ಮದ್ರಾಸ್‌ನಲ್ಲಿ ದೊಡ್ಡವರ ಸಂಗ

7

ಮದ್ರಾಸ್‌ನಲ್ಲಿ ದೊಡ್ಡವರ ಸಂಗ

ದ್ವಾರಕೀಶ್
Published:
Updated:

1982 ನನ್ನ ಬದುಕಿನ ದೊಡ್ಡ ಬದಲಾವಣೆಯ ವರ್ಷ. ಹುಟ್ಟಿ, ಬೆಳೆದು, ಸಿನಿಮಾ ಮಾಡಿದ ನನ್ನ ನಾಡನ್ನು ಬಿಟ್ಟು ಮದ್ರಾಸ್‌ಗೆ ಹೋಗಬೇಕಾಯಿತಲ್ಲ ಎಂದು ನಾನು ಪದೇಪದೇ ಬೇಸರ ಪಟ್ಟುಕೊಂಡಿದ್ದೇನೆ. ಆದರೆ, ಆಗೆಲ್ಲಾ ನನ್ನ ಹೆಂಡತಿ ಅಂಬುಜಾ `ಅಲ್ಲಿಗೆ ಹೋಗದೇ ಇದ್ದಿದ್ದರೆ ತಮಿಳು, ಹಿಂದಿ ಚಿತ್ರಗಳನ್ನು ತೆಗೆಯುವ ಸಂದರ್ಭವೇ ಬರುತ್ತಿರಲಿಲ್ಲವೇನೋ~ ಎಂದು ಹೇಳುತ್ತಿರುತ್ತಾಳೆ. ದುಃಖ, ಸುಖ ಬದುಕಿನಲ್ಲಿ ಇದ್ದಿದ್ದೇ.

 

ಮೊದಲೇ ಹೇಳಿದಂತೆ ನಾನು ದೈವಭಕ್ತ. ಇದನ್ನು ಪುಷ್ಟೀಕರಿಸುವಂಥ ಒಂದು ಫ್ಲ್ಯಾಷ್‌ಬ್ಯಾಕ್ ಇದೆ. `ಪ್ರೀತಿ ಮಾಡು ತಮಾಷೆ ಮಾಡು~ ಚಿತ್ರದ ಪ್ರಿಂಟ್ ಬಂದಮೇಲೆ, ಅದನ್ನು ಪೂಜೆ ಮಾಡಿಸಲು ತಿರುಪತಿಗೆ ಹೋಗಬೇಕಾದ ಸಂದರ್ಭ ಬಂದಿತು. ಅದಕ್ಕೂ ಮೊದಲು ನಾನು ತಿರುಪತಿಗೆ ಹೋಗಿ ಹನ್ನೆರಡು ವರ್ಷಗಳೇ ಆಗಿದ್ದವು. ಆಗ ನನಗೆ ಅಲ್ಲಿ ಕಹಿ ಅನುಭವವಾಗಿತ್ತು. ಅಲ್ಲಿದ್ದ ಜನಸಂದಣಿ, ನೂಕುನುಗ್ಗಲು, ದೇವರನ್ನು ಸರಿಯಾಗಿ ನೋಡಲು ಆಗದ ಒತ್ತಡ ಕುಗ್ಗಿಸಿತ್ತು. `ಇನ್ನು ನಿನ್ನನ್ನು ನೋಡಲು ಇಲ್ಲಿಗೆ ಬರಲಾರೆ~ ಎಂದು ವೆಂಕಟೇಶ ದೇವರಿಗೇ ಹೇಳಿ ಬಂದಿದ್ದೆ. ಹಾಗೆ ದೇವರೊಟ್ಟಿಗೆ ಮಾತನಾಡುವುದು ನನ್ನ ಅಭ್ಯಾಸ. ಹುಬ್ಬಳ್ಳಿಯಲ್ಲಿ ಶ್ರೀನಿವಾಸ ಪಿಕ್ಚರ್ಸ್‌ ಮೂಲಕ ಚಿತ್ರಗಳನ್ನು ವಿತರಣೆ ಮಾಡುತ್ತಿದ್ದ ಬಾಬ್ಜಿ ಅದೇ ಶ್ರೀನಿವಾಸ ದೇವರ ಪರಮಭಕ್ತ.`ಪ್ರೀತಿ ಮಾಡು ತಮಾಷೆ ನೋಡು~ ಪ್ರಿಂಟ್ ಪೂಜೆ ಅಲ್ಲಿಯೇ ಆಗಬೇಕೆಂದು ಅವರು ಪಟ್ಟು ಹಿಡಿದರು. ಹಾಗಾಗಿ ನಾನು ಬರುವುದಿಲ್ಲ ಎಂದು ಹಿಂದೆ ಹೇಳಿ ಬಂದಿದ್ದ ದೇವರನ್ನೇ ಮತ್ತೆ ನೋಡಬೇಕಾದ ಅನಿವಾರ್ಯ ಸೃಷ್ಟಿಯಾಯಿತು. ಹತ್ತು ವರ್ಷದ ಹಿಂದೆ ಆಗಿದ್ದ ಕಹಿ ಅನುಭವವನ್ನು ಅವರಿಗೆ ಹೇಳುತ್ತಾ ಇದ್ದೆ. ಆಗ ಸಂಜೆ 4.30ರ ಸಮಯ. ನನ್ನ ಸಹೋದರ ಸಂಬಂಧಿಯ ಜೊತೆ ಒಬ್ಬರು ಬಂದರು. ಅವರು ತಿರುಪತಿಯಲ್ಲಿ ಟೈರ್ ಡೀಲರ್ ಆಗಿದ್ದರು. ವೆಂಕಟೇಶ ದೇವರ ದರ್ಶನವನ್ನು ಅಚ್ಚುಕಟ್ಟಾಗಿ ಮಾಡಿಸುವ ಭರವಸೆಯನ್ನು ಅವರು ಕೊಟ್ಟರು. ಬಾಬ್ಜಿ ಒತ್ತಾಯ ಹಾಗೂ ಅವರು ನೀಡಿದ ಭರವಸೆ ಮತ್ತೆ ತಿರುಪತಿಗೆ ಹೋಗಲು ಪ್ರೇರೇಪಿಸಿದವು.ತಿರುಪತಿ ತಲುಪಿದಾಗ ರಾತ್ರಿ 9 ಗಂಟೆ. ವಿ.ವಿ.ಐ.ಪಿಗಳನ್ನು ಕರೆದುಕೊಂಡು ಹೋಗುವಂತೆ ರಾತ್ರಿ 11.30ರ ಸುಮಾರಿಗೆ ನಮ್ಮನ್ನು ವೆಂಕಟೇಶ ದೇವರ ಮುಂದೆ ಕರೆದುಕೊಂಡು ಹೋಗಿ ನಿಲ್ಲಿಸಿದರು. ಎಷ್ಟು ಹೊತ್ತು ಬೇಕೋ ಅಷ್ಟೂ ಹೊತ್ತು ದೇವರನ್ನು ಕಣ್ತುಂಬಿಕೊಳ್ಳುವಂತೆ ಹೇಳಿದರು. ವೆಂಕಟೇಶ ದೇವರ ಜೊತೆ ನಾನು ತುಂಬಾ ಹೊತ್ತು ಮಾತನಾಡಿದೆ. ದೇವರು ಕೂಡ ನನ್ನೊಟ್ಟಿಗೆ ಮಾತನಾಡುತ್ತಿದ್ದಾರೆ ಎನ್ನುವ ಭಾವ.ಆಗ ನನ್ನ ಹಾಗೂ ವೆಂಕಟೇಶ ದೇವರ ನಡುವೆ ನಡೆದ ಮಾತುಕತೆ ಇನ್ನೂ ಮನಸ್ಸಿನಲ್ಲಿ ಹಸಿರಾಗಿಯೇ ಇದೆ. ಭಕ್ತಿಯಿಂದ ನಾನು ಪ್ರಾರ್ಥಿಸಿದ ಮೇಲೆ ಅಲ್ಲಿದ್ದ ಪ್ರಧಾನ ಅರ್ಚಕರು ಮತ್ತಿತರರು ಕರೆದರು. ತಿರುಪತಿಯಲ್ಲಿ ಪ್ರತಿದಿನ ರಾತ್ರಿ ಹನ್ನೆರಡು ಗಂಟೆಗೆ ಆ ದಿನ ಬಂದ ಹಣಕಾಸನ್ನೆಲ್ಲಾ ಲೆಕ್ಕ ಹಾಕುತ್ತಾರೆ. ಕೊನೆಯಲ್ಲಿ ಒಬ್ಬರಿಂದ ಆ ಲೆಕ್ಕಕ್ಕೆ ಸಾಕ್ಷಿಯಾಗಿ ಸಹಿ ಹಾಕಿಸಿಕೊಳ್ಳುತ್ತಾರೆ. ಆ ದಿನ ಸಹಿ ಹಾಕುವ ಅವಕಾಶ ನನಗೆ ಒದಗಿಬಂದಿತ್ತು. ನನಗೋ ಪರಮಾಶ್ಚರ್ಯ. ಅರ್ಚಕರು ಹೇಳಿದರು:`ದೇವರ ಆಸ್ತಿಗೆ ಗ್ಯಾರಂಟಿಯಾಗಿ ಸಹಿ ಹಾಕುವ ಅವಕಾಶ ನಿಮಗೆ ಬಂದಿದೆ. ನಿಮ್ಮ ಆಸ್ತಿಗೆ ಆ ದೇವರೇ ಗ್ಯಾರಂಟಿ. ಮನಸ್ಸಿನಲ್ಲಿ ಧ್ಯಾನ ಮಾಡಿಕೊಳ್ಳುತ್ತಾ, ನಿಮ್ಮ ಆಸ್ತಿಗೆ ಆ ದೇವರು ಗ್ಯಾರಂಟಿಯಾಗಬೇಕು ಎಂದು ವಿನಂತಿಸಿಕೊಳ್ಳಿ. ಆಮೇಲೆ ಸಹಿ ಹಾಕಿ.ಒಳ್ಳೆಯದಾಗುತ್ತೆ~. ನಾನು ಬರುವುದೇ ಇಲ್ಲವೆಂದು ಹೇಳಿದ ವೆಂಕಟೇಶ ದೇವರು ಅಷ್ಟು ವರ್ಷಗಳ ನಂತರ ಕರೆಸಿಕೊಂಡು, ಸಹಿ ಮಾಡಿಸಿಕೊಂಡರಲ್ಲ ಎನ್ನಿಸಿತು. ನನ್ನ ಆಸ್ತಿಯೆಲ್ಲಾ ಆ ದೇವರಿಗೇ ಮೀಸಲು ಎಂದು ಮನಸ್ಸಿನಲ್ಲೇ ಅಂದುಕೊಂಡೆ. ಅದು ಮನಸ್ಸು ಹಾಗೂ ದೇವರ ನಡುವೆ ಆಗ ಆದ `ಅಧ್ಯಾತ್ಮಿಕ ಅಗ್ರಿಮೆಂಟ್~.

ಆ ದೇವರ ದರ್ಶನ ಮಾಡಿಬಂದ ಮೇಲೆ ನನಗೆ ಒಳ್ಳೆಯದೇನೋ ಆಯಿತು. ಆಮೇಲೆ ಕಷ್ಟಗಳು ಸೃಷ್ಟಿಯಾಗಿ ಬೆಂಗಳೂರು ಬಿಟ್ಟು ಮದ್ರಾಸ್‌ಗೆ ಹೋದದ್ದನ್ನು ಆಗಲೇ ಹೇಳಿದ್ದೇನೆ. ಬೆಂಗಳೂರಿನಲ್ಲಿ ಇದ್ದ ಎನ್.ಆರ್.ಕಾಲನಿಯ ಮನೆ, ಪ್ಯಾಲೆಸ್ ಆರ್ಚರ್ಡ್ ಮನೆ, ರಾಗಿಗುಡ್ಡದಲ್ಲಿದ್ದ ಒಂದು ನಿವೇಶನ, ಕೋರಮಂಗಲದ ಇನ್ನೊಂದು ಮನೆ ಎಲ್ಲವನ್ನೂ ಬಿಟ್ಟು ಮದ್ರಾಸ್‌ನ ಒಂದು ಕಾಟೇಜ್‌ನಲ್ಲಿ ಆರು ತಿಂಗಳು ಸಂಸಾರ ಹೂಡಿದೆ.`ಪ್ರೇಮಮಯಿ~, `ಜನ್ಮ ರಹಸ್ಯ~, `ಬಹದ್ದೂರ್ ಗಂಡು~, `ಕರುಳಿನ ಕರೆ~, `ನಕ್ಕರದೇ ಸ್ವರ್ಗ~ ಮೊದಲಾದ ಸಿನಿಮಾಗಳ ಮೇಲೆ ಹಣ ಹೂಡಿ ಗೆದ್ದಿದ್ದ `ಶ್ರೀಕಾಂತ್ ಅಂಡ್ ಶ್ರೀಕಾಂತ್~ ಎಂಬ ಕಂಪೆನಿಯ ವ್ಯವಸ್ಥಾಪಕ ರಾಮದೊರೈ. ಅವರು ಸಣ್ಣ ಡೈರಿ ಇಟ್ಟುಕೊಂಡು, ಕೊಟ್ಟ ಹಣದ ಲೆಕ್ಕ ಬರೆದುಕೊಳ್ಳುತ್ತಾ ಚುರುಕಾಗಿ ಕೆಲಸ ಮಾಡುತ್ತಿದ್ದರು. ಅಂಥ ಒಬ್ಬ ಪ್ರೊಡಕ್ಷನ್ ಮ್ಯಾನೇಜರ್ ನನಗೂ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅನೇಕ ಸಲ ಅನ್ನಿಸಿತ್ತು.

 

ಮುಂದೆ `ಶ್ರೀಕಾಂತ್ ಅಂಡ್ ಶ್ರೀಕಾಂತ್~ ಕಂಪೆನಿ ಮುಚ್ಚುವ ಪರಿಸ್ಥಿತಿ ನಿರ್ಮಾಣವಾಯಿತು. ಆಗ ರಾಮದೊರೈ ನನ್ನ ಕಂಪೆನಿಗೆ ಬಂದರು. `ಗುರು ಶಿಷ್ಯರು~ ಸಿನಿಮಾ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಜೊತೆಯಾದರು. ನನಗೆ ಆಗ ತುಂಬಾ ಸಂತೋಷ. ನನ್ನ ಜವಾಬ್ದಾರಿಯನ್ನು ಅವರು ಕಡಿಮೆ ಮಾಡಿದರು. ನಾನು ಮದ್ರಾಸ್‌ಗೆ ಹೋಗುವ ಸಂದರ್ಭ ಬಂದಾಗ ಬೆಂಬಲಿಸಿದವರೂ ಅವರೇ. `ಅಲ್ಲಿ ಒಳ್ಳೆಯ ಚಿತ್ರಗಳನ್ನು ಮಾಡೋಣ, ಬನ್ನಿ~ ಎಂದು ಹುರಿದುಂಬಿಸಿದರು. ಅವರೂ ತಮಿಳುನಾಡಿನವರೇ ಆಗಿದ್ದರಿಂದ ಸ್ವಲ್ಪ ಧೈರ್ಯ ಬಂತು.ಮದ್ರಾಸ್‌ಗೆ ಹೋದಮೇಲೆ ಒಂದು ಫೋನ್ ಬಂತು. ಆ ಧ್ವನಿ ಮೊದಲು ಹೇಳಿದ್ದು: `ವೆಲ್‌ಕಂ ಟು ಮದ್ರಾಸ್. ಇಲ್ಲಿ ಒಳ್ಳೊಳ್ಳೆಯ ಸಿನಿಮಾ ಮಾಡಿ. ಒಳ್ಳೆಯದಾಗಲಿ~. ಆ ಧ್ವನಿ ಜಿ.ವೆಂಕಟೇಶ್ವರನ್ ಅವರದ್ದು. ಅವರು ಅಲ್ಲಿ ಆಗ ನಂಬರ್ ಒನ್ ವಿತರಕ. `ಜೀವಿ~ ಎಂದೇ ಹೆಸರಾದ ಅವರು ಮಣಿರತ್ನಂ ಸಹೋದರ. ಜಿ.ವಿ.ಫಿಲ್ಮ್ಸ್ ಇಂದಿಗೂ ಇದೆ.ಚಿತ್ರರಂಗದಲ್ಲಿ ಅವರದ್ದು ಮರೆಯಲಾಗದ ಹೆಸರು. ಅಂಥ ಜೀವಿ ನನ್ನ ಒಡನಾಡಿ. ಮದ್ರಾಸ್‌ಗೆ ನನ್ನನ್ನು ಸುಮ್ಮನೆ ಔಪಚಾರಿಕವಾಗಿಯಷ್ಟೇ ಅವರು ಸ್ವಾಗತಿಸಲಿಲ್ಲ; ಕಮಲ ಹಾಸನ್ ಅವರನ್ನು ಹಾಕಿಕೊಂಡು ಒಂದು ಸಿನಿಮಾ ಯಾಕೆ ಮಾಡಬಾರದು ಎಂದು ಸಲಹೆ ಕೊಟ್ಟರು.ಕಮಲಹಾಸನ್ ಆಗ ಎ.ವಿ.ಎಂ ಕಂಪೆನಿಯ `ಸಕಲಕಲಾವಲ್ಲಭನ್~ ಸಿನಿಮಾ ಮಾಡುತ್ತಿದ್ದರು. ಜೀವಿ ಅವರಲ್ಲಿಗೆ ಕರೆದುಕೊಂಡು ಹೋದರು. ರಾತ್ರಿ 8 ಗಂಟೆಯ ಸಮಯ. ಚಿತ್ರೀಕರಣ ನಡೆಯುತ್ತಿತ್ತು. ಸಿಲ್ಕ್‌ಸ್ಮಿತಾ ಹಾಗೂ ಕಮಲ ಹಾಸನ್ ನೃತ್ಯದ ಸನ್ನಿವೇಶ ಅದು. ಒಂದು ಶಾಟ್ ಚಿತ್ರೀಕರಣ ಮುಗಿಯುವವರೆಗೂ ನಾವು ಕಾಯುತ್ತಾ ಕುಳಿತೆವು. ಜೀವಿ ಅವರಿಗೆ ಕಮಲ ಹಾಸನ್ ಆಪ್ತರಾಗಿದ್ದರು. ಹಾಗಾಗಿ ಅವರನ್ನು ಭೇಟಿ ಮಾಡುವುದು ಕಷ್ಟವೇನೂ ಆಗಲಿಲ್ಲ. ಶಾಟ್ ಓಕೆ ಆದಮೇಲೆ ಅವರು ನಮ್ಮ ಬಳಿಗೆ ಬಂದರು. ಉಭಯಕುಶಲೋಪರಿ ಆಯಿತು. ಆಮೇಲೆ ಚಿತ್ರರಂಗದ ಕೆಲವು ವಿಷಯಗಳ ಸುತ್ತ ಮಾತು ಗಿರಕಿ ಹೊಡೆಯಿತು. ಅವರನ್ನು ಹಾಕಿಕೊಂಡು ಸಿನಿಮಾ ಮಾಡುವ ಪ್ರಸ್ತಾವನೆ ಇಟ್ಟದ್ದೂ ಆಯಿತು. ಆದರೆ, ಅವರ ಡೇಟ್ಸ್ ತಕ್ಷಣಕ್ಕೆ ಸಿಗುವಂತಿರಲಿಲ್ಲ.ಕೊನೆಗೆ ಅವರು `ನಿಮ್ಮ ನಾಡಿನಿಂದಲೇ ಬಂದು ಇಲ್ಲಿ ಯಶಸ್ಸಿನ ಪತಾಕೆ ಹಾರಿಸುತ್ತಿರುವ ರಜನೀಕಾಂತ್ ಅವರನ್ನೇ ಹಾಕಿಕೊಂಡು ಸಿನಿಮಾ ಮಾಡಬಹುದಲ್ಲ~ ಎಂದು ಸಲಹೆ ಕೊಟ್ಟರು. ಅವರ ಸಲಹೆ ನನಗೂ ಇಷ್ಟವಾಯಿತು. ರಜನೀಕಾಂತ್ ಅವರನ್ನು ಭೇಟಿ ಮಾಡಬೇಕೆಂದು ನಿರ್ಧರಿಸಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry