ಮಂಗಳವಾರ, ಮೇ 18, 2021
28 °C

ಮತ್ತೆ ವಿದೇಶಿ ವಿತ್ತೀಯ ಒತ್ತಡ

ಕೆ. ಜಿ. ಕೃಪಾಲ್ Updated:

ಅಕ್ಷರ ಗಾತ್ರ : | |

ಸಂವೇದಿ ಸೂಚ್ಯಂಕದ ಸೂಕ್ಷ್ಮತೆಯನ್ನು ಕಳೆದ ವಾರ ಷೇರು ಪೇಟೆಗಳು ಪ್ರದರ್ಶಿಸಿವೆ. ಪ್ರತಿಯೊಂದು ಬೆಳವಣಿಗೆಗೆ ಸೂಕ್ತವಾದ ರೀತಿಯಲ್ಲಿ ಸ್ಪಂದಿಸಿ ಏರಿಳಿತ ಪ್ರದರ್ಶಿಸುವ ಗುಣವನ್ನು ತೋರಿವೆ.ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ ಎಂದರೆ `ಸೆನ್ಸಿಟಿವ್ ಇಂಡೆಕ್ಸ್-ಸೆನ್ಸೆಕ್ಸ್' ಎನ್ನುವುದನ್ನು ಸಾಬೀತುಪಡಿಸಿದೆ. ರೂಪಾಯಿ ಮೌಲ್ಯದಲ್ಲಿ ಡಾಲರ್ ವಿರುದ್ಧ ಉಂಟಾದ ದಾಖಲೆಯ ಕುಸಿತ. ಗುರುವಾರದಂದು ಡಾಲರ್ ವಿರುದ್ಧ ರೂಪರೂಾ59.98 ತಲುಪಿ ವಾತಾವರಣವನ್ನು ಹದಗೆಡಿಸಿ ಷೇರುಪೇಟೆಯನ್ನು 21 ತಿಂಗಳ ಹಿಂದಿನ ಮಟ್ಟಕ್ಕೆ ಕುಸಿಯುವಂತೆ ಮಾಡಿತು.ಗುರುವಾರದಂದು ವಿದೇಶಿ ವಿತ್ತೀಯ ಸಂಸ್ಥೆಗಳು ಭರ್ಜರಿ ರೂ2,000 ಕೋಟಿಗೂ ಹೆಚ್ಚಿನ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದವು. ಈ ಮಾರಾಟದ ಒತ್ತಡದ ಕಾರಣ ಸಂವೇದಿ ಸೂಚ್ಯಂಕವು 526 ಅಂಶಗಳಷ್ಟು ಕುಸಿತ ಕಾಣುವಂತಾಯಿತು.   ಕಳೆದ ವಾರ ಅತಿ ಹೆಚ್ಚು ಕುಸಿತ ಕಂಡ ಕಂಪೆನಿ ಎಂದರೆ ಸ್ಟೇಟ್ ಟ್ರೇಡಿಂಗ್ ಕಾರ್ಪೊರೇಷನ್. ಈ ಕಂಪೆನಿಯು ರೂ103ರ ಹಂತದಿಂದ ಏಕಮುಖವಾಗಿ ಇಳಿಕೆ ಕಂಡು ರೂ 88.20 ರಲ್ಲಿ ಅಂತ್ಯ ಕಂಡಿತು. ಶುಕ್ರವಾರದ ರೂ87.20 ವಾರ್ಷಿಕ ಕನಿಷ್ಠವಾಗಿದೆ. ಇಂತಹ ಕುಸಿತಕ್ಕೆ ಜೊತೆಗೂಡಿದ ಮತ್ತೊಂದು ಕಂಪೆನಿ ಎಂದರೆ ಸಾರ್ವಜನಿಕ ವಲಯದ ಎಂಎಂಟಿಸಿ ಲಿ. ಈ ಕಂಪೆನಿಯು 13 ರಂದು ರೂ61ರ ಸಮೀಪದಲ್ಲಿ ಆಫರ್ ಫಾರ್ ಸೇಲ್ ಮೂಲಕ ಶೇ 9.33 ರಷ್ಟು ಷೇರುಗಳನ್ನು ಮಾರಾಟ ಮಾಡಿದ ಕಾರಣ ರೂ211ರ ಸಮೀಪದಿಂದ ಕುಸಿದು ರೂ 132.75 ರವರೆಗೂ ಇಳಿದಿದೆ.ಈ ದರದಲ್ಲೂ ಮಾರಾಟಕ್ಕೆ ಅವಕಾಶವಿಲ್ಲದೆ ಕೆಳಗಿನ ಆವರಣ ಮಿತಿಯಲ್ಲಿ ಕುಳಿತಿದ್ದು ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ. ಇತ್ತೀಚೆಗೆ ಪ್ರತಿ ಷೇರಿಗೆ ರೂ241 ರಂತೆ ಕೊಳ್ಳಲು ತೆರೆದ ಕರೆ ನೀಡಿದ್ದ ಕಂಪೆನಿ ಲಿಬರ್ಟಿ ಫಾಸ್ಪೇಟ್ ರೂ158ರ ಸಮೀಪದಿಂದ ರೂ 113.65ಕ್ಕೆ ಕುಸಿದಿದೆ. ಶುಕ್ರವಾರದಂದು ಕರ್ನಾಟಕ ಬ್ಯಾಂಕ್ ಮಧ್ಯಾಹ್ನ 2 ಗಂಟೆಯವರೆಗೂ ರೂ138ರ ಸಮೀಪವಿದ್ದು ನಂತರ ರೂ110 ರವರೆಗೂ ದಿಢೀರ್ ಕುಸಿತ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳ ಕಾರ್ಯವೈಖರಿ ಈ ರೀತಿ ಇರುತ್ತವೆ.ವಾರದಲ್ಲಿ ಒಟ್ಟಾರೆ 403 ಅಂಶಗಳಷ್ಟು ಕುಸಿತ ಕಂಡ ಸಂವೇದಿ ಸೂಚ್ಯಂಕ, ತನ್ನೊಂದಿಗೆ ಮಧ್ಯಮಶ್ರೇಣಿ ಸೂಚ್ಯಂಕವನ್ನು 143 ಅಂಶಗಳಷ್ಟು ಕುಸಿಯುವಂತೆ ಮಾಡಿತು. ಕೆಳಮಧ್ಯಮ ಶ್ರೇಣಿ ಸೂಚ್ಯಂಕ 55 ಅಂಶಗಳಷ್ಟು ಇಳಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ವಾರದ ಎಲ್ಲಾ ದಿನಗಳಲ್ಲೂ ಮಾರಾಟದ ದಿಶೆ ಹಿಡಿದು ಒಟ್ಟು ರೂ5,170 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಸ್ವದೇಶಿ ವಿತ್ತೀಯ ಸಂಸ್ಥೆಗಳು ವಾರದುದ್ದಕ್ಕೂ ಖರೀದಿ ಮಾಡಿ ಒಟ್ಟು ರೂ3,889 ಕೋಟಿ ಹೂಡಿಕೆ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ಹಿಂದಿನ ವಾರದ ರೂ64.52 ಲಕ್ಷ ಕೋಟಿಯಿಂದ ರೂ 63.12 ಲಕ್ಷ ಕೋಟಿಗೆ ಕುಸಿದಿದೆ.ಬೋನಸ್ ಷೇರಿನ ವಿಚಾರ

* ಇಮಾಮಿ ಲಿ. ಕಂಪೆನಿ ವಿತರಿಸಲಿರುವ 1:2ರ ಅನುಪಾತದ ಬೋನಸ್‌ಗೆ ಜೂನ್ 27 ನಿಗದಿತ ದಿನವಾಗಿದೆ.

*ಗ್ಲೋಸ್ಟರ್ ಲಿ. ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಜೂನ್ 28 ನಿಗದಿತ ದಿನವಾಗಿದೆ.

*ಸಟ್ಲೇಜ್ ಟೆಕ್ಸ್‌ಟೈಲ್ಸ್ ಅಂಡ್ ಇಂಡಸ್ಟ್ರೀಸ್ ವಿತರಿಸಲಿರುವ 1:2ರ ಅನುಪಾತದ ಬೋನಸ್‌ಗೆ 28 ಜೂನ್ ನಿಗದಿತ ದಿನವಾಗಿದೆ.

*ಟಿ ಗುಂಪಿನ ಸೆಂಟ್ರಮ್ ಕ್ಯಾಪಿಟಲ್ ಕಂಪೆನಿ ವಿತರಿಸಲಿರುವ 5:1ರ ಅನುಪಾತದ ಬೋನಸ್‌ಗೆ ಜುಲೈ 4 ನಿಗದಿತ ದಿನವಾಗಿದೆ.

*ಟಾಟಾ ಟೆಲಿ ಸರ್ವಿಸಸ್ (ಮಹಾರಾಷ್ಟ್ರ) 2:15ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.ಸಾರ್ವಜನಿಕ ಭಾಗಿತ್ವ

ಟಾಟಾ ಟೆಲಿ ಸರ್ವಿಸಸ್ (ಮಹಾರಾಷ್ಟ್ರ) ಲಿ. ಕಂಪೆನಿಯು ಈ ಹಿಂದೆ ಆಫರ್ ಫಾರ್ ಸೇಲ್ ಗವಾಕ್ಷಿಯ ಮೂಲಕ ಸಾರ್ವಜನಿಕ ಭಾಗಿತ್ವವನ್ನು ಕನಿಷ್ಠ ಶೇ 25 ರಷ್ಟಕ್ಕೆ ಹೆಚ್ಚಿಸಲು ಪ್ರಯತ್ನಿಸಿತಾದರೂ ಫಲಕಾರಿಯಾಗಿರಲಿಲ್ಲ. ಆದಕಾರಣ ಕಂಪೆನಿಯ ಪ್ರವರ್ತಕರು, ಷೇರುದಾರರಿಗೆ ಬೋನಸ್ ಷೇರು ವಿತರಿಸಲು ಸುತ್ತೋಲೆ ಠರಾವಿನ ಮೂಲಕ ನಿರ್ಧರಿಸಲಿದ್ದಾರೆ ಈ ಬೋನಸ್ ಷೇರುಗಳು ಪ್ರವರ್ತಕರ ಹೊರತಾಗಿ ಇತರರಿಗೆ ಲಭ್ಯವಾಗುತ್ತದೆ.*ಪ್ರೀಮಿಯರ್ ಸಿಂಥೆಟಿಕ್ಸ್ ಲಿ. ಕಂಪೆನಿಯು ಈಗ ಕಾಲ್ ಆಕ್ಷನ್ ಪದ್ಧತಿಯಲ್ಲಿ ಗಂಟೆಗೊಮ್ಮೆ ವಹಿವಾಟಾಗುವಂತಿದ್ದು, 21 ರಂದು ಕಂಪೆನಿಯ ಪ್ರವರ್ತಕರು 2,30,000 ಷೇರುಗಳನ್ನು ಆಫರ್ ಫಾರ್ ಸೇಲ್ ಗವಾಕ್ಷಿ ಮೂಲಕ ಮಾರಾಟ ಮಾಡಿದ್ದಾರೆ. ಪ್ರವರ್ತಕರ ಭಾಗಿತ್ವ ಶೇ 69.66 ಡಿಸೆಂಬರ್ 2012ರ ಅಂತ್ಯದಲ್ಲಿದ್ದು ಮಾರ್ಚ್ 2013ರ ಅಂತ್ಯದಲ್ಲಿ ಅದು ಶೇ 81.21ಕ್ಕೆ ಏರಿದೆ. ಆ ವೇಳೆಗಾಗಲೇ, ಸಾರ್ವಜನಿಕ ಭಾಗಿತ್ವ ಕನಿಷ್ಠ ಶೇ 25 ರಷ್ಟಿರಬೇಕೆಂಬ ನಿಯಮ ಪ್ರಕಟವಾಗಿದ್ದರೂ ಪ್ರವರ್ತಕರ ಈ ಕ್ರಮ ಪ್ರಶ್ನಾರ್ಹವಾಗುವುದು.ಸೂಚ್ಯಂಕಗಳಲ್ಲಿ ಬದಲಾವಣೆ

ಪ್ಯೂಚರ್ ರೀಟೇಲ್ ಲಿ. ಕಂಪೆನಿಯನ್ನು ಬಿಎಸ್‌ಇ 200, ಬಿಎಸ್‌ಇ 500, ಬಿಎಸ್‌ಇ ಮಿಡ್ ಕ್ಯಾಪ್ ಸೂಚ್ಯಂಕಗಳಿಂದ ಹೊರ ಕಳಿಸಲಾಗಿದ್ದು ಇದಕ್ಕೆ ಬದಲಾಗಿ ವಕ್ರಾಂಗಿ ಸಾಫ್ಟ್‌ವೇರ್ ಕಂಪೆನಿಯನ್ನು ಬಿಎಸ್‌ಇ 200 ಮತ್ತು ಯುನ್ನೊ ಇಂಡಸ್ಟ್ರೀಸ್‌ನ್ನು ಬಿಎಸ್‌ಇ 500 ರಲ್ಲಿ ಸೇರಿಸಲಾಗಿದೆ.ಪ್ಯೂಚರ್ ವೆಂಚರ್ಸ್ ಇಂಡಿಯಾ ಲಿ.ನ್ನು ಬಿಎಸ್‌ಇ 500 ಮತ್ತು ಬಿಎಸ್‌ಇ ಸ್ಮಾಲ್ ಕ್ಯಾಪ್ ಸೂಚ್ಯಂಕದಿಂದ ಹೊರಕಳಿಸಿ ಕ್ರೆಸಂಡಾ ಸೋಲೂಷನ್ಸ್ ಲಿ.ನ್ನು ಬಿಎಸ್‌ಇ 500 ಸೂಚ್ಯಂಕದಲ್ಲಿ ಸೇರಿಸಲಾಗಿದೆ. ಇದು ಜೂನ್ 21 ರಿಂದ ಜಾರಿಯಾಗಿದೆ.ಮಹಾರಾಷ್ಟ್ರ ಸೀಮ್‌ಲೆಸ್, ಜಿವಿಕೆ ಪವರ್ ಅಂಡ್ ಇನ್‌ಪ್ರಾ, ನವಭಾರತ್ ವೆಂಚರ್ಸ್, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್, ಅಲ್‌ಕಾರ್ಗೊ ಲಾಜಿಸ್ಟಿಕ್, ಶ್ರೈ ಇನ್‌ಫ್ರಾಸ್ಟ್ರಕ್ಚರ್ ಫೈನಾನ್ಸ್ ಬಿಜಿಆರ್ ಎನರ್ಜಿ ಸಿಸ್ಟಮ್ಸ, ಆಪ್ಟೋಸರ್ಕ್ಯುಟ್ಸ್, ವೆಲ್‌ಸ್ಟನ್ ಕಾರ್ಪ್, ಪೆನಿನ್ಸ್‌ಲಾರ್ ಲ್ಯಾಂಡ್, ಬ್ಲೂ ಸ್ಟಾರ್, ಮೊನ್ನೆಟ್ ಇಸ್‌ಪಾಟ್, ವೈಬ್ರಂಟ್ ಡಿಜಿಟಲ್, ಕೋರ್ ಎಜುಕೇಷನ್ ಷೇರುಗಳನ್ನು ಕೆಳಮಧ್ಯಮ ಶ್ರೇಣಿ ಸೂಚ್ಯಂಕಕ್ಕೆ 24 ರಿಂದ ವರ್ಗಾಯಿಸಲಾಗಿದೆ. ಅಲ್ಲದೆ ಓಬೆರಾಯ್ ರಿಯಾಲ್ಟಿ, ಇಂಡಿಯಾ ಟೂರಿಸಂ ಡೆವೆಲಪ್‌ಮೆಂಟ್ ಕಾರ್ಪೊರೇಷನ್, ಎಜೆ ವಿಎನ್‌ಎಲ್, ಜೆ.ಪಿ. ಪವರ್ ವೆಂಚರ್ಸ್, ಅಲೆಂಬಿಕ್ ಫಾರ್ಮಾ, ಅಜಂತಾ ಫಾರ್ಮಗಳನ್ನು ಮಧ್ಯಮಶ್ರೇಣಿ ಸೂಚ್ಯಂಕಕ್ಕೆ ಸೇರಿಸಲಾಗಿದೆ.ನಿರ್ಗಮನ

ಸಂದೇಶ್, ಮುಂಜಾಲ್ ಶೋವಾ, ರಾಣಿ ಹೋಲ್ಡಿಂಗ್, ಆಪ್‌ಟೆಕ್, ಫಿಲಿಪ್ಸ್ ಕಾರ್ಬನ್ ಬ್ಲಾಕ್, ಸೆಂಚುರಿ ಯಂಕ, ಸಿಯಾರಾಂ ಸಿಲ್ಕ್, ಎವರೆಸ್ಟ್ ಕ್ಯಾಂಟೋ ಸಿಲಿಂಡರ್ ಗ್ಲೋಬಸ್ ಸ್ಪಿರಿಟ್ಸ್, ಎಸ್. ಕುಮಾರ್ ನ್ಯಾಶನ್‌ವೈಡ್, ಮೆಕ್ನಲಿ ಭಾರತ್, ಬಿಲ್‌ಕೇರ್, ನವೀನ್ ಪ್ಲೋರೋ, ಜೆಎಂಸಿ ಪ್ರಾಜೆಕ್ಟ್, ಕೆರಿಯರ್ ಪಾಯಿಂಟ್, ಟುಲಿಪ್ ಟೆಲಿ, ಆಂಜನೇಯ ಲೈಫ್‌ಕೇರ್, ಎ-ಟು-ಝಡ್ ಮೆಂಟನನ್ಸ್ ಆರ್ಶಿಯಾ ಇಂಟರ್‌ನ್ಯಾಶನಲ್, ರುಶಿಲ್ ಡೆಕೊರ್, ಜಿಂದಾಲ್ ಕೊಟೆಕ್ಸ್ ಸೇರಿ ಅನೇಕ ಕಂಪೆನಿಗಳು ಕೆಳಮಧ್ಯಮ ಶ್ರೇಣಿ ಸೂಚ್ಯಂಕದಿಂದ ನಿರ್ಗಮಿಸಲಿವೆ.ವಾರದ ವಿಶೇಷ

ರೂಪಾಯಿ ಮೌಲ್ಯವು ಡಾಲರ್ ವಿರುದ್ಧ ತೀವ್ರ ಕುಸಿತ ಕಂಡು ದಾಖಲೆನಿರ್ಮಿಸಿದೆ. ಈ ಬೆಳವಣಿಗೆಯು ಘೋರವಾದ ಪರಿಣಾಮವನ್ನು ವಿದೇಶಿ ವಿನಿಮಯ ಸಾಲಗಳಾಧಾರಿತ ಕಂಪೆನಿ ಮೇಲೆ ಬೀರಲಿದೆ. ಅಲ್ಲದೆ ಒಂದೇ ದಿನ 500ಕ್ಕೂ ಹೆಚ್ಚಿನ ಅಂಶಗಳಷ್ಟು  ಕುಸಿತವು ಸಹ ಕ್ರೂರವಾಗಿರುತ್ತದೆ. ಹಲವಾರು ಕಾರಣಗಳಿಂದ ಹೆಚ್ಚಿನ ಬಂಡವಾಳ ನಾಶಕ್ಕೆ ದಾರಿಯಾಗಿರುವ ಈಗಿನ ದಿನಗಳಲ್ಲಿ ಈಗ ರೂಪಾಯಿ ಮೌಲ್ಯ ಕುಸಿತ ಹೆಚ್ಚಿನ ದುಷ್ಪರಿಣಾಮ ಬೀರಲಿದೆ.ಈ ದುಷ್ಪರಿಣಾಮಗಳನ್ನು ಪರಿಗಣಿಸಿ ಷೇರುಪೇಟೆಯ ಸಹವಾಸ ಬೇಡ ಎನ್ನುವುದು ಸರಿಯಲ್ಲ. ಸಕಾರಾತ್ಮಕವಾಗಿ ಚಿಂತಿಸಬೇಕಿದೆ. ಈ ಹಿಂದೆ 80ರ ದಶಕದಲ್ಲಿ `ಕಪ್ಪು ಸೋಮವಾರ' ಎಂಬ ಕುಸಿತವು ನಮ್ಮ ದೇಶದ ಆರ್ಥಿಕತೆ ಮೇಲೆ ಯಾವ ಪರಿಣಾಮವೂ ಬೀರದಾಯಿತು. ಕಾರಣ ನಮ್ಮ ಆರ್ಥಿಕತೆಯು ವಿದೇಶಿಗರಿಗೆ ಮುಕ್ತವಾಗಿರಲಿಲ್ಲ, ಆದರೆ ಈಗ ಸ್ಥಳೀಯರಿಗಿಂತ ಹೆಚ್ಚು ವಿದೇಶಿ ಸಂಸ್ಥೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿರುವುದರಿಂದ ಅವರ ತಾಳಕ್ಕೆ ಕುಣಿಯಬೇಕಾದ ಅನಿವಾರ್ಯತೆಯುಂಟಾಗಿದೆ. ಈ ಹಿಂದೆ ಮೂಲಾಂಶ ಆಧಾರಿತ ಹೂಡಿಕೆ ರೂಢಿಯಲ್ಲಿತ್ತು.ವಿಶ್ಲೇಷಣೆಗಳು ಫಲಕಾರಿಗಳು ಹೆಚ್ಚು ಪ್ರಭಾವಿಯಾಗಿರುವುದರಿಂದ, ಏರಿಳಿತವೆಂಬ ಕುದುರೆ ಲಂಗು ಲಗಾಮಿಲ್ಲದ ರೀತಿ ಓಡುತ್ತಿರುವುದು, ಪರಿಸ್ಥಿತಿ ಹದಗೆಡುವಂತೆ ಮಾಡಿದೆ. ಈಗ ಜಾಗತಿಕ ಬೆಳವಣಿಗೆಗಳು ಹೆಚ್ಚಿನ ಪ್ರಭಾವಿಯಾಗಿರುವುದರಿಂದ ಉತ್ತಮ ಹೂಡಿಕೆ ಎನಿಸಿಕೊಳ್ಳಬೇಕಾದರೆ ಕೇವಲ ಫಲಿತಾಂಶ ಆಕರ್ಷಕವಾಗಿರಬೇಕು. ಅನುಸರಿಸುವ ಮಾರ್ಗವಲ್ಲ. ಈ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರು ಹೂಡಿಕೆಯಾಗಿ ಆಯ್ಕೆ ಮಾಡಿಕೊಳ್ಳಲು ಉತ್ತಮ ಅವಕಾಶ ಒದಗಿ ಬಂದಿದೆ. ಈಗಿನ ಹಿಂಜರಿತದ ಕಾಲದಲ್ಲಿ ಹೆಚ್ಚಿನ ಲಾಭಕ್ಕೆ ಆಸೆ ಪಡದೆ ನಗದೀಕರಿಸಿಕೊಳ್ಳುವ ಹವ್ಯಾಸ ಬೆಳೆಸಿಕೊಳ್ಳಬೇಕು.ವಿಶ್ಲೇಷಣೆ, ಗುರಿ ಯಾವುದೇ ಇರಲಿ ನಿಮ್ಮ ದೃಷ್ಠಿ ಕೇವಲ ನಿಮ್ಮ ಲಾಭದ ಮೇಲಿರಲಿ ವಲಯಾಧಾರಿತ ಹೂಡಿಕೆಗಿಂತ ವ್ಯಕ್ತಿಗತ ಕಂಪೆನಿಗಳ ಮೇಲೆ ನಿಗಾ ಇರಿಸಿರಿ. ಹೂಡಿಕೆಯು ಹಂತ ಹಂತವಾಗಿರಲಿ. ಹಲವಾರು ಕಂಪೆನಿಗಳು ಘೋಷಿಸಿರುವ ಲಾಭಾಂಶಗಳೂ ಸಹ ಈಗಿನ ಬೆಲೆಯಲ್ಲಿ ಹೆಚ್ಚಿನ ಆದಾಯಕ್ಕೆ ಕಾರಣವಾಗುತ್ತದೆ. ಧೃತಿಗೆಡದೆ ಆಪತ್ತನ್ನು ಅವಕಾಶವನ್ನಾಗಿಸಿಕೊಂಡು ನಿರ್ಧಾರ ತೆಗೆದುಕೊಳ್ಳುವುದೊಂದೇ ನಮ್ಮ ಹೂಡಿಕೆಯ ಸುರಕ್ಷತೆಗೆ ಮಾರ್ಗವಾಗಿರುತ್ತದೆ.ಎಲ್ಲಾ ನಕಾರಾತ್ಮಕ ಅಂಶಗಳಿದ್ದಾಗಲೂ ಅಂದರೆ ಹಣದುಬ್ಬರದ ಮಟ್ಟ, ಆರ್ಥಿಕ ಕೊರತೆ, ಹಿಂಜರಿತಗಳು, ಕಂಪೆನಿಗಳ ಸಾಧನೆಯ ಕೊರತೆಗಳಿಗೆ ವಿದೇಶಿ ವಿತ್ತೀಯ ಸಂಸ್ಥೆಗಳು ಕೊಳ್ಳುವ ಮೂಲಕ ಸೆನ್ಸೆಕ್ಸ್ ಏರಿಕೆ ಕಾಣುವಂತಾಗಿ 20 ಸಾವಿರ ಮಟ್ಟವನ್ನು ದಾಟಿಸಿದ್ದು ಕೆಲವೇ ದಿನಗಳಲ್ಲಿ 18,700ಕ್ಕೆ ಕುಸಿಯುವಂತೆ ಮಾಡಿರುವದು ಅವುಗಳ ವಹಿವಾಟಿನ ಗಾತ್ರವೇ ಹೊರತು ಆಂತರಿಕ ಅಂಶಗಳಲ್ಲ. ರೂಪಾಯಿಯ ಬೆಲೆ ಕುಸಿತ ನೆಪಮಾತ್ರ.ಹೂಡಿಕೆದಾರರಿಗೆ ಅವಕಾಶ

ಈ ಚಟುವಟಿಕೆಯ ಭರದಲ್ಲಿ ನಾವೂ ಸಹ ಕಾಮಾಲೆ ಕಣ್ಣಿನಿಂದ ನೋಡದೆ ನಮ್ಮಲ್ಲಿರುವ ಉತ್ತಮ ಕಂಪೆನಿಗಳನ್ನು ರೋಗಗ್ರಸ್ತವಾಗಿಸುವ ಈ ಕ್ರಮಕ್ಕೆ ವಿರೋಧಿಸಬೇಕಾಗಿದೆ. ಸರ್ಕಾರದ ಕ್ರಮಕ್ಕೆ ನಿರೀಕ್ಷಿಸುವುದು ಬೇಡ. ಪ್ರಮುಖ ಕಂಪೆನಿಗಳ ಷೇರಿನ ಬೆಲೆ ಕುಸಿತ ಕಂಡಾಗ ಉದಾಹರಣೆಗೆ ಹೂಡಿಕೆದಾರ ಕಣ್ಮಣಿಗಳಾದ ಕರ್ನಾಟಕ ಬ್ಯಾಂಕ್, ಕೆನರಾ ಬ್ಯಾಂಕ್, ಅಪೋಲೋ ಟೈರ್, ಜಿಂದಾಲ್ ಸ್ಟೀಲ್ ಅಂಡ್ ಪವರ್ ನಂತಹ ಕಂಪೆನಿಗಳು ಹೆಚ್ಚಿನ ಕುಸಿತ ಕಂಡಿರುವುದರಿಂದ ಪರಿಸ್ಥಿತಿಯಾಧರಿಸಿ ಹೂಡಿಕೆ ಮಾಡಲು ಮುಂದಾಗಬೇಕು.ಈ ಕಂಪೆನಿಗಳು ಹೂಡಿಕೆದಾರರು, ಷೇರುದಾರರ ಸಂಪತ್ತು ಬೆಳೆಸಿರುವಂತಹ ಕಂಪೆನಿಗಳಾಗಿವೆ. ಕರ್ನಾಟಕ ಬ್ಯಾಂಕ್ ಮತ್ತೊಮ್ಮೆ ಸ್ವಾಧೀನ ಪ್ರಕ್ರಿಯೆಗೊಳಗಾಗಬಹುದು. ಆಗ ಷೇರಿನ ಬೆಲೆ ಚಿಮ್ಮುವುದಕ್ಕೆ ಅವಕಾಶವಿದೆ. ಅಪೋಲೋ ಟೈರ್ಸ್‌ ವಾರ್ಷಿಕ ಕನಿಷ್ಠಕ್ಕೆ ಕುಸಿದಿದೆ, ದಶಕಗಳ ಹಿಂದೆ ರೂ10ರ ಮುಖಬೆಲೆ ಷೇರು ಒಂದಂಕಿಯಲ್ಲಿದ್ದು ಈಗ ರೂ1ರ ಮುಖಬೆಲೆ ಷೇರು 100 ರೂಪಾಯಿಗಳ ಸಮೀಪ ತಲುಪಿ ಶೇ 50 ರಷ್ಟು ಕುಸಿದಿದೆ.ಅಂದರೆ ಈ ಕಂಪೆನಿಗಳ ಶಿಫಾರಸು ಮಾಡುತ್ತಿಲ್ಲ. ನಾವುಗಳು ವಾಸ್ತವತೆಯನ್ನರಿತು ಮೌಲ್ಯಗಳು ಉತ್ತಮವಾದರೂ ಸಾಮೂಹಿಕ ಒತ್ತಡದಿಂದ ತೊಂದರೆಗೊಳಗಾಗುವುದನ್ನು ತಪ್ಪಿಸಿ ನಮ್ಮ ಕಂಪೆನಿಗಳು ಭಾದೆಪಡುವುದಕ್ಕೆ ಬಿಡದೆ ನಮ್ಮ ಸ್ವಶಕ್ತಿಯನ್ನು ಪ್ರದರ್ಶಿಸಲು ಇದು ಸದವಕಾಶ. ಹೂಡಿಕೆಗೆ ಉತ್ತಮ ಕಂಪೆನಿ ಆಯ್ಕೆ ಮಾಡಿಕೊಂಡು ಕೇವಲ 100 ಷೇರುಗಳಷ್ಟು ಹೆಚ್ಚು ಜನ ಹೂಡಿಕೆ ಮಾಡುವುದರಿಂದ ಷಾಕ್ ಅಬ್ಸಾರ‌್ವರ್ ತರಹ ಪರಿಣಾಮವಾಗುತ್ತದೆ. ಅಂದರಾಗಿ ವಿಶ್ಲೇಷಣೆಗೆ ಬಲಿಯಾಗುವುದಕ್ಕಿಂತ ಮೌಲ್ಯಯುತ ಚಟುವಟಿಕೆ ಬಂಡವಾಳ ಸುರಕ್ಷತೆಯೊಂದಿಗೆ ಬೆಳೆಯುವುದಕ್ಕೆ ದಾರಿ.- 98863-13380

(ಮಧ್ಯಾಹ್ನ 4.30ರ ನಂತರ)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.