ಮತ್ತೆ ಬಂದಿವೆ ಲಾಭದ ದಿನಗಳು..!

7

ಮತ್ತೆ ಬಂದಿವೆ ಲಾಭದ ದಿನಗಳು..!

ಕೆ. ಜಿ. ಕೃಪಾಲ್
Published:
Updated:

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಕಳೆದ ಒಂದು ತಿಂಗಳಲ್ಲಿ 1,665ಅಂಶಗಳಷ್ಟು ಏರಿಕೆ ಕಂಡಿದೆ. ಅಂದರೆ ಸುಮಾರು ಶೇ 10ಕ್ಕೂ ಹೆಚ್ಚಿನ ಪ್ರಗತಿ.ಪ್ರಮುಖ ಅಂಶವೆಂದರೆ ಕಳೆದ ವರ್ಷದ ಇದೇ ಅವಧಿಯಲ್ಲಿ ಸೂಚ್ಯಂಕ 18,449 ಅಂಶಗಳಲ್ಲಿತ್ತು. ಸದ್ಯ ಇದು 840 ಅಂಶಗಳಷ್ಟು ಮಾತ್ರ ಹಿಂದಿದೆ. ಕಳೆದ ವಾರಾಂತ್ಯದಲ್ಲಿ ಸೂಚ್ಯಂಕ 17,604 ಅಂಶಗಳಿಗೆ ವಹಿವಾಟು ಕೊನೆಗೊಳಿಸಿದೆ.

 

ಕಳೆದ ಡಿಸೆಂಬರ್ 20 ರಂದು ಸೂಚ್ಯಂಕ ವಾರ್ಷಿಕ ಕನಿಷ್ಠ ಮಟ್ಟ 15,135 ಅಂಶಗಳಿಗೆ ಇಳಿದಿತ್ತು.  ನಂತರ ಸುಮಾರು ಎರಡೂವರೆ ಸಾವಿರ ಅಂಶಗಳಷ್ಟು  ಬೃಹತ್ ಮುನ್ನಡೆಯನ್ನು ಕೆಲವೇ ದಿನಗಳಲ್ಲಿ ಸಾಧಿಸಿದ್ದು ಷೇರುಪೇಟೆಯ ಬದಲಾವಣೆಯ ವೇಗಕ್ಕೆ ಸಾಕ್ಷಿ.ಸೂಚ್ಯಂಕ 2008ರ ಜನವರಿ ತಿಂಗಳಲ್ಲಿ ದಾಖಲೆಯ ಹಂತವಾದ 21,206 ಅಂಶಗಳನ್ನು ತಲುಪಿತ್ತು. ಈ ಸಂದರ್ಭದಲ್ಲಿ ಪೇಟೆಯ ಬಂಡವಾಳ ಮೌಲ್ಯವು ರೂ66.38 ಲಕ್ಷ ಕೋಟಿಗಳಷ್ಟಿತ್ತು. ಈಗ ಇದು ರೂ62.07 ಲಕ್ಷ ಕೋಟಿ ದಾಟಿದೆ. ಈ ಏರಿಕೆ ಗಮನಿಸಿದರೆ ಪೇಟೆಯಲ್ಲಿ ಸಂವೇದಿ ಸೂಚ್ಯಂಕೇತರ ಷೇರಿನ ದರಗಳಲ್ಲಿ ಹೆಚ್ಚಿನ ಏರಿಕೆಯಾಗಿದೆ ಎನ್ನಬಹುದು.ಕಳೆದ ವಾರದ ಆರಂಭದ ದಿನ ಸೂಚ್ಯಂಕವು 370 ಅಂಶಗಳಷ್ಟು ಇಳಿಕೆ ಕಂಡಿತ್ತು.  ಅಂದು ವಿದೇಶೀ ವಿತ್ತೀಯ ಸಂಸ್ಥೆಗಳು  ರೂ 201 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿ, ವಹಿವಾಟಿನ ದಿಸೆ ಬದಲಿಸುವ ಭಯ ಮೂಡಿಸಿದ್ದವು. ಆದರೆ,  ನಂತರದ ದಿನಗಳಲ್ಲಿ ಸತತವಾದ ಖರೀದಿಯಿಂದ ಪೇಟೆಯ ಹಾದಿಯನ್ನು ಏರಿಕೆಯಿಂದ ಕಂಗೊಳಿಸುವಂತೆ ಮಾಡಿದವು.ಸುಪ್ರೀಂ ಕೋರ್ಟ್ 2ಜಿ ತರಂಗಾಂತರ ಹಂಚಿಕೆಗೆ ಸಂಬಂಧಿಸಿದಂತೆ 122 ಪರವಾನಗಿಗಳನ್ನು ರದ್ದುಗೊಳಿಸಿದ್ದು ವಹಿವಾಟಿನ ಮೇಲೆ ಒಂದು ದಿನದ ಪರಿಣಾಮ ಬೀರಿತು.  ಬಿಎಚ್‌ಇಎಲ್ ಮತ್ತು ಒಎನ್‌ಜಿಸಿ ಕಂಪೆನಿಗಳಲ್ಲಿನ ಬಂಡವಾಳ ಹಿಂತೆಗೆತದ ಬಗೆಗಿನ ನಿರಾಸಕ್ತತೆ, ಪ್ರಮುಖ ಕಂಪೆನಿಗಳಾದ ಕ್ರಾಂಪ್ಟನ್ ಗ್ರೀವ್ಸ್ ಗ್ಲೆನ್‌ಮಾರ್ಕ್ ಫಾರ್ಮಗಳ ಕಳಪೆ ಫಲಿತಾಂಶಗಳ ನಡುವೆಯೂ ಸೂಚ್ಯಂಕ ಗಣನೀಯ ಏರಿಕೆ ಕಂಡಿದ್ದು ಗಮನಾರ್ಹ.

 

ಕ್ರಾಂಪ್ಟನ್ ಗ್ರೀವ್ಸ್ ಕಂಪೆನಿ ಪ್ರಕಟಿಸಿದ ಫಲಿತಾಂಶದ ನಂತರ ಷೇರಿನ ಬೆಲೆಯು ರೂ123ರ ವರೆಗೆ ಕುಸಿದು  ನಂತರ ರೂ151 ರವರೆಗೂ ಏರಿಕೆ ಪ್ರದರ್ಶಿಸಿತು. ಇದು ಸಾಮಾನ್ಯ ಹೂಡಿಕೆದಾರರ ಚಿಂತನೆ ವಿರುದ್ಧ ಚಟುವಟಿಕೆಯಿಂದ ಲಾಭ ಪಡೆದ ಕ್ರಮವಾಗಿದೆ. ಕುಸಿತ ಕಂಡಿದ್ದ ಸಿಂಟೆಕ್ಸ್ ಇಂಡಸ್ಟ್ರೀಸ್ ಶೇ 18 ರಷ್ಟು ವಾರದ ಚೇತರಿಕೆಯಿಂದ ಮಿಂಚಿತ್ತು.  ಸ್ಟಾರ್‌ಬಕ್ಸ್‌ನೊಂದಿನ ಒಡಂಬಡಿಕೆಯ ಕಾರಣ ಟಾಟಾ ಗ್ಲೋಬಲ್ ಬ್ರಿವರೇಜಸ್ ್ಙ22ಕ್ಕೂ ಹೆಚ್ಚಿನ ಏರಿಕೆ ಕಂಡಿತ್ತು.ಒಟ್ಟಾರೆ ವಿದೇಶೀ ವಿತ್ತೀಯ ಸಂಸ್ಥೆಗಳು ರೂ5,108 ಕೋಟಿ ಹೂಡಿಕೆ ಮಾಡಿ ಕಳೆದವಾರ ಪೇಟೆಯ ಮೇಲೆ ಹಿಡಿತ ಸಾಧಿಸಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ರೂ 2,375 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿ ಪರಿಸ್ಥಿತಿಯ ಲಾಭಕ್ಕೆ ಪ್ರಯತ್ನಿಸಿವೆ. ಸಂವೇದಿ ಸೂಚ್ಯಂಕ ಕೇವಲ 370 ಅಂಶಗಳಷ್ಟು ಏರಿಕೆ ಕಂಡರೆ ಮಧ್ಯಮ ಶ್ರೇಣಿ ಸೂಚ್ಯಂಕ 173 ಅಂಶಗಳಷ್ಟು ಮತ್ತು  ಕೆಳ ಮಧ್ಯಮಶ್ರೇಣಿ ಸೂಚ್ಯಂಕ 194 ಅಂಶಗಳಷ್ಟು ಭಾರಿ ಏರಿಕೆ ಪ್ರದರ್ಶಿಸಿವೆ. ಷೇರುಪೇಟೆ ಬಂಡವಾಳ ಮೌಲ್ಯ ಹಿಂದಿನ ವಾರದ ರೂ60.69 ಲಕ್ಷ ಕೋಟಿಯಿಂದ ರೂ62.07 ಲಕ್ಷ ಕೋಟಿಗೆ ಏರಿಕೆಯಾಗಿದೆ.ಸಾಲ ಪತ್ರಗಳ ವಿಚಾರ

ಟಾಟಾ ಕ್ಯಾಪಿಟಲ್ ಲಿ. ಕಂಪೆನಿಯು ಮೂರು ವರ್ಷಗಳ ಹಿಂದೆ ವಿತರಿಸಿದ ಪರಿವರ್ತಿಸಲಾಗದ ಡಿಬೆಂಚರ್‌ಗಳಿಗೆ ನೀಡುವ ಬಡ್ಡಿ ದರಗಳನ್ನು ಕಡಿತಗೊಳಿಸುವ ಮುನ್ಸೂಚನೆ ನೀಡಿದೆ. ಫೆಬ್ರುವರಿ 15ರಂದು ಕಂಪೆನಿಯ ಜಂಟಿ ಸಭೆಯು ಈ ಬಗ್ಗೆ ತೀರ್ಮಾನಿಸಲಿದೆ. ಈ ಯೋಜನೆ ಪ್ರಕಾರ ಮಾಸಿಕ ಶೇ 11ರ ಬಡ್ಡಿಯ ಬದಲಾಗಿ ಶೇ 9.75, ತ್ರೈಮಾಸಿಕ ಬಡ್ಡಿ ನೀಡುವುದು, ಎರಡನೇ ಬಾಂಡ್‌ಗಳಿಗೆ ಶೇ 11.25ರ ಬದಲಿಗೆ ಶೇ 9.75, ವಾರ್ಷಿಕ ಬಡ್ಡಿ ನೀಡುವುದು,  ಮೂರನೇ ಯೋಜನೆಯಡಿ ಶೇ 12ಕ್ಕೆ ಬದಲಾಗಿ ಶೇ 10.50, ಕ್ಯುಮುಲೇಟಿವ್, ನಾಲ್ಕನೇ ಯೋಜನೆಗೆ ಶೇ 12ರ ಬದಲು ಶೇ 10.50ರಂತೆ ಬಡ್ಡಿದರ ಪರಿಷ್ಕರಿಸಲು ಯೋಜಿಸಲಾಗಿದೆ.* ಶ್ರೇಯ್ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಲಿ. ಕಂಪೆನಿಯು ಇನ್‌ಫ್ರಾಸ್ಟ್ರಕ್ಚರ್ ಬಾಂಡ್ ಯೋಜನೆಯ ಅಂತಿಮ ದಿನವನ್ನು 31ನೇ ಜನವರಿಯಿಂದ ಮಾರ್ಚ್ 6ಕ್ಕೆ ಮುಂದೂಡಿದೆ.ಲಾಭಾಂಶ ವಿಚಾರ

ಆರತಿ ಇಂಡಸ್ಟ್ರೀಸ್ ಶೇ 40 (ಮು.ಬೆ. ರೂ 5), ಬ್ಲೂಡಾರ್ಟ್ ಎಕ್ಸ್‌ಪ್ರೆಸ್ ಶೇ 20, ಕನ್‌ಟೇನರ್ ಕಾರ್ಪೊರೇಷನ್ ಶೇ 75 (ನಿಗದಿತ ದಿನ: 17.2.12), ಜಿ.ಎಂ.ಎಂ. ಪೌಡ್ಲರ್ ಶೇ 35 (ಮುಖಬೆಲೆ ರೂ2, ನಿ.ದಿ. 13.2.12), ಎಚ್‌ಸಿಎಲ್ ಇನ್‌ಪೋ, ಶೇ 50 (ಮು.ಬೆ. ರೂ2), ಐಡಿಬಿಐ ಶೇ 20 (ನಿ.ದಿ. 10.2.12), ಇಪ್ಕಾಲ್ಯಾಬ್ ಶೇ 50 (ಮು.ಬೆ. ರೂ2), ಹೆಕ್ಸಾವೇರ್ ಟೆಕ್ನಾಲಜೀಸ್ ಶೇ 75 (ಮು.ಬೆ. ರೂ2), ಮಣ್ಣಾಪುರಂ ಫೈನಾನ್ಸ್ ಶೇ 25 (ಮು.ಬೆ.ರೂ2, ನಿ.ದಿ. 14.2.12), ಎನ್‌ಎಂಡಿಸಿ ಶೇ 100 (ಮು.ಬೆ.ರೂ1, ನಿ.ದಿ. 10.2.12), ಓರಿಯಂಟ್ ಪೇಪರ್ ಶೇ 100 (ಮುಖಬೆಲೆ ರೂ1), ಪೇಪರ್ ಪ್ರಾಡಕ್ಟ್ಸ್ ಶೇ 24, ಸೇಲಾನ್ ಎಕ್ಸ್‌ಪ್ಲೊ ರೇಷನ್ ಶೇ 30, ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಶೇ 100 (ಮು.ಬೆ. ರೂ2, ನಿ.ದಿ. 13.2.12), ಟಿ.ಸಿ.ಐ. ಶೇ 20 (ಮು.ಬೆ. ರೂ 2), ಪವರ್ ಫೈನಾನ್ಸ್ ಕಾರ್ಪೊರೇಷನ್ ಶೇ 50.

ಮುಂದಿನ ದಿನಗಳಲ್ಲಿ ಅಮೃತಾಂಜನ್, ಎಂಜಿನಿಯರ್ಸ್ ಇಂಡಿಯಾ, ಕ್ಯಾಸ್ಟ್ರಾಲ್ ಇಂಡಿಯಾ, ಕಂಪೆನಿಗಳು 13 ರಂದು ಕ್ಲಾರಿಯಂಟ್ ಕೆಮಿಕಲ್ಸ್ 17 ರಂದು ಲಾಭಾಂಶ ಪ್ರಕಟಿಸಲಿದ್ದು ಆಕರ್ಷಕ ಚಟುವಟಿಕೆ ಪ್ರದರ್ಶಿಸಲಿವೆ.ಬೋನಸ್ ಷೇರಿನ ವಿಚಾರ

*ಹ್ಯಾಟ್‌ಸನ್ಸ್ ಆಗ್ರೋಪ್ರೊಡಕ್ಟ್ಸ್ ಕಂಪೆನಿಯು 13ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

*ಆಯಿಲ್ ಇಂಡಿಯಾ ಕಂಪೆನಿ 11 ರಂದು ಲಾಭಾಂಶದೊಂದಿಗೆ ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.ಹಕ್ಕಿನ ಷೇರು

*ಭೂಷಣ್ ಸ್ಟೀಲ್ ಕಂಪೆನಿಯು ರೂ700 ಕೋಟಿಯವರೆಗೂ ಹಕ್ಕಿನ ಷೇರು ವಿತರಿಸಲು ನಿರ್ಧರಿಸಿದ್ದು, ಹಕ್ಕಿನ ಷೇರಿನ ದರ ಮತ್ತು ಅನುಪಾತ ಮುಂತಾದವುಗಳನ್ನು ಸಮಿತಿ ನಿರ್ಧರಿಸಲಿದೆ.

*ಸಿಟಿ ಯೂನಿಯನ್ ಬ್ಯಾಂಕ್ಙ್ 400 ಕೋಟಿ ಮೌಲ್ಯದ ಹಕ್ಕಿನ ಷೇರು ವಿತರಿಸಲು ನಿರ್ಧರಿಸಿದ್ದು ವಿವಿಧ ನಿಯಮಗಳನ್ನು ರೂಪಿಸಲಾಗಿದೆ.

*2006ರ ಮೇ ತಿಂಗಳಲ್ಲಿ ಸಾರ್ವಜನಿಕರ ವಿತರಣೆಯನ್ನು ಪ್ರತಿ ಷೇರಿಗೆ ರೂ50 ರಂತೆ ಮಾಡಿದ್ದ ತಾಂತಿಯಾ ಕನ್ಸ್‌ಟ್ರಕ್ಷನ್ಸ್ ಲಿ. ಕಂಪೆನಿಯು 13 ರಂದು ಹಕ್ಕಿನ ಷೇರು ವಿತರಣೆ ಪರಿಶೀಲಿಸಲಿದೆ.

 

ವಾರದ ಪ್ರಶ್ನೆ

ಈಗಿನ ಷೇರುಪೇಟೆಗೂ ಹಿಂದಿನ ಅಂದರೆ ಜಾಗತೀಕರಣಕ್ಕೆ ಹಿಂದಿನ ಪೇಟೆಗಳಿಗೂ ಭಾರಿ ವ್ಯತ್ಯಾಸ. ಈಗಿನ ಪೇಟೆಯಲ್ಲಿ ಚಟುವಟಿಕೆಗೆ ಸುಲಭ ಮಾರ್ಗವೇನು?

ಉತ್ತರ: ಜಾಗತೀಕರಣಕ್ಕೆ ಮೊದಲು  ಜೀವನವು ಈಗಿನ ಪರಿಸ್ಥಿತಿಗೆ ಹೋಲಿಸಿದರೆ ಆಮೆ ನಡಿಗೆಯಲ್ಲಿತ್ತು. ಅಂದಿನ ದಿನಗಳಲ್ಲಿ ಎರಡು ವಾರದಿಂದ ವಾರಕ್ಕೊಮ್ಮೆ ಚುಕ್ತಾ ಚಕ್ರವಿತ್ತು. ಆದರೆ ಈಗ ದಿನಕ್ಕೊಂದು ಚುಕ್ತಾ ಚಕ್ರ. ಹಿಂದೆ ಒಮ್ಮೆ ಕೊಂಡ ಷೇರು  `ಡೆಲಿವರಿ~ಯಾಗುವುದಾಗಲಿ, ವಹಿವಾಟು ಚುಕ್ತಾ ಆಗುವುದಾಗಲಿ ಅತಿ ವಿಳಂಬವಾಗುತ್ತಿತ್ತು. ಈಗ ಎಲ್ಲವೂ, ತಾಂತ್ರಿಕತೆಯ ಪ್ರಭಾವದಿಂದ, ತ್ವರಿತ. ಇದರ ವೇಗ ಎಷ್ಟೆಂದರೆ ಕಂಪ್ಯೂಟರ್‌ನ ಪರದೆಯ ಮೇಲೆ ಕಂಡದ್ದು ಗುಂಡಿ ಒತ್ತುವಷ್ಟರಲ್ಲಿ ಮಾಯ?ವಹಿವಾಟಿನ ಸಮಯವು ಮುಂಜಾನೆ 9 ರಿಂದಲೇ ಆರಂಭವಾಗುವುದರಿಂದ ಹಿಂದೆ ಹವ್ಯಾಸಿ ಎಂದಿದ್ದವರು ಈಗ ವೃತ್ತಿಪರರಾಗಿದ್ದಾರೆ. ಈ ಬದಲಾದ ವಾತಾವರಣವು ಪೇಟೆಯಲ್ಲಿ ಹೂಡಿಕೆಗಿಂತ ವಹಿವಾಟಿನ ಗಾತ್ರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತದೆ.ಈಗಿನ ವಿಶ್ಲೇಷಣೆಗಳು ಪೂರ್ಣವಾಗಿ ಬಾಹ್ಯ ಕಾರಣಗಳಿಗೆ ಒತ್ತು ನೀಡಿ ಅಂತರ್ಗತ ಸಾಧನೆಗಳನ್ನು ಕಡೆಗಣಿಸುತ್ತಿವೆ. ಉದಾಹರಣೆಗೆ ಇತ್ತೀಚೆಗೆ ರಿಲೈಯನ್ಸ್ ಇಂಡಸ್ಟ್ರೀಸ್ ಫಲಿತಾಂಶವಾಗಲಿ, ಕ್ರಾಂಪ್ಟನ್ ಗ್ರೀವ್ಸ್ ಫಲಿತಾಂಶವಾಗಲಿ ನಿರೀಕ್ಷಿಸಿದಂತಿಲ್ಲವೆಂದರು. ಆದರೆ ಮಿಂಚಿನ ವೇಗದ ಚಟುವಟಿಕೆಯಿಂದ ಏರಿಕೆ ಕಂಡು ಚಕಿತಗೊಳಿಸಿತು. ವಿದೇಶೀ ನೇರ ಬಂಡವಾಳದ ಗೊಂದಲದಲ್ಲಿ ಪೆಂಟಲೂಮ್ ರೀಟೆಲ್ ರೂ130ಕ್ಕೆ ಕುಸಿದಿತ್ತು.ಆದರೆ ಈಗ ರೂ170ನ್ನು ದಾಟಿದೆ. `ಮೂಡಿಸ್~ ರೇಟಿಂಗ್ ಇಳಿಕೆಯ ಕಾರಣ ಬೆಲೆ ಕುಸಿದು ಮತ್ತಷ್ಟು ಕುಸಿತದ ಹೆದರಿಕೆ ಮೂಡಿಸಿದ್ದ ಎಸ್‌ಬಿಐ, ಮಿಂಚಿನ ವೇಗದಲ್ಲಿ ಚೇತರಿಕೆ ಕಂಡು ಈಗ ಎಲ್ಲರಿಗೂ ಬೇಕಾಗಿದೆ. ಅಂದರೆ ಪೇಟೆಯಲ್ಲಿನ ಸುದ್ದಿ ಸಮಾಚಾರಗಳನ್ನು ತಿಳಿದು, ಅದನ್ನು ಹಂಸಕ್ಷೀರ ನ್ಯಾಯದಂತೆ ಬೇಕಾದನ್ನು ಮಾತ್ರ ಅಳವಡಿಸಿಕೊಳ್ಳಬೇಕು.

 

ಸಣ್ಣ ಹೂಡಿಕೆದಾರರು ತಮ್ಮ ಬಂಡವಾಳ ಸುರಕ್ಷತೆಗೆ ಆದ್ಯತೆ ನೀಡುವುದು ಅತ್ಯವಶ್ಯಕ. ಸಿಕ್ಕುವ ಅವಕಾಶ ಬಳಸಿಕೊಳ್ಳಬೇಕು. ಮಾರಾಟದ ನಂತರದ ಬೆಳವಣಿಗೆ ಅಪ್ರಸ್ತುತ. ಷೇರು ಪೇಟೆಯಲ್ಲಿ ಹೂಡಿಕೆ ಉತ್ತಮ ಕಂಪೆನಿಗಳಲ್ಲಿದ್ದು, ಹೂಡಿಕೆ ಮಾಡಿದ ಕಂಪೆನಿಗಳ ಸಂಖ್ಯೆ ಹೆಚ್ಚಾಗಿದ್ದರೆ ಕ್ಷೇಮ. ಹಿಂದಿನ ಒಂದೆರಡು ವಾರದಲ್ಲಿ ಮಹೀಂದ್ರ ಅಂಡ್ ಮಹೀಂದ್ರ ಕಂಪೆನಿಯು ರೂ 650 ರಿಂದ ರೂ700ರ ವರೆಗೂ ಎರಡು ಭಾರಿ ಏರಿಳಿತ ಕಂಡಿದೆ.  ರೂ10ರ ಲಾಭಾಂಶ, ಪ್ರತಿ ಷೇರಿಗೆ, ಪ್ರಕಟಿಸಿದ ಇಂಡಿಯನ್ ಕಾರ್ಡ್ ಪ್ಲಾನಿಂಗ್ ಕಳೆದ ಒಂದು ತಿಂಗಳಲ್ಲಿ ರೂ81 ರಿಂದ ರೂ159ರ ವರೆಗೂ ಏರಿಕೆ ಕಂಡಿದೆ.

 

ಕಳಪೆ ಫಲಿತಾಂಶವೆಂದು ಕಡೆಗಣಿಸಿದ್ದ ಬಿಎಚ್‌ಇಎಲ್ ಒಂದು ವಾರದಲ್ಲಿ ರೂ241 ರಿಂದ ರೂ 372ರೆಗೂ ಏರಿಳಿತ ಪ್ರದರ್ಶಿಸಿದೆ. ಹೀಗೆ ಉತ್ತಮ ಕಂಪೆನಿಗಳಲ್ಲಿ ಚಟುವಟಿಕೆ ರಭಸ ಹೆಚ್ಚಾಗಿರಲು ಕಾರಣ ವಿದೇಶೀ ವಿತ್ತೀಯ ಸಂಸ್ಥೆಗಳ ಚಟುವಟಿಕೆ ಪ್ರಭಾವ. ಹಾಗಾಗಿ ಹೂಡಿಕೆ ಮಾಡಲು ಉತ್ತಮವಾದ ಕಂಪೆನಿಯ ಬೆಲೆ ಕುಸಿತದಲ್ಲಿದ್ದಾಗ ಆಯ್ಕೆ ಮಾಡಿಕೊಳ್ಳಿ. ನಂತರ ಉತ್ತಮ ಎಂಬುದನ್ನು ಮರೆತು ಲಾಭಗಳಿಸುವುದನ್ನು ಮಾತ್ರ ಗಮನದಲ್ಲಿರಿಸಿ.

 98863-13380

 (ಮಧ್ಯಾಹ್ನ 4.30ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry