ಭಾನುವಾರ, ಡಿಸೆಂಬರ್ 8, 2019
25 °C

ಮಾದರಿ ಬರಹಗಳ ‘ಕರೆಂಟ್‌ ಸೈನ್ಸ್’

ರಾಮಚಂದ್ರ ಗುಹಾ
Published:
Updated:
ಮಾದರಿ ಬರಹಗಳ ‘ಕರೆಂಟ್‌ ಸೈನ್ಸ್’

ನಾನು ಒಂದು ಡಜನ್ ನಿಯತಕಾಲಿಕೆ,  ಪತ್ರಿಕೆಗಳ ಚಂದಾದಾರ. ಅವುಗಳೆಲ್ಲಾ ವಿವಿಧ ದೇಶಗಳಿಂದ ಮುದ್ರಿತವಾಗುತ್ತವೆ. ‘ಕರೆಂಟ್ ಸೈನ್ಸ್‌’ ಒಂದನ್ನು ಹೊರತುಪಡಿಸಿ ಮಿಕ್ಕೆಲ್ಲವೂ ಸಮಾಜ ವಿಜ್ಞಾನ, ಮಾನವ ಸಂಸ್ಕೃತಿಗೆ ಸಂಬಂಧಪಟ್ಟವು. ಬೆಂಗಳೂರಿ­ನಲ್ಲಿ­ರುವ ‘ಇಂಡಿಯನ್   ಅಕಾಡೆಮಿ ಆಫ್ ಸೈನ್ಸ­ಸ್’ ಆ ನಿಯತಕಾಲಿಕೆಯನ್ನು ಪ್ರಕಟಿ­ಸುತ್ತದೆ.ನಾನು ವಿಜ್ಞಾನಿಗಳ ಕುಟುಂಬಕ್ಕೆ ಸೇರಿ­ದವನು. ನನ್ನ ಅಪ್ಪ, ತಾತ, ಇಬ್ಬರು ‘ಅಂಕಲ್‌’ಗಳು ತಮ್ಮ ವೃತ್ತಿಬದುಕಿನ ಬಹುತೇಕ ದಿನಗಳನ್ನು ಭಾರತದ ಸಂಶೋಧನಾ ಪ್ರಯೋಗಾಲಯಗಳಲ್ಲಿ ಕಳೆದರು. ಇನ್ನೊಬ್ಬರು ‘ಅಂಕಲ್’ ಅಮೆರಿಕದಲ್ಲಿ ಹೆಸರುವಾಸಿ ಭೌತವಿಜ್ಞಾನಿ. ಇನ್ನೊಬ್ಬ ಸೋದರ ಸಂಬಂಧಿ ಭಾರತದ ಪ್ರಮುಖ ಪೌಷ್ಟಿಕಾಂಶ ವಿಜ್ಞಾನಿಗಳಲ್ಲಿ ಒಬ್ಬರು.ಮನೆಯ ವಿಜ್ಞಾನಿಗಳ ಈ ಸಾಲನ್ನು ನೋಡಿದರೆ ನಾನೂ ಅದೇ ಹಾದಿ ಹಿಡಿಯಬೇಕಿತ್ತು. ಹೈಸ್ಕೂಲ್‌ನಲ್ಲಿ ನನಗೆ ರಾಸಾಯನ ವಿಜ್ಞಾನ ತಲೆಗೆ ಹತ್ತುತ್ತಿತ್ತು. ಗಣಿತದಲ್ಲಿ ಪರವಾಗಿಲ್ಲ ಎಂಬಂತಿದ್ದೆ. ಆದರೆ, ಭೌತವಿಜ್ಞಾನ ಆಗಿಬರುತ್ತಿರಲಿಲ್ಲ. ಕಾದಂಬರಿಗಳು,  ಆತ್ಮಕತೆಗಳನ್ನು ಓದುವ ಹವ್ಯಾಸ ಇದ್ದ ನನಗೆ ಶಾಲಾ ನಿಯತಕಾಲಿಕೆಗೆ ಪ್ರಬಂಧಗಳನ್ನು ಬರೆಯುವುದು ಇಷ್ಟವಾಗಿತ್ತು. ನನಗೆ ಆಯ್ಕೆಯ ಸ್ವಾತಂತ್ರ್ಯ ಇದ್ದಿದ್ದರೆ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಓದುತ್ತಿದ್ದೆ. ಮನೆಯವರು ಅದಕ್ಕೆ ಬಿಡಲಿಲ್ಲ. ಹಾಗಾಗಿ ಅರ್ಥಶಾಸ್ತ್ರ ಆರಿಸಿಕೊಳ್ಳಬೇಕಾಯಿತು. ‘ವಿಜ್ಞಾನ’ದ ಜೊತೆಗೆ ಅರ್ಥಶಾಸ್ತ್ರಕ್ಕೆ ಒಂದು ಮಟ್ಟದ ಸಂಬಂಧವಿದೆ ಎಂದೇ ಭಾವಿಸಲಾಗಿದೆ.ಆಮೇಲಾಮೇಲೆ ಅರ್ಥಶಾಸ್ತ್ರದಲ್ಲೂ ನಾನು ಸಾಧಾರಣ ವಿದ್ಯಾರ್ಥಿ ಆದೆನಷ್ಟೇ. ಎಂ.ಎ.ಯಲ್ಲಿ ಲೋ ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾದಾಗ, ಮೇಷ್ಟರೊಬ್ಬರು ಬೇರೆ ವಿಷಯ ಆರಿಸಿಕೊಳ್ಳುವಂತೆ ಕಿವಿಮಾತು ಹೇಳಿದರು. ಅವರ ಮಾತಿನಲ್ಲೇ ಹೇಳುವುದಾದರೆ ಅದು ‘ಪೇರೆಟೋ ಆಪ್ಟಿಮಮ್’ ವಿಷಯ. ನನಗೆ ಆಸಕ್ತಿ ಇರುವ, ಅರ್ಥಶಾಸ್ತ್ರದ ಒಳಸುಳಿಗಳಿಗೂ ಸಂಬಂಧಪಟ್ಟಂಥ ಏನನ್ನಾದರೂ ಅಧ್ಯಯನ ಮಾಡು ಎಂಬ ಅವರ ಸಲಹೆ ನನಗೆ ಹಿಡಿಸಿತು. ಹಾಗಾಗಿ ಸಮಾಜ ವಿಜ್ಞಾನದಲ್ಲಿ ಡಾಕ್ಟೊರೇಟ್ ಮಾಡಿದೆ. ಆಮೇಲೆ ಹೆಚ್ಚು ವಿವರಣಾತ್ಮಕವಾದ, ವಿಶ್ಲೇಷಣಾತ್ಮಕವಲ್ಲದ ‘ಇತಿಹಾಸ’ದತ್ತ ಮನಸ್ಸು ವಾಲಿತು.ಇಂಥ ಹಿನ್ನೆಲೆ ಇರುವ ನಾನು ‘ಕರೆಂಟ್ ಸೈನ್ಸ್’ ಚಂದಾದಾರನಾದದ್ದು ಸಹಜವೇನಲ್ಲ, ಅಲ್ಲವೇ? ಹಿರಿಯರು ಹಾಕಿಕೊಟ್ಟ ಹಾದಿಯನ್ನು ಬಿಟ್ಟ ನಾನು ಇಂಥ ಓದಿನಿಂದಲಾದರೂ ಅವರ ಕೃಪೆಗೆ ಪಾತ್ರನಾಗುತ್ತೇನೆ ಎಂಬ ಒಳಪ್ರಜ್ಞೆ ‘ಕರೆಂಟ್‌ ಸೈನ್ಸ್‌’ ಓದಲು ಕಾರಣವಿರಬಹುದು. ಸ್ನೇಹಿತರೊಬ್ಬರು ಅದರ ಸಂಪಾದಕೀಯಗಳು ಅದ್ಭುತವಾಗಿರುತ್ತವೆ, ಸಾಮಾನ್ಯ ಮನುಷ್ಯನಿಗೆ ಸಮಗ್ರವಾದ ಒಳನೋಟ ಕೊಡುತ್ತವೆ ಎಂದು ಹೇಳಿದ್ದರಿಂದ ಅದರ ಚಂದಾದಾರನಾದೆ.ಅದರ ಸಂಪಾದಕೀಯಗಳ ಕುರಿತು ಹೇಳುವ ಮೊದಲು ಆ ಪತ್ರಿಕೆಯ ಸಂಕ್ಷಿಪ್ತ ಚರಿತ್ರೆ ಹೇಳಿಬಿಡುತ್ತೇನೆ. ‘ಕರೆಂಟ್ ಸೈನ್ಸ್‌’ ಪ್ರಾರಂಭವಾದದ್ದು 1932ರಲ್ಲಿ; ಸಿ.ವಿ.ರಾಮನ್ ಅವರಿಗೆ ಭೌತವಿಜ್ಞಾನಕ್ಕೆ ನೊಬೆಲ್ ಪ್ರಶಸ್ತಿ ಬಂತಲ್ಲ ಅದೇ ಸಂದರ್ಭದಲ್ಲಿ. ರಾಮನ್‌ ಆ ಹೊಸ ಪತ್ರಿಕೆಯನ್ನು ಬೆಂಬಲಿಸಿದರು. ಭಾರತೀಯ ವಿಜ್ಞಾನ ಕ್ಷೇತ್ರದ ಎಸ್.ಎಸ್.ಭಟ್ನಾಗರ್ ತರಹದ ಘಟಾನುಘಟಿಗಳು ಪತ್ರಿಕೆಗೆ ಬೆಂಬಲ ಕೊಟ್ಟರು. ಮೊದಲಿಗೆ ಆ ನಿಯತಕಾಲಿಕೆಯ ಬಹುಪಾಲು ಕೆಲಸಗಳನ್ನು ಅನೇಕರಿಗೆ ಅಪರಿಚಿತರಾದ ಇಬ್ಬರು ಮಾಡುತ್ತಿದ್ದರು. ಅವರೇ ಅದರ ಮೊದಲ ಸಂಪಾದಕರಾದ, ಬೆಂಗಳೂರು ಸೆಂಟ್ರಲ್ ಕಾಲೇಜಿನ ಪ್ರಾಣಿವಿಜ್ಞಾನ ವಿಭಾಗದ ಪ್ರೊಫೆಸರ್ ಸಿ.ಆರ್. ನಾರಾಯಣ ರಾವ್ ಹಾಗೂ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ಬಯೋಕೆಮಿಸ್ಟ್ರಿ ಪ್ರೊಫೆಸರ್ ವಿ.ಸುಬ್ರಹ್ಮಣ್ಯಂ.1930 ಹಾಗೂ 1940ರ ದಶಕಗಳಲ್ಲಿ ನಿಯತಕಾಲಿಕೆ ಹೆಸರು ಮಾಡಿತು. ಆಮೇಲೆ ಕ್ರಮೇಣ ಮಂಕಾಯಿತು. ಮತ್ತೆ ಅದು ಕಳೆಗಟ್ಟಿದ್ದು 1980ರ ದಶಕದಲ್ಲಿ ಸ್ಫಟಿಕವಿಜ್ಞಾನಿ ಎಸ್.ರಾಮಶೇಷನ್ ಅದರ ಜವಾಬ್ದಾರಿ ಹೊತ್ತುಕೊಂಡ ನಂತರ. ದೇಶದ ವಿವಿಧೆಡೆ ಇರುವ ಪ್ರತಿಭಾವಂತ ಯುವ ವಿಜ್ಞಾನಿಗಳನ್ನು ಪ್ರೇರೇಪಿಸಿ ಲೇಖನಗಳನ್ನು ಬರೆಸಿದ ಹಿರಿಮೆ ರಾಮಶೇಷನ್ ಅವರದ್ದು.ರಾಮಶೇಷನ್ ಹಾಕಿಕೊಟ್ಟ ಮಾರ್ಗದಲ್ಲೇ ನಿಯತಕಾಲಿಕೆಯ ಪುನರುತ್ಥಾನದ ಕೆಲಸವನ್ನು ಮುಂದುವರಿಸಿದ್ದು 1995ರಲ್ಲಿ ಸಂಪಾದಕರಾದ ಪದ್ಮನಾಭನ್ ಬಲರಾಮ್. ಐಐಟಿ-–ಕಾನ್ಪುರ ಹಾಗೂ ಕಾರ್ನೆಗಿ ಮೆಲಾನ್‌ ವಿಶ್ವವಿದ್ಯಾಲಯದಲ್ಲಿ ಕಲಿತ ‘ಮಾಲಿಕ್ಯುಲರ್‌ ಬಯಾಲಜಿಸ್ಟ್‌’ ಬಲರಾಮ್ ಸಂಶೋಧನೆಯ ಗುಣಮಟ್ಟದಿಂದಾಗಿ ಹೆಸರು ಮಾಡಿದ ಭಾರತದ ಕೆಲವೇ ಕೆಲವು ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು. ಅವರದ್ದು ವಿಶೇಷ ವ್ಯಕ್ತಿತ್ವ. ವಾರಗೆಯ ವಿಜ್ಞಾನಿಗಳಂತೆ ಅವರು ವಿದೇಶಿಯರು, ರಾಜಕಾರಣಿಗಳ ಸಂಪರ್ಕ ಮಾಡಲಿಲ್ಲ. ಗಂಭೀರವಾಗಿ ಸಂಶೋಧನೆಯಲ್ಲಿ ತೊಡಗಿಕೊಂಡ ಯುವ ವಿಜ್ಞಾನಿಗಳ ಬಗೆಗೆ ಅವರಿಗೆ ಅಪಾರ ಒಲವು. ತಮ್ಮದಲ್ಲದ ವಿಜ್ಞಾನದ ಇತರ ಶಾಖೆಗಳನ್ನೂ ಅವರು ಬಲ್ಲರು. ಸಾಹಿತ್ಯ, ಇತಿಹಾಸವನ್ನೂ ಚೆನ್ನಾಗಿ ಓದಿಕೊಂಡಿದ್ದಾರೆ.ಬಲರಾಮ್ ಬರೆಯುತ್ತಿದ್ದ ಸಂಪಾದಕೀಯಗಳನ್ನು ಓದಲೆಂದು ಮೊದಲಿಗೆ ನಾನು ‘ಕರೆಂಟ್ ಸೈನ್ಸ್‌’ ಚಂದಾದಾರನಾದೆ. ಅವರು ಕೆಲವೊಮ್ಮೆ ಪಕ್ಕಾ ವೈಜ್ಞಾನಿಕ ಸಂಗತಿಗಳಷ್ಟೇ ಅಲ್ಲದೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ಸೂಕ್ಷ್ಮಗಳ ಕುರಿತು ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಪ್ರಶಸ್ತಿಗಳ ಹಿಂದಿನ ರಾಜಕೀಯ, ಮಹಿಳಾ ವಿಜ್ಞಾನಿಗಳ ವಿಷಯದಲ್ಲಿ ಇರುವ ಪೂರ್ವಗ್ರಹ, ಪ್ರಮುಖರ ವಾರ್ಷಿಕೋತ್ಸವಗಳ ಔಚಿತ್ಯ,  ಹೊಸ ಉಪಕ್ಷೇತ್ರಗಳ ಉಗಮ–ಅವು ಬೆಳೆಯುತ್ತಿರುವ ಪ್ರಕ್ರಿಯೆ, ಹೆಚ್ಚಿನ ಜನರಿಗೆ ತಲುಪುವಂತೆ ವಿಜ್ಞಾನಿಗಳು ಸಂವಹನ ಮಾಡಬೇಕಾದ ರೀತಿ... ಹೀಗೆ ಅವರ ಸಂಪಾದಕೀಯಗಳು ಆಸಕ್ತಿಕರ ಸಂಗತಿಗಳನ್ನು ಒಳಗೊಂಡಿರುತ್ತಿದ್ದವು. ಸರಳವಾದ ಅವರ ಬರವಣಿಗೆಯ ಶೈಲಿ ಕುಶಲತೆ ಬೆರೆತದ್ದು.ಓದುತ್ತಾ ಹೋದಂತೆ ‘ಕರೆಂಟ್ ಸೈನ್ಸ್‌’ ಬೇರೆ ಕಾರಣಗಳಿಗೂ ಹಿಡಿಸುತ್ತಾ ಹೋಯಿತು. ಹವಾಮಾನದ ಬದಲಾವಣೆ, ಜೀವಿವೈವಿಧ್ಯ ಸಂರಕ್ಷಣೆ ನನ್ನಿಷ್ಟದ ವಿಷಯಗಳು. ಅವುಗಳ ಕುರಿತು ಅದರಲ್ಲಿ ಆಸಕ್ತಿಕರ ಪ್ರಬಂಧಗಳು ಪ್ರಕಟವಾದವು. ಅಗಲಿದವರ ಬಗೆಗೆ ಇರುತ್ತಿದ್ದ ನುಡಿನಮನಗಳಂತೂ ಗಮನಾರ್ಹ.  ಪ್ರಮುಖ ವ್ಯಕ್ತಿಗಳು ಮೃತಪಟ್ಟಾಗ ಅವರಿಗೆ ನುಡಿನಮನ ಸಲ್ಲಿಸುವುದರಲ್ಲಿ ಭಾರತೀಯರು ಯಾವತ್ತೂ ಹಿಂದೆ ಎಂದೇ ನನ್ನ ಭಾವನೆ.ಉದಾಹರಣೆಗೆ, ಯಾರಾದರೂ ಪ್ರಮುಖ ಸಾಹಿತಿ ಮೃತಪಟ್ಟರೆ ನಮ್ಮ ಇಂಗ್ಲಿಷ್ ಪತ್ರಿಕೆಗಳು ರಾಜ್ಯದ ಮುಖ್ಯಮಂತ್ರಿಯ ಸಂತಾಪದ ಏಕತಾನತೆಯ ಸಾಲುಗಳನ್ನು ಪ್ರಕಟಿಸಿ ಕೈತೊಳೆದುಕೊಳ್ಳುವುದೇ ಹೆಚ್ಚು. ಸಾಹಿತಿ ನಾಡಿಗೆ ಕೊಟ್ಟ ಪ್ರಮುಖ ಕೃತಿಗಳು, ಮಾಡಿದ ಕೆಲಸಗಳನ್ನು ಕಟ್ಟಿಕೊಡುವ ಸಮಗ್ರ ಬರಹವೊಂದು ಆ ಸಂದರ್ಭದಲ್ಲಿ ಜರೂರಾಗಿ ಬೇಕಿರುತ್ತದೆ.ಐಹಿಕ ವಿಷಯಗಳಲ್ಲಿ ಆಸಕ್ತರಾಗಿ ಮರೆಗುಳಿಗಳಾದವರ ನಡುವೆ ‘ಕರೆಂಟ್ ಸೈನ್ಸ್‌’ ಸಂಪೂರ್ಣ ಭಿನ್ನವಾಗಿ ಕಾಣುತ್ತದೆ. ವಿಜ್ಞಾನ ಪರಂಪರೆಯಲ್ಲಿ ಮರೆಯಲಾಗದ ಮಹಿಳೆ–ಪುರುಷರ ಬದುಕು, ಶ್ರಮ, ಶ್ರದ್ಧೆಗೆ ಅದು ಕನ್ನಡಿ ಹಿಡಿಯುತ್ತಾ ಬಂದಿದೆ. ಅದರ ನುಡಿನಮನಗಳು ನಿಜಕ್ಕೂ ಮಾದರಿ. ವಿಜ್ಞಾನಿಯ ಬೌದ್ಧಿಕ ಪ್ರಗತಿ, ಪ್ರಮುಖ ಕೊಡುಗೆಗಳು, ವೈಯಕ್ತಿಕ ವಿಷಯ (ಜನನ, ಮರಣದ ಸ್ಥಳ, ಮದುವೆ-, ಮಕ್ಕಳು ಇತ್ಯಾದಿ) ಎಲ್ಲವನ್ನೂ ಹದವಾದ ಭಾಷೆಯಲ್ಲಿ ಅವು ಕಟ್ಟಿಕೊಡುತ್ತವೆ.ಇಂಥ ಮಾದರಿ ನಿಯತಕಾಲಿಕೆ ರೂಪಿಸಿದ ಬಲರಾಮ್ ಅವರಿಗೆ ಅದ್ಭುತ ಸಂಪಾದಕೀಯ ಮಂಡಳಿಯ ಬೆಂಬಲವಿತ್ತು. ಅದರಲ್ಲಿರುವವರು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ಶಾಖೆಗಳಲ್ಲಿ ಇರುವುದರಿಂದ ವಿಷಯ ವೈವಿಧ್ಯ ಪ್ರಕಟಿಸುವುದು ಸಹಜವಾಗಿಯೇ ಸಾಧ್ಯ­ವಾಯಿತು. ನಿಯತಕಾಲಿಕೆಯ ಕೆಲಸದಲ್ಲಿ ತೊಡಗಿದ್ದ ಸಂದರ್ಭದಲ್ಲೇ ಬಲರಾಮ್ ಅವರನ್ನು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕರಾಗಿ ಆಯ್ಕೆ ಮಾಡ­ಲಾಯಿತು. ಅವರ ಕೆಲಸದ ಒತ್ತಡ ಹಾಚ್ಚಾಯಿತು. ಹಾಗಾಗಿ ಕೆಲವು ಹಿರಿಯ ವಿಜ್ಞಾನಿಗಳಿಂದ ಸಂಪಾದಕೀಯಗಳನ್ನು ಬರೆಸಿ­ದರು. ಈ ವರ್ಷದ ಪ್ರಾರಂಭದಲ್ಲಿ ಸಂಪಾದಕ ಸ್ಥಾನದಿಂದಲೇ ಅವರು ಕೆಳಗಿಳಿದರು.ಮೊನ್ನೆಯಷ್ಟೇ ‘ಕರೆಂಟ್ ಸೈನ್ಸ್‌’ನ  ಇತ್ತೀಚಿನ ಸಂಚಿಕೆ ನನ್ನ ಮನೆಗೆ ಬಂತು (ಭಾಗ 105, ಸಂಚಿಕೆ 4; 25, ಆಗಸ್ಟ್ 2013). ಅದರಲ್ಲಿ ಭಾರತೀಯ ಸಿಂಹಗಳ ಕುರಿತು ಪ್ರಕಟವಾಗಿರುವ ಪುಸ್ತಕವೊಂದರ ಆಸಕ್ತಿಕರ ವಿಮರ್ಶೆ ಇದೆ. ಶ್ರೇಷ್ಠ ಜೀವಿವಿಜ್ಞಾನಿ ಒಬಿದ್ ಸಿದ್ದಿಕಿ ಕುರಿತ ಎರಡು ನುಡಿನಮನಗಳಿವೆ. ದೇಶದ ವಿವಿಧ ವಿಜ್ಞಾನ ಸಮುದಾಯಗಳನ್ನಷ್ಟೇ ಅಲ್ಲದೇ ಅಮೆರಿಕನ್‌, ಈಸ್ಟೋನಿಯನ್ ವಿಜ್ಞಾನಿಗಳಿಗೂ ನಿಯತಕಾಲಿಕೆ­ಯಲ್ಲಿ ಪ್ರಾತಿನಿಧ್ಯವಿದೆ.ಹೊಸ ಸಂಚಿಕೆಯ ಎರಡು ಪುಟಗಳಲ್ಲಿ ಸಂಪಾದಕರಿಗೆ ಪತ್ರಗಳು ಪ್ರಕಟವಾಗಿವೆ. ಮೊಹಾಲಿ, ಚೆನ್ನೈ, ಸೋಲಾಪುರ, ಹೈದರಾಬಾದ್‌, ಕ್ಯಾಲಿಫೋರ್ನಿಯಾ ಹಾಗೂ ನ್ಯೂ ಸೌತ್ ವೇಲ್ಸ್‌ನ ಹನ್ನೊಂದು ವಿಜ್ಞಾನಿಗಳು ‘ಎ ಕರೆಂಟ್ ಸೈನ್ಸ್ ವಿಥೌಟ್ ಬಲರಾಮ್‌?’ (‘ಕರೆಂಟ್ ಸೈನ್ಸ್’; ಅದೂ ಬಲರಾಮ್ ಇಲ್ಲದೆ?) ಎಂಬ ಶೀರ್ಷಿಕೆಯಡಿ ಪತ್ರಗಳನ್ನು ಬರೆದಿದ್ದಾರೆ. ‘ಬಲರಾಮ್ ಬರೆಯುತ್ತಿದ್ದ ಸಂಪಾದಕೀಯಗಳನ್ನು ಸಲೀಸಾಗಿ ನಂಬಬಹು­ದಾಗಿತ್ತು’ ಎಂದು ಒಬ್ಬರು ಬರೆದರೆ, ಮತ್ತೊಬ್ಬರು ‘ಬಲರಾಮ್ ಇಲ್ಲದ ಮೇಲೆ ಈ ನಿಯತಕಾಲಿಕೆ ಯಾಕೆ ಬೇಕು ಎಂದು ಮೊದಲು ಅನಿಸಿತು. ಆಮೇಲೆ ಈಗಲೇ ಆ ನಿರ್ಧಾರ ತೆಗೆದುಕೊಳ್ಳುವುದು ಬೇಡವೆಂದು ನಿರ್ಧರಿಸಿದೆ’ ಎಂದು ತಮ್ಮ ಪ್ರತಿಕ್ರಿಯೆಯಲ್ಲಿ ಬರೆದು­ಕೊಂಡಿದ್ದಾರೆ.ಕೆಲವು ಸಮಕಾಲೀನ ವಿಷಯಗಳನ್ನು ಬಲರಾಮ್ ವಿಶ್ಲೇಷಿಸುತ್ತಿದ್ದ ಬಗೆಯನ್ನು ಮೆಚ್ಚಿಕೊಂಡ ಮಗದೊಬ್ಬರು ‘ಇನ್ನೊಬ್ಬರಿಂದ ಅದು ಸಾಧ್ಯವೇ ಇಲ್ಲ’ ಎಂದಿದ್ದಾರೆ. ‘ಯಾವತ್ತೂ ಸಿನಿಕರಾಗಿ ಬರೆಯದ ಬಲರಾಮ್ ಯುವ ವಿಜ್ಞಾನಿಗಳ ವಿಚಾರಗಳಿಗೆ ಕೊಟ್ಟ ಮನ್ನಣೆ ಗಮನಾರ್ಹ’ ಎಂಬರ್ಥದ ಸಾಲುಗಳು ಇನ್ನೊಂದು ಪತ್ರದಲ್ಲಿವೆ. ಬಲರಾಮ್ ಅವರ ಹಲವು ಶಾಖೆಗಳ ಅರಿವನ್ನು ಮೆಚ್ಚಿ­ಕೊಂಡವರೂ ಉಂಟು. ಅವರ ಬರಹಗಳ ಚಟಕ್ಕೆ ಬಿದ್ದಿರುವ ಓದುಗರೊಬ್ಬರಿಗೆ ಆಗೀಗಲಾದರೂ ಅತಿಥಿ ಸಂಪಾದಕರಾಗಿ ಕೆಲಸ ಮಾಡುತ್ತಾ ಅವರು ಸಂಪಾದಕೀಯಗಳನ್ನು ಬರೆದರೆ ಚೆನ್ನ ಎಂಬ ಬಯಕೆ.ಬೆಂಗಳೂರಿನಲ್ಲಿ ನಾನು ವಾಸವಿರುವ ಇಪ್ಪತ್ತು ವರ್ಷಗಳಲ್ಲಿ ಪದ್ಮನಾಭನ್ ಬಲರಾಮ್ ಅವರನ್ನು ಆಗೀಗ ಭೇಟಿಯಾಗಿದ್ದೇನೆ. ಅವರು ಏಕಾಂತ ಬಯಸುವವರ ಪೈಕಿ. ದಿನಪತ್ರಿಕೆಯಲ್ಲಿ ಹೇಗೆ ಕೆಲಸ ನಡೆಯುತ್ತದೆ ಎಂದು ನೋಡಿದವರಲ್ಲ. ಸಿ.ವಿ.ರಾಮನ್‌ ರಸ್ತೆಯನ್ನು ಬಿಟ್ಟು ಹೋಗುವುದೇ ಅಪರೂಪ.ಆ ರಸ್ತೆಯ ಒಂದು ಬದಿಯಲ್ಲಿ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಆವರಣ ಇದೆ. ಇನ್ನೊಂದು ಬದಿಯಲ್ಲಿ ಇಂಡಿಯನ್‌ ಅಕಾಡೆಮಿ ಆಫ್‌ ಸೈನ್ಸಸ್‌. ಸಂಕೋಚದ ಸ್ವಭಾವದ ಬಲರಾಮ್‌ ಪ್ರಯೋಗಾಲಯದಲ್ಲಿ ತಮ್ಮ ವಿದ್ಯಾರ್ಥಿಗಳು, ಸಹೋದ್ಯೋಗಿಗಳ ಜೊತೆ ತಾವಾಯಿತು, ಸಂಶೋಧನೆ ಆಯಿತು ಎಂಬಂತೆ ಅಲ್ಲೆಲ್ಲಾ ಇರುವುದೇ ಹೆಚ್ಚು. ಸಂಸಾರಸ್ಥರೂ ಆದ ಅವರಿಗೆ ಮನೆಯಲ್ಲಿ ಪುಸ್ತಕಗಳೇ ಆಪ್ತ ಸ್ನೇಹಿತರು ಎನಿಸುತ್ತದೆ. ನಾನು ಅವರನ್ನು ಭೇಟಿಯಾದದ್ದು ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನಲ್ಲಿ ಮಾತ್ರ. ಅದೂ ಜೀವವಿಜ್ಞಾನಕ್ಕೆ ಸಂಬಂಧಿಸಿದ ವಿಚಾರ ಸಂಕಿರಣಗಳು ನಡೆದಾಗ; ನನಗೂ ಅವರಿಗೂ ಸ್ನೇಹಿತರಾದವರ ಮೂಲಕ.ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗ ವಿಜ್ಞಾನ­ದಲ್ಲಿ ಹಿಂದೆಬಿದ್ದ ನನಗೆ ಬಲರಾಮ್‌ ಅವರ ವೈಜ್ಞಾನಿಕ ಸಂಶೋಧನೆಗಳ ಕುರಿತು ಆಳವಾದ ಜ್ಞಾನವೇನೂ ಇಲ್ಲ. ಅವರ ಸಂಪಾದಕೀಯ ಬರಹಗಳಿಂದ ಅಷ್ಟಿಷ್ಟನ್ನು ಅರ್ಥಮಾಡಿ­ಕೊಳ್ಳಲು ಸಾಧ್ಯವಾಗಿದೆಯಷ್ಟೇ. ಅವರ ಬರಹ, ನಿಲುವು, ಮಾತು, ವರ್ತನೆಯಿಂದ ಅವರೊಬ್ಬ ಸಜ್ಜನ ಎಂದಂತೂ ಸ್ಪಷ್ಟವಾಗಿ ಹೇಳಬಲ್ಲೆ. ಕ್ರಿಕೆಟ್‌ನಲ್ಲಿ ಅವರಿಗೆ ಆಸಕ್ತಿ ಇದೆಯೋ ಇಲ್ಲವೋ. ನನಗಂತೂ ಅವರು ‘ಕರೆಂಟ್‌ ಸೈನ್ಸ್‌’ ಸಂಪಾದಕ ಸ್ಥಾನದಿಂದ ಇಳಿದದ್ದು ಕ್ರಿಕೆಟಿಗರಾದ ವಿಜಯ್‌ ಮರ್ಚೆಂಟ್‌, ಸುನೀಲ್‌ ಗಾವಸ್ಕರ್‌ ನಿವೃತ್ತಿಯನ್ನು ನೆನಪಿಸುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ: : editpagefeedback@prajavani.co.in

ಪ್ರತಿಕ್ರಿಯಿಸಿ (+)