ಭಾನುವಾರ, ಆಗಸ್ಟ್ 1, 2021
22 °C

ಭ್ರಷ್ಟಾಚಾರ: ನಾಗರಿಕ ಸಮಾಜದ ಹೋರಾಟದ ಕಿಚ್ಚು

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರದ ವಿರುದ್ಧ ದೇಶದಾದ್ಯಂತ ಹೊಸ ಜನಾಂದೋಲನ ನಡೆಯುತ್ತಿರುವುದರಿಂದ, ರೋಸಿ ಹೋಗಿರುವ ಜನರಲ್ಲಿ ಮಿಂಚಿನ ಸಂಚಾರವಾದಂತೆ ಆಗಿದೆ. ನಾಗರಿಕ ಸಮುದಾಯವು ಈ ಆಂದೋಲನದ ಮೊದಲ ಸುತ್ತಿನ ಹೋರಾಟದಲ್ಲಿ ಜಯಶಾಲಿಯೂ ಆಗಿದೆ. ಭ್ರಷ್ಟಾಚಾರ ನಿರ್ಮೂಲನೆ ಉದ್ದೇಶದ ಕರಡು ಮಸೂದೆ ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿ ನಾಗರಿಕ ಸಮುದಾಯವು ಭಾಗಿಯಾಗಲು ಕೇಂದ್ರ ಸರ್ಕಾರವೂ ಸಮ್ಮತಿಸಿದೆ.ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ  ನಿಯುಕ್ತವಾಗಿರುವ ವಿವಿಧ ಸಂಸ್ಥೆಗಳ ಕಾರ್ಯನಿರ್ವಹಣೆ ಮೇಲೆ ನಿಗಾ ಇರಿಸಲು ಮತ್ತು ಲಂಚ ಸ್ವೀಕರಿಸಿದ ಪ್ರಕರಣಗಳಲ್ಲಿ ಭಾಗಿಯಾಗಿ ಸಿಕ್ಕಿ ಬಿದ್ದ ಅಧಿಕಾರಿಗಳು ಮತ್ತು ಸಚಿವರುಗಳನ್ನು ಶಿಕ್ಷಿಸುವ ಅಧಿಕಾರ ಹೊಂದಿರುವ ಲೋಕಪಾಲ್ ಸಂಸ್ಥೆ (ಸಾರ್ವಜನಿಕ ವಿಚಾರಣಾಧಿಕಾರಿ) ಸ್ಥಾಪಿಸಲು ಭ್ರಷ್ಟಾಚಾರ ವಿರೋಧಿಗಳು ಪಟ್ಟು ಹಿಡಿದಿದ್ದರು.ಕರಡು ಮಸೂದೆ ಸಿದ್ಧಪಡಿಸುವ ಎರಡನೇ ಸುತ್ತಿನ ಮಾತುಕತೆಗಳು ನಡೆದು ಅಂತಿಮ ರೂಪ ನೀಡುವ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿ ಇದೆ. ಬರೀ ಸಲಹೆ - ಸೂಚನೆ ಪಡೆಯಲಷ್ಟೇ ಲೋಕಪಾಲರ ಅಧಿಕಾರ ಸೀಮಿತಗೊಳಿಸಲು ಸರ್ಕಾರ ಬಯಸಿದೆ. ಕರ್ತವ್ಯಭ್ರಷ್ಟರ ಬೆನ್ನು ಹತ್ತಿ ಅವರನ್ನು ಶಿಕ್ಷಿಸುವ ಅಧಿಕಾರ ಲೋಕಪಾಲರಿಗೆ ಇರಬೇಕೆಂದು ನಾಗರಿಕ ಸಮಾಜ ಪಟ್ಟು ಹಿಡಿದಿದೆ.ಲೋಕಪಾಲ ವ್ಯವಸ್ಥೆಯ ಸ್ವರೂಪ ಹೇಗಿರಬೇಕು ಎನ್ನುವುದಕ್ಕೆ ಸಂಬಂಧಿಸಿದಂತೆ ಎರಡೂ ಬಣಗಳ ಮಧ್ಯೆ ತೀಕ್ಷ್ಣ ಸ್ವರೂಪದ ವಾದ ವಿವಾದಗಳು ನಡೆಯುತ್ತಿದ್ದರೂ, ಈ ಮೊದಲೇ ನಿಗದಿಪಡಿಸಿದ ಜೂನ್ 15ರೊಳಗೆ ಎಲ್ಲರಿಗೂ ಸ್ವೀಕಾರಾರ್ಹವಾದ ಕರಡು ಸಿದ್ಧಗೊಳ್ಳಲಿದೆ ಎಂದು  ಪ್ರತಿಯೊಬ್ಬರೂ ಆಶಿಸಿದ್ದಾರೆ.ಈ ಎಲ್ಲ ಸಕಾರಾತ್ಮಕ ಬೆಳವಣಿಗೆಗಳ ಮಧ್ಯೆ, ಟೀಕಾಕಾರರು ಅದರಲ್ಲೂ ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿನ ಕೆಲವರು ಸಂಧಾನ ಮಾತುಕತೆಯ ವಾತಾವರಣ ಹಾಳು ಮಾಡುವ  ಕೃತ್ಯದಲ್ಲಿ ತೊಡಗಿದ್ದಾರೆ. ಜನಾಂದೋಲನದ ಮೂಲಕ ಒತ್ತಡ ಹೇರುತ್ತ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನೇ ಹಾಳು ಮಾಡಲಾಗುತ್ತಿದೆ ಎಂದು ಆರೋಪಿಸಿ, ಲೋಕಪಾಲ ಕರಡು ಮಸೂದೆ ಸಿದ್ಧಪಡಿಸುವುದಕ್ಕೆ ತಡೆಯೊಡ್ಡಬೇಕು ಎಂದು  ಒತ್ತಾಯಿಸುತ್ತಿದ್ದಾರೆ. ಹಲವಾರು ನೆಪಗಳನ್ನು ಮುಂದಿಟ್ಟುಕೊಂಡು ನಾಗರಿಕ ಸಮಾಜದ ಮೇಲೆ ಹರಿಹಾಯ್ದಿದ್ದಾರೆ.ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ನಾಗರಿಕರ ಮೂಲಭೂತ ಹಕ್ಕುಗಳನ್ನೇ ದಮನ ಮಾಡಿದವರು ಈಗ ಪ್ರಜಾಪ್ರಭುತ್ವದ ರಕ್ಷಣೆ  ಬಗ್ಗೆ ಮಾತನಾಡುತ್ತಿರುವುದು ಕಂಡು ವಿಚಿತ್ರ ಎನಿಸುತ್ತದೆ.ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ಹಾಳು ಮಾಡಿದವರನ್ನು ಇದುವರೆಗೂ ಶಿಕ್ಷಿಸಲಾಗಿಲ್ಲ. ಪತ್ರಿಕೆಗಳ ಸದ್ದು ಅಡಗಿಸಿದ್ದ, ಭಿನ್ನಮತದ ಉಸಿರು ಕಟ್ಟಿಸಿದ್ದ ಮತ್ತು ಅಧಿಕಾರ ದುರ್ಬಳಕೆ ಮಾಡಿಕೊಂಡು ಇಡೀ ದೇಶವನ್ನೇ ನಲುಗಿಸಿದ್ದವರು ಯಾವುದೇ ಬಗೆಯ ಶಿಕ್ಷೆಗೆ ಗುರಿಯಾದ ಒಂದೇ ಒಂದು ಉದಾಹರಣೆ ಇಲ್ಲ.ಭ್ರಷ್ಟಾಚಾರ ವಿರುದ್ಧದ ಆಂದೋಲನದ ನೇತೃತ್ವ ವಹಿಸಿದ್ದ ಅಣ್ಣಾ ಹಜಾರೆ ಮತ್ತು ಅವರ ಅನುಯಾಯಿಗಳು, ಜಂತರ್ ಮಂತರ್‌ನಲ್ಲಿ ನಿರ್ಮಿಸಿದ್ದ ವೇದಿಕೆಯ ಮೇಲೆ ರಾಜಕಾರಣಿಗಳು ಕಾಣಿಸಿಕೊಳ್ಳಲು ನಿರ್ಬಂಧ ವಿಧಿಸಿ ಒಳ್ಳೆಯ ಪಾಠ ಕಲಿಸಿದ್ದಾರೆ.ಆಂದೋಲನಕ್ಕೆ ಬೆಂಬಲ ವ್ಯಕ್ತಪಡಿಸಲು ಸ್ಥಳಕ್ಕೆ ಬಂದ ರಾಜಕಾರಣಿಗಳೂ ಜನಸಾಮಾನ್ಯರಂತೆಯೇ ವೇದಿಕೆ ಕೆಳಗೆ ಕುಳಿತುಕೊಳ್ಳುವಂತೆ ಸೂಚಿಸಲಾಗಿತ್ತು.ರಾಜಕಾರಣಿಗಳು ಸದಾ ಕಾಲವೂ ವೇದಿಕೆಯನ್ನೇ ಅಲಂಕರಿಸುವ ಅಗತ್ಯ ಏನಿದೆ? ಆಂದೋಲನಕಾರರು ಇಂತಹ ನಿಲುವು ತಳೆದಿರುವುದಕ್ಕೆ, ರಾಜಕಾರಣಿಗಳು ಜನಪ್ರತಿನಿಧಿಯಾಗಿ ಆಯ್ಕೆಯಾಗಿರುವುದನ್ನೇ ಪ್ರಶ್ನಿಸುವ ಉದ್ದೇಶವೇನೂ ಇದ್ದಿರಲಿಲ್ಲ.

 

ಆದರೆ, ವಿಧಾನಸಭೆ ಅಥವಾ ಸಂಸತ್ತಿಗೆ ಆಯ್ಕೆಯಾಗಿರುವ ಒಂದೇ ಕಾರಣಕ್ಕೆ, ಜನಪ್ರತಿನಿಧಿಗಳು ಎಲ್ಲೆಂದರಲ್ಲಿ ನುಗ್ಗುವ ಮತ್ತು ಉನ್ನತ ಸ್ಥಾನ ಅಲಂಕರಿಸುವ ಹಕ್ಕು ಅವರಿಗಿಲ್ಲ ಎನ್ನುವುದನ್ನು ಮನವರಿಕೆ ಮಾಡಿಕೊಡಲು ಇಂತಹ ನಿಲುವು ತಳೆದಿದ್ದರು.

ಬಹುತೇಕ ಜನಪ್ರತಿನಿಧಿಗಳು ರೂಢಿಸಿಕೊಂಡಿರುವ ಸೊಕ್ಕಿನ ಧೋರಣೆ ಬದಲಿಗೆ  ನಮ್ರತಾಭಾವ ಅಳವಡಿಸಿಕೊಳ್ಳುವಂತೆ ಮಾಡುವುದೇ ಈ ನಿರ್ಬಂಧದ ಹಿಂದಿರುವ ಸದುದ್ದೇಶವಾಗಿತ್ತು.ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರು ವ್ಯಕ್ತಪಡಿಸಿರುವ ಅನಿಸಿಕೆಗಳು ಹೆಚ್ಚು ಪ್ರಸ್ತುತಗೊಳ್ಳಲಾರವು. ತಮ್ಮ ಅಭಿಪ್ರಾಯಗಳು ವೈಯಕ್ತಿಕವಾದದ್ದು ಮತ್ತು ಸ್ವತಂತ್ರ ಆಲೋಚನೆ ಎನ್ನುವ ಅವರ ಹೇಳಿಕೆಗಳು ಆಷಾಢಭೂತಿತನದಿಂದ ಕೂಡಿವೆ. ದಿಗ್ವಿಜಯ್ ಸಿಂಗ್, ರಾಹುಲ್ ಗಾಂಧಿ ಹಾರಿ ಬಿಟ್ಟಿರುವ ಪರೀಕ್ಷಾರ್ಥ ಬಲೂನು ಇದ್ದಂತೆ. ಈ ಬಲೂನು ತನ್ನ ಕಾರ್ಯಾಚರಣೆ ಪೂರ್ಣಗೊಳಿಸುವ ಮುನ್ನವೇ ಒಡೆದು ಹೋಗಿದೆ. ಉದಾರವಾದಿ ಚಿಂತಕರ ಮಧ್ಯೆ ದಿಗ್ವಜಯ್ ಅವರನ್ನು ಯಾರೂ ಗಂಭೀರವಾಗಿ ಪರಿಗಣಿಸುವುದಿಲ್ಲ.ಇನ್ನೊಂದೆಡೆ, ಬಿಜೆಪಿ ಕೂಡ ನಾಗರಿಕ ಸಮಾಜದ ಹೋರಾಟವನ್ನು ಇನ್ನೊಂದು ದೃಷ್ಟಿಕೋನದಿಂದ ಟೀಕಿಸಿದೆ. ಭ್ರಷ್ಟಾಚಾರ  ವಿರುದ್ಧದ ಜನಾಂದೋಲನವು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿಗೆ ಇರುವ ಪ್ರಮುಖ ಪಾತ್ರವನ್ನು ನಿರ್ಲಕ್ಷಿಸಿದೆ ಎನ್ನುವುದು ಪ್ರಮುಖ ಪ್ರತಿ ಪಕ್ಷದ ಟೀಕೆಯಾಗಿದೆ. ಈ ಟೀಕೆಯಲ್ಲಿ ಕೆಲಮಟ್ಟಿಗೆ ಹುರುಳಿದೆ.ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮತ್ತು ಪ್ರಮುಖ ಪ್ರತಿಪಕ್ಷ ಬಿಜೆಪಿಗಳು ತಮ್ಮ ಪ್ರತಿಷ್ಠೆಯನ್ನೇ ಮುಖ್ಯವಾಗಿಟ್ಟುಕೊಂಡು ಸಂಸತ್ತಿನ ಕಲಾಪಕ್ಕೆ ವಾರಗಳ ಕಾಲ ಅಡ್ಡಿಪಡಿಸಿರುವಾಗ, ಸಂಸತ್ತನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಏನಿದೆ? ಎನ್ನುವ ಪ್ರಶ್ನೆಯೂ ಜನಮಾನಸದಲ್ಲಿ ಮೂಡುತ್ತದೆ.ದೇಶದ ವಾರ್ಷಿಕ ಬಜೆಟ್ ಅನ್ನೇ ಯಾವುದೇ ಚರ್ಚೆ ಇಲ್ಲದೇ ಅಂಗೀಕರಿಸಿರುವ ಸಂಸತ್ತಿನ ಉಭಯ ಸದನಗಳಲ್ಲಿ  ಸಣ್ಣ ಪುಟ್ಟ ನೆಪಗಳಿಗೆ ಸಭಾತ್ಯಾಗ ಮಾಡುವುದು ಮತ್ತು ಸದನದ ಘನತೆ - ಗಾಂಭೀರ್ಯಕ್ಕೆ ಚ್ಯುತಿ ತರುವ ಬಗೆಯಲ್ಲಿ ವರ್ತಿಸುವ ಸಂಸದರನ್ನು ಕಂಡು ನಾಗರಿಕ ಸಮಾಜ ರೋಸಿ ಹೋಗಿದೆ.ನಾನು ರಾಜ್ಯಸಭೆಯ ಸದಸ್ಯನಾಗಿದ್ದಾಗ, ಆರು ವರ್ಷಗಳ ಕಾಲ ಸಂಸದರು ಗೂಂಡಾಗಳಂತೆ ವರ್ತಿಸಿರುವುದನ್ನು ಅಸಹಾಯಕತೆಯಿಂದ ಕಣ್ಣಾರೆ ಕಂಡಿರುವೆ. ಕೆಲ ರಾಜಕೀಯ ಅನಿವಾರ್ಯತೆಗೆ ಸದನವು ಸುಗಮವಾಗಿ ನಡೆಯಲು ನಾವು ಅವಕಾಶ ಮಾಡಿಕೊಡುವುದಿಲ್ಲ ಎಂದು ಹಲವಾರು ಪಕ್ಷದ ಮುಖಂಡರು ಸದನದಲ್ಲಿ ಕೋಲಾಹಲ ನಡೆಯುವ ಮುನ್ನವೇ ನನ್ನ ಬಳಿ ಸಾಕಷ್ಟು ಬಾರಿ ಹೇಳಿಕೊಂಡಿದ್ದರು.ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಜನಪ್ರತಿನಿಧಿಗಳ ಇಂತಹ ಚಿಲ್ಲರೆ ವರ್ತನೆ ತಡೆಗಟ್ಟಲು ನಾಗರಿಕ ಸಮಾಜಕ್ಕೆ ಸಾಧ್ಯವಾಗಲಾರದು. ಆದರೆ, ಕಲಾಪ ನಡೆಯಲು ಅವಕಾಶ ಕೊಡದ ಸಂದರ್ಭದಲ್ಲಾದರೂ ಶಾಸಕರು ಮತ್ತು ಸಂಸದರು ಕನಿಷ್ಠ ತಮ್ಮ ದಿನ ಭತ್ಯೆಯನ್ನಾದರೂ ಪಡೆಯಬಾರದು ಎಂದು ಬಯಸುತ್ತದೆ.ದೇಶದಲ್ಲಿ ಸಂಸತ್ತಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಜನರು ಆಯ್ಕೆ ಮಾಡಿ ಕಳಿಸಿರುವ ಪ್ರತಿನಿಧಿಗಳಿಗೆ ಕಾಯ್ದೆ ಕಾನೂನುಗಳನ್ನು ರೂಪಿಸುವ ಪರಮಾಧಿಕಾರ ಇದೆ. ಹೀಗಾಗಿ ಲೋಕಪಾಲ ವ್ಯವಸ್ಥೆಯನ್ನು ಸಂಸತ್ತಿನ ಪರಮಾಧಿಕಾರ ಮೀರಿ ರೂಪಿಸುವ ಯಾವುದೇ ಉದ್ದೇಶವೂ ನಾಗರಿಕ ಸಮುದಾಯಕ್ಕೆ ಇಲ್ಲ.ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಭೂತ ಮೌಲ್ಯಗಳನ್ನು ಗೌರವಿಸಿ ರಕ್ಷಿಸಬೇಕಾಗಿದೆ ಎಂದು ಜನರು ಬಯಸುತ್ತಾರೆ. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು ಕನಿಷ್ಠಪಕ್ಷ  ಅಪರಾಧಿಗಳನ್ನು ಮತ್ತು ಅಪರಾಧ ಹಿನ್ನೆಲೆಯವರನ್ನು ಪಕ್ಷದಿಂದ ದೂರ ಇಡಬೇಕು ಎನ್ನುವುದು ನಾಗರಿಕ ಸಮಾಜದ ನಿರೀಕ್ಷೆಯಾಗಿದೆ. ಕೇಂದ್ರೀಯ ಚುನಾವಣಾ ಆಯೋಗವು ಈ ಬಗ್ಗೆ ರಾಜಕೀಯ ಪಕ್ಷಗಳಿಗೆ ಸಲಹೆ ನೀಡುತ್ತಲೇ ಇದೆ. ಆದರೆ, ಯಾವುದೇ ಪಕ್ಷವೂ ಈ ಬುದ್ಧಿವಾದಕ್ಕೆ ಕಿವಿಗೊಡುತ್ತಿಲ್ಲ.ರಾಜಕೀಯ ಪಕ್ಷಗಳು ನೈತಿಕತೆ - ಅನೈತಿಕತೆ ಮತ್ತು ಒಳಿತು - ಕೆಟ್ಟದ್ದು ಬೇರ್ಪಡಿಸುವ ಲಕ್ಷ್ಮಣರೇಖೆಯನ್ನು ಉಲ್ಲಂಘಿಸುತ್ತಿರುವುದನ್ನು ಕಂಡು ನಾಗರಿಕ ಸಮಾಜವು ಗಾಬರಿಗೊಂಡಿದೆ. ಇಂತಹ ಧೋರಣೆ ಅನುಸರಿಸುವುದರ ಮೂಲಕ ಸಮಾಜಕ್ಕೆ ತಾವು ಎಸಗುತ್ತಿರುವ ಅಪಾಯ ಏನೆಂಬುದು ರಾಜಕೀಯ ಪಕ್ಷಗಳಿಗೆ  ಅರ್ಥವಾಗುತ್ತಿಲ್ಲ. ಯಾವುದು ಒಳಿತು ಎನ್ನುವುದು ರಾಜಕಾರಣಿಗಳಿಗೆ ಮನದಟ್ಟು ಆಗುವವರೆಗೆ, ಕೆಟ್ಟದ್ದು ಯಾವುದು ಎನ್ನುವುದು ಅವರಿಗೆ ಗೊತ್ತಾಗುವುದೂ ಇಲ್ಲ.ಭ್ರಷ್ಟಾಚಾರ ವಿರುದ್ಧದ ಜನರ ಆಕ್ರೋಶ ಎಷ್ಟರಮಟ್ಟಿಗೆ ಇದೆ ಎನ್ನುವ ವಾಸ್ತವವನ್ನು ರಾಜಕೀಯ ಪಕ್ಷಗಳು ಈಗಲಾದರೂ ಮನದಟ್ಟು ಮಾಡಿಕೊಳ್ಳಬೇಕಾಗಿದೆ.ಅಧಿಕಾರಕ್ಕೆ ಬರುವ ಪ್ರತಿಯೊಂದು ಸರ್ಕಾರವು  ಭ್ರಷ್ಟಾಚಾರ ನಿಗ್ರಹಿಸಲು ರಚನಾತ್ಮಕ ಕ್ರಮಗಳನ್ನು ಕೈಗೊಳ್ಳದಿರುವುದನ್ನು ಕಂಡು ನಾಗರಿಕ ಸಮಾಜ ರೋಸಿ ಹೋಗಿರುವುದನ್ನು ಈ ಆಂದೋಲನವು ಸ್ಪಷ್ಟಪಡಿಸುತ್ತದೆ. ಜನರ ಆಶೋತ್ತರಗಳನ್ನು ಪ್ರತಿನಿಧಿಸುವ ವ್ಯಕ್ತಿ ಅಣ್ಣಾ ಹಜಾರೆ, ಅವರಿಗೆ ಬೆಂಬಲ ನೀಡುವ ಮೂಲಕ ಸಮಾಜ ತನ್ನ ನಿಲುವು ಏನೆಂಬುದನ್ನೂ ಸಾಂಕೇತಿಕವಾಗಿ ಪ್ರಚುರಪಡಿಸಿದೆ.ಗಾಂಧಿವಾದಿ ಅಣ್ಣಾ ಹಜಾರೆ ಅವರ ಎದುರಿಗಿರುವ ಹೋರಾಟದ ಮಾರ್ಗವು ಕೆಲ ಮಿತಿಗಳನ್ನು ಒಳಗೊಂಡಿರಬಹುದು. ಆದರೆ, ಅವರು ಆಂದೋಲನಗಳ ಬಗ್ಗೆ ಉದಾಸೀನ ಧೋರಣೆ ತಳೆದಿರುವ, ಅವಿಶ್ವಾಸದಿಂದ ನೋಡುವ ಸಿನಿಕರಲ್ಲಿಯೂ ಆಶಾವಾದದ ಮಿಂಚು ಮೂಡಿಸುವಲ್ಲಿ ಸಫಲರಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಲೋಕಪಾಲ ಕರಡು ಮಸೂದೆ ಸಿದ್ಧಪಡಿಸುವವರು ನಾಗರಿಕ ಸಮಾಜವನ್ನು ನಿರಾಶೆಗೆ ದೂಡಲಿಕ್ಕಿಲ್ಲ ಎನ್ನುವ ಆಶಾವಾದ ಮೂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.