ಶುಕ್ರವಾರ, ನವೆಂಬರ್ 15, 2019
23 °C

ಮರೆಯಾದ ಕೀಳರಿಮೆ

ಗುರುರಾಜ ಕರ್ಜಗಿ
Published:
Updated:

ತೋಟದ ಬದುವಿನ ಮೇಲೆ ಇರುವೆಗಳ ಸಂಸಾರ ವಾಸವಾಗಿತ್ತು. ಅಲ್ಲಿ ಸಾವಿರಾರು ಇರುವೆಗಳು.  ಅದರಲ್ಲಿ ಒಂದು ಪರಿವಾರದಲ್ಲಿ ಪುಟ್ಟ ಇರುವೆಯೊಂದಿತ್ತು.  ಅದಕ್ಕೆ ತಾನು ಯಾವುದೇ ವಿಶೇಷತೆ ಹೊಂದಿಲ್ಲವೆಂಬ ಕೀಳರಿಮೆ ಕಾಡುತ್ತಿತ್ತು. ತನ್ನ ಸುತ್ತಮುತ್ತಲೂ ತನ್ನಂತೆಯೇ ಇರುವ ಸಾವಿರಾರು ಇರುವೆಗಳು ಬುಳಬುಳನೇ ಓಡಾಡುತ್ತಿದ್ದರೆ ತಾನು ಅವರಲ್ಲಿಯೇ ಒಬ್ಬ ಮಾತ್ರ, ತಾನೂ ಅವರಂತೆಯೇ ಕ್ಷುದ್ರ ಪ್ರಾಣಿ ಎಂಬ ಭಾವನೆ ಕಾಡತೊಡಗಿತು.ಏನಾದರೂ ದೊಡ್ಡ ಕೆಲಸ ಮಾಡಬೇಕೆಂಬ ಮನಸ್ಸಿದ್ದರೂ ತನ್ನಿಂದ ಏನಾದೀತು ಎಂಬ ಕೊರಗು ಅದನ್ನು ಹಿಂದಕ್ಕೆಳೆಯುತ್ತಿತ್ತು. ಹೀಗೆಯೇ ಮನೆಯಲ್ಲಿ ಹಿರಿಯರ ಅಪ್ಪಣೆಯಂತೆ ಬಾಯಿಯಲ್ಲಿ ಕಾಳೊಂದನ್ನು ಹಿಡಿದುಕೊಂಡು ಸಾಲಿನಲ್ಲಿ ನಡೆದು ಮನೆಗೆ ಹೋಗುತ್ತಿರುವಾಗ ಏನೋ ಕೋಲಾಹಲ ಕೇಳಿಸಿತು.  ಹೊತ್ತಿದ್ದ ಕಾಳನ್ನು ಕೆಳಗೆ ಇಟ್ಟು ಗೋಣು ಎತ್ತಿ ಸದ್ದು ಬಂದೆಡೆಗೆ ನೋಡಿತು.  ತೋಟದ ಮಾಲಿಕ ಮತ್ತು ಅವನ ಹೆಂಡತಿ ಜೋರಾಗಿ ಕೂಗುತ್ತಿದ್ದರು, ಯಾರನ್ನೋ ಬೆದರಿಸಲು ಪ್ರಯತ್ನಿಸುತ್ತಿದ್ದರು. ಇರುವೆ ತನ್ನ ಸಾಲನ್ನು ಬಿಟ್ಟು ಸರಸರನೇ ನಡೆದು ಬದುವಿನ ತುದಿಗೆ ಹೋಯಿತು. ಅಲ್ಲಿಂದ ದೃಶ್ಯ ಚೆನ್ನಾಗಿ ಕಾಣುತ್ತಿತ್ತು. ಇರುವೆಗೆ ವಿಷಯ ಅರ್ಥವಾಯಿತು.  ತೋಟದೊಳಗೆ ಭಾರಿ  ಕೋಣ ಸೇರಿಕೊಂಡು ಬಿಟ್ಟಿದೆ! ರೈತ ಕಷ್ಟಪಟ್ಟು ಬೆಳೆಸಿದ ತರಕಾರಿಯನ್ನು ಸರಸರನೇ ತಿಂದು ಮುಗಿಸುತ್ತಿದೆ.  ರೈತ ಮತ್ತು ಅವನ ಹೆಂಡತಿ ಕೂಗಿ ಕೂಗಿ ಅದನ್ನು ಹೆದರಿಸಿ ತೋಟದಿಂದ ಓಡಿಸಲು ಪ್ರಯತ್ನಿಸುತ್ತಿದ್ದಾರೆ.  ರೈತ ಕೈಯಲ್ಲಿ ಕೋಲು ಹಿಡಿದು ಕೋಣದ ಕಡೆಗೆ ಹೋದರೆ ಅದೇ ಮುಸುಗುಟ್ಟುತ್ತ ತಲೆ ತಗ್ಗಿಸಿ ಕೋಡುಗಳನ್ನು ಇರಿಯುವಂತೆ ಚಾಚಿ ಅವನತ್ತ ನುಗ್ಗಿತು. ರೈತ ಭಯದಿಂದ ಓಡಿಹೋದ.  ದೂರ ನಿಂತೇ ಕೂಗಾಡತೊಡಗಿದ. ರೈತನ ಹೆಂಡತಿ ಓಡಿಹೋಗಿ ತಾವು ಸಾಕಿದ ಬೇಟೆ ನಾಯಿ ಬಿಚ್ಚಿದಳು.  ಅದು ಯಜಮಾನ ಕಷ್ಟವನ್ನು ತಿಳಿದುಕೊಂಡಂತೆ ಹಾರಿ ಹಾರಿ ಕೋಣನ ಬಳಿಗೆ ಬಂದಿತು.  ದೂರ ನಿಂತು ಗಂಟಲು ಹರಿದು ಹೋಗುವಂತೆ ಬೊಗಳಿತು.  ಕೋಣ ತಲೆ ಎತ್ತಿ ಕೂಡ ನೋಡಲಿಲ್ಲ.  ರೈತನ ಪರಿಶ್ರಮದ ಫಲಗಳು ಕ್ಷಣಮಾತ್ರದಲ್ಲಿ ಕೋಣನ ಹೊಟ್ಟೆಯಲ್ಲಿ ಮಾಯವಾಗುತ್ತಿದ್ದವು.  ರೈತನ ಹೆಂಡತಿ ನಾಯಿಗೆ  ಬೈದಳು,  ಬರೀ ಬೊಗಳಿ ಏನು ಮಾಡುತ್ತೀ? ಅದರ ಹಿಂಗಾಲನ್ನು ಕಚ್ಚಿ ಓಡಿಸು   ವಿಧೇಯ ನಾಯಿ ಕೋಣದ ಹಿಂದೆ ಹೋಗಿ ಕಾಲು ಕಚ್ಚಲು ನೋಡಿತು. ಅದನ್ನು ಕಣ್ಣಂಚಿನಿಂದಲೇ ಕಂಡ ಕೋಣ ಹಿಂಗಾಲನ್ನೆತ್ತಿ ಝಾಡಿಸಿ ನಾಯಿಯ ಮುಖಕ್ಕೆ ಒದೆಯಿತು.  ದೂರ ಹಾರಿ ಬಿದ್ದ ನಾಯಿ ಕುಂಯ್‌ಗುಡುತ್ತ ಓಡಿಯೇ ಹೋಯಿತು.

ರೈತ ಬೇರೆ ದಾರಿ ತೋರದೇ ತನ್ನ ಬಲಿಷ್ಠವಾದ ಹೋರಿ ಬಿಚ್ಚಿ ಕರೆದು ತಂದ.  ಅದೂ  ಹ್ಞೂಂಕರಿಸಿ ಕೋಣನ ಮುಂದೆ ಬಂದು ಕೋಡುಗಳಿಂದ ಇರಿಯಲು ನೋಡಿತು.  ಆಗ ಮದವೇರಿದ ಕೋಣ ಸಿಟ್ಟಿನಿಂದ ಹೋರಿಯ ಹಣೆಗೆ ಜೋರಾಗಿ ಡಿಕ್ಕಿ ಹೊಡೆಯಿತು.  ಕ್ಷಣಕಾಲ ತಲೆಸುತ್ತಿ ಬಂದ ಹೋರಿ ಕಾಲು ಚಾಚಿ ಮಲಗಿ ಬಿಟ್ಟಿತು.  ಇದನ್ನು ನೋಡುತ್ತಿದ್ದ ಇರುವೆ ಧೈರ್ಯವಾಗಿ ನಡೆದು ರೈತನತ್ತ ಹೋಗಿ,  ನಾನೂ ಪ್ರಯತ್ನ ಮಾಡಲೇ?  ಎಂದು ಕೇಳಿತು. ಈ ಧ್ವನಿ ಎಲ್ಲಿಂದ ಬರುತ್ತದೆಂದು ತಿಳಿಯಲೇ ಒಂದೆರಡು ನಿಮಿಷವಾಯಿತು!   `ಅಲ್ಲಪ್ಪಾ, ದೊಡ್ಡವರೆಲ್ಲಾ ಸೋತ ಮೇಲೆ ನೀನೇನು ಮಾಡುತ್ತೀಯಾ? ಆಯ್ತು, ಏನು ಮಾಡುತ್ತೀಯೋ ಮಾಡು'  ಎಂದ ರೈತ.  ಇರುವೆ ನಿಧಾನವಾಗಿ ಕೋಣನ ಕಾಲನ್ನೇರಿ, ಬೆನ್ನ ಮೇಲೆ ಸರಿದು ಕಿವಿಯ ಹತ್ತಿರ ಬಂದಿತು.  ನಂತರ ಸಾವಕಾಶವಾಗಿ ಕಿವಿಯನ್ನು ಸೇರಿ ಒಳಗೆ ಹೋಗಿ ಅತ್ಯಂತ ಮೃದುವಾದ ಭಾಗವನ್ನು ನೋಡಿ ಬಲವಾಗಿ ಕಚ್ಚಿತು.  ಕೋಣಕ್ಕೆ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ಗಾಬರಿಯಾಗಿ ಹ್ಞೂಂಕರಿಸಿತು, ಹಾರಾಡಿತು, ಹೊರಳಾಡಿತು.ಏನಾದರೂ ಇರುವೆ ಕಚ್ಚುವುದನ್ನು ಬಿಡಲಿಲ್ಲ. ಕೋಣ ಹಾರಿ ಹಾರಿ ತೋಟ ದಾಟಿ ಹೋಗಿ ಕೆರೆಯಲ್ಲಿ ಬಿದ್ದಿತು.  ನಿಧಾನವಾಗಿ ಇರುವೆ ಹೊರಬಂದು ಮನೆ ಸೇರಿತು.  ರೈತ ಕೃತಜ್ಞತೆಯಿಂದ ಇರುವೆಗಳ ಮನೆಯನ್ನು ಯಾರೂ ತುಳಿದು ಹಾಳು ಮಾಡದಂತೆ ಮತ್ತು ದಿನವೂ ಒಂದಿಷ್ಟು ಆಹಾರವನ್ನು ಹಾಕುವಂತೆ ವ್ಯವಸ್ಥೆ ಮಾಡಿದ.  ಎಲ್ಲರೂ ಸುಖವಾಗಿದ್ದರು.  ಇರುವೆಯ ಕೀಳರಿಮೆ ಮಾಯವಾಗಿತ್ತು. ನಮ್ಮಲ್ಲಿ ಎಷ್ಟೇ ಅಶಕ್ತತೆ ಇದ್ದರೂ ಯಾರಲ್ಲೂ ಇರದಂತಹ ವಿಶೇಷ ಶಕ್ತಿ ಇದ್ದೇ ಇರುತ್ತದೆ.  ನಮ್ಮಲ್ಲಿಯ ಶಕ್ತಿ ಗಮನಿಸಿ ಸರಿಯಾಗಿ ಬಳಸಿದರೆ ಬಲಿಷ್ಠರಿಂದ ಆಗದ ಕೆಲಸ ನಮ್ಮಿಂದಾಗುತ್ತದೆ.  ಆದ್ದರಿಂದ ನಮ್ಮ ಅಶಕ್ತತೆಗಳನ್ನು ನೆನಪಿಸಿಕೊಂಡು ಕೊರಗುವುದಕ್ಕಿಂತ ನಮ್ಮ ವಿಶೇಷತೆಗಳ ಕಡೆಗೆ ಗಮನ ನೀಡಿ ಅವನ್ನು ಬೆಳೆಸುವುದು ಪ್ರಗತಿಯ ಮಾರ್ಗ.

ಪ್ರತಿಕ್ರಿಯಿಸಿ (+)