಾದ್ದೊಂದು ಕೆಲಸ ನನ್ನೂರಿನ ಸಮೀಪದಲ್ಲಿ ಮಾಡಬೇಕೆಂಬ ಬಯಕೆ ಮನಸ್ಸಿನಲ್ಲಿ ಮೂಡಿತ್ತು. ಮಾನವೀಯ ಕಳಕಳಿಯ ಉಡುಪಿಯ ಜಿ. ಶಂಕರ್ ಕುಂದಾಪುರ ಸಮೀಪದ ಮೂಡುಬಗೆ ವಾಗ್ಜೋತಿ ಶಾಲೆಯ ಆಡಳಿತದ ನೇತೃತ್ವ ವಹಿಸಿದ್ದುದರಿಂದ ಅವರ ಪ್ರೋತ್ಸಾಹದಿಂದಾಗಿ ಅಲ್ಲೊಂದು ಯಕ್ಷಗಾನ ತರಬೇತಿ ನಡೆಸುವ ಅವಕಾಶ ಸಿಕ್ಕಿತು. ಕಿವುಡ- – ಮೂಕ ಮಕ್ಕಳು ಯಕ್ಷಗಾನ ಪ್ರದರ್ಶನದಲ್ಲಿ ಭಾವಾಭಿನಯದ  ಮೂಲಕ ಬುದ್ಧಿ- ವಾಕ್- ಶ್ರವಣದ ಸಾಮರ್ಥ್ಯ ಪ್ರಕಟಿಸಿದಾಗ ಕಲಾವಿದನಾಗಿ ಬೇರೊಂದು ರೀತಿ ಆತ್ಮತೃಪ್ತಿಯನ್ನು ನಾನು ಹೊಂದುವಂತಾಯಿತು.ಬುದ್ಧಿಮಟ್ಟ ಚುರುಕಿಲ್ಲದಂತೆ ತೋರುವ ಮಕ್ಕಳು ಹೆಜ್ಜೆಗಳನ್ನು ಕಲಿತು ವೇದಿಕೆ ಹತ್ತುವುದು ಸಾಧ್ಯವೇ ಇಲ್ಲವೆಂದು ಕೆಲವರು ನನ್ನೊಡನೆ ಹೇಳಿದ್ದರು. ಆದರೆ, ನಾನು ಅಂಥ ಮಕ್ಕಳನ್ನೇ ಆರಿಸಿಕೊಂಡಿದ್ದೆ. ‘ರಾಮಭದ್ರ ಗೋವಿಂದ’ ಎಂದು ಭಾಗವತರು ಹಾಡುವಾಗ ಆ ಪುಟ್ಟ ಕೋಡಂಗಿಗಳ ಕೈ ಹಿಡಿದುಕೊಂಡು ನಾನು ಒಬ್ಬ ಕೋಡಂಗಿಯಾಗಿ ಜಿಗಿಯುತ್ತ ರಂಗಪ್ರವೇಶಿಸಿದೆ. ನಾನು ಜೊತೆಗಿದ್ದುದರಿಂದ ಅವರಿಗೆ ಇನ್ನಿಲ್ಲದ ಧೈರ್ಯ ಬಂದಿತ್ತು. ಮೊದಮೊದಲು ನನ್ನನ್ನು ನೋಡುತ್ತ ಅಭಿನಯಿಸುತ್ತಿದ್ದ ಕೆಲವರು ಸ್ವತಃ ತಾವೇ ಪಾದ ಹಸ್ತಗಳನ್ನು ಲಯಬದ್ಧವಾಗಿ ಚಲಿಸುವುದಕ್ಕೆ ಪ್ರಯತ್ನಿಸುತ್ತಿದ್ದರು. ಇಂಥ ಪ್ರದರ್ಶನಗಳ ಮಿತಿ ನನಗೆ ತಿಳಿಯದೇ ಇಲ್ಲ. ಮಕ್ಕಳ ಕುಣಿತಗಳನ್ನು ನೋಡಿ ನಾವು ಮಕ್ಕಳ ಮುಗ್ಧತೆಯನ್ನು ಆವಾಹಿಸಿಕೊಂಡು ಸಂವೇದನಾಶೀಲರಾಗುವುದಕ್ಕೆ ಇಂಥ ಪ್ರದರ್ಶನಗಳು ಪ್ರೇರಕವಾಗುತ್ತವೆಯೇ ಹೊರತು ನೋಡಿ ಆನಂದಿಸುವುದಕ್ಕಲ್ಲ. ‘ರಸೋತ್ಪತ್ತಿ’, ‘ಆನಂದಕ್ಕಾಗಿ ಕಲೆ’ ಎಂಬುದನ್ನು ಈ ಸಂದರ್ಭದಲ್ಲಿ ಕೊಂಚ ಮರುವ್ಯಾಖ್ಯಾನಿಸಬೇಕಾಗುತ್ತದೆ. ವೀಕ್ಷಕರಲ್ಲಿ ಮಿಡಿಯಬೇಕಾದುದು ಮಾನವೀಯ ಸಂವೇದನೆ. ಈ ಮಕ್ಕಳು ವೇದಿಕೆಯನ್ನು ಎಂದೂ ಹತ್ತಲಾರರು ಎಂದು ಭಾವಿಸಿದ ಅವರ ಹೆತ್ತವರು ಭಾವುಕರಾಗಿ ನನಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಬಹುಶಃ ಅದು ಕೊಟ್ಟ ಆತ್ಮತೃಪ್ತಿಯನ್ನು ಯಾವ ಪ್ರಶಸ್ತಿಯೂ ಕೊಡಲಾರದು!ಕೆಲವು ಮಕ್ಕಳು ತುಂಬ ಚುರುಕು. ಆದರೆ, ಕಿವಿ ಕೇಳಿಸುವುದಿಲ್ಲ, ಮಾತೂ ಬಾರದು. ಕೈಸನ್ನೆಯಲ್ಲಿ ಹೇಳುತ್ತ, ನಾನು ಕುಣಿದಂತೆ ಅವರೂ ಕುಣಿಯುತ್ತಿದ್ದರು. ಆದರೆ, ಅಂಥ ಮಕ್ಕಳನ್ನು ಒಂದು ಪ್ರದರ್ಶನಕ್ಕೆ ಸಿದ್ಧಗೊಳಿಸುವುದು ಹೇಗೆ ಎಂಬುದರ ಬಗ್ಗೆ ನಾನು ಕೆಲವಾರು ದಿನ ತಲೆಕೆಡಿಸಿಕೊಳ್ಳಬೇಕಾಯಿತು. ಭಾಗವತರು ಹಾಡುವ ಸಾಲುಗಳು ಅವರಿಗೆ ಕೇಳಿಸದ ಕಾರಣ ಅವರು ಅದಕ್ಕೆ ಅಭಿನಯದಲ್ಲಿ ಸ್ಪಂದಿಸುವುದು ಸಾಧ್ಯವಿರಲಿಲ್ಲ. ಚೆಂಡೆಮದ್ದಲೆಯಂತೂ ಮೊದಲೇ ಕೇಳಿಸುತ್ತಿರಲಿಲ್ಲ. ಮೊದಲ ದಿನ ರಿಹರ್ಸಲ್‌ನಲ್ಲೊಮ್ಮೆ ಭಾಗವತರು ‘ಪಂಚವಟಿ’ ಪ್ರಸಂಗದ ‘ನೋಡಿ ನಿರ್ಮಲ ಜಲ ಸಮೀಪ’ ಪದ್ಯವನ್ನು ಹಾಡುತ್ತಿರುವಾಗ ನಾನು ಅಭಿನಯಿಸಲಾರಂಭಿಸಿದೆ. ನನ್ನನ್ನು ನೋಡಿದ ಆ ಪುಟಾಣಿಗಳೂ ನನ್ನನ್ನು ಅನುಸರಿಸಲಾರಂಭಿಸಿದ್ದರು. ಆದರೆ, ಅವರು ಅಭಿನಯಿಸಲಾರಂಭಿಸುವಾಗ ‘ನೋಡಿ ನಿರ್ಮಲ ಜಲಸಮೀಪದಿ’ ಎಂಬ ಮೊದಲ ಸೊಲ್ಲು ಮುಗಿದು, ‘ಮಾಡಿಕೊಂಡರು ಪರ್ಣ ಶಾಲೆಯ’ ಎರಡನೇ ವಾಕ್ಯ ಬಂದಾಗುತ್ತಿತ್ತು. ಭಾಗವತರ ಹಾಡಿಗೂ ನನ್ನನ್ನು ನೋಡಿ ಅಭಿನಯಿಸುವ ಮಕ್ಕಳ ಕುಣಿತಕ್ಕೂ ಕೊಂಚ ಸಮಯ ವ್ಯತ್ಯಾಸ ಇದ್ದುದರಿಂದ ಅಸಂಗತವಾಗಿ ತೋರುತ್ತಿತ್ತು.ನಾನೊಂದು ಉಪಾಯ ಮಾಡಿದೆ. ವೇದಿಕೆಯ ಒಂದು ಪಾರ್ಶ್ವದಲ್ಲಿ ತೆರೆ ಇಳಿಸಿ ಮರೆಯಲ್ಲಿ ನಾನು ವೇದಿಕೆಗೆ ಅಭಿಮುಖನಾಗಿ ನಿಲ್ಲುತ್ತಿದ್ದೆ. ಭಾಗವತರು ಹಾಡು ಆರಂಭಿಸುವ ಕೆಲವು ಕ್ಷಣಗಳಿಗಿಂತ ಮೊದಲೇ ನನ್ನ ಅಭಿನಯ ಆರಂಭವಾಗುತ್ತಿತ್ತು. ನನ್ನನ್ನು ನೋಡುತ್ತ ಮಕ್ಕಳು ಅಭಿನಯವನ್ನು ಶುರುಮಾಡುವ ಹೊತ್ತಿಗೆ ಭಾಗವತರು ಕೂಡ ಪದ್ಯ ಆರಂಭಿಸುತ್ತಿದ್ದುದರಿಂದ ನಾಟ್ಯಾಭಿನಯಗಳು ಒಂದಕ್ಕೊಂದು ಹೊಂದಿಕೆಯಾಗುತ್ತಿದ್ದವು. ‘ಪಂಚವಟಿ’ ರೂಪಕದ ಪಾತ್ರಗಳೆಲ್ಲ ನಾನೊಬ್ಬನೇ ಆಗುತ್ತ, ಹೆಜ್ಜೆ ಹಾಕುತ್ತ, ಅಭಿನಯಿಸುತ್ತ, ಮಂಡಿ ಹಾಕುತ್ತ, ಕುಮ್ಚಟ್ ಹಾರುತ್ತ- ಎಲ್ಲವನ್ನೂ ಮಾಡುತ್ತಿದ್ದೆ. ಮಕ್ಕಳು ನನ್ನನ್ನು ಅನುಸರಿಸುತ್ತಿದ್ದರು. ಮಕ್ಕಳು ವೇದಿಕೆಯಲ್ಲಿ ಒಂದು ನಿರ್ದಿಷ್ಟ ಅಂತರಕ್ಕಿಂತ ಮುಂದೆ ಬಂದರೆ ಮರೆಯಲ್ಲಿ ನಿಂತ ನಾನು ಕಾಣಿಸದಿರುವ ಸಾಧ್ಯತೆ ಇದ್ದುದರಿಂದ ಅದಕ್ಕೆ ಸೂಚಕವಾಗಿ ಮುಂದೆ ಕೆಳಮಟ್ಟದಲ್ಲಿ ಅಡ್ಡಲಾಗಿ ವಸ್ತ್ರವನ್ನು ಕಟ್ಟಿದ್ದೆ. ಭಾಗವತರಾದ ಸತೀಶ ಕೆದ್ಲಾಯರೂ ಹಿಮ್ಮೇಳದ ಕೂಡ್ಲಿ ದೇವದಾಸ ರಾಯರೂ ಬಗ್ವಾಡಿ ಕೃಷ್ಣಮೂರ್ತಿ ಭಟ್ಟರೂ ಜೊತೆಗೆ ನನ್ನ ಶಿಷ್ಯರೂ ಸಹಕರಿಸುತ್ತಿದ್ದರಿಂದ ಈ ಪ್ರದರ್ಶನ ಸಾಧ್ಯವಾಯಿತೆಂದು ಹೇಳಬೇಕು.ಮನಸ್ಥಿತಿ, ದೇಹಸ್ಥಿತಿ, ಸಂಸ್ಕೃತಿ, ಪ್ರಾದೇಶಿಕತೆ, ದೇಶೀಯತೆ ಎಲ್ಲ ಭೇದಗಳನ್ನು ಮೀರಿ ಎಲ್ಲರೊಂದಿಗೆ ಉದಾರವಾಗಿ ಸ್ಪಂದಿಸುವ ಮನಸ್ಸನ್ನು ಕೊಟ್ಟದ್ದು ನನ್ನ ಬದುಕಿನ ಅನುಭವ ಮತ್ತು ನನ್ನ ಬದುಕನ್ನು ರೂಪಿಸಿದ ಯಕ್ಷಗಾನವೆಂಬ ‘ಮಾಯಕ’ದ ಕಲೆಯೇ ಹೊರತು ಬೇರೇನೂ ಅಲ್ಲ. ಕಲೆಯಾಗಲಿ ಬದುಕಾಗಲಿ ನಿಂತ ಕೆರೆಯಾಗುವುದಕ್ಕಿಂತ ಹರಿಯುವ ನದಿಯಾಗಬೇಕು. ನಿಂತ ನೆಲೆಯಲ್ಲಿಯೇ ಉಳಿಯುತ್ತಿದ್ದರೆ ‘ಮುಖತೋ ಪೂರ್ಣ ಚಂದ್ರಶ್ರೀ ನೇತ್ರಪದ್ಮ ದಳಾಕೃತಿಃ’ ಎಂದು ಭಾಗವತರು ಹಾಡುವಾಗ ಕೋಡಂಗಿಗಳು ಅಭಿನಯಿಸದೆ ಕೈಜೋಡಿಸಿ ಕಂಬದಂತೆ ನಿಲ್ಲಬೇಕಿತ್ತು!

.................................................................................ಕೋಡಂಗಿಗಳೆಂದಾಗ ನೆನಪಾಯಿತು.

ಯಕ್ಷಗಾನದಲ್ಲಿ ಸಭಾಲಕ್ಷಣದ ಕೋಡಂಗಿಗಳೆಂದರೆ ‘ಅನೌಪಚಾರಿಕವಾಗಿ ಬೇಕಾಬಿಟ್ಟಿ ಕುಣಿಯುವ ಹುಡುಗರು’ ಎಂಬ ಕಲ್ಪನೆ ನಮ್ಮಲ್ಲಿದೆ. ನಿಜವಾಗಿ ಕೋಡಂಗಿಗಳಾಗಿ ಕಾಣಿಸುವವರು ಯಕ್ಷಗಾನದ ಹೆಜ್ಜೆ ಬಾರದ ಹುಡುಗರೆಂಬುದೇನೋ ಸರಿ. ಅವರಿಗೆ ಕಲಿಸುವುದಕ್ಕಾಗಿ ಹಿರಿಯ ವೇಷಧಾರಿಗಳಲ್ಲೊಬ್ಬ ತಾನೇ ಕೋಡಂಗಿಯಾಗಿ ರಂಗದ ಮೇಲೆ ಕಾಣಿಸುವ ಪರಿಪಾಠ ಬಹಳ ವರ್ಷಗಳ ಹಿಂದೆ ಇತ್ತು. ‘ಹರೇ ರಮಣ ಗೋವಿಂದಾ...’ ಎಂಬ ಸಾಲಿಗೆ ಲಯಬದ್ಧವಾಗಿ ನಡೆಯುವುದು, ‘ಗೋವಿಂದ’ ಎಂಬ ಪದಕ್ಕೆ ಠಣ್ಣನೆ ಮೇಲಕ್ಕೆ ಹಾರಿ ಮತ್ತೆ ನಡೆಯಲಾರಂಭಿಸುವುದು,- ಇದು ರೂಪಕತಾಳ ನಡೆಯ ಪೂರ್ವಪಾಠವಾಗಿ ರಂಗದ ಮೇಲೆಯೇ ಕಲಿಕೆಯಾಗಿಬಿಡುತ್ತಿತ್ತು. ಆಗ ಯಕ್ಷಗಾನ ಕಲಿಸಲು ಈಗಿನಂತೆ ಶಾಲೆಗಳು ಇರಲಿಲ್ಲ. ರಂಗಸ್ಥಳವೇ ಅನೌಪಚಾರಿಕ ಪಾಠಶಾಲೆಯಂತೆ ಬಳಕೆಯಾಗುತ್ತಿತ್ತು. ಆದರೆ, ಈಚಿನ ದಿನಗಳಲ್ಲಿ ತರಬೇತಿ ಶಾಲೆಗಳಲ್ಲಿ ಕಲಿತು ಮೇಳ ಸೇರುವ ಹುಡುಗರು ಕೂಡ ಕೋಡಂಗಿಯನ್ನು ಏನೂ ಅರಿಯದವರಂತೆ ಕಾಣಿಸುವುದು ಎಷ್ಟು ಸರಿ? ಹಾಗಾಗಿ, ಕೋಡಂಗಿಗಳಿಗೂ ಸ್ಪಷ್ಟವಾದ ಹೆಜ್ಜೆಗಳನ್ನು ಕಲ್ಪಿಸಿ ಶಿಸ್ತುಬದ್ಧವಾಗಿ ರಂಗದ ಮೇಲೆ ಕಾಣಿಸಿದೆ. ಇದಕ್ಕೆ ಕೆಲವು ಆಕ್ಷೇಪಗಳೂ ಬಂದವು. ಕೋಡಂಗಿಗಳು ಅನೌಪಚಾರಿಕವಾಗಿ ಕುಣಿದರೇನೇ ಚೆಂದ, ಅದನ್ನು ಶೈಲೀಕೃತಗೊಳಿಸುವುದು ಸರಿಯಲ್ಲ ಎಂದು ಭಿನ್ನಧ್ವನಿಗಳನ್ನೆತ್ತಿದ ಕೆಲವರು, ‘ಇವರನ್ನು ಸುಧಾರಿತ ಕೋಡಂಗಿಗಳು ಎಂದು ಕರೆಯೋಣವೆ?’ ಎಂದು ಕೇಳಿದ್ದರು. ‘ಖಂಡಿತ, ಹಾಗೆ ಕರೆಯಬಹುದು’ ಎಂದು ಹೇಳಿ ವಾದಿಸದೆ ಸುಮ್ಮನಾಗಿದ್ದೆ.‘ಸುಧಾರಣೆ’ ಎಂಬುದು ಸಾಧ್ಯವಾಗಬೇಕಾದರೆ ಪ್ರಶ್ನಿಸುವ ಮನಸ್ಸುಗಳು ಹುಟ್ಟಿಕೊಳ್ಳಬೇಕು. ತಮ್ಮ ಕಲೆಯೆಂಬ ಭಾವದಲ್ಲಿ ತೀವ್ರವಾದ ಮೋಹದಲ್ಲಿ ಮುಳುಗಿರುವವರ ಮಧ್ಯೆ ಇಂಥ ಪ್ರಶ್ನೆಗಳು ಹುಟ್ಟಿಕೊಳ್ಳಲಾರವು. ಯಕ್ಷಗಾನದ ಪ್ರಾದೇಶಿಕತೆಗೆ ಸಂಬಂಧಿಸಿರದ ದೂರದ ಜರ್ಮನ್ ಸಂಜಾತೆ ಕ್ಯಾಥರಿನ್ ಬೈಂಡರ್ ತವರಿಗೆ ಹೋದವಳು ಮರಳಿ ಬಂದವಳೇ ನನ್ನ ತರಗತಿಯಲ್ಲಿ ಹಲವು ಪ್ರಶ್ನೆಗಳನ್ನೆತ್ತತೊಡಗಿದ್ದಳು. ಆಕೆ ಕನ್ನಡ, ಸಂಸ್ಕೃತವನ್ನು ಕಲಿತದ್ದು ಮಾತ್ರವಲ್ಲ, ನಾಟ್ಯಶಾಸ್ತ್ರವನ್ನು ಕೂಡ ಓದಿ ಅನುಭವವನ್ನು ಸಂಪಾದಿಸಿದ್ದಳು. ‘ಮುಖತೋ ಪೂರ್ಣ ಚಂದ್ರಶ್ರೀ’ ಎಂಬ ವಾಕ್ಯಕ್ಕೆ ಕೋಡಂಗಿಗಳು ಕೈಮುಗಿದು ಸುಮ್ಮನೆ ನಿಲ್ಲುವುದೇಕೆ, ನಾಟ್ಯಶಾಸ್ತ್ರವನ್ನು ಅನುಸರಿಸುವ ಕಲೆಗಳಂತೆ ಯಕ್ಷಗಾನದಲ್ಲಿ ಹಸ್ತಮುದ್ರೆಗಳಿಲ್ಲವೆ- ಮುಂತಾದ ಪ್ರಶ್ನೆಗಳನ್ನು ನನ್ನ ಮುಂದೆ ಒಡ್ಡಿದಾಗ ಅವಳಿಗೆ ಉತ್ತರಿಸಬೇಕಾದ ಸವಾಲು ನನಗೆದುರಾಗಿತ್ತು.ಹಾಗಾಗಿ, ನಾನು ನಾಟ್ಯಶಾಸ್ತ್ರಕ್ಕೆ ಸಮಾನಾಂತರವಾಗಿ ಹೆಜ್ಜೆಗಳಿಗೆ ಅನುಗುಣವಾದ ಹಸ್ತಾಭಿನಯಗಳನ್ನು ಅನ್ವೇಷಿಸುವುದಕ್ಕೆ ತೊಡಗಿದೆ. ಹೆಬ್ಬೆರಳನ್ನು ಮೇಲಕ್ಕೆತ್ತಿ, ತೋರುಬೆರಳನ್ನು ಮುಂಚಾಚಿದರೆ ಭರತನಾಟ್ಯದಲ್ಲಿ ಅದು ‘ಚಂದ್ರಕಲಾ ಮುದ್ರೆ’. ಇದೇ ಹಸ್ತಸಂಕೇತವನ್ನು ಕೊಂಚ ಬದಲಾಯಿಸಿ ಯಕ್ಷಗಾನದ ಪೂರ್ವರಂಗದ ಪಠ್ಯದಲ್ಲಿ ಬರುವ ‘ಚಂದ್ರಕೋಟಿ’ ಎಂಬ ಪದಕ್ಕೆ ಅಭಿನಯಿಸಲಾರಂಭಿಸಿದೆ. ಇಂಥ ಸಂಜ್ಞೆಗಳನ್ನೆಲ್ಲ ಹೊಸತೆಂದು ಹೇಳುವ ಉತ್ಸಾಹ ನನಗಿಲ್ಲ. ಯಕ್ಷಗಾನ ಪರಂಪರೆಯಲ್ಲಿ ಇದ್ದು, ಕಾಲಾಂತರದಲ್ಲಿ ಲುಪ್ತವಾಗಿರಬಹುದಾದ ಅಭಿನಯ ಸೂಕ್ಷ್ಮಗಳನ್ನು ಮತ್ತೆ ರೂಢಿಗೆ ತಂದೆ ಎಂದು ವಿನಯಪೂರ್ವಕವಾಗಿ ಹೇಳಿಕೊಳ್ಳಲಷ್ಟೇ ಬಯಸುತ್ತೇನೆ. ‘ಮುಖತೋ’ ಎಂಬ ಪದಕ್ಕೆ ಬಲಗೈಯ ಐದೂ ಬೆರಳುಗಳನ್ನು ಮುಖವನ್ನು ಆವರಿಸುವ ಹಾಗೆ ಬಳಸಿಕೊಂಡಾಗ ಇಂಥ ಬೆರಳ ಸಂಜ್ಞೆಯನ್ನು ಇನ್ಯಾರೋ ಬಳಸುತ್ತಾರಲ್ಲ ಅಂತನ್ನಿಸಿ ಯೋಚಿಸತೊಡಗಿದಾಗ ಭೂತದ ಕೋಲದಲ್ಲಿ ಭೂತವೇಷಧಾರಿ ಸೀಯಾಳವನ್ನು ಕೇಳುವಾಗ ಬಳಸುವ ಹಸ್ತಮುದ್ರೆ ನೆನಪಾಯಿತು. ಸೂಕ್ಷ್ಮವಾಗಿ ನೋಡಿದಾಗ ವೈದಿಕ ಪೂಜಾದಿಗಳಲ್ಲಿಯೂ ಭೂತಾರಾಧನೆಗಳಲ್ಲಿಯೂ ಕೆಲವು ಹಸ್ತಮುದ್ರೆಗಳಿರುವುದು ತಿಳಿಯಿತು. ಎಲ್ಲವನ್ನೂ ಗಮನಿಸಿ ಯಕ್ಷಗಾನದಲ್ಲಿಯೂ ಹಸ್ತಮುದ್ರೆಗಳನ್ನು ಅನ್ವೇಷಿಸುತ್ತ, ರೂಪಿಸುತ್ತ ಬಂದೆ.ಕ್ಯಾಥರಿನ್ ಬೈಂಡರ್ ಮತ್ತೆ ತವರಿಗೆ ಹೋಗಿ ಬಂದಳು. ಹಾಗೆ, ಸುಮಾರು ಮೂರು ವರ್ಷ ನಮ್ಮ ಕೇಂದ್ರದಲ್ಲಿ ಯಕ್ಷಗಾನದ ಹೆಜ್ಜೆಗಳನ್ನು ಹಾಕುವುದಕ್ಕೆ ಮಾತ್ರವಲ್ಲ, ಪೂರ್ವರಂಗದ ಪದ್ಯಗಳನ್ನು ಹಾಡುವುದಕ್ಕೂ ಕಲಿತಳು. ತಾನೇ ಮುಖವರ್ಣಿಕೆ ಬರೆದುಕೊಂಡು ವೇಷಗಳನ್ನು ಕಟ್ಟಿಕೊಳ್ಳುವಲ್ಲಿ ಸಮರ್ಥಳಾದಳು. ಯಕ್ಷಗಾನದಲ್ಲಿ ಬಳಸುವ ಕೇದಿಗೆಮುಂದಲೆ ಎಂಬ ಶಿರೋಭೂಷಣ ಸಿದ್ಧ ಸ್ಥಿತಿಯಲ್ಲಿರುವುದಿಲ್ಲ. ವಸ್ತ್ರ ಮತ್ತು ಇನ್ನಿತರ ವಸ್ತುಗಳನ್ನು ಬಳಸಿ ತಲೆಯ ಮೇಲೆ ಅದನ್ನು ಮೂಡಿಸುತ್ತಾರೆ. ಅದೂ ಒಂದು ಕಲೆಯೇ. ಇವತ್ತು ಮೇಳಗಳಲ್ಲಿ ಪಲ್ಪ್, ರಟ್ಟಿನಂಥ ವಸ್ತುಗಳನ್ನು ಬಳಸಿ ಸಿದ್ಧಗೊಂಡ ಶಾಶ್ವತ ಕೇದಿಗೆಮುಂದಲೆಯಿದೆ. ಇದನ್ನು ತಲೆಗೆ ಕಟ್ಟಿಕೊಳ್ಳುವುದು ಸುಲಭ. ಅದನ್ನು ರೂಪಿಸುವುದು ಯಾರೊ, ತಲೆಗೆ ಕಟ್ಟಿಕೊಳ್ಳುವುದು ಇನ್ಯಾರೋ! ನಿಮಗೆ ಆಶ್ಚರ್ಯವಾಗಬಹುದು, ಜರ್ಮನಿಯ ಈ ಹುಡುಗಿ ಹರಡಿ ಬಿದ್ದ ವಸ್ತ್ರ- ವಸ್ತುಗಳನ್ನು ನಾಜೂಕಿನಿಂದ ತನ್ನ ತಲೆಯ ಸುತ್ತ ಸುತ್ತಿಕೊಳ್ಳುತ್ತ ಕೇದಿಗೆಮುಂದಲೆಯನ್ನು ಸ್ಥಳದಲ್ಲಿಯೇ ತಲೆಯ ಮೇಲೆ ಮೂಡಿಸಲು ಕಲಿತುಕೊಂಡಳು. ಇವತ್ತಿಗೂ ಕ್ಯಾಥರಿನ್ ಜರ್ಮನಿಯಲ್ಲಿ ಯಕ್ಷಗಾನ ಪ್ರಾತ್ಯಕ್ಷಿಕೆಗಳನ್ನು ಕೊಡುವಾಗ ಕೇದಿಗೆಮುಂದಲೆಯನ್ನು ತಲೆಯ ಮೇಲೆ ಕಲಾತ್ಮಕವಾಗಿ ಮೂಡಿಸುತ್ತಾಳೆಯೇ ಹೊರತು, ಸಿದ್ಧ ಕಿರೀಟವನ್ನು ಅವಲಂಬಿಸುವುದಿಲ್ಲ. ಅಪೂರ್ವವಾಗುತ್ತಿರುವ ‘ಕೇದಿಗೆಮುಂದಲೆ ಕಟ್ಟುವ ಕಲೆ’ಯನ್ನು ನಮ್ಮ ವೃತ್ತಿಪರ ಮೇಳಗಳಲ್ಲಿ ಕೈಬಿಟ್ಟಿದ್ದೇವೆ. ವಿದೇಶದ ಸಂಜಾತೆ ಮಾತ್ರ ಅದನ್ನು ಇಟ್ಟುಕೊಂಡಿದ್ದಾಳೆ!ಗುರುವಾಗುವ ಮೊದಲು ಶಿಷ್ಯನಾಗಬೇಕು ಎಂಬ ಮಾತಿದೆ. ಕಲಿಸಬೇಕಾದರೆ ಕಲಿಸುವವನಿಗೆ ಮೊದಲಾಗಿ ಸ್ವತಃ ಕಲಿಯುವ ಗುಣವಿರಬೇಕು ಎಂಬುದು ಈ ಮಾತಿನ ಅರ್ಥ. ಇದು, ನನಗೆ  ಅನುಭವಕ್ಕೆ ಬಂದುದು ಕ್ಯಾಥರಿನ್‌ಳಿಗೆ ಕಲಿಸುವಾಗ. ತಾನು ಕಲಿತದ್ದಲ್ಲದೆ, ನನಗೆ ಕಲಿಯುವುದಕ್ಕೆ ಮತ್ತು ಕಲಿತದ್ದು  ಖಚಿತವಾಗುವುದಕ್ಕೆ ಅವಳು ಪ್ರೇರಣೆಯಾದಳು.(ಸಶೇಷ)

ನಿರೂಪಣೆ : ಹರಿಣಿ‘ನಮ್ಮಭೂಮಿ’ಯಲ್ಲಿ ಜರುಗಿದ ಯಕ್ಷಗಾನ ಕಾರ್ಯಾಗಾರದಲ್ಲಿ ನಂದನಾ ರೆಡ್ಡಿ ಮತ್ತು ಕವಿತಾ ರತ್ನ ಅವರೊಂದಿಗೆ ಸಂಜೀವ ಸುವರ್ಣರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry