ಭೈರಪ್ಪ ಕಥನಶೈಲಿ ಮತ್ತು ವಾಸ್ತವಿಕ ನೆಲೆಗಟ್ಟು

7

ಭೈರಪ್ಪ ಕಥನಶೈಲಿ ಮತ್ತು ವಾಸ್ತವಿಕ ನೆಲೆಗಟ್ಟು

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:

ಇತ್ತೀಚಿನ ದಶಕಗಳಲ್ಲಿ ಎಸ್.ಎಲ್.ಭೈರಪ್ಪನವರ ಪ್ರತಿಯೊಂದು ಹೊಸ ಕಾದಂಬರಿಯ ಪ್ರಕಟಣೆಯೂ ಕನ್ನಡ ಸಾರಸ್ವತಲೋಕದಲ್ಲಿ ಒಂದು ಮುಖ್ಯ ಘಟನೆಯಾಗಿಬಿಟ್ಟಿದೆ. ಇದಕ್ಕೆ ಕಾರಣಗಳೆಂದರೆ ಓದುಗರು ತೋರುವ ಉತ್ಸಾಹಭರಿತ ನಿರೀಕ್ಷೆಗಳು ಮತ್ತು ವಿಮರ್ಶಕರಿಂದ ಬರುವ ಮಸಾಲೆಭರಿತ ಪ್ರತಿಕ್ರಿಯೆಗಳು.ಮಿಗಿಲಾಗಿ ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಸಮಕಾಲೀನ ಸಮಾಜದ ಅತ್ಯಂತ ಪ್ರಸ್ತುತವಾದ ತುಡಿತಗಳು, ಆತಂಕಗಳು, ಗೊಂದಲಗಳನ್ನು ಗಂಭೀರವಾಗಿ ವಿಶ್ಲೇಷಿಸಲು ಪ್ರಯತ್ನಿಸುವುದು ಅವರ ಉತ್ತರಗಳನ್ನು ಒಪ್ಪದ ಓದುಗರನ್ನೂ ಅವರ ಕೃತಿಗಳತ್ತ ಸೆಳೆಯುತ್ತದೆ. ಕಳೆದ ಒಂದು ದಶಕದಲ್ಲಿಯೇ ಅವರ ‘ಆವರಣ’ (2007) ಮತ್ತು ‘ಕವಲು’ (2010) ಕಾದಂಬರಿಗಳು ಪ್ರಕಟವಾದಾಗ ನಡೆದ ಬಿಸಿ ಚರ್ಚೆಗಳನ್ನು ಸಾಹಿತ್ಯಾಸಕ್ತರು ಮರೆತಿರುವುದಿಲ್ಲ.ಈ ವರ್ಷದ ಜನವರಿ ತಿಂಗಳಿನಲ್ಲಿ ಪ್ರಕಟವಾದ ಭೈರಪ್ಪನವರ ಹೊಸ ಕಾದಂಬರಿ ‘ಉತ್ತರಕಾಂಡ’ ಯಾವ ಹೊಸ ವಿವಾದವನ್ನೂ ಇದುವರೆಗೆ ಹುಟ್ಟುಹಾಕಿಲ್ಲ. ರಾಮಾಯಣದ ಕಥನವನ್ನು ಸೀತೆಯ ದೃಷ್ಟಿಕೋನದಿಂದ ಮತ್ತೆ ನೋಡುವ ಪ್ರಯತ್ನವನ್ನು ಮಾಡುವ ಈ ಕಾದಂಬರಿಯು ನಾಲ್ಕು ದಶಕಗಳ ಹಿಂದೆ ರಚಿತವಾದ ಮಹಾಭಾರತವನ್ನು ಆಧರಿಸಿದ ಅವರ ಪ್ರಖ್ಯಾತ ಕಾದಂಬರಿ ‘ಪರ್ವ’ದ ಮಾದರಿಯನ್ನೇ ಅನುಸರಿಸುತ್ತದೆ. ಯಾವುದೇ ವಿವಾದಗಳು ಹುಟ್ಟಿಲ್ಲ ಎನ್ನುವ ಕಾರಣದಿಂದಲೇ ಅದರ ಬಗ್ಗೆ ತಣ್ಣಗೆ ಪ್ರತಿಕ್ರಿಯಿಸಲು ಸಾಧ್ಯವೇನೊ. ಈ ಕಾದಂಬರಿಯನ್ನು ಓದುವಾಗ ಭೈರಪ್ಪನವರ ಸೃಜನಶೀಲತೆ ಮತ್ತು ಸಾಹಿತ್ಯಕೃಷಿಯ ಬಗ್ಗೆ ನನಗನ್ನಿಸಿದ ಕೆಲವು ವಿಷಯಗಳನ್ನು ಓದುಗರೊಡನೆ  ಹಂಚಿಕೊಳ್ಳಬಯಸುತ್ತೇನೆ.ಭೈರಪ್ಪನವರು ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಬರಹಗಾರರಲ್ಲೊಬ್ಬರು ಎನ್ನುವುದರ ಬಗ್ಗೆ ನನಗೆ ಅನುಮಾನಗಳಿಲ್ಲ. ಕರ್ನಾಟಕದೊಳಗಾಗಲಿ ಅಥವಾ ರಾಷ್ಟ್ರವ್ಯಾಪಿ ಅವರು ಹೆಚ್ಚು ಓದುಗರನ್ನು ಸಂಪಾದಿಸಿದ್ದಾರೆ ಎಂದು ಈ ಮಾತನ್ನು ಹೇಳುತ್ತಿಲ್ಲ. ನನಗೆ ಮೆಚ್ಚುಗೆಯ ಸಂಗತಿಗಳಾಗಿ, ಯುವ ಬರಹಗಾರರಿಗೆ ಮಾದರಿಯ ವಿಷಯಗಳಾಗಿ ಕಾಣುವುದು ಎರಡು ವಿಚಾರಗಳು. ಇವುಗಳಲ್ಲಿ ಮೊದಲ ಅಂಶವೆಂದರೆ, ಕನ್ನಡದಲ್ಲಿ ಕಾದಂಬರಿ ರಚಿಸಲು, ಆ ಮೂಲಕ ತಮ್ಮ ಕಾಲವನ್ನು ಅರ್ಥಮಾಡಿಕೊಳ್ಳಲು ಮತ್ತು ವಿವರಿಸಲು, ತಮ್ಮ ಬದುಕನ್ನು ಭೈರಪ್ಪನವರು ಮುಡಿಪಿಟ್ಟರು. ದೂರದ ಗುಜರಾತಿನಲ್ಲಿ ತತ್ವಶಾಸ್ತ್ರದ ಅಧ್ಯಾಪಕರಾಗಿದ್ದ ಭೈರಪ್ಪನವರು ಪಿಎಚ್.ಡಿ. ಸಂಶೋಧನೆಯನ್ನು ಮುಗಿಸಿದ ನಂತರ ಕನ್ನಡ ಕಾದಂಬರಿಗಳ ರಚನೆಯನ್ನೇ ತಮ್ಮ ಕಾರ್ಯಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದರ ಬಗ್ಗೆ ತಮ್ಮ ಆತ್ಮಕಥೆ ‘ಭಿತ್ತಿ’ಯಲ್ಲಿ ವಿವರವಾಗಿ ಬರೆಯುತ್ತಾರೆ.ಅವರಿಗೆ ತತ್ವಶಾಸ್ತ್ರದ ಬಗೆಗಿನ ಪಾಂಡಿತ್ಯಪೂರ್ಣ ಸಂಶೋಧನಾ ಬರಹಗಳನ್ನು ಬರೆಯುವುದಕ್ಕಿಂತ ಕನ್ನಡ ಕಾದಂಬರಿಯ ಕಲ್ಪಿತಲೋಕ ಹೆಚ್ಚು ಅರ್ಥಪೂರ್ಣ ಮತ್ತು ಆಪ್ಯಾಯಮಾನವೆಂದೆನಿಸುತ್ತದೆ. ಕನ್ನಡ ನಾಡಿನಿಂದ ದೂರದಲ್ಲಿದ್ದರೂ, ಕರ್ನಾಟಕದ ವಾಸ್ತವದ ಬಗ್ಗೆ ಕನ್ನಡದಲ್ಲಿ ಬರೆಯುವುದು ಅವರಿಗೆ ಮುಖ್ಯವೂ ಆಗುತ್ತದೆ. ಈ ಆಯ್ಕೆಯ ನಂತರ ಕಾದಂಬರಿಗಳ ಬರವಣಿಗೆಯಲ್ಲಿ ಅವರು ಐದು ದಶಕಗಳ ಕಾಲ ತೊಡಗಿಸಿಕೊಂಡಿರುವುದು ನಿಜಕ್ಕೂ ಮಾದರಿಯೇ ಸರಿ. ಕನ್ನಡದಲ್ಲಿ ಕಾದಂಬರಿಗಳನ್ನು ರಚಿಸುವುದನ್ನೇ ಬದುಕಾಗಿಸಿಕೊಂಡಿರುವುದರ ಜೊತೆಗೆ ಭೈರಪ್ಪನವರು ಕರ್ನಾಟಕದಲ್ಲಿ ಕನ್ನಡಕ್ಕೆ ಪ್ರಾಥಮಿಕತೆ ಇರಬೇಕು, ಶಾಲಾ ಶಿಕ್ಷಣದಲ್ಲಿ ಕನ್ನಡವೇ ಭಾಷಾ ಮಾಧ್ಯಮವಾಗಬೇಕು ಎನ್ನುವುದಕ್ಕೆ ಬದ್ಧರು. ಈ ವಿಚಾರದಲ್ಲಿ ಮುಕ್ತವಾಗಿ, ಯಾವುದೇ ಹಿಂಜರಿಕೆಯಿಲ್ಲದೆ ಅವರು ಸಾರ್ವಜನಿಕವಾಗಿ ಮಾತನಾಡುತ್ತಾರೆ ಎನ್ನುವುದು ನಾನು ಪ್ರಸ್ತಾಪಿಸಬಯಸುವ ಎರಡನೆಯ ವಿಚಾರ.ಸುಮಾರು ಆರು ದಶಕಗಳಿಂದಲೂ ಕಾದಂಬರಿ ಪ್ರಕಾರವನ್ನೇ ಪ್ರಮುಖವಾಗಿ ಅನ್ವೇಷಿಸುತ್ತ ಬಂದಿರುವ ಭೈರಪ್ಪನವರು ವಾಸ್ತವವಾದಿ ನೆಲೆಯಿಂದ ತಮ್ಮ ಸಾಹಿತ್ಯ ಸಂವೇದನೆಯನ್ನು ಕಟ್ಟಿಕೊಂಡಿರುವವರು. ಅವರ ಸಾಹಿತ್ಯಿಕ ಪ್ರತಿಭೆಯು ಕಾದಂಬರಿಯ ವಸ್ತುವನ್ನಾಗಿ ನಮ್ಮ ಕಾಲದಲ್ಲಿ ಲಭ್ಯವಿರುವ ಎಲ್ಲ ಬಗೆಯ ವಿಷಯಗಳನ್ನೂ, ಅನುಭವಗಳನ್ನೂ ಪರಿಗಣಿಸಿದೆ. ಸಮಕಾಲೀನ ಸಾಮಾಜಿಕ ಅನುಭವಗಳ ಜೊತೆಗೆ ಇಂದಿಗೆ ಪ್ರಸ್ತುತವೆಂದೆನಿಸುವ ಐತಿಹಾಸಿಕ ಮತ್ತು ಪೌರಾಣಿಕ ವಸ್ತುಗಳನ್ನು ಭೈರಪ್ಪನವರು ತಮ್ಮ ಕಾದಂಬರಿಗಳಲ್ಲಿ ಅನ್ವೇಷಿಸಿದ್ದಾರೆ. ವೈವಿಧ್ಯಮಯ ಕಾದಂಬರಿ ಲೋಕವನ್ನು ಕಟ್ಟಲು ಅವರು ಮಾಡಿಕೊಳ್ಳುವ ಸಿದ್ಧತೆಯೇ ಐತಿಹ್ಯವಾಗಿದೆ (ಲೆಜೆಂಡ್). ಜೊತೆಗೆ ಕಥನದ ಕ್ರಮದಲ್ಲಿ ಆಗಾಗ್ಗೆ ಹೊಸತನವನ್ನು ಭೈರಪ್ಪನವರು ತಂದಿದ್ದಾರೆ.

ಇದಕ್ಕೆ ರೇಖಾತ್ಮಕವಲ್ಲದ (ನಾನ್-ಲೀನಿಯರ್) ಕಥನಗಳಿರುವ ಅವರ ಹಲವಾರು ಕಾದಂಬರಿಗಳು ಉತ್ತಮ ಉದಾಹರಣೆಗಳು. ಪ್ರಪಂಚದ ಎಲ್ಲ ವಿದ್ಯಮಾನಗಳ ಬಗೆಗಿನ ಕುತೂಹಲ, ಅವರ ಕಾದಂಬರಿಗಳಲ್ಲಿ ಕಾಣುವ ವಸ್ತುವೈವಿಧ್ಯ ಮತ್ತು ಕಥನಶೈಲಿಗಳು ಅವರ ಶಕ್ತಿಯಾದರೆ, ಕಾದಂಬರಿ ಪ್ರಕಾರದ ರೂಪವನ್ನಾಗಲಿ (ಫಾರ್ಮ್) ಅಥವಾ ಕಾದಂಬರಿಯ ಭಾಷೆಯಲ್ಲಾಗಲಿ ಭೈರಪ್ಪನವರು ಹೆಚ್ಚಿನ ಪ್ರಯೋಗಗಳನ್ನು ಮಾಡಿಲ್ಲ. ಅಂದರೆ ಸಾಹಿತ್ಯಕ ರೂಪ ಮತ್ತು ಭಾಷೆಗಳಲ್ಲಿ ದೇವನೂರ ಮಹದೇವರವರಂತಹ ಬರಹಗಾರರು ಮಾಡುವ ಪ್ರಯೋಗಗಳು ಮತ್ತು ತರುವ ಹೊಸತನ ಭೈರಪ್ಪನವರಲ್ಲಿ ಕಾಣುವುದಿಲ್ಲ. ತಮ್ಮ ಸಾಹಿತ್ಯಜೀವನದ ಪ್ರಾರಂಭದಿಂದಲೂ ವಾಸ್ತವವಾದಿ ಕಾದಂಬರಿಯ ರೂಪಕ್ಕೆ ಅವರು ಬದ್ಧರಾಗಿ ಉಳಿದಿದ್ದಾರೆ. ಜೊತೆಗೆ ಕನ್ನಡದ ಹಿರಿಯ ಸಾಹಿತಿಗಳು ಕಥನ-ಕಾದಂಬರಿಗಳ ರಚನೆಗೆ ರೂಢಿಸಿಕೊಂಡಿದ್ದ ಸಾಹಿತ್ಯದ ಭಾಷೆಯನ್ನೇ ಬಳಸುತ್ತ ಬಂದಿದ್ದಾರೆ.ಭೈರಪ್ಪನವರನ್ನು ವಿವಾದಾತ್ಮಕವಾಗಿಸಿರುವುದು ಅವರ ಸೈದ್ಧಾಂತಿಕ ನಿಲುವುಗಳು. ಇದು ಅವರ ಪ್ರಾಪಂಚಿಕ ದೃಷ್ಟಿಕೋನ ಮತ್ತು ಸಾಹಿತ್ಯದ ಉ  ದ್ದೇಶಗಳ ಬಗೆಗಿನ ನಿಲುವುಗಳ ವಿಚಾರದಲ್ಲಿ ಸತ್ಯ. ಉದಾರವಾದಿ ಇಲ್ಲವೆ ಎಡಪಂಥೀಯ ದೃಷ್ಟಿಕೋನಗಳು ಪ್ರಭಾವಶಾಲಿಯಾಗಿರುವ ಕನ್ನಡ ಸಾಹಿತ್ಯಲೋಕದಲ್ಲಿ ಭೈರಪ್ಪನವರು ಆಧುನಿಕ ಸಂಪ್ರದಾಯವಾದಿ (ಕನ್ಸರ್ವೇಟಿವ್) ವಿಚಾರಧಾರೆಯನ್ನು ಅಭಿವ್ಯಕ್ತಿಸುತ್ತಾ ಬಂದಿದ್ದಾರೆ ಎನ್ನುವುದು ಹೊಸದೇನಲ್ಲ. ಹಿಂದುತ್ವದ ಸಾಂಸ್ಕೃತಿಕ ರಾಜಕಾರಣದೊಡನೆ ಸಂಬಂಧವಿದ್ದರೂ ಭೈರಪ್ಪನವರ ಸಾಂಪ್ರದಾಯಿಕತೆಯ ಮೂಲಸೆಲೆ ಆಧುನಿಕ ಪಶ್ಚಿಮದ ಸಾಂಪ್ರದಾಯಿಕ ಚಿಂತನೆಯೊಳಗಿದೆ (ಕನ್ಸರ್ವೇಟಿಸಮ್).ಪಶ್ಚಿಮದಲ್ಲಿ ಸಾಂಪ್ರದಾಯಿಕತೆಯು ಹುಟ್ಟುವುದು ಸಾರ್ವಜನಿಕ ಜೀವನದಲ್ಲಿ, ಅದರಲ್ಲೂ ರಾಜಕಾರಣದಲ್ಲಿ, ‘ರೀಸನ್’ (ತಾರ್ಕಿಕ ಚಿಂತನೆ) ಅನ್ನು ಪ್ರಶ್ನಿಸುತ್ತ ಹಾಗೂ ಅದರ ಬದಲಿಗೆ ‘ಅನುಭವ’ವನ್ನು (ಆ ಮೂಲಕ ಪರಂಪರೆ-ಸಂಪ್ರದಾಯಗಳನ್ನು) ಎತ್ತಿಹಿಡಿಯುವುದರ ಮೂಲಕ. ಫ್ರೆಂಚ್ ಕ್ರಾಂತಿಯ ನಂತರ ಬೆಳೆಯುವ ಸಂಪ್ರದಾಯವಾದಿ ವಿಚಾರಧಾರೆಯು ಕ್ರಾಂತಿಕಾರಕ ಬದಲಾವಣೆಗಳನ್ನು, ಜಾಗತಿಕವಾದ ಮತ್ತು ಅಮೂರ್ತವಾದ ಪರಿಕಲ್ಪನೆಗಳನ್ನು (ಉದಾಹರಣೆಗೆ ಮಾನವ ಹಕ್ಕುಗಳನ್ನು) ತಿರಸ್ಕರಿಸುತ್ತದೆ. ಉದಾಹರಣೆಗೆ, ಸಂಪ್ರದಾಯವಾದಿ ದಾರ್ಶನಿಕ ಎಡ್ಮಂಡ್ ಬರ್ಕ್, ಸಾಂಪ್ರದಾಯಿಕ ವ್ಯವಸ್ಥೆಗಳಲ್ಲಿರುವ ಪ್ರಾಯೋಗಿಕ ಲೋಕಜ್ಞಾನವನ್ನು ಮೌಲಿಕವಾದುದೆನ್ನುತ್ತಾನೆ. ತನ್ನ ಕಾಲದಲ್ಲಿ ನಡೆಯುತ್ತಿದ್ದ ಫ್ರೆಂಚ್ ಕ್ರಾಂತಿಯನ್ನು ಪ್ರಶ್ನಿಸುತ್ತ, ಬದಲಾವಣೆಗಳು ನಿಧಾನವಾಗಿ ಕಾಲಕ್ರಮೇಣವಾಗಿ ನಡೆಯಲಿ ಎಂದೂ ಬರ್ಕ್ ವಾದಿಸುತ್ತಾನೆ.ಭೈರಪ್ಪನವರನ್ನು ಭಾರತೀಯ ಪರಂಪರೆಯತ್ತ ಕೊಂಡೊಯ್ಯುವುದು ಈ ರೀತಿಯ ಸಾಂಪ್ರದಾಯಿಕ ಚಿಂತನೆ. ಭೈರಪ್ಪನವರು ನಮ್ಮ ಸಾಮಾಜಿಕ ಗುರುತು (ಐಡೆಂಟಿಟಿ) ಮತ್ತು ಸಾಂಸ್ಕೃತಿಕ ಅನನ್ಯತೆಗಳು ನಮ್ಮ ಆಯ್ಕೆಯ ವಿಚಾರಗಳಲ್ಲ, ಬದಲಿಗೆ ನಮ್ಮ ಹುಟ್ಟಿನ ಆಕಸ್ಮಿಕ ಸನ್ನಿವೇಶದ ಫಲವೆಂದು ‘ಆವರಣ’ದಲ್ಲಿ ವಾದಿಸುವಾಗ, ಈ ಚಿಂತನೆಯ ಪ್ರಭಾವವೇ ಇರುವುದು. ಅವರು ಸಾರ್ವಜನಿಕ ಚರ್ಚೆಗಳಲ್ಲಿ (ಬಂಡವಾಳಶಾಹಿಯೂ ಸೇರಿದಂತೆ) ಉದ್ಯಮಶೀಲತೆಯ ಪರವಾಗಿ ಇಲ್ಲವೆ ಬದುಕು ಕಟ್ಟಿಕೊಳ್ಳುವಾಗ ವೈಯಕ್ತಿಕ ಜವಾಬ್ದಾರಿ ಹಾಗೂ ಅರ್ಹತೆಗಳ (ಮೆರಿಟ್) ಪರವಾಗಿ ವಾದಿಸುವಾಗ ಮತ್ತೆ ಪಶ್ಚಿಮದ ಸಾಂಪ್ರದಾಯಿಕತೆಯ ಛಾಯೆಯೇ ಕಾಣುತ್ತದೆ.ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಭೈರಪ್ಪನವರ ನಿಲುವು- ಆಯ್ಕೆಗಳಲ್ಲಿ ಸಹ ಈ ಸಾಂಪ್ರದಾಯಿಕತೆಯ ಪ್ರಭಾವವಿದೆ. ಇಲ್ಲಿ ಎರಡು ಅಂಶಗಳನ್ನು ಪ್ರಸ್ತಾಪಿಸಬೇಕು. ಒಂದೆಡೆ, ಸಾಹಿತ್ಯದ ಉದ್ದೇಶ ಸಾಮಾಜಿಕ ಅಥವಾ ರಾಜಕೀಯ ಬದಲಾವಣೆಗಳನ್ನು ತರುವುದಲ್ಲ, ಬದಲಿಗೆ ಸತ್ಯದ ಅನ್ವೇಷಣೆ ಎನ್ನುವುದನ್ನು ಪದೇಪದೇ ಹೇಳುತ್ತಾರೆ. ಆದರೆ ಸಾಹಿತ್ಯ ಮತ್ತು ರಾಜಕಾರಣಗಳ ನಡುವಿನ ಅಂತರವನ್ನು ಕಾಯ್ದುಕೊಳ್ಳುವ ಅವರ ಆಸೆಯೂ ಒಂದು ರಾಜಕೀಯ ನಿಲುವು ಎನ್ನುವುದನ್ನು ಅವರು ಮರೆಯುತ್ತಾರೆ. ಮತ್ತೊಂದೆಡೆ, ಭೈರಪ್ಪನವರ ಸಾಹಿತ್ಯಕ ಆಯ್ಕೆಗಳನ್ನು ಗಮನಿಸಿ.ಆಧುನಿಕಪೂರ್ವ ಸಾಂಪ್ರದಾಯಿಕ ಕಾವ್ಯಮಾದರಿಗಳನ್ನು ಅನುಸರಿಸಲು ಅವಕಾಶವಿದ್ದ ಮಹಾಕಾವ್ಯದಂತಹ ಯಾವ ಸಾಹಿತ್ಯ ಪ್ರಕಾರವನ್ನೂ ಅವರು ಆರಿಸಲಿಲ್ಲ. ಅವರ ಆಯ್ಕೆಯು ಆಧುನಿಕ ಪಶ್ಚಿಮವು ತನ್ನ ಸಾಮಾಜಿಕ ವಾಸ್ತವವನ್ನು ಅರಿಯಲು ಕಟ್ಟಿಕೊಂಡ ಬಹುಮುಖ್ಯ ಸಾಹಿತ್ಯಪ್ರಕಾರವಾದ ಕಾದಂಬರಿಯೇ ಆಗಿತ್ತು.   ಅದರೊಳಗೆ ಅವರು ಬಳಸುವ ಸಾಹಿತ್ಯಕ ಸತ್ಯದ ಪರಿಕಲ್ಪನೆಯೂ ವಾಸ್ತವವಾದಿ ಸತ್ಯದ ಪರಿಕಲ್ಪನೆಯೇ ಆಗಿದೆ. ಈ ಎಲ್ಲ ಅಂಶಗಳು ಭೈರಪ್ಪನವರು ಆಯ್ಕೆ ಮಾಡಿಕೊಳ್ಳುವ ವಸ್ತುವು- ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ನಗರದ ಸಮಾಜ ಇಲ್ಲವೆ ಗ್ರಾಮೀಣ ಸಮಾಜ- ಏನೇ ಇದ್ದರೂ ಸಾಮಾನ್ಯವಾಗಿ ಇರುತ್ತವೆ. ಆದುದರಿಂದಲೇ ಭೈರಪ್ಪನವರನ್ನು ವಿವಾದಾತ್ಮಕ ಹೇಳಿಕೆಗಳನ್ನು ಮಾಡುವ ಉತ್ತರ ಭಾರತದ ಸಾಧು- ಮಹಂತನೊಬ್ಬನಂತೆ ನೋಡಲು ಸಾಧ್ಯವಿಲ್ಲ.ವಾಸ್ತವವಾದಿ ಕಾದಂಬರಿಯ ಬಹುಮುಖ್ಯ ಲಕ್ಷಣವೆಂದರೆ ಸಂಭವನೀಯತೆ (ಪ್ರಾಬಬಲಿಟಿ). ಭೈರಪ್ಪನವರ ಕಾದಂಬರಿಗಳಲ್ಲಿ (ಅದರಲ್ಲೂ ಐತಿಹಾಸಿಕ ಮತ್ತು ಪೌರಾಣಿಕ ಕೃತಿಗಳಲ್ಲಿ) ಓದುಗನನ್ನು ಆಕರ್ಷಿಸುವ ಬಹುದೊಡ್ಡ ಗುಣವಿದು. ಉದಾಹರಣೆಗೆ ‘ಪರ್ವ’ ಕಾದಂಬರಿಯಲ್ಲಿ ಭೈರಪ್ಪನವರು ಮಹಾಭಾರತದ ಮಾನವಶಾಸ್ತ್ರೀಯ ಅನ್ವೇಷಣೆಯ ಮೂಲಕ ಓದುಗನಿಗೆ ಕೇವಲ ಹೊಸ ಕಥನವನ್ನು ನೀಡುತ್ತಿಲ್ಲ. ಅದಕ್ಕಿಂತ ಮಿಗಿಲಾಗಿ ಆಧುನಿಕ ಓದುಗ ತನ್ನ ನಿಜ ಬದುಕಿನ ಅನುಭವಗಳ ಮೂಲಕ ಕಲ್ಪಿಸಿಕೊಳ್ಳಬಹುದಾದ ಮಹಾಭಾರತದ ಸಂಭವನೀಯ ಆವೃತ್ತಿಯನ್ನು ಕೊಡುತ್ತಾರೆ.ಮೂರು ಸಾವಿರ ವರ್ಷಗಳ ಹಿಂದಿನ ಭೌತಿಕ ಬದುಕು, ಸಾಮಾಜಿಕ-ಸಾಂಸ್ಕೃತಿಕ ಆಚರಣೆಗಳು ಹೇಗಿದ್ದಿರಬಹುದು ಎನ್ನುವ ಮಾನವಶಾಸ್ತ್ರಜ್ಞನ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾರೆ. ಭೈರಪ್ಪನವರ ಸಾಹಿತ್ಯಕ ಕಲ್ಪನೆಯಲ್ಲಿ (ಇಮ್ಯಾಜಿನೇಶನ್) ಕಲ್ಪಿತ ಅದ್ಭುತಗಳಿಗೆ  ಇರುವ ಸ್ಥಳ ಬಹಳ ಕಡಿಮೆ. ಇಂತಹ ಕಲ್ಪಿತ ಅದ್ಭುತಗಳನ್ನು ಕಿತ್ತುಹಾಕಿ, ವಾಸ್ತವಕ್ಕೆ ಎಷ್ಟು ಹತ್ತಿರಕ್ಕೆ ಬರಲು ಸಾಧ್ಯ ಎನ್ನುವುದು ಅವರ ಪ್ರಯತ್ನ. ಹಾಗಾಗಿಯೆ ಪೌರಾಣಿಕ ಪಾತ್ರಗಳು ಮನುಷ್ಯ ಸಹಜವಾದ ಮಿತಿಗಳಿಂದ ಬಳಲುತ್ತವೆ. ‘ಪರ್ವ’ದ ಭೀಷ್ಮ ಮತ್ತು ದ್ರೋಣರು, ಕೌರವ ಸೇನಾಪತಿಯಾದರೂ, ರೊಟ್ಟಿ ತಿನ್ನಲಾಗದ, ನಡೆಯಲು ಕಷ್ಟಪಡುವ ಮುದುಕರು. ಓದುಗನಿಗೆ ವಿನೂತನವೆನಿಸುವ ಇಂತಹ ವಾಸ್ತವವಾದಿ ಕಲ್ಪನೆ ಭೈರಪ್ಪನವರ ಸಾಹಿತ್ಯಿಕ ಕಲ್ಪನೆಯ ಆಕರ್ಷಣೆ ಮತ್ತು ಅತ್ಯಂತ ದೊಡ್ಡಮಿತಿ ಸಹ. ಮುಂದಿನ ವಾರ ‘ಉತ್ತರಕಾಂಡ’ದ ವಿಶ್ಲೇಷಣೆಯ ಮೂಲಕ ಈ ಅಂಶವನ್ನು ವಿವರಿಸುತ್ತೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry