ಬುಧವಾರ, ಜನವರಿ 29, 2020
27 °C

ಮಾದರಿ ಪುರುಷರು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಜಹಾಂಗೀರ್ ರತನ್ ದಾದಾಭಾಯ್ ಟಾಟಾರವರನ್ನು ಜನ ನೆನಪಿಡುವುದು ಜೆ.ಆರ್‌.ಡಿ ಟಾಟಾ ಎಂದೇ. ಇಡೀ ಟಾಟಾ ಸಮೂಹದ ಕಂಪನಿಗಳ ಅಧ್ಯಕ್ಷರಾಗಿದ್ದ ಟಾಟಾರವರನ್ನು ಜನ ನೆನೆಸುವುದು ಅವರ ಔದಾರ್ಯಕ್ಕೆ, ವಿನಯಶೀಲತೆಗೆ.೧೮೬೮ ರಲ್ಲಿ ಜೆಮಶೇಡಜೀ ಟಾಟಾರವರಿಂದ ಸ್ಥಾಪನೆಯಾದ ಕಂಪನಿ ಬೆಳೆದದ್ದು ರಾಷ್ಟ್ರೀಯ ಭಾವನೆಯಿಂದ. ಹತ್ತಾರು ವಿಭಾಗಗಳಲ್ಲಿ ಬೆಳೆದು ಬೃಹತ್ ಉದ್ಯಮಗಳ ಗುಂಪೇ ಆಯಿತು. ಜೆಆರ್‌ಡಿ ನೇತೃತ್ವದಲ್ಲಿ 10 ಕೋಟಿ ಡಾಲರ್‌ (ಈಗಿನ ಲೆಕ್ಕದಲ್ಲಿ ಸುಮಾರು ₨ 620 ಕೋಟಿ) ವ್ಯವಹಾರ ಮಾಡು­ತ್ತಿದ್ದ ಕಂಪನಿ ಬೆಳೆದು 500 ಕೋಟಿ ಡಾಲರ್ (ಸುಮಾರು ₨ 31000 ಕೋಟಿ) ವ್ಯವಹಾರ ಮಾಡುವಂತಾಯಿತು. ಅವರು ಅಧಿಕಾರ ಸ್ವೀಕರಿಸಿದಾಗ ಇದ್ದ ಕಂಪನಿ­ಗಳ ಸಂಖ್ಯೆ ಹದಿನಾಲ್ಕು. ಆದರೆ ಅವರು ಅಧಿಕಾರ ಬಿಡುವಾಗ ಅವುಗಳ ಸಂಖ್ಯೆ ತೊಂಭತ್ತೈದು!ಉದ್ಯಮಪತಿಗಳ ಸಾಲಿನಲ್ಲಿ ಅವರೊಬ್ಬ ಆದರ್ಶವಾಗಿ ನಿಂತಿ­ದ್ದರು. ಭಾರತದ ಅತ್ಯುನ್ನತ ಗೌರವವಾದ ಭಾರತರತ್ನವನ್ನು ಪಡೆಯು­ವುದ­ರೊಂ­ದಿಗೆ ಫ್ರಾನ್ಸ್ ದೇಶದ ‘ಲೆಜನ್ ಆರ್ಫ ಆನರ್’ ಗೌರವಕ್ಕೂ ಪಾತ್ರರಾಗಿದ್ದರು.ಭಾರತದಲ್ಲಿ ವೈಮಾನಿಕತೆಯನ್ನು ಹುಟ್ಟು ಹಾಕಿದ್ದೇ ಜೆಆರ್‌ಡಿ ಟಾಟಾ. ೧೯೩೨ ರಲ್ಲಿ ಟಾಟಾ ಏರ್‌ಲೈನ್ಸ್‌ನಿಂದ ಪ್ರಾರಂಭವಾದದ್ದು ಮುಂದೆ ಏರ್ ಇಂಡಿಯಾ ಆಯಿತು. ಟಾಟಾ ವಿಮಾನಯಾನದ ಸ್ಥಾಪಕರಾಗಿದ್ದರು, ಅದರ ಮಾಲೀಕರೂ ಆಗಿದ್ದರು. ಆಗ ನಡೆದ ಒಂದು ಘಟನೆಯನ್ನು ಹಿಂದಿ ಸಿನಿಮಾದ ಪ್ರಖ್ಯಾತ ಸಂಗೀತಗಾರರಾದ ಲಕ್ಷ್ಮೀಕಾಂತ-ಪ್ಯಾರೇಲಾಲ್‌ರ ಜೋಡಿಯ ಪ್ಯಾರೇಲಾಲ್ ನೆನಪಿಸಿಕೊಂಡದ್ದು ಹೀಗೆ.ಪ್ಯಾರೇಲಾಲ್ ತಿರುಪತಿಗೆ ಹೋಗಲೆಂದು ಮುಂಬೈ ವಿಮಾನ ನಿಲ್ದಾಣಕ್ಕೆ ಹೋಗಿ ತಮ್ಮ ಸೂಟಕೇಸನ್ನು ಒಪ್ಪಿಸಿ ಭದ್ರತೆ ಪರೀಕ್ಷೆಗೆಂದು ಸಾಲಿನಲ್ಲಿ ನಿಂತಾಗ ತಮ್ಮ ಮುಂದೊಬ್ಬ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತಪಾಸಣೆ ಮಾಡುತ್ತಿರು­ವುದು ಕಣ್ಣಿಗೆ ಬಿತ್ತು. ತಕ್ಷಣ ಅವರು ತಮ್ಮ ಹಿಂದೆ ನಿಂತಿದ್ದ ಮಗನಿಗೆ ಹೇಳಿದರು, ‘ಈಗ ನಮ್ಮ ಮುಂದೆ ನಿಂತ ವ್ಯಕ್ತಿಯನ್ನು ಸರಿಯಾಗಿ ಗಮನಿಸು. ಅವರಿಂದ ನೀನು ಕಲಿಯಬೇಕಾದದ್ದು ಬಹಳಷ್ಟಿದೆ’. ಮಗ ನೋಡಿದ. ಆ ಮುಂದಿದ್ದ ವ್ಯಕ್ತಿಯ ದೇಹವನ್ನು ಅಧಿಕಾರಿಗಳು ತಡವಿ, ತಡವಿ ಪರೀಕ್ಷೆ ಮಾಡುತ್ತಿದ್ದರು. ಆ ಮುಂದಿದ್ದ ವ್ಯಕ್ತಿಯೇ ಜೆಆರ್‌ಡಿ ಟಾಟಾ! ಆಗ ವಿಮಾನ ನಿಲ್ದಾಣವೇ ಅವರದಾಗಿತ್ತು. ಯಾವ ಪರೀಕ್ಷೆಯೂ ಇಲ್ಲದೇ ನೇರವಾಗಿ ನಡೆದುಕೊಂಡು ಹೋಗಿ ಯಾವ ವಿಮಾನವನ್ನಾದರೂ ಏರಬಹುದಿತ್ತು. ಆದರೆ ಅವರೇ ತೀರ್ಮಾನ ಮಾಡಿದ್ದ­ರಂತೆ, ‘ಯಾವ ನಿಯಮಗಳನ್ನು ಎಲ್ಲರಿಗಾಗಿ ಮಾಡಲಾಗಿದೆಯೋ ಅದನ್ನು ಮೊದಲು ಅನುಸರಿಸಬೇಕಾದವನು ನಾನೇ’ ಎಂದು. ಅದಕ್ಕಾಗಿಯೇ ಎಲ್ಲರಂತೆ ಅವರೂ ಸರದಿಯಲ್ಲಿ ನಿಂತು ದೇಹಪರೀಕ್ಷೆಗೆ ತಮ್ಮನ್ನು ಒಡ್ಡಿಕೊಂಡಿದ್ದರು!ಇದೇ ರೀತಿ ತಮ್ಮ ಯಾವುದೇ ಹೋಟೆಲ್‌ನಲ್ಲಿ ತಂಗಲು ಹೋದಾಗ ಅಲ್ಲಿಯ ರಜಿಸ್ಟರ್‌ನಲ್ಲಿ ತಾವೇ ಎಲ್ಲ ವಿವರಗಳನ್ನು ಬರೆದು ಸಹಿ ಮಾಡುತ್ತಿದ್ದ­ರಂತೆ. ಇದನ್ನು ಇಂದಿನ ಸಣ್ಣ ಪುಟ್ಟ ಅಧಿಕಾರಿಗಳಿಗೆ, ತಾರೆಯರಿಗೆ ಹೋಲಿಸಿ ನೋಡಿ. ಅವರ ಪರವಾಗಿ ಯಾರೋ ಬರೆಯಬೇಕು. ಹಾಗೆ ದಾಖಲಿಸುವುದು ಅವರ ದರ್ಜೆಗೆ ಕಮ್ಮಿ ಎನ್ನಿಸುತ್ತದೆಯಲ್ಲ! ಮುಂಬೈನ ವಾಂಖೆಡೆ ಸ್ಟೇಡಿಯಂ ಕಟ್ಟಿದಾಗ ಅದು ಅವರ ಮಾಲಿಕತ್ವ­ದಲ್ಲಿತ್ತು. ಒಮ್ಮೆ ಸಾದಾ ವೇಷದಲ್ಲಿ ಒಂದು ರಣಜಿ ಪಂದ್ಯವನ್ನು ನೋಡಲು ಹೋದಾಗ ಇವರನ್ನು ಗುರುತು ಹಿಡಿಯದ ಕಾವಲುಗಾರ ಒಳಗೆ ಬಿಡಲಿಲ್ಲ. ಇವರೂ ಒತ್ತಾಯಿಸದೇ ಬದಿಗೆ ಬಂದು ಮುಳ್ಳು ತಂತಿಯ ಹಿಂದೆಯೇ ನಿಂತು ಆಟ ನೋಡುತ್ತಿದ್ದರಂತೆ. ಆಗ ಇವರನ್ನು ಗಮನಿಸಿದ ಅಧಿಕಾರಿಯೊಬ್ಬರು ಓಡಿ ಬಂದು ಇವರನ್ನು ಕರೆದೊಯ್ದು ಕ್ಷಮೆ ಯಾಚಿಸಿ ಕಾವಲುಗಾರನಿಗೆ ಶಿಕ್ಷೆ ಕೊಡಬಯಸಿದರಂತೆ. ಆಗ ಟಾಟಾ ಆ ಕಾವಲುಗಾರನನ್ನು ಮೆಚ್ಚಿಕೊಂಡು ಅವನು ಮಾಡಿದ ಕೆಲಸಕ್ಕೆ ಬಹುಮಾನ ನೀಡಿದರಂತೆ!ಒಬ್ಬ ಸಮರ್ಥ ಅಧಿಕಾರಿಗೂ, ದೂರದೃಷ್ಟಿಯ ನೇತಾರನಿಗೂ ಇರುವ ವ್ಯತ್ಯಾಸ ಇದು. ಸಂಸ್ಥೆಯನ್ನು ನಡೆಸುವ ನಾಯಕರ ಚಿಂತೆಗೂ, ಆ ಸಂಸ್ಥೆಯನ್ನು ನಿರ್ಮಿಸಿದ ಯುಗಪುರುಷನ ಚಿಂತನೆಗೂ ಇರುವ ಭೇದ. ಅಂತೆಯೇ ಜೆ.ಆರ್‌.ಡಿ ಟಾಟಾರಂಥವರು ಶತಮಾನಗಳ ನಂತರವೂ ಆದರ್ಶಪುರುಷರಾಗಿ ನಿಲ್ಲುತ್ತಾರೆ. ವ್ಯವಹಾರ ಚತುರತೆಯೊಂದಿಗೆ ತಮ್ಮ ಪ್ರೀತಿಯನ್ನು, ಮಾರ್ದವತೆಯನ್ನು ಹಾಗೂ ವಿನಯಶೀಲತೆ ಮೆರೆದ ಜೆಆರ್‌ಡಿ ದಿವಂಗತರಾದಾಗ ಭಾರತದ ಪಾರ್ಲಿಮೆಂಟ್ ಆ ದಿನದ ಅಧಿವೇಶನ ಮುಂದೂಡಿ, ಎದ್ದು ನಿಂತು  ಗೌರವ ಸಮ­ರ್ಪಿಸಿತು. ಈ ಗೌರವ ಅತ್ಯಂತ ಆದರಣೀಯರಿಗೆ ಮಾತ್ರ ದೊರಕಬಹು­ದಾದ ಭಾಗ್ಯ. ಅದಕ್ಕೆ ಜೆ.ಆರ್‌.ಡಿ ಟಾಟಾ ಸರ್ವರೀತಿಯಲ್ಲಿ ಅರ್ಹರಾಗಿದ್ದರು.

ಪ್ರತಿಕ್ರಿಯಿಸಿ (+)