ಮಹಿಳಾ ಮೀಸಲು ಮಸೂದೆ: ಬದಲಾಗದ ಕಥನಶೈಲಿ

7

ಮಹಿಳಾ ಮೀಸಲು ಮಸೂದೆ: ಬದಲಾಗದ ಕಥನಶೈಲಿ

Published:
Updated:
ಮಹಿಳಾ ಮೀಸಲು ಮಸೂದೆ: ಬದಲಾಗದ ಕಥನಶೈಲಿ

ಮಾರ್ಚ್ 8ರಂದು (ಇಂದು) ಅಂತರರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಹಿಳಾ ಎಂಪಿಗಳು  ಮಾತ್ರವೇ  ಸಂಸತ್‌ನಲ್ಲಿ ಮಾತನಾಡಬೇಕೆಂಬ ಸಲಹೆಯನ್ನು ಪ್ರಧಾನಿ ನರೇಂದ್ರ ಮೋದಿ  ಕಳೆದ ವಾರ  ಸಂಸತ್‌ನಲ್ಲಿ ಮುಂದಿಟ್ಟರು. ಮಹಿಳಾ ಎಂಪಿಗಳು ಮಾತನಾಡಬೇಕಾದ ಅಗತ್ಯದ ಬಗ್ಗೆ  ಪ್ರಧಾನಿ ತೋರಿದ  ಈ ಕಾಳಜಿ ಹೃದಯಸ್ಪರ್ಶಿಯಾದದ್ದು. ಇದಾದ ನಂತರ ಮಹಿಳಾ ಮೀಸಲು ಮಸೂದೆ ಬಗ್ಗೆಯೂ ಪ್ರಧಾನಿಯವರು ಭರವಸೆಯ ನುಡಿಗಳನ್ನಾಡಬಹುದು  ಎಂದು  ಇಟ್ಟುಕೊಂಡಿದ್ದ ನಿರೀಕ್ಷೆ ಮಾತ್ರ ಹುಸಿಯಾಗಿ ಹೋಯಿತು. ಹೀಗಾಗಿ ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಈವರೆಗೆ ನಡೆದುಕೊಂಡು ಬಂದಿರುವಂತಹ ರಾಜಕೀಯ ನಾಟಕದ ತದ್ರೂಪ ಮತ್ತೊಮ್ಮೆ ಪ್ರದರ್ಶನವಾದಂತಾಯಿತು.  ಮಹಿಳಾ ಮೀಸಲು ಮಸೂದೆ ಬಗ್ಗೆ ಈ ನಿರೀಕ್ಷೆ ಗರಿಗೆದರಲು ಕಾರಣ ಇತ್ತು. ನವದೆಹಲಿಯಲ್ಲಿ ಕಳೆದ ವಾರಾಂತ್ಯದಲ್ಲಿ  ಶಾಸಕಿಯರು ಹಾಗೂ ಸಂಸದೆಯರಿಗಾಗಿ ಎರಡು ದಿನಗಳ ಸಮ್ಮೇಳನವನ್ನು  ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್  ಏರ್ಪಡಿಸಿದ್ದರು. ಸಂಸತ್ ಹಾಗೂ ರಾಜ್ಯಗಳ ಶಾಸನಸಭೆಗಳಲ್ಲಿ ಸೂಕ್ತ ಮಹಿಳಾ ಪ್ರಾತಿನಿಧ್ಯದ  ಅಗತ್ಯವನ್ನು ಈ ಸಮ್ಮೇಳನದಲ್ಲಿ ಪ್ರತಿಪಾದಿಸಿದ್ದ  ರಾಷ್ಟ್ರಪತಿ ಪ್ರಣವ್ ಮುಖರ್ಜಿ,  ಮಹಿಳಾ ಮೀಸಲು ಮಸೂದೆ ಚರ್ಚೆಗೆ  ನಾಂದಿ ಹಾಡಿದ್ದರು.‘ಶಾಸನಸಭೆಗಳಲ್ಲಿ ಪ್ರಾತಿನಿಧ್ಯದ ಕೊರತೆ ಇದ್ದಲ್ಲಿ ಮಹಿಳಾ ಸಬಲೀಕರಣ ಅಸಾಧ್ಯ. ಸಂಸತ್‌ನಲ್ಲಿ ಇನ್ನೂ ಶೇ 33ರಷ್ಟು ಪ್ರಾತಿನಿಧ್ಯ ಸಾಧ್ಯವಾಗದಿರುವುದು ದುರದೃಷ್ಟಕರ.  ರಾಷ್ಟ್ರ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ಸ್ತ್ರೀಶಕ್ತಿ ಯನ್ನು ಗುರುತಿಸುವುದು ಅಗತ್ಯ. ಸಂಸತ್ ಹಾಗೂ ಶಾಸನಸಭೆಗಳಲ್ಲಿ ಅವರಿಗೆ ಸಲ್ಲಬೇಕಾದ ಪ್ರಾತಿನಿಧ್ಯ ನೀಡುವುದರಿಂದ ಮಾತ್ರ ಇದು ಸಾಧ್ಯ. ಸೂಕ್ತ ಪ್ರಾತಿನಿಧ್ಯವಿಲ್ಲದೆ ಮಹಿಳೆಯರ ಸಬಲೀಕರಣ ಹೇಗೆ ಸಾಧ್ಯ?’ ಎಂದು ರಾಷ್ಟ್ರಪತಿಗಳು ಪ್ರಶ್ನಿಸಿದ್ದರು.ಇದೇ ವೇದಿಕೆಯಲ್ಲಿ ಉಪ  ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರೂ ಮಹಿಳಾ ಮೀಸಲು ಮಸೂದೆ ಬೇಗನೇ ಜಾರಿಯಾಗಬೇಕು ಎಂದಿದ್ದರು. ಇಲ್ಲದಿದ್ದಲ್ಲಿ,  ಕನಿಷ್ಠ ಕಾನೂನು ಜಾರಿಯಾಗುವವರೆಗೆ,  ಚುನಾವಣೆಗಳಲ್ಲಿ ಮಹಿಳಾ ಅಭ್ಯರ್ಥಿಗಳ ನಾಮಕರಣ ಹೆಚ್ಚಿಸಲು ರಾಜಕೀಯ ಪಕ್ಷಗಳು ಸ್ವಯಂ ಪ್ರೇರಿತವಾಗಿ ಯತ್ನಿಸಬೇಕು ಎಂಬಂಥ   ಸಲಹೆಯನ್ನು ಅವರು ನೀಡಿದ್ದರು.ಸ್ವತಃ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳು ಪ್ರಸ್ತಾಪಿಸಿದ ಈ ವಿಷಯದ ಬಗ್ಗೆ ಸಮ್ಮೇಳನದ ಸಮಾರೋಪದಲ್ಲಿ ಪ್ರಧಾನಿ  ಮೋದಿ ಅವರು ಪ್ರಸ್ತಾಪಿಸುತ್ತಾರೆಂಬ ನಿರೀಕ್ಷೆ ಇದ್ದದ್ದು ಸಹಜ.  ಆದರೆ ಮೋದಿಯವರು ಈ ವಿಚಾರದಲ್ಲಿ ಮೌನ ತಾಳಿದರು. ಬದಲಿಗೆ  ಮತ್ತಷ್ಟು ವಿಸ್ತೃತ ವಿಚಾರಗಳಾದ ಮನೋಭಾವ ಬದಲಾವಣೆ ಹಾಗೂ ವಿವಿಧ ವಲಯಗಳಲ್ಲಿ ಮಹಿಳಾ ನಾಯಕತ್ವ  ಉತ್ತೇಜಿಸುವ ಅಗತ್ಯದ ಕುರಿತು ಮಾತನಾಡಿದರು.‘ಅಸೂಯೆ’ ಹಾಗೂ ‘ಕೀಳರಿಮೆ’  ಕಾರಣದಿಂದಾಗಿ ಸಂಸತ್ ಕಲಾಪಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್  ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಪ್ರಧಾನಿ ಮೋದಿ ಅವರು ಇತ್ತೀಚೆಗಷ್ಟೇ ವಾಗ್ದಾಳಿ ನಡೆಸಿದ್ದರು. ಈಗ ಇದೇ ವಿಚಾರಗಳನ್ನೇ  ಮಹಿಳಾ ಸಮ್ಮೇಳನದಲ್ಲೂ ಮೋದಿ ವಿಸ್ತರಿಸಿದ್ದು ವಿಶೇಷವಾಗಿತ್ತು. ಅಸೂಯೆಯಂತಹ  ಭಾವನೆ, ಮಹಿಳಾ ನಾಯಕತ್ವ ಬೆಳವಣಿಗೆಗೆ ಅಡ್ಡಿ ಎಂದು ಮೋದಿಯವರು ಪ್ರತಿಪಾದಿಸಿದ್ದು ಸರಿಯಾದದ್ದೇ. ‘ರಾಜಕೀಯ  ಎಂಬುದು ಸ್ಪರ್ಧೆಯ ಆಟ.ಆದರೆ ಈ  ಸ್ಪರ್ಧೆಯಲ್ಲಿ  ‘ಅಸೂಯೆ’  ಆವರಿಸಿದಲ್ಲಿ  ನೀವು ಹೆಚ್ಚು ಬೆಳೆಯಲಾಗದು. ಹೆಚ್ಚು ಪ್ರತಿಭಾವಂತ ಮಹಿಳೆ ನನ್ನ ಕ್ಷೇತ್ರಕ್ಕೆ ಬಂದರೆ ನನಗೇನಾಗಬಹುದು ಎಂದು ಬೇರೆಯವರನ್ನು ಬೆಳೆಯಲು ಬಿಡದೆ ಇರಬಹುದು.  ಆದರೆ ಬೇರೆಯವರನ್ನು ಬೆಳೆಯಲು ಬಿಟ್ಟಲ್ಲಿ ನೀವು  ಇನ್ನೂ ಮೇಲ್ಮಟ್ಟಕ್ಕೆ ಹೋಗಬಹುದು. ಆಗ ಪಿರಮಿಡ್ ರೀತಿಯ ರಚನೆ ರೂಪುತಳೆಯುತ್ತದೆ’  ಎಂಬಂಥ ಹಿತವಚನವನ್ನು ಮೋದಿ ನೀಡಿದ್ದೂ ಸರಿಯಾದದ್ದೇ. ‘ಸಬಲರಾಗಿಲ್ಲದವರನ್ನು ಸಬಲೀಕರಣಗೊಳಿಸಲಾಗುತ್ತದೆ. ಆದರೆ ಮಹಿಳೆಯನ್ನು ಸಬಲಗೊಳಿಸಲು ಪುರುಷರು ತಾನೇ ಯಾರು?  ಕುಟುಂಬ ಹಾಗೂ ಸಾಮಾಜಿಕ ಬದುಕಿನ ಅಡೆತಡೆಗಳನ್ನು ನಿರ್ವಹಿಸುವಲ್ಲಿ ಪುರುಷರಿಗಿಂತ ಮಹಿಳೆಯಲ್ಲಿರುವ ಅಂತರ್ಗತ ಶಕ್ತಿ ಹೆಚ್ಚು’ ಎಂಬಂತಹ ಪ್ರಧಾನಿ ಮಾತು ಈಗಾಗಲೇ ಪದೇ ಪದೇ ಕೇಳಿರುವಂತಹ ವೈಭವೀಕರಣದ ನುಡಿಗಳಷ್ಟೇ.‘ಏಕಕಾಲದಲ್ಲಿ ಬಹು ಕಾರ್ಯ ನಿರ್ವಹಿಸುವಂತಹ  ಸಾಮರ್ಥ್ಯ  ಆಧುನಿಕ ಕಾಲದ  ಆಡಳಿತದ ಮೂಲ ದ್ರವ್ಯ. ಭಾರತೀಯ ಮಹಿಳೆಯರಿಗೆ ಇದು ಸಹಜವಾಗಿಯೇ ಬರುತ್ತದೆ’ ಎಂದು ಶ್ಲಾಘಿಸಿರುವ ಮೋದಿಯವರು  ತಂತ್ರಜ್ಞಾನ ಬಳಕೆಯ ಮೂಲಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಮಹಿಳಾ ಜನಪ್ರತಿನಿಧಿಗಳು  ಮುಂದಾಗಬೇಕೆಂದು ಕರೆ ನೀಡಿದ್ದಾರೆ.ಮಹಿಳೆಯ ಅಭಿವೃದ್ಧಿಗಿಂತ ಮಹಿಳಾ ನೇತೃತ್ವದ ಅಭಿವೃದ್ಧಿ ಆಶಯದ ಕನಸನ್ನೂ  ಮೋದಿ ಬಿತ್ತಿದ್ದಾರೆ.  ‘ಭಾರಿ ಸವಾಲು ಎದುರಾದಾಗಷ್ಟೇ  ನಮ್ಮ ಬಲ ನಮಗೆ ಅರಿವಾಗುತ್ತದೆ.  ಪತಿಯನ್ನು ಕಳೆದುಕೊಳ್ಳುವ ಮಹಿಳೆ  ಕುಟುಂಬವನ್ನು ನೋಡಿಕೊಳ್ಳಲು ಜೀವನವನ್ನೇ ಮುಡಿಪಾಗಿಡುತ್ತಾಳೆ’ ಎಂದಿದ್ದಾರೆ ಮೋದಿ.   ಹೀಗೆ ಉದ್ದಕ್ಕೂ ಕುಟುಂಬದ ಚೌಕಟ್ಟಿನಲ್ಲಿಯೇ ಮಹಿಳಾ ಜನಪ್ರತಿನಿಧಿಗಳ ಸಮ್ಮೇಳನದಲ್ಲಿ  ಪ್ರಧಾನಿ ಮಾತನಾಡಿದ್ದಾರೆ. ಶಾಸನಸಭೆಗಳಲ್ಲಿ   ಮೀಸಲಾತಿ ಬಗ್ಗೆ ಮಹಿಳಾ ಆಶೋತ್ತರಗಳ ಬಗ್ಗೆ ಮಾತನಾಡದಿದ್ದುದು ಅನೇಕ ಮಂದಿಗೆ ಸಹಜವಾಗಿಯೇ  ನಿರಾಸೆ ತಂದಿದೆ.ಮಹಿಳೆಯಲ್ಲಿ ಎರಡು ಆಯಾಮಗಳಿವೆ ಎಂದೂ ಪ್ರಧಾನಿ ಹೇಳಿದ್ದಾರೆ. ಅಡುಗೆ ಮಾಡುತ್ತಾ  ಕೈ ಬೆರಳುಗಳನ್ನು ಸುಟ್ಟುಕೊಂಡಾಗ ಪತಿಯ ಲಕ್ಷ್ಯವನ್ನು ಬಯಸುವ ಮೃದುತನ ಒಂದು. ಮತ್ತೊಂದು, ಹೊತ್ತಿ ಉರಿಯುವ ಬೆಂಕಿಯಲ್ಲಿ ಸಿಲುಕಿದ ಮಗುವನ್ನು ರಕ್ಷಿಸುವಾಗಿನ ಬಲಶಾಲಿ ಆಯಾಮ ಎಂದಿರುವುದಂತೂ ಮಹಿಳೆಯನ್ನು ಮತ್ತದೇ  ಚೌಕಟ್ಟುಗಳಲ್ಲಿ ಬಿಂಬಿಸುವುದೇ ಆಗಿದೆ. ‘ಓಲ್ಡ್ ಆರ್ಡರ್ ಚೇಂಜೆತ್ ಯೀಲ್ಡಿಂಗ್ ಪ್ಲೇಸ್ ಟು ನ್ಯೂ’ ( ಹಳೆಯ ವ್ಯವಸ್ಥೆ ಕ್ರಮೇಣ ಹೊಸ ವ್ಯವಸ್ಥೆಗೆ ಹಾದಿ ಮಾಡಿಕೊಡುತ್ತದೆ) ಎಂಬುದು  ಇಂಗ್ಲಿಷ್ ಕವಿ ಟೆನಿಸನ್‌ನ ನುಡಿ. ಈ ಮಾತು ಮಹಿಳಾ ಮೀಸಲು ಮಸೂದೆ ವಿಚಾರದಲ್ಲಿ ಮಾತ್ರ ಯಾಕೋ ನಿಜವಾಗುತ್ತಿಲ್ಲ. ಹಳೆಯ  ಅಥವಾ ಯಥಾಸ್ಥಿತಿವಾದಕ್ಕೆ ಅಂಟಿಕೊಂಡಿರುವ ಪುರುಷ ಮನಸ್ಥಿತಿ ಇದಕ್ಕೆ ಕಾರಣವೆ?  ಅಧಿಕಾರ ಹಂಚಿಕೆ ಬಗೆಗಿನ ಅಭದ್ರತೆಯೂ ಇದಕ್ಕೆ ಕಾರಣವೆ?‘ಲೋಕಸಭೆಯಲ್ಲಿ ಎಲ್ಲಾ ಮಹಿಳಾ ಸ್ಪೀಕರ್‌ಗಳೂ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಮಹಿಳೆಯರಿಗೆ ಅವಕಾಶಗಳು ಲಭ್ಯವಾದಾಗ ಯಶಸ್ಸಿನ ಪ್ರಮಾಣ ಪುರುಷರದ್ದಕ್ಕಿಂತ  ಉತ್ತಮವಾಗಿರುತ್ತದೆ’ ಎಂಬುದನ್ನೂ ಮೋದಿಅವರು ಭಾಷಣದಲ್ಲಿ ಗುರುತಿಸಿದ್ದಾರೆ. ಯುದ್ಧದಿಂದ ಬಳಲಿದ  ಆಫ್ರಿಕನ್ ರಾಷ್ಟ್ರ  ರುವಾಂಡ  ಮರುಕಟ್ಟುವಲ್ಲಿ ಮಹಿಳೆಯರ ಪಾತ್ರವನ್ನೂ ಅವರು ಸ್ಮರಿಸಿದ್ದಾರೆ. ರುವಾಂಡ  ಪಾರ್ಲಿಮೆಂಟ್‌ನಲ್ಲಿ  ವಿಶ್ವದಲ್ಲೇ ಅತಿ ಹೆಚ್ಚು  ಅಂದರೆ

ಶೇ 65ರಷ್ಟು ಮಹಿಳಾ ಪ್ರಾತಿನಿಧ್ಯವಿದೆ.ಭಾರತದಲ್ಲಿ ಈಗಿನ ಲೋಕಸಭೆಯಲ್ಲಿರುವುದು ಕೇವಲ  62 ಮಹಿಳಾ ಸಂಸತ್ ಸದಸ್ಯೆಯರು. ಎಂದರೆ ಶೇ 11ರಷ್ಟು ಪ್ರಮಾಣವನ್ನು ಈ ಸಂಖ್ಯೆ ಪ್ರತಿನಿಧಿಸುತ್ತದೆ.   ಪ್ರಜಾಪ್ರಭುತ್ವ ಎಂಬುದು ಪ್ರತಿನಿಧೀಕರಣದ ರಾಜಕಾರಣ.  ಸುಮಾರು ಶೇ 49ರಷ್ಟಿರುವ ಮಹಿಳೆಯರ ಪ್ರಾತಿನಿಧ್ಯ ಶೇ 11ರಷ್ಟಿದ್ದರೆ  ಹೇಗೆ?1997ರಲ್ಲಿ ಲೋಕಸಭೆಯಲ್ಲಿ ಶೇ 3.5ರಷ್ಟಿದ್ದ ಮಹಿಳಾ ಪ್ರಾತಿನಿಧ್ಯ 2009ರಲ್ಲಿ ಶೇ 10ಕ್ಕೆ ಏರಿತ್ತು.  ಈಗ 2013ರಲ್ಲಿ ರಚನೆಯಾಗಿರುವ 16ನೇ ಲೋಕಸಭೆಯಲ್ಲಿ ಮಹಿಳಾ ಪ್ರಾತಿನಿಧ್ಯ ಶೇ 11ಕ್ಕೇರಿದೆ ಅಷ್ಟೆ. ಇಷ್ಟೊಂದು ಮಂದಗತಿಯ ಪ್ರಗತಿ ಭರವಸೆ ಮೂಡಿಸುವಂತಹದ್ದಲ್ಲ. ಹೀಗಾಗಿಯೇ ಮಹಿಳಾ ಮೀಸಲಾತಿಯ ಅಗತ್ಯವನ್ನು ಇದು ಎತ್ತಿ ಹಿಡಿಯುತ್ತದೆ. ಆದರೆ ಮಹಿಳಾ ಮೀಸಲು ಮಸೂದೆಯ ಕಥಾನಕ, ಪುರುಷ ಪ್ರಧಾನ ಪೂರ್ವಗ್ರಹ ಹಾಗೂ ಮಹಿಳೆ ಕುರಿತ ಅನುಗ್ರಹಪೂರ್ವಕ ಧೋರಣೆಗಳಿಗೆ ಕನ್ನಡಿ ಹಿಡಿಯುತ್ತದೆ.ಜೊತೆಗೆ ಸಾರ್ವಜನಿಕ ಬದುಕಿನಲ್ಲಿನ ‘ಬಾಲ್ ಕಟಿ’ (ತುಂಡುಗೂದಲಿನ) ಮಹಿಳೆಯರ ಬಗ್ಗೆ ಮಾತನಾಡುವ ಪುರುಷರ ಆಷಾಢಭೂತಿತನವನ್ನೂ ಬಯಲುಗೊಳಿಸುತ್ತದೆ. 1996ರಲ್ಲಿ ಎಚ್.ಡಿ. ದೇವೇಗೌಡರು ಪ್ರಧಾನಿಯಾಗಿದ್ದಾಗ ಮಂಡಿತವಾದದ್ದು ಈ ಮಹಿಳಾ ಮೀಸಲು ಮಸೂದೆ.  ಬರೋಬ್ಬರಿ ಎರಡು ದಶಕಗಳೇ ಕಳೆದು ಹೋಗಿವೆ.2010ರ ಮಾರ್ಚ್ 9ರಂದು  ರಾಜ್ಯಸಭೆಯಲ್ಲಿ ಬಿಜೆಪಿ ಹಾಗೂ ಎಡ ಪಕ್ಷಗಳ ಸಹಮತದೊಂದಿಗೆ ಯುಪಿಎ ನೇತೃತ್ವದ ಕಾಂಗ್ರೆಸ್ ಸರ್ಕಾರ  ಮಹಿಳಾ ಮೀಸಲು ಮಸೂದೆಗೆ ಅನುಮೋದನೆ ಪಡೆದು ಹೊಸ  ಇತಿಹಾಸವನ್ನೇನೊ ನಿರ್ಮಿಸಿತು.  ಆದರೆ ಲೋಕಸಭೆ  ಅನುಮೋದನೆ ದಕ್ಕಲಿಲ್ಲ.   2014ರ ಆರಂಭದಲ್ಲಿ 16ನೇ ಲೋಕಸಭಾ ಚುನಾವಣೆಗಳಿಗಾಗಿ 15ನೇ ಲೋಕಸಭೆ   ವಿಸರ್ಜನೆಯಾಯಿತು. ಮಂಡನೆಗೆ ಕಾದಿದ್ದ ಮಸೂದೆಯೂ ಅಸ್ತಿತ್ವ ಕಳೆದುಕೊಂಡಿತು.ರಾಜಕೀಯ ಪಕ್ಷಗಳ ಮಧ್ಯೆ ಒಮ್ಮತ ಮೂಡಿಸುವುದು ಅಗತ್ಯ ಇರುವುದರಿಂದ ಮಹಿಳಾ ಮೀಸಲು ಮಸೂದೆ ಮಂಡನೆ ಬಗ್ಗೆ ನಿಗದಿತ ಕಾಲ ಚೌಕಟ್ಟು ನೀಡುವುದು ಅಸಾಧ್ಯ ಎಂದು ಕೇಂದ್ರ  ಕಾನೂನು ಸಚಿವ ಡಿ.ವಿ. ಸದಾನಂದ ಗೌಡರು ಈಗ ಹೇಳಿದ್ದಾರೆ. ಆದರೆ ಸರ್ಕಾರದ ಪ್ರಯತ್ನ ಮುಂದುವರಿದಿದೆ ಎಂಬಂಥ  ಉಪಚಾರದ ಮಾತುಗಳನ್ನೂ  ಲೋಕಸಭೆಗೆ ಇತ್ತೀಚೆಗೆ ನೀಡಿದ ಲಿಖಿತ ಉತ್ತರದಲ್ಲಿ ಅವರು ತಿಳಿಸಿದ್ದಾರೆ.1996ರಿಂದ  ಈ ಇಪ್ಪತ್ತು ವರ್ಷಗಳ  ಪಯಣದಲ್ಲಿ ಮಹಿಳಾ ಮೀಸಲು ಮಸೂದೆ ಕುರಿತಾದ ಚರ್ಚೆ  ಪ್ರತಿ ಲೋಕಸಭಾ ಅಧಿವೇಶನ ಸಂದರ್ಭದಲ್ಲೂ ದೊಡ್ಡ ಸದ್ದು ಮಾಡಿ ಹಾಗೆಯೇ ಅಡಗಿ ಹೋಗುತ್ತದೆ ಎಂಬುದು ವಿಷಾದನೀಯ.  ಮುಂದಕ್ಕೊಯ್ಯುವ ಛಾತಿ ನಮ್ಮ ನೇತಾರರಿಗೆ ಇಲ್ಲ ಎಂಬುದು ನಮ್ಮ ಪಿತೃ ಪ್ರಧಾನ ಸಮಾಜದಲ್ಲಿರುವ ದ್ವಿಮುಖ ಧೋರಣೆಗಳಿಗೆ ಮತ್ತೊಂದು ಸಾಕ್ಷಿ ಅಷ್ಟೆ.ಮಹಿಳಾ ಸಬಲೀಕರಣದ ಬಣ್ಣದ ಮಾತುಗಳು  ಆಲಂಕಾರಿಕ  ಅಥವಾ ಸಾಂಕೇತಿಕ ಕ್ರಿಯೆಗಳಿಗಷ್ಟೇ  ಸೀಮಿತವಾಗಿಬಿಡುತ್ತವೆ. ಮಹಿಳಾ ಮೀಸಲು ಮಸೂದೆ ಜಾರಿಯಾದಲ್ಲಿ ಪ್ರಭಾವಿ ಮಹಿಳೆಯರಿಗೆ ನೆರವಾಗುತ್ತದೆ. ಸಾಧಾರಣ ಮಹಿಳೆಯರಿಗೆ ಈ ಸೌಲಭ್ಯ ದಕ್ಕುವುದಿಲ್ಲ  ಎಂಬಂತಹ ವಾದ ಇದೆ. ಇದು ಭಾಗಶಃ ಸತ್ಯವೂ ಹೌದು. ಏಕೆಂದರೆ ಕಾನೂನು ಮಾತ್ರದಿಂದಲೇ ಸಮಾಜವನ್ನು ಬದಲಾಯಿಸುವುದು ಸಾಧ್ಯವಿಲ್ಲ ಎಂಬುದು ಕಟು ವಾಸ್ತವ.  ಇಂತಹ ಮೀಸಲು ಸೌಲಭ್ಯವನ್ನು ಪ್ರಭಾವಿಗಳು  ಆರಂಭದಲ್ಲಿ ಬಳಸಿಕೊಳ್ಳುತ್ತಾರೆಂಬುದು ಸತ್ಯಸ್ಯ ಸತ್ಯ.  ಆದರೆ ಕ್ರಮೇಣ ರಾಜಕೀಯ ನಾಯಕತ್ವ ಮಹಿಳೆಯರಲ್ಲಿ ಅರಳುತ್ತದೆ ಎಂಬುದೂ ಅಷ್ಟೇ ನಿಜ. ಪರಿಶಿಷ್ಟ ಜಾತಿ, ಪಂಗಡ ಮೀಸಲು ಸಂದರ್ಭದಲ್ಲೂ ಇಂತಹ ಬೆಳವಣಿಗೆಗಳು ಆಗಿವೆ.ಈ ಮಸೂದೆಯಿಂದ ಮೇಲ್ಜಾತಿ ಹಾಗೂ ಸುಶಿಕ್ಷಿತ  ಮಹಿಳೆಯರಿಗೆ ಹೆಚ್ಚು ಲಾಭವಾಗುತ್ತದೆ. ಹೀಗಾಗಿ  ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ  ಮಹಿಳೆಯರಿಗೆ ಒಳ ಮೀಸಲಾತಿಗೆ ಅವಕಾಶವಿರಬೇಕೆಂಬ  ಒತ್ತಾಯವೂ ದೊಡ್ಡದಾದ ವಿವಾದವೇ ಆಗಿದೆ.  ಆದರೆ ಚುನಾವಣಾ ವ್ಯವಸ್ಥೆ ಜಾರಿಗೆ ಬಂದಾಗಲಿಂದಲೂ ಪುರುಷರೇ ಎಲ್ಲಾ ರಾಜಕೀಯ ಅಧಿಕಾರ ಅನುಭವಿಸಿದ್ದಾರೆ. ಹೀಗಿದ್ದಾಗ  ಈಗಲೂ ಮಹಿಳೆಯರಿಗೆ ಸಿಗಬೇಕಾದ ಅವಕಾಶಗಳಿಗೆ ನೆಪಗಳನ್ನು ತೆಗೆದು ಅಡ್ಡಗಾಲು ಹಾಕುವ ಪ್ರವೃತ್ತಿ ಮುಂದುವರಿದಿದೆ. ಆರು ದಶಕಗಳಿಗೂ ಹೆಚ್ಚು ಕಾಲ ಸತತವಾಗಿ ಮೆರೆದ ಪುರುಷ ಪ್ರಾಧಾನ್ಯ ಕೋಟೆಯನ್ನು ಮಹಿಳಾ ಮೀಸಲು ಮಸೂದೆ ಛಿದ್ರಗೊಳಿಸಲಿದೆ ಎಂಬುದೇ ಇಲ್ಲಿ ನಿಜವಾದ ಚಿಂತೆ. ಇದು ಒಂದು ಬಗೆಯ ಸಾಮಾಜಿಕ, ಮಾನಸಿಕ ಹಾಗೂ ರಾಜಕೀಯ ತಳಮಳ.ಭಾರತೀಯ ರಾಜಕಾರಣವನ್ನು ನಿಕಟವಾಗಿ ಪರಿಶೀಲಿಸಿದಾಗ ಎರಡು ವಿಶಿಷ್ಟ ಪ್ರವೃತ್ತಿಗಳನ್ನು ಗಮನಿಸಬಹುದು. ಮೊದಲಿಗೆ ಆರಂಭದಲ್ಲಿ ಬಂದ ಮಹಿಳೆಯರು ತಮ್ಮ ಕೌಟುಂಬಿಕ ಹಿನ್ನೆಲೆ ಬಳಸಿಕೊಂಡಿರಬಹುದು. ಆಮೇಲೆ  ರಾಜಕೀಯ ಕೆರಿಯರ್‌ನ ಪ್ರಕ್ರಿಯೆಯಲ್ಲಿ ತಮ್ಮದೇ ಶೈಲಿಯ ರಾಜಕೀಯ ನಾಯಕಿಯರಾಗಿಯೂ ಅವರು ಹೊರಹೊಮ್ಮಿದ್ದಾರೆ. ಇಂತಹ ಪ್ರವೃತ್ತಿಗೆ ಹೊಳೆಯುವ  ಉದಾಹರಣೆಯಾಗಿದ್ದಾರೆ ಇಂದಿರಾ ಗಾಂಧಿ.ದೊಡ್ಡ ರಾಜಕೀಯ ಕೌಶಲದ ನಾಯಕಿ ಅವರು ಎಂಬುದನ್ನು ಅವರ ಟೀಕಾಕಾರರೂ ಒಪ್ಪಿಕೊಳ್ಳುತ್ತಾರೆ. ಹಾಗೆಯೇ ಯಾವುದೇ ಕುಟುಂಬದ ಹಿನ್ನೆಲೆ ಅಥವಾ ಗಾಡ್ ಫಾದರ್‌ಗಳ ನೆರಳಿಲ್ಲದೆ ರಾಜಕೀಯ ನಾಯಕಿಯರಾದವರೂ ಇದ್ದಾರೆ. ಈ ಪ್ರವೃತ್ತಿಗೆ ಮಮತಾ ಬ್ಯಾನರ್ಜಿ ಉದಾಹರಣೆ. ಹೀಗಾಗಿ  ‘ದೀದಿ, ಬೀಬಿ, ಬೇಟಿ’ಗೆ ಲಾಭದಾಯಕ ಎಂಬ ಹಿನ್ನೆಲೆಯಲ್ಲಿ ಮಹಿಳಾ ಮೀಸಲು ವಿರೋಧಿಸುವುದು ಸಲ್ಲದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry