ಮತ್ತೊಂದು ವಾಲ್ಮೀಕಿ ಕಥೆ

7

ಮತ್ತೊಂದು ವಾಲ್ಮೀಕಿ ಕಥೆ

ಗುರುರಾಜ ಕರ್ಜಗಿ
Published:
Updated:

ಮಗೆಲ್ಲ ಚಂಬಲ್ ಕಣಿವೆಯ ಬಗ್ಗೆ ಗೊತ್ತು. ಚಂಬಲ್‌ಕಣಿವೆ ಎಂದೊಡನೆ ಕಣ್ಣ ಮುಂದೆ ಬರುವ ಚಿತ್ರ ಅಲ್ಲಿಯ ಡಕಾಯಿತರದು.  ಅಲ್ಲಿ ನಡೆಯುವ ಕೊಲೆ, ಸುಲಿಗೆ, ಅತ್ಯಾಚಾರಗಳು, ಆ ಡಕಾಯಿತರೊಂದಿಗೆ ಕೈ ಮಿಲಾಯಿಸಿದ ರಾಜಕಾರಣಿಗಳು ಇವೆಲ್ಲ ಮನಃಪರದೆಯ ಮೇಲೆ ಸರಿದು ಹೋಗುತ್ತವೆ. ಈಗ ಅಲ್ಲೊಬ್ಬ ಗಾಂಧಿವಾದಿ ಬದಲಾವಣೆ ತರಲು, ಚಿತ್ರವನ್ನು ಬದಲಾಯಿಸಲು ಹೊರಟಿದ್ದಾರೆ.

ಅವರ ಹೆಸರು ಸುರೇಶಚಂದ್ರ ಸರ್ವೋದಯ. ಅವರಿಗೀಗ ಅರವತ್ತೆರಡು ವರ್ಷವಿರಬೇಕು. ಅವರೇನೂ ಅಂಥ ಭಾರಿ  ಆಳಲ್ಲ. ಮಾತೂ ಮೆದು ಆದರೆ ದೃಢ.  ಅವರೊಂದು ಗಾಂಧಿ  ಟೊಪ್ಪಿಗೆ ಹಾಕಿ ನಡೆದರೆ ಅಣ್ಣಾ ಹಜಾರೆಯವರ ಹಿಂಬಾಲಕರಿರಬೇಕು ಎನಿಸುತ್ತದೆ. ಈಗ ಅವರು ಚಂಬಲ್‌ಕಣಿವೆಯಲ್ಲಿ ಶಾಲೆಯೊಂದನ್ನು ಪ್ರಾರಂಭಮಾಡುವ ಉಮೇದಿಯಲ್ಲಿದ್ದಾರೆ. ಶಾಲೆ ಸಂಪೂರ್ಣ ಗಾಂಧೀಜಿಯವರ ಸ್ವಾವಲಂಬನೆಯ ಕಲ್ಪನೆಯ ಮೇಲೆ ನಿಲ್ಲುವಂಥದ್ದು.  ಅಲ್ಲಿ ಬರುವ ವಿದ್ಯಾರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲ.  ಯಾವ ವಯಸ್ಸಿನವರೂ ಸೇರಿಕೊಳ್ಳಬಹುದು.ಯಾರು ಹಿಂಸೆಯನ್ನು ತ್ಯಜಿಸಿ ಬದಲಾಗಬಯಸುತ್ತಾರೋ ಅವರಿಗೆಲ್ಲ ಶಿಕ್ಷಣ ಹಾಗೂ ದೈಹಿಕ ಕಸರತ್ತಿನ ಅವಕಾಶಗಳನ್ನು ಮಾಡಿಕೊಡುತ್ತದೆ ಈ ಶಾಲೆ.  ಹೀಗೆ ಚಾರಿತ್ರ್ಯದ ವ್ಯಕ್ತಿತ್ವ ನಿರ್ಮಾಣವಾದಾಗ ತರುಣರು ಹಿಂಸೆಯೆಡೆಗೆ ಮುಖಮಾಡಲಾರರು ಎಂಬ ನಂಬಿಕೆ ಸುರೇಶಚಂದ್ರ ಸರ್ವೋದಯರದು.  ಈಗಾಗಲೇ ಅನೇಕ ಶಿಕ್ಷಣ ತಜ್ಞರು. ಸಮಾಜವಾದಿಗಳು ಅವರೊಂದಿಗೆ ಕೈ ಜೋಡಿಸಲು ಮುಂದೆ ಬಂದಿದ್ದಾರೆ.

ಈಗ ಹೇಳುವ ಕಥೆ ಯಾರೋ ಆದರ್ಶವಾದಿಯ ಕಥೆಯಾಗಿದ್ದರೆ ಅಷ್ಟು ರೋಚಕವಾಗಿರುತ್ತಿರಲಿಲ್ಲ. ಸುರೇಶ ಅವರ ಜೀವನಗಾಥೆ ಅದ್ಭುತವಾದದ್ದು, ವಿಶೇಷವಾದದ್ದು. ಮಧ್ಯಪ್ರದೇಶದ ಅಂಚಿನಲ್ಲಿ ಉತ್ತರಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಿಶ್ವಕರ್ಮ ಮನೆತನದಲ್ಲಿ ಹುಟ್ಟಿದವರು ಸುರೇಶ. ಅವರ ತಂದೆ ನೌಕರಿ ಮಾಡುತ್ತಿದ್ದರು, ತಾಯಿ ಬಾಲಕಿಯರ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ, ಹುಟ್ಟಿನಿಂದಲೂ ಧಾರ್ಮಿಕ ಭಾವನೆಗಳೊಂದಿಗೆ, ಧರ್ಮ ಗ್ರಂಥಗಳ ಪಠಣದೊಂದಿಗೆ, ರಾಷ್ಟ್ರಭಕ್ತರ ಜೀವನ ಚರಿತ್ರೆಗಳನ್ನು ಓದುವುದರೊಂದಿಗೆ ನಂಟು ಬೆಳೆದಿತ್ತು. ಆತ ತನಗೆ ಮಾಡಬೇಕೆಂದಿದ್ದ ಬಾಲವಿವಾಹಕ್ಕೆ ನಕಾರ ಹೇಳಿದ್ದರು.ಹದಿನಾರನೇ ವಯಸ್ಸಿಗೆ  `ರಂಗದೇ ಬಸಂತಿ ಚೋಲಾ' ನಾಟಕದಲ್ಲಿ ತೋರಿಸಿದ ರೈಲು ಲೂಟಿಯ ಪ್ರಸಂಗದಿಂದ  ಪ್ರೇರೇಪಿತರಾಗಿ ಮೊದಲನೆ ದರೋಡೆ ಮಾಡಿದರು. ನಂತರ ಒಬ್ಬ ಹುಡುಗಿಯ ಮೇಲೆ ಶ್ರಿಮಂತನೊಬ್ಬ ಅತ್ಯಾಚಾರ ಮಾಡಿದ್ದನ್ನು ಕೇಳಿ ಅವನನ್ನು ಕೊಂದು ಹಾಕಿದರು.  ಆಮೇಲೆ ಅವರಿಗೆ ಖಚಿತವಾದದ್ದೇನೆಂದರೆ ಅನ್ಯಾಯವನ್ನು ತಡೆಗಟ್ಟಲು ಹಿಂಸೆ ಅನಿವಾರ್ಯ. ಇವರ ಶೌರ್ಯದ ಖ್ಯಾತಿ ಎಲ್ಲೆಡೆ ಪ್ರಸಾರವಾಗುತ್ತಿದ್ದಂತೆ ಇವರದೇ ಒಂದು ಗುಂಪು ಸಿದ್ಧವಾಯಿತು.  ಅನೇಕ ಕೊಲೆ, ಸುಲಿಗೆಗಳು ನಡೆದವು.

  ಆದರೆ ಈತ ಮಹಿಳೆಯರು ಮತ್ತು ಮಕ್ಕಳನ್ನು ಮಾತ್ರ ಮುಟ್ಟಲಿಲ್ಲ.  ಅವರ ಕೆಲಸ ಶ್ರಿಮಂತರನ್ನು ಲೂಟಿ ಮಾಡಿ ಸಂಪತ್ತನ್ನು ಬಡವರಿಗೆ ಹಂಚುವುದು.  ಆದರೆ, 1973 ರಲ್ಲಿ ಅವರ 21ನೇ ವಯಸ್ಸಿನಲ್ಲಿ ದರೋಡೆ ಮಾಡಿ ಓಡಿಹೋಗುವಾಗ ಪೋಲೀಸನೊಬ್ಬನ ಕೊಲೆ ಮಾಡಿ ಸಿಕ್ಕಿ ಹಾಕಿಕೊಂಡರು.  ಕೋರ್ಟು ಅವರ ಜಾಮೀನು ಅರ್ಜಿಯನ್ನು ನಿರಾಕರಿಸಿದಾಗ ಕಾನಪುರ ಜೈಲಿಗೆ ಕಳಿಸಿತು.  ಒಂದೂವರೆ ವರ್ಷದ ನಂತರ ಜೈಲಿನಿಂದ ತಪ್ಪಿಸಿಕೊಂಡು ಪರಾರಿಯಾದರು.  ಮತ್ತೆ ಚಂಬಲ್‌ಗೆ ಸೇರಿ ಅನಾಹುತಗಳ ಪರಂಪರೆ ನಡೆಯಿತು.

ಆದರೆ ಎರಡನೇ ಬಾರಿ ಸಿಕ್ಕಿಹಾಕಿಕೊಂಡಾಗ ಮಾತ್ರ ಇದೇ ನನ್ನ ಹಣೆಬರಹ ಎಂದುಕೊಂಡರು.  ಆಗ ಹಮೀದಪುರದ ಕಾಲೇಜಿನ ಪ್ರಾಂಶುಪಾಲರೊಬ್ಬರು ಕೈದಿಗಳಿಗೆ ಮಹಾತ್ಮಾ ಗಾಂಧೀಜಿ ಅವರ ಬಗ್ಗೆ ಮಾಡಿದ ಭಾಷಣ ಇವರ ಮನಸ್ಸನ್ನು ಹಿಡಿಯಿತು. ಗಾಂಧೀಜಿ ಅವರ ಪುಸ್ತಕಗಳನ್ನು ಓದುವುದು ಮಾತ್ರವಲ್ಲ ಇತರರಿಗೆ ಓದಿ ಹೇಳುವುದನ್ನು ಅಭ್ಯಾಸಮಾಡಿಕೊಂಡರು.  ಜೀವನವೇ ಬದಲಾಗಿ ಹೋಯಿತು. ತಮ್ಮ ಹೆಸರಿನೊಂದಿಗೆ ಸರ್ವೋದಯವನ್ನು ಸೇರಿಸಿ ಸುರೇಶಚಂದ್ರ ಸರ್ವೋದಯರಾದರು.

21 ವರ್ಷಗಳ ಜೈಲುವಾಸವನ್ನು ಮುಗಿಸಿ 1999 ಕ್ಕೆ ಹೊರಬಂದು ತಮ್ಮನ್ನು ಪೂರ್ತಿ  ಸಮಾಜಸೇವೆಗೆ ಅರ್ಪಿಸಿಕೊಂಡರು. ಗಾಂಧೀಜಿ ಅವರ ಕನಸುಗಳನ್ನು ತಮ್ಮ ಶಕ್ತಿಯ ಮಿತಿಯಲ್ಲಿ ನನಸಾಗಿಸುವುದು ಅವರ ಜೀವನೋದ್ದೇಶ. ಈಗ ಅವರು ಜನರ ಕಣ್ಮಣಿ, ಬದಲಾವಣೆಯ ಹರಿಕಾರ.  ಹಿಂದೆ ದರೋಡೆಕೋರರಾಗಿದ್ದ ವಾಲ್ಮೀಕಿ, ಮಹರ್ಷಿಯಾಗಿ ಬದಲಾದ ಕಥೆ ಕೇಳಿದ್ದೆವು.  ಗಾಂಧೀವಾದಿಯಾಗಿ ಬದಲಾದ ದರೋಡೆಕೋರ ಸುರೇಶಚಂದ್ರರ ಜೀವನ ಕೂಡ ಅದೇ ಮಾದರಿಯದ್ದು. (ಈ ಘಟನೆ ಕೊಡ ಮಾಡಿದವರು- ಐಐಎಂ ಕೊಲ್ಕತ್ತದಲ್ಲಿ ಪ್ರೊಫೆಸರ್ ಆಗಿರುವ ಡಾ. ಪಾಂಡುರಂಗ ಭಟ್ಟರ ಪತ್ನಿ ಶ್ರಿಮತಿ ಶೋಭಾಭಟ್ಟ ಅವರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry