ಮಹಾರರು ಎದುರಿಸುವ ಪರೀಕ್ಷೆ ರಾಜ ಮನೆತನಗಳಿಗಿಲ್ಲ

7

ಮಹಾರರು ಎದುರಿಸುವ ಪರೀಕ್ಷೆ ರಾಜ ಮನೆತನಗಳಿಗಿಲ್ಲ

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:

ರಾಷ್ಟ್ರಪ್ರೇಮದ (ಪೇಟ್ರಿಯಾಟಿಸಮ್) ಬಗ್ಗೆ ಎಡೆಬಿಡದೆ ಚರ್ಚೆಯಾಗುತ್ತಿರುವ ದಿನಗಳಿವು. ಈ ಚರ್ಚೆಯ ಸ್ವರೂಪವನ್ನು ಅರಿಯಲು ಈ ಎರಡು ಪ್ರಸಂಗಗಳನ್ನು ಗಮನಿಸಿ:

ಮೊದಲನೆಯದು ಬಹುಚರ್ಚಿತವಾಗಿರುವ ‘ಪದ್ಮಾವತ್‌’ (ಮೂಲ ಹೆಸರು ‘ಪದ್ಮಾವತಿ’) ಚಲನಚಿತ್ರಕ್ಕೆ ಸಂಬಂಧಿಸಿದ್ದು. ಡಿಸೆಂಬರ್ 1ರಂದು ಈ ಚಿತ್ರ ಬಿಡುಗಡೆಯಾಗಬೇಕಿತ್ತು. ‘ರಜಪೂತರ ಇತಿಹಾಸಕ್ಕೆ ಮತ್ತು ಅವರ ಕುಲಮರ್ಯಾದೆಗೆ ಈ ಚಿತ್ರ ಅಪಚಾರವನ್ನೆಸಗುತ್ತದೆ. ಹಾಗಾಗಿ ಅದನ್ನು ನಿಷೇಧಿಸಬೇಕು’ ಎಂದು ಕರ್ಣಿಸೇನಾ ಮತ್ತಿತರ ರಜಪೂತ ಸಂಘಟನೆಗಳು ಒತ್ತಾಯಿಸುತ್ತಿದ್ದವು. ನವೆಂಬರ್ ಮಧ್ಯಭಾಗದಲ್ಲಿ ಈ ಪ್ರತಿಭಟನೆಗಳು ಉತ್ತುಂಗದಲ್ಲಿದ್ದಾಗ, ಕಾಂಗ್ರೆಸ್ ಪಕ್ಷದ ಲೋಕಸಭಾ ಸದಸ್ಯ ಶಶಿ ತರೂರ್ ಅವರು ರಜಪೂತರ ಮರ್ಯಾದೆಯ ಬಗ್ಗೆ ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡಿದರು.

ತರೂರ್ ಕೇಳಿದ ಪ್ರಶ್ನೆಗಳಿವು: ‘ಇಂದು ಕುಲಮರ್ಯಾದೆಯ ಬಗ್ಗೆ ಮಾತನಾಡುವ ರಜಪೂತರು ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸಿ ಹೋರಾಡಲಿಲ್ಲವೇಕೆ? ರಜಪೂತ ಮಹಾರಾಜರು ಬ್ರಿಟಿಷರೊಡನೆ ಸಂಧಾನವನ್ನು ಮಾಡಿಕೊಂಡು, ತಮ್ಮ ರಾಜ್ಯ ಮತ್ತು ಅಧಿಕಾರಗಳನ್ನು ಉಳಿಸಿಕೊಳ್ಳಲಿಲ್ಲವೇ?’

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಮಾಡಿದ್ದೇನು ಎನ್ನುವ ಕುರಿತಾಗಿ ಇತ್ತೀಚಿನ ವರ್ಷಗಳಲ್ಲಿ ಮುಖ್ಯವಾದ ಬೌದ್ಧಿಕ ಚರ್ಚೆಗಳನ್ನು ಆರಂಭಿಸಿರುವ ತರೂರ್ ಅವರ ಪ್ರಶ್ನೆಗಳು ರಜಪೂತರನ್ನು ಕೆಣಕಿದವು ಎನ್ನುವುದು ನಿಜ. ಆದರೆ ಉಗ್ರವಾದ ಪ್ರತಿಕ್ರಿಯೆ ಬಂದದ್ದು ಅವರದೇ ಪಕ್ಷದವರಾದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಂದ. ಗ್ವಾಲಿಯರ್ ರಾಜಮನೆತನಕ್ಕೆ ಸೇರಿದ ಸಿಂಧಿಯಾ ಅವರು ತರೂರ್ ಅವರಿಗೆ ‘ಇತಿಹಾಸವನ್ನು ಅಧ್ಯಯನ ಮಾಡಿ’ ಎಂದು ಸಲಹೆ ನೀಡುತ್ತ ಹೇಳಿದರು, ‘ನಾನು ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನನಗೆ ನನ್ನ ಇತಿಹಾಸದ ಬಗ್ಗೆ ಹೆಮ್ಮೆಯಿದೆ’. ಈ ಚರ್ಚೆ ಕಾವೇರುತ್ತಿದ್ದಂತೆ ತರೂರ್, ತಾವು ಮಾತನಾಡಿದ್ದು ರಜಪೂತ ಸಮುದಾಯದ ಬಗ್ಗೆ ಅಲ್ಲ; ಬದಲಿಗೆ ಕೆಲವು ಸ್ವಯಂಘೋಷಿತ ಪರಾಕ್ರಮಿ ಮಹಾರಾಜರ ಬಗ್ಗೆ ಎಂದು ಸ್ಪಷ್ಟೀಕರಣ ನೀಡಿದರು. ಆದರೂ ಅವರು ಎತ್ತಿದ ಪ್ರಶ್ನೆಗಳು ಸಮಂಜಸವಾದವು ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಭಾರತದ ಬಹುತೇಕ ಎಲ್ಲ ರಾಜಮನೆತನಗಳ ವಾರಸುದಾರರು ಸಹ ತಮ್ಮ ಪೂರ್ವಜರ ಬಗ್ಗೆ ಹೀಗೆಯೇ ಹೆಮ್ಮೆಯಿಂದಲೇ ಮಾತನಾಡುತ್ತಾರೆ. ಈ ಪೂರ್ವಜರು ತಮ್ಮ ರಾಜ್ಯಗಳನ್ನು ಉಳಿಸಿಕೊಳ್ಳಲು ಬ್ರಿಟಿಷರೊಡನೆ ಯಾವ ಬಗೆಯ ಹೊಂದಾಣಿಕೆಗಳನ್ನಾದರೂ ಮಾಡಿಕೊಂಡಿರಲಿ, ಯಾವ ಕರಾರುಗಳನ್ನಾದರೂ ಒಪ್ಪಿಕೊಂಡಿರಲಿ, ತಮ್ಮ ಅಧಿಕಾರಾವಧಿಯಲ್ಲಿ ಯಾವುದೇ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ತಮ್ಮ ರಾಜ್ಯಗಳಲ್ಲಿ ಅವರು ಅನುಷ್ಠಾನಕ್ಕೆ ತರದಿರಲಿ, ಎಷ್ಟೇ ನಿರಂಕುಶವಾಗಿ ತಮ್ಮ ಅಧಿಕಾರವನ್ನು ಚಲಾಯಿಸಿರಲಿ ಮತ್ತು ಬ್ರಿಟಿಷರ ಆದ್ಯತೆಗಳಿಗೆ ಪ್ರಾಮುಖ್ಯ ನೀಡಿರಲಿ. ಇಂತಹ ಯಾವುದೇ ಹಿನ್ನೆಲೆಯಿದ್ದರೂ ರಾಜವಂಶಜರು ತಮ್ಮ ಪೂರ್ವಜರ ಬಗ್ಗೆ ಪ್ರಜಾಸತ್ತಾತ್ಮಕ ನಡೆ ಮತ್ತು ರಾಷ್ಟ್ರಪ್ರೇಮಗಳನ್ನು ಆಧಾರವಾಗಿಟ್ಟುಕೊಂಡು ವಸ್ತುನಿಷ್ಠವಾಗಿ ಮಾತನಾಡಿರುವ ಉದಾಹರಣೆಗಳು ಬಹಳ ಕಡಿಮೆ. ಬದಲಿಗೆ ತಮ್ಮ ವಂಶದ ಬಗ್ಗೆ ಆಯಾ ರಾಜ್ಯಗಳ ಪ್ರಜೆಗಳಿಗಿರುವ ಪಾರಂಪರಿಕ ವಿಶ್ವಾಸ- ಅಭಿಮಾನಗಳನ್ನೇ ಬಳಸಿಕೊಂಡು ಸ್ವತಂತ್ರ ಭಾರತದ ಚುನಾವಣಾ ರಾಜಕೀಯದಲ್ಲಿ ಸಿಂಧಿಯಾರಂತಹವರು ನೆಲೆ ಕಂಡುಕೊಂಡಿದ್ದಾರೆ. ಫ್ಯೂಡಲ್ ಮಾದರಿ ರಾಜಕಾರಣವನ್ನು ಮಾಡಿಕೊಂಡೇ ಚಲಾವಣೆಯಲ್ಲಿ ಉಳಿದುಬಂದಿದ್ದಾರೆ.

ಜ್ಯೋತಿರಾದಿತ್ಯ ಸಿಂಧಿಯಾ ತಮ್ಮ ವಂಶದ ಇತಿಹಾಸದ ಬಗ್ಗೆ ಏಕೆ ಹೆಮ್ಮೆಪಡುತ್ತಾರೆ ಎನ್ನುವುದು ನನಗಂತೂ ಅರ್ಥವಾಗುವುದಿಲ್ಲ. ಅವರು ಬ್ರಿಟಿಷರ ವಿರುದ್ಧ ಹೋರಾಡಿದರು ಎಂದೇ? 1857ರಲ್ಲಿ ಬ್ರಿಟಿಷರ ವಿರುದ್ಧ ದಂಗೆಯೆದ್ದ ಭಾರತೀಯ ಸೈನಿಕರ ಜೊತೆ ಜಯಾಜಿರಾವ್ ಸಿಂಧಿಯಾ ಕೈಜೋಡಿಸಲಿಲ್ಲ. ಪಕ್ಕದ ಝಾನ್ಸಿಯು ಭಾರತೀಯ ಹೋರಾಟದ ಮುಖ್ಯ ಕೇಂದ್ರಗಳಲ್ಲಿ ಒಂದಾಗಿತ್ತು. ಸ್ವತಃ ಗ್ವಾಲಿಯರಿನಲ್ಲಿಯೇ ಸೈನಿಕರು ಮತ್ತು ಜನರು ಬ್ರಿಟಿಷರ ವಿರುದ್ಧವಿದ್ದರು.

ಆದರೂ ಜಯಾಜಿರಾವ್ ಪ್ರಾರಂಭದಲ್ಲಿ ತಟಸ್ಥವಾಗಿದ್ದರು. ಆದರೆ 1858ರ ಜೂನ್ 1ರಂದು ತನ್ನ ಸೈನ್ಯದೊಡನೆ ತಾತ್ಯಾ ಟೋಪೆ ಮತ್ತು ರಾಣಿ ಲಕ್ಷ್ಮಿಬಾಯಿ ನಾಯಕತ್ವದ ಸೈನ್ಯದ ಮೇಲೆ ಅವರು ಯುದ್ಧಕ್ಕೆ ಸಜ್ಜಾದರು. ಯುದ್ಧದಲ್ಲಿ ಹಿನ್ನಡೆಯಾದಾಗ, ಜಯಾಜಿರಾವ್ ಆಗ್ರಾದವರೆಗೆ ನಿಲ್ಲದೆ ಓಡಿದರು. ಅವರ ಬಹುಪಾಲು ಸೈನ್ಯವು ತಾತ್ಯಾ ಟೋಪಿಯೊಡನೆ ಕೈಗೂಡಿಸಿತು. ಇದು ಗ್ವಾಲಿಯರನ್ನು ಆಳುತ್ತಿದ್ದ ಸಿಂಧಿಯಾಗಳ ಇತಿಹಾಸದ ಒಂದು ಪುಟ. ಈ ಘಟನೆಗಳನ್ನು ಈಗ ನಿರ್ಮಾಣವಾಗುತ್ತಿರುವ ಝಾನ್ಸಿರಾಣಿ ಲಕ್ಷ್ಮಿಬಾಯಿ ಕುರಿತ ಚಲನಚಿತ್ರದಲ್ಲಿ ತೋರಿಸಿದರೆ, ಅದನ್ನು ನಿಷೇಧಿಸುವಂತೆ ಜ್ಯೋತಿರಾದಿತ್ಯರು ಕೇಳುತ್ತಾರೆಯೇ?

ನಾನು ಪ್ರಸ್ತಾಪಿಸಬಯಸುವ ಎರಡನೆಯ ಉದಾಹರಣೆಯು ಭೀಮಾ ಕೋರೆಗಾಂವ್‌ಗೆ ಸಂಬಂಧಿಸಿದುದು. ಕಳೆದ ಕೆಲವು ವಾರಗಳಿಂದ ಬಹುಚರ್ಚಿತವಾಗುತ್ತಿರುವ ಈ ಪ್ರಸಂಗದ ವರ್ತಮಾನ ಮತ್ತು ಇತಿಹಾಸದ ವಿವರಗಳು ಎಲ್ಲರಿಗೂ ತಿಳಿದಿವೆ. ಆದುದರಿಂದ ಇಂದಿಗೆ ಪ್ರಸ್ತುತವಾದ ರಾಜಕೀಯಶಾಸ್ತ್ರಜ್ಞ ಕ್ರಿಸ್ಟೊಫ ಜಾಫ್ರೆಲೊ ಕೇಳುತ್ತಿರುವ ಬಹುಮುಖ್ಯ ಪ್ರಶ್ನೆಯನ್ನು ಗಮನಿಸೋಣ: ‘ಬ್ರಿಟಿಷರು ಭಾರತವನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಮುಖ್ಯ ವಿಜಯವೆಂದು ಪರಿಗಣಿಸುವ, 1818ರ ಕೋರೆಗಾಂವ್ ಯುದ್ಧದ ವಿಜಯೋತ್ಸವವನ್ನು ಪ್ರತಿವರ್ಷವೂ ಆಚರಿಸುವ ಮೂಲಕ ‘ರಾಷ್ಟ್ರವಿರೋಧಿ’ ಹಣೆಪಟ್ಟಿಯನ್ನು ಪಡೆಯುವ ಅಪಾಯವನ್ನು ಮಹಾರರು ಯಾಕೆ ತೆಗೆದುಕೊಳ್ಳುತ್ತಾರೆ?’

ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವ ಮೊದಲು ಒಂದು ಸರಳ ಅಂಶವನ್ನು ಗಮನಿಸಬೇಕು. ಅದೇನೆಂದರೆ, ಕೋರೆಗಾಂವ್‌ನ ಮಹಾರರಿಗೆ ಅನಾಯಾಸವಾಗಿ ಸಿಗುವ ರಾಷ್ಟ್ರದ್ರೋಹಿ ಹಣೆಪಟ್ಟಿ ಜ್ಯೋತಿರಾದಿತ್ಯ ಸಿಂಧಿಯಾರಿಗಾಗಲಿ ಅಥವಾ ತಮ್ಮ ರಾಜಮನೆತನದ ಆಚರಣೆಗಳನ್ನು ನಡೆಸುವ ಯಾವ ರಾಜವಂಶಸ್ಥನಿಗೂ ದೊರಕುವುದಿಲ್ಲ. ನಮಗೆ ಸಮೀಪದ ಉದಾಹರಣೆಯೊಂದನ್ನೇ ಗಮನಿಸಿ. ಮೈಸೂರಿನ ಒಡೆಯರು 1800ರಲ್ಲಿ ತಮ್ಮ ಅಧಿಕಾರವನ್ನು ಪಡೆದದ್ದು ಮತ್ತು 1881ರಲ್ಲಿ ಮತ್ತೆ ಪಡೆದದ್ದು ಬ್ರಿಟಿಷ್ ಸಾಮ್ರಾಜ್ಯಶಾಹಿಯ ಜೊತೆಗೆ ಒಪ್ಪಂದ ಮಾಡಿಕೊಂಡು ಸಾಮಂತರಾಗಿರಲು ಒಪ್ಪಿದ್ದರಿಂದ. ಈ ಒಪ್ಪಂದಗಳು ಸಹಾಯಕ ಸೈನ್ಯ ಪದ್ಧತಿ ಮತ್ತು ತದನಂತರದಲ್ಲಿ ಬಂದ ಅದೇ ರೀತಿಯ ತಮ್ಮ ಪ್ರಭುತ್ವದ ಸ್ವಾತಂತ್ರ್ಯವನ್ನು ಬಿಟ್ಟುಕೊಡುವ ಅವಮಾನಕಾರಿ ಕರಾರುಗಳನ್ನು ಹೊಂದಿದ್ದವು. ಆದರೆ ಮೈಸೂರಿನ ಅರಸರು ತಮ್ಮ ಖಾಸಗಿ ದರ್ಬಾರನ್ನು ದಸರೆಯ ಸಂದರ್ಭದಲ್ಲಿ ನಡೆಸುವಾಗ, ಆ ದರ್ಬಾರು ಒಂದು ಪಾರಂಪರಿಕ ಆಚರಣೆಯೆಂದು ನಾವು ಸಂಭ್ರಮಿಸುತ್ತೇವೆಯೇ ಹೊರತು ಮೈಸೂರು ರಾಜಮನೆತನದವರನ್ನು ರಾಷ್ಟ್ರದ್ರೋಹಿಗಳೆಂದು ಕರೆಯುವುದಿಲ್ಲ.

ಈ ಸಾಂಸ್ಕೃತಿಕ ರಾಜಕಾರಣವನ್ನು ಒಂದು ಕ್ಷಣ ಬದಿಗಿಡೋಣ. ಮಹಾರರು ಏಕೆ ಭೀಮಾ ಕೋರೆಗಾಂವ್‌ನ ಯುದ್ಧವನ್ನು ಆಚರಿಸುತ್ತಾರೆ ಎನ್ನುವುದನ್ನು ಚರ್ಚಿಸೋಣ. ಇದಕ್ಕಿರುವ ಸರಳ ಕಾರಣವೆಂದರೆ 19ನೆಯ ಶತಮಾನದುದ್ದಕ್ಕೂ ಬಾಂಬೆ ಪ್ರೆಸಿಡೆನ್ಸಿಯ ಸೈನ್ಯದಲ್ಲಿ ಮತ್ತು ಯುದ್ಧಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಮಹಾರರಿಗೆ ಹೇರಳವಾಗಿ ಅವಕಾಶ ದೊರಕಿದವು ಎನ್ನುವುದು. ಜಾಫ್ರೆಲೊ ಒದಗಿಸುವ ಅಂಕಿಅಂಶಗಳ ಪ್ರಕಾರ, ಪದಾತಿ ದಳದ 20 ರೆಜಿಮೆಂಟುಗಳಲ್ಲಿ ಸುಮಾರು 70 ಜನ ಮಹಾರ್ ಅಧಿಕಾರಿಗಳು (ನಾನ್ ಕಮಿಷನ್ಡ್ ಆಫೀಸರ್ಸ್‌) ಇದ್ದರು, ಮಹಾರರದೇ ಆದ ನೌಕಾ ರೆಜಿಮೆಂಟ್ ಒಂದಿತ್ತು. 1892–93ರಲ್ಲಿ ಬ್ರಿಟಿಷರು ಮಹಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಭರ್ತಿ ಮಾಡಿಕೊಳ್ಳುವುದನ್ನು ನಿಲ್ಲಿಸಿದರು. ಏಕೆಂದರೆ ಇತರೆ ಜಾತಿಗಳವರು, ಅದರಲ್ಲಿಯೂ ಮರಾಠರು, ಅವರೊಡನೆ ಬೆರೆಯಲು ನಿರಾಕರಿಸಿದರು.

ಇಷ್ಟಾದರೂ 19ನೆಯ ಶತಮಾನದ ಉದ್ದಕ್ಕೂ ಮಹಾರರಿಗೆ ಸಾಮಾಜಿಕ ಚಲನೆಯನ್ನು (ಮೊಬಿಲಿಟಿ) ಸಾಧಿಸಲು ಬ್ರಿಟಿಷ್ ಸೈನ್ಯದಲ್ಲಿ ದೊರಕಿದ ಅವಕಾಶಗಳು ಸಹಕಾರಿಯಾದವು. ಉದಾಹರಣೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ತಂದೆ ಮತ್ತು ತಾತ ಇಬ್ಬರೂ ಬ್ರಿಟಿಷ್ ಸೈನ್ಯದಲ್ಲಿದ್ದವರು. ಅಂಬೇಡ್ಕರರ ತಂದೆ ರಾಮಜಿ ಸಕ್ಪಾಲ್ ಅವರು ಸುಬೇದಾರ್ ಆಗಿದ್ದರು ಮತ್ತು ಸೈನಿಕಶಾಲೆಯ ಮುಖ್ಯೋಪಾಧ್ಯಾಯರಾಗಿದ್ದರು. ಅವರ ತಾಯಿ ಸಹ ಹೀಗೆಯೇ ಸೈನ್ಯದಲ್ಲಿ ಅವಕಾಶಗಳನ್ನು ಪಡೆದಿದ್ದ ಕುಟುಂಬದಿಂದ ಬಂದರು. ಸೈನ್ಯದಲ್ಲಿದ್ದ ಮಹಾರ್ ಕುಟುಂಬಗಳಿಗೆ ಸ್ವಾಭಾವಿಕವಾಗಿಯೇ ಇಂಗ್ಲಿಷ್ ಶಿಕ್ಷಣ ದೊರಕಿತಲ್ಲದೆ, ಬಾಂಬೆ ಮತ್ತಿತರ ನಗರಗಳಲ್ಲಿ ಇತರೆ ಉದ್ಯೋಗಗಳು ದೊರೆಯುವ ಸಾಧ್ಯತೆಯೂ ಹೆಚ್ಚಿತು. 100 ವರ್ಷಗಳ ಇಂತಹ ಇತಿಹಾಸವಿಲ್ಲದೆ ಅಂಬೇಡ್ಕರರಂತಹ ಶೈಕ್ಷಣಿಕ ಅವಕಾಶಗಳ ಬೆನ್ನಟ್ಟಿದ ವ್ಯಕ್ತಿತ್ವವು ಹೊರಹೊಮ್ಮಲು ಸಾಧ್ಯವಿರುತ್ತಿರಲಿಲ್ಲ.

ಇತಿಹಾಸದ ಪುಟಗಳಿಂದ ತಿಳಿಯುವುದಿಷ್ಟು: 1818 ಜನವರಿ 1ರ ಭೀಮಾ ಕೋರೆಗಾಂವ್‌ ಯುದ್ಧವನ್ನು ಸಮಕಾಲೀನರು ಬಹಳ ಮುಖ್ಯವಾದುದು ಎಂದು ಗ್ರಹಿಸಿರಲಿಲ್ಲ. ಆ ಯುದ್ಧದಲ್ಲಿ ವಿಜಯ ದೊರಕಿತು ಎನ್ನುವ ಭಾವನೆ ಎರಡೂ ಪಕ್ಷಗಳಲ್ಲಿರಲಿಲ್ಲ. ತದನಂತರದ ದಿನಗಳಲ್ಲಿ ಪೇಶ್ವೆಗಳ ಮತ್ತು ಮರಾಠರ ಪ್ರದೇಶಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡ ಬ್ರಿಟಿಷರು ಅಲ್ಲಿ ತಮ್ಮ ಕಂಟೋನ್ಮೆಂಟ್ ಸ್ಥಾಪಿಸಿದರು. 1822ರಲ್ಲಿ ಪೇಶ್ವೆ ಬಿಡಾರ ಹೂಡಿದ್ದ ಸ್ಥಳದಲ್ಲಿ ವಿಜಯಸ್ತಂಭವನ್ನು ನಿರ್ಮಿಸಿದರು; ಯುದ್ಧದಲ್ಲಿ ಭಾಗವಹಿಸಿದ್ದ ಬ್ರಿಟಿಷ್ ಅಧಿಕಾರಿಗಳ ಶೌರ್ಯಪ್ರವೃತ್ತಿಯನ್ನು ಶ್ಲಾಘಿಸುವ ವಾಕ್ಯಗಳನ್ನು ಕೊರೆಸಿದರು. 1850ರ ದಶಕದ ನಂತರವೇ ಮಹಾರ್ ಸೈನಿಕರನ್ನು ಸಹ ಗೌರವಿಸಬೇಕೆನ್ನುವ ಮಾತು ಕೇಳಿಬಂದದ್ದು. ಹೀಗೆ ಪ್ರಾರಂಭವಾದ ಮಹಾರ್ ಆಚರಣೆಗಳು 1927ರಲ್ಲಿ ಕೋರೆಗಾಂವ್‌ಗೆ ಅಂಬೇಡ್ಕರ್ ಭೇಟಿ ನೀಡಿದ ನಂತರ ಹೆಚ್ಚಿನ ಪ್ರಾಮುಖ್ಯ ಪಡೆದವು.

ರಾಷ್ಟ್ರಪ್ರೇಮವನ್ನು ‘ದುರ್ಜನರು ಕಡೆಯಲ್ಲಿ ಆಶ್ರಯಿಸುವ ವಿದ್ಯಮಾನ’ ಎನ್ನುತ್ತಾನೆ ಸ್ಯಾಮ್ಯುಯೆಲ್ ಜಾನ್ಸನ್. ನಾವು ಆ ಅತಿಗೆ ಹೋಗಬೇಕಿಲ್ಲ. ಆದರೆ ರಾಷ್ಟ್ರಭಕ್ತಿಯ ಪರೀಕ್ಷೆಗಳು ದಿನವೂ ನಡೆಯುತ್ತಿರುವ ಸಂದರ್ಭದಲ್ಲಿ ಪರಸ್ಪರ ಸಂಬಂಧ ಹೊಂದಿರುವ ಎರಡು ಅಂಶಗಳನ್ನು ಗಮನಿಸಬೇಕು. ಒಂದು, ವಸಾಹತುಕಾಲದಲ್ಲಿ ಬ್ರಿಟಿಷರ ಕೈಜೋಡಿಸಿ, ಅವರ ಸಾಮಂತರಾಗಿದ್ದ ಭಾರತದ ರಾಜಮನೆತನಗಳು ಮಹಾರರು ಎದುರಿಸುವ ರಾಷ್ಟ್ರಭಕ್ತಿಯ ಪರೀಕ್ಷೆಯನ್ನು ಎದುರಿಸುವುದಿಲ್ಲ. ಇದು ನಮ್ಮ ಇಂದಿನ ಸಾಂಸ್ಕೃತಿಕ ರಾಜಕಾರಣಕ್ಕೆ ಹಿಡಿದ ಕನ್ನಡಿ. ಎರಡನೆಯದು ಮತ್ತು ಮತ್ತಷ್ಟು ಮುಖ್ಯವಾದುದು, ಈ ಬಗೆಯ ವರ್ತಮಾನದ ಸಾಂಸ್ಕೃತಿಕ ರಾಜಕಾರಣವು ಒಡ್ಡುವ ಪಾವಿತ್ರ್ಯದ, ನಿಷ್ಠೆಯ ಪರೀಕ್ಷೆಗಳಿಗೆ ಇತಿಹಾಸದಿಂದ ಉತ್ತರ ದೊರೆಯುವುದಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry