ಶನಿವಾರ, ಮೇ 15, 2021
25 °C

ಭುವಿಯಿಂದೊಮ್ಮೆ, ಬಾನಿನಿಂದೊಮ್ಮೆ ಭಯೋತ್ಪಾತ

ನಾಗೇಶ್ ಹೆಗಡೆ Updated:

ಅಕ್ಷರ ಗಾತ್ರ : | |

ಗ್ರೀಕ್ ಪುರಾಣದಲ್ಲಿ `ಹೆಲೆನ್ ಆಫ್ ಟ್ರೊಯ್~ಎಂಬ ತ್ರಿಲೋಕ ಸುಂದರಿಯ ಪ್ರಸ್ತಾಪ ಬರುತ್ತದೆ. ಅವಳನ್ನು ಪ್ಯಾರಿಸ್ ಹೆಸರಿನ ಇನ್ನೊಬ್ಬ ಎಗರಿಸಿಕೊಂಡು ಹೋದಾಗ ಸಾವಿರ ಹಡಗುಗಳು ಒಮ್ಮೆಲೇ ಅವಳ ರಕ್ಷಣೆಗೆ ಹೊರಟವಂತೆ. ಆಗಿನ ಕಾಲದಲ್ಲಿ ಕಡಲ ತೀರದಲ್ಲಿದ್ದ ಅಷ್ಟೆಲ್ಲ ನಾವಿಕರಿಗೆ ಅದು ಹೇಗೆ ಏಕಕಾಲದಲ್ಲಿ ಸುದ್ದಿ ತಲುಪಿತೊ ಏನೊ.ಕಳೆದ ಬುಧವಾರ ಬಂಗಾಲ ಉಪಸಾಗರದ ಎಲ್ಲ ಚಿಕ್ಕ ದೊಡ್ಡ ಹಡಗುಗಳು ಏಕಕಾಲಕ್ಕೆ ಸಮುದ್ರದ ಕಡೆ ಚಲಿಸುವಂತೆ ಆದೇಶ ಬಂತು. ಈ ಬುಧವಾರ ಮತ್ತೆ ಅಲ್ಲಿನ ಹಡಗುಗಳಿಗೆಲ್ಲ ದಡ ಸೇರುವಂತೆ ಆದೇಶ ಬಂದಿದೆ. ಆಗ ಬಂದಿದ್ದು ಸುನಾಮಿಯೆಂಬ ಭಯೋತ್ಪಾತದ ಸಂಕೇತ; ಈಗ ಬಂದಿದ್ದು `ಅಗ್ನಿ~ ಎಂಬ ಯುದ್ಧ ಕ್ಷಿಪಣಿಯ ಸಂಕೇತ. ಒಂದು ಭಯ ಭೂಮಿಯಿಂದ, ಇನ್ನೊಂದು ಭಯ ಬಾನಿನಿಂದ.ಕಳೆದ ವಾರ `ಸುನಾಮಿ ಬರಲಿದೆ~ ಎಂಬ ಸಂದೇಶ ಏಪ್ರಿಲ್ 11ರ ಮಧ್ಯಾಹ್ನ 2.20ಕ್ಕೆ ಬಂದಿದ್ದೇ ತಡ, ಭಾರತ ಅಷ್ಟೇ ಅಲ್ಲ, ಹಿಂದೂ ಮಹಾಸಾಗರಕ್ಕೆ ಹೊಂದಿಕೊಂಡಿರುವ ಎಲ್ಲ ರಾಷ್ಟ್ರಗಳ ನೌಕೆಗಳೂ ತ್ವರಿತವಾಗಿ ಆಳ ಸಮುದ್ರದತ್ತ ಚಲಿಸಿದವು. ಬಾಂಗ್ಲಾದೇಶ್, ಮ್ಯಾನ್ಮಾರ್, ಥಾಯ್ಲೆಂಡ್, ಮಲೇಶ್ಯ, ಸಿಂಗಪೂರ್‌ಗಳ ಎಲ್ಲ ಬಂದರುಗಳಲ್ಲಿ ಸಂಚಲನ ಉಂಟಾಗಿತ್ತು. ಸೇಷೆಲ್ಸ್, ಸೊಮಾಲಿಯಾ, ಓಮನ್, ಕೆನ್ಯಾ, ತಾಂಝಾನಿಯಾ ಮತ್ತು ದಕ್ಷಿಣ ಆಫ್ರಿಕಗಳಲ್ಲೂ ಅಲಾರ್ಮ್‌ ಮೊಳಗಿತು.ಸುನಾಮಿ ಸಂದೇಶ ಬಂದಾಗ ಕಡಲಂಚಿನ ಎಲ್ಲರಿಗೂ ಎರಡು ಪರಸ್ಪರ ವಿರುದ್ಧವೆನಿಸುವ ಆದೇಶಗಳು ಬರುತ್ತವೆ. `ಎತ್ತರದ ಪ್ರದೇಶಗಳತ್ತ ಚಲಿಸಿ ಇಲ್ಲವೇ ಆಳ ಸಮುದ್ರಕ್ಕೆ ಹೊರಡಿ~ ಎಂಬ ಸಂದೇಶವನ್ನು ಎಲ್ಲರೂ ತ್ವರಿತವಾಗಿ ಪಾಲಿಸಬೇಕಾಗುತ್ತದೆ. ಸಮುದ್ರದ ದಡದಲ್ಲಿದ್ದರೆ ತೆರೆಯ ಸಮೇತ ಹಡಗುಗಳೇ ಬಂದು ಅಪ್ಪಳಿಸಬಹುದು. ಕಳೆದ ವರ್ಷ ಮಾರ್ಚ್ 11ರಂದು ಫುಕುಶಿಮಾಕ್ಕೆ ಸುನಾಮಿ ಅಪ್ಪಳಿಸಿದಾಗ ನೂರಾರು ದೋಣಿಗಳು, ಯಂತ್ರಚಾಲಿತ ನೌಕೆಗಳು ನುಚ್ಚುನೂರಾಗಿದ್ದವು. ಕೆಲವಂತೂ ಮನೆಗಳ ಮೇಲೂ ಏರಿ ಹೋಗಿ ಅಲ್ಲೇ ನಿಂತಿದ್ದವು. ಸುನಾಮಿ ಇಲ್ಲದ ಸಾಮಾನ್ಯ ಭೂಕಂಪನದ ಸಂದರ್ಭದಲ್ಲಿ ಹಡಗುಗಳು ಅತ್ಯಂತ ಸುರಕ್ಷಿತ ತಾಣಗಳೇ ಹೌದು. ಭೂಮಿ ನಡುಗಿದ್ದು ಗೊತ್ತೇ ಆಗುವುದಿಲ್ಲ. ಭಯವೂ ಇಲ್ಲ. ದಿಗಿಲೂ ಇಲ್ಲ. ಸುನಾಮಿ ಬರುವಂತಿದ್ದರೆ ಮಾತ್ರ ಎಲ್ಲಕ್ಕಿಂತ ತ್ವರಿತವಾಗಿ ಹಡಗು ಸಮುದ್ರದ ಕಡೆ ಹೊರಡಬೇಕು, ಇಲ್ಲವಾದರೆ ಸರ್ವನಾಶ ಖಚಿತವಾಗುತ್ತದೆ. ಸಂಪರ್ಕ ವ್ಯವಸ್ಥೆ ಸದಾಕಾಲ ಸುಸಜ್ಜಿತ ಸ್ಥಿತಿಯಲ್ಲಿ ಇರಬೇಕಾದುದು ತೀರ ಅಗತ್ಯ.2004ರ ಪ್ರಳಯಾಂತಕ ಸುನಾಮಿಯಿಂದಾಗಿ ಹಿಂದೂ ಮಹಾಸಾಗರದ ಕಡಲಂಚಿನಲ್ಲಿ ಅಂದಾಜು ಎರಡೂವರೆ ಲಕ್ಷ ಜನರು ಸಾವಿಗೀಡಾದಾಗ ಆಸ್ಟ್ರೇಲಿಯಾ, ಭಾರತ ಮತ್ತು ಇಂಡೋನೇಶ್ಯಗಳಲ್ಲಿ `ತತ್ಕಾಲ ಎಚ್ಚರಿಕೆ~ ವ್ಯವಸ್ಥೆಯನ್ನು ಸ್ಥಾಪಿಸಲಾಗಿತ್ತು. ಇಂಥ `ಮುನ್ನೆಚ್ಚರಿಕೆ ಜಾಲ~ವನ್ನು ಹೆಣೆಯುವುದೆಂದರೆ ಸುಲಭವಲ್ಲ. ಮೊದಲನೆಯದಾಗಿ, ಸಮುದ್ರದ ಯಾವ ಭಾಗದಲ್ಲಿ ಭೂಕಂಪನ ಸಂಭವಿಸಿದೆ, ಅದರ ನಾಭಿಕೇಂದ್ರದ ಆಳ ಮತ್ತು ಕಂಪನದ ತೀವ್ರತೆ ಎಷ್ಟೆಂಬುದನ್ನು ಗುರುತಿಸಬೇಕು. ಆಳದಲ್ಲಿನ ಶಿಲಾಫಲಕಗಳು ಕುಸಿದು ಮೇಲೆ-ಕೆಳಗೆ ಚಲಿಸಿದವೊ ಅಥವಾ ಅಡ್ಡಡ್ಡ ಚಲಿಸಿದವೊ ನೋಡಬೇಕು (ಕಳೆದ ವಾರ ಅಡ್ಡಡ್ಡ ಚಲಿಸಿದ್ದವು). ಭೂಕಂಪನದ ತೀವ್ರತೆ ಅಳೆಯಲೆಂದು ಪೃಥ್ವಿಯ ಸಾವಿರಾರು ಕಡೆ ಮಾಪಕಗಳಿವೆ. ನಮ್ಮ ಗೌರಿಬಿದನೂರಿನಲ್ಲೂ ಒಂದು ಯಂತ್ರಾಗಾರ ಇದೆ. ಅದರ ಉಸ್ತುವಾರಿಗೆ ಸಿಬ್ಬಂದಿ ಇದ್ದಾರೆ. ಆದರೆ ಸುನಾಮಿಯ ಮಾಪಕದ ಕತೆ ಹಾಗಲ್ಲ.ಸಮುದ್ರದ ಅಲ್ಲಲ್ಲಿ ತೇಲುಬುರುಡೆಗಳಿವೆ. ಅಂಥ ಬುರುಡೆಯೊಂದು ನಿಂತಲ್ಲೇ ದಿಢೀರ್ ಮೇಲಕ್ಕೂ ಕೆಳಕ್ಕೂ ಚಲಿಸಿದಾಗ ಅದು ಸುನಾಮಿ ಎಂದರ್ಥ. ಅದರಿಂದ ಸಿಗ್ನಲ್ ಹೊರಟು ದಡಕ್ಕೆ ಅಥವಾ ಉಪಗ್ರಹಕ್ಕೆ ಸಂಕೇತ ಹೋಗುತ್ತದೆ.ಅದು ಒಂದು ಭಾಗ. ಸುನಾಮಿ ಎದ್ದಿದೆ ಎಂದು ಗೊತ್ತಾದಾಗ ತಕ್ಷಣವೇ ಆ ಮಾಹಿತಿಯನ್ನು ಜನರಿಗೆ ತಲುಪಿಸಬೇಕು. ಅದು ಎರಡನೆಯ ಮಹತ್ವದ ಭಾಗ. ತೀರ ಉತ್ಪ್ರೇಕ್ಷಿತ ಎಚ್ಚರಿಕೆ ಕೊಟ್ಟು ಜನರನ್ನು ಕಂಗಾಲು ಮಾಡುವಂತಿಲ್ಲ. ತೀರ ಸಂಯಮದಿಂದ ಸತ್ವವನ್ನು ಬಚ್ಚಿಡುವ ಹಾಗೂ ಇಲ್ಲ.ಪದೇ ಪದೇ ಸುನಾಮಿಯ ಭಯವಿದ್ದ ಊರುಗಳಲ್ಲಿ ಧ್ವನಿವರ್ಧಕಗಳ ಮೂಲಕ ಎಚ್ಚರಿಕೆ ನೀಡಲಾಗುತ್ತದೆ. ದಡದ ಸಮೀಪದಲ್ಲೇ ಭೂಕುಸಿತ ಸಂಭವಿಸಿದರೆ? 1993ರಲ್ಲಿ ಜಪಾನಿನ ಹೊಕಾಯಿಡೊ ದ್ವೀಪದಲ್ಲಿ ಭೂಕಂಪನ ಸಂಭವಿಸಿ ಎಚ್ಚರಿಕೆ ಗಂಟೆ ಮೊಳಗಿ ಜನರು ಆಚೆ ಈಚೆ ಧಾವಿಸುತ್ತಿದ್ದಾಗಲೇ ಸುನಾಮಿ ನಾಲ್ಕೇ ನಿಮಿಷಗಳಲ್ಲಿ ಅಪ್ಪಳಿಸಿ 202 ಜನರನ್ನು ನುಂಗಿಹಾಕಿತು. ನೂರಾರು ಜನರು ಅಲೆಯ ಅಬ್ಬರಕ್ಕೆ ಸಿಲುಕಿ ನಾಪತ್ತೆಯಾದರು. 2004ರ ಇಂಡೊನೇಶ್ಯ ಸುನಾಮಿಯಲ್ಲೂ ಅಷ್ಟೆ. ಸುಮಾತ್ರಾ ದ್ವೀಪರಾಜ್ಯದ ರಾಜಧಾನಿ `ಬಾಂದಾ ಆಚೆ~ (ಅಂದರೆ `ಆಚೇ~ ಹೆಸರಿನ ನದಿಯಂಚಿನ ಬಂದರು, ಇಂಗ್ಲಿಷ್‌ನಲ್ಲಿ Band Aceh ಎಂದು ಬರೆಯುತ್ತಾರೆ) ಪಟ್ಟಣದಿಂದ ಕೇವಲ 250 ಕಿಮೀ ದೂರದ ಸಮುದ್ರದಲ್ಲಿ ಡಿಸೆಂಬರ್ 26ರ ನಸುಕಿನ ಏಳು ಗಂಟೆಗೆ 9.3 ತೀವ್ರತೆಯ ಭೂಕಂಪನ ಸಂಭವಿಸಿತು. ಕುಸಿಯುತ್ತಿದ್ದ ಕಟ್ಟಡಗಳಿಂದ ಪಾರಾಗಿ ಓಡುವಷ್ಟರಲ್ಲೇ ಸುನಾಮಿ ಅಪ್ಪಳಿಸಿ 70 ಸಾವಿರ ಜನರು ಅಸುನೀಗಿದರು. ಆಗ ಧ್ವನಿವರ್ಧಕವೂ ಇರಲಿಲ್ಲ. ದೊಡ್ಡ ಡೀಸೆಲ್ ವಿದ್ಯುತ್ ಸ್ಥಾವರವನ್ನೇ ಕಿತ್ತು ದೂರ ಎಸೆದ ಸುನಾಮಿಯ ಆ ಅಬ್ಬರಕ್ಕೆ ಧ್ವನಿವರ್ಧಕ ಇದ್ದಿದ್ದರೂ ಇಲ್ಲದಂತಾಗುತ್ತಿತ್ತು, ಆ ಮಾತು ಬೇರೆ.ಅಂದಿನ ಅನುಭವದ ಮೇಲೆ ಈಗ ಆಚೇ ನಗರದಲ್ಲಿ ಎಚ್ಚರಿಕೆಯ ಧ್ವನಿ ಮೊಳಗಿಸುವ ಆರು ಸ್ತಂಭಗಳನ್ನು ನಿಲ್ಲಿಸಲಾಗಿದೆ ನಿಜ. ಆದರೆ ಕಳೆದ ವಾರದ ಭೂಕಂಪನದ ಸಂದರ್ಭದಲ್ಲಿ ನಾಲ್ಕು ಸ್ತಂಭಗಳು ಕೈಕೊಟ್ಟವೆಂದು ಇಂಡೊನೇಶ್ಯದ ಜನಕಲ್ಯಾಣ ಸಚಿವ ಆಗುಂಗ್ ಲೊಕ್ಸೊನೊ ಹೇಳಿದ್ದು ವರದಿಯಾಗಿದೆ. ಇನ್ನೆರಡು? `ಅವು ಕೇಳಿಸಲೇ ಇಲ್ಲ. ನೆಲ ಅಷ್ಟೆಲ್ಲ ಜೋರಾಗಿ ನಡುಗಿದಾಗ ನಾವೆಲ್ಲ ಅತ್ತ ಇತ್ತ ಓಡಿದೆವು. ಎಲ್ಲಿ ಹೋಗಬೇಕೆಂದು ಯಾರೂ ನಮಗೆ ಹೇಳಿರಲಿಲ್ಲ~- ಇದು ಆಚೇ ನಗರದ ಸಾಮಾನ್ಯ ನಿವಾಸಿಗಳ ಮಾತು. ಅರ್ಧ ಜಗತ್ತನ್ನೇ ನಡುಗಿಸಿದ ಈ ಕಂಪನದಲ್ಲಿ ನೇರ ಪ್ರಾಣಹಾನಿ ಅಲ್ಲಿ ಸಂಭವಿಸಲಿಲ್ಲ. ಜೈಲು ಸಿಬ್ಬಂದಿ ಓಡಿದ್ದರಿಂದ 49 ಕೈದಿಗಳು ಪರಾರಿಯಾದರು; ಆಸ್ಪತ್ರೆಗಳಿಂದ ಅವಸರದಲ್ಲಿ ರೋಗಿಗಳನ್ನು ಆಚೆ ಸಾಗಿಸುವ ಧಾವಂತದಲ್ಲಿ ಇಬ್ಬರು ಹೃದಯಾಘಾತದಿಂದ, ಇನ್ನಿಬ್ಬರು ಬರೀ ಆಘಾತದಿಂದ ಪ್ರಾಣ ಬಿಟ್ಟರು. ಮರದಿಂದ ಜಿಗಿದ ಮಗುವೂ ಸೇರಿದಂತೆ ಕೆಲವರು ಗಾಯಗೊಂಡೂ ಪಾರಾಗಿದ್ದಾರೆ. ಥಾಯ್ಲೆಂಡ್‌ನಲ್ಲೂ ಕರಾವಳಿಗುಂಟ ಈಜುತಾಣಗಳಲ್ಲಿ ಪ್ರವಾಸೀ ಹೊಟೆಲ್‌ಗಳಲ್ಲಿ ಮುನ್ನೆಚ್ಚರಿಕೆಯ ಅಲಾರ್ಮ್‌ಗಳು ಅನೇಕ ಕಡೆ ವಿಫಲವಾದವು.

ಎತ್ತರದ ಅಂತಸ್ತುಗಳಿಗೆ ಹೋಗಿರೆಂದು ಕೂಗುವ ವ್ಯವಸ್ಥೆ ಕೆಲವು ಪ್ರತಿಷ್ಠಿತ ಖಾಸಗಿ ಹೊಟೆಲ್‌ಗಳಲ್ಲಿ ಮಾತ್ರ ಕೆಲಸ ಮಾಡಿದವು. ಸರ್ಕಾರಿ ವ್ಯವಸ್ಥೆಗಳು ಅಲ್ಲಿಯೂ ಸಮರ್ಪಕ ಜಾರಿಗೆ ಬರಲಿಲ್ಲ.ಈಗಿನ ಸಂಪರ್ಕ ಯುಗದಲ್ಲಿ ಧ್ವನಿವರ್ಧಕ ಅಲಾರ್ಮ್ ಮೂಲಕವೇ ಸುನಾಮಿ ಮುನ್ನೆಚ್ಚರಿಕೆ ಕೊಡಬೇಕೆಂದೇನೂ ಇಲ್ಲ. ರೇಡಿಯೊ, ಟಿವಿ, ಟ್ವಿಟ್ಟರ್, ಇಮೇಲ್ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮೊಬೈಲ್ ಮೂಲಕ ಎಚ್ಚರಿಕೆ ಕೊಡುವ ವ್ಯವಸ್ಥೆಯೂ ಜಾರಿಗೆ ಬರಬೇಕೆಂದು 2005ರಲ್ಲೇ ಯುನೆಸ್ಕೊ ಸಭೆಯಲ್ಲಿ ಹೇಳಲಾಗಿತ್ತು. ಎಲ್ಲ ದೇಶಗಳೂ ಒಪ್ಪಿದ್ದವು ಕೂಡ. ಭಾರತದ ಪೂರ್ವ ಕರಾವಳಿಗೆ ತಕ್ಷಣ ಎಚ್ಚರಿಕೆ ಸಿಗುವಂತೆ 23 ತಾಣಗಳಲ್ಲಿ ಉಪಗ್ರಹ ಸಂಪರ್ಕವಿರುವ ವಿಸ್ಯಾಟ್ ಡಿಶ್ ಆಂಟೆನಾಗಳನ್ನು ಸ್ಥಾಪಿಸಲಾಗಿದೆ.ಸುನಾಮಿ ಅಲೆಗಳು ಯಾವ ತೀವ್ರತೆಯಲ್ಲಿ ಚಲಿಸುತ್ತಿವೆ ಎಂಬುದನ್ನು ಉಪಗ್ರಹದ ಮೂಲಕ ಹೇಳುವುದು ಕಷ್ಟಕರ. ಆದರೆ ಸಮುದ್ರದಲ್ಲಿ ಅಲ್ಲಲ್ಲಿ ನಿಲ್ಲಿಸಿದ  ತೇಲುಬುರುಡೆಗಳಿಂದ ಬರುವ ಸಂಕೇತಗಳನ್ನು ಗ್ರಹಿಸಿ ಉಪಗ್ರಹಗಳು ಸರ್ಕಾರಿ ಇಲಾಖೆಗಳಿಗೆ ಮಾಹಿತಿಗಳನ್ನು ನೀಡುತ್ತಿರಬಹುದು. ಭಾರತದಲ್ಲಿ ಅಂಥ ಮಾಹಿತಿಯನ್ನು ಪಡೆದು ವಿಶ್ಲೇಷಣೆ ಮಾಡುವ ವ್ಯವಸ್ಥೆ ಮೂರು ಕಡೆಗಳಲ್ಲಿದೆ.  ಅಲ್ಲಿ ಹಸಿರು- ಹಳದಿ- ಕೆಂಪು ದೀಪಗಳು ಮಿನುಗಬೇಕಿತ್ತು (`ಹಸಿರು~ ಎಂದರೆ ಹೆಚ್ಚಿನ ಮಾಹಿತಿಗಾಗಿ ರೇಡಿಯೊ ಟಿವಿಗಳಿಗೆ ಕಿವಿಗೊಟ್ಟಿರಿ; `ಹಳದಿ~ ಎಂದರೆ ಸಮುದ್ರತೀರದ ಕಡೆಗೆ ಹೋಗಬೇಡಿ; `ಕೆಂಪು~ ಎಂದರೆ ತಕ್ಷಣ ಎತ್ತರದ ಪ್ರದೇಶಗಳಿಗೆ ಧಾವಿಸಿ). ಕಳೆದ ವಾರದ ಸುಮಾತ್ರಾ ಭೂಕಂಪನದ ಸುದ್ದಿ ಎಂಟು ನಿಮಿಷಗಳಲ್ಲಿ ಅಂಡಮಾನ್ ನಿಕೊಬಾರ್ ದ್ವೀಪಗಳಿಗೆ ನೇರವಾಗಿ ಇಂಡೊನೇಶ್ಯದಿಂದ ತಲುಪಿದವು. ಆದರೆ ಭಾರತ ಸರ್ಕಾರಿ ವ್ಯವಸ್ಥೆಯ ಹಸಿರು- ಹಳದಿ- ಕೆಂಪು ಎಲ್ಲಿದ್ದುವೊ, ದೂರದರ್ಶನದಲ್ಲೂ ಕಾಣಲಿಲ್ಲ.ಹಿಂದಿನ ಸುನಾಮಿಯಲ್ಲಿ ಲಕ್ಷಗಟ್ಟಲೆ ನಾಗರಿಕರನ್ನು ಕಳೆದುಕೊಂಡ ನಂತರ ಭಾರತ ತಾನು `ಸುನಾಮಿ ಮುನ್ಸೂಚನೆಯ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೆೀನೆ~ ಎಂದು ಹೇಳಿಕೊಂಡಿತ್ತು. ಕೋಟಿಗಟ್ಟಲೆ ಹಣ ಸುರಿದು ಮುನ್ನೆಚ್ಚರಿಕೆಯ ಕೇಂದ್ರಗಳು ಸ್ಥಾಪನೆಯಾದವು ನಿಜ. ಕಳೆದ ವಾರದ ಘಟನೆ ಈ ವ್ಯವಸ್ಥೆಯ ಪರೀಕ್ಷೆಗೆ ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸಿತ್ತು ಕೂಡ. ಆದರೆ ತಮಾಷೆ ಗೊತ್ತೆ?ಜನಸಾಮಾನ್ಯರಿಗೆ ಸರ್ಕಾರೀ ಮೂಲದಿಂದ ಯಾವ ಮಾಹಿತಿಯೂ ತಕ್ಷಣ ಸಿಗಲಿಲ್ಲ. ನೆಲ ನಡುಗಿದ್ದರಿಂದ ಕೋಲ್ಕತಾ, ಭುವನೇಶ್ವರ, ವಿಶಾಖಾಪಟ್ಟಣ, ಹೈದರಾಬಾದ್, ಬೆಂಗಳೂರುಗಳಲ್ಲಿ ಭಯಭೀತರಾದ ಜನರು ಬೀದಿಗೆ ಬಂದರು. ಅವರ ಪರದಾಟಗಳನ್ನು ಮಾಧ್ಯಮಗಳು ಸಮರ್ಥವಾಗಿ ಬಿಂಬಿಸಿದವು. ಹಡಗುಗಳಿಂದ ಹಡಗುಗಳಿಗೆ ಮಿಂಚಿನ ವೇಗದಲ್ಲಿ ಸುದ್ದಿ ರವಾನೆಯಾಗಿ ಆ ನಂತರವೇ ನಮ್ಮ ಕಡಲರಕ್ಷಣಾ ಪಡೆಗಳಿಗೆ ಹಾಗೂ ನೌಸೇನೆಗೆ ಎಚ್ಚರವಾಗಿರುವಂತೆ ಆದೇಶ ಬಂತು.ಭಾರತದಲ್ಲಿ ಪ್ರಧಾನ ಮಂತ್ರಿಯ ಅಧ್ಯಕ್ಷತೆಯಲ್ಲಿ `ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ~ ಎಂಬ ಪ್ರತಿಷ್ಠಿತ ಸಂಸ್ಥೆಯೊಂದಿದೆ. ಮುನ್ನೆಚ್ಚರಿಕೆ ಸುದ್ದಿ ಮೊತ್ತ ಮೊದಲು ಅಲ್ಲಿಂದಲೇ ಬರಬೇಕಿತ್ತು. ತಮಾಷೆ ಎಂದರೆ ಭೂಕಂಪನ ಸಂಭವಿಸಿ ಆರು ಗಂಟೆಗಳ ನಂತರವೂ ಅದರ (ಎನ್‌ಡಿಎಮ್‌ಎ. ಇನ್) ವೆಬ್‌ಸೈಟ್‌ನಲ್ಲಿ ಏನೂ ಮಾಹಿತಿ ಇರಲಿಲ್ಲ.ಅರ್ಧ ಜಗತ್ತೇ ತಲ್ಲಣಗೊಂಡಿದ್ದಾಗ ವೆಬ್‌ಸೈಟ್‌ನಲ್ಲಿ `ಇತ್ತೀಚೆಗೆ ಪರಿಷ್ಕರಿಸಿದ್ದು 10 ಏಪ್ರಿಲ್~ ಎಂದೇ ಇತ್ತು. ಜನರು ಸುನಾಮಿ ಬಗ್ಗೆ ಟ್ವೀಟ್ ಮಾಡುವ ಬದಲು ನಿದ್ರಿತ ವೆಬ್‌ಸೈಟ್ ಬಗ್ಗೆ ಲೇವಡಿ ಮಾಡುವಂತಾಯಿತು. ಇದರ ಫಲ ಏನು ಗೊತ್ತೆ? ಈಗ ಅಲ್ಲಿ `ಇತ್ತೀಚೆಗೆ ಪರಿಷ್ಕರಿಸಿದ್ದು~ ಎಂಬ ಸ್ಥಿರಶೀರ್ಷಿಕೆನ್ನೇ ಕಿತ್ತು ಹಾಕಲಾಗಿದೆ.ಕಳೆದ ಬುಧವಾರಕ್ಕೆತದ್ವಿರುದ್ಧವಾಗಿ ಈ ಬುಧವಾರ ಬಂಗಾಳ ಉಪಸಾಗರದ ಹಡಗುಗಳು, ರಂಪಣಿಗಳು, ನೌಕೆಗಳು ದಡದ ಕಡೆ ದೌಡಾಯಿಸುತ್ತಿವೆ. ಸಾವಿರ ಕಿಲೊಗ್ರಾಮ್ ತೂಕದ ಪ್ರಳಯಾಂತಕ ಅಣ್ವಸ್ತ್ರವನ್ನು ಹೊತ್ತು 5000 ಕಿ.ಮೀ ದೂರಕ್ಕೆ ಚಿಮ್ಮ ಬಲ್ಲ `ಅಗ್ನಿ-5~ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯ ಸಂದರ್ಭದಲ್ಲಿ ಎಲ್ಲ ಸೂಚನಾ ಸಂಕೇತ ಹೊರಟಿದೆ.

ಹಿಂದೂ ಮಹಾಸಾಗರದ ಆ ಅಂಚಿನಲ್ಲಿರುವ ಜನರಿಗೆ ಮತ್ತೊಮ್ಮೆ ಆತಂಕ ಎದುರಾಗಿದೆ.

ವಿಪತ್ತುಗಳಿಂದ ನಾಗರಿಕರ ರಕ್ಷಣೆ ಮಾಡುವ ಕೆಲಸ ಹೇಗೂ ಇರಲಿ, ವಿಪ್ಲವ ಸೃಷ್ಟಿಸಬಲ್ಲ ತಂತ್ರಜ್ಞಾನ ಮಾತ್ರ ಎಲ್ಲೆಲ್ಲೂ ಅಚ್ಚುಕಟ್ಟಾಗಿ ಕೆಲಸ ಮಾಡುತ್ತದೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.