ಮಂಗಳವಾರ, ಮೇ 24, 2022
30 °C

ಮನದೊಳಗೆ ಕಂಡ ಕನಸಿನ ತಂಡ

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಮನದೊಳಗೆ ಈ ಬಾರಿಯ ವಿಶ್ವಕಪ್ ಆಲೋಚನೆ ಬಲಗೊಂಡ ಕ್ಷಣವದು. ಅಪಾರ ಕ್ರಿಕೆಟ್ ಪ್ರೀತಿಯುಳ್ಳ ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಮತ್ತು ನಾನು ಒಟ್ಟಿಗೆ ಕುಳಿತು ಚರ್ಚೆ ನಡೆಸಿದ್ದೆವು. ಆಗಲೇ ಸಾರ್ವಕಾಲಿಕ ಏಕದಿನ ಕ್ರಿಕೆಟ್ ತಂಡವೊಂದಕ್ಕೆ ಹನ್ನೊಂದು ಆಟಗಾರರ ಪಟ್ಟಿ ಮಾಡುವ ಉತ್ಸಾಹ ಮೊಳಕೆಯೊಡೆದಿತ್ತು. ಏಕದಿನ ಆಟವು ಹುಟ್ಟುವ ಮುನ್ನವೇ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದವರನ್ನು ಬದಿಗಿಟ್ಟು ಬಾಕಿ ಆಟಗಾರರನ್ನು ತೂಗುತಟ್ಟೆಯಲ್ಲಿ ಇಟ್ಟು ನೋಡಲು ಮುಂದಾಗಿದ್ದೆವು. ಆಗ ಕನಸಿನ ತಂಡವೊಂದು ರೂಪ ತಳೆದು ನಿಂತಿತು. ಬ್ಯಾಟಿಂಗ್ ಕ್ರಮಾಂಕವನ್ನು ಕೂಡ ನಿರ್ಧರಿಸಿ ಅದರಂತೆ ಹನ್ನೊಂದು ಆಟಗಾರರ ಪಟ್ಟಿಯನ್ನು ಬರೆದಿಟ್ಟದ್ದೂ ಆಯಿತು. ಈ ‘ಡ್ರೀಮ್ ಟೀಮ್’ ಪಟ್ಟಿಯಲ್ಲಿ ಇದ್ದದ್ದು: 1.ಸೌರವ್ ಗಂಗೂಲಿ, 2. ಸಚಿನ್ ತೆಂಡೂಲ್ಕರ್, 3. ವೀರೇಂದ್ರ ಸೆಹ್ವಾಗ್, 4. ಮೊಹಮ್ಮದ್ ಅಜರುದ್ದೀನ್, 5. ಯುವರಾಜ್ ಸಿಂಗ್, 6. ಮಹೇಂದ್ರ ಸಿಂಗ್ ದೋನಿ,         7. ಕಪಿಲ್ ದೇವ್, 8. ಹರಭಜನ್ ಸಿಂಗ್,    9. ಅನಿಲ್ ಕುಂಬ್ಳೆ, 10. ಜಾವಗಲ್ ಶ್ರೀನಾಥ್, 11. ಜಹೀರ್ ಖಾನ್.ಸಚಿನ್, ಸೌರವ್, ಕಪಿಲ್, ಕುಂಬ್ಳೆ ಹಾಗೂ ದೋನಿ ಹೆಸರು ಸೇರಿಸಿದ್ದಕ್ಕೆ ಆಕ್ಷೇಪದ ಧ್ವನಿ ಏಳುವುದಿಲ್ಲ, ಈ ಬಗ್ಗೆ ಯಾರೂ ಪ್ರಶ್ನೆ ಹಾಕುವುದೂ ಇಲ್ಲ. ಆದರೆ 1983ರ ವಿಶ್ವಕಪ್ ವಿಜಯದ ಸಾಧನೆಯ ಪ್ರಭಾವಳಿಯಲ್ಲಿ ಪ್ರಕಾಶಮಾನವಾಗಿರುವ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಕೃಷ್ಣಮಾಚಾರಿ ಶ್ರೀಕಾಂತ್ ಮತ್ತು ವೇಗದ ಬೌಲಿಂಗ್ ಜೊತೆ ಆಲ್‌ರೌಂಡರ್ ಸಾಮರ್ಥ್ಯದ ಹೊಳಪುಳ್ಳ ಮೊಹಿಂದರ್ ಅಮರ್‌ನಾಥ್ ಹಾಗೂ ರೋಜರ್ ಬಿನ್ನಿ ಪರವಾಗಿ ವಾದ ಬಲಗೊಳ್ಳುವುದಂತೂ ಸಾಧ್ಯ. 1985ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ‘ವರ್ಲ್ಡ್ ಚಾಂಪಿಯನ್‌ಷಿಪ್ ಆಫ್ ಕ್ರಿಕೆಟ್’ ನೆನಪನ್ನು ಮನದಲ್ಲಿ ಗಟ್ಟಿಯಾಗಿಸಿಕೊಂಡವರು ಖಂಡಿತವಾಗಿ ಇಬ್ಬರ ಹೆಸರನ್ನು ಸ್ಪಷ್ಟವಾಗಿ ಹೇಳುತ್ತಾರೆ. ರವಿಶಾಸ್ತ್ರಿ ಮತ್ತು ಲಕ್ಷ್ಮಣ್ ಶಿವರಾಮಕೃಷ್ಣನ್ ಅವರೇ ಆ ಹೀರೊಗಳು. ಅದೇ ರೀತಿಯಲ್ಲಿ ಅಜರ್ ಬದಲಿಗೆ ರಾಹುಲ್ ದ್ರಾವಿಡ್‌ಗೆ ಆದ್ಯತೆ ನೀಡುವುದೂ ಅಚ್ಚರಿಯಲ್ಲ. ಶ್ರೀನಾಥ್ ಬದಲು ಮನೋಜ್ ಪ್ರಭಾಕರ್ ಕೂಡ ತಂಡದ ಭಾಗ ಆಗಬಹುದು.ಕಲ್ಪನೆಯ ಲೋಕದಲ್ಲಿ ಹೀಗೆ ಕನಸಿನ ತಂಡಗಳ ಕಟ್ಟುವುದು ನಿರಂತರವಾಗಿದೆ. ಆದರೆ ನಾನಿಲ್ಲಿ ಹೊಂದಿಸಿದ ಆಟಗಾರರ ಹೊರತು ಭಾರತದ ಏಕದಿನ ಕ್ರಿಕೆಟ್ ಪಡೆಯನ್ನು ಕಾಗದದ ಮೇಲೆ ಇಳಿಸಿಡುವುದು ಕಷ್ಟ. ಏಕದಿನ ಕ್ರಿಕೆಟ್ ಆರಂಭದ ಮೊದಲು ಆಡಿದವರನ್ನು ಇದರಿಂದ ಹೊರಗೆ ಇಡುವುದು ಅಗತ್ಯವೂ ಎನಿಸುತ್ತದೆ. ಹಿಂದೆಯೂ ಅನೇಕ ಆಕ್ರಮಣಕಾರಿ ಬ್ಯಾಟ್ಸ್‌ಮನ್‌ಗಳಿದ್ದರು, ಎದುರಾಳಿ ಬ್ಯಾಟ್ಸ್‌ಮನ್‌ಗಳು ಚಡಪಡಿಸುವಂತೆ ಬಿಗುವಿನ ಬೌಲಿಂಗ್ ಮಾಡುತ್ತಿದ್ದವರಿಗೂ ಕೊರತೆ ಇರಲಿಲ್ಲ. ಆಕರ್ಷಕ ಕ್ಷೇತ್ರರಕ್ಷಣೆಯ ಸಾಮರ್ಥ್ಯ ತೋರಿಸಿದವರೂ ಇದ್ದರು. ಹಾಗಾದರೆ ಅಂಥ ಹಳಬರನ್ನೊಳಗೊಂಡ ಕಲ್ಪನೆ ತಂಡವೊಂದು ಹೇಗಿರುತ್ತದೆ?ನಾನು ಪೆನ್ಸಿಲ್‌ನಿಂದ ಮೊದಲು ಕಾಗದದ ಮೇಲೆ ಬರೆದಿಡುವುದು ಸಯ್ಯದ್ ಮುಷ್ತಾಕ್ ಅಲಿ ಹೆಸರನ್ನು. ವೀರೇಂದ್ರ ಸೆಹ್ವಾಗ್ ರೀತಿಯಲ್ಲಿ ಅವರೂ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಬಲ್ಲವರಾಗಿದ್ದರು. ಜೊತೆಗೆ ಪ್ರಯೋಜನಕಾರಿ ಆಗುವಂಥ ಸಾಂದರ್ಭಿಕ ಬೌಲರ್ ಕೂಡ ಆಗಿದ್ದರು. ಹೋಲಿಕೆ ಇಲ್ಲದಂಥ ಕ್ಷೇತ್ರರಕ್ಷಣೆಯ ಸಾಮರ್ಥ್ಯವೂ ಇತ್ತು. ಅವರಿಗೆ ಆರಂಭಿಕ ಜೊತೆಗಾರ ಆಗುವುದು ಬುಧಿ ಕುಂದರನ್. ರನ್ ಗಳಿಕೆಯ ವೇಗವೂ ಅಪಾರವೆನ್ನುವುದು ಕಟ್ಟಿದ ಗಂಟಿನಷ್ಟೇ ಸತ್ಯ. (1960ರ ದಶಕದಲ್ಲಿ ಇವರ ವಿರುದ್ಧ ಆಡಿದ್ದ ಇಂಗ್ಲೆಂಡ್ ಬೌಲರ್‌ಗಳಿಗೆ ಈ ಅಂಶ ಚೆನ್ನಾಗಿ ಗೊತ್ತು). ವಿಕೆಟ್ ಕೀಪರ್ ಆಗಿಯೂ ತಂಡಕ್ಕೆ ಬಲ ನೀಡಿದ್ದವರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಸ್ಥಾನದಲ್ಲಿ ನಿಲ್ಲುವುದು ಮನ್ಸೂರ್ ಅಲಿ ಖಾನ್ ಪಟೌಡಿ. ತಮ್ಮ ಮೊದಲ ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯದ ನಂತರ ಕಾರು ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡಿದ್ದು ದುರದೃಷ್ಟ. ಎರಡು ಕಣ್ಣುಗಳು ಸುರಕ್ಷಿತವಾಗಿದ್ದರೆ ಬ್ರಾಡ್ಮನ್‌ಗೆ ಸಮನಾದ ಬ್ಯಾಟಿಂಗ್ ಸಾಮರ್ಥ್ಯ ತೋರುವುದರಲ್ಲಿ ಅನುಮಾನ ಇರಲಿಲ್ಲ. ಆದರೆ ಒಂದು ಕಣ್ಣಿನ ಕೊರತೆಯ ನಡುವೆಯೂ ಅದ್ಭುತ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಜೊತೆಗೆ ಕ್ಷೇತ್ರದ ಮೊದಲ ವೃತ್ತದಾಚೆಗೆ ಚುರುಕಾಗಿ ಫೀಲ್ಡಿಂಗ್ ಮಾಡಿದ್ದನ್ನು ಮರೆಯುವಂತಿಲ್ಲ.ಅತ್ಯಂತ ಮಹತ್ವದ ಸ್ಥಾನವೆನಿಸಿದ ನಾಲ್ಕನೇ ಕ್ರಮಾಂಕದಲ್ಲಿ ಪಾಲಿ ಉಮ್ರಿಗರ್ ಸೂಕ್ತ. ಮುಂಬೈನಿಂದ ಮೂಡಿಬಂದ ಎಲ್ಲ ಬ್ಯಾಟ್ಸ್‌ಮನ್‌ಗಳಿಗೆ ಅವರ ಹೋಲಿಕೆಯಿದೆ. ವಿಭಿನ್ನವಾದ ಪರಿಸ್ಥಿತಿಯಲ್ಲಿ ಹೊಂದಿಕೊಂಡು ಆಡುವುದನ್ನು ಅರಿತಿದ್ದ ಬ್ಯಾಟ್ಸ್‌ಮನ್. ಪಂದ್ಯದ ಪರಿಸ್ಥಿತಿ ಹಾಗೂ ಎದುರಾಳಿ ಬೌಲಿಂಗ್ ದಾಳಿಗೆ ತಕ್ಕ ಆಟ ಅವರದ್ದು. ಆ ಕಾಲದಲ್ಲಿ ಆಕರ್ಷಕವಾಗಿ ಕ್ಷೇತ್ರರಕ್ಷಣೆ ಮಾಡುತ್ತಿದ್ದವರಲ್ಲಿ ‘ಪಾಲಿ’ ಕೂಡ ಒಬ್ಬರು. ಆಫ್‌ಸ್ಪಿನ್ ಬೌಲಿಂಗ್ ಅವರ ಇನ್ನೊಂದು ಸಾಮರ್ಥ್ಯ.ಐದನೇ ಕ್ರಮಾಂಕಕ್ಕೆ ಸೂಕ್ತ ಎನಿಸುವ ಸಿ.ಕೆ.ನಾಯ್ಡು ಅವರು ಭಾರತ ಕ್ರಿಕೆಟ್ ಕಂಡ ಆಕರ್ಷಕ ವ್ಯಕ್ತಿತ್ವದ ಆಟಗಾರ. ಯುವರಾಜ್ ಸಿಂಗ್ ರೀತಿಯಲ್ಲಿಯೇ ಚೆಂಡನ್ನು ನಿರಾಯಾಸವಾಗಿ ಗಡಿ ದಾಟಿಸಬಲ್ಲವರಾಗಿದ್ದರು. ವಿಭಿನ್ನ ಕೋನಗಳಲ್ಲಿ ಚೆಂಡನ್ನು ಅಟ್ಟುತ್ತಿದ್ದ ಅವರು ಲೆಗ್‌ಸೈಡ್‌ನಲ್ಲಿ ಚೆಂಡನ್ನು ತಿರುಗಿಸುತ್ತಿದ್ದ ರೀತಿ ಹಾಗೂ ಲೇಟ್ ಕಟ್ ವಿಶೇಷ. ಶಿಸ್ತಿನ ಬ್ಯಾಟ್ಸ್‌ಮನ್ ಆಗಿದ್ದರೂ ಬೌಲರ್ ರೂಪದಲ್ಲಿ ತಮ್ಮ ಆಫ್ ಕಟರ್‌ಗಳ ಮೂಲಕ ಪಡೆದ ವಿಕೆಟ್‌ಗಳು ಸಾಕಷ್ಟು. ಫೀಲ್ಡಿಂಗ್ ಮಾಡುವಾಗ ತಮ್ಮ ಬೌಲರ್ ಅಸಮಾಧಾನಗೊಳ್ಳುವಂಥ ತಪ್ಪು ಮಾಡಿದ್ದು ಕೂಡ ವಿರಳ. ನಾಯ್ಡು ನಂತರ ವಿನೂ ಮಂಕಡ್ ಕಲ್ಪನೆಯ ತಂಡದಲ್ಲಿ ಕಂಡುಬರುತ್ತಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಕಂಡ ತಂತ್ರಗಾರಿಕೆಯ ಸ್ಪಿನ್ನರ್‌ಗಳಲ್ಲಿ ಇವರೂ ಒಬ್ಬರು. ಬ್ಯಾಟಿಂಗ್‌ನಲ್ಲಿಯೂ ಬಲವಿತ್ತು. ಎರಡು ಟೆಸ್ಟ್ ದ್ವಿಶತಕಗಳ ಶ್ರೇಯ ಹೊಂದಿರುವ ಮಂಕಡ್ ಇನಿಂಗ್ಸ್ ಕಟ್ಟುವುದನ್ನು ಬಲ್ಲ ಬ್ಯಾಟ್ಸ್‌ಮನ್ ಕೂಡ ಹೌದು. ಪಂಕಜ್ ರಾಯ್ ಜೊತೆಗಿನ ಅವರ ದಾಖಲೆ ಜೊತೆಯಾಟ ಮರೆಯಲಾಗದು.

ಐದು ಹಾಗೂ ಆರನೇ ಸ್ಥಾನಕ್ಕೆ ದೇವರು ಕೊಟ್ಟ ವರದಂತಿರುವ ಕ್ರಿಕೆಟಿಗರನ್ನು ಹೊಂದಿಸಿಟ್ಟು ಮುಂದೆ ಸಾಗಿದಾಗ ಏಳನೇ ಸ್ಥಾನದಲ್ಲಿ ಅರ್ಹರಾಗಿ ನಿಲ್ಲುವುದು ಲಾಲಾ ಅಮರ್‌ನಾಥ್. ಬೌಲರ್‌ಗಳು ದಂಗಾಗಿ ನಿಲ್ಲುವಂಥ ಬ್ಯಾಟ್ಸ್‌ಮನ್ ಮಾತ್ರವಲ್ಲ ಮಧ್ಯಮ ವೇಗದ ಬೌಲರ್ ಇವರು. ವಿಕೆಟ್ ಕೀಪರ್ ಆಗಿಯೂ ನೆರವಾಗಬಲ್ಲವರು (ಬುಧಿ ಕುಂದರನ್ ಅವರು ವಿರಾಮ ಪಡೆದಾಗ ವಿಕೆಟ್ ಹಿಂದೆ ಕಾಣಿಸಿಕೊಂಡವರು). ಎಂಟನೇ ಕ್ರಮಾಂಕಕ್ಕೆ ‘ಬಾಪು’ ಎಂದೇ ಕ್ರಿಕೆಟ್ ಪ್ರೇಮಿಗಳಿಗೆ ಆಪ್ತರಾಗಿದ್ದ ಆಲ್‌ರೌಂಡರ್ ಆರ್.ಜಿ. ನಾಡಕರ್ಣಿ ಹೊರತು ಬೇರೆ ಯಾರೂ ಅರ್ಹರೆನಿಸುವುದಿಲ್ಲ. ಬಿಗುವಿನ ಬೌಲಿಂಗ್ ಇವರದ್ದು. ಇಂಗ್ಲೆಂಡ್ ವಿರುದ್ಧ ಸತತ 27 ಓವರ್ (ಹೌದು; ಇಪ್ಪತ್ತೇಳು ಓವರ್) ಮೇಡಿನ್ ಮಾಡಿದವರು.ಎಲ್.ಅಮರ್ ಸಿಂಗ್ ಅವರೇ ಒಂಬತ್ತನೇ ಕ್ರಮಾಂಕದಲ್ಲಿ ಅತ್ಯಂತ ಸರಿಯಾದ ಆಟಗಾರ. ಆ ಕಾಲದ ಕಪಿಲ್ ದೇವ್ ಎಂದು ಅಮರ್ ಸಿಂಗ್ ಸಾಮರ್ಥ್ಯವನ್ನು ತೂಗಿ ನೋಡಬಹುದು. ಸ್ವಿಂಗ್ ಬೌಲರ್ ಅಷ್ಟೇ ಅಲ್ಲ, ಬೌಂಡರಿ ಹಾಗೂ ಸಿಕ್ಸರ್‌ಗಳ ಮೂಲಕ ಇನಿಂಗ್ಸ್ ಅಲಂಕರಿಸುವಂಥ ಬ್ಯಾಟ್ಸ್‌ಮನ್. ಕ್ಷೇತ್ರ ರಕ್ಷಣೆಯ ಸಾಮರ್ಥ್ಯದ ಬಗ್ಗೆಯಂತೂ ಸಾಕಷ್ಟು ಹೇಳಬಹುದು. ಹತ್ತು ಹಾಗೂ ಕೊನೆಯಲ್ಲಿ ಪರಿಣತ ಬೌಲರ್‌ಗಳು ಇರುವುದು ಸಹಜ. ಲೆಗ್‌ಬ್ರೇಕ್ ಹಾಗೂ ಗೂಗ್ಲಿ ಬೌಲರ್ ಸುಭಾಷ್ ಗುಪ್ತೆ ಮತ್ತು ವೇಗಿ ಮೊಹಮ್ಮದ್ ನಿಸ್ಸಾರ್ ಹೆಸರು ಮನದಲ್ಲಿ ಮೂಡುತ್ತದೆ. ನಿಸ್ಸಾರ್ ತಮ್ಮ ಕಾಲದಲ್ಲಿ ಅತ್ಯಂತ ವೇಗವಾಗಿ ಚೆಂಡನ್ನು ಎಸೆಯುತ್ತಿದ್ದರು. ಅಪಾಯಕಾರಿ ಯಾರ್ಕರ್ ಪ್ರಯೋಗಿಸಿ ಎದುರಾಳಿ ಪಡೆಯ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದ್ದರು.ನಮ್ಮ ಸಮಕಾಲೀನರ ತಂಡಕ್ಕೆ ಹೋಲಿಸಿದಲ್ಲಿ ಇದೊಂದು ಹನ್ನೊಂದು ಆಟಗಾರರ ಉತ್ತಮ ಪಟ್ಟಿ. ಆದರೆ ಇದೇ ಕೊನೆಯಲ್ಲಿ; ಈ ವಿಷಯವಾಗಿಯೂ ಚರ್ಚೆ ಮಾಡಬಹುದು. ಆಲ್‌ರೌಂಡರ್ ಸಲೀಮ ದುರಾನಿ ಹಾಗೂ ದತ್ತು ಫಡ್ಕರ್ ಕೂಡ ತಂಡದಲ್ಲಿ ಇರಬೇಕೆಂದು ಅವರ ಅಭಿಮಾನ ಬಳಗ ಹೇಳಬಹುದು. ಬ್ಯಾಟ್ಸ್‌ಮನ್ ವಿಜಯ್ ಹಜಾರೆ ಬಗ್ಗೆಯೂ ಈ ಮಾತು ಅನ್ವಯವಾಗುತ್ತದೆ. ಮುಂಬೈನವರು ಎನ್.ಎಸ್. ತಾಹ್ಮನೆ ಕಡೆಗೆ ಗಮನ ಸೆಳೆಯಬಹುದು. ಆದರೂ ಅದೇ ನಾಡಿನ ಗುಪ್ತೆ ಮತ್ತು ಮಂಕಡ್‌ಗೆ ಸರಿಸಾಟಿಯಂತೂ ಯಾರೂ ಇಲ್ಲ.ಈ ಬರಹದ ಆರಂಭದಲ್ಲಿನ ತಂಡದ ಪಟ್ಟಿಯಲ್ಲಿನ ಆಟಗಾರರು ಹಾಗೂ ನಂತರ ಪಟ್ಟಿ ಮಾಡಿರುವ ಹಿಂದಿನ ಕ್ರಿಕೆಟಿಗರು ಜೊತೆಗೆ ಆಡಿದ್ದಿಲ್ಲ. ಆದ್ದರಿಂದ ‘ಡ್ರೀಮ್ ಟೀಮ್’ ಬದಲಿಗೆ ಇದನ್ನು ನಾನು ಅಪರಿಮಿತ ಶಕ್ತಿಯುಳ್ಳ ‘ಫ್ಯಾಂಟಸಿ ಇಲೆವೆನ್’ ತಂಡವೆಂದು ಹೇಳುತ್ತೇನೆ. ಇಂಥ ತಂಡದಲ್ಲಿನ ಒಬ್ಬ ಆಟಗಾರ ಮಾತ್ರ ಅಧಿಕೃತ ಹಾಗೂ ಅನಧಿಕೃತವಾದ ಏಕಮಾತ್ರ ಒಂದು ದಿನದ ಪಂದ್ಯ ಆಡಿದ್ದು. ಅದೇನೇ ಇರಲಿ; ನಾನು ಹಾಗೂ ರಾಜ್‌ದೀಪ್ ಸರ್‌ದೇಸಾಯಿ ಕಟ್ಟಿದ ಕನಸಿನ ತಂಡದ ನಾಯಕ ಯಾರು? ಹನ್ನೊಂದರ ಪಟ್ಟಿಯಲ್ಲಿ ಆರು ಮಾಜಿ ನಾಯಕರಿದ್ದರು. ಆದರೂ ಚಿಂತನೆ ನಡೆಸಿ ಮೊದಲು ಸಚಿನ್ ಮತ್ತು ಅಜರ್ ಹೆಸರನ್ನು ಬದಿಗಿಡಲಾಯಿತು. ಪ್ರಮುಖ ವೇಗಿ ಕಪಿಲ್, ವಿಕೆಟ್ ಕೀಪರ್ ದೋನಿ ಹಾಗೂ ಸ್ಪಿನ್ನರ್ ಕುಂಬ್ಳೆಗೆ ನಾಯಕತ್ವದ ಹೆಚ್ಚುವರಿ ಜವಾಬ್ದಾರಿ ನೀಡುವುದು ಬೇಡ ಎಂದು ನಿರ್ಧರಿಸಿದೆವು. ಕೊನೆಯಲ್ಲಿ ನಾಯಕತ್ವಕ್ಕೆ ಸೂಕ್ತವಾಗಿ ಕಾಣಿಸಿದ್ದು ಸೌರವ್ ಗಂಗೂಲಿ. ಕೋಲ್ಕತ್ತದ ಜನರು ನಮ್ಮ ಈ ಆಯ್ಕೆಯಿಂದ ಖಂಡಿತ ಸಂತೋಷಪಡುತ್ತಾರೆ. ಕ್ರಿಕೆಟ್ ಅರಿವಿಲ್ಲದ ಪ್ರೋತ್ಸಾಹಕರಾದ ಕೋಲ್ಕತ್ತ ನೈಟ್ ರೈಡರ್ಸ್ ಅವಮಾನಗೊಳಿಸಿದ ಕ್ರಿಕೆಟಿಗನ ಬೆಂಬಲಿಗರಿಗೆ ಇದು ಹಿತವೆನಿಸುವ ಸಣ್ಣ ಖುಷಿ ಆಗಬಹುದು.ಫ್ಯಾಂಟಸಿ ಇಲೆವೆನ್‌ನಲ್ಲಿಯೂ ಮಾಜಿ ನಾಯಕರಾದ ಮಂಕಡ್, ಉಮ್ರಿಗರ್, ಅಮರ್‌ನಾಥ್ ಹಾಗೂ ಪಟೌಡಿ ಅವರು ತಮಗಿಂತ ಸಿ.ಕೆ.ನಾಯ್ಡು ಉತ್ತಮ ನಾಯಕ ಎಂದು ಒಪ್ಪಿಕೊಂಡಿದ್ದಾರೆ. ಆದ್ದರಿಂದ ನಾಯ್ಡು ಅವರೇ ಈ ತಂಡವನ್ನು ಹಿಡಿತದಿಂದ ಮುನ್ನಡೆಸುವ ಅರ್ಹತೆ ಹೊಂದಿದವರು ಎಂದು ತೀರ್ಮಾನಿಸಬಹುದು.ಈಗ ಕ್ರಮಾಂಕದ ಆಧಾರದಲ್ಲಿ ಎರಡೂ ತಂಡಗಳನ್ನು ಜೊತೆಗೆ ಪಟ್ಟಿ ಮಾಡಿಟ್ಟು ‘ಡ್ರೀಮ್ ಟೀಮ್’ ಹಾಗೂ ‘ಫ್ಯಾಂಟಸಿ ಇಲೆವೆನ್’ ತಂಡದಲ್ಲಿನ ಆಟಗಾರರನ್ನು ಹೋಲಿಕೆ ಮಾಡಿ ನೋಡುವುದು ಸುಲಭ ಎನಿಸುತ್ತದೆ.ಭಾರತದ ಡ್ರೀಮ್ ಟೀಮ್: ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮೊಹಮ್ಮದ್ ಅಜರುದ್ದೀನ್, ಯುವರಾಜ್ ಸಿಂಗ್,  ಮಹೇಂದ್ರ ಸಿಂಗ್ ದೋನಿ, ಕಪಿಲ್ ದೇವ್, ಹರಭಜನ್ ಸಿಂಗ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್ ಮತ್ತು   ಜಹೀರ್ ಖಾನ್.ಭಾರತದ ಫ್ಯಾಂಟಸಿ ಇಲೆವೆನ್: ಎಸ್. ಮುಷ್ತಾಕ್ ಅಲಿ, ಬುಧಿ ಕುಂದರನ್, ಮನ್ಸೂರ್ ಅಲಿ ಖಾನ್ ಪಟೌಡಿ, ಪಾಲಿ ಉಮ್ರೀಗರ್, ಸಿ.ಕೆ.ನಾಯ್ಡು, ವಿನೂ ಮಂಕಡ್, ಲಾಲಾ ಅಮರ್‌ನಾಥ್, ಆರ್.ಜಿ.ನಾಡಕರ್ಣಿ, ಎಲ್.ಅಮರ್ ಸಿಂಗ್, ಸುಭಾಷ್ ಗುಪ್ತೆ ಮತ್ತು ಮೊಹಮ್ಮದ್ ನಿಸ್ಸಾರ್.ಎರಡು ತಂಡಗಳ ನಡುವೆ ಹೋಲಿಕೆ ಮಾಡಿ ಬೆಟ್ ಕಟ್ಟುವುದಾದರೆ ನಾನು ಆಯ್ಕೆ ಮಾಡುವುದು ನಂತರದ ತಂಡವನ್ನು. ನನ್ನ ಕ್ರಿಕೆಟ್ ಜ್ಞಾನದ ಆಧಾರದಲ್ಲಿ ಡ್ರೀಮ್ ತಂಡದವರು ಫ್ಯಾಂಟಸಿ ಇಲೆವೆನ್‌ನಲ್ಲಿ ಇರುವವರಿಗಿಂತ ಚುರುಕಾಗಿ ಕ್ಷೇತ್ರ ರಕ್ಷಣೆ ಮಾಡಬಲ್ಲವರು. ದಾದಾ, ಸಚಿನ್, ವೀರೂ, ಭಜ್ಜಿ, ಜಂಬೊ, ಶ್ರೀ ಮತ್ತು ಜಾಕ್‌ಗೆ ಹೋಲಿಸಿದಲ್ಲಿ ಮುಷ್ತಾಕ್, ಪಾಲಿ, ಸಿಕೆ, ಟೈಗರ್, ಅಮರ್ ಸಿಂಗ್ ಮತ್ತು ಬಾಕಿ ಕ್ರಿಕೆಟಿಗರು ಬಲಾಢ್ಯರಾಗಿ ಕಾಣಿಸುವುದಿಲ್ಲ. ಬೌಲಿಂಗ್ ಬಗ್ಗೆಯೂ ಈ ಮಾತು ಅನ್ವಯವಾಗುತ್ತದೆ. ಎರಡೂ ತಂಡಗಳ ಸಂಯೋಜಿತ ಬೌಲಿಂಗ್ ಕುರಿತು ಯೋಚಿಸಿದಾಗ ಗುಪ್ತೆ, ಮಂಕಡ್ ಹಾಗೂ ನಾಡಕರ್ಣಿ ಜೊತೆಗೆ ಹರಭಜನ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಬೇಕು. ಸಾಂದರ್ಭಿಕ ದಾಳಿಯಲ್ಲಿ ಯುವರಾಜ್ ಮತ್ತು ಗಂಗೂಲಿ ಅವರಿಗಿಂತ ನಾಯ್ಡು, ಪಾಲಿ ಮತ್ತು ಮುಷ್ತಾಕ್ ಹೆಚ್ಚು ವಿಕೆಟ್ ಪಡೆಯಬಲ್ಲವರು.ಬ್ಯಾಟಿಂಗ್ ಕ್ರಮಾಂಕದಲ್ಲಿ ಮೊದಲ ಮೂರು ಕ್ರಮಾಂಕದಲ್ಲಿನ ಎರಡೂ ತಂಡದವರನ್ನು ತೂಗಿದರೆ ಖಂಡಿತ ಸಮತೂಕ. ಮಧ್ಯಮ ಕ್ರಮಾಂಕದಲ್ಲಿ ಹಳಬರೇ ಹೆಚ್ಚು ಶಕ್ತಿಯುತರು. ನಿಸ್ಸಾರ್ ಯಾರ್ಕರ್‌ಗೆ ಗಂಗೂಲಿ ಆಘಾತಗೊಂಡರೆ, ಗುಪ್ತೆ ಅವರ ಫ್ಲೈಟೆಡ್ ಎಸೆತಕ್ಕೆ ಸೆಹ್ವಾಗ್ ಬಲಿಯಾದಂಥ ಪರಿಸ್ಥಿತಿಯಲ್ಲಿ ಸಹಜವಾಗಿ ಕನಸಿನ ತಂಡಕ್ಕೆ ಮೊದಲ ಪವರ್ ಪ್ಲೇಯಲ್ಲಿ ಉಳಿಯುವ ದಾರಿ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗುವುದು. ಆದರೂ ಆಗ ಸಚಿನ್ ಧೈರ್ಯದ ಆಟವೇ ಬಲ. ಆದರೂ ಟೈಗರ್ ಅವರಂಥ ಕ್ಷೇತ್ರ ರಕ್ಷಕರು ಈ ಬ್ಯಾಟ್ಸ್‌ಮನ್‌ಗೆ ಕಸಿವಿಸಿ ಆಗುವಂತೆ ಮಾಡಬಹುದು. ಇಷ್ಟೆಲ್ಲದರ ನಡುವೆ ಮಂಕಡ್ ಮತ್ತು ನಾಡಕರ್ಣಿ ಮಧ್ಯಮ ಕ್ರಮಾಂಕಕ್ಕೆ ಪೆಟ್ಟು ನೀಡಿದರೆ, ಕನಸಿನ ತಂಡದ ಸರದಿಯ ಕೊನೆಯ ಬ್ಯಾಟ್ಸ್‌ಮನ್‌ಗಳು ಕಷ್ಟಪಟ್ಟು ಒಟ್ಟು ಮೊತ್ತವನ್ನು ಇನ್ನೂರರ ಆಸುಪಾಸಿಗೆ ತೆಗೆದುಕೊಂಡು ಹೋಗಬಹುದು.ಆಗ ಫ್ಯಾಂಟಸಿ ತಂಡಕ್ಕೆ ಗೆಲುವಿನ ಗುರಿ ಸುಲಭದ್ದಾಗಿ ಕಾಣಿಸುತ್ತದೆ. ಪಾಲಿ ನಾಲ್ಕನೇ ಕ್ರಮಾಂಕದಲ್ಲಿ ಹಾಗೂ ಮಂಕಡ್ ಮತ್ತು ಅಮರ್ ಸಿಂಗ್ ಅವರು ಕ್ರಮವಾಗಿ ಆರು ಹಾಗೂ ಒಂಬತ್ತನೇ ಕ್ರಮಾಂಕದಲ್ಲಿ ಆಡುತ್ತಾರೆ. ಆಗ ಫಲಿತಾಂಶ ನಾನು ಬೆಟ್ ಮಾಡಿದ ತಂಡದ ಪರ!

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.