ಮದ್ರಾಸ್‌ಗೆ ಪಯಣ

6

ಮದ್ರಾಸ್‌ಗೆ ಪಯಣ

ದ್ವಾರಕೀಶ್
Published:
Updated:

ನನ್ನ ವಿರುದ್ಧ ಟೀಕೆಗಳಿದ್ದಂತೆಯೇ, ಸಿನಿಮಾ ಮಾಡಲು ಮುಂದಾದಾಗ ವಿತರಕರು ಲಗ್ಗೆ ಇಡುತ್ತಿದ್ದ ಉದಾಹರಣೆಗಳೂ ಇವೆ. ಒಮ್ಮೆ ಎನ್.ಆರ್.ಕಾಲನಿಯ ನಮ್ಮ ಮನೆಗೆ ಯಾರೋ ಒಬ್ಬರು ಬಂದರು. ಅಂಬುಜಾ, `ಮೇಲೆ ಯಾರೋ ನಿಮಗಾಗಿ ಕಾಯುತ್ತಿದ್ದಾರೆ~ ಎಂದಳಷ್ಟೇ. ಯಾವುದೋ ಕೆಲಸದಲ್ಲಿ ಮುಳುಗಿದ್ದ ನಾನು, ಅದು ಮುಗಿದ ಮೇಲೆ ಮೇಲೆ ಕುಳಿತಿದ್ದ ವ್ಯಕ್ತಿಯ ವಿಚಾರವನ್ನೇ ಮರೆತೆ. ಕಾರಿನಲ್ಲಿ ಕಂಠೀರವ ಸ್ಟುಡಿಯೋಗೆ ಹೊರಟುಬಿಟ್ಟೆ.

 

ಆಮೇಲೆ ಅವರಿಗೆ ವಿಷಯ ತಿಳಿದು, ಆಟೊ ಮಾಡಿಕೊಂಡು ನಾನಿದ್ದಲ್ಲಿಗೆ ಬಂದರು. ಕೈಯಲ್ಲಿ ಬ್ರೀಫ್‌ಕೇಸ್ ಇತ್ತು. ನಾನು ಸಿದ್ಧಪಡಿಸುತ್ತಿದ್ದ ಚಿತ್ರದ ವಿತರಣೆಗೆಂದು ಐದು ಲಕ್ಷ ರೂಪಾಯಿ ಕೊಟ್ಟರು. ಆ ಕಾಲದಲ್ಲಿ ನಿಂತಲ್ಲಿಯೇ ವಿತರಣೆ ಬಯಸಿ ಹಣ ನೀಡುತ್ತಿದ್ದವರನ್ನು ನೆನಪಿಸಿಕೊಂಡರೆ ಈಗ ಅಚ್ಚರಿಯಾಗುತ್ತದೆ. ನಮ್ಮ ಸಿನಿಮಾಗಳಿಗೆ ಆ ಪರಿಯ ಬೇಡಿಕೆ ಇತ್ತು.ಕೆ.ಆರ್.ಜೀ ಎಂಬ ತಮಿಳಿನ ಹೆಸರಾಂತ ನಿರ್ಮಾಪಕರು `ವಂಶಜ್ಯೋತಿ~ ಎಂಬ ಚಿತ್ರ ತೆಗೆಯುತ್ತಿದ್ದರು. ಕಾರಣಾಂತರಗಳಿಂದ ಅದರ ಚಿತ್ರೀಕರಣ ಅರ್ಧಕ್ಕೇ ನಿಂತುಹೋಗಿತ್ತು.ಅವರು ನನ್ನ ಮನೆಗೆ ಬಂದು ಸಹಾಯ ಕೇಳಿದರು. ಕಲ್ಪನಾ, ವಿಷ್ಣುವರ್ಧನ್ ಸೇರಿದಂತೆ ಪ್ರಮುಖ ನಟ-ನಟಿಯರು ಅದರಲ್ಲಿ ಅಭಿನಯಿಸಿದ್ದರು. ಎ.ಭೀಮಸಿಂಗ್ ಚಿತ್ರದ ನಿರ್ದೇಶಕರು. ಅವರೆಲ್ಲರಿಗೆ ನಾನೇ ಫೋನ್ ಮಾಡಿದೆ.

 

ಸಂಭಾವನೆಯನ್ನು ಅರ್ಧದಷ್ಟು ಕಡಿಮೆ ಮಾಡಿಕೊಳ್ಳುವಂತೆ ವಿನಂತಿಸಿಕೊಂಡೆ. ಅವರೆಲ್ಲಾ ಒಪ್ಪಿದರು. ಮಾಂಡ್ರೆಯವರಿಗೆ ಫೋನ್ ಮಾಡಿ, ಸಿನಿಮಾ ವಿತರಣೆ ಮಾಡುವಂತೆ ಮನವೊಲಿಸಿದೆ. ಕೇವಲ ಒಂದು ಗಂಟೆಯಲ್ಲಿ ಆ ಸಮಸ್ಯೆ ಬಗೆಹರಿಯಿತು.

 

ಕೆ.ಆರ್.ಜೀ ಅವರಿಗೆ ಖುಷಿಯಾಯಿತು. ಒಂದು ತಿಂಗಳಲ್ಲೇ ಬಾಕಿ ಇದ್ದ ದೃಶ್ಯಗಳ ಚಿತ್ರೀಕರಣ ಮುಗಿದು, ಚಿತ್ರ ತೆರೆಕಂಡಿತು. ಬೆಂಗಳೂರಿನ ಡ್ರೈವ್-ಇನ್ ಚಿತ್ರಮಂದಿರದಲ್ಲಿ ಬಿಡುಗಡೆಯಾದ ಮೊದಲ ಕನ್ನಡ ಚಿತ್ರ `ವಂಶಜ್ಯೋತಿ~. ಅದು ಚೆನ್ನಾಗಿಯೇ ಓಡಿತು. ಕಲೆಕ್ಷನ್ ಕೂಡ ಉತ್ತಮವಾಗಿತ್ತು.*

ದೊಡ್ಡ ದೊಡ್ಡ ನಟರ ಜೊತೆ ಅಭಿನಯಿಸಿದ್ದ ನಾಯಕಿ ಉದಯಚಂದ್ರಿಕಾ ಒಮ್ಮೆ ನಮ್ಮ ಮನೆಗೆ ಬಂದರು. ತಮಗೆ ಅವಕಾಶಗಳೇ ಇಲ್ಲವಾಗಿದೆ ಎಂದು ನೊಂದುಕೊಂಡು, ಪಾತ್ರವೊಂದನ್ನು ನೀಡುವಂತೆ ಕೇಳಿಕೊಂಡರು. ಬಣ್ಣ ಹಚ್ಚಿ ಮೆರೆದ ಸುಂದರ ವದನದ ನಾಯಕಿಗೆ ಅಂಥ ಕಷ್ಟ ಬಂದಿತಲ್ಲ ಎಂದು ನನಗೆ ಸಂಕಟವಾಯಿತು. ವಿಷ್ಣುವರ್ಧನ್‌ಗೆ ತಕ್ಷಣ ಫೋನ್ ಮಾಡಿದೆ.`ಉದಯಚಂದ್ರಿಕಾ ಪರಿಸ್ಥಿತಿಯನ್ನು ವಿವರಿಸಿ, ಅವರಿಗಾಗಿಯೇ ಒಂದು ಸಿನಿಮಾ ಮಾಡೋಣ ಎಂದುಕೊಂಡಿದ್ದೇನೆ. ನೀನೇ ಅದರ ನಾಯಕ~ ಎಂದೆ. ಆಗೀಗ ಜಗಳವಾಡಿಕೊಳ್ಳುತ್ತಾ ಇದ್ದರೂ ವಿಷ್ಣು, ನಾನು ಮತ್ತೆ ಒಂದಾಗುತ್ತಿದ್ದ ಕಾಲವದು.

 

ನನ್ನ ಮಾತಿಗೆ ಆಗ ವಿಷ್ಣು ಎರಡನೆ ಮಾತೇ ಆಡುತ್ತಿರಲಿಲ್ಲ. `ನೀನು ಹೇಳಿದ ಮೇಲೆ ಮುಗಿಯಿತು~ ಎಂದು ಒಪ್ಪಿದ. ಅಂಜತಾ ರಾಜು ಎಂಬ ವಿತರಕರಿಗೆ ಫೋನ್ ಮಾಡಿ ಒಂದಿಷ್ಟು ಹಣಕಾಸಿನ ಸಹಾಯ ಮಾಡುವಂತೆ ಕೇಳಿದೆ.ನಾಲ್ಕು ಲಕ್ಷ ರೂಪಾಯಿಯನ್ನು ಅವರು ತಕ್ಷಣವೇ ಒದಗಿಸಲು ಮುಂದಾದರು. ನಿರ್ದೇಶಕನ ಸೀಟಿನ ಮೇಲೆ ಮತ್ತೆ ಭಾರ್ಗವನನ್ನೇ ಕೂರಿಸಿದೆ. `ಅಸಾಧ್ಯ ಅಳಿಯ~ ಸಿನಿಮಾ ಆದದ್ದು ಹೀಗೆ. ಕಷ್ಟದಲ್ಲಿದ್ದ ಉದಯಚಂದ್ರಿಕಾ ಅವರಿಗಾಗಿಯೇ ವಿಷ್ಣು ಕಾಲ್‌ಷೀಟ್ ಕೊಡಿಸಿದೆ.

 

ಆ ಸಿನಿಮಾ ಕೂಡ ಚೆನ್ನಾಗಿ ಓಡಿತು. ಇವನ್ನೆಲ್ಲಾ ನೆನಪಿಸಿಕೊಂಡಾಗ, ಚಿಟಿಕೆ ಹೊಡೆದಷ್ಟೇ ಸುಲಭವಾಗಿ ಆಗ ಕೆಲಸಗಳು ಆಗುತ್ತಿದ್ದವಲ್ಲ ಎನಿಸುತ್ತದೆ. ಈಗ ಪರಿಸ್ಥಿತಿ ಹಾಗಿಲ್ಲ.

*

ಬೆಂಗಳೂರಿನ ಅಲಂಕಾರ್ ಚಿತ್ರಮಂದಿರದ ಮಾಲೀಕ ಕೆ.ಸಿ.ದೇಸಾಯ್ ಅವರ `ಅಮ್ಮಿ ಫಿಲ್ಮ್ಸ್~ ಎಂಬ ಸಂಸ್ಥೆಯಿತ್ತು. ಅದರಲ್ಲಿದ್ದ ನಾಗರಾಜ್ ರಾವ್ ಎಂಬುವರು ಒಂದು ಸಿನಿಮಾ ಮಾಡಿಕೊಡಿ ಎಂದು ಪದೇಪದೇ ಕೇಳುತ್ತಿದ್ದರು. ಅದೇ ಸಂದರ್ಭದಲ್ಲಿ ಸಿಂಡಿಕೇಟ್ ಬ್ಯಾಂಕ್‌ನ ಎನ್.ಆರ್.ಕಾಲನಿ ಶಾಖೆಯ ವ್ಯವಸ್ಥಾಪಕರು ನನ್ನ ಮನೆಗೆ ಬಂದರು. ಅದು ವರ್ಷಾಂತ್ಯ.

 

ಹತ್ತು ಹದಿನೈದು ಲಕ್ಷ ರೂಪಾಯಿ ಠೇವಣಿ ಇಡುವಂತೆ ಅವರು ನನ್ನಲ್ಲಿ ಮನವಿ ಮಾಡಿಕೊಂಡರು. ತಕ್ಷಣ ನಾನು ನಾಗರಾಜ್ ರಾವ್ ಅವರಿಗೆ ಫೋನ್ ಮಾಡಿದೆ. ಒಂದೇ ತಾಸಿನಲ್ಲಿ ಆಟೊದಲ್ಲಿ ಬಂದು ಅವರು ಹತ್ತು ಲಕ್ಷ ರೂಪಾಯಿ ಠೇವಣಿಯನ್ನು ಬ್ಯಾಂಕ್‌ಗೆ ಕಟ್ಟಿದರು.ಮೂರು ತಿಂಗಳುಗಳ ನಂತರ ಆ ಹಣವನ್ನು ವಾಪಸ್ ಪಡೆಯುವಂತೆ ನಾನು ಕೇಳಿಕೊಂಡಾಗ ಅವರು, `ಸಿನಿಮಾ ಮಾಡಿಕೊಡಲೆಂದು ಆ ಹಣ ಕೊಟ್ಟಿರುವುದೇ ವಿನಾ ಸಾಲವಾಗಿ ಅಲ್ಲ~ ಎಂದರು. ಆಗ ನನ್ನ ಚಿತ್ರಗಳಿಗೆ ಅಷ್ಟು ಬೆಲೆಯಿತ್ತು.

*

`ನ್ಯಾಯ ಎಲ್ಲಿದೆ~ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ನನಗೆ ಕಾಟ ಕೊಡುವವರ ಆವುಟ ಜಾಸ್ತಿಯಾಯಿತು. ನನ್ನ ಮನೆಗೆ ಕಲ್ಲು ತೂರಿದರು. ಅಡುಗೆಯವನ ಮೇಲೆ ಹಲ್ಲೆ ಮಾಡಿದರು.ಮನಸ್ಸಿಗೆ ನೋವಾಯಿತು. ನನ್ನ ನಿರ್ಮಾಣ ಸಂಸ್ಥೆಯ `ಎಂಬ್ಲಂ~ನಲ್ಲೇ ಕರ್ನಾಟಕದ ನಕಾಶೆ ಇದೆ. ಈ ಮಣ್ಣನ್ನು ನಂಬಿದವ ನಾನು. `ಕನ್ನಡನಾಡು ಬಲು ಚೆನ್ನ, ಅಲ್ಲಿಗೆ ಹೋಗೋಣ ಬಾ~ ಎಂದು ಸಿಂಗಪೂರ್‌ನಲ್ಲಿ ಹಾಡು ಬರೆಸಿದ್ದವನು. ಹಾಗಿರುವಾಗ ನನ್ನ ಮಕ್ಕಳನ್ನು ಅಪಹರಿಸುವುದಾಗಿ ಬೆದರಿಕೆ ಹಾಕತೊಡಗಿದರು. ಒಬ್ಬ ಕಲಾವಿದ ಗೆದ್ದರೆ ಎಷ್ಟೊಂದು ತೊಂದರೆ ಎಂದು ನನಗೆ ಅನ್ನಿಸಿದ್ದೇ ಆಗ. ಆ ಕಷ್ಟಕೋಟಲೆಗಳ ನಡುವೆಯೂ `ನ್ಯಾಯ ಎಲ್ಲಿದೆ~ ಚಿತ್ರವನ್ನು ಮಾಡಿ ಮುಗಿಸಿದೆವು. ಆ ಚಿತ್ರಕ್ಕೆ ಶಂಕರ್‌ನಾಗ್ ನಾಯಕ. ಆಗ ಶಂಕರ್‌ನಾಗ್ ಬೇಡಿಕೆ ಕುಸಿದಿತ್ತು. ಮುಂಗಡ ಹಣ ನೀಡಿದ್ದ ಎಷ್ಟೋ ಜನ ಅವರ ಬಳಿ ಹೋಗಿ, `ನೀವು ನಟಿಸುವುದು ಬೇಡ, ನಿರ್ದೇಶನ ಮಾಡಿಕೊಡಿ~ ಎಂದು ಮಾತು ಬದಲಿಸತೊಡಗಿದ್ದರು.

 

ಆ ಕಾಲಘಟ್ಟದಲ್ಲಿ ಶಂಕರ್‌ನಾಗ್‌ಗೆ ಒಂದು ಬ್ರೇಕ್ ಕೊಡಲೇಬೇಕು ಎಂದು ಅನ್ನಿಸಿದ್ದರಿಂದ `ನ್ಯಾಯ ಎಲ್ಲಿದೆ~ ಚಿತ್ರದ ನಾಯಕನಾಗಿ ಅವನನ್ನು ಆಯ್ಕೆ ಮಾಡಿದೆ. ಹಿಂದೆ ಅವನ ಜೊತೆ ನಟಿಸಿದ್ದ ನಾಯಕಿಯರೇ ಬೇಡ ಎನ್ನಿಸಿ, ಆರತಿಯನ್ನು ನಾಯಕಿಯಾಗಿ ಮಾಡಿದೆ. ಆ ಚಿತ್ರ ಸೂಪರ್ ಡೂಪರ್ ಹಿಟ್. 25 ವಾರ ಓಡಿತು.ಒಂದು ಕಡೆ ಯಶಸ್ಸು, ಇನ್ನೊಂದು ಕಡೆ ಕಷ್ಟ. ನನ್ನ ಮನಸ್ಸಿನಲ್ಲಿ ತಳಮಳ ಶುರುವಾಯಿತು. ಬೆಂಗಳೂರಿನಲ್ಲಿ ಇರುವುದು ಸಾಧ್ಯವೇ ಇಲ್ಲ ಎಂಬಂಥ ವಾತಾವರಣ ಸೃಷ್ಟಿಯಾಯಿತು. ನಮ್ಮ ವೇದಪ್ರದಾ ಪಿಕ್ಚರ್ಸ್‌ ಕಚೇರಿಗೂ ದುಷ್ಕರ್ಮಿಗಳು ಕಲ್ಲು ತೂರಿದರು. ಪ್ರಭಾಕರ್ ರೆಡ್ಡಿಗೂ ಕಲ್ಲೇಟು ಬಿತ್ತು. ನನಗೆ ಇನ್ನು ಇಲ್ಲಿ ಇರುವುದರಲ್ಲಿ ಅರ್ಥವೇ ಇಲ್ಲವೆನ್ನಿಸಿತು. ಮದ್ರಾಸ್‌ಗೆ ಹೊರಡಲು ತೀರ್ಮಾನಿಸಿದೆ.ಕಟ್ಟಿಕೊಂಡಿದ್ದ ಕನಸುಗಳೆಲ್ಲಾ ಆಗ ಕಾಡತೊಡಗಿದವು. ಪ್ಯಾಲೇಸ್ ಆರ್ಚಡ್‌ನಲ್ಲೊಂದು ಮನೆ ಕೊಂಡಿದ್ದ ನಾನು ಮುಂದೆ ನನ್ನದೇ ಒಂದು ಸ್ಟುಡಿಯೋ ಕಟ್ಟುವ ಆಸೆ ಇಟ್ಟುಕೊಂಡಿದ್ದೆ. ಆಮೇಲೆ ಆ ಮನೆಯನ್ನು ಮಾರಿದ್ದು ಬೇರೆ ವಿಚಾರ.

 

ಚಾಮುಂಡೇಶ್ವರಿ ಸ್ಟುಡಿಯೋ ಮಾಲೀಕ ಕುಪ್ಪಸ್ವಾಮಿ, ಕಂಠೀರವ ಸ್ಟುಡಿಯೋ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಕರಿಬಸವಯ್ಯ ಮೊದಲಾದವರು ಬೆಂಗಳೂರು ಬಿಟ್ಟು ಹೋಗಬೇಡ ಎಂದು ಗಂಟೆಗಟ್ಟಲೆ ನನ್ನ ಮನವೊಲಿಸಲು ಯತ್ನಿಸಿದರು. ಮಾಂಡ್ರೆ ಅವರಿಗೂ ನಾನು ನಗರ ಬಿಡುವುದು ಇಷ್ಟವಿರಲಿಲ್ಲ. ಆದರೆ, ನಿರಂತರ ಉಪಟಳಗಳಿಂದ ಸಾಕಷ್ಟು ಕುಸಿದುಹೋಗಿದ್ದ ನನಗೆ ಮದ್ರಾಸ್‌ಗೆ ಹೋಗದೇ ಬೇರೆ ವಿಧಿಯೇ ಇರಲಿಲ್ಲ.1982ರ ಏಪ್ರಿಲ್‌ನಲ್ಲಿ ಮದ್ರಾಸ್ ಕಾರ್‌ನಲ್ಲೇ ನನ್ನ ಹೆಂಡತಿ ಮಕ್ಕಳ ಸಮೇತ ಮದ್ರಾಸ್‌ಗೆ ಹೊರಟೆ. ಅಲ್ಲಿ ನಾವು ಹೋದಾಗ ನೆಲೆ ಇರಲಿಲ್ಲ. ವುಡ್‌ಲ್ಯಾಂಡ್ಸ್ ಹೋಟೆಲ್‌ನಲ್ಲಿ ಒಂದು  ಕಾಟೇಜನ್ನು ಬಾಡಿಗೆಗೆ ಪಡೆದೆ. ಸಿನಿಮಾ ಧ್ಯಾನದಲ್ಲೇ ಇದ್ದ ನನ್ನನ್ನು ದುಷ್ಕರ್ಮಿಗಳು ನಿಜಕ್ಕೂ ಕರ್ನಾಟಕ ಬಿಟ್ಟು ಓಡಿಹೋಗುವಂತೆ ಮಾಡಿದ್ದರು. ಆರು ತಿಂಗಳು ನಾನು ಆ ಕಾಟೇಜ್‌ನಲ್ಲೇ ಸಂಸಾರ ನಡೆಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry