ಮತ್ತೆ ವಿದೇಶಿ ಹೂಡಿಕೆ ಅಬ್ಬರ..!

7

ಮತ್ತೆ ವಿದೇಶಿ ಹೂಡಿಕೆ ಅಬ್ಬರ..!

ಕೆ. ಜಿ. ಕೃಪಾಲ್
Published:
Updated:

ಚರಿತ್ರೆ ಪುನರಾವರ್ತನೆಗೊಳ್ಳುವಂತೆ ಕಳೆದ ವಾರ ಸೂಚ್ಯಂಕ ಏರಿಕೆ ಕಂಡಿತು. ವಾರಾಂತ್ಯದ ವಹಿವಾಟಿನಲ್ಲಿ ಷೇರುಪೇಟೆ  ಹಿಂದಿನ ವರ್ಷದ ಫೆಬ್ರುವರಿ 17 ರಂದು ತಲುಪಿದ್ದ 18506 ಅಂಶಗಳ ಸಮೀಪಕ್ಕೆ ಅಂದರೆ, 18423 ಅಂಶಗಳವರೆಗೂ ಏರಿಕೆ ಪಡೆಯಿತು. ಡಿಸೆಂಬರ್ 20 ರಂದು ಕಂಡಿದ್ದ 15135 ಅಂಶಗಳ ವಾರ್ಷಿಕ ಕನಿಷ್ಠ ಮಟ್ಟದಿಂದ ಕೇವಲ 45 ದಿನಗಳ ಚಟುವಟಿಕೆಯಲ್ಲಿ ಮೂರು ಸಾವಿರ ಅಂಶಗಳಿಗೂ  ಹೆಚ್ಚಿನ ಜಿಗಿತವು ಪೇಟೆಯ ಚಲನೆಯ ವೇಗದ ಬಗ್ಗೆ ಅರಿವು ಮೂಡಿಸುತ್ತದೆ.

ಮುಂದಿನ ದಿನಗಳಲ್ಲಿ ಹಲವು ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶ, ಕೇಂದ್ರ ಬಜೆಟ್‌ಗೆ ಸಂಬಂಧಿಸಿದ ಚರ್ಚೆಗಳು ಪೇಟೆಯ ಚಲನೆಯ ಮೇಲೆ ಪ್ರಭಾವ ಬೀರುವ ಅಂಶಗಳಾಗಿವೆ. ಬ್ಯಾಂಕಿಂಗ್ ವಲಯದಸೂಚ್ಯಂಕ ಶೇ 6.25 ರಷ್ಟು, ರಿಯಾಲ್ಟಿ ವಲಯದ ಸೂಚ್ಯಂಕ ಶೇ 10ಕ್ಕೂ ಹೆಚ್ಚಿನ ಏರಿಕೆ ಕಂಡಿದೆ.  ಈ ವಲಯದ ಏರಿಕೆಯು ಹಲವು ಹೂಡಿಕೆದಾರರಿಗೆ ಲಾಭ ತಂದಿದೆ. ಆಟೊ ವಲಯದ ಸೂಚ್ಯಂಕವು ಶೇ 6ಕ್ಕೂ ಹೆಚ್ಚಿನ ಏರಿಕೆ ಪಡೆಯಲು ಮುಖ್ಯ ಕಾರಣ, ಈ  ವಲಯದ ಟಾಟಾ ಮೋಟಾರ್ಸ್‌ನ ಉತ್ತಮ ಸಾಧನೆ. ಕಳೆದ ಒಂದು ತಿಂಗಳಲ್ಲಿ ಪ್ರಮುಖ ಕಂಪೆನಿಯಾದ `ಐಎಪ್‌ಸಿಐ~ ಶೇ 80 ಕ್ಕೂ ಹೆಚ್ಚಿನ ಏರಿಕೆಯಿಂದ ವಿಜೃಂಭಿಸಿದರೆ, ರಿಯಲ್ ಎಸ್ಟೇಟ್ ವಲಯದ ಲ್ಯಾಂಕೊ. ಇನ್‌ಫ್ರಾಟೆಕ್, ಎಚ್‌ಡಿಐಎಲ್ ಶೇ 60ಕ್ಕೂ ಹೆಚ್ಚಿನ ಏರಿಕೆಯಿಂದ ಮಿಂಚಿದವು. ಈ ಮಧ್ಯೆ ಕೆಳಹಂತದ ಹಲವಾರು ಕಂಪೆನಿಗಳು ಅಗಾಧವಾದ ಏರಿಕೆ ಪಡೆದಿವೆ . ಇಂತಹ ಕಂಪೆನಿಗಳಿಂದ ಯೋಗ್ಯತೆ ಅನುಸಾರ ಹೊರಬರುವುದು ಸೂಕ್ತ.

ಕಳೆದ ವಾರವೂ 540 ಅಂಶಗಳಷ್ಟು ಮುನ್ನಡೆಯಿಂದ 18 ಸಾವಿರದ ಗಡಿ ದಾಟಿದ ಸಂವೇದಿ ಸೂಚ್ಯಂಕದೊಂದಿಗೆ ಮಧ್ಯಮ ಶ್ರೇಣಿಯ ಸೂಚ್ಯಂಕವು 297 ಅಂಶಗಳಷ್ಟು ಮತ್ತು  ಕೆಳಮಧ್ಯಮ ಶ್ರೇಣಿಯ ಸೂಚ್ಯಂಕ 225 ಅಂಶಗಳಷ್ಟು ಮುನ್ನಡೆ ಪಡೆದಿವೆ. ಇಂತಹ ಬೃಹತ್ ಮುನ್ನಡೆಗೆ ಮೂಲ ಕಾರಣ ಪೇಟೆಗೆ ಹರಿದು ಬರುತ್ತಿರುವ ವಿದೇಶೀ ವಿತ್ತೀಯ ಸಂಸ್ಥೆಗಳ ಹೂಡಿಕೆಯ ಹಣ. ಒಟ್ಟು ರೂ. 4,059 ಕೋಟಿಯಷ್ಟು ನಿವ್ವಳ ಖರೀದಿ ಮಾಡಿವೆ. ಸ್ವದೇಶೀ ವಿತ್ತೀಯ ಸಂಸ್ಥೆಗಳು ರೂ. 1,933 ಕೋಟಿ ಮೌಲ್ಯದ ಷೇರನ್ನು ಮಾರಾಟ ಮಾಡಿವೆ. ಪೇಟೆಯ ಬಂಡವಾಳ ಮೌಲ್ಯವು ರೂ. 63.23 ಲಕ್ಷ ಕೋಟಿಯಿಂದ ರೂ. 65.18 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಲಾಭಾಂಶ ವಿಚಾರ

ಅಮೃತಾಂಜನ್ ಶೇ 50, ಕ್ಯಾಸ್ಟ್ರಾಲ್ ಶೇ 80, ಕ್ಲಾರಿಯಂಟ್ ಕೆಮಿಕಲ್ಸ್ ಶೇ 300, ಕ್ರಿಸಿಲ್ ಶೇ 275 (ಮುಖ ಬೆಲೆ ರೂ. 1), ಡೈನಮೆಟಿಕ್ ಟೆಕ್ನಾಲಜೀಸ್ ಶೇ 30, ಫುಲ್‌ಫೋರ್ಡ್ ಶೇ 35 (ನಿ. ದಿ. 18-4-12) ಗ್ಲಾಕ್ಸೊಸ್ಮಿತ್‌ಕ್ಲೈನ್ ಫಾರ್ಮ ಶೇ 450, ಹೀಲಿಯೋಸ್ ಅಂಡ್ ಮೆತೆಸನ್ ಶೇ 15, ಹೈಟೆಕ್ ಗೇರ್ಸ್‌ ಶೇ20, ಇನಿಯೋಸ್ ಎ.ಬಿ.ಎಸ್. ಶೇ 40, ಎಂ.ಬಿ.ಎಲ್. ಇನ್‌ಫ್ರಾಸ್ಟ್ರಕ್ಚರ್ ಶೇ 15, ಮೋಲ್ಡ್‌ಟೆಕ್ ಪ್ಯಾಕೇಜಿಂಗ್ ಶೇ 25, ನೆಸ್ಲೆ ಶೇ 125, ಹ್ಯಾಟ್ಸನ್ ಆಗ್ರೋ ಪ್ರೋಡಕ್ಟ್ ಶೇ 110 (ಮುಖ ಬೆಲೆ ರೂ. 2), ಆಯಿಲ್ ಇಂಡಿಯಾ ಶೇ 100 (ನಿ. ದಿ. 23-2-12) ಎಸ್‌ಆರ್‌ಎಫ್  ಶೇ 70 (ನಿ. ದಿ. 24-2-12( ಥಾಮಸ್ ಕುಕ್ ಶೇ 37.5 (ಮುಖ ಬೆಲೆ ರೂ. 1)

ಹೊಸ ಷೇರಿನ ವಿಚಾರ

ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ ಆಫ್ ಇಂಡಿಯಾ ಲಿಮಿಟೆಡ್‌ನ ಪ್ರವರ್ತಕರಾದ ಫೈನಾನ್ಶಿಯಲ್ ಟೆಕ್ನಾಲಜೀಸ್ (ಇಂಡಿಯಾ) ಲಿ. ಮತ್ತು ಇತರೆ ಸಂಸ್ಥೆಗಳಾದ ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ, ಜಿ.ಎಲ್.ಜಿ. ಫೈನಾನ್ಶಿಯಲ್ಸ್ ಫಂಡ್ ಅಲೆಕ್ಸಾಂಡ್ರ ಮಾರಿಷಸ್ ಲಿ., ಕಾರ್ಪೊರೇಷನ್ ಬ್ಯಾಂಕ್ ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಸೂರನ್ಸ್ ಕಂ ಲಿ. ಮತ್ತು ಬ್ಯಾಂಕ್ ಬರೋಡಗಳು ಸಾರ್ವಜನಿಕ ವಿತರಣೆ ಮಾಡಲಿದ್ದು ಈ ವಿತರಣೆಗೆ ಕ್ರಿಸಿಲ್ ರೇಟಿಂಗ್ ಸಂಸ್ಥೆಯು ಗರಿಷ್ಠ, ಉತ್ಕೃಷ್ಠ ರೇಟಿಂಗ್ ನೀಡಿದೆ. ವಿತರಣೆಯು ಫೆಬ್ರುವರಿ 22 ರಿಂದ 24ರ ವರೆಗೆ ತೆರೆದಿರುತ್ತದೆ. ಶೇ35 ರಷ್ಟು ಭಾಗವು ರೀಟೇಲ್ ಹೂಡಿಕೆದಾರರಿಗೆ ಮೀಸಲಾಗಿದೆ, ಈ ಷೇರುಗಳು ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ವಹಿವಾಟಾಗಲಿವೆ. ವಿತರಣೆಯನ್ನು ಪ್ರತಿ ಷೇರಿಗೆ ರೂ. 860 ರಿಂದ ರೂ. 1032ರ ಅಂತರದ ಬೆಲೆಯಲ್ಲಿ ನಿಗದಿಪಡಿಸಲಾಗಿದೆ. ಈ ಕಂಪೆನಿಯು ಸರಕುಪೇಟೆಯ ಶೇ 70 ರಷ್ಟು ವಹಿವಾಟು ನಡೆಸುತ್ತದೆ.

ಬಡ್ಡಿ ದರ ಕಡಿತ

ಈ ಕಂಪೆನಿಯು 2009ರಲ್ಲಿ ಸಾರ್ವಜನಿಕವಾಗಿ ವಿತರಿಸಿದ್ದ ನಾಲ್ಕು ವಿಧದ ನಾನ್ ಕನ್ವರ್ಟಬಲ್ ಡಿಬೆಂಚರ್‌ಗಳ ಮೇಲಿನ ಬಡ್ಡಿ ದರವನ್ನು ಕಡಿತಗೊಳಿಸಲು ಷೇರುದಾರರು ಸಮ್ಮತಿಸಿದ್ದಾರೆ. ಅದರಂತೆ ಮಾಸಿಕ ಬಡ್ಡಿ ಗಳಿಸುವ ಯೋಜನೆಯಲ್ಲಿನ ಬಡ್ಡಿ ದರವನ್ನು ಶೇ 11 ರಿಂದ ಶೇ 9.75ಕ್ಕೆ, ತ್ರೈಮಾಸಿಕ ಬಡ್ಡಿ ನೀಡುವ ಯೋಜನೆಯ ಬಡ್ಡಿ ದರವನ್ನು ಶೇ 11.25 ರಿಂದ ಶೇ 9.75ಕ್ಕೆ, ವಾರ್ಷಿಕ ಬಡ್ಡಿ ಮತ್ತು ಕ್ಯುಮುಲೆಟಿವ್ ಯೋಜನೆಗಳಿಗೆ ನೀಡುತ್ತಿದ್ದ ಬಡ್ಡಿ ದರವನ್ನು ಶೇ 12 ರಿಂದ ಶೇ 10.50ಕ್ಕೆ ಇಳಿಸಲಾಗಿದೆ. ಈ ನೂತನ ದರವು ಮಾರ್ಚ್ 6 ರಿಂದ ಜಾರಿಯಾಗಲಿದೆ. ತ್ರೈಮಾಸಿಕ ಬಡ್ಡಿದರ ಯೋಜನೆಯ ಬದಲಾವಣೆಯು ಸೆಪ್ಟೆಂಬರ್ 6ರಿಂದ ಜಾರಿಯಾಗಲಿದೆ. ಈ ಡಿಬೆಂಚರ್‌ದಾರರು ಈ ಬದಲಾವಣೆಗೆ ಸಮ್ಮತಿಸದಿದ್ದರೆ ಹೂಡಿಕೆ ಹಣವನ್ನು ಬಡ್ಡಿ ಸಮೇತ ಹಿಂದಕ್ಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಬೋನಸ್ ಷೇರಿನ ವಿಚಾರ

ಹ್ಯಾಟನ್ ಆಗ್ರೊ ಪ್ರೊಡಕ್ಟ್ ಕಂಪೆನಿಯು 1:2ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

ಹಕ್ಕಿನ ಷೇರಿನ ವಿಚಾರ

ಗಾಯತ್ರಿ ಪ್ರಾಜೆಕ್ಟ್ ಕಂಪೆನಿಯು ವಿತರಿಸಲಿರುವ ಪ್ರತಿ ಷೇರಿಗೆ ರೂ. 120 ರಂತೆ, 1:1ರ ಅನುಪಾತದ ಹಕ್ಕಿನ ಷೇರು ವಿತರಣೆಗೆ 23 ಫೆಬ್ರುವರಿ ನಿಗದಿತ ದಿನವಾಗಿದೆ.

ಅಮಾನತು ತೆರವು

* ಸೆಪ್ಟೆಂಬರ್ 2001ರಿಂದ ವಿಧಿಸಿದ್ದ ಅಮಾನತನ್ನು ತೆರವುಗೊಳಿಸಿಕೊಂಡು ಸಿಬಾರ್ ಆಟೊಪಾರ್ಟ್ಸ್ 23 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.

* ಫೆಬ್ರುವರಿ 2003ರಲ್ಲಿ ವಿಧಿಸಿದ್ದ ಅಮಾನತು ತೆರವುಗೊಳಿಸಿಕೊಂಡು ಫೆಬ್ರುವರಿ 23 ರಿಂದ ಟಿ ಗುಂಪಿನಲ್ಲಿ ರಿಲಿಶ್ ಫಾರ್ಮಸ್ಯುಟಿಕಲ್ಸ್ ಲಿ. ವಹಿವಾಟಾಗಲಿದೆ.

* ವೈಬ್ರೋಸ್ ಆರ್ಗನಿಕ್ಸ್ ಲಿ. ಕಂಪೆನಿ ಮೇಲೆ ಜನವರಿ 2002 ರಿಂದ ವಿಧಿಸಿದ್ದ ಅಮಾನತು ತೆರವುಗೊಳಿಸಿಕೊಂಡು 23 ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲಿದೆ.

* ಜನವರಿ 2002ರ ಅಮಾನತನ್ನು ತೆರವುಗೊಳಿಸಿಕೊಂಡು 24 ರಿಂದ `ಟಿ~ ಗುಂಪಿನಲ್ಲಿ ಅತ್ರೆಯಾ ಪೆಟ್ರೊ ವಹಿವಾಟಾಗಲಿದೆ.

ವಾರದ ಪ್ರಶ್ನೆ

ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಶಿಫಾರಸು ಮಾಡಿದಂತಹ ಕಂಪೆನಿಗಳ ಷೇರುಗಳು, ಕಾರ್ಯಕ್ರಮ ಪ್ರಸಾರವಾದ ದಿನವೇ ಆಕರ್ಷಕ ಏರಿಕೆ ಪಡೆಯುತ್ತವೆ ನಂತರದ ದಿನದಲ್ಲಿ ಕುಸಿಯುತ್ತವೆ ಏಕೆ?

ಉತ್ತರ: ಟೆಲಿವಿಷನ್‌ನಲ್ಲಿ ಪ್ರಸಾರವಾಗುವ ಶಿಫಾರಸುಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದ ಸಣ್ಣ ಹೂಡಿಕೆದಾರರು ಆಸಕ್ತಿ ವಹಿಸಿ ಶಿಫಾರಸು ಮಾಡಿದ ದಿನ ಕೊಳ್ಳುವಿಕೆಯ ಒತ್ತಡದಿಂದ ಬೇಡಿಕೆ ಹೆಚ್ಚಾಗಿ ಆ ದಿನ ಷೇರಿನ ಬೆಲೆ ಗಗನಕ್ಕೆ ಚಿಮ್ಮುತ್ತದೆ. ಹಲವಾರು ಭಾರಿ ಇಂತಹ ಚಿಮ್ಮುವಿಕೆಯ ಸಂದರ್ಭವು ಲಾಭದ ನಗದೀಕರಣಕ್ಕೆ ಉತ್ತಮ ಅವಕಾಶವೂ ಆಗಿರುತ್ತದೆ. ಅಲ್ಪಕಾಲಕ್ಕೆ ಶೇ 4 ರಿಂದ 6ರ ಇಳುವರಿ ಬರುವುದು ಉತ್ತಮವಾಗಿದ್ದು ನಗದೀಕರಿಸಿಕೊಂಡ ನಗದು ಮುಂದಿನ ಶಿಫಾರಸಿನ ಮೇಲೆ ಹೂಡಿಕೆ ವಹಿವಾಟಿಗೆ ಉಪಯೋಗವಾಗುವುದು. ಅಂದರೆ ಹೊಸ ಶಿಫಾರಸಿನ ಕಾರಣ ಹಳೇ ಶಿಫಾರಸಿನ ಕಂಪೆನಿಯು ಕಡೆಗಣಿಸಲ್ಪಟ್ಟು ಬೆಲೆ ಕುಸಿತಕ್ಕೆ ಕಾರಣವಾಗುತ್ತದೆ.

ಹಿಂದೆ ರಿಲೈಯನ್ಸ್ ಪವರ್ ಕಂಪೆನಿಯು ರೂ. 430 ರಂತೆ ಸಾರ್ವಜನಿಕ ವಿತರಣೆ ಮಾಡಿದಾಗ ಸಣ್ಣ ಹೂಡಿಕೆದಾರರು ಹೆಚ್ಚಿನ ಷೇರುಗಳಿಗೆ ಅರ್ಜಿ ಸಲ್ಲಿಸುವ ಮೂಲಕ ಬೆಂಬಲಿಸಿದರು. ಆದರೆ ಕಂಪೆನಿಯು ಎಲ್ಲರಿಗೂ ಅಲ್ಪ ಪ್ರಮಾಣದಲ್ಲಿ, 17 ಷೇರಿನಂತೆ ಹೆಚ್ಚಿನವರಿಗೆ ನೀಡಿತು. ಈ ಅಲ್ಪ ಪ್ರಮಾಣದ ವಿತರಣೆಯು ಹೂಡಿಕೆದಾರರ ಜೇಬಿಗೆ ಬೀಳಬಹುದಾದ ಕತ್ತರಿಯ ಪ್ರಮಾಣವನ್ನು ಕಡಿತಗೊಳಿಸಿದ ಕಾರಣ ನಕಾರಾತ್ಮಕ ಪ್ರಭಾವ ಹೆಚ್ಚಾಗಲಿಲ್ಲ. ಅಂದರೆ ನಮ್ಮ ದೇಶದ ಅಪೂರ್ವ ಜನಸಂಪತ್ತು ಷೇರುಪೇಟೆ ಹೂಡಿಕೆಯಲ್ಲಿ ಆಸಕ್ತಿ ಬೆಳಸಿಕೊಂಡಲ್ಲಿ ಷೇರುಪೇಟೆ ಸ್ಥಿರತೆ ಕಾಣುವುದರಲ್ಲಿ ಸಂದೇಹವೇ ಇಲ್ಲ ಇದು ಒಂದು ರೀತಿಯ `ಷಾಕ್ ಅಬ್ಸಾರ‌್ವರ್~ ಎನ್ನಬಹುದು. ಹಾಗಾಗಿ ಜನಸಾಮಾನ್ಯರಿಗೂ ಆರ್ಥಿಕ ಅಕ್ಷರತೆಯ ಅರಿವು ಮೂಡಿಸಿ ಷೇರುಪೇಟೆ ಪ್ರವೇಶ ಮಾಡುವಂತೆ ಮಾಡಿದರೆ ಎಂತಹ ವಿತ್ತೀಯ ಸಂಸ್ಥೆಗಳ ಪ್ರಭಾವವೂ ಬಲವಾಗಿರದೆ ಸ್ಥಿರತೆ ಮೂಡುವುದು.

ಎಫ್‌ಎಂಸಿಜಿ ವಲಯದ ಪ್ರಮುಖ ಕಂಪೆನಿಗಳಾದ ಹಿಂದೂಸ್ಥಾನ್ ಯೂನಿಲಿವರ್, ಐಟಿಸಿ, ಕೊಲ್ಗೇಟ್ ಪಾಲ್ಮೊಲಿವ್ ಕಂಪೆನಿಗಳು ಷೇರುಪೇಟೆ ಸೂಚ್ಯಂಕಗಳು ತೋರಿದ ಏರಿಳಿತದ ವೇಗಕ್ಕೆ ಸ್ಪಂದಿಸುವುದಿಲ್ಲ. ಕಾರಣ ಇವುಗಳ ಮುಖ್ಯ ಗ್ರಾಹಕರು- ಜನಸಾಮಾನ್ಯರು. ಇವರ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸುವ ಉತ್ಪನ್ನಗಳಾದ್ದರಿಂದ ಕಂಪೆನಿಗಳ ಸಾಧನೆ ಸ್ಥಿರವಾಗಿರುತ್ತದೆ. ಹಾಗೂ ಇವುಗಳು ವಿತರಿಸುವ ಕಾರ್ಪೊರೇಟ್ ಫಲಗಳು ಪ್ರೋತ್ಸಾಹದಾಯಕವಾಗಿದ್ದು ಸಣ್ಣ ಹೂಡಿಕೆದಾರರು ಹೂಡಿಕೆಗೆ ಅಂಟಿಕೊಂಡಿರುವುದರಿಂದ ಬೆಲೆಗಳ ಬದಲಾವಣೆ ವೇಗವಾಗಿರುವುದಿಲ್ಲ. ಮುಖ್ಯವಾಗಿ ಬೇಡಿಕೆ ಪೂರೈಕೆಗಳೇ ಹೆಚ್ಚಿನ ಪ್ರಭಾವ ಬೀರುವ ಕಾರಣ ಸ್ಥಿರತೆಯ ಕೊರತೆ ಏರಿಳಿತಕ್ಕೆ ಕಾರಣವಾಗಿದೆ. ಅತೀವ ಅಸ್ಥಿರತೆಯನ್ನು ದೂರ ಮಾಡಬೇಕಾದರೆ ಹೂಡಿಕೆಗೆ ಯೋಗ್ಯವಾದ ಕಂಪೆನಿಗಳನ್ನು ಮೂಲಾಧಾರಿತ ಪೇಟೆಯಿಂದ ಬೇರ್ಪಡಿಸುವುದು ಉತ್ತಮ. ನಿಯಂತ್ರಕರಿಂದ ಇಂತಹ ಬದಲಾವಣೆ ಸಾಧ್ಯವೇ ನೋಡೋಣ!

98863-13380 

(ಮಧ್ಯಾಹ್ನ 4.30ರ ನಂತರ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry